Subir Bhaumik

ಹಸೀನಾ ತವರಿಗೆ ಮರಳುವುದು ನಿಜಾನಾ: ಉತ್ತರವಿಲ್ಲದ ಪ್ರಶ್ನೆಗಳು, ಬಗೆಹರಿಯದ ಗೊಂದಲಗಳು


ಹಸೀನಾ ತವರಿಗೆ ಮರಳುವುದು ನಿಜಾನಾ: ಉತ್ತರವಿಲ್ಲದ ಪ್ರಶ್ನೆಗಳು, ಬಗೆಹರಿಯದ ಗೊಂದಲಗಳು
x
ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದುಕೊಂಡಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಇತ್ತೀಚೆಗೆ ಘೋಷಿಸಿದ ತವರಿಗೆ ಮರಳುವ ನಿರ್ಧಾರದ ಬಳಿಕ ಉಂಟಾದ ಜನಪ್ರಿಯತೆಯಿಂದ ಉತ್ತೇಜಿತರಾದಂತೆ ಕಾಣಿಸುತ್ತಿದೆ.
Click the Play button to hear this message in audio format

ವರ್ಷಾಂತ್ಯದಲ್ಲಿ ತವರಿಗೆ ಮರಳುವುದಾಗಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಹೇಳಿರುವ ಮಾತು ಆ ದೇಶದಲ್ಲಿ ರಾಜಕೀಯ ಸಂಚಲನವನ್ನು ಸೃಷ್ಟಿಸಿದೆ.

ತಮ್ಮ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಎದುರಿಸಲು ಡಿಸೆಂಬರ್‌ ತಿಂಗಳಲ್ಲಿ ಮರಳಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸುವುದಾಗಿ ಈಗ ಭಾರತದಲ್ಲಿ ಆಶ್ರಯ ಪಡೆದಿರುವ ಆ ದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಈಗಾಗಲೇ ಸಾರ್ವಜನಿಕವಾಗಿ ಘೋಷಣೆ ಮಾಡಿದ್ದಾರೆ. ಇದು ಅವರ ಅವಾಮಿ ಲೀಗ್‌ ಪಕ್ಷದ ಬೆಂಬಲಿಗರಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ನಿಜಕ್ಕೂ ಡಿಸೆಂಬರ್‌ ತಿಂಗಳಿನಲ್ಲಿ ಹಸೀನಾ ಬಾಂಗ್ಲಾದೇಶಕ್ಕೆ ಮರಳುತ್ತಾರೆಯೇ ಎಂದು ಬಾಂಗ್ಲಾದಲ್ಲಿ ಅಥವಾ ವಿದೇಶದಲ್ಲಿರುವ ಯಾರೇ ಆದರೂ ಕೇಳುವ ಪ್ರಶ್ನೆಯಾಗಿದೆ.

ಸದ್ಯ ಕುವೈಟ್‌ನಲ್ಲಿ ತಂಗಿರುವ, ನಾನು ಯಾವತ್ತೂ ʼಬೊಯಿನ್‌ʼ (ಸಹೋದರಿ) ಎಂದೇ ಕರೆಯುವ ಬಾಂಗ್ಲಾ ಮಹಿಳೆಯೊಬ್ಬರು ಈ ವಾರ ಕರೆಮಾಡಿ ಇದೇ ಪ್ರಶ್ನೆಯನ್ನು ಕೇಳಿದ್ದರು; ʼಆಪಾ (ಹಿರಿಯ ಸಹೋದರಿ, ಶೇಖ್‌ ಹಸೀನಾ ಅವರನ್ನು ಕರೆಯುವ ರೀತಿ) ನಿಜಕ್ಕೂ ಡಿಸೆಂಬರ್‌ನಲ್ಲಿ ತವರಿಗೆ ತೆರಳುವರೇʼ. ಯಾಕೆಂದರೆ ತೈಲ ಸಾಮ್ರಾಜ್ಯ ರಾಷ್ಟ್ರದಲ್ಲಿರುವ ಅವರ ನೂರಾರು ಮಂದಿ ಸಹ-ಬಾಂಗ್ಲಾದೇಶಿಯರು ಆ ಸಮಯದಲ್ಲಿ ಢಾಕಾಗೆ ಪ್ರಯಾಣ ಬೆಳೆಸಲು ವಿಮಾನಯಾನದ ಬುಕ್ಕಿಂಗ್‌ ಖಚಿತಪಡಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ.

ಕಳೆದ ಸುಮಾರು ನಲವತ್ತು ದಿನಗಳ ಅವಧಿಯಲ್ಲಿ ಪಶ್ಚಿಮದ ದೇಶಗಳು, ಮಧ್ಯಪ್ರಾಚ್ಯ, ಮಲೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿರುವ ಬಾಂಗ್ಲಾದೇಶಿ ಸ್ನೇಹಿತರು ಇದೇ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನೂರಾರು ಕರೆಗಳನ್ನು ಮಾಡುತ್ತಿದ್ದಾರೆ.

ʼಆಪಾʼ ಅವರ ನಿಜವಾದ ಯೋಜನೆಯಾದರೂ ಏನು ವಿಚಾರಿಸಿಕೊಂಡು ಬಾಂಗ್ಲಾದಿಂದ ಬರುವ ಇಂತಹ ಕರೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇವೆ. ಢಾಕಾದಲ್ಲಿ ನಾನು ಆಗಾಗ್ಗೆ ಬಳಸುತ್ತಿದ್ದ ರಿಕ್ಷಾವಾಲಾ, ಹಲವು ಮಂದಿ ಆಟೋ ಚಾಲಕರು ಮತ್ತು ಜನಸಾಮಾನ್ಯರು ಇದರಲ್ಲಿ ಸೇರಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ಅವಾಮಿ ಲೀಗ್‌ ಜೊತೆಗೆ ನೇರ ಸಂಬಂಧವೇನೂ ಇಲ್ಲ. ಹಸೀನಾ ಅವರನ್ನು ಪದಚ್ಯುತಗೊಳಿಸಿದಾಗಿನಿಂದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ತೀವ್ರ ಆಡಳಿತ ವೈಫಲ್ಯಗಳು ಸಂಭವಿಸುತ್ತಿರುವ ಬಗ್ಗೆ ಹೆಚ್ಚಿನವರು ದೂರು ನೀಡುತ್ತಾರೆ. ಕೇವಲ ʼಶೇಖ್‌ ಅವರ ಮಗಳುʼ (ತಮ್ಮ ತಂದೆ ಶೇಖ್‌ ಮುಜಿಬುರ್‌ ರೆಹಮಾನ್‌ ಅವರನ್ನು ಉಲ್ಲೇಖಿಸಿ) ಮಾತ್ರ ಈ ಸಂಕಷ್ಟದಿಂದ ದೇಶವನ್ನು ಪಾರುಮಾಡಬಲ್ಲರು ಎಂದು ಅವರ ಅಭಿಪ್ರಾಯ.

ಉತ್ತರಾಧಿಕಾರಿಗಳ ವೈಫಲ್ಯದ ಫಲ

ಶೇಖ್‌ ಅವರ ಉತ್ತರಾಧಿಕಾರಿಗಳು ಎಲ್ಲ ರಂಗಗಳಲ್ಲೂ ದಯನೀಯವಾಗಿ ವಿಫಲರಾಗಿ ಬಾಂಗ್ಲಾದೇಶವನ್ನು ಕಾನೂನುಬಾಹಿರವಾದ, ಸೇಡಿನಿಂದ ಕೂಡಿದ ಗಣರಾಜ್ಯವನ್ನಾಗಿ ಪರಿವರ್ತಿಸಿರುವ ಕಾರಣ ಭಾಗಶಃ ಅವರ ಜನಪ್ರಿಯತೆಯಲ್ಲಿ ಹೆಚ್ಚಳ ಕಂಡುಬರುತ್ತಿರಬಹುದು. ಈಗ ಅವರು ತವರಿಗೆ ಮರಳುವ ಘೋಷಣೆಯು ಅಸಾಧಾರಣ ಧೈರ್ಯದ ನಡೆ ಎಂಬಂತೆ ಭಾಸವಾಗುತ್ತಿದೆ. ಯಾಕೆಂದರೆ ಅವರು ಈಗ ಎದುರಿಸುತ್ತಿರುವ ಶಿಕ್ಷೆ ಮರಣದಂಡನೆ ಮತ್ತು ಅವರ ರಾಷ್ಟ್ರಕ್ಕೆ ಮರಳಿದಾಗ ಅವರನ್ನು ಶಿಕ್ಷೆಗೆ ಗುರಿಪಡಿಸುವ ಅಪಾಯವೂ ಇದೆ.

ಕಳೆದ ಎರಡು ವರ್ಷಗಳಿಂದ ದೆಹಲಿಯಲ್ಲಿ ದೇಶಭ್ರಷ್ಟರಾಗಿ ಆಶ್ರಯ ಪಡೆದಿರುವ ಹಸೀನಾ ಅವರು ತಳಮಟ್ಟದ ಕಾರ್ಯಕರ್ತರ ಜೊತೆಗೆ ಮರುಸಂಪರ್ಕ ಸಾಧಿಸುತ್ತ ಬಂದಿದ್ದಾರೆ. ಟೆಲಿಗ್ರಾಮ್‌ ಮತ್ತು ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಗುಂಪು ಕರೆಗಳನ್ನು ಮಾಡುತ್ತ ತಮ್ಮ ಪಕ್ಷದ ಬೆಂಬಲದ ನೆಲೆಯನ್ನು ವಿಸ್ತರಿಸುವ ಪ್ರಯತ್ನ ನಡೆಸಿದ್ದಾರೆ. ಅವರು ತಮಗೆ ಲಭ್ಯವಾದ ಜನಪ್ರಿಯತೆಯ ಬೆಂಬಲದ ಏರಿಕೆಯಿಂದ ಉತ್ಸಾಹಗೊಂಡಿರಬಹುದು. ಬಿಎನ್‌ಪಿ, ಜಮಾಯತ್-ಎ-ಇಸ್ಲಾಮಿ ಮತ್ತು ಎನ್‌ಸಿಪಿ ಬೆಂಬಲಿಗರಿಂದ ಸಂಘಟಿವಾದ ಭಾರೀ ಕಿರುಕುಳ, ಹತ್ತಾರು ಸಾವಿರ ಸುಳ್ಳು ಪ್ರಕರಣಗಳು, ಪೊಲೀಸ್‌ ಕಿರುಕುಳ ಅಥವಾ ಗುಂಪಿನ ದಾಳಿಗಳನ್ನು ಎದುರಿಸುತ್ತಿದ್ದರೂ ಹಸೀನಾ ಅವರು ವಿಚಾರಣೆಯನ್ನು ಎದುರಿಸಲು ಹಿಂದಿರುಗಿದ ಬಳಿಕ ತೀವ್ರ ಆಕ್ರೋಶಕ್ಕೆ ಒಳಗಾದ ಲಕ್ಷಾಂತರ ಮಂದಿ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಾರೆ ಎಂಬುದು ಅವಾಮಿ ಲೀಗ್‌ ಕಾರ್ಯಕರ್ತರ ವಿಶ್ವಾಸವಾಗಿದೆ.

ದೇಶದಲ್ಲಿ ಜನಪ್ರಿಯತೆಯ ಅಲೆಯನ್ನು ಅಡಗಿಸಲು ಬಿಎನ್‌ಪಿ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಿದೆ. ಸೇನೆ ಮತ್ತು ಅರೆಸೇನಾಪಡೆಯನ್ನು ನಿಯೋಜಿಸುವುದು ಖಚಿತ. ಭಾರತಕ್ಕೆ ಭೇಟಿ ನೀಡುವಂತೆ ಪದೇ ಪದೇ ಬಂದ ಆಹ್ವಾನವನ್ನು ಪ್ರಧಾನಿ ತಾರಿಕ್‌ ರೆಹಮಾನ್‌ ಅವರು ತಿರಸ್ಕರಿಸಿದ್ದಾರೆ. ಹಸೀನಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಘೋಷಣೆಯ ಬಗ್ಗೆ ಅಸಮಾಧಾನಗೊಂಡಿರುವ ತಾರೀಕ್‌ ಪದಚ್ಯುತ ನಾಯಕಿ ಸುರಕ್ಷಿತವಾಗಿ ತವರಿಗೆ ಮರಳಲು ಅನುಕೂಲವಾಗುವಂತೆ ಮಾಡುವ ಯಾವುದೇ ಮಾತುಕತೆಗೆ ಅವರು ಬಿಲ್‌ಕುಲ್‌ ಸಿದ್ಧರಿಲ್ಲ.

ಶೇಖ್ ಹಸೀನಾ ಅವರು ಮರಳುವುದು ತಾರಿಕ್ ರೆಹಮಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಲಿದೆ. ಹಸೀನಾ ಅವರು ಮರಳುವುದರಿಂದ ಉಂಟಾಗುವ ಜನಪ್ರಿಯ ಅಲೆಯು ಅವರ ಸರ್ಕಾರವನ್ನು ಅಸ್ಥಿರಗೊಳಿಸಬಹುದು, ಹಿಂಸಾತ್ಮಕ ದಮನ ಕ್ರಮಗಳಿಂದ ಜಾಗತಿಕವಾಗಿ ಪ್ರತಿಕೂಲ ಪರಿಣಾಮ ಬೀರಬಹುದು, ಹಸೀನಾ ಅವರಿಗೆ ಮರಣದಂಡನೆ ವಿಧಿಸಿದರೆ ದೇಶವು ಅಂತರ್ಯುದ್ಧ ಪರಿಸ್ಥಿತಿಗೆ ಜಾರಬಹುದು ಮತ್ತು ಹಸೀನಾ ಅವರನ್ನು ಜೈಲಿನಲ್ಲಿಟ್ಟರೆ ಹತ್ತಾರು ಸಾವಿರ ಆಕ್ರೋಶಗೊಂಡ ನಾಗರಿಕರು ಬೀದಿಗಿಳಿಯಬಹುದು ಎಂದು ಬಾಂಗ್ಲಾದೇಶದ ಕೆಲವು ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಲೇ, ಹಸೀನಾ ಅಧಿಕಾರದಲ್ಲಿದ್ದಾಗ ಉಭಯ ದೇಶಗಳು ಮಾಡಿಕೊಂಡಿದ್ದ ಒಪ್ಪಂದದಡಿ (ಈ ಒಪ್ಪಂದದ ಮೂಲಕವೇ ಯುಎಲ್‌ಎಫ್‌ಎ ನಾಯಕ ಅನುಪ್ ಚೆತಿಯಾನನ್ನು ಭಾರತಕ್ಕೆ ಮರಳಿ ಕರೆತರಲಾಗಿತ್ತು) ಹಸೀನಾ ಅವರನ್ನು ಅಧಿಕೃತವಾಗಿ ಗಡೀಪಾರು ಮಾಡುವಂತೆ ರೆಹಮಾನ್ ಸರ್ಕಾರ ಕೋರಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಗಡಿಪಾರು ಮಾಡಲೊಪ್ಪದ ಭಾರತ

ಭಾರತವು ಹಸೀನಾ ಅವರನ್ನು ಗಡೀಪಾರು ಮಾಡಲು ಸ್ಪಷ್ಟವಾಗಿ ಸಿದ್ಧವಿಲ್ಲ. ಆತಿಥೇಯ ರಾಷ್ಟ್ರವು ನ್ಯಾಯಯುತ ವಿಚಾರಣೆಯ ನಂತರ ಕಾನೂನಿನ ಪ್ರಕ್ರಿಯೆಯ ಮೂಲಕ ವ್ಯಕ್ತಿಯು ದೋಷಿ ಎಂದು ಶ್ರುತಪಟ್ಟರೆ ಮಾತ್ರ ಯಾವುದೇ ಗಡೀಪಾರು ವಿನಂತಿಯನ್ನು ಅನುಮೋದಿಸಬಹುದು ಎಂಬ ಒಪ್ಪಂದದ ನಿಬಂಧನೆಗಳ ಪ್ರಕಾರ, ಅಂತಹ ಯಾವುದೇ ವಿನಂತಿಯು ಭಾರತೀಯ ನ್ಯಾಯಾಲಯಗಳಲ್ಲಿ ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟಿರುತ್ತದೆ ಎಂದು ಮೋದಿ ಸರ್ಕಾರ ಸೂಚಿಸಿದೆ.

"ಹಸೀನಾ ಅವರನ್ನು ಔಪಚಾರಿಕ ಗಡೀಪಾರು ಪ್ರಕ್ರಿಯೆಗೆ ಒಳಪಡಿಸುವಂತೆ ಹೇರುವ ಒತ್ತಡ ಅವರು ಮನೆಗೆ ಮರಳಿ ನ್ಯಾಯವನ್ನು ಎದುರಿಸುವ ಯೋಜನೆಗಳನ್ನು ಹಳಿತಪ್ಪಿಸುವ ಉದ್ದೇಶದ್ದಾಗಿದೆ. ಅವರನ್ನು ನ್ಯಾಯಾಲಯವು ಗೈರುಹಾಜರಿಯಲ್ಲಿ ದೋಷಿಯನ್ನಾಗಿ ಮಾಡಿದೆ ಮತ್ತು ಆ ತೀರ್ಪು ಯಾವುದೇ ಸರಿಯಾದ ನ್ಯಾಯಾಂಗ ಪರಿಶೀಲನೆಗೆ ನಿಲ್ಲುವುದಿಲ್ಲ" ಎಂದು ಪ್ರಶಸ್ತಿ ವಿಜೇತ ನಟಿ ಹಾಗೂ ಅವಾಮಿ ಲೀಗ್ ವಕ್ತಾರೆ ರೋಕೆಯಾ ಪ್ರಾಚಿ ಹೇಳಿದ್ದಾರೆ.

ಹಸೀನಾ ಅವರ ಮರಳುವಿಕೆಯ ಬಗ್ಗೆ ಇರುವ ಆತಂಕವು ಎಷ್ಟಿದೆಯೆಂದರೆ, ಅವರ ಸರ್ಕಾರವನ್ನು ಕೆಳಕ್ಕುರುಳಿಸಿದ ಯುವ ನಾಯಕರು ಈಗಾಗಲೇ ಟರ್ಕಿ ಮತ್ತು ಮಲೇಷ್ಯಾದಂತಹ ವಿದೇಶಗಳಿಗೆ ತೆರಳುತ್ತಿದ್ದಾರೆ ಎಂದು ಪ್ರಾಚಿ ಆರೋಪಿಸಿದ್ದಾರೆ.

ಸೇನೆಯ ಹಸ್ತಕ್ಷೇಪಕ್ಕೆ ದಾರಿ

ಹಸೀನಾ ಮರಳಿದ ನಂತರ ಉಂಟಾಗುವ ಜನಪ್ರಿಯ ಅಲೆಯು ಅರಾಜಕತೆಗೆ ಕಾರಣವಾಗಬಹುದು ಮತ್ತು ಇದು ಮಿಲಿಟರಿ ಸ್ವಾಧೀನಕ್ಕೆ ದಾರಿಮಾಡಿಕೊಡಬಹುದು ಎಂಬುದು ಕೆಲವರ ಅಭಿಪ್ರಾಯ. ಹಜ್ ಯಾತ್ರೆಯ ನಂತರ ಪೂರ್ಣ ಗಡ್ಡ ಬೆಳೆಸಿಕೊಳ್ಳುವುದು, ಮಿಲಿಟರಿ ತರಬೇತಿ ಪಠ್ಯಕ್ರಮದಲ್ಲಿ ಧರ್ಮ ಅಧ್ಯಯನವನ್ನು ಸೇರಿಸುವುದು ಮತ್ತು ಸೇನೆಗಾಗಿ ಇಸ್ಲಾಮಿಕ್ ಸಂಸ್ಥೆಯನ್ನು ರಚಿಸುವುದು ಮುಂತಾದ ಕಠಿಣ ಇಸ್ಲಾಮಿಕ್ ಒಲವುಗಳನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿರುವ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉ-ಝಮಾನ್, ಮಧ್ಯಂತರ ಸರ್ಕಾರದ ಮೂಲಕ ದೇಶವನ್ನು ನಡೆಸಲು ಮುಂದಾಗಬಹುದು. ಅದಕ್ಕೆ ಧರ್ಮಗುರುಗಳು ಮತ್ತು ಅಮೆರಿಕ ಬೆಂಬಲಿತ ನಾಗರಿಕ ಸಮಾಜ ಬೆಂಗಾವಲಾಗಿ ನಿಲ್ಲಬಹುದು.

"ಸಂಸತ್ತಿನ ಅಮಾನತು ಮತ್ತು ಮತ್ತೊಂದು ಮಧ್ಯಂತರ ಸರ್ಕಾರದೊಂದಿಗೆ ಮಿಲಿಟರಿ ಸ್ವಾಧೀನ ಪಡಿಸಿಕೊಂಡರೆ ಬಾಂಗ್ಲಾದೇಶಕ್ಕೆ ವಿಪರೀತ ಪರಿಣಾಮ ಬೀರುವುದು ಖಚಿತ" ಎಂದು ಬಾಂಗ್ಲಾದೇಶದ ಪ್ರಮುಖ ವಕೀಲರಾದ ತಾನಿಯಾ ಅಮೀರ್ ಹೇಳಿದ್ದಾರೆ. "ಇದು ಶರಿಯಾ ಆಧಾರಿತ ರಾಜ್ಯದ ಮೂಲಕ ಬಾಂಗ್ಲಾದೇಶವನ್ನು ಇಸ್ಲಾಮಿಕ್ ಸ್ವಾಧೀನಕ್ಕೆ ಸಿದ್ಧಪಡಿಸುವ ವಿನ್ಯಾಸವಾಗಿರಬಹುದು ಮತ್ತು ಸೇನೆಯು ಈ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡುತ್ತದೆ" ಎಂದು ಅವರು ತಿಳಿಸಿದ್ದಾರೆ.

ಮೂರು ಬಹುಮುಖ್ಯ ಸವಾಲುಗಳು

ತೀವ್ರ ಧಾರ್ಮಿಕ ನಂಬುಗೆಯ ನಾಯಕಿಯೂ ಆಗಿರುವ ಶೇಖ್ ಹಸೀನಾ ಅವರು ಸರ್ವಶಕ್ತ ಅಲ್ಲಾ ಮತ್ತು ಬಾಂಗ್ಲಾದೇಶದ ಜನರ ಮೇಲೆ ನಂಬಿಕೆ ಇಟ್ಟು, ಮರಳಲು ದೃಢನಿಶ್ಚಯ ಮಾಡಿದ್ದರೂ ಸಹ, ಅವರ ಯೋಜಿತ ತವರಿಗೆ ಮರಳುವ ಉದ್ದೇಶದಿಂದ ಏದುರಾಗುವ ಮೂರು ಪ್ರಮುಖ ಪ್ರಶ್ನೆಗಳು ಹೀಗಿವೆ:

(ಎ) ಬಾಂಗ್ಲಾದೇಶ ಸರ್ಕಾರವು ಅವರನ್ನು ಸಾಮಾನ್ಯ ರೀತಿಯಲ್ಲಿ ಮತ್ತೆ ಸ್ವೀಕರಿಸುತ್ತದೆಯೇ ಎಂಬುದು ಪ್ರಶ್ನೆಯಾಗಿದೆ̤ ಯಾಕೆಂದರೆ ಪದಚ್ಯತರಾದ ಬಳಿಕ ಅವರು ಭಾರತದಲ್ಲಿ ಸುರಕ್ಷಿತ ಆಶ್ರಯವನ್ನು ಪಡೆದುಕೊಂಡರು. ಅವರನ್ನು ಗಡಿಪಾರು ಮಾಡಲು ಭಾರತ ಸುತಾರಾಮ್‌ ಒಪ್ಪಿರಲಿಲ್ಲ.

(ಬಿ) ಅವರ ಯೋಜಿತ ವಾಪಸಾತಿಯಿಂದ ದೇಶದಲ್ಲಿ ಜನಪ್ರಿಯ ಅಲೆಗೆ ಕಾರಣವಾಗಬಹುದು ಮತ್ತು ಅದು ಸರ್ಕಾರದ ಪಾಲಿಗೆ ಗಂಡಾಂತರಕಾರಿಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅಂತಹ ಸಂದರ್ಭದಲ್ಲಿ ಆಡಳಿತವನ್ನು ಮಿಲಿಟರಿ ವಶಪಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾದೀತು. ಜೊತೆಗೆ ಅವಾಮಿ ಲೀಗ್‌ನ ಪುನರುಜ್ಜೀವನದ ಯಾವುದೇ ಸಾಧ್ಯತೆಯನ್ನುವಿಫಲಗೊಳಿಸಬಹುದು;

(ಸಿ) ಪ್ರಸ್ತುತ ಅಧಿಕಾರದಲ್ಲಿರುವ ಬಿಎನ್‌ಪಿ ಸರ್ಕಾರವನ್ನು ಉರುಳಿಸಲು ಅವಾಮಿ ಲೀಗ್ ಬೀದಿಗಿಳಿದು ಪ್ರತಿಭಟಿಸುವುದನ್ನು ತಪ್ಪಿಸಲು, ಹಸೀನಾ ಅವರು ಮರಳಿದ ಬಳಿಕ ನ್ಯಾಯಯುತ ವಿಚಾರಣೆಯನ್ನು ನಡೆಸುವುದು ಮತ್ತು ಅವಾಮಿ ಲೀಗ್ ಮೇಲಿನ ನಿಷೇಧವನ್ನು ತೆರವುಗೊಳಿಸುವ ಸಲುವಾಗಿ ಭಾರತದ ಮಧ್ಯಸ್ಥಿಕೆಯ ಮೂಲಕ ಬಿಎನ್‌ಪಿ-ಅವಾಮಿ ಲೀಗ್ ಜೊತೆ ರಹಸ್ಯ ಒಪ್ಪಂದ ನಡೆಸುವ ಸಾಧ್ಯತೆಗಳಿವೆಯೇ ಎಂದು ಪರಿಶೀಲಿಸುವುದು.

ಇತ್ತೀಚಿನ ವಾರಗಳಲ್ಲಿ ಅವಾಮಿ ಲೀಗ್ ನಾಯಕರೊಂದಿಗೆ ವ್ಯಾಪಕವಾದ ಚರ್ಚೆಗಳನ್ನು ನಡೆಸಿರುವ ನನಗೆ, ಹಸೀನಾ ಅಥವಾ ಅವರ ಹಿರಿಯ ನಾಯಕರು ತಮ್ಮ ಯೋಜಿತ ತವರಿಗೆ ಮರಳುವುದಕ್ಕೆ ಸಂಬಂಧಿಸಿದಂತೆ ಅನೇಕ ಸಂಭವನೀಯ ಪರಿಣಾಮಗಳ ಬಗ್ಗೆ ಇನ್ನೂ ಸಂಪೂರ್ಣವಾಗಿ ಯೋಚಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮರಳಿ ಪ್ರಯತ್ನ ಮಾಡುವ ದೃಢನಿರ್ಧಾರದ ಬಗ್ಗೆ ಇನ್ನಷ್ಟು ಉತ್ತೇಜಿತರಾಗಿರುವ ಹಸೀನಾ ಅವರು, ಡಿಸೆಂಬರ್ ವೇಳೆಗೆ 'ಈಗ ಇಲ್ಲದೇ ಹೋದರೆ ಇನ್ನೆಂದೂ ಇಲ್ಲ' ಎನ್ನುವ ತೀರ್ಮಾನಕ್ಕೆ ಅಂಟಿಕೊಳ್ಳಬಹುದು.

ಆದರೆ ಪಾಕಿಸ್ತಾನಿ ಜಿಹಾದಿಗಳಿಂದ ಬೆನಜೀರ್ ಭುಟ್ಟೋ ಮಾದರಿಯ ಹತ್ಯೆಯ ಪ್ರಯತ್ನದ ಸಾಧ್ಯತೆಗಳು (ಬಾಂಗ್ಲಾದೇಶದ ಗುಪ್ತಚರ ವರದಿಗಳು ಅಂತಹ ಆರು ಸದಸ್ಯರ ಸಂಘಟನೆಯ ಉಪಸ್ಥಿತಿಯನ್ನು ವರದಿ ಮಾಡಿವೆ) ಸೇರಿದಂತೆ ಎಲ್ಲಾ ಸಂಭಾವ್ಯ ಪರಿಣಾಮಗಳನ್ನು ಕೂಡ ಗಂಭೀರವಾಗಿ ಪರಿಗಣಿಸದೇ ಹೋದರೆ ಇಲ್ಲದೇ ಹೋದರೆ ಅದು ಕುರುಡುಗಣ್ಣಿನ ನೆಗೆತದಂತಾಗುತ್ತದೆ. ಕೇವಲ ಧೈರ್ಯ ಮತ್ತು ಅದೃಷ್ಟವನ್ನು ನಂಬಿಕೊಂಡು ಯೋಜನೆ ಸಿದ್ಧಪಡಿಸಲು ಹೋಗಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ರಾಜಕೀಯದಲ್ಲಿ ಅತ್ಯಂತ ಮುಖ್ಯ. ಇಂತಹುದನ್ನು ಹಸೀನಾ ಮತ್ತು ಅವರ ದಿವಂಗತ ತಂದೆ ಹಿಂದೆ ಹಲವು ಬಾರಿ ಅನುಭವಿಸಿದ್ದಾರೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story