
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಪ್ರಯೋಗಿಸಲು ಉಳಿದಿರುವ ಅಂತಿಮ ಅಸ್ತ್ರವೆಂದರೆ ʼಆಪರೇಷನ್ ಎಕಾನಮಿಕ್ ಔಟ್ಕಾಸ್ಟ್ʼ ಮಾತ್ರ.
ಆರ್ಥಿಕವಾಗಿ ಇರಾನ್ ಕತ್ತು ಹಿಸುಕಲು ಪ್ರಯತ್ನ ನಡೆಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ವ್ಯಾಪಾರ ಮುಂದುವರಿಸುತ್ತಿರುವ ರಾಷ್ಟ್ರಗಳಿಗೂ ಬೆದರಿಕೆ ಹಾಕುತ್ತಿದ್ದಾರೆ. ಹಾಗೆ ಮಾಡುವ ಮೂಲಕ ಕಳೆದ ಆರು ತಿಂಗಳ ಹಿಂದೆ ಇಸ್ರೇಲ್ ಜೊತೆ ಆರಂಭಿಸಿರುವ ಯುದ್ಧವನ್ನು ಇನ್ನಷ್ಟು ವಿಸ್ತರಿಸಲು ಸಂಕಲ್ಪ ಮಾಡಿದಂತೆ ಕಾಣುತ್ತಿದೆ.
ಇರಾನ್‌ನ್ನು ಆರ್ಥಿಕವಾಗಿ ಉಸಿರುಗಟ್ಟಿಸುವಂತೆ ಮಾಡಲು ಟ್ರಂಪ್ ಅವರು ಬಳಸುತ್ತಿರುವ ಪದಗುಚ್ಛ ʼಆಪರೇಷನ್ ಎಕಾನಮಿಕ್ ಔಟ್ಕಾಸ್ಟ್.ʼ ಇರಾನ್ ಯಾವುದೇ ರೀತಿಯ ಆರ್ಥಿಕ ರಿಯಾಯ್ತಿ ಪಡೆಯದೇ ಇರುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಇದು ಹತಾಶೆಯ ಸ್ಪಷ್ಟ ಅಭಿವ್ಯಕ್ತಿಯಾಗಿದೆ. ತೀವ್ರತರದ ಮಿಲಿಟರಿ ದಾಳಿಯಿಂದ ಇರಾನ್ ಆಘಾತಕ್ಕೆ ಒಳಗಾಗಲಿದೆ ಎಂಬುದು ಅಮೆರಿಕ ಮತ್ತು ಇಸ್ರೇಲ್ ಭಾವನೆಯಾಗಿತ್ತು. ಆ ಬಳಿಕ ಇರಾನ್ ತಮ್ಮ ಮುಂದೆ ಮಂಡಿಯೂರುತ್ತದೆ ಎಂಬುದು ಅವರ ನಿರೀಕ್ಷೆಯಾಗಿತ್ತು.
ಆದರೆ ಅದು ಹುಸಿಯಾಯಿತು. ಟ್ರಂಪ್ ಮತ್ತು ಅವರ ಮಿತ್ರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಇರಾನ್ ಸುಲಭವಾಗಿ ಮಣಿಯುವ ರಾಷ್ಟ್ರವಲ್ಲ ಎಂಬುದು ಸಾಬೀತಾಯಿತು. ಅದು ಎರಡೂ ರಾಷ್ಟ್ರಗಳ ಪಾಲಿಗೆ ಆಘಾತಕಾರಿ ಸಂಗತಿ. ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಹೋಗುವಂತೆ ಮಾಡಿ ಇರಾನ್ ಅಭೂತಪೂರ್ವ ಎನ್ನುವ ರೀತಿಯಲ್ಲಿ ಪ್ರತಿರೋಧ ಒಡ್ಡಿತು. ಹೊರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ ಹೇರುವ ಮೂಲಕ ಇಡೀ ಜಗತ್ತಿನ ಅರ್ಥ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿತು. ಇದರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದು ಅಮೆರಿಕ ಮತ್ತು ಇಸ್ರೇಲ್. ಅಂತಿಮವಾಗಿ ಅವು ಮಿಲಿಟರಿ ದಾಳಿಯಿಂದ ಹಿಂದೆ ಸರಿಯಲೇ ಬೇಕಾಯಿತು.
ಟ್ರಂಪ್ ಉಲ್ಟಾ ಪ್ರಕ್ರಿಯೆ
ಘಟಾನುಘಟಿಗಳ ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಮೊದಲು ನಡೆಸುವುದು ಮಾತುಕತೆಯ ಪ್ರಯತ್ನ. ಅದೇನಾದರೂ ವಿಫಲವಾದರೆ ಆಗ ಆರ್ಥಿಕ ದಿಗ್ಬಂಧನವನ್ನು ವಿಧಿಸಲಾಗುತ್ತದೆ. ಒಂದು ವೇಳೇ ಅದೂ ಕೈಗೂಡದೇ ಹೋದರೆ ಅಂತಿಮವಾಗಿ ಮಿಲಿಟರಿ ದಾಳಿಯ ಆಯ್ಕೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಆದರೆ ಟ್ರಂಪ್ ಮಹಾಶಯ ಮಾಡಿದ್ದೆಲ್ಲವೂ ಉಲ್ಟಾ. ಅವರು ತಮ್ಮ ಅನಿರೀಕ್ಷಿತ ಹಾಗೂ ತರ್ಕಬದ್ಧವಲ್ಲದ ಧೋರಣೆಗೆ ತಕ್ಕಂತೆ ಮಾತುಕತೆಗಳ ಮಧ್ಯದಲ್ಲಿಯೇ ಮಿಲಿಟರಿ ದಾಳಿಯನ್ನು ಆಯ್ಕೆ ಮಾಡಿಕೊಂಡರು. ಆ ಪ್ರಯತ್ನವೆಲ್ಲ ವಿಫಲವಾದ ಬಳಿಕ ಈಗ ಅವರು ಇರಾನ್ ಮೇಲೆ ಆರ್ಥಿಕ ದಿಗ್ಬಂಧನದ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ನಡೆದ ಮೊದಲ ಹನ್ನೆರಡು ದಿನಗಳ ಮಿಲಿಟರಿ ದಾಳಿಯ ಬಳಿಕ ಎರಡನೇ ಬಾರಿಗೆ ಯುದ್ಧ ಆರಂಭಿಸಿದ ಟ್ರಂಪ್ ಆಡಳಿತವು ತನ್ನ ಘೋಷಿತ ಗುರಿಗಳನ್ನು ಈಡೇರಿಸಿಕೊಳ್ಳದೇ ಹೋರಾಟ ನಿಲ್ಲಿಸಲು ಸಾಧ್ಯವಿರಲಿಲ್ಲ. ಯಾಕೆಂದರೆ ಅಂತಹ ನಡೆಯಿಂದ ಸೋಲು ಒಪ್ಪಿಕೊಂಡಂತಾಗುತ್ತಿತ್ತು.
ಅದಾದ ತರುವಾಯ ಟ್ರಂಪ್ ಯುದ್ಧವನ್ನು ಕೊನೆಗೊಳಿಸುವ ಮಾರ್ಗವಾಗಿ ಮಾತುಕತೆಗೆ ಮುಂದಾದರು. ಆಗ ಇರಾನ್ ಮಿಲಿಟರಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪುಡಿಗಟ್ಟಿರುವುದಾಗಿ ಬಡಾಯಿ ಕೊಚ್ಚಿಕೊಂಡರು. ಅಮೆರಿಕ ಎಷ್ಟರಮಟ್ಟಿಗೆ ಇರಾನ್ನ್ನು ಕಡೆಗಣಿಸಿಬಿಟ್ಟಿತ್ತೆಂದರೆ ಮಾತುಕತೆ ಸಂದರ್ಭದಲ್ಲಿಯೂ ಟೆಹ್ರಾನ್ ತೋರಿದ ಪ್ರತಿರೋಧವನ್ನು ಸಹಿಸಿಕೊಳ್ಳಲಾಗದೇ ವಿಲವಿಲ ಒದ್ದಾಡಿತು.
ಕೈಕೊಟ್ಟ ಟ್ರಂಪ್ ಇರಾನ್ ಕಾರ್ಯತಂತ್ರ
ಅಷ್ಟೆಲ್ಲ ಬೆಳವಣಿಗೆಗಳ ಬಳಿಕ ಇರಾನ್ ತನ್ನ ಬಳಿಯಿರುವ ಸಮೃದ್ಧ ಯುರೇನಿಯಂ ದಾಸ್ತಾನು ಬಿಟ್ಟುಕೊಡಬೇಕು ಮತ್ತು ಪರಮಾಣು ಯೋಜನೆಯನ್ನು ಅಂತ್ಯಗೊಳಿಸಬೇಕು ಎಂದು ಆ ದೇಶದ ಸಂಧಾನಕಾರರ ಮೇಲೆ ಒತ್ತಡ ಹೇರಿತು. ಬಲವಂತದ ತಂತ್ರ ಪ್ರಯೋಗ ಮಾಡಿತು. ಆದರೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಬಗ್ಗಲಿಲ್ಲ. ನಮ್ಮ ದೇಶ ಯಾವುದೇ ಬಲವಂತಕ್ಕೆ ಮಣಿದು ಒಪ್ಪಂದಕ್ಕೆ ಸಹಿಹಾಕುವ ಮಾತೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಮತ್ತೊಂದು ಸುತ್ತಿನ ಮಾತುಕತೆಗಳೂ ವಿಫಲವಾದ ಬಳಿಕ ಟ್ರಂಪ್ ಮತ್ತು ಅವರ ತಂಡ ಮಾತುಕತೆ ಕೆಲಸ ಮಾಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದು ಅನ್ಯ ಮಾರ್ಗ ಅನುಸರಿಸುವ ಆಯ್ಕೆ ಮಾಡಿಕೊಂಡಿತು. ನವೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಬೇಗ ಈ ಸಮರದಲ್ಲಿ ಗೆಲುವು ಸಾಧಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಈಗ ಅವರು ಆರಿಸಿಕೊಂಡಿರುವ ಅಸ್ತ್ರ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರುವುದು. ʼಆಪರೇಷನ್ ಎಕಾನಮಿಕ್ ಔಟ್ಕಾಸ್ಟ್ʼ ಮೂಲಕ ಆ ದೇಶವನ್ನು ಆರ್ಥಿಕವಾಗಿ ಉಸಿರುಗಟ್ಟಿಸುವಂತೆ ಮಾಡುತ್ತೇನೆ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ. ಅಮೆರಿಕದ ಮತದಾರರು ತಮ್ಮ ಈ ಕಥೆಯನ್ನು ನಂಬುತ್ತಾರೆ ಎಂಬುದು ಅವರ ಆಶಯ.
ಸೆಡ್ಡು ಹೊಡೆದ ಚೀನಾ
ಈ ಆರ್ಥಿಕ ಯುದ್ಧದಲ್ಲಿ ಅವರು ಯಶಸ್ವಿಯಾಗಬೇಕಾದರೆ ಈ ಯುದ್ಧದಲ್ಲಿ ಯಾವುದೇ ಸಂಬಂಧ ಇಲ್ಲದ ಜಾಗತಿಕ ರಾಷ್ಟ್ರಗಳ ಸಹಕಾರ ಅಮೆರಿಕಕ್ಕೆ ಬೇಕಾಗುತ್ತದೆ. ಇಂತಹ ರಾಷ್ಟ್ರಗಳ ಸಾಲಿನಲ್ಲಿ ಟ್ರಂಪ್ ಯೋಜನೆಯನ್ನು ಬುಡಮೇಲು ಮಾಡಬಲ್ಲ ಏಕೈಕ ರಾಷ್ಟ್ರವೆಂದರೆ ಅದು ಚೀನಾ.
ಇರಾನ್ನ್ನು ಆರ್ಥಿಕವಾಗಿ ಕುಗ್ಗಿಸುವ ಅಮೆರಿಕದ ಕ್ರಮ ಯಾವ ಕಾರಣಕ್ಕೂ ಸಮ್ಮತಾರ್ಹವಲ್ಲವೆಂದು ಚೀನಾದ ಶೀ ಜಿನ್ಪಿಂಗ್ ಸರ್ಕಾರವು ತಿರಸ್ಕರಿಸಿದೆ. ಆ ಮೂಲಕ ಟ್ರಂಪ್ ಅವರ ಇಚ್ಛೆಗೆ ತಲೆತಗ್ಗಿಸುವ ಇರಾದೆ ತನ್ನದಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಒಂದು ವೇಳೆ ಇರಾನ್ ಜೊತೆ ಚೀನಾ ತನ್ನ ವ್ಯಾಪಾರವನ್ನು ಮುಂದುವರಿಸಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಟ್ರಂಪ್ಗೆ ಇದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಹಿಂದಿನ ಸಂದರ್ಭಗಳಲ್ಲಿ ಚೀನಾ ಪರಸ್ಪರ ಸುಂಕಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದಾಗ ಅಮೆರಿಕ ಹಿಂದಡಿ ಇಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸೆಪ್ಟೆಂಬರ್ 24ರಂದು ಶೀ ಜಿನ್ಪಿಂಗ್ ಅವರು ಅಮೆರಿಕಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಇಂತಹ ಸಂದರ್ಭದಲ್ಲಿಯೇ ಅಮೆರಿಕದ ಈ ಇರಾನ್ ವಿರೋಧಿ ಕ್ರಮವು ಮುನ್ನೆಲೆಗೆ ಬಂದಿದೆ. ಎರಡೂ ದೇಶಗಳು ಯಾವುದೇ ನಿರ್ದಿಷ್ಟ ಕಾರ್ಯಸೂಚಿಯನ್ನು ಬಹಿರಂಗಪಡಿಸದೇ ಇದ್ದರೂ ಪರಸ್ಪರ ಸಂಬಂಧಗಳನ್ನು ಸ್ಥಿರಗೊಳಿಸಲು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ ಸಹಿಹಾಕಲು ಈ ಭೇಟಿ ನಿರ್ಣಾಯಕವಾಗಿರುತ್ತದೆ ಎಂದು ಟ್ರಂಪ್ ಆಡಳಿತ ಭಾವಿಸಿದೆ.
ಜಿನ್ಪಿಂಗ್ ಅವರ ಈ ಪ್ರಸ್ತಾವಿತ ಭೇಟಿಯು ಈ ಮೇ ತಿಂಗಳಲ್ಲಿ ಟ್ರಂಪ್ ಚೀನಾಕ್ಕೆ ಭೇಟಿ ನೀಡಿದ್ದರ ಮುಂದುವರಿದ ಭಾಗವಾಗಿದೆ. ಆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಅಷ್ಟೇನೂ ಆಕ್ರಮಣಕಾರಿ ಮನಸ್ಥಿತಿಯನ್ನು ಹೊಂದಿರಲಿಲ್ಲ. ಆ ಭೇಟಿಯ ಕೊನೆಯಲ್ಲಿ ಎರಡೂ ದೇಶಗಳು ಮಾಧ್ಯಮಗಳಿಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ ಮತ್ತು ಫಲಿತಾಂಶವು ಬುಹುಪಾಲು ಊಹಾಪೋಹಗಳಿಗೇ ಸೀಮಿತವಾಗಿತ್ತು.
ರಿಸ್ಕ್ ಒಲ್ಲದ ಮೋದಿ ಸರ್ಕಾರ
ಚೀನಾಕ್ಕೆ ಹೋಲಿಸಿದರೆ ಭಾರತದ ಪಾತ್ರ ಚಿಕ್ಕದಾದರೂ ಅದು ಇರಾನ್ನೊಂದಿಗೆ ವ್ಯಾಪಾರ ಮುಂದುವರಿಸುವ ಮೂಲ ಅಮೆರಿಕಕ್ಕೆ ಸವಾಲಾಗಬಹುದಿತ್ತು. ಆದರೆ ಹಿಂದಿನ ಅನುಭವಗಳು ಹಾಗೂ ಇತ್ತೀಚಿನ ನಡೆಗಳು ಮೋದಿ ಸರ್ಕಾರ ಅಮೆರಿಕ ಜೊತೆ ಕೈಜೋಡಿಸುತ್ತ ಬಂದಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ಹಾಗಾಗಿ ಅದು ಅಮೆರಿಕವನ್ನು ವಿರೋಧಿಸುವುದು ಬಹಳ ಅಪರೂಪ.
ಅತ್ತ ಚೀನಾ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವ ಟ್ರಂಪ್, ಭಾರತದ ವಿಚಾರಕ್ಕೆ ಬಂದರೆ ದಂಡ ವಿಧಿಸುವ ಮತ್ತು ಪರಸ್ಪರ ಸುಂಕಗಳನ್ನು ಹೇರುವ ಬೆದರಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಭಾರತಕ್ಕೆ ಅಮೆರಿಕದ ಮುಂದೆ ಇರುವ ಏಕೈಕ ಅಸ್ತ್ರವೆಂದರೆ ಬಾಕಿ ಇರುವ ವ್ಯಾಪಾರ ಒಪ್ಪಂದ. ಅದಕ್ಕೆ ಸಹಿ ಹಾಕಲು ಟ್ರಂಪ್ ಅವರಂತೂ ಉತ್ಸುಕರಾಗಿದ್ದಾರೆ. ಆದರೆ ಟ್ರಂಪ್ ಅವರ ವರ್ತನೆಯನ್ನು ಗಮನಿಸಿದರೆ ಮೋದಿ ಸರ್ಕಾರವು ಈ ವಿಚಾರದಲ್ಲಿ ಅನಗತ್ಯ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ ಎಂಬುದು ಸ್ಪಷ್ಟ.
ಭಾರತವು ಇರಾನ್ನಿಂದ ಮಾಡಿಕೊಳ್ಳುತ್ತಿದ್ದ ಆಮದು ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿದೆ. 2019ರ ಹಣಕಾಸು ವರ್ಷದಲ್ಲಿ 13.5 ಶತಕೋಟಿ ಡಾಲರ್ನಷ್ಟಿದ್ದ ಆಮದು ಈಗ ಸುಮಾರು 375 ದಶಲಕ್ಷ ಡಾಲರ್ಗೆ ಕುಸಿದಿದೆ. ಅಮೆರಿಕದ ನಿರ್ಬಂಧಗಳ ತೆರವಿನ ನಂತರ ಸುಮಾರು 700 ದಶಲಕ್ಷ ಡಾಲರ್ ಮೌಲ್ಯದ ಕಚ್ಚಾ ತೈಲವನ್ನು ಖರೀದಿಸಿದ ಸಂಕ್ಷಿಪ್ತ ಅವಧಿಯನ್ನು ಹೊರತುಪಡಿಸಿ, ಆರು ತಿಂಗಳ ಹಿಂದೆ ಯುದ್ಧ ಆರಂಭವಾದಾಗಿನಿಂದ ಅದು ಇರಾನ್ನಿಂದ ತೈಲ ಖರೀದಿಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.
ಅಮೆರಿಕದ ಒತ್ತಡಕ್ಕೆ ಒಳಗಾಗಿ ತಮ್ಮೊಂದಿಗೆ ವ್ಯಾಪಾರ ಕೈಬಿಟ್ಟ ರಾಷ್ಟ್ರಗಳನ್ನು ಇರಾನ್ ಮರೆಯುವುದಿಲ್ಲ ಅಥವಾ ಕ್ಷಮಿಸುವುದಿಲ್ಲ. ಹಾಗಾಗಿ ಭಾರತದ ಸ್ಥಿತಿ ಕಷ್ಟಕರವಾಗಿದೆ. ಇರಾನಿನ ಅಧಿಕಾರಿಗಳು ಈಗಾಗಲೇ ಈ ನಿಟ್ಟಿನಲ್ಲಿ ಸುಳಿವನ್ನೂ ನೀಡಿದ್ದಾರೆ. ಯುದ್ಧದ ಕಾರ್ಮೋಡವು ಕರಗಿ ಪರಿಸ್ಥಿತಿ ತಿಳಿಯಾದಾಗ ಇರಾನ್ ಭಾರತದ ಜೊತೆ ತನ್ನ ಸಂಬಂಧವನ್ನು ಮರುಪರಿಶೀಲನೆ ನಡೆಸಬಹುದು. ಇದರಿಂದ ಭಾರತ ಮುಜುಗರಕ್ಕೆ ಒಳಗಾದರೆ ಅಚ್ಚರಿಯಿಲ್ಲ.
ಉಳಿದ ರಾಷ್ಟ್ರಗಳು ಚೀನಾ ಹಾದಿ ಹಿಡಿದರೆ…
ಇನ್ನು ಸಾಂಪ್ರದಾಯಿಕವಾಗಿ ಇರಾನ್ಗೆ ಸಹಾಯ ಮಾಡುತ್ತ ಬಂದಿರುವ ಇತರ ರಾಷ್ಟ್ರಗಳು ಕೂಡ ಚೀನಾ ಹಾದಿಯನ್ನೇ ಹಿಡಿದರೆ ಅಮೆರಿಕದ ʼಆಪರೇಷನ್ ಎಕಾನಮಿಕ್ ಔಟ್ಕಾಸ್ಟ್ʼ ಎಂಬುದು ಕೇವಲ ತೋರಿಕೆಯ ಸಾಹಸವಾಗಬಹುದು. ಆದರೆ ಇರಾನ್ಗೆ ನಿಜವಾಗಿ ಎದುರಾಗಿರುವ ಗಂಭೀರ ಹಿನ್ನಡೆ ಎಂದರೆ ಅರಬ್ ಗಣರಾಜ್ಯ (ಯುಎಇ) ಇರಾನ್ ಜೊತೆಗಿನ ವ್ಯಾಪಾರವನ್ನು ಇತ್ತೀಚೆಗೆ ಸ್ಥಗಿತಗೊಳಿಸಿರುವುದು.
ಇತರ ನೆರೆಹೊರೆಯ ರಾಷ್ಟ್ರಗಳ ಪೈಕಿ ಅಮೆರಿಕದ ನಿರ್ಬಂಧವನ್ನು ತಪ್ಪಿಸಿಕೊಳ್ಳಲು ಇರಾನ್ ಅರಬ್ ಗಣರಾಜ್ಯವನ್ನು ಬಳಸಿಕೊಳ್ಳುತ್ತಿತ್ತು. ಈಗ ಆ ಮಾರ್ಗವು ಬಂದ್ ಅಗಿದೆ. ಸೌದಿ ಅರೇಬಿಯಾವನ್ನು ಹೊರತುಪಡಿಸಿ ಕತಾರ್, ಓಮನ್ ಮತ್ತು ಜಿಸಿಸಿಯ ಇತರ ದೇಶಗಳ ಮೂಲಕ ಸರಕುಗಳನ್ನು ಸಾಗಾಟ ಮಾಡಲು ಇರಾನ್ಗೆ ಅವಕಾಶವಿದೆ. ಹಿಂದಿನಂತೆ ರಷ್ಯಾ ಕೂಡ ಇರಾನ್ಗೆ ಸಹಾಯಹಸ್ತ ಚಾಚುವ ನಿರೀಕ್ಷೆಯಿದೆ. ಆದರೆ ಉಕ್ರೇಕ್ ಜೊತೆಗಿನ ಯುದ್ಧದ ಕಾರಣದಿಂದ ಅದರ ಸಹಾಯ ಎಷ್ಟು ಪರಿಣಾಮಕಾರಿಯಾಗುತ್ತದೆ ಎಂಬ ಬಗ್ಗೆ ಸಂದೇಹವಿದೆ.
ಹಾಗಂತ ಟ್ರಂಪ್ ಅವರು ಹೇರಲು ಉದ್ದೇಶಿಸಿರುವ ದಿಗ್ಬಂಧಗಳು ಇರಾನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೇನೂ ಅಲ್ಲ. ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಕಾಲಕಾಲಕ್ಕೆ ಹೇರಲಾದ ಅಮೆರಿಕ ನಿರ್ಬಂಧಗಳನ್ನು ಮೀರಿ ನಡೆಯಲು ಇರಾನ್ ನಾನಾ ಮಾರ್ಗಗಳನ್ನು ಅನುಸರಿಸಿದ್ದರೂ ಇದರಿಂದ ದೇಶದ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬಿದ್ದೇ ಬೀಳುತ್ತದೆ. ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿರುವ ವರದಿಗಳ ಪ್ರಕಾರ ಈ ಬಾರಿ ಇರಾನ್ನ ವಿಮಾನಯಾನ, ಡಿಜಿಟಲ್ ಆಸ್ತಿಗಳು, ಚಿನ್ನ, ತಂತ್ರಜ್ಞಾನ ಮತ್ತು ನೌಕಾ ಸಾಗಾಣಿಕಾ ಕ್ಷೇತ್ರಗಳನ್ನು ಗುರಿಯಾಗಿಸಲು ಯೋಜನೆ ರೂಪಿಸಿದಂತೆ ಕಾಣುತ್ತಿದೆ.
ಇರಾನ್‌ಗಿದು ಅಸ್ತಿತ್ವದ ಪ್ರಶ್ನೆ
ಇನ್ನು ಇರಾನ್‌ಗಿದು ಹಿರಿಯ ಅಧಿಕಾರಿಗಳ ಪ್ರಕಾರ ಇದು ಅವರ ದೇಶದ ಅಸ್ತಿತ್ವದ ಪ್ರಶ್ನೆ, ಟ್ರಂಪ್ ಅವರು ಹೇರುವ ಆರ್ಥಿಕ ದಿಗ್ಬಂಧವನ್ನು ವಿಫಲಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಅವರು ಹೇಳುತ್ತಾರೆ.
ಡೊನಾಲ್ಡ್ ಟ್ರಂಪ್ ಅವರು ಹಿಂದೆಯೂ ಬೆದರಿಕೆಯ ಮಾತುಗಳನ್ನು ಆಡುತ್ತ ಬಂದವರು. ಇರಾನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣ ನಾಶಮಾಡಿದ್ದೇವೆ ಎಂದು ಒಮ್ಮೆ ಹೇಳಿಕೊಂಡಿದ್ದರೆ, ಇನ್ನೊಮ್ಮೆ ಆ ದೇಶದ ಮಿಲಿಟರಿಯನ್ನು ನಿರ್ನಾಮ ಮಾಡಿದ್ದೇವೆ ಎಂದಿದ್ದರು. ಇವೆಲ್ಲವೂ ಅವರ ಅತಿರೇಕದ ಹೇಳಿಕೆಗಳು ಎಂಬುದು ಸಾಬೀತಾಗಿತ್ತು. ಇರಾನ್ ಒಡ್ಡಿದ ಪ್ರತಿರೋಧದ ಮುಂದೆ ಅವರ ಹೇಳಿಕೆಗಳೆಲ್ಲ ಸುಳ್ಳಾಗಿದ್ದವು.
ಈಗ ಅವರು ಹೊರಡಿಸಿರುವ ಹೊಸ ಆರ್ಥಿಕ ದಿಗ್ಬಂಧನದ ಘೋಷಣೆ ಕೂಡ ಅದೇ ರೀತಿಯದ್ದಾಗಿದೆ. ಅಮೆರಿಕದ ಬೆದರಿಕೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ವ್ಯಕ್ತವಾಗುತ್ತಿರುವ ತಣ್ಣನೆಯ ಪ್ರತಿಕ್ರಿಯೆಯನ್ನು ಗಮನಿಸಿದರೆ ಟ್ರಂಪ್ ಅವರ ವಿಶ್ವಾಸಾರ್ಹತೆ ಕುಸಿಯುತ್ತಿರುವುದಕ್ಕೆ ಸೂಚನೆಯಾಗಿದೆ.
ಆರಂಭಿಕ ಹಂತದಲ್ಲಿ ನಾಲ್ಕು ಭಾರತೀಯ ಕಂಪನಿಗಳು ಸೇರಿದಂತೆ ಕೆಲ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಆದರೂ ಟ್ರಂಪ್ ಅವರ ಉದ್ದೇಶದ ಹಿಂದೆ ಇರುವ ಗಂಭೀರತೆ ಯಾರಿಗೂ ಮನವರಿಕೆಯಾದಂತೆ ಕಾಣಲಿಲ್ಲ. ಇರಾನ್ನ್ನು ಈ ಭೂಮಿಯ ಮೇಲಿನಿಂದಲೇ ನಾಶಮಾಡುತ್ತೇನೆ, ಪರ್ಷಿಯನ್ ನಾಗರಿಕತೆಗೆ ಇತಿಶ್ರೀ ಹಾಡುತ್ತೇನೆ ಮತ್ತು ಅದನ್ನು ಶಿಲಾಯುಗಕ್ಕೆ ಕಳಿಸುತ್ತೇನೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದರು. ಅಂತಿಮವಾಗಿ ಅವರು ತಮ್ಮ ಮಾತಿನಿಂದ ಹಿಂದೆ ಸರಿದರು. ಅಂತಹ ಬೆದರಿಕೆಗಳಿಂದ ಯಾರ ಕೂದಲೂ ಕೊಂಕಲಿಲ್ಲ ಎಂಬುದು ಅರಿವಾಯಿತು.
ಟ್ರಂಪ್ ಅವರು ಈಗ ಹಾರಿಬಿಟ್ಟಿರುವ ಆರ್ಥಿಕ ದಿಗ್ಬಂಧನದ ಕ್ಷಿಪಣಿ ಅದೇ ರೀತಿಯ ಅಂತ್ಯವನ್ನು ಕಾಣುತ್ತದೆಯೋ ಅಥವಾ ಉಳಿದ ತಂತ್ರಗಳು ವಿಫಲವಾಗಿ ಇದು ಯಶಸ್ವಿಯಾಗುವುದೋ ಎಂಬುದು ಶೀಘ್ರದಲ್ಲೇ ಬಯಲಾಗಲಿದೆ. ಈಗ ಈ ಜಗತ್ತು ಮುಕ್ತ ಯುದ್ಧದ ಹೊಸ ಅಧ್ಯಾಯವನ್ನು ಎದುರು ನೋಡುತ್ತಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


