
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ವ್ಯೂಹಾತ್ಮಕ ಮತ್ತು ಆರ್ಥಿಕ ಮಹತ್ವಾಕಾಂಕ್ಷೆಗಳ ಹೊರತಾಗಿ ಈ ಬೃಹತ್ ಯೋಜನೆ ಭೂಕಂಪನ ಅಸ್ಥಿರತೆ, ಅರಣ್ಯ ನಾಶ, ಚಂಡಮಾರುತ, ಪರಿಸರ ಹಾನಿಯಂತಹ ದೊಡ್ಡ ಮಟ್ಟದ ಅಪಾಯಗಳನ್ನು ಎದುರಿಸಬೇಕಾಗುತ್ತದೆ!
ಮಹತ್ವಾಕಾಂಕ್ಷೆಯ ಗ್ರೇಟ್ ನಿಕೋಬಾರ್ ಯೋಜನೆಯಲ್ಲಿ ಕೋಟಿಗಟ್ಟಲೆ ಹೂಡಿಕೆ ಮಾಡುವುದು ಭಾರಿ ಅಪಾಯಕಾರಿ. ಯಾಕೆಂದರೆ ಈ ಪ್ರದೇಶವು ವಿಶ್ವದ ಅತ್ಯಂತ ಅಪಾಯಕಾರಿ ಸಕ್ರಿಯ ಭೂಕಂಪನ ವಲಯಗಳಲ್ಲಿ ಒಂದಾಗಿದೆ ಮತ್ತು ಆಗಾಗ ಪ್ರಬಲ ಚಂಡಮಾರುತಗಳಿಗೆ ತುತ್ತಾಗುತ್ತ ಬಂದಿದೆ.
ಪರಿಸರವಾದಿಗಳ ಪ್ರಕಾರ, ಈ ಯೋಜನೆಯು ಗಲಾಥಿಯಾ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಬೃಹತ್ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗಲಿದ್ದು, ಇದು ಈ ಪ್ರದೇಶದ ಸ್ಥಳೀಯ ಬುಡಕಟ್ಟು ಜನರ ಜೀವನದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಬಹುದು.
ಈ ಯೋಜನೆಯು ದ್ವೀಪದ ಸುಮಾರು 166 ಚದರ ಕಿ.ಮೀ. ಪ್ರದೇಶವನ್ನು ಆವರಿಸಿಕೊಳ್ಳಲಿದ್ದು, ಅರಣ್ಯ ಭೂಮಿಯನ್ನು ಮಾರ್ಪಾಡು ಮಾಡಲಿಕ್ಕೇ 130.75 ಚದರ ಕಿ.ಮೀ. ಬಳಕೆಯಾಗಲಿದೆ. ಯೋಜನೆಯನ್ನು ಕಾರ್ಯಗತಗೊಳಿಸಲು ಈ ಪ್ರದೇಶದಲ್ಲಿರುವ ಸುಮಾರು 18.65 ಲಕ್ಷ ಮರಗಳ ಪೈಕಿ 7.11 ಲಕ್ಷ ಮರಗಳನ್ನು ಹಂತಹಂತವಾಗಿ ಕಡಿಯಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸುತ್ತವೆ.
ಬೃಹತ್ ಮೂಲಸೌಕರ್ಯ
ಒಂದು ಲಕ್ಷ ಕೋಟಿ ರೂಪಾಯಿ (10 ಬಿಲಿಯನ್ ಅಮೆರಿಕನ್ ಡಾಲರ್) ವೆಚ್ಚದ ಈ ಯೋಜನೆಯು ಡೀಪ್ ಡ್ರಾಫ್ಟ್ ಬಂದರಿನ ನಿರ್ಮಾಣವನ್ನು ಒಳಗೊಂಡಿದೆ. ಇದು ಭಾರತದ ವಿಸ್ತರಿಸುತ್ತಿರುವ ನೌಕಾಪಡೆಗೆ ಪ್ರತಿಸ್ಪರ್ಧಿಗಳ ವಿರುದ್ಧ ವ್ಯೂಹಾತ್ಮಕ ಮೇಲುಗೈಯನ್ನು ನೀಡಬಲ್ಲದು. ಪ್ರಸ್ತಾವಿತ ಈ ಬಂದರನ್ನು ಅಂತರರಾಷ್ಟ್ರೀಯ ಕಂಟೈನರ್ ಟ್ರಾನ್ಸ್ಶಿಪ್ಮೆಂಟ್ ಬಂದರಾಗಿಯೂ (ICTP) ಅಭಿವೃದ್ಧಿಪಡಿಸಲಾಗುತ್ತದೆ. ಇದು ಸಿಂಗಾಪುರ ಮತ್ತು ಕೊಲೊಂಬೊ ಮೇಲಿನ ಭಾರತದ ಸರಕು ಸಾಗಣೆ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಈ ಬಂದರಿನ ಜೊತೆಗೆ ಒಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರ ಮತ್ತು ಗ್ರೇಟ್ ನಿಕೋಬಾರ್ ದ್ವೀಪದಲ್ಲಿ 160 ಚದರ ಕಿಲೋಮೀಟರ್ ವಿಸ್ತೀರ್ಣದ ಟೌನ್ಶಿಪ್ ತಲೆಯೆತ್ತಲಿದೆ.
ಆದರೆ, ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬೆಂಬಲಿಸುವ ಕೆಲವು ಕಾರ್ಯತಂತ್ರದ ತಜ್ಞರು ಇದನ್ನು "ಮುಳುಗದ ನೈಸರ್ಗಿಕ ಯುದ್ಧವಿಮಾನ ವಾಹಕ" (Unsinkable natural aircraft carrier) ಎಂದು ಕರೆದಿದ್ದರೆ, ಇತರರು ಬೃಹತ್ ಕಂಟೈನರ್ ಬಂದರನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸುವುದರಲ್ಲಿ ಇರುವ ಅನಿವಾರ್ಯ ಗೊಂದಲ ಅಥವಾ ವಿರೋಧಾಭಾಸಗಳನ್ನು ಎತ್ತಿ ತೋರಿಸುತ್ತಿದೆ ಎಂದಿದ್ದಾರೆ.
ಕೆಲವು ಮಾಜಿ ನೌಕಾಪಡೆ ಮತ್ತು ಗುಪ್ತಚರ ಅಧಿಕಾರಿಗಳು ಗ್ರೇಟ್ ನಿಕೋಬಾರ್ ಯೋಜನೆಯನ್ನು ಬಹಳ ದೊಡ್ಡ ಹೊರೆ ಅಥವಾ ಹೊಣೆಗಾರಿಕೆ ಎಂದು ಬಣ್ಣಿಸಿದ್ದಾರೆ. ಹೊಸ ವಲಸಿಗರು ಮತ್ತು ಪ್ರಾಯಶಃ ವಿದೇಶಿಯರ ಆಗಮನದಿಂದ ಜನಸಂಖ್ಯೆ ಹೆಚ್ಚಾಗುವುದು ಅನಿವಾರ್ಯವಾಗಿರುವ ಪ್ರಮುಖ ವಾಣಿಜ್ಯ ಮತ್ತು ಪ್ರವಾಸೋದ್ಯಮ ಕೇಂದ್ರದಲ್ಲಿ, ಸುಧಾರಿತ ಕಡಲ ಕಣ್ಗಾವಲು ಹೊರಠಾಣೆ ಹಾಗೂ ದೊಡ್ಡ ನೌಕಾ ನೆಲೆಯನ್ನು ಸ್ಥಾಪಿಸುವುದು ಸೂಕ್ತವಲ್ಲ ಎಂದು ಅವರು ವಾದಿಸುತ್ತಾರೆ.
ಯೋಜನೆಯ ಇತರ ವಿಮರ್ಶಕರು, ಬೃಹತ್ ವಾಣಿಜ್ಯ ವಿಸ್ತರಣೆಯನ್ನು ಸಮರ್ಥಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆಯ ಆಯಾಮವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಭೂರಾಜಕೀಯ ವಿಶ್ಲೇಷಕ ಸುಶಾಂತ್ ಸಿಂಗ್ ಅವರು ಇತ್ತೀಚಿನ ಲೇಖನದಲ್ಲಿ ಹೀಗೆ ಬರೆದಿದ್ದಾರೆ: "ಸರ್ಕಾರವು ಕಡಲ ಸಂಬಂಧಿ ಪೈಪೋಟಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಭಾಷೆಯಲ್ಲಿ ಮಾತನಾಡುತ್ತದೆ, ಆದರೆ ಈ ಯೋಜನೆಯು ದೊಡ್ಡ ಬಂದರು, ವಿಮಾನ ನಿಲ್ದಾಣ, ಟೌನ್ಶಿಪ್ ಮತ್ತು ಇಂಧನ ಮೂಲಸೌಕರ್ಯಗಳನ್ನು ಒಳಗೊಂಡಿದೆ. ಇವು ಅನಿವಾರ್ಯವಾಗಿ ಲಾಜಿಸ್ಟಿಕ್ಸ್, ನಿರ್ಮಾಣ, ಭೂಮಿಯ ಮೌಲ್ಯ ವೃದ್ಧಿ ಮತ್ತು ದೀರ್ಘಾವಧಿಯ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಅವಕಾಶಗಳನ್ನು ಸೃಷ್ಟಿಸುತ್ತವೆ. ಭಾರತದ ಬೃಹತ್ ಯೋಜನೆಗಳು ಹಲವು ಬಾರಿ ಇಂತಹ ಮಿಶ್ರ ಹಣೆಪಟ್ಟಿಗಳೊಂದಿಗೆ ಸಾಗುತ್ತವೆ, ಯಾಕೆಂದರೆ ಒಮ್ಮೆ ಅದಕ್ಕೆ ಭದ್ರತೆಯ ಚೌಕಟ್ಟನ್ನು ಜೋಡಿಸಿದರೆ, ಅದರ ಮೇಲಿನ ಸೂಕ್ಷ್ಮ ಪರಿಶೀಲನೆ ಅಥವಾ ವಿಮರ್ಶೆ ಕಷ್ಟಕರವಾಗಿ ಪರಿಣಮಿಸುತ್ತದೆ.”
ಈ ವಾದವನ್ನು ಬೆಂಬಲಿಸುವ ಇತರರು, ಯಾವುದೇ ವಿವಾದಾತ್ಮಕ ಮೂಲಸೌಕರ್ಯ ಯೋಜನೆಗೆ "ವ್ಯೂಹಾತ್ಮಕ" ಯೋಜನೆ ಎಂಬ ಹಣೆಪಟ್ಟಿ ಹಚ್ಚುವುದು, ವಿಮರ್ಶಕರ ಬಾಯಿ ಮುಚ್ಚಿಸಿ ಸುಲಭವಾಗಿ ಅನುಮತಿ ಪಡೆಯುವ ಒಂದು ಖಚಿತವಾದ ಮಾರ್ಗವಾಗಿದೆ ಎಂದು ಹೇಳುತ್ತಾರೆ.
ಭೂವೈಜ್ಞಾನಿಕ ಅಪಾಯಗಳು
ಅಪ್ರತಿಮ ಜೀವವೈವಿಧ್ಯತೆಯನ್ನು ಹೊಂದಿರುವ ಪ್ರಮುಖ ಬಯೋಸ್ಫಿಯರ್ ರಿಸರ್ವ್ (ಜೀವಗೋಳ ಮೀಸಲು ಪ್ರದೇಶ) ನ್ನು ನಾಶಪಡಿಸಿ, ಅದನ್ನು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸುವ ಬಗೆಗಿನ ತೀವ್ರ ಪರಿಸರ ಕಳವಳದ ಹೊರತಾಗಿ, ಗ್ರೇಟ್ ನಿಕೋಬಾರ್ ಯೋಜನೆಯ ನಿಜವಾದ ಆತಂಕವಿರುವುದು ಅದರ ಭೌಗೋಳಿಕ ಸ್ಥಾನದ ಬಗ್ಗೆ. ಇದು ಇಂಡೋನೇಷ್ಯಾದ ಬಂದಾ ಅಚೆ (Banda Aceh) ಪ್ರದೇಶಕ್ಕೆ ಅಪಾಯಕಾರಿ ಎನ್ನುವಷ್ಟು ಹತ್ತಿರದಲ್ಲಿದೆ. ಇದೇ ಬಂದಾ ಅಚೆ 2004ರ ವಿನಾಶಕಾರಿ ಮಹಾ ಭೂಕಂಪದ ಕೇಂದ್ರಬಿಂದುವಾಗಿತ್ತು. ರಿಕ್ಟರ್ ಮಾಪಕದಲ್ಲಿ 9.2 ರಷ್ಟು ತೀವ್ರತೆ ದಾಖಲಿಸಿದ್ದ ಆ ಭೂಕಂಪವು, ಇತಿಹಾಸದಲ್ಲೇ ಅತ್ಯಂತ ಅಪರೂಪದ ಭೀಕರ ಸುನಾಮಿಯನ್ನು ಸೃಷ್ಟಿಸಿತ್ತು.
ಇದು ಭಾರತದ ಭೂರಾಚನಿಕ ಫಲಕದ ಪೂರ್ವ ಭಾಗವು ಆಗ್ನೇಯ ಏಷ್ಯಾದ ಭೂಭಾಗದ ಅಡಿಯಲ್ಲಿ ಕುಸಿಯುವ ಪ್ರದೇಶವಾಗಿದೆ.
2004ರ ಭೂಕಂಪವು 15-20 ಕಿಲೋಮೀಟರ್ ಆಳದಲ್ಲಿ ಸಂಭವಿಸಿತ್ತು ಮತ್ತು ಸುಮಾರು 1,200 ಕಿ.ಮೀ.ಗಳಷ್ಟು ಉದ್ದದ ಭೂರಾಚನಿಕ ಫಲಕದ ಗಡಿಯನ್ನು ಸೀಳಿ ಹಾಕಿತ್ತು. ಇದು ಸಮುದ್ರದ ಅಡಿಯಲ್ಲಿ ಕೋಟ್ಯಂತರ ಟನ್ ಬಂಡೆ ಹಾಗೂ ಕೋಟ್ಯಂತರ ಟನ್ ನೀರನ್ನು ಸ್ಥಾನಪಲ್ಲಟಗೊಳಿಸಿ, ಬೃಹತ್ ಸುನಾಮಿ ಹುಟ್ಟಿಕೊಳ್ಳಲು ಕಾರಣವಾಗಿತ್ತು.
ಬೇರೆಲ್ಲಾ ಪೀಡಿತ ಪ್ರದೇಶಗಳಿಗಿಂತ ಭೂಕಂಪದ ಕೇಂದ್ರಬಿಂದುವಿಗೆ ಅತ್ಯಂತ ಹತ್ತಿರದಲ್ಲಿದ್ದ ಗ್ರೇಟ್ ನಿಕೋಬಾರ್, ಮೂರರಿಂದ ನಾಲ್ಕು ಮೀಟರ್ಗಳಷ್ಟು ಹಠಾತ್ ಭೂಕಂಪನದ ಕುಸಿತಕ್ಕೆ ಒಳಗಾಗಿತ್ತು. ಇದು ಗ್ರೇಟ್ ನಿಕೋಬಾರ್ನ ಮರುಕಳಿಸುವ ಲಕ್ಷಣವಾಗಿದ್ದು, ಇಲ್ಲಿ ಆಗಾಗ್ಗೆ ಸೂಕ್ಷ್ಮ ಭೂಕಂಪನಗಳು ಸಂಭವಿಸುತ್ತಲೇ ಇರುತ್ತವೆ.
ಭೂಕಂಪನ ಸುರಕ್ಷತೆಯ ಮೇಲಿನ ಚರ್ಚೆ
ಸಿಂಗಾಪುರ ಅಥವಾ ಹಾಂಕಾಂಗ್ನಂತಹ ಪ್ರದೇಶಗಳು ಸ್ಥಿರವಾದ ಭೂವೈಜ್ಞಾನಿಕ ರಚನೆಯ ಪ್ರಯೋಜನಗಳನ್ನು ಹೊಂದಿದ್ದರೆ, ಗ್ರೇಟ್ ನಿಕೋಬಾರ್ ವಲಯವು ನಿರಂತರವಾಗಿ ನಿಧಾನಗತಿಯ ಉಬ್ಬರ ಮತ್ತು ಹಠಾತ್ ಕುಸಿತದ ಆವರ್ತಕ ಚಲನೆಗಳಿಗೆ ಒಳಗಾಗುತ್ತದೆ ಎಂದು ಭೂವಿಜ್ಞಾನಿಗಳು ಹೇಳುತ್ತಾರೆ. ಇದು ಬಂದರು, ವಿಮಾನ ನಿಲ್ದಾಣ ಮತ್ತು ನಗರದಂತಹ ಬೃಹತ್ ಮೂಲಸೌಕರ್ಯಗಳ ಪಾಲಿಗೆ ಗಂಡಾಂತರಕಾರಿಯಾಗಬಹುದು.
"ಇಂತಹ ಅಸ್ಥಿರ ಭೂಮಿಯ ಮೇಲೆ ಬೃಹತ್ ಪ್ರಮಾಣದ ಖಾಯಂ ಮೂಲಸೌಕರ್ಯಗಳನ್ನು ನಿರ್ಮಿಸುವುದೆಂದರೆ, ಇಂಜಿನಿಯರಿಂಗ್ ತಂತ್ರಜ್ಞಾನವು ಭೂಫಲಕಗಳ ಚಲನೆಯನ್ನು ಕೂಡ ಮೀರಿಸಬಲ್ಲದು ಎಂಬ ಭ್ರಮೆಯೊಂದಿಗೆ ಕೋಟ್ಯಂತರ ರೂಪಾಯಿಗಳನ್ನು ಜೂಜಾಟಕ್ಕೆ ಇಟ್ಟಂತೇ ಸರಿ," ಎಂದು ವಿಜ್ಞಾನಿ ಸಿ. ಪಿ. ರಾಜೇಂದ್ರನ್ ಹೇಳುತ್ತಾರೆ. ವ್ಯಾಪಕವಾದ ಜಿಪಿಎಸ್ ಮತ್ತು ಉಬ್ಬರವಿಳಿತದ ಮಾಪನ ದತ್ತಾಂಶಗಳನ್ನು ಉಲ್ಲೇಖಿಸುವ ಅವರು, ಭೂಫಲಕಗಳ ಮೇಲಿನ ಒತ್ತಡವು ನಿಧಾನಗತಿಯ ಉಬ್ಬರಕ್ಕೆ ಕಾರಣವಾಗುತ್ತದೆ ಮತ್ತು 2004ರಲ್ಲಿ ಸಂಭವಿಸಿದ ಪ್ರಮುಖ ಭೂಕಂಪದ ಸಮಯದಲ್ಲಿ ಸಂಗ್ರಹವಾದ ಒತ್ತಡವು ಒಮ್ಮೆಲೇ ಬಿಡುಗಡೆಯಾಗಿ, ಹಠಾತ್ ಹಾಗೂ ಭಾರಿ ಪ್ರಮಾಣದ ಭೂಕುಸಿತಕ್ಕೆ ಕಾರಣವಾಗುತ್ತದೆ ಎಂಬುದರ ಕಡೆಗೆ ಬೊಟ್ಟು ಮಾಡುತ್ತಾರೆ.
ಯೋಜನೆಯನ್ನು ಅಂತಿಮಗೊಳಿಸುವ ಮೊದಲು ಅಗತ್ಯ ಪರಿಸರ ಪ್ರಭಾವದ ಮೌಲ್ಯಮಾಪನ ಮತ್ತು ಸಾಮರ್ಥ್ಯದ ವಿಶ್ಲೇಷಣೆಯನ್ನು ನಡೆಸಲಾಗಿದೆ ಎಂದು ಭಾರತ ಸರ್ಕಾರ ಹೇಳಿಕೊಂಡಿದ್ದರೂ, ಭೂವೈಜ್ಞಾನಿಕ ಅಪಾಯಗಳನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇಂಧನ ಕ್ಷೇತ್ರದ ಜೂಜು
ಅಂಡಮಾನ್ ನಿಕೋಬಾರ್ ದ್ವೀಪಸಮೂಹದ ಹೈಡ್ರೋಕಾರ್ಬನ್ (ತೈಲ ಮತ್ತು ಅನಿಲ) ಭವಿಷ್ಯದ ಮೇಲಿರುವ ಅತಿಯಾದ ಆಶಾವಾದವೂ ಗ್ರೇಟ್ ನಿಕೋಬಾರ್ ಯೋಜನೆಯನ್ನು ಉತ್ತೇಜಿಸುತ್ತಿರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಪ್ರಸ್ತುತ ಯಾವುದೇ ಬೃಹತ್ ವಾಣಿಜ್ಯ ತೈಲ ಮತ್ತು ಅನಿಲ ಕ್ಷೇತ್ರಗಳು ಸಕ್ರಿಯವಾಗಿ ಉತ್ಪಾದನೆಯನ್ನು ಆರಂಭಿಸದಿದ್ದರೂ, ಪ್ರಮುಖ ಪರಿಶೋಧನಾ ಅಭಿಯಾನವೊಂದು ಇಲ್ಲಿ ಗಣನೀಯ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪಗಳಿರುವುದನ್ನು ಖಚಿತಪಡಿಸಿದೆ. ಇದು ಭಾರತದ ದೀರ್ಘಕಾಲೀನ ಇಂಧನ ಭದ್ರತೆಗೆ ದ್ವೀಪಸಮೂಹವನ್ನು ಅತ್ಯಂತ ಪ್ರಮುಖ ಆಸ್ತಿಯನ್ನಾಗಿ ಮಾಡಿದೆ.
'ವಿಜಯಪುರಂ-2' ನಂತಹ ಕೆಲವು ಪರಿಶೋಧನಾ ಬಾವಿಗಳು ಅಂಡಮಾನ್ನ ಆಳ ಸಮುದ್ರದ ಪ್ರದೇಶದಲ್ಲಿ ನೈಸರ್ಗಿಕ ಅನಿಲ ಇರುವುದನ್ನು ಖಚಿತಪಡಿಸಿವೆ.
ಭಾರತದ ಹೈಡ್ರೋಕಾರ್ಬನ್ ಸಂಪನ್ಮೂಲ ಮೌಲ್ಯಮಾಪನ ಅಧ್ಯಯನದ ಅಂದಾಜಿನ ಪ್ರಕಾರ, ಅಂಡಮಾನ್ ಜಲಾನಯನ ಪ್ರದೇಶವು ಸುಮಾರು 371 ದಶಲಕ್ಷ ಮೆಟ್ರಿಕ್ ಟನ್ ತೈಲ ಸಮಾನ ನಿಕ್ಷೇಪವನ್ನು ಹೊಂದಿದೆ.
ಆದರೆ, ಈ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ವೆಚ್ಚವು ವಿಪರೀತವಾಗಿರುತ್ತದೆ ಮತ್ತು ಇದು ಲಭ್ಯವಿರುವ ಹೈಡ್ರೋಕಾರ್ಬನ್ ಸಂಪನ್ಮೂಲಗಳ ಬಳಕೆಯನ್ನು ಗಣನೀಯವಾಗಿ ತಡೆಯಬಹುದು. ಇಲ್ಲೂ ಸಹ, ಭೂವೈಜ್ಞಾನಿಕ ಅಪಾಯಗಳು ಇಂತಹ ಯೋಜನೆಗಳ ಮೇಲೆ ಭಾರಿ ಪ್ರಭಾವ ಬೀರಲಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ ' ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

