
ಸಂಸತ್ತು ವಿಸ್ತರಿಸಿದರೆ ದಕ್ಷಿಣ ಭಾರತದ ರಾಜಕೀಯ ಪ್ರಭಾವವನ್ನು ಕೇವಲ ಅನುಪಾತದ ಶೇಕಡಾವಾರು ಪ್ರಮಾಣ ಕಾಯ್ದುಕೊಳ್ಳುವುದರಿಂದ ರಕ್ಷಿಸಲಾಗುವುದಿಲ್ಲ. ಯೋಗ್ಯ ಕಾನೂನುಗಳಲ್ಲದೇ ಇರುವಾಗ ಇದು ಕಷ್ಟ.
ಕ್ಷೇತ್ರ ಪುನರ್ ವಿಂಗಡಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ಕಾರದ ಹಿಂದಿನ ಪ್ರಸ್ತಾವನೆ ಸಂಸತ್ತಿನಲ್ಲಿ ಅಂಗೀಕಾರವಾಗುವುದು ವಿಫಲವಾದ ತಿಂಗಳುಗಳ ಬಳಿಕ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಕುರಿತಂತೆ ರಾಜಕೀಯ ಒಮ್ಮತವನ್ನು ಮೂಡಿಸಲು ಕೇಂದ್ರ ಸರ್ಕಾರ ಹೊಸ ಪ್ರಯತ್ನ ನಡೆಸುವುದು ನಿಶ್ಚಿತವಾಗಿದೆ. ಇನ್ನೊಂದು ಪ್ರಯತ್ನಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಕೂಡ ಇದೆ.
ಹೀಗೆ ಕ್ಷೇತ್ರ ಮರು ವಿಂಗಡಣೆ ಮಾಡುವುದರಿಂದ ದಕ್ಷಿಣ ಭಾರತದ ರಾಜ್ಯಗಳು ಲೋಕಸಭೆ ಸ್ಥಾನಗಳಲ್ಲಿ ತಮ್ಮ ಅಸ್ತಿತ್ವದಲ್ಲಿರುವ ಅನುಪಾತದ ಪಾಲುಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಸರ್ಕಾರ ಭರವಸೆ ನೀಡುತ್ತಿದೆ. ಹಿಂದಿನ ಪ್ರಸ್ತಾವನೆಯ ಪ್ರಕಾರ ಸದನದ ಸದಸ್ಯರ ಬಲವು 543ರಿಂದ 816ಕ್ಕೆ ಏರಿಕೆ ಕಾಣಲಿದೆ. ಆದರೆ ದಕ್ಷಿಣದ ಐದು ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಕೇರಳ ಮತ್ತು ತಮಿಳು ನಾಡಿನ ಪಾಲು 129ರಿಂದ 195 ಸ್ಥಾನಗಳಿಗೆ ಹೆಚ್ಚಲಿದೆ. ಇದರಿಂದ ಅವುಗಳ ಪಾಲು ಶೇ.24ರಲ್ಲಿಯೇ ಮುಂದುವರಿಯಲಿದೆ.
ಇದು ಕಟ್ಟುನಿಟ್ಟಿನ ಜನಸಂಖ್ಯಾ ಆಧಾರಿತ ಕ್ಷೇತ್ರ ಮರು ವಿಂಗಡಣೆಯ ಗಂಭೀರ ಪರಿಣಾಮಗಳಿಂದ ದಕ್ಷಿಣ ಭಾರತವನ್ನು ಖಂಡಿತವಾಗಿಯೂ ರಕ್ಷಿಸುತ್ತದೆ. ಆದರೆ ಅನುಪಾತದ ರಕ್ಷಣೆಯನ್ನು ʼರಾಜಕೀಯ ಪ್ರಭಾವದ ರಕ್ಷಣೆʼ ಎಂದು ತಪ್ಪಾಗಿ ಭಾವಿಸಬಾರದು.
ಭರವಸೆಯು ಕಾನೂನಾಗದು
ಸಂವಿಧಾನದ 82ನೇ ವಿಧಿಯಡಿ ರಚನೆಯಾದ ಕ್ಷೇತ್ರ ಮರುವಿಂಗಡಣೆ ಆಯೋಗವು ಸ್ವತಂತ್ರ ಶಾಸನಬದ್ಧ ಸಂಸ್ಥೆಯಾಗಿ ಕಾರ್ಯನಿರ್ಹಣೆ ಮಾಡುತ್ತದೆ. ಅದರ ಆದೇಶಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ. ಪಕ್ಷದ ಸಭೆಯಲ್ಲಿ ನೀಡಿದ ಅಥವಾ ಸಂಸತ್ತಿನ ಕಲಾಪದಲ್ಲಿ ಔಪಚಾರಿಕವಾಗಿ ತಿಳಿಸಿದ ರಾಜಕೀಯ ಭರವಸೆಯು ಪ್ರತ್ಯೇಕ ಸಂಸದೀಯ ಕಾಯ್ದೆಯಡಿ ರಚಿಸಲಾದ ಆಯೋಗವನ್ನು ಕಟ್ಟುಪಾಡಿಗೆ ಒಳಪಡಿಸಲು ಸಾಧ್ಯವಿಲ್ಲ.
ಪ್ರಮಾಣಾನುಪಾತದ ಕ್ಷೇತ್ರ ಮರುವಿಂಗಡಣೆ ಸ್ಥಗಿತಗೊಳಿಸುವುದನ್ನು ಕಾನೂನುಬದ್ಧವಾಗಿ ಜಾರಿಗೆ ತರಲು ಇರುವ ಏಕೈಕ ಮಾರ್ಗವೆಂದರೆ ಅದನ್ನು ಮಸೂದೆಯ ಮೂಲ ಪಠ್ಯದಲ್ಲೇ ಸೇರಿಸುವುದು; ಆದ್ದರಿಂದ ಬಿಜೆಪಿ ಮಿತ್ರಪಕ್ಷವಾದ ಟಿಡಿಪಿ ಸೇರಿದಂತೆ ದಕ್ಷಿಣದ ಪಕ್ಷಗಳು ಈ ಶಾಸನಾತ್ಮಕ ಪಠ್ಯವನ್ನು ಮಾತ್ರ ಏಕೈಕ ಸ್ವೀಕಾರಾರ್ಹ ಗ್ಯಾರಂಟಿ ಎಂದು ಪರಿಗಣಿಸಬೇಕು.
ಪ್ರಸ್ತುತ 543 ಸದಸ್ಯರ ಲೋಕಸಭೆಯಲ್ಲಿ ಬಹುಮತದ ಮಿತಿಯನ್ನು ಪರಿಗಣಿಸಿದರೆ ಬಹುಮತಕ್ಕೆ ಬೇಕಾಗುವ ಸದಸ್ಯರ ಸಂಖ್ಯೆ 272. ದಕ್ಷಿಣದ ಐದು ರಾಜ್ಯಗಳು ಒಟ್ಟಾಗಿ 129 ಸ್ಥಾನಗಳನ್ನು ಹೊಂದಿವೆ. ಅವು ಒಂದೇ ಬ್ಲಾಕ್ ಎಂದು ಊಹೆ ಮಾಡಿಕೊಂಡರೂ ಕೂಡ ಇನ್ನೂ 143 ಸಂಸದರ ಬೆಂಬಲದ ಅಗತ್ಯವಿರುತ್ತದೆ.
ಒಂದು ವೇಳೆ ಸಂಸತ್ತಿನ ಬಲಾಬಲವು 816 ಎಂದಾದರೆ ಸದನದ ಬಹುಮತದ ಮಿತಿಯು 409 ಆಗುತ್ತದೆ. ಆಗ ದಕ್ಷಿಣ ಭಾರತವು 195 ಸದಸ್ಯರ ಸಂಖ್ಯೆಯನ್ನು ಹೊಂದಿರಬಹುದು. ಆದರೆ ಈಗ ಬಹುಮತವನ್ನು ತಲುಪಲು ಅದಕ್ಕೆ ಹೆಚ್ಚುವರಿಯಾಗಿ ಇನ್ನೂ 214 ಸಂಸದರ ಬೆಂಬಲ ಬೇಕಾಗುತ್ತದೆ.
ದಕ್ಷಿಣ ಭಾರತದ ಶೇಕಡಾವಾರು ಪ್ರಮಾಣವು ಬಹುತೇಕ ಬದಲಾಗದೆ ಉಳಿದರೂ, ಈ ಪ್ರದೇಶದ ಹೊರಗೆ ಅದು ಒಗ್ಗೂಡಿಸಬೇಕಾದ ಸಂಸತ್ ಸದಸ್ಯರ ಸಂಖ್ಯೆಯು 71 ರಷ್ಟು ಹೆಚ್ಚಾಗುತ್ತದೆ.
ಸಂಖ್ಯಾಬಲವೇ ನಿರ್ಣಾಯಕ
ಇದು ಸದನದಲ್ಲಿ ದಕ್ಷಿಣ ಭಾರತದ ಒಟ್ಟು ಪಾಲನ್ನು ಕಡಿಮೆ ಮಾಡಿದೆ ಎಂದರ್ಥವಲ್ಲ; ನಿಜವಾದ ಪ್ರಮಾಣಾನುಪಾತದ ಸ್ಥಗಿತದಿಂದ ಈ ಪಾಲು ಕಡಿಮೆಯಾಗಿಲ್ಲ, ಆದರೆ ರಾಜಕೀಯ ಪ್ರಾಬಲ್ಯಕ್ಕಾಗಿ ಸಂಸತ್ತಿನಲ್ಲಿ ಪ್ರಾತಿನಿಧ್ಯವು ಹೇಗೆ ಬಳಕೆಯಾಗುತ್ತದೆ ಎಂಬುದು ಇಲ್ಲಿನ ಕಳಕಳಿ. ಏಕೆಂದರೆ ಸರಕಾರ ರಚನೆ, ಮೈತ್ರಿ ಉಳಿಸಿಕೊಳ್ಳುವಿಕೆ, ಕಾಯ್ದೆಯ ಅಂಗೀಕಾರ ಹಾಗೂ ರಾಜಕೀಯ ಬೆಂಬಲದ ಚೌಕಾಶಿಗಳೆಲ್ಲವೂ ಸಂಸತ್ತಿನ ಸಂಖ್ಯಾಬಲದ ಮೇಲೆಯೇ ನಿರ್ಧಾರವಾಗುತ್ತವೆ.
ಬಹುಮತದ ಮಿತಿ ಮತ್ತು ಪ್ರಾದೇಶಿಕ ಸೀಟುಗಳ ಗುಂಪುಗಳು; 543 v/s 816 ಸೀಟುಗಳ ಸದನ
ಮೂಲ: ಭಾರತದ ಚುನಾವಣಾ ಆಯೋಗ
ದಕ್ಷಿಣ ಭಾರತವು ಒಂದೇ ರೀತಿಯ ರಾಜಕೀಯ ಬ್ಲಾಕ್ ಆಗಿಲ್ಲದೇ ಇರುವುದರಿಂದ ಇದಕ್ಕೆ ವಿಶೇಷ ಅರ್ಥವಿದೆ. ಇದರ ವ್ಯಾಪ್ತಿಯಲ್ಲಿರುವ ಐದು ರಾಜ್ಯಗಳು ವಿಭಿನ್ನ ಮತ್ತು ಆಗಾಗ್ಗೆ ಪರಸ್ಪರ ಪೈಪೋಟಿಗೆ ಇಳಿಯುವ ಪಕ್ಷ ವ್ಯವಸ್ಥೆಗಳನ್ನು ಹೊಂದಿವೆ. ಏತನ್ಮಧ್ಯೆ, ವಿಸ್ತರಿಸಲ್ಪಟ್ಟ ಸದನವು ಕೆಲವೇ ಜನಸಂಖ್ಯೆ ಹೊಂದಿರುವ ಉತ್ತರ ರಾಜ್ಯಗಳಲ್ಲಿ ಅತಿ ದೊಡ್ಡ ಪ್ರಮಾಣದ ಸ್ಥಾನಗಳನ್ನು ಸೃಷ್ಟಿಸುತ್ತದೆ. ಪ್ರಸ್ತಾವಿತ ವ್ಯವಸ್ಥೆಯಡಿಯಲ್ಲಿ, ಉತ್ತರ ಪ್ರದೇಶ ಮತ್ತು ಬಿಹಾರಗಳು ಒಟ್ಟಾಗಿ ಸುಮಾರು 180 ಸ್ಥಾನಗಳನ್ನು ಹೊಂದಿದ್ದರೆ, ಎಲ್ಲಾ ಐದು ದಕ್ಷಿಣ ರಾಜ್ಯಗಳಲ್ಲಿ ಒಟ್ಟು 195 ಸ್ಥಾನಗಳಿರುತ್ತವೆ. ನಾಲ್ಕು ದೊಡ್ಡ ಹಿಂದಿ ಪ್ರಾಬಲ್ಯದ ರಾಜ್ಯಗಳು ಒಟ್ಟಾಗಿ ಸುಮಾರು 262 ಸ್ಥಾನಗಳನ್ನು ಹೊಂದಿರುತ್ತವೆ.
ಹೀಗಾಗಿ, ದಕ್ಷಿಣದ ಶೇಕಡಾವಾರು ಪ್ರಮಾಣವನ್ನು ಕಾಯ್ದುಕೊಳ್ಳುವುದು ವಿಸ್ತೃತ ಸಂಸತ್ತಿನ ರಾಜಕೀಯ ಭೌಗೋಳಿಕತೆಯಲ್ಲಿ ಅದರ ಚೌಕಾಶಿ ಸ್ಥಾನವನ್ನು ಅನಿವಾರ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ರಾಜಕೀಯ ಹಿನ್ನಡೆಯ ಅಪಾಯ
ದಕ್ಷಿಣದ ಕಳಕಳಿಗಳನ್ನು ಕೇವಲ ಜನಸಂಖ್ಯೆಯ ಲೆಕ್ಕಾಚಾರಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲದಿರುವುದಕ್ಕೆ ಒಂದು ಐತಿಹಾಸಿಕ ಕಾರಣವೂ ಇದೆ.
ರಾಜ್ಯಗಳ ನಡುವಿನ ಕ್ಷೇತ್ರ ಮರುವಿಂಗಡಣೆಯ ಮೇಲಿನ ಸಂವಿಧಾನಾತ್ಮಕ ಸ್ಥಗಿತವನ್ನು 1976ರಲ್ಲಿ ಜಾರಿಗೆ ತರಲಾಯಿತು ಮತ್ತು ತರುವಾಯ 2026ರ ನಂತರದ ಮೊದಲ ಜನಗಣತಿಯವರೆಗೆ ವಿಸ್ತರಿಸಲಾಯಿತು. ಇದು ಒಂದು ಸ್ಪಷ್ಟ ತತ್ವವನ್ನು ಆಧರಿಸಿತ್ತು: ಜನಸಂಖ್ಯಾ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ರಾಜ್ಯಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಮೂಲಕ ದಂಡನೆಗೆ ಗುರಿಪಡಿಸಬಾರದು ಎಂಬುದು.
ಭಾರತದ ರಾಷ್ಟ್ರೀಯ ಕುಟುಂಬ ಯೋಜನೆ ಮತ್ತು ಅಭಿವೃದ್ಧಿಯ ಗುರಿಗಳಿಗೆ ದಕ್ಷಿಣದ ರಾಜ್ಯಗಳು ತೌಲನಿಕವಾಗಿ ಯಶಸ್ವಿಯಾಗಿ ಸ್ಪಂದಿಸಿದವು. ಇಂದು ಅವುಗಳ ಕಡಿಮೆ ಜನಸಂಖ್ಯಾ ಬೆಳವಣಿಗೆಯು ಆ ಸಾಧನೆಗಳ ಪರಿಣಾಮವೇ ಆಗಿದೆ. ಸೂಕ್ತ ರಕ್ಷಣೆಗಳಿಲ್ಲದೆ ಜನಸಂಖ್ಯೆಯನ್ನೇ ಪ್ರಾತಿನಿಧ್ಯದ ಮುಖ್ಯ ಆಧಾರವನ್ನಾಗಿ ಮರಳಿ ಪರಿಗಣಿಸುವುದು, ಈ ಯಶಸ್ವಿ ಜನಸಂಖ್ಯಾ ಸ್ಥಿತ್ಯಂತರವನ್ನು ರಾಜಕೀಯ ಹಿನ್ನಡೆಯಾಗಿ ಬದಲಾಯಿಸುವ ಅಪಾಯವನ್ನು ಒಡ್ಡುತ್ತದೆ.
ಪ್ರಮಾಣಾನುಪಾತದ ಸ್ಥಗಿತಗೊಳಿಸುವಿಕೆ ಈ ಸಮಸ್ಯೆಯನ್ನು ಒಪ್ಪಿಕೊಳ್ಳುತ್ತದೆ, ಆದರೆ ಭಾಗಶಃ ಮಾತ್ರ. ಇದು ದಕ್ಷಿಣದ ರಾಜ್ಯಗಳ ಪಾಲಿನಲ್ಲಿ ತಕ್ಷಣ ಕುಸಿತವಾಗುವುದನ್ನು ತಡೆಯುತ್ತದೆಯೇ ಹೊರತು, ಜನಸಂಖ್ಯೆ, ಅಭಿವೃದ್ಧಿಯ ಸಾಧನೆ, ಒಕ್ಕೂಟ ವ್ಯವಸ್ಥೆಯ ಸಮತೋಲನ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ಹೇಗೆ ಸಮನ್ವಯಗೊಳಿಸಬೇಕು ಎಂಬ ವಿಶಾಲ ಪ್ರಶ್ನೆಗೆ ಉತ್ತರ ನೀಡುವುದಿಲ್ಲ.
ಬಹುಮತದ ಮಿತಿ ಈಗಿನ ಸದನ (543 ಸ್ಥಾನಗಳು) ಪ್ರಸ್ತಾಪಿತ ಸದನ (816 ಸೀಟು)
ಮೂಲ: ಭಾರತದ ಚುನಾವಣಾ ಆಯೋಗ
ಸರ್ಕಾರಿ ಭರವಸೆಯ ಕಾನೂನು ಸ್ಥಿತಿ
ಇದು ಸರ್ಕಾರದ ಭರವಸೆಯ ಕಾನೂನು ಸ್ಥಿತಿಯನ್ನು ಅತ್ಯಂತ ನಿರ್ಣಾಯಕವನ್ನಾಗಿ ಮಾಡುತ್ತದೆ. ಯಾವುದೇ ದಕ್ಷಿಣದ ರಾಜ್ಯವೂ ತನ್ನ ಪ್ರಮಾಣಾನುಪಾತದ ಪಾಲನ್ನು ಕಳೆದುಕೊಳ್ಳುವುದಿಲ್ಲ ಎಂಬ ರಾಜಕೀಯ ಬದ್ಧತೆಗಳು ಜಾರಿಗೆ ತರಬಹುದಾದ ಶಾಸನಾತ್ಮಕ ಗ್ಯಾರಂಟಿಗೆ ಪರ್ಯಾಯವಾಗಲು ಸಾಧ್ಯವಿಲ್ಲ.
ದಕ್ಷಿಣದ ಪ್ರಾತಿನಿಧ್ಯವನ್ನು ರಕ್ಷಿಸಲು ಸರ್ಕಾರ ನಿಜಕ್ಕೂ ಬದ್ಧವಾಗಿದ್ದರೆ, ಆ ತತ್ವವನ್ನು ಮುಂದಿನ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಆಳುವ ಸಂವಿಧಾನಾತ್ಮಕ ಮತ್ತು ಶಾಸನಬದ್ಧ ಚೌಕಟ್ಟಿನಲ್ಲಿ ಸ್ಪಷ್ಟವಾಗಿ ಸೇರಿಸಬೇಕು.
ಆದ್ದರಿಂದ, ಕೇಂದ್ರ ಸರ್ಕಾರವನ್ನು ಬೆಂಬಲಿಸುವ ಪಕ್ಷಗಳು ಸೇರಿದಂತೆ ದಕ್ಷಿಣದ ಪಕ್ಷಗಳು ಕೇವಲ ರಾಜಕೀಯ ಭರವಸೆಗಳನ್ನೇ ನೆಚ್ಚಿಕೊಳ್ಳದೆ, ಅಸಲಿ ಶಾಸನಾತ್ಮಕ ಪಠ್ಯವನ್ನು ಮೌಲ್ಯಮಾಪನ ಮಾಡಬೇಕು.
ಬಹು-ಅಳತೆಗೋಲುಗಳ ಸೂತ್ರ
ಮರುಜೀವ ಪಡೆದಿರುವ ಈ ಚರ್ಚೆಯು, ರಾಜ್ಯಗಳ ನಡುವೆ ರಾಜಕೀಯ ಪ್ರಾತಿನಿಧ್ಯವನ್ನು ಹಂಚಿಕೆ ಮಾಡಲು ಜನಸಂಖ್ಯೆಯೊಂದೇ ಪ್ರಮುಖ ಆಧಾರವಾಗಿ ಉಳಿಯಬೇಕೇ ಎಂಬುದನ್ನು ಮರುಪರಿಶೀಲಿಸುವ ಅವಕಾಶವನ್ನು ನೀಡುತ್ತದೆ.
ಬಹು-ಅಳತೆಗೋಲುಗಳ ಸೂತ್ರ ಹೇಗೆ ನೆರವಾಗುತ್ತದೆ ಎಂಬುದನ್ನು ಗಮನಿಸೋಣ:
• ಜನಸಂಖ್ಯೆಯು ಪ್ರಾತಿನಿಧ್ಯದ ಏಕೈಕ ಮಾನದಂಡವಾಗಬಾರದು.
• ಐರೋಪ್ಯ ಒಕ್ಕೂಟದ 'ಇಳಿಕೆ ಪ್ರಮಾಣಾನುಪಾತ' ಮಾದರಿ: ದೊಡ್ಡ ರಾಜ್ಯಗಳು ಹೆಚ್ಚಿನ ಪ್ರಾತಿನಿಧ್ಯ ಪಡೆದರೂ, ತಲಾ ಆಧಾರದಲ್ಲಿ ಕಡಿಮೆ ಪಾಲನ್ನು ಪಡೆಯುತ್ತವೆ.
• ಇದು ದೊಡ್ಡ ರಾಜ್ಯಗಳ ಪ್ರಾಬಲ್ಯದ ಭಯವನ್ನು ನಿವಾರಿಸಿ, ಜನಸಂಖ್ಯೆಯ ನಡುವೆ ಸಮತೋಲನ ತರುತ್ತದೆ.
• ಹಣಕಾಸು ಆಯೋಗವು ಈಗಾಗಲೇ ಕೇವಲ ಜನಸಂಖ್ಯೆಯನ್ನು ನೆಚ್ಚಿಕೊಳ್ಳದೆ, ಬಹು-ಅಳತೆಗೋಲುಗಳನ್ನು ಬಳಸಿ ಹಣ ಹಂಚಿಕೆ ಮಾಡುತ್ತಿದೆ.
• 16ನೇ ಹಣಕಾಸು ಆಯೋಗವು ಜಿಡಿಪಿ ಕೊಡುಗೆಗೆ ಶೇ. 10 ರಷ್ಟು ಆದ್ಯತೆ ನೀಡಿದೆ.
• ಭಾರತವು ಸಂಸದೀಯ ಸೀಟುಗಳ ಹಂಚಿಕೆಯಲ್ಲೂ ಜನಸಂಖ್ಯಾ ನಿಯಂತ್ರಣದ ಸಾಧನೆ ಮತ್ತು ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಪರಿಗಣಿಸಬಹುದು.
• ಇನ್ನೊಂದು ಪರಿಶೀಲಿಸಬಹುದಾದ ಪರ್ಯಾಯ ಮಾರ್ಗವೆಂದರೆ 'ಇಳಿಕೆ ಪ್ರಮಾಣಾನುಪಾತ'. ಯುರೋಪ್ ಸಂಸತ್ತಿನ ಈ ತತ್ವವನ್ನು ಬಳಸುತ್ತದೆ; ಇದರಿಂದಾಗಿ ದೊಡ್ಡ ಸದಸ್ಯ ರಾಷ್ಟ್ರಗಳು ಒಟ್ಟಾರೆಯಾಗಿ ಹೆಚ್ಚಿನ ಸೀಟುಗಳನ್ನು ಪಡೆದರೂ, ಸಣ್ಣ ರಾಷ್ಟ್ರಗಳು ಪ್ರತಿಯೊಬ್ಬ ಪ್ರಜೆಯ ಲೆಕ್ಕಾಚಾರದಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಪ್ರಾತಿನಿಧ್ಯ ಪಡೆಯುತ್ತವೆ. ಇದರ ಉದ್ದೇಶ ಜನಸಂಖ್ಯೆಯನ್ನು ಅಲಕ್ಷಿಸುವುದಲ್ಲ, ಬದಲಿಗೆ ಕೆಲವು ದೊಡ್ಡ ರಾಜ್ಯಗಳು ಇಡೀ ಒಕ್ಕೂಟವನ್ನು ತಮ್ಮ ಸಂಖ್ಯಾಬಲದಿಂದ ಮೆಟ್ಟಿನಿಲ್ಲುವುದನ್ನು ತಡೆಯುವುದು ಮತ್ತು ಜನಸಂಖ್ಯೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದಾಗಿದೆ.
• ಜನಸಂಖ್ಯೆಯೊಂದನ್ನೇ ಏಕೈಕ ಮಾನದಂಡವನ್ನಾಗಿ ಮಾಡುವ ಬದಲು, ಭಾರತವು ಪ್ರಾತಿನಿಧ್ಯಕ್ಕಾಗಿ ಬಹು-ಅಳತೆಗೋಲುಗಳ ಸೂತ್ರವನ್ನು ಅನ್ವೇಷಿಸುವುದು ಸೂಕ್ತ.
• ಭಾರತದ ವಿತ್ತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಸಮತೋಲನಕ್ಕೆ ಈಗಾಗಲೇ ನಿದರ್ಶನವಿದೆ. ಹಣಕಾಸು ಆಯೋಗದ ರಾಜ್ಯಗಳ ನಡುವಿನ ಶೇಕಡಾವಾರು ಹಣ ಹಂಚಿಕೆಯು ಕೇವಲ ಜನಸಂಖ್ಯೆಯನ್ನು ಆಧರಿಸಿ ಸಂಪನ್ಮೂಲಗಳನ್ನು ಹಂಚುವುದಿಲ್ಲ. ನ್ಯಾಯ ಸಮ್ಮತತೆ, ಅಗತ್ಯತೆ ಮತ್ತು ಕಾರ್ಯಕ್ಷಮತೆಯನ್ನು ಸಮನ್ವಯಗೊಳಿಸಲು ಜನಸಂಖ್ಯೆ, ವಿಸ್ತೀರ್ಣ, ಜನಸಂಖ್ಯಾ ನಿಯಂತ್ರಣದ ಸಾಧನೆ, ಆದಾಯದ ಅಂತರ ಮತ್ತು ಇತರ ಮಾನದಂಡಗಳಿಗೆ ವಿಭಿನ್ನ ಆದ್ಯತೆಗಳನ್ನು ನೀಡಲಾಗುತ್ತದೆ.
ಹದಿನಾರನೇ ಹಣಕಾಸು ಆಯೋಗವು ಶೇಕಡಾವಾರು ಹಣ ಹಂಚಿಕೆಯಲ್ಲಿ ಜಿಡಿಪಿಗೆ ಶೇ. 10 ರಷ್ಟು ಆದ್ಯತೆ ನೀಡುವ ಮೂಲಕ ಈ ತರ್ಕವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡಿದೆ. ಹಲವು ನ್ಯಾಯಸಮ್ಮತ ಸಂವಿಧಾನಾತ್ಮಕ ಮತ್ತು ಅಭಿವೃದ್ಧಿಯ ಹಿತಾಸಕ್ತಿಗಳನ್ನು ಸಮತೋಲನಕ್ಕೆ ಒಳಪಡಿಸಬೇಕಾಗಿ ಬಂದಾಗ, ಒಕ್ಕೂಟ ವ್ಯವಸ್ಥೆಯ ಸೂತ್ರವು ಕೇವಲ ಒಂದೇ ಅಂಶದ ಮೇಲೆ ಅವಲಂಬಿತವಾಗಿರಬೇಕಿಲ್ಲ ಎಂಬುದು ಇದರ ಹಿಂದಿರುವ ಪ್ರಮುಖ ತತ್ವವಾಗಿದೆ.
ರಾಜ್ಯಸಭೆಯ ಭಾಗಿದಾರಿಕೆ
ಇಂತಹದ್ದೇ ಚರ್ಚೆಯು ರಾಜಕೀಯ ಪ್ರಾತಿನಿಧ್ಯಕ್ಕೂ ಬೇಕಾಗುತ್ತದೆ. ಜನಸಂಖ್ಯಾ ನಿಯಂತ್ರಣದ ಸಾಧನೆ, ಒಕ್ಕೂಟ ವ್ಯವಸ್ಥೆಯ ಸಮತೋಲನ ಅಥವಾ ಎಚ್ಚರಿಕೆಯಿಂದ ರೂಪಿಸಲಾದ ಇತರ ಅಳತೆಗೋಲುಗಳಿಗೆ ಸೂಕ್ತ ಆದ್ಯತೆ ನೀಡುವ ಮೂಲಕ, ಜನಸಂಖ್ಯೆಯನ್ನು ಮುಖ್ಯ ಮಾನದಂಡವನ್ನಾಗಿ ಉಳಿಸಿಕೊಳ್ಳಬಹುದು. ಆದ್ದರಿಂದ, ಸ್ವಾತಂತ್ರ್ಯದ ನಂತರದ ಅತ್ಯಂತ ಪ್ರಭಾವಶಾಲಿ ರಾಜಕೀಯ ಅಧಿಕಾರ ಮರುಹಂಚಿಕೆ ಪ್ರಕ್ರಿಯೆಯನ್ನು ಭಾರತ ಕೈಗೆತ್ತಿಕೊಳ್ಳುವ ಮೊದಲು, 'ಇಳಿಕೆ ಪ್ರಮಾಣಾನುಪಾತ' ಮತ್ತು ಬಹು-ಅಳತೆಗೋಲುಗಳ ಪ್ರಾತಿನಿಧ್ಯದ ಮಾದರಿಯನ್ನು ಗಂಭೀರವಾಗಿ ಪರಿಶೀಲಿಸಬೇಕು.
ರಾಜ್ಯಸಭೆಯನ್ನೂ ಸಹ ಈ ಚರ್ಚೆಯ ಭಾಗವಾಗಿ ಮಾಡಬೇಕು. ಲೋಕಸಭೆಯು ಸಂಪೂರ್ಣವಾಗಿ ಜನಸಂಖ್ಯೆಯನ್ನೇ ಆಧರಿಸಿದರೆ, ಮೇಲ್ಮನೆಯ ಒಕ್ಕೂಟ ಸ್ವರೂಪವನ್ನು ಬಲಪಡಿಸುವುದು ಹಾಗೂ ರಾಜ್ಯಗಳಿಗೆ ಹೆಚ್ಛು ಸಮಾನ ಪ್ರಾತಿನಿಧ್ಯ ನೀಡುವ ಬಗ್ಗೆ ಪರಿಶೀಲಿಸುವುದು ಒಂದು ಸಾಂಸ್ಥಿಕ ಸಮತೋಲನವನ್ನು ಒದಗಿಸುತ್ತದೆ.
ಅಂತಿಮವಾಗಿ, ಕ್ಷೇತ್ರ ಮರುವಿಂಗಡಣೆಯು ಕೇವಲ 816 ಸೀಟುಗಳನ್ನು ಭಾರತದ ರಾಜ್ಯಗಳ ನಡುವೆ ಹಂಚಿಕೆ ಮಾಡುವ ಕೆಲಸವಲ್ಲ. ಅದು ಭಾರತೀಯ ಒಕ್ಕೂಟ ವ್ಯವಸ್ಥೆಯು ಯಾವ ಪ್ರಾತಿನಿಧ್ಯಕ್ಕೆ ಪುರಸ್ಕಾರ ನೀಡಬೇಕು ಮತ್ತು ಯಾವುದನ್ನು ರಕ್ಷಿಸಬೇಕು ಎಂಬುದನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕೂಡ ಆಗಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


