
ನಕಲಿ ಇನ್ವಾಯ್ಸ್ಗಳು ಮತ್ತು ತೆರಿಗೆ ವಂಚನೆಯಂತಹ ಪ್ರಕರಣಗಳು ವ್ಯಾಪಕವಾಗಿ ಮುಂದುವರಿದಿದೆ ಎಂಬುದಕ್ಕೆ ಸಾಕ್ಷ್ಯಗಳಿದ್ದರೂ ಜಿಎಸ್ಟಿ ಮಂಡಳಿ ಜಾರಿ ಕ್ರಮಗಳನ್ನು ಮತ್ತಷ್ಟು ಸರಳಗೊಳಿಸಿದೆ.
ಹಣಕಾಸು ಸಂಬಂಧಿ ಶಾಸನವು ಬಂಧಿಸುವ ಅಧಿಕಾರವನ್ನು ಹೊಂದಿರಬೇಕೇ? ಅಥವಾ ಇನ್ನೂ ಒಂದು ರೀತಿಯಲ್ಲಿ ಹೇಳುವುದಾದರೆ ತೆರಿಗೆ ಸಂಗ್ರಹ ಮಾಡುವುದೇ ಕೆಲಸವಾಗಿರುವ ಅಧಿಕಾರಿಗಳು ತೆರಿಗೆ ವಂಚನೆ ಮಾಡಿದರವನ್ನು ಬಂಧಿಸುವ ಅಧಿಕಾರವನ್ನು ಕೂಡ ಹೊಂದಿರುತ್ತಾರೆ ಎಂಬುದನ್ನು ಈ ಶಾಸನವು ಸಮರ್ಥಿಸುತ್ತದೆಯೇ? ಬಾಕಿ ಇರುವ ತೆರಿಗೆ ಸಂಗ್ರಹವನ್ನು ಖಚಿತಪಡಿಸಿಕೊಳ್ಳುವ ಅಧಿಕಾರ ಕೂಡ ಅಧಿಕಾರಿಗಳಿಗೆ ಇರಬೇಕೇ?
ಕಾನೂನಿಗೆ ಅಂತಿಮ ರೂಪ ನೀಡುತ್ತಿರುವ ಹೊತ್ತಿನಲ್ಲಿ ಜಿಎಸ್ಟಿ ಮಂಡಳಿಯು ತನ್ನ ಆರು ಮತ್ತು ಏಳನೇ ಸಭೆಗಳಲ್ಲಿ ನಡೆಸಿದ ಚರ್ಚೆ ಇದಾಗಿತ್ತು.
ತೆರಿಗೆ ವಂಚನೆ ಮಾಡಿದಾಗ ಅದು ಆದಾಯ ತೆರಿಗೆ ವ್ಯಾಪ್ತಿಯ ಆಚೆಗೆ ಹಣವನ್ನು ಸೃಷ್ಟಿಸುತ್ತದೆ ಎಂಬ ಸಂಗತಿಯನ್ನು ನಾವು ಮೆಚ್ಚಲೇಬೇಕು. ಈ ಹಣವು ಲೆಕ್ಕಕ್ಕೆ ಸಿಗದ, ಅಪರಾಧ ಮತ್ತು ಇತರ ದುಷ್ಟ ಚಟುವಟಿಕೆಗಳಿಗೆ ಧನ ಸಹಾಯ ಮಾಡಲು ಬಳಕೆಯಾಗುವ ʼಕಾಳಧನʼವಾಗಿದೆ. ಮೇಲಾಗಿ ವಂಚನೆಗೆ ಕಾರಣವಾಗುವ ಪ್ರತಿಯೊಂದು ಚಟುವಟಿಕೆ ಕೂಡ ಸರಕುಗಳು ಅಥವಾ ಸೇವೆಗಳು ತೆರಿಗೆಗೆ ಒಳಪಡದ ಕಾರಣ ಅಗ್ಗವಾಗಿರಲೇಬೇಕು ಎಂದರ್ಥ.
ಆದಾಗ್ಯೂ ಇದು ನಿಜವಾದ ತಯಾಕ, ಸರಕು ಮತ್ತು ಸೇವೆಗಳ ಪೂರೈಕೆದಾರರ ಮೇಲೆ ಪರಿಣಾಮ ಬೀರುವುದಂತೂ ಸತ್ಯ. ಅವರು ಅನ್ಯಾಯದ ಸ್ಪರ್ಧೆಯನ್ನು ಎದುರಿಸಲು ಅಸಮರ್ಥರಾಗಿದ್ದಾರೆ. ಹಾಗಾಗಿ ಅಂತಹ ನೈಜ ಪೂರೈಕೆದಾರರು ಬಹಳ ಬೇಗ ಅಥವಾ ನಂತರ ಅಂಗಡಿಗಳನ್ನು ಮುಚ್ಚಬೇಕಾದ ಪ್ರಮೇಯ ಉಂಟಾಗುತ್ತದೆ. ಅಂದರೆ ಇದು ಉದ್ಯೋಗವನ್ನು ಸೃಷ್ಟಿಸುವ ಚಟುವಟಿಕೆಯ ನಷ್ಟ. ಆದ್ದರಿಂದ ಪರೋಕ್ಷ ತೆರಿಗೆ ವಂಚನೆಯು ಆದಾಯ ತೆರಿಗೆ ಒಳಗೊಂಡಂತೆ ಮುಂದಿನ ಎಲ್ಲ ಉಲ್ಲಂಘನೆಗಳಿಗೆ ಮೂಲ ಎಂಬುದು ನಿಸ್ಸಂದೇಹ. ಇದನ್ನು ನಿಶ್ಚಿತವಾಗಿಯೂ ವಿಭಿನ್ನ ನೆಲೆಯಲ್ಲಿ ನಿರ್ವಹಿಸಬೇಕಾದ ಅಗತ್ಯವಿದೆ. ಇದನ್ನು ಮೊದಲ ಹಂತದಲ್ಲಿಯೇ ತಡೆಯಲು ಪ್ರಯತ್ನಿಸಬೇಕು.
ಬಂಧನದ ಮೂರು ಸಂದರ್ಭಗಳು
ಅಂತಹ ನಿಬಂಧನೆಗಳು ಎಷ್ಟರ ಮಟ್ಟಿಗೆ ಅಗತ್ಯ ಇವೆ ಎಂಬುದನ್ನು ಆ ಸಂದರ್ಭದಲ್ಲಿ ನಡೆದ ಮಂಡಳಿಯ ಸಭೆಗಳಲ್ಲಿ ಮನವರಿಕೆ ಮಾಡಿಕೊಳ್ಳಲಾಯಿತು. ಆದರೆ ಸಂಭಾವ್ಯ ದುರುಪಯೋಗದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದವು. ಆದ್ದರಿಂದ ಕಾನೂನಿನಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಯಿತು. ಬಂಧನದ ಅಧಿಕಾರವನ್ನು ಕೇವಲ ಮೂರು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಚಲಾಯಿಸಬೇಕಾಗಿತ್ತು; ನಕಲಿ ಇನ್ವಾಯ್ಸ್ಗಳ ಸೃಷ್ಟಿಯ ಮೂಲಕ ಪೋರ್ಜರಿ ಮಾಡುವುದು, ತೆರಿಗೆಯನ್ನು ಸಂಗ್ರಹಿಸಿ ಸರ್ಕಾರಿ ಖಜಾನೆಗೆ ಜಮಾ ಮಾಡದೇ ಇರುವ ವಂಚನೆ ಹಾಗೂ ಸುಂಕ ಪಾವತಿ ಮಾಡದೇ ಸರಕುಗಳನ್ನು ಪೂರೈಸುವುದು.
ಕಮಿಷನರ್ ಅಥವಾ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಮಟ್ಟದಲ್ಲಿ ಸೂಕ್ತ ಅನುಮೋದನೆ ಪಡೆದ ಬಳಿಕವೇ ಈ ಅಧಿಕಾರವನ್ನು ಚಲಾಯಿಸಬೇಕಾಗಿತ್ತು. ಜೊತೆಗೆ ಆರ್ಥಿಕ ಮಿತಿಯನ್ನು ಕೂಡ ನಿಗದಿ ಮಾಡಲಾಗಿತ್ತು. ಹೀಗಾಗಿ ಸಾಕಷ್ಟು ಚರ್ಚೆಯ ಬಳಿಕ ಈ ನಿಬಂಧನೆಗಳು ಜಿಎಸ್ಟಿ ಕಾನೂನಿನ ಭಾಗವಾಗಿದ್ದವು.
ತನಿಖೆಯ ಹಂತದಲ್ಲಿ ಬಂಧನ ಎಂಬುದು ಶಿಕ್ಷೆ ಅಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸಾಕ್ಷ್ಯಗಳನ್ನು ತಿರುಚಬಹುದು ಎಂಬ ಆತಂಕ ಅಧಿಕಾರಿಯ ಮನಸ್ಸಿನಲ್ಲಿ ಇರುವುದರಿಂದ ತನಿಖೆಯನ್ನು ಸುಲಭಗೊಳಿಸುವ ದೃಷ್ಟಿಯಿಂದ ಇದರ ಅಗತ್ಯವಿರುತ್ತದೆ. ಒಂದು ವೇಳೆ ಬಂಧನ ಕೈಗೊಂಡರೂ ಅಧಿಕಾರಿಗಳು ಸಿಆರ್ಪಿಸಿ ಮತ್ತು ಬಿಎನ್ಎಸ್ (ನಾಗರಿಕ ಮತ್ತು ದಂಡ ಸಂಹಿತೆ) ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದರರ್ಥ ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ಅವರಿಗೆ ಜಾಮೀನು ನೀಡುವ ಅಥವಾ ರಿಮಾಂಡ್ ಕೋರಿಕೆಯನ್ನು ಒಪ್ಪಿಕೊಳ್ಳುವ ಅಧಿಕಾರ ಇರುತ್ತದೆ ಮತ್ತು ಇಲ್ಲಿ ಜಾಮೀನು ಪಡೆಯುವುದು ಹಕ್ಕಿನ ವಿಷಯವಾಗಿರುತ್ತದೆ. ಇದು ಪಿಎಂಎಲ್ಎ ಅಥವಾ ಯುಎಪಿಎ ಮುಂತಾದ ಇತರ ಕಾನೂನುಗಳಿಗಿಂತ ಭಿನ್ನವಾಗಿದೆ.
ಹಾಗಾದರೆ ಈ ಅಧಿಕಾರಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವ ಅಗತ್ಯವಾದರೂ ಯಾಕಿತ್ತು? ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಥವಾ ಹೆಚ್ಚಿನ ಮಿತಿಗಳನ್ನು ರೂಪಿಸುವ ಬದಲು ಅದನ್ನು ಪೂರ್ತಿಯಾಗಿ ಹಿಂದಕ್ಕೆ ಪಡೆಯಲು ಕಾರಣಗಳೇನು? ಅಂದರೆ ವಂಚನೆಗಳು ನಿಂತು ಹೋದವೇ? ತೆರಿಗೆದಾರರು ಹೆಚ್ಚಿನ ಅನುಸರಣೆ ಮಾಡುತ್ತಿದ್ದಾರೆಯೇ? ಜಿಎಸ್ಟಿ ಮಂಡಳಿ ಈ ನಿಬಂಧನೆಯನ್ನೇ ರದ್ದು ಮಾಡುವಷ್ಟು ತೀವ್ರತರದ ಹೆಜ್ಜೆಯನ್ನು ತೆಗೆದುಕೊಳ್ಳುವಂತಹ ದೊಡ್ಡ ಪ್ರಮಾಣದ ದುರುಪಯೋಗ ನಡೆದಿದೆಯೇ? ನಮ್ಮ ಬಳಿ ಸಭೆಯ ನಡಾವಳಿಗಳಿಲ್ಲ, ಆದ್ದರಿಂದ ಈ ಹಂತದಲ್ಲಿ ನಾವು ಊಹಿಸಲು ಮಾತ್ರ ಸಾಧ್ಯ. ಇಲ್ಲಿ ನಾವು ಪ್ರಸ್ತಾಪ ಮಾಡಿದ ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡೋಣ.
ವಂಚನೆಗಳೆಲ್ಲ ನಿಂತು ಹೋದವೇ?
ವಂಚನೆ ಪ್ರಕರಣಗಳೆಲ್ಲ ಏಕಾಏಕಿ ನಿಂತುಹೋದವು ಎಂದು ಯಾರೂ ವಾದಿಸುತ್ತಿಲ್ಲ ಎಂದು ನಾನಾದರೂ ಭಾವಿಸುತ್ತೇನೆ. ಲಭ್ಯವಿರುವ ಎಲ್ಲ ವರದಿಗಳ ಪ್ರಕಾರ ಅವು ವ್ಯವಸ್ಥೆಯನ್ನು ಬಾಧಿಸುವುದು ಮುಂದುವರಿದಿದೆ. ಜಿಎಸ್ಟಿಗೆ ಸಂಬಂಧಿಸಿ ಲೋಕಸಭೆಯಲ್ಲಿ ಪ್ರಶ್ನೆಗೆ ಲಭ್ಯವಾದ ಉತ್ತರದ ಪ್ರಕಾರ 2020-21 ರಿಂದ 2024-25ರ ವರೆಗಿನ ಐದು ವರ್ಷಗಳ ಅವಧಿಯಲ್ಲಿ 7.08 ಲಕ್ಷ ಕೋಟಿ ರೂ.ಗಳಷ್ಟು ವಂಚನೆ ಪತ್ತೆಯಾಗಿದೆ. ಒಟ್ಟು 30056 ಪ್ರಕರಣಗಳಲ್ಲಿ ಅರ್ಧಕ್ಕೂ ಅಧಿಕ ಪ್ರಕರಣಗಳು ಕಾನೂನುಬಾಹಿರ ಪ್ರಯೋಜನ ಪಡೆದುಕೊಳ್ಳಲು ಬಳಸಲಾದ ನಕಲಿ ಇನ್ವಾಯ್ಸ್ಗಳಿಗೆ ಸಂಬಂಧಿಸಿದ್ದಾಗಿವೆ. ನಾನಾ ಜಾರಿ ಸಂಸ್ಥೆಗಳು ಪತ್ತೆ ಮಾಡಿರುವ ವಂಚನೆ ಪ್ರಕರಣಗಳು ಇಂತಹ ವಂಚನೆಗಳು ಈಗಲೂ ಮುಂದುವರಿದೇ ಇವೆ ಎಂಬುದಕ್ಕೆ ಸಾಕ್ಷಿ.
ನಾವು ಮನಸ್ಸಿಲ್ಲದ ಮನಸ್ಸಿನಿಂದ ಅಥವಾ ಅನಿವಾರ್ಯ ಎಂಬಂತೆ ತೆರಿಗೆಯನ್ನು ಪಾವತಿ ಮಾಡುತ್ತೇವೆ. ತೆರಿಗೆಯನ್ನು ತಪ್ಪಿಸುವುದು ಮತ್ತು ತೆರಿಗೆ ವಂಚನೆ ನಡುವಿನ ಗೆರೆ ತುಂಬಾ ತೆಳುವಾಗಿದೆ. ಬಾಕಿ ಇರುವ ಹಣ ಮತ್ತು ವಾಸ್ತವವಾಗಿ ಸಂಗ್ರಹಿಸಿದ ಹಣದ ನಡುವಿನ ತೆರಿಗೆ ಅಂತರವು ಕನಿಷ್ಠ 40ರಿಂದ 50 ಪ್ರತಿಶತದಷ್ಟು ಇದೆ ಎಂದು ಅಂದಾಜು ಮಾಡಲಾಗಿದೆ. ತಂಬಾಕು, ಎಫ್ಎಂಸಿಜಿ, ಔಷಧಗಳು, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ವಂಚನೆ ನಡೆಯುತ್ತಿದೆ ಎಂದು ಎಫ್ಐಸಿಸಿಐ ಅಧ್ಯಯನಗಳು ಸೂಚಿಸುತ್ತವೆ. ಇದು ರಾಜಸ್ವ ನಷ್ಟ, ಉದ್ಯೋಗ ನಷ್ಟ ಮತ್ತು ಕಾನೂನುಬದ್ಧ ಉದ್ಯಮಗಳು ತೀವ್ರವಾಗಿ ಬಾಧೆಗೆ ಒಳಗಾಗಲು ಕಾರಣವಾಗುತ್ತದೆ.
ಎನ್ಐಪಿಎಫ್ಪಿ (NIPFP) 2023ರ ದಾಖಲೆ ಪ್ರಕಾರ, ಸಿ-ಎಫಿಷಿಯನ್ಸಿ (C-Efficiency ಅಂದರೆ ಸಂಗ್ರಹಣೆ ದಕ್ಷತೆ - ವ್ಯಾಟ್ ರಾಜಸ್ವ ದಕ್ಷತೆಯ ಅಳತೆಗೋಲು, ಅಥವಾ ಸಂಗ್ರಹಿಸಬೇಕಾದ್ದು ಮತ್ತು ವಾಸ್ತವವಾಗಿ ಸಂಗ್ರಹಿಸಲ್ಪಡದೆ ಇರುವುದರ ನಡುವಿನ ಅಂತರ) ಜಿಎಸ್ಟಿಗೆ 0.54 ಅಥವಾ 54 ಪ್ರತಿಶತ ಎಂದು ಅಂದಾಜಿಸಲಾಗಿದೆ. ಇದರರ್ಥ ಅನುಸರಣೆಯ ಅಂತರವಿದೆ, ಇದು ನಿಜಕ್ಕೂ ಸಂಗ್ರಹಿಸ ಮಾಡಬೇಕಾಗಿರುವುದಕ್ಕಿಂತ ಕಡಿಮೆ ಸಂಗ್ರಹಣೆಗೆ ಕಾರಣವಾಗುತ್ತದೆ.
ನೀತಿಯ ಅಂತರವನ್ನು ಬಹುಪಾಲು ಪರಿಹರಿಸಲಾಗಿದೆ. ಈಗ ಸುಧಾರಿತ ಅನುಸರಣೆಯು ಉಳಿದಿರುವ ಅಂತರವನ್ನು ತುಂಬಬೇಕಾದ ಅಗತ್ಯವಿದೆ.
ಜನಸಂಖ್ಯೆಯ ಕೇವಲ 6 ಪ್ರತಿಶತದಷ್ಟು ಜನರು ಮಾತ್ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಾರೆ ಎಂಬ ಅಂಶದಿಂದಲೂ ಇದು ದೃಢಪಡುತ್ತದೆ. ಆದಾಗ್ಯೂ, ರಿಟರ್ನ್ಸ್ ಸಲ್ಲಿಸುವ 7.5 ಕೋಟಿ ಜನರಲ್ಲಿ, 63 ಪ್ರತಿಶತದಷ್ಟು (4.7 ಕೋಟಿ) ಜನರು ಶೂನ್ಯ ತೆರಿಗೆ ಜವಾಬ್ದಾರಿಯನ್ನು ಕ್ಲೈಮ್ ಮಾಡಿದ್ದಾರೆ. ಎಲ್ಲಾ ಮುಂದಿನ ಅಪರಾಧಗಳಿಗೆ ಮೂಲ ಕಾರಣವೆಂದರೆ ವಂಚನೆಯು ಸೃಷ್ಟಿಸುವ ಲೆಕ್ಕಕ್ಕೆ ಸಿಗದ ಕಪ್ಪು ಹಣ.
ದುರುಪಯೋಗಕ್ಕೆ ಒಳಗಾಯಿತೇ ನಿಯಮ?
ಆದ್ದರಿಂದ, ಮುಂದಿನ ಪ್ರಶ್ನೆಯೆಂದರೆ: ಈ ಬಂಧನದ ಅಧಿಕಾರಗಳು ಎಷ್ಟು ವ್ಯಾಪಕವಾಗಿ ದುರುಪಯೋಗಕ್ಕೆ ಒಳಗಾಗಿವೆ ಎಂದರೆ, ಈ ಅಧಿಕಾರಗಳನ್ನು ರದ್ದುಗೊಳಿಸುವುದೇ ಉತ್ತಮ ಎಂದು ಮಂಡಳಿಯು ಭಾವಿಸಿತೇ? ಇದರ ಬದಲಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವ ಕುರಿತು ಯಾವುದೇ ಚರ್ಚೆ ನಡೆದಿದೆಯೇ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ಬಂಧನಾಧಿಕಾರವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಕ್ರಮವನ್ನು ಹಲವಾರು ರಾಜ್ಯಗಳು ವಿರೋಧಿಸಿದ್ದವು ಎಂದು ಸೂಚಿಸುವ ವಿಶ್ವಾಸಾರ್ಹ ವರದಿಗಳಿವೆ. ಮತ್ತು ದುರುಪಯೋಗ ನಡೆದಿದ್ದರೆ, ಅಂತಹ ತಪ್ಪು ಮಾಡಿದ ಅಧಿಕಾರಿಗಳನ್ನು ಶಿಕ್ಷಿಸಲು ಮತ್ತು ಇತರರಿಗೆ ಪಾಠವಾಗುವಂತೆ ಮಾಡಲು ಸಾಕಷ್ಟು ಮಾರ್ಗಗಳಿದ್ದವು.
ಮೇಲ್ವಿಚಾರಣೆಯ ಮಟ್ಟವನ್ನು ಹೆಚ್ಚಿಸುವುದು ಸಾಧ್ಯವಿತ್ತು. ತೆರಿಗೆದಾರರು ತಮ್ಮ ಬಾಕಿ ಹಣವನ್ನು ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ಬಂಧನದ ಅಧಿಕಾರವು ಖಂಡಿತವಾಗಿಯೂ ಒಂದು ತಡೆಗೋಡೆಯಾಗಿತ್ತು. ಮಂಡಳಿಯು ಅಭಿಯೋಜನೆ ಆರಂಭಿಸುವ ಮಿತಿಯನ್ನು ರೂ. 1 ಕೋಟಿಯಿಂದ ರೂ. 5 ಕೋಟಿಗೆ ಏರಿಸಿದೆ. ಮತ್ತೊಮ್ಮೆ ಹೇಳುವುದಾದರೆ, ಮಂಡಳಿಯ ಸಭೆಯಲ್ಲಿ ಏನು ಚರ್ಚಿಸಲಾಯಿತು ಎಂಬುದು ತಿಳಿದಿಲ್ಲ, ಆದರೆ ಇದು ಆ ಮಟ್ಟಿಗೆ ಜಾರಿ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಆದಾಯ ತೆರಿಗೆಯಲ್ಲಿ ಅಭಿಯೋಜನೆ ಆರಂಭಿಸುವ ಮಿತಿಯು ಬಹಳ ಕಡಿಮೆಯಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಮತ್ತು ತೆರಿಗೆ ಪಾವತಿ ಸಲ್ಲಿಸದಿದ್ದರೂ ಕೂಡ ಕಾನೂನು ಕ್ರಮ ಜರುಗಿಸಲು ಪ್ರಸ್ತುತ ಮಾರ್ಗಸೂಚಿಗಳು ಅವಕಾಶ ನೀಡುತ್ತವೆ.
57 ನೇ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ಎಲ್ಲಾ ನಿರ್ಣಯಗಳ ಅಂತಿಮ ಫಲಿತಾಂಶ - ಕ್ರೆಡಿಟ್ ಹರಿವನ್ನು ಮುಕ್ತಗೊಳಿಸುವುದು, ಮರುಪಾವತಿ ನಿಬಂಧನೆಗಳು ಮತ್ತು ನೋಂದಣಿಗಳನ್ನು ಸಡಿಲಿಸುವುದು, ನೋಟು ಜಾರಿಗೊಳಿಸುವ ಮಿತಿಗಳನ್ನು ಹೆಚ್ಚಿಸುವುದು, ಬಂಧನದ ಅಧಿಕಾರವನ್ನು ರದ್ದುಗೊಳಿಸುವುದು - ತೆರಿಗೆದಾರರು ತಮ್ಮ ಬಾಕಿಯನ್ನು ಪಾವತಿಸುವಲ್ಲಿ ಸರ್ಕಾರವು ಅವರ ಮೇಲೆ ವಿಶ್ವಾಸವಿಡುತ್ತಿದೆ ಎಂಬುದಕ್ಕೆ ಬಲವಾದ ಸಂಕೇತಗಳಾಗಿವೆ. ತೆರಿಗೆದಾರರು ಈ ವಿಶ್ವಾಸವನ್ನು ಉಳಿಸಿಕೊಳ್ಳುತ್ತಾರೆ ಎಂಬುದೇ ಆಶಯ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


