Najib Shah

ಬೆಂಗಳೂರು ರಸ್ತೆಗಳಲ್ಲಿ ಅಡ್ಡಾಡಿ ಬನ್ನಿ... ಹಳದಿ ಲೋಹದ ಖರೀದಿಯೂ ಜೋರು, ಮೋಹವೇ ಒಗಟು!


ಬೆಂಗಳೂರು ರಸ್ತೆಗಳಲ್ಲಿ ಅಡ್ಡಾಡಿ ಬನ್ನಿ... ಹಳದಿ ಲೋಹದ ಖರೀದಿಯೂ ಜೋರು, ಮೋಹವೇ ಒಗಟು!
x
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಭಾರತದ ವಾರ್ಷಿಕ ಚಿನ್ನದ ಬೇಡಿಕೆ ಸುಮಾರು 710 ಟನ್ ಎಂದು ಅಂದಾಜು ಮಾಡಲಾಗಿದೆ. ಈ ಅಗಾಧ ಪ್ರಮಾಣದ ಬಗ್ಗೆ ವಿವಾದ ಇರಬಹುದು. ಆದರೂ ಅಪಾರವಾದ ಬೇಡಿಕೆ ಇದೆ ಎಂಬುದು ಸತ್ಯ. ನಮ್ಮ ದೇಶದಲ್ಲಿರುವ ಗಣಿಗಳು ಸುಮಾರು 1.5 ಟನ್ ಚಿನ್ನ ಉತ್ಪಾದನೆ ಮಾಡುತ್ತವೆ. ಚಿನ್ನ ಕಳ್ಳಸಾಗಣೆ ಕೂಡ ಚಾಲ್ತಿಯಲ್ಲಿದೆ. ಜನರಿಗೆ ಚಿನ್ನದ ಮೇಲಿನ ಹಸಿವು ಕಡಿಮೆಯಾಗಿಲ್ಲ ಎಂಬುದು ಮಾತ್ರ ನಿಜ.
Click the Play button to hear this message in audio format

ದಾಖಲೆಯ ಚಿನ್ನ ಮಾರಾಟವಾಗಿದೆ ಎಂಬುದು ಲಾಭ ಗಳಿಕೆ, ಸಂಕಷ್ಟ ಅಥವಾ ಎರಡನ್ನೂ ಬಿಂಬಿಸಬಹುದು. ಆದರೂ ಲೋಹದ ಮೇಲಿರುವ ಭಾರತದ ಮೋಹ ಕಡಿಮೆಯಾಗಿಲ್ಲ. ಇದು ಆಮದು, ಕಳ್ಳಸಾಗಣೆ ಎರಡನ್ನೂ ಹೆಚ್ಚಿಸುತ್ತದೆ.

ನೀವು ಬೆಂಗಳೂರು ನಗರದಲ್ಲಿ ಒಮ್ಮೆ ಅಡ್ಡಾಡಿ ಬಂದರೆ ಅಲ್ಲಿ ತಮ್ಮ ಎರಡೂ ಬದಿಗಳಲ್ಲಿ ಬೃಹತ್ ಜಾಹೀರಾತುಗಳನ್ನು ಹೊತ್ತ ಸ್ಥಳೀಯ ಸಾರ್ವಜನಿಕ ಸಾರಿಗೆ ಬಸ್ಸುಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಆ ಜಾಹೀರಾತಿನಲ್ಲಿ ಭಾರೀ ಚಿನ್ನದ ಆಭರಣಗಳನ್ನು ಧರಿಸಿದ ವ್ಯಕ್ತಿಯೊಬ್ಬರು ʼನಾವು ಚಿನ್ನ ಖರೀದಿ ಮಾಡುತ್ತೇವೆʼ ಎಂದು ಹೇಳುತ್ತಿರುವುದನ್ನು ಕಾಣಬಹುದು. ಭಾರತದ ಪ್ರತಿಯೊಂದು ಪ್ರಮುಖ ಚಿನ್ನದ ಕಂಪನಿ ಕೂಡ ಚಿನ್ನವನ್ನು ಖರೀದಿಸುವ ವ್ಯವಹಾರದಲ್ಲಿ ಅತ್ಯಂತ ಉತ್ಸುಕವಾಗಿ ತೊಡಗಿಸಿಕೊಂಡಿದೆ.

ಇವೆಲ್ಲದರ ನಡುವೆ ಭಾರತೀಯರು ಚಿನ್ನವನ್ನು ಮಾರಾಟ ಮಾಡುವ ಅಥವಾ ಅಡವಿಡುವ ಕುತೂಹಲಕಾರಿ ವಿದ್ಯಮಾನವೂ ದೇಶಾದ್ಯಂತ ವ್ಯಾಪಿಸಿರುವಂತೆ ತೋರುತ್ತಿದೆ. ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಷಿಯೇಷನ್ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ತೀವ್ರ ಏರಿಕೆಯೊಂದಿಕೆ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕದಲ್ಲಿ ಸುಮಾರು 50 ಟನ್ ಹಳೆಯ ಚಿನ್ನವನ್ನು ಮಾರಾಟ ಮಾಡಲಾಗಿದೆ.

ಇಂತಹ ಚಿನ್ನ ಮಾರಾಟದ ಅಭೂತಪೂರ್ವ ಬೆಳವಣಿಗೆಗೆ ಅನೇಕ ಅಂಶಗಳು ಕಾರಣ. ಒಮ್ಮಿಂದೊಮ್ಮೆಗೇ ಏರುವ ಮತ್ತು ಕುಸಿಯುವ ಚಿನ್ನದ ಬೆಲೆ, ಹಳದಿ ಲೋಹದ ಬೆಲೆ ಕುಸಿದು ಬಿಡಬಹುದು ಎಂಬ ಆತಂಕ, ಇಂದಿನ ಯುವ ಪೀಳಿಗೆಯು ಲಾಭ ಗಳಿಸುವ ಇತರ ಆಸ್ತಿಗಳಂತೆ ಚಿನ್ನವನ್ನೂ ಪರಿಗಣಿಸಿರುವುದು- ಇವೆಲ್ಲವೂ ಚಿನ್ನದ ಮಾರಾಟಕ್ಕೆ ಪ್ರೇರೇಪಿಸಿದ ಅಂಶಗಳಾಗಿವೆ. ಇದರಲ್ಲಿ ಚಿನ್ನದ ಮೇಲಿನ ಸಾಲವನ್ನು ಹೊರತುಪಡಿಸಲಾಗಿದೆ. 2026ರಲ್ಲಿ ಚಿನ್ನದ ಆಭರಣಗಳಿಗೆ ಪ್ರತಿಯಾಗಿ ಪಡೆದ ಒಟ್ಟು ಬ್ಯಾಂಕ್ ಸಾಲ ನಾಲ್ಕು ಲಕ್ಷ ಕೋಟಿಗೂ ಅಧಿಕ ಎಂಬುದು ಅತ್ಯಂತ ಕಳವಳಕಾರಿ ಅಂಶ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪರಿಗಣಿಸಿದೆ.

ಚಿನ್ನ ದೊಡ್ಡ ಪ್ರಮಾಣದಲ್ಲಿ ಮಾರಾಟ ಕಾಣುತ್ತಿದೆ ಎಂದರೆ ಅದರ ಅರ್ಥ ಭಾರತೀಯರಿಗೆ ಚಿನ್ನದ ಮೇಲಿನ ಒಲವು ಕಡಿಮೆಯಾಗಿದೆ ಎಂದೇ ಅಥವಾ ಗಾದೆ ಮಾತಿನಂತೆ ಚಿನ್ನವು ತನ್ನ ಹೊಳಪು ಕಳೆದುಕೊಂಡಿದೆ ಎಂದೇ? 2026ರ ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕದಲ್ಲಿ ಹೂಡಿಕೆಯ ಬೇಡಿಕೆ ಮತ್ತು ಆಭರಣಗಳ ಬೇಡಿಕೆಯು 140 ಟನ್ಗಳಿಗಿಂತ ಅಧಿಕವಾಗಿತ್ತು ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಅಂದಾಜು ಮಾಡಿದೆ. 2025-26ರ ಅವಧಿಯಲ್ಲಿ ಚಿನ್ನದ ಆಮದು ಸುಮಾರು 72 ಶತಕೋಟಿ ಅಮೆರಿಕನ್ ಡಾಲರ್ ತಲುಪಿದೆ. ಅಂದರೆ ಕಚ್ಚಾ ತೈಲದ ನಂತರದ ಸ್ಥಾನದಲ್ಲಿದೆ ಎಂದು ಅರ್ಥ.

ಭಾರತೀಯರ ಚಿನ್ನ ಪ್ರೀತಿ

ಚಿನ್ನವು ಸಾಮಾನ್ಯವಾಗಿ ವೆಬ್ಲನ್ ಸರಕು. ಅದರ ಬೆಲೆಯಲ್ಲಿ ತೀವ್ರ ಏರಿಕೆ ಉಂಟಾಗಿದ್ದರೂ ಮದುವೆ ಸೀಸನ್ ಮತ್ತು ಹಬ್ಬಗಳ ಸಮಯದಲ್ಲಿ ಬೇಡಿಕೆಯು ಹೆಚ್ಚಾಗುತ್ತದೆ. ಚಿನ್ನದ ಆಭರಣ ನೀಡುವುದನ್ನು ಮದುವೆಯಲ್ಲಿನ ವರದಕ್ಷಿಣೆಯ ಒಂದು ಭಾಗವಾಗಿ ಪರಿಗಣಿಸಿರುವ ಸಾಮಾಜಿಕ ಸಂಪ್ರದಾಯ (ತಕ್ಕಮಟ್ಟಿಗೆ ತಗ್ಗಿದ್ದರೂ) ಇನ್ನೂ ಚಾಲ್ತಿಯಲ್ಲಿ ಇರುವುದರಿಂದ ಯಾರಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಬಿಡಿ. ಹಾಗಾಗಿಯೇ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಭಾರತದ ವಾರ್ಷಿಕ ಚಿನ್ನದ ಬೇಡಿಕೆಯನ್ನು ಸುಮಾರು 710 ಟನ್ ಎಂದು ಅಂದಾಜು ಮಾಡಿದೆ. ಈ ಅಗಾಧ ಪ್ರಮಾಣದ ಬಗ್ಗೆ ವಿವಾದ ಇರಬಹುದು. ಆದರೂ ಅಪಾರವಾದ ಬೇಡಿಕೆ ಇದೆ ಎಂಬುದು ಮಾತ್ರ ಸತ್ಯ. ನಮ್ಮ ದೇಶದಲ್ಲಿರುವ ಗಣಿಗಳು ಸುಮಾರು 1.5 ಟನ್ ಚಿನ್ನ ಉತ್ಪಾದನೆ ಮಾಡುತ್ತವೆ. ಅಧಿಕೃತ ಆಮದು ಮತ್ತು ಗಣಿ ಉತ್ಪಾದನೆ ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲದ ಕಾರಣ ಚಿನ್ನ ಕಳ್ಳಸಾಗಣೆ ಕೂಡ ಚಾಲ್ತಿಯಲ್ಲಿದೆ ಎಂದರೆ ತಪ್ಪಲ್ಲ. ಹಾಗಾಗಿ ಜನರಿಗೆ ಚಿನ್ನದ ಮೇಲಿನ ಹಸಿವು ಕಡಿಮೆಯಾಗಿಲ್ಲ ಎಂಬುದು ಮಾತ್ರ ನಿಜ.

ಚಿನ್ನದ ಒಳಹರಿವನ್ನು ನಿಯಂತ್ರಿಸಲು ಭಾರತದ ನೀತಿ ನಿರೂಪಕರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಒಮ್ಮೆಗೇ ಪರಿಗಣಿಸಿದ್ದಾರೆ. ಕಳ್ಳಸಾಗಣೆದಾರರಾದ ದಾವೂದ್ ಇಬ್ರಾಹಿಂ ಮತ್ತು ಹಾಜಿ ಮಸ್ತಾನ್ ಮೆರೆದಾಡಿದ್ದ ಆರಂಭಿಕ ವರ್ಷಗಳಲ್ಲಿ ಚಿನ್ನದ ಆಮದನ್ನು ನಿಷೇಧಿಸಲಾಗಿತ್ತು. 1991ರ ನಂತರ, ನಿಧಾನವಾಗಿ ಆದರೆ ಖಚಿತವಾಗಿ, ಸುಂಕವನ್ನು ಪಾವತಿಸುವ ಮೂಲಕ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಯಿತು, ಇದು 2024ರಲ್ಲಿ ಶೇ. 10 ರಿಂದ ಶೇ. 6 ಕ್ಕೆ ಇಳಿಯಿತು. ಪ್ರಸ್ತುತ ಕಸ್ಟಮ್ಸ್ ಸುಂಕವು ಶೇ.15 ರಷ್ಟಿದೆ. ಕಾನೂನುಬದ್ಧ ಮತ್ತು ಕಾನೂನುಬಾಹಿರ ಚಿನ್ನವನ್ನು ಪೂರೈಸುವ ಮಾರುಕಟ್ಟೆಯಾದ ದುಬೈ ಮತ್ತು ಮುಂಬೈ ನಡುವಿನ ಚಿನ್ನದ ಬೆಲೆಯಲ್ಲಿ ಯಾವಾಗಲೂ ವ್ಯತ್ಯಾಸವಿರುವುದರಿಂದ, ಹೆಚ್ಚಿನ ಸುಂಕದ ದರದಿಂದಾಗಿ ಹೆಚ್ಚಾಗುವ ಮಧ್ಯಸ್ಥಿಕೆಯ ಲಾಭದ ದುರುಪಯೋಗ ಮಾಡಿಕೊಳ್ಳಲಾಗುತ್ತದೆ.

ನೂರಾರು ಕಿಲೋಗ್ರಾಂ ಚಿನ್ನದ ಕಳ್ಳಸಾಗಾಟ

ಆದ್ದರಿಂದ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ನೇತೃತ್ವದ ಜಾರಿ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಳ್ಳದ ಒಂದೇ ಒಂದು ದಿನವೂ ಇಲ್ಲ - ಸೆಪ್ಟೆಂಬರ್ 28 ರಂದು ಪ್ಯಾನ್-ಇಂಡಿಯಾ ಕಾರ್ಯಾಚರಣೆಯಲ್ಲಿ ಡಿಆರ್ಐ 10 ಕೋಟಿ ರೂ. ಮೌಲ್ಯದ ಚಿನ್ನವನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಇತ್ತೀಚಿನ ಉದಾಹರಣೆ. ಚಿನ್ನವನ್ನು ಕೊರಿಯರ್ ಪ್ಯಾಕೆಟ್ಗಳ ಮೂಲಕ ಕಳ್ಳಸಾಗಣೆ ಮಾಡಲಾಗುತ್ತಿತ್ತು. ದೇಹದಲ್ಲಿ ಬಚ್ಚಿಡುವುದು, ಸೂಟ್ಕೇಸ್, ವಿದ್ಯುತ್ ಉಪಕರಣಗಳು, ಪೌಡರ್ ರೂಪ ಅಥವಾ ಪೇಸ್ಟ್ ರೂಪದಲ್ಲಿ, ವಾಯು ಮತ್ತು ಭೂ ಗಡಿಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುವ ಕಳ್ಳಸಾಗಣೆದಾರರ ಚಾಕಚಕ್ಯತೆಗೆ, ಜಾರಿ ಸಂಸ್ಥೆಗಳ ಎಚ್ಚರಿಕೆ ಮತ್ತು ಅತ್ಯುತ್ತಮ ಗುಪ್ತಚರ ಮಾಹಿತಿಯು ಸರಿಸಮವಾಗಿದೆ.

ಸಂಸತ್ತಿನಲ್ಲಿ ಕೇಳಲಾದ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ ನೀಡಲಾದ ಉತ್ತರದ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನದ ಪ್ರಮಾಣ 646.66 ಕೆ.ಜಿ. 2024-25ರಲ್ಲಿ ವಶಕ್ಕೆ ಪಡೆಯಲಾದ 2600 ಕೆ.ಜಿ. ಚಿನ್ನಕ್ಕೆ ಹೋಲಿಸಿದರೆ ಇದು ತೀವ್ರ ಕುಸಿತ ಕಂಡಿದೆ.

ಸಂಸತ್ತಿನಲ್ಲಿ ಪ್ರಶ್ನೆಗೆ ನೀಡಿದ ಉತ್ತರದ ಪ್ರಕಾರ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್ನಿಂದ ಜೂನ್ ತನಕ) ನಾನಾ ಜಾರಿ ಸಂಸ್ಥೆಗಳು 86 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿವೆ. ಆದರೆ ಕಳ್ಳಸಾಗಣೆಯಾಗುವ ಎಲ್ಲ ಚಿನ್ನವೂ ವಶಕ್ಕೆ ಸಿಗುವುದಿಲ್ಲ ಎಂಬುದನ್ನು ಅವರೂ ಒಪ್ಪಿಕೊಳ್ಳುತ್ತಾರೆ. (ಒಂದು ಅಂದಾಜಿನ ಪ್ರಕಾರ ಪ್ರತಿ ತ್ರೈಮಾಸಿಕದಲ್ಲಿ ಸರಾಸರಿ 34 ಟನ್ ಚಿನ್ನ ಕಳ್ಳ ಸಾಗಣೆಯಾಗುತ್ತದೆ).

ಕಳ್ಳ ಸಾಗಣೆ ಮಾಡಿದ ಚಿನ್ನದಿಂದ (ಅಥವಾ ಯಾವುದೇ ಕಳ್ಳಸಾಗಣೆ ಸರಕಿನಿಂದ) ಬರುವ ಹಣವು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಇದು ಅನಿವಾರ್ಯವಾಗಿ ಇತರ ದುಷ್ಟ ಮತ್ತು ಅಪರಾಧ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಖಜಾನೆಗಳಲ್ಲಿ ಇರಿಸಲಾಗಿರುವ ಚಿನ್ನವನ್ನು ಹೊರತರುವ ಉದ್ದೇಶದಿಂದ ಸರ್ಕಾರವು ಸಾರ್ವಭೌಮ ಚಿನ್ನದ ಬಾಂಡ್ಗಳು ಮತ್ತು ಚಿನ್ನದ ಹಣ ಗಳಿಕೆ ಯೋಜನೆ ಸೇರಿದಂತೆ ನಾನಾ ಯೋಜನೆಗಳನ್ನು (ಬ್ಯಾಂಕ್ಗಳು ಮತ್ತು ಚಿನ್ನದ ಆಭರಣ ವ್ಯಾಪಾರಿಗಳು ನೀಡುವ ಯೋಜನೆಗಳ ಹೊರತಾಗಿ) ಜಾರಿಗೆ ತರುವ ಪ್ರಯತ್ನ ಮಾಡಿದೆ. ಆದರೆ ಆ ಯಾವ ಯೋಜನೆಗಳು ಕೂಡ ಯಶಸ್ವಿಯಾಗಿಲ್ಲ.

ಚಿನ್ನದ ವಿರೋಧಾಭಾಸ

ಈ ಎಲ್ಲ ಹಿನ್ನೆಲೆಯಲ್ಲಿ ನಾವು ಮತ್ತೆ ಮೂಲ ಪ್ರಶ್ನೆಯನ್ನು ಕೇಳಬೇಕಾಗಿದೆ: ಭಾರತೀಯರು ಯಾಕೆ ಚಿನ್ನವನ್ನು ಮಾರಾಟ ಮಾಡಲು ಶುರುಮಾಡಿದ್ದಾರೆ? ಒಂದು ರೀತಿಯಲ್ಲಿ ನೋಡಿದರೆ ಇದೇನು ಕೆಟ್ಟ ಸಂಗತಿಯಲ್ಲ. ಭಾರತದಲ್ಲಿ ಕುಟುಂಬಗಳು ಮತ್ತು ಧಾರ್ಮಿಕ ಸಂಸ್ಥೆಗಳ ಬಳಿ ಸಂಗ್ರಹವಾಗಿರುವ ಚಿನ್ನದ ಪ್ರಮಾಣವೇ 24000 ಟನ್ ಎಂದು ಅಂದಾಜು ಮಾಡಲಾಗುತ್ತದೆ. ಈ ಸ್ವತ್ತುಗಳನ್ನು ಸಾರ್ವಜನಿಕ ಅರ್ಥ ವ್ಯವಸ್ಥೆಯ ವ್ಯಾಪ್ತಿಗೇನಾದರೂ ತಂದರೆ ಚಿನ್ನಕ್ಕಾಗಿ ನಮ್ಮಲ್ಲಿರುವ ಅತಿ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಆದರೆ ಈ ಚರ್ಚೆಯಲ್ಲಿ ಕಡೆಗಣಿಸಲಾಗಿರುವ ಇನ್ನೂ ಒಂದು ದೊಡ್ಡ ಪ್ರಶ್ನೆಯಿದೆ; ಅಭೂತಪೂರ್ವ ಪ್ರಮಾಣದಲ್ಲಿ ಚಿನ್ನ ಮಾರಾಟವಾಗುತ್ತಿರುವುದು ನಮ್ಮ ದೇಶದ ಆರ್ಥಿಕ ಬಿಕ್ಕಟ್ಟು ಅತ್ಯಂತ ಗಂಭೀರವಾಗಿದೆ ಎಂಬುದರ ಸೂಚನೆಯೇ?

ಹೀಗಾಗಿ ಇಲ್ಲಿ ಒಂದು ವಿರೋಧಾಭಾಸವಿದೆ; ನಿರಂತರ ಬೇಡಿಕೆ ಇದ್ದರೂ ಅಧಿಕೃತವಾಗಿ ಆಮದು ಮಾಡಿಕೊಂಡಿದ್ದರೂ ಹಾಗೂ ಕಳ್ಳಸಾಗಣೆ ಮಾಡಲಾಗುತ್ತಿದ್ದರೂ ಚಿನ್ನವನ್ನು ಯಥೇಚ್ಛವಾಗಿ ಮಾರಾಟ ಮಾಡಲಾಗುತ್ತಿದೆ. ಇದು ಸಾಮಾನ್ಯವಾಗಿ ಚಿನ್ನದ ನಿರ್ವಹಣೆಗೆ ಸಂಬಂಧಿಸಿದ ಬಹುಮುಖ ಪಾತ್ರಗಳನ್ನು ಅವಲಂಬಿಸಿರುತ್ತದೆ.

ಇದನ್ನು ಉಳಿತಾತವಾಗಿ, ದ್ರವ್ಯತೆಗೆ ಒದಗಿಸುವ ಆಸ್ತಿಯಾಗಿ, ಹೂಡಿಕೆಯಾಗಿ, ಬೆಲೆ ಏರಿಳಿತದಿಂದ ರಕ್ಷಿಸುವ ಸಾಧನವಾಗಿ ಮತ್ತು ಸಾಮಾಜಿಕ ಆಸ್ತಿಯ ರೂಪದಲ್ಲಿ ನೋಡಲಾಗುತ್ತದೆ. ಚಿನ್ನವನ್ನು ಮಾರಾಟ ಮಾಡಬೇಡಿ ಎಂದು ಪ್ರಧಾನಿ ಕರೆ ನೀಡಿರುವುದು ಭಾರತೀಯ ಪ್ರಜೆಯ ಬದುಕಿನಲ್ಲಿ ಹಾಗೂ ಆತನ ಆರ್ಥಿಕತೆಯಲ್ಲಿ ಚಿನ್ನ ಎಷ್ಟು ಹಾಸುಹೊಕ್ಕಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಆ ಕರೆಗೆ ಜನರಿಂದ ಎಷ್ಟರ ಮಟ್ಟಿಗೆ ಸ್ಪಂದನೆ ಸಿಕ್ಕಿದೆ ಎಂಬುದನ್ನು ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ.

Next Story