Dhiren A Sadokpam

ಬದಲಾಗುತ್ತಿದೆ ಮಣಿಪುರ ಹಿಂಸೆಯ ವ್ಯಾಕರಣ: ರಕ್ತಕ್ಕೆ ರಕ್ತವನ್ನು ಬೇಡುತ್ತಿರುವ ಆಂತರಿಕ ಕದನ


ಬದಲಾಗುತ್ತಿದೆ ಮಣಿಪುರ ಹಿಂಸೆಯ ವ್ಯಾಕರಣ: ರಕ್ತಕ್ಕೆ ರಕ್ತವನ್ನು ಬೇಡುತ್ತಿರುವ ಆಂತರಿಕ ಕದನ
x
ಮಣಿಪುರ ರಾಜ್ಯದ ಚುರಚಂದಾಪುರದ ಕಾಂಗ್ಪೋಕ್ಪಿಯಲ್ಲಿ ಸಂಭವಿಸಿದ ಮೂವರು ಚರ್ಚ್ ನಾಯಕರು ಮತ್ತು ಅವರ ಸಹಚರರ ಹತ್ಯೆಯನ್ನು ಖಂಡಿಸಿ ಕುಕಿ ಝೋ ಮತ್ತು ನಾಗಾ ಸಮುದಾಯಗಳು ನೀಡಿರುವ ಬಂದ್ ಕರೆಯ ಹಿನ್ನೆಲೆಯಲ್ಲಿ ರಸ್ತೆ ತಡೆ ನಡೆಸುತ್ತಿರುವ ಯುವಕರು.
Click the Play button to hear this message in audio format

2026ರ ಮೇ ತಿಂಗಳ ಮಣಿಪುರ ಬಿಕ್ಕಟ್ಟು ಒಂದು ಎಚ್ಚರಿಕೆಯ ಗಂಟೆ. ರೆವರೆಂಡ್ ಡಾ. ವುಮ್ಥಾಂಗ್ ಸಿತ್ಲೌ ಮತ್ತು ಅವರ ಸಹಚರರ ಹತ್ಯೆ ಯಾವುದೇ ಹೊಸ ವಿಷಯದ ಆರಂಭವಾಗಿರಲಿಲ್ಲ; ಬದಲಿಗೆ ಅದು ಈಗಾಗಲೇ ನಡೆಯುತ್ತಿದ್ದ ಪ್ರಕ್ರಿಯೆಯ ಹೊಸ ರೂಪ.

ಈಶಾನ್ಯ ಭಾರತದ ಸಂಘರ್ಷದ ಸ್ವರೂಪದಲ್ಲಿ ಒಂದು ನಿರ್ಣಾಯಕ ಬದಲಾವಣೆ ಕಂಡುಬರುತ್ತಿದೆ. ಮೇ 13 ರಂದು ಮಣಿಪುರದಲ್ಲಿ ಮೂವರು ಚರ್ಚ್ ಮುಖಂಡರ ಹತ್ಯೆ ಮಾಡಲಾಯಿತು ಮತ್ತು ಅದರ ಬೆನ್ನಲ್ಲೇ 24 ಗಂಟೆಗಳ ಒಳಗಾಗಿ 44 ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಈ ಬಿಕ್ಕಟ್ಟು ಕೇವಲ ಮತ್ತೊಂದು ದುರಂತವಾಗಿರಲಿಲ್ಲ. ಅಂತರ-ಜನಾಂಗೀಯ ಮತ್ತು ಆಂತರಿಕ-ಜನಾಂಗೀಯ ಹಿಂಸಾಚಾರದ ತೀವ್ರತೆ ಈಗಾಗಲೇ ಸೂಕ್ಷ್ಮವಾಗಿರುವ ಈ ಪ್ರದೇಶವನ್ನು ಹೇಗೆ ಮತ್ತಷ್ಟು ಸಂಕೀರ್ಣಗೊಳಿಸುತ್ತ ಸಾಗಿದೆ ಎಂಬುದನ್ನು ಇದು ಬಹಿರಂಗಪಡಿಸುತ್ತದೆ. ಇದು ಕೇಂದ್ರ ಸರ್ಕಾರ ಮತ್ತು ಜನಾಂಗೀಯ ರಾಜಕೀಯ ಸಶಸ್ತ್ರ ಚಳವಳಿಗಳ ನಡುವಿನ ಹಳೆಯ, ಪರಿಚಿತ ನೇರಾನೇರ ಸಂಘರ್ಷದ ಮಾದರಿಯನ್ನು ಕಾರ್ಯತಂತ್ರದ ಅಂಚಿಗೆ ತಳ್ಳುವಂತೆ ಮಾಡಿದೆ.

ದಶಕಗಳ ಕಾಲ, ವಿಶ್ಲೇಷಕರು ಈಶಾನ್ಯ ಭಾರತದ ದಂಗೆಗಳನ್ನು ಅರ್ಥಮಾಡಿಕೊಳ್ಳಲು ಬಳಸುತ್ತಿದ್ದ ಪ್ರಮುಖ ದೃಷ್ಟಿಕೋನವೆಂದರೆ ಅದು ಲಂಬ ಅಥವಾ ನೇರ ಸ್ವರೂಪದ್ದಾಗಿತ್ತು: ಸರ್ಕಾರ ವರ್ಸಸ್ ಸರ್ಕಾರೇತರ ಸಶಸ್ತ್ರ ಗುಂಪು, ಕೇಂದ್ರ ವರ್ಸಸ್ ಗಡಿಭಾಗ, ಸಾಂವಿಧಾನಿಕ ವ್ಯವಸ್ಥೆ ವರ್ಸಸ್ ಪ್ರತ್ಯೇಕತಾವಾದಿ. ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ), ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್/ನಾಗಾಲಿಮ್(NSCN), ಮತ್ತು ವಿವಿಧ ಕುಕಿ-ಜೋ ಉಗ್ರಗಾಮಿ ಸಂಘಟನೆಗಳಂತಹ ಗುಂಪುಗಳು ಭಾರತ ಸರ್ಕಾರದ ವಿರುದ್ಧ ಸ್ವಾಯತ್ತತೆ, ಸಾರ್ವಭೌಮತ್ವ ಅಥವಾ ಪ್ರಾದೇಶಿಕ ಪುನರ್ ರಚನೆಯ ಸುತ್ತ ತಮ್ಮ ಹೋರಾಟಗಳನ್ನು ರೂಪಿಸಿಕೊಂಡಿದ್ದವು. ನವದೆಹಲಿಯು ಇದಕ್ಕೆ ಪ್ರತಿಯಾಗಿ ದಂಗೆ ನಿರೋಧಕ ಕ್ರಮಗಳು, ಶಾಂತಿ ಒಪ್ಪಂದಗಳು ಮತ್ತು ರಾಜಕೀಯ ಹೊಂದಾಣಿಕೆಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿತ್ತು.

ಆದರೆ ಆ ಇಡೀ ಚೌಕಟ್ಟು ಈಗ ಮುರಿದುಬೀಳುತ್ತಿದೆ; ಅಂದರೆ ಅದರ ಅರ್ಥ ಸರ್ಕಾರ ಗೆದ್ದಿದೆ ಎಂದಲ್ಲ, ಬದಲಿಗೆ ಅಲ್ಲಿನ ವಾಸ್ತವಿಕ ಪರಿಸ್ಥಿತಿಯೇ ಬದಲಾಗಿದೆ. ಈಗ ಶತ್ರು ಕೇವಲ ಸರ್ಕಾರ ಮಾತ್ರವಲ್ಲ, ಬದಲಿಗೆ ನೆರೆಹೊರೆಯವರೇ ಆಗಿದ್ದಾರೆ.

ಒಂದು ವಿಲಕ್ಷಣ ಘಟನೆ

ಮೇ 13 ರಂದು, ಕಾಂಗ್ಪೋಕ್ಪಿ ಜಿಲ್ಲೆಯ ಕೊಟ್ಲೆನ್ ಮತ್ತು ಕೊಟ್ಜಿಮ್ ಗ್ರಾಮಗಳ ನಡುವಿನ ಇಂಫಾಲ್-ತಾಮೆಂಗ್ಲಾಂಗ್ ಹೆದ್ದಾರಿಯಲ್ಲಿ (ಟೈಗರ್ ರೋಡ್) ರೆವರೆಂಡ್ ಡಾ. ವುಮ್ಥಾಂಗ್ ಸಿತ್ಲೌ (ಥಾಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ ಅಂತಾರಾಷ್ಟ್ರೀಯ ಅಧ್ಯಕ್ಷರು), ರೆವರೆಂಡ್ ಕೈಗೌಲುನ್ ಲೌವುಮ್, ಪಾಸ್ಟರ್ ಪಾವ್ಗೌಲೆನ್ ಸಿತ್ಲೌ ಮತ್ತು ಅವರ ಚಾಲಕ ಲೆಲೆನ್ ಅವರನ್ನು ಹೊಂಚುಹಾಕಿ ಕೊಲ್ಲಲಾಯಿತು. ಅವರು ಚುರಾಚಂದ್ಪುರದಲ್ಲಿ ನಡೆದ ಶಾಂತಿ ಮತ್ತು ಸೌಹಾರ್ದತೆಯ ಸಮ್ಮೇಳನದಿಂದ ಹಿಂತಿರುಗುತ್ತಿದ್ದರು. ಈ ವಿವರವನ್ನು ಗಮನಿಸಿದರೆ ದಾಳಿಯನ್ನು ಕೇವಲ ಒಂದು ಹಿಂಸಾತ್ಮಕ ಕೃತ್ಯವಾಗಿ ನೋಡುವ ಬದಲಿಗೆ, ಸಮುದಾಯಗಳ ನಡುವಿನ ಸಂವಾದದ ಪರಿಕಲ್ಪನೆಯನ್ನೇ ವ್ಯವಸ್ಥಿತವಾಗಿ ಹತ್ಯೆ ಮಾಡಿದ ಸಂಕೇತವಾಗಿ ಬದಲಾಗಿರುವುದು ಗೋಚರಿಸುತ್ತದೆ.

ಮೃತರಾದವರು ಥಾಡೌ ಚರ್ಚ್ನ ಮುಖಂಡರಾಗಿದ್ದರು. ಈ ಹತ್ಯೆಗಳ ಬಗ್ಗೆ ನಡೆದ ಸಮಗ್ರ ತನಿಖೆಯಿಂದ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ, ಏಕೆಂದರೆ ಅಪರಾಧಿಗಳು ಯಾರು ಎಂಬುದಕ್ಕೆ ಸದ್ಯಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಆದಾಗ್ಯೂ, ಇದು ಎದುರಾಳಿ ಗುಂಪಿನ ಸಶಸ್ತ್ರ ಸಂಘಟನೆಯೊಂದರ ಕೃತ್ಯದ ಲಕ್ಷಣಗಳನ್ನು ಹೊಂದಿತ್ತು. ಕೆಲವೇ ಗಂಟೆಗಳಲ್ಲಿ, ಪ್ರತೀಕಾರದ ರಾಜಕೀಯ ಕೂಡ ಶುರುವಾಯಿತು. ಮೇ 14ರ ವೇಳೆಗೆ, ಸೇನಾಪತಿ ಜಿಲ್ಲೆಯಲ್ಲಿ ನಾಗಾ ಗುಂಪುಗಳು ಸುಮಾರು 23 ಕುಕಿ ವ್ಯಕ್ತಿಗಳನ್ನು ವಶಕ್ಕೆ ಪಡೆದಿವೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಕೊನ್ಸಾಖುಲ್ನ 18 ರಿಂದ 20 ನಾಗಾ ಗ್ರಾಮಸ್ಥರನ್ನು ಕುಕಿ ಗುಂಪುಗಳು ಅಪಹರಿಸಿ ಲೈಲೋನ್ ವೈಫೇ ಪ್ರದೇಶದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡವು. ಉಪಮುಖ್ಯಮಂತ್ರಿ ಲೋಸಿಸ್ ದಿಖೋ ಅವರು ಶಾಂತಿ ಒಪ್ಪಂದವನ್ನು ಬಯಸುವ ಬಂಡುಕೋರ ಜನರಲ್ಗಳೊಂದಿಗಲ್ಲ, ಬದಲಿಗೆ ಶಿಶುಗಳು ಮತ್ತು ಧಾರ್ಮಿಕ ಮುಖಂಡರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಜನಾಂಗೀಯ ದುಷ್ಕರ್ಮಿಗಳ ಜೊತೆ ಮಾತುಕತೆ ನಡೆಸುವ ಪರಿಸ್ಥಿತಿ ನಿರ್ಮಾಣವಾಯಿತು.

ಹಾಗಾಗಿ ಇದು ಕೇಂದ್ರ ಸರ್ಕಾರದೊಂದಿಗೆ ಜಿದ್ದಿಗೆ ಬಿದ್ದು ನಡೆಸಿದ ನೇರ ಸಂಘರ್ಷವಲ್ಲ, ಬದಲಾಗಿ ಪರಸ್ಪರರ ನಡುವಿನ ನರಮೇಧವಾಗಿದೆ.

ಸಂಕೀರ್ಣ ಜನಾಂಗೀಯ ಸಂಘರ್ಷ

ಅಂತರ್-ಜನಾಂಗೀಯ ಮತ್ತು ಆಂತರಿಕ ಜನಾಂಗೀಯ ಸಂಘರ್ಷಗಳ ತೀವ್ರತೆ ತಕ್ಷಣ ಮೂರು ಪ್ರಮುಖ ಸಂಕೀರ್ಣ ಸಂಗತಿಗಳನ್ನು ಮುನ್ನೆಲೆಗೆ ತರುತ್ತದೆ. ಇವು ನೇರ ಸಂಘರ್ಷಗಳಲ್ಲಿ ಅತ್ಯಂತ ವಿರಳವಾಗಿರುತ್ತದೆ.

ಮೊದಲನೆಯದಾಗಿ ಇಂತಹ ಸಂಘರ್ಷದಲ್ಲಿ ಸಾಮಾನ್ಯವಾಗಿ ರಾಜಕೀಯ ವಿಭಾಗಗಳು ಮತ್ತು ಸೀಮಿತ ಸಂಖ್ಯೆಯ ಸಶಸ್ತ್ರ ಗುಂಪುಗಳು ಒಳಗೊಂಡಿರುತ್ತವೆ. ಇವುಗಳಿಗೆ ಮಾತುಕತೆ ನಡೆಸಬಹುದಾದ ಬೇಡಿಕೆಗಳಿರುತ್ತವೆ. ಆದರೆ ಪರಸ್ಪರ ಜನಾಂಗೀಯ ಸಂಘರ್ಷಗಳು ಹಾಗಲ್ಲ. ಅವು ಅನೇಕ ಸರ್ಕಾರೇತರ ಸಂಘಟನೆಗಳ ಹಠಾತ್ ಹುಟ್ಟಿಗೆ ಕಾರಣವಾಗುತ್ತವೆ. ಗ್ರಾಮ ರಕ್ಷಣಾ ಸಮಿತಿಗಳು, ಯುವ ಸ್ವಯಂಸೇವಕ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ಜನಾಂಗೀಯ ಪ್ರೇರಿತ ಸಶಸ್ತ್ರ ಪಡೆಗಳು ಇವುಗಳಲ್ಲಿ ಸೇರಿವೆ. ಇವು ಕಾನೂನನ್ನು ಕೈಗೆತ್ತಿಕೊಳ್ಳುವ ಶಕ್ತಿಗಳು. ಕಾಂಗ್-ಪೋಕ್ಪಿ ಮತ್ತು ಚುರಾಚಂದ್ಪುರದಲ್ಲಿ ಅನಿರ್ದಿಷ್ಟಾವಧಿ ಬಂದ್ ಘೋಷಿಸಿದ ʼಕುಕಿ ವಿದ್ಯಾರ್ಥಿಗಳ ಸಂಘಟನೆʼ ಮತ್ತು ಥಾಡೌ ಸಮುದಾಯದ ಗುಂಪುಗಳು ಈಗ ಸೌಹಾರ್ದತೆಯ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಬದಲಾಗಿ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿವೆ. ಅವು ಮಂಡಿಸುವ ತರ್ಕವೇನೆಂದರೆ ಜನಾಂಗೀಯ/ಕೋಮು ಸಂಘರ್ಷದ ಉಳಿವೇ ಹೊರತು ಸರ್ಕಾರದ ಮಾನ್ಯತೆಯನ್ನು ಪಡೆಯುವುದಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ಮಾತುಕತೆ ನಡೆಸುವುದು ಕೂಡ ಅಸಾಧ್ಯದ ಮಾತಾಗಿದೆ.

ಎರಡನೆಯದಾಗಿ, ಪ್ರತಿರೋಧ ಒಡ್ಡುವ ಶಕ್ತಿಯ ಕುಸಿತ. ನೇರಾನೇರ ಸಂಘರ್ಷಗಳಲ್ಲಿ, ಪ್ರಾಯೋಗಿಕವಾಗಿ ಸವಾಲು ಎದುರಾದರೂ ತತ್ವಬದ್ಧವಾಗಿ ಸರ್ಕಾರವು ಕಾನೂನುಬದ್ಧ ಹಿಂಸಾಚಾರದ ಮೇಲಿನ ತನ್ನ ಏಕಸ್ವಾಮ್ಯತೆಯನ್ನು ಉಳಿಸಿಕೊಂಡಿರುತ್ತದೆ. ಅಲ್ಲಿ ಪ್ರತೀಕಾರವನ್ನು ಅಳೆದು ತೂಗಿ ನಿರ್ಧರಿಸಲಾಗುತ್ತದೆ. ಆದರೆ ಪರಸ್ಪರ ಜನಾಂಗೀಯ ಯುದ್ಧಗಳಲ್ಲಿ, ಪ್ರತೀಕಾರವು ತಕ್ಷಣದ, ವಿಕೇಂದ್ರೀಕೃತ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಸ್ವರೂಪದ್ದಾಗಿರುತ್ತದೆ. ಮಣಿಪುರದಲ್ಲಿ ನಡೆದ ಒತ್ತೆಯಾಳು ಬಿಕ್ಕಟ್ಟು—ವಿವಿಧ ಸ್ಥಳಗಳಲ್ಲಿ 44 ನಾಗರಿಕರನ್ನು ಬಂಧಿಸಿಟ್ಟಿರುವುದು—ಹತ್ಯೆಗಳು ಎಷ್ಟು ಬೇಗನೆ ಸರಣಿ ಅಪಹರಣಗಳು ಮತ್ತು ಒತ್ತೆಯಾಳು ಬಿಕ್ಕಟ್ಟುಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಸಾಕ್ಷಿ. ಇಲ್ಲಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಆದೇಶಿಸಲು ಯಾವುದೇ ಕೇಂದ್ರ ಕಮಾಂಡ್ ಇರುವುದಿಲ್ಲ. ಪ್ರತಿಯೊಂದು ಅಪಹರಣವು ಮತ್ತೊಂದಕ್ಕೆ ಜನ್ಮ ನೀಡುತ್ತದೆ; ಪ್ರತಿಯೊಂದು ಹತ್ಯೆಯೂ ರಕ್ತಕ್ಕೆ ರಕ್ತವನ್ನು ಬೇಡುತ್ತದೆ.

ಮೂರನೆಯದಾಗಿ, ಹೋರಾಟಗಾರರಲ್ಲದವರ (ನಾಗರಿಕರ) ರಕ್ಷಣಾ ಕವಚವನ್ನು ಪುಡಿಗಟ್ಟುತ್ತ ಹೋಗುವುದು. ನೇರ ಸಂಘರ್ಷಗಳು ಎಷ್ಟೇ ಕ್ರೂರವಾಗಿದ್ದರೂ, ಅವುಗಳಲ್ಲಿ ಹೋರಾಟಗಾರರು ಮತ್ತು ಸಾಮಾನ್ಯ ನಾಗರಿಕರ ನಡುವೆ ವ್ಯತ್ಯಾಸವನ್ನು ಗುರುತಿಸುವ ಒಂದು ಕಠಿಣ ಚೌಕಟ್ಟು ಇರುತ್ತದೆ. ಭದ್ರತಾ ಪಡೆಗಳು ಅಥವಾ ಸರ್ಕಾರದ ಮೂಲಸೌಕರ್ಯಗಳು ಸಶಸ್ತ್ರ ಗುಂಪುಗಳ ಗುರಿಯಾಗಿರುತ್ತವೆ. ಅಲ್ಲಿ ನಾಗರಿಕರು ಅಪ್ರಸ್ತುತವಾಗಿರುತ್ತಾರೆಯೇ ಹೊರತು ಪ್ರಾಥಮಿಕ ಗುರಿಯಾಗಿರುವುದಿಲ್ಲ. ಆದರೆ ಪರಸ್ಪರ ಜನಾಂಗೀಯ ಯುದ್ಧದಲ್ಲಿ, ನಾಗರಿಕರೇ ಯುದ್ಧಭೂಮಿಯೊಳಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಶಾಂತಿಯ ದೂತರಾದ ಚರ್ಚ್ ಮುಖಂಡರನ್ನು ಕೊಲ್ಲಲಾಗುತ್ತದೆ. ಜನರನ್ನು ಒತ್ತೆಯಾಳಾಗಿ ಇರಿಸಲಾಗುತ್ತದೆ. ಗ್ರಾಮಸ್ಥರನ್ನು ಅವರ ನೆರೆಹೊರೆಯವರೇ ಸುತ್ತುವರಿದಿರುತ್ತಾರೆ. ಇಲ್ಲಿ ಹೋರಾಟಗಾರ ಮತ್ತು ನಾಗರಿಕನ ನಡುವಿನ ಗೆರೆಯೂ ಮಾಯವಾಗಿರುತ್ತದೆ. ಯಾಕೆಂದರೆ ಇಲ್ಲಿನ ಸಮವಸ್ತ್ರವೇ ಜನಾಂಗೀಯತೆ.

ಅಪ್ರಸ್ತುತವಾದ ನೇರ ಸಂಘರ್ಷ

ಇದು ನವದೆಹಲಿ ಮತ್ತು ಈ ಪ್ರದೇಶದ ಜನಾಂಗೀಯ ರಾಜಕೀಯ ಸಶಸ್ತ್ರ ಚಳವಳಿಗಳ ನಡುವಿನ ಸಾಂಪ್ರದಾಯಿಕ ಲಂಬ ಸಂಘರ್ಷವನ್ನು ಯಾವ ಸ್ಥಿತಿಗೆ ತಂದಿಡುತ್ತದೆ? ಕೇವಲ ಅಂಚಿಗೆ ತಳ್ಳುತ್ತದೆ.

ಕಾಂಗ್ಪೋಕ್ಪಿ ಹೊಂಚುದಾಳಿಯ ಹೊಣೆಯನ್ನು ಯಾವುದೇ ಪ್ರಮುಖ ಸಶಸ್ತ್ರ ಗುಂಪು ಹೊತ್ತುಕೊಂಡಿಲ್ಲ. ಬಂಡುಕೋರರ ಎಂದಿನ ನಾಟಕೀಯ ಶೈಲಿ—ಬೇಡಿಕೆ, ಬೆದರಿಕೆ, ಕದನ ವಿರಾಮ, ಸಂವಾದ—ಇಲ್ಲಿ ಕಾಣಿಸುತ್ತಿಲ್ಲ. ಬದಲಿಗೆ, ಸರ್ಕಾರದ ಜವಾಬ್ದಾರಿಯು ಕೇವಲ ರಾಷ್ಟ್ರೀಯ ಹೆದ್ದಾರಿಗಳ ಬಂದ್, ಭದ್ರತೆ ಬಿಗಿಗೊಳಿಸುವುದು ಮತ್ತು ಒತ್ತೆಯಾಳುಗಳ ಬಿಡುಗಡೆಗಾಗಿ ವಿನಂತಿಸಲು ಉಪಮುಖ್ಯಮಂತ್ರಿಯನ್ನು ಕಳುಹಿಸುವಂತಹ ಬಿಕ್ಕಟ್ಟು ನಿರ್ವಹಣೆಗೆ ಮಾತ್ರ ಸೀಮಿತವಾಗಿದೆ.

ಮುಖ್ಯಮಂತ್ರಿ ಯೂಮ್ನಮ್ ಖೇಮಚಂದ್ ಸಿಂಗ್ ಅವರು ಈ ಹೊಂಚುದಾಳಿಯನ್ನು "ಹೇಡಿತನದ ಭಯೋತ್ಪಾದಕ ಕೃತ್ಯ" ಎಂದು ಕರೆದಿದ್ದಾರೆ ಮತ್ತು ನ್ಯಾಯ ಒದಗಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಆದರೆ ನ್ಯಾಯ ಯಾರ ವಿರುದ್ಧ? ಅಪರಾಧಿಗಳನ್ನು ಇನ್ನೂ ಅಧಿಕೃತವಾಗಿ ಗುರುತಿಸಲಾಗಿಲ್ಲ.

ನವದೆಹಲಿಯು ದಶಕಗಳಿಂದ ಹೂಡಿಕೆ ಮಾಡಿರುವ ಶಾಂತಿ ಒಪ್ಪಂದಗಳು—ನಾಗಾ ಶಾಂತಿ ಪ್ರಕ್ರಿಯೆ, ಕುಕಿ ಕಾರ್ಯಾಚರಣೆ ಅಮಾನತು ಮತ್ತು ಇತರ ಶಾಂತಿ ಒಪ್ಪಂದಗಳು—ನೇರ ಸಂಘರ್ಷಗಳನ್ನು ಕೊನೆಗೊಳಿಸಲು ರೂಪಿಸಲಾದ ಸಂಗತಿಗಳಾಗಿದ್ದವು. ಸರ್ಕಾರವು ರಾಜಕೀಯ ಬೇಡಿಕೆಗಳನ್ನು ಈಡೇರಿಸಿದರೆ ಹಿಂಸಾಚಾರವು ಕಡಿಮೆಯಾಗುತ್ತದೆ ಎಂದು ಅವು ಭಾವಿಸಿದ್ದವು. ಆದರೆ ಆಂತರಿಕ ಜನಾಂಗೀಯ ಸಂಘರ್ಷಗಳು ರಾಜಕೀಯ ಬೇಡಿಕೆಗಳಿಂದ ಪ್ರೇರಿತವಾಗಿರುವುದಿಲ್ಲ. ಅವು ಭೂಮಿ, ಇತಿಹಾಸದ ನೆನಪುಗಳು, ಜನಸಂಖ್ಯಾಶಾಸ್ತ್ರ ಮತ್ತು ಜನಾಂಗೀಯ/ಕೋಮು ಭದ್ರತೆಯ ಕಟು ಲೆಕ್ಕಾಚಾರಗಳಿಂದ ಪ್ರೇರಿತವಾಗಿರುತ್ತವೆ. ಸೇನಾಪತಿ ಜಿಲ್ಲೆಯ ನಾಗಾ ಮತ್ತು ಕುಕಿ ಗ್ರಾಮಗಳು ಪರಸ್ಪರರನ್ನು ತಮ್ಮ ಅಸ್ತಿತ್ವಕ್ಕೆ ಆಪತ್ತು ಎಂದು ಏಕೆ ಭಾವಿಸುತ್ತವೆ ಎಂಬುದನ್ನು ದೆಹಲಿಯಲ್ಲಿ ಸಹಿ ಮಾಡಿದ ಯಾವುದೇ ಒಪ್ಪಂದವು ಪರಿಹರಿಸಲು ಸಾಧ್ಯವಿಲ್ಲ.

ಅತ್ಯಂತ ಅಪಾಯಕಾರಿ ವಿದ್ಯಮಾನವೆಂದರೆ ಅದು ನೇರ ಮತ್ತು ಪರಸ್ಪರ ಆಂತರಿಕ ಸಂಘರ್ಷಗಳ ನಡುವೆ ಉಂಟಾಗುವ ಪರಸ್ಪರ ಪ್ರತಿಕ್ರಿಯೆಯ ಸರಪಣಿ. ಅಂತರ-ಜನಾಂಗೀಯ ಹಿಂಸಾಚಾರವು ತೀವ್ರಗೊಂಡಂತೆ, ಸಾಂಪ್ರದಾಯಿಕ ಸಶಸ್ತ್ರ ಗುಂಪುಗಳ ನ್ಯಾಯಸಮ್ಮತತೆ ಮತ್ತು ಪ್ರಭಾವ ಕುಸಿಯುತ್ತದೆ. ಕಾನೂನನ್ನು ಕೈಗೆತ್ತಿಕೊಳ್ಳುವ ನಾಗಾಗಳು ಕುಕಿ ನಾಗರಿಕರನ್ನು ಅಥವಾ ಕುಕಿಗಳು ನಾಗಾ ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವಾಗ, ಇನ್ನು ಎನ್ಎಸ್ಸಿಎನ್ ಜೊತೆ ಮಾತುಕತೆ ನಡೆಸಿ ಏನು ಪ್ರಯೋಜನ? ಇದಕ್ಕೆ ತದ್ವಿರುದ್ಧವಾಗಿ, ಜನಾಂಗೀಯ ವಲಯಗಳ ಒಳಗಿರುವ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸಲು ಸರ್ಕಾರ ವಿಫಲವಾದರೆ, ಅದು ಮತ್ತಷ್ಟು ಪರಸ್ಪರ ಜನಾಂಗೀಯ ಸಂಘರ್ಷಕ್ಕೆ ಸಜ್ಜುಗೊಳ್ಳಲು ಪ್ರಚೋದನೆ ನೀಡುತ್ತದೆ. ಮಣಿಪುರ ಸರ್ಕಾರವು ತಮ್ಮನ್ನು ಕೈಬಿಟ್ಟಿದೆ ಎಂದು ಭಾವಿಸುವ ಕುಕಿ ನಾಗರಿಕರು ದೆಹಲಿಯ ಕಡೆಗೆ ನೋಡುವುದಿಲ್ಲ—ಅವರು ಕುಕಿ ರಕ್ಷಣಾ ಸಮಿತಿಗಳ ಮೊರೆ ಹೋಗುತ್ತಾರೆ. ಕುಕಿ ಸಶಸ್ತ್ರ ಗುಂಪುಗಳಿಂದ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಳ್ಳುವ ನಾಗಾ ಗ್ರಾಮಸ್ಥರು ಎನ್ಎಸ್ಸಿಎನ್ನ ರಾಜಕೀಯ ಪರಿಹಾರಕ್ಕಾಗಿ ಕಾಯುವುದಿಲ್ಲ. ಅವರು ತಾವೇ ಸ್ವತಃ ಶಸ್ತ್ರಸಜ್ಜಿತರಾಗುತ್ತಾರೆ.

ಇಂತಹ ವಾತಾವರಣದಲ್ಲಿ, ಕೇಂದ್ರ ಸರ್ಕಾರದ ಜೊತೆ ನಡೆಸುವ ನೇರ ಸಂಘರ್ಷವು ಅಪ್ರಸ್ತುತವಾಗಿದೆ. ಒಂದು ಕಾಲದಲ್ಲಿ ಸಂಘಟಿತ ಹೋರಾಟಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಸಶಸ್ತ್ರ ರಾಜಕೀಯ ಚಳವಳಿಗಳು, ಇಂದು ಬೀದಿ ಮಟ್ಟದ ಜನಾಂಗೀಯ ಸಶಸ್ತ್ರ ಗುಂಪುಗಳ ಮುಂದೆ ಮೂಲೆಗುಂಪಾಗಿವೆ. ದಶಕಗಳ ಕಾಲ ದಂಗೆ ನಿರೋಧಕ ಕ್ರಮಗಳು ಮತ್ತು ಶಾಂತಿ ಪ್ರಕ್ರಿಯೆಗಳ ವ್ಯಾಕರಣದಲ್ಲೇ ತರಬೇತಿ ಪಡೆದಿರುವ ನವದೆಹಲಿಗೆ, ಇಂತಹ ಪರಸ್ಪರ ಆಂತರಿಕ ಜನಾಂಗೀಯ ಯುದ್ಧವನ್ನು ಎದುರಿಸುವ ಭಾಷೆಯೇ ಗೊತ್ತಿಲ್ಲ. ರಸ್ತೆ ತಡೆ ಮತ್ತು ಬಂದ್‌ಗಳು ಕಾರ್ಯತಂತ್ರಗಳಲ್ಲ; ಅವು ಕೇವಲ ಸರ್ಕಾರದ ಅಸಹಾಯಕತೆಗೆ ನೀಡುವ ಸಹಮತವಾಗಿರುತ್ತದೆ.

ಹಿಂಸಾಚಾರದ ಹೊಸ ವ್ಯಾಕರಣ

ಮೇ 2026ರ ಮಣಿಪುರ ಬಿಕ್ಕಟ್ಟು ಒಂದು ಎಚ್ಚರಿಕೆಯ ಗಂಟೆ ಎಂಬುದು ನಿರ್ವಿವಾದ. ರೆವರೆಂಡ್ ಡಾ. ವುಮ್ಥಾಂಗ್ ಸಿತ್ಲೌ ಮತ್ತು ಅವರ ಸಹಚರರ ಹತ್ಯೆಯು ಯಾವುದೇ ಹೊಸ ವಿಷಯದ ಆರಂಭವಾಗಿರಲಿಲ್ಲ; ಬದಲಿಗೆ ಅದು ಈಗಾಗಲೇ ನಡೆಯುತ್ತಿದ್ದ ಪ್ರಕ್ರಿಯೆಯನ್ನೇ ಮತ್ತೆ ಮತ್ತೆ ಬಹಿರಂಗಪಡಿಸಿದಂತೆ ಇತ್ತು. ಈಶಾನ್ಯ ಭಾರತದಾದ್ಯಂತ—ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ—ಸಂಘರ್ಷದ ಕೇಂದ್ರಬಿಂದುವು ನೇರ ಸ್ವರೂಪದ ಹಾದಿಯನ್ನು ತೊರೆದು ಪರಸ್ಪರ ಆಂತರಿಕೆ ಸ್ವರೂಪಕ್ಕೆ ಬದಲಾಗುತ್ತಿದೆ.

ಅದು ಬಂಡುಕೋರರ ವಿರುದ್ಧ ಸರ್ಕಾರ ಎಂಬ ಸ್ಥಿತಿಯಿಂದ ನೆರೆಹೊರೆಯವರ ವಿರುದ್ಧ ನೆರೆಹೊರೆಯವರು ಎಂಬ ಸ್ಥಿತಿಗೆ ತಿರುಗುತ್ತಿದೆ. ರಾಜಕೀಯ ಮಾತುಕತೆಯಿಂದ ಜನಾಂಗೀಯ ವಿನಾಶದ ಕಡೆಗೆ ಸಾಗುತ್ತಿದೆ.

ನವದೆಹಲಿಯು ಇನ್ನು ಮುಂದೆ ಶಾಂತಿ ಒಪ್ಪಂದಗಳನ್ನೇ ಅಂತಿಮ ಗಮ್ಯಸ್ಥಾನ ಎಂದು ಭಾವಿಸಲು ಸಾಧ್ಯವಿಲ್ಲ. ಅವು ಅಂತಿಮವಲ್ಲ. ಅತ್ಯಂತ ಕಷ್ಟಕರವಾದ, ಪ್ರಚಾರವಿಲ್ಲದ ಮತ್ತು ತಳಮಟ್ಟದ ನೈಜ ಕೆಲಸವೆಂದರೆ ಅದು ಪರಸ್ಪರ ಆಂತರಿಕ ಸಂಘರ್ಷಗಳು ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯುವುದು. ಇದರರ್ಥ ಕೇವಲ ಬಂಡುಕೋರ ಗುಂಪುಗಳನ್ನಷ್ಟೇ ಅಲ್ಲದೆ, ನಾಗರಿಕ ಸಶಸ್ತ್ರ ಗುಂಪುಗಳನ್ನೂ ನಿಶ್ಯಸ್ತ್ರಗೊಳಿಸುವುದಾಗಿದೆ. ಇದರರ್ಥ ಕೇವಲ ಸ್ವಾಯತ್ತತೆಯ ಪ್ಯಾಕೇಜ್ಗಳನ್ನು ನೀಡುವುದಲ್ಲ, ಬದಲಿಗೆ ಭೂಮಿ ಮತ್ತು ಸಂಪನ್ಮೂಲಗಳ ನ್ಯಾಯೋಚಿತ ಹಂಚಿಕೆ ನಡೆಯಬೇಕಾಗಿದೆ.

ಈಶಾನ್ಯ ಭಾಗದಲ್ಲಿ ಭಾರತ ಸರ್ಕಾರದ ಅತ್ಯಂತ ಅಪಾಯಕಾರಿ ಶತ್ರು ಎಂದರೆ ಪ್ರಣಾಳಿಕೆಯನ್ನು ಹೊಂದಿರುವ ಸಶಸ್ತ್ರ ಕ್ರಾಂತಿಕಾರಿಯಲ್ಲ, ಬದಲಿಗೆ ಅನ್ಯಾಯದ ವಿರುದ್ಧ ಆಕ್ರೋಶಗೊಂಡು ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಸಾಮಾನ್ಯ ಗ್ರಾಮಸ್ಥ ಎಂಬುದನ್ನು ಒಪ್ಪಿಕೊಳ್ಳುವುದು. ನೇರ ಸಂಘರ್ಷವು ಕೇವಲ ಅಂಚಿಗೆ ತಳ್ಳಲ್ಪಟ್ಟಿದೆ. ಸರ್ಕಾರವು ಇನ್ನೂ ಅಲ್ಲಿಯೇ ಅದನ್ನು ಹುಡುಕುತ್ತಾ ಕುಳಿತರೆ, ತನ್ನದೇ ಪಾದದ ಬಳಿ ಉರಿಯುತ್ತಿರುವ ಬೆಂಕಿಯನ್ನು ಅದು ಗಮನಿಸದೇ ಹೋಗುತ್ತದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ ʼದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story