
ಬಾಂಗ್ಲಾದೇಶಕ್ಕೆ ಮರಳುವುದಾಗಿ ಪದಚ್ಯುತ ನಾಯಕಿ ಈಗ ಅಸ್ತಿತ್ವದಲ್ಲಿರುವ ಸರ್ಕಾರವನ್ನು ಸಂದಿಗ್ದಕ್ಕೆ ಸಿಲುಕಿಸಿದ್ದಾರೆ. ಪ್ರಬಲ ಪ್ರತಿಸ್ಪರ್ಧಿಯನ್ನು ಜೈಲಿಗೆ ತಳ್ಳಿ ಅಂತರ್ಯುದ್ಧವನ್ನು ಬಿಎನ್ಪಿ ಮೈಮೇಲೆ ಎಳೆದುಕೊಂಡೀತೇ?
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು 2026ರ ಅಂತ್ಯದ ವೇಳೆಗೆ ತಮ್ಮ ದೇಶಕ್ಕೆ ಮರಳುವುದಾಗಿ ತಿಳಿಸಿದ್ದಾರೆ. ಜೊತೆಗೆ ʼನನ್ನನ್ನು ಬಂಧಿಸಲು ಜೈಲು ಹಾಗೂ ಗಲ್ಲಿಗೇರಿಸಲು ನೇಣುಗಂಬವನ್ನು ಸಿದ್ಧಮಾಡಿ ಇಟ್ಟುಕೊಳ್ಳಿʼ ಎಂದೂ ಅವರು ತಾಕೀತು ಮಾಡಿದ್ದಾರೆ.
ಇತ್ತೀಚೆಗೆ ಎನ್ಡಿಟಿವಿಗೆ ವಿಶೇಷ ಸಂದರ್ಶನ ನೀಡಿದ ಹಸೀನಾ ಅವರು, ತಾವು ಆಗಾಗ ಟೆಲಿಗ್ರಾಮ್ ಅಥವಾ ವಾಟ್ಟಾಪ್ ಗ್ರೂಪ್ ಮೀಟಿಂಗ್ಗಳಲ್ಲಿ ತಮ್ಮ ಬೆಂಬಲಿಗರಿಗೆ ಪದೇ ಪದೇ ತಿಳಿಸುತ್ತಿದ್ದ ಮಾತನ್ನೇ ಪುನರುಚ್ಚರಿಸಿದ್ದಾರೆ; “ಇನ್ಶಾಲಾ ದ್ರುತೋ ದೇಖಾ ಹೋಬೆ” (ದೇವರ ಇಚ್ಛೆ ಇದ್ದರೆ ನಿಮ್ಮನ್ನೆಲ್ಲ ಶೀಘ್ರ ಭೇಟಿಯಾಗಲಿದ್ದೇನೆ).
ಆದರೆ ಈ ಬಾರಿ ಹಿಂದೆಂದಿಗಿಂತಲೂ ಭಿನ್ನವಾದ ಮಾತೊಂದನ್ನು ಅವರು ಹೇಳಿದ್ದಾರೆ. ಅದೆಂದರೆ ತಾವು ತವರಿಗೆ ಮರಳುವ ನಿಖರವಾದ ಸಮಯವನ್ನು ಅವರು ಉಲ್ಲೇಖಿಸಿರುವುದು ವಿಶೇಷ. ಈ ವರ್ಷ ಮುಗಿಯುವುದರ ಒಳಗಾಗಿ ಬಾಂಗ್ಲಾದೇಶಕ್ಕೆ ಹಿಂದಿರುಗುವುದಾಗಿ ಅವರು ತಿಳಿಸಿದ್ದಾರೆ.
ಹಸೀನಾ ಹಸ್ತಾಂತರಕ್ಕೆ ಒತ್ತಡ
ಶೇಖ್ ಹಸೀನಾ ಅವರನ್ನು ತಮಗೆ ಹಸ್ತಾಂತರ ಮಾಡುವಂತೆ ಹಿಂದಿನ ಮುಹಮ್ಮದ್ ಯೂನುಸ್ ನೇತೃತ್ವದಲ್ಲಿದ್ದ ಮಧ್ಯಂತರ ಸರ್ಕಾರ ಹಾಗೂ ಪ್ರಧಾನಿ ತಾರೀಕ್ ರೆಹಮಾನ್ ನೇತೃತ್ವದ ಪ್ರಸ್ತುತ ಸರ್ಕಾರ ಭಾರತಕ್ಕೆ ಮನವಿ ಮಾಡುತ್ತಲೇ ಬಂದಿದೆ. 2024ರ ಜುಲೈ-ಆಗಸ್ಟ್ ತಿಂಗಳಲ್ಲಿ ನಡೆದ ದಂಗೆಯನ್ನು ಹತ್ತಿಕ್ಕಲು ದಮನಕಾರಿ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದ ಆರೋಪ ಹಸೀನಾ ಅವರ ಮೇಲಿದೆ. ಈ ಆರೋಪದ ವಿಚಾರಣೆಗೆ ಹಾಜರಾಗಲು ಮತ್ತು ಆ ಬಳಿಕ ದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಅವರಿಗೆ ವಿಧಿಸಿದ ಮರಣ ದಂಡನೆಯನ್ನು ಜಾರಿಗೊಳಿಸಲು ಅವರನ್ನು ಹಸ್ತಾಂತರಿಸಬೇಕು ಎಂಬುದು ಒತ್ತಾಯವಾಗಿದೆ.
ಆದರೆ ಭಾರತ ಮಾತ್ರ ಸ್ಪಷ್ಟ ಮಾತುಗಳಲ್ಲಿ ತನ್ನ ನಿಲುವನ್ನು ತಿಳಿಸಿದೆ. ಹಸೀನಾ ಅವರಿಗೆ ಯಾವಾಗ ಇಲ್ಲಿಂದ ಹೋಗಬೇಕು ಅನ್ನಿಸುತ್ತದೋ ಆಗ ಹಿಂದಿರುಗಲು ಅವರು ಸ್ವತಂತ್ರರು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ತಿಳಿಸಿದ್ದರು. ಆದರೆ ಈಗ ತಾವೇ ಹಿಂದಿರುಗುವುದಾಗಿ ಹಸೀನಾ ಅವರು ಹೇಳಿದ್ದಾರೆ. ಇದರಿಂದಾಗಿ ಬಾಂಗ್ಲಾದೇಶ ಸರ್ಕಾರ ಇಕ್ಕಟ್ಟಿಗೆ ಒಳಗಾಗಿದೆ.
1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹಿಂದಿನ ಯೂನುಸ್ ಅವರ ಮಧ್ಯಂತರ ಸರ್ಕಾರ ನಿರ್ಬಂಧ ಹೇರಿತ್ತು. ಆ ಬಳಿಕ ಬಂದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಸಂಸತ್ತಿನಲ್ಲಿ ಕಾನೂನನ್ನು ಅಂಗೀಕರಿಸುವ ಮೂಲಕ ಅಧಿಕೃತವಾಗಿ ನಿಷೇಧ ಹೇರಿದೆ. ಪಕ್ಕದ ಮಯನ್ಮಾರ್ನಲ್ಲಿ ಆಂಗ್ ಸಾನ್ ಸೂಕಿ ಅವರ ಪಕ್ಷಕ್ಕೆ ಅಲ್ಲಿನ ಮಿಲಿಟರಿ ಸರ್ಕಾರ ನಿಷೇಧ ಹೇರಿದ ರೀತಿಯಲ್ಲಿಯೇ ಇದನ್ನು ಕೈಗೊಳ್ಳಲಾಗಿದೆ.
ಅವಾಮಿ ವಿರುದ್ಧ ಎಗ್ಗಿಲ್ಲದ ಹಿಂಸೆ
ಅವಾಮಿ ಲೀಗ್ನ ಸಾವಿರಾರು ಮಂದಿ ಬೆಂಬಲಿಗರು ಹಾಗೂ ಪಕ್ಷಕ್ಕೆ ಬೆಂಬಲ ನೀಡುತ್ತಿರುವ ಜಾತ್ಯತೀತ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಸುಳ್ಳು ಆರೋಪಗಳನ್ನು ಹೊರಿಸಿ ಬಿಎನ್ಪಿ ಸರ್ಕಾರ ಜೈಲಿಗೆ ಅಟ್ಟಿದೆ ಹಾಗೂ ಚಿತ್ರಹಿಂಸೆಗೆ ಗುರಿಪಡಿಸಿದೆ. ಬಾಂಗ್ಲಾದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಗುಂಪು ದಾಳಿ, ಜೈಲಿನಲ್ಲಿ ಚಿತ್ರಹಿಂಸೆ ಹಾಗೂ ಪೊಲೀಸ್ ಕಸ್ಟಡಿಯಲ್ಲಿನ ಸಾವಿನ ಪ್ರಕರಣಗಳ ಬಗ್ಗೆ ಬಿಬಿಸಿಯಂತಹ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ವಿಸ್ತೃತ ವರದಿಗಳನ್ನು ಪ್ರಕಟಿಸಿವೆ. ಇಂತಹ ಪ್ರಕರಣಗಳಲ್ಲಿ ಹೆಚ್ಚಿನವು ಅವಾಮಿ ಲೀಗ್ಗೆ ಸಂಬಂಧಿಸಿದ್ದಾಗಿದೆ.
ಢಾಕಾದಲ್ಲಿ ತಮ್ಮ ಮೇಲೆ ನಡೆದ ಹಿಂಸಾತ್ಮಕ ದಾಳಿಯ ಬಳಿಕ ದೇಶವನ್ನೇ ತೊರೆಬೇಕಾದ ಅನಿವಾರ್ಯತೆಗೆ ಒಳಗಾಗಿರುವ ಬಾಂಗ್ಲಾದ ಪ್ರಶಸ್ತಿ ವಿಜೇತ ಚಿತ್ರನಟಿ ರೋಕಿಯಾ ಪ್ರಾಚಿ ಅವರು, ದೇಶದಲ್ಲಿನ ಹಿಂಸೆ ಮಿತಿಮೀರಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧದ ಚಳವಳಿ ಮತ್ತು ಬಾಂಗ್ಲಾದಲ್ಲಿನ ಸೇನಾ ಆಡಳಿತದ ಸಂದರ್ಭದಲ್ಲಿ ನಡೆದ ಧಮನಕಾರಿ ಘಟನೆಗಳನ್ನೂ ಮೀರಿಸುವ ರೀತಿಯಲ್ಲಿ ಹಿಂಸಾಚಾರ ಎಲ್ಲ ಎಲ್ಲೆಗಳನ್ನು ಮೀರಿ ಮುಂದುವರಿದಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
“ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದಿರುವ ಘಟನೆಗಳು ಹಿಂದೆಂದೂ ನಡೆಯದಿರುವಷ್ಟು ಭೀಕರ,” ಎಂದು ಅವಾಮಿ ಲೀಗ್ನ ಮಹಿಳಾ ಮತ್ತು ಕಾರ್ಮಿಕ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರಾಚಿ ಈ ಲೇಖಕರಿಗೆ ತಿಳಿಸಿದ್ದಾರೆ.
ಕಾರ್ಯಕರ್ತರಲ್ಲಿ ಹೊಸ ಚೈತನ್ಯ
ಆದರೆ, ʼನಾನು ದೇಶಕ್ಕೆ ಹಿಂದಿರುಗಿ ಬರುತ್ತೇನೆ. ನನ್ನನ್ನು ಬಂಧಿಸಿ ಗಲ್ಲಿಗೇರಿಸಲು ಸಿದ್ಧತೆ ಮಾಡಿಕೊಳ್ಳಿʼ ಎಂದು ಹಸೀನಾ ಅವರು ಬಹಿರಂಗ ಸವಾಲು ಹಾಕಿರುವುದು ಆಡಳಿತಾರೂಢ ಬಿಎನ್ಪಿ ಮತ್ತು ಜಮಾತೇ-ಎ-ಇಸ್ಲಾಮಿ ನೇತೃತ್ವದ ವಿರೋಧ ಪಕ್ಷಗಳ ನಿದ್ದೆಗೆಡಿಸುವಂತೆ ಮಾಡಿದೆ. ಹಸೀನಾ ಅವರ ವಾಪಸಾತಿಗೆ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಅವರು ಮರಳಿ ಬರುತ್ತೇನೆ ಎಂದಿರುವುದು ಅವಾಮಿ ಲೀಗ್ ಪಕ್ಷದ ಮೇಲಿನ ನಿಷೇಧವನ್ನು ತಕ್ಷಣ ಹಿಂದೆಗೆದುಕೊಳ್ಳಲು ಭಾರೀ ಒತ್ತಾಯಕ್ಕೆ ಕಾರಣವಾಗುವ ಮತ್ತು ಚದುರಿರುವ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಲು ಸಹಾಯ ಮಾಡಲಿದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಆಕೆ ನಿಜಕ್ಕೂ ದೇಶಕ್ಕೆ ಹಿಂದಿರುಗಿದರೆ ಬಿಎನ್ಪಿ ಸರ್ಕಾರವು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಒಂದು ವೇಳೆ ಹಸೀನಾ ಅವರಿಗೆ ವಿಧಿಸಿದ ಶಿಕ್ಷೆಯನ್ನು ಜಾರಿಗೊಳಿಸಲು ಅವರನ್ನು ಬಂಧಿಸಿ ಗಲ್ಲಿಗೇರಿಸಿದ್ದೇ ಆದಲ್ಲಿ ಅದರಿಂದ ಉಗ್ರ ಪ್ರತಿಭಟನೆ ಭುಗಿಲೇಳಬಹುದು ಮತ್ತು ಅದನ್ನು ನಿಯಂತ್ರಿಸಲು ಕಷ್ಟವೇ ಆಗಬಹುದು. ಹಾಗಂತ ಅವರನ್ನು ಬಿಡುಗಡೆ ಮಾಡಿದರೆ ಬಿಎನ್ಪಿಯು ಇದುವರೆಗೆ ತನ್ನೊಂದಿಗೆ ಸ್ನೇಹ ಸಂಬಂಧ ಹೊಂದಿರುವ ಇಸ್ಲಾಮಿಸ್ಟ್ ವಿರೋಧ ಪಕ್ಷದ ಕೋಪಕ್ಕೆ ಗುರಿಯಾಬೇಕಾಗುತ್ತದೆ. ಹಸೀನಾ ಅವರನ್ನು ಮರಣದಂಡನೆಗೆ ಗುರಿಪಡಿಸಿದರೆ ದೇಶವು ಬಹುಶಃ ಇನ್ನೊಂದು ಅಂತರ್ಯುದ್ಧಕ್ಕೆ ಸಾಕ್ಷಿಯಾಗಬೇಕಾಗುತ್ತದೆ.
ಇತ್ತೀಚೆಗೆ ದೇಶದಲ್ಲಿ ಅವಾಮಿ ಲೀಗ್ನ ಸಂಸ್ಥಾಪನಾ ದಿನವನ್ನು ಆಚರಿಸಲಾಗಿತ್ತು. ಆ ಸಂದರ್ಭದಲ್ಲಿ ಲೀಗ್ ಬೆಂಬಲಿಗರಿಂದ ದೊಡ್ಡ ಪ್ರಮಾಣದ ಅಶಾಂತಿ ತಲೆದೋರಬಹುದು ಎಂಬ ಆತಂಕದಿಂದ ಸರ್ಕಾರ ಹಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜಿಸಿತ್ತು. ತಾಯ್ನಾಡಿಗೆ ಮರಳುತ್ತೇನೆ ಎಂಬ ಶೇಖ್ ಹಸೀನಾ ಅವರ ಮಾತು ಸಂಕಷ್ಟದಲ್ಲಿರುವ ಅವಾಮಿ ಲೀಗ್ನ ಸಾಮಾನ್ಯ ಕಾರ್ಯಕರ್ತರಲ್ಲಿ ಭರವಸೆಯ ಆಶಾಕಿರಣವನ್ನು ಮೂಡಿಸಿದೆ. ಇದರಿಂದಾಗಿ ಅವರ ಮೆರವಣಿಗೆ ಮತ್ತು ಪಕ್ಷದ ಕಾರ್ಯಕ್ರಮಗಳಿಗೆ ಹೆಚ್ಚು ಚೈತನ್ಯ ತುಂಬಿದಂತಾಗಿದೆ. ಅವು ಹೆಚ್ಚು ಆಕ್ರಮಣಕಾರಿ ಸ್ವರೂಪ ಪಡೆದುಕೊಂಡಿದೆ. 2024ರಲ್ಲಿ ನಡೆದ, ಮಾಜಿ ಪ್ರಧಾನಿ ಪದಚ್ಯುತಿಗೆ ಕಾರಣವಾದ ಚಳವಳಿಯ ನಾಯಕರು ಸ್ಥಾಪಿಸಿದ ʼನ್ಯಾಷನಲ್ ಸಿಟಿಜನ್ ಪಾರ್ಟಿʼಯ ಮೆರವಣಿಗೆಗಳ ಮೇಲೆ ನಡೆದ ದಾಳಿಯಲ್ಲಿಯೂ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರ ಪಾತ್ರವಿರಬಹುದು ಎಂದು ಶಂಕಿಸಲಾಗಿದೆ.
ಇತ್ತೀಚೆಗೆ ಬಿಎನ್ಪಿ ಸರ್ಕಾರವು ಧೀರೋದ್ಧಾತ್ತ ಮುಖವಾಡ ಧರಿಸಲು ಸಾಕಷ್ಟು ಪ್ರಯತ್ನ ನಡೆಸಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಅವರು, “ಅವಾಮಿ ಲೀಗ್ ಪಕ್ಷವನ್ನು ದೆಹಲಿಯಲ್ಲಿ ಯಶಸ್ವಿಯಾಗಿ ಹೂತುಹಾಕಲಾಗಿದೆ,” ಎಂದು ಗುಡುಗಿದ್ದರು.
ʼಆಕೆ ಜೈಲಿನಲ್ಲಿಯೇ ಸಾಯಲಿ ಬಿಡಿʼ
2024ರ ಆಡಳಿತ ಬದಲಾವಣೆಯ ಕಾರ್ಯಾಚರಣೆಯಲ್ಲಿ ರಹಸ್ಯವಾಗಿ ಶಾಮೀಲಾಗಿದ್ದಾರೆ ಎಂದು ನಂಬಲಾಗಿರುವ ಅಮೆರಿಕದ ರಾಜತಾಂತ್ರಿಕರು ಹಸೀನಾ ಅವರು ಮರಳಿ ಬರುವ ಯೋಜನೆಯ ವಿರುದ್ಧ ಬಹಿರಂಗವಾಗಿಯೇ ಧ್ವನಿ ಎತ್ತಿದ್ದಾರೆ. ಒಬ್ಬರಂತೂ “ಆಕೆ ಒಂದೇ ಜೈಲಿನಲ್ಲಿಯೇ ಸಾಯುತ್ತಾಳೆ ಅಥವಾ ಭಾರತದಲ್ಲಿಯೇ ಆಕೆ ಕೊನೆಗೊಳ್ಳಬೇಕು,” ಎಂದು ಹೇಳಿರುವುದನ್ನು ಗಮನಿಸಿದರೆ ಇದರ ಪರಿಣಾಮ ಎಷ್ಟಿರಬಹುದು ಎಂಬುದನ್ನು ಯೋಚಿಸಬಹುದು.
ಜಾಗತಿಕ ಮಾಧ್ಯಮದಲ್ಲಿ ಬಿತ್ತರಗೊಳ್ಳುವ ಶೇಖ್ ಹಸೀನಾ ಅವರ ಸಂದರ್ಶನವನ್ನು ಪ್ರಕಟಿಸಿದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ರಹೆಮಾನ್ ಅವರ ಮಾಧ್ಯಮ ಸಲಹೆಗಾರರಾದ ಜಾಹೀದ್ ಉರ್ ರಹೆಮಾನ್ ಅವರು ಬಾಂಗ್ಲಾದ ಮಾಧ್ಯಮ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಪತ್ರಿಕಾ ಕಾರ್ಯದರ್ಶಿ ಟಿವಿ ನಿರೂಪಕರಿಗೂ ಕರೆ ಮಾಡಿ ಈಗಿನ ಸರ್ಕಾರದ ವಿರುದ್ಧದ ಸಣ್ಣ ಟೀಕೆ ಮಾಡುವ ಕಾರ್ಯಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ತಾಕೀತು ಕೂಡ ಮಾಡಿದ್ದಾರೆ. ʼಹಸೀನಾ ಅವರ ಕಥೆ ಮುಗಿದೇ ಹೋಗಿದೆ, ಅವರಿನ್ನೂ ಇತಿಹಾಸ ಎಂದು ಭಾವಿಸಿದ್ದೇ ಆಗಿದ್ದರೆ ಇಷ್ಟೇಕೆ ಭಯ?ʼ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಸಂಪಾದಕರೊಬ್ಬರು ಪ್ರಶ್ನಿಸುತ್ತಾರೆ.
ಜೈಲಿನಲ್ಲಿ ಪತ್ರಕರ್ತರು
ಬಾಂಗ್ಲಾದೇಶದ ಮಾಧ್ಯಮಗಳ ಮೇಲೆ ಈಗಾಗಲೇ ಕಟ್ಟುನಿಟ್ಟಿನ ಸೆನ್ಸಾರ್ಶಿಪ್ ಹೇರಲಾಗಿದೆ. ಯೂನುಸ್ ಸರ್ಕಾರವು ತೀರಾ ಕ್ಷುಲ್ಲಕ ಆರೋಪಗಳನ್ನು ಹೊರಿಸಿ ಜೈಲಿಗಟ್ಟಿದ ಡನಜನ್ಗಟ್ಟಳೆ ಪತ್ರಕರ್ತರು ಮತ್ತು ಸಂಪಾದಕರು ಇಂದಿಗೂ ಜೈಲಿನಲ್ಲಿಯೇ ಇದ್ದಾರೆ. ಯಾಕೆಂದರೆ ಅವರನ್ನು ಅವಾಮಿ ಲೀಗ್ ಪಕ್ಷಪಾತಿ ಎಂದು ಪರಿಗಣಿಸಲಾಗಿದೆ.
“ನೀವು ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆಯದೇ ಇದ್ದರೆ, ಯಾವುದೇ ಸುದ್ದಿಗಳನ್ನು ಪ್ರಕಟ ಅಥವಾ ಪ್ರಸಾರ ಮಾಡದೇ ಇರುವುದು ಉತ್ತಮ” ಎಂಬ ಸ್ಪಷ್ಟ ಸಂದೇಶವು ಬಾಂಗ್ಲಾದೇಶದಲ್ಲಿ ಚಾಲ್ತಿಯಲ್ಲಿದೆ.
ಆದರೆ ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆಯ ಇಂದಿನ ಕಾಲಮಾನದಲ್ಲಿ ಸರ್ಕಾರದ ಸೆನ್ಸಾರ್ ಕ್ರಮ ಅಷ್ಟೇನು ಪರಿಣಾಮಕಾರಿಯಾಗಿರಲು ಸಾಧ್ಯವೇ ಇಲ್ಲ. ಅವಾಮಿ ಲೀಗ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್, ಎಕ್ಸ್ ಹ್ಯಾಂಡಲ್ಗಳು ಮತ್ತು ಹಾಗೂ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳು ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿವೆ. ಅನೇಕ ಬಾರಿ ಇವುಗಳು ಸರ್ಕಾರದ ವಿರುದ್ಧ ಇರುವ ಜಾಗತಿಕ ಮಾಧ್ಯಮದ ವರದಿಗಳನ್ನು ಹಂಚಿಕೊಳ್ಳುವ ಮೂಲಕ ಸರ್ಕಾರದ ಮುಜುಗರವನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂಬುದು ಗಮನಾರ್ಹ.
ತಣ್ಣಗಾದ ಭಾರತ ವಿರೋಧಿ ಧ್ವನಿ
ಗಡಿ ಭದ್ರತಾ ಪಡೆಯಿಂದ ಅಕ್ರಮ ವಲಸಿಗರನ್ನು ಹಿಮ್ಮೆಟ್ಟಿಸುವಂತಹ ಹತ್ತಾರು ವಿಷಯಗಳ ಮೇಲೆ ಭಾರತದ ವಿರುದ್ಧ ಉನ್ಮಾದವನ್ನು ಸೃಷ್ಟಿಸುವ ಮೂಲಕ ಸರ್ಕಾರದ ಮತ್ತು ಇಸ್ಲಾಮಿಸ್ಟ್ ವಿರೋಧ ಪಕ್ಷಗಳು ಅವಾಮಿ ಲೀಗ್ನ ಪ್ರಚಾರಕ್ಕೆ ಸೆಡ್ಡು ಹೊಡೆಯಲು ಪ್ರಯತ್ನ ನಡೆಸಿದವು. ಆದರೆ ಭಾರತವು ಬಾಂಗ್ಲಾದೇಶದಲ್ಲಿ ತನ್ನ ಪ್ರವಾಸಿ ವೀಸಾ ಸೇವೆಗಳನ್ನು ಮತ್ತೆ ಪ್ರಾರಂಭಿಸಿದಾಗ ಮತ್ತು ಲಕ್ಷಾಂತರ ಜನರು ಅರ್ಜಿಗಳನ್ನು ಸಲ್ಲಿಸಲು ಸಾಲಾಗಿ ನಿಂತಾಗ ಆ ಪ್ರಯತ್ನವು ಬಹುಮಟ್ಟಿಗೆ ವಿಫಲವಾಯಿತು.
ಅವಾಮಿ ಲೀಗ್ ಇಂದಿಗೂ ದೇಶದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಉಳಿದಿದೆ ಮತ್ತು ಪ್ರಬಲವಾದ ಬೆಂಬಲಿಗರ ನೆಲೆಯನ್ನು ಹೊಂದಿದೆ; ಇದೇ ಕಾರಣಕ್ಕಾಗಿ ಬಿಎನ್ಪಿ ಮತ್ತು ವಿರೋಧ ಪಕ್ಷದ ಇಸ್ಲಾಮಿಸ್ಟ್ ಒಕ್ಕೂಟ ಎರಡೂ ಈ ಪಕ್ಷದ ಮೇಲಿನ ನಿಷೇಧವನ್ನು ಹಿಂಪಡೆಯಲು ಸಿದ್ಧವಿಲ್ಲ.
"ಗೃಹ ಸಚಿವರು ಹೇಳಿಕೊಳ್ಳುವಂತೆ ಅವಾಮಿ ಲೀಗ್ ಮುಗಿದುಹೋಗಿದ್ದರೆ, ಸರ್ಕಾರವು ನಿಷೇಧವನ್ನು ಹಿಂಪಡೆದು ಮುಕ್ತ ಚುನಾವಣೆಯಲ್ಲಿ ನಮ್ಮನ್ನು ಎದುರಿಸಲಿ. ಕಳೆದ ಎರಡು ವರ್ಷಗಳಿಂದ ಇಷ್ಟೆಲ್ಲಾ ದಬ್ಬಾಳಿಕೆ ನಡೆಸಿದ ಹೊರತಾಗಿಯೂ ಅವರು ಸೋಲುತ್ತಾರೆ ಎಂಬುದು ಅವರಿಗೆ ತಿಳಿದಿದೆ" ಎಂದು ಲೀಗ್ ಹಿರಿಯ ನಾಯಕ ಮತ್ತು ಮಾಜಿ ಸಚಿವ ಜಹಾಂಗೀರ್ ಕಬೀರ್ ನಾನಕ್ ಹೇಳಿದ್ದಾರೆ.
ಬೀದಿ ಹೋರಾಟದ ಆತಂಕ
ಒಂದು ವೇಳೆ ನಿಷೇಧವನ್ನು ಹಿಂಪಡೆಯದಿದ್ದರೆ, ಲೀಗ್ಗೆ ಇರುವ ಏಕೈಕ ಆಯ್ಕೆಯೆಂದರೆ ಬೀದಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದು. ಆದರೆ ಇದು ಹಸೀನಾ ಬಾಂಗ್ಲಾದೇಶಕ್ಕೆ ಮರಳಿದರೆ ಮಾತ್ರ ಸಾಧ್ಯ. ಹೀಗಾಗಿಯೇ ಆಕೆ ಮರಳಿ ಬರುವುದಾಗಿ ನೀಡಿರುವ ಭರವಸೆಯು ಸರ್ಕಾರ ಮತ್ತು ವಿರೋಧ ಪಕ್ಷಗಳ ತಳಮಳಕ್ಕೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ, ಈ ವರ್ಷದೊಳಗೇ ಹಿಂತಿರುಗುವುದಾಗಿ ಅವರು ಈಗ ನಿರ್ದಿಷ್ಟ ಸಮಯವನ್ನು ಘೋಷಿಸಿರುವುದು ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಬೀದಿ ಹೋರಾಟಗಳ ವಿಷಯಕ್ಕೆ ಬಂದರೆ ಅವಾಮಿ ಲೀಗ್ ಯಾವಾಗಲೂ ಅತ್ಯಂತ ಪ್ರಬಲವಾದ ಶಕ್ತಿಯಾಗಿದೆ. 2024ರಲ್ಲಿ, ಅದರ ನಾಯಕರು ವಿದ್ಯಾರ್ಥಿ-ಯುವಜನರ ಆಂದೋಲನವನ್ನು ನಿಭಾಯಿಸಲು ಸೇನೆಯನ್ನು ಅವಲಂಬಿಸುವ ತಪ್ಪು ಮಾಡಿದರು ಮತ್ತು ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಬೀದಿಗಿಳಿಸಲಿಲ್ಲ. ಸೇನೆಯು ಸ್ವಲ್ಪ ಸಮಯದ ನಂತರ ಹಿಂದೆ ಸರಿಯಿತು ಮತ್ತು ಸರ್ಕಾರವನ್ನು ಅಸಹಾಯಕ ಸ್ಥಿತಿಗೆ ತಳ್ಳಿತು.
ಹಸೀನಾ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಲು ಯೂನುಸ್ ಅವರು ಹೇಳಿಕೊಂಡ ಹಾಗೆ "ಸೂಕ್ಷ್ಮವಾದ ವ್ಯವಸ್ಥಿತ ಸಂಚಿನ" ಭಾಗವಾಗಿ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ಕೂಡ ಇದ್ದರು ಎಂದು ವರದಿಗಳು ಸೂಚಿಸಿವೆ. ಈಗ, ಹಸೀನಾ ಅವರು ತಾಯ್ನಾಡಿಗೆ ಮರಳುವ ಭರವಸೆಯೊಂದಿಗೆ ಅವಾಮಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯವನ್ನು ತುಂಬುತ್ತಿರುವುದರಿಂದ, ಸರ್ಕಾರವು ಆತಂಕಕ್ಕೆ ಒಳಗಾಗಲು ಎಲ್ಲಾ ಕಾರಣಗಳೂ ಇವೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


