
ರಾಜಕೀಯ ಅಧಿಕಾರ ದಲಿತರನ್ನು ಜಾತಿ ತಾರತಮ್ಯದಿಂದ ರಕ್ಷಿಸುವುದಿಲ್ಲ ಎಂಬುದಕ್ಕೆ ಹಲ್ದಾನಿಯಲ್ಲಿ ಖರ್ಗೆ ಅವರ ಅನುಭವವೇ ಸಾಕ್ಷಿ. ರಾಜಕೀಯ ಮತಗಳನ್ನು ಬೆನ್ನುತ್ತದೆಯೇ ಹೊರತು ಸಮಾನತೆಯನ್ನಲ್ಲ.
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಭಾರತದ ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರು. ಆದರೂ ಆಗಸ್ಟ್ ಎಂಟರಂದು ಹಲ್ದ್‌ವಾನಿಯಲ್ಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ನಂತರ ಆ ಸಭಾಂಗಣದಲ್ಲಿ ಶುದ್ಧೀಕರಣ ನಡೆಸಲಾಗಿದೆ. ಬಿಜೆಪಿ ಜೊತೆಗೆ ನಂಟಿದೆ ಎನ್ನಲಾದ ಬಲಪಂಥೀಯ ಗುಂಪಿನ ಸದಸ್ಯರು ಈ ಕಾರ್ಯವನ್ನು ಮಾಡಿದ್ದಾರೆ ಎನ್ನಲಾಗುತ್ತದೆ.
ಖರ್ಗೆಯವರು ಈ ವಿಷಯವನ್ನು ರಾಜ್ಯಸಭೆಯ ಕಲಾಪದಲ್ಲಿ ಪ್ರಸ್ತಾಪ ಮಾಡಿದರು. ಈ ಘಟನೆ ತಮಗೆ ಮತ್ತೆ ಅಸ್ಪೃಶ್ಯತೆಯನ್ನು ನೆನಪಿಸುವಂತೆ ಮಾಡಿದೆ ಎಂದು ಹೇಳಿದರು. ಇದರಲ್ಲಿ ತನ್ನ ಜವಾಬ್ದಾರಿಯೇನೂ ಇಲ್ಲ ಎಂದು ಬಿಜೆಪಿ ನುಣುಚಿಕೊಂಡಿತು. ಆ ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಕೃತ್ಯವನ್ನು ಖಂಡಿಸಿದರು ಮತ್ತು ತನಿಖೆ ನಡೆಸುವ ಭರವಸೆ ನೀಡಿದರು.
ರಾಜಕೀಯ ವಿವಾದದ ಮಾತು ಒತ್ತಟ್ಟಿಗಿರಲಿ, ಭಾರತದಲ್ಲಿ ಜಾತಿಯ ವಾಸ್ತವ ಸ್ಥಿತಿಯನ್ನು ಈ ಘಟನೆ ಸ್ಪಷ್ಟವಾಗಿ ಬಿಂಬಿಸುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ದಶಕಗಳಿಂದ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಪ್ರಮುಖ ವಿರೋಧ ಪಕ್ಷದ ನಾಯಕರವರು. ಆದರೆ ಇಂತಹ ಯಾವ ಹುದ್ದೆಯೂ ಕೂಡ ಅವರ ಜಾತಿಯ ಗುರುತನ್ನು ಬಳಸಿಕೊಂಡು ಅವರ ಉಪಸ್ಥಿತಿಗೆ ಬೇರೆ ಸ್ಥಾನಮಾನ ನೀಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ.
ಶುದ್ಧೀಕರಿಸಿದ ಘಟನೆಗಳು ಒಂದೆರಡಲ್ಲ
ನಮ್ಮ ಕಣ್ಣಿಗೆ ಕಾಣುತ್ತಿರುವುದು ಇದೊಂದೇ ವಿರೋಧಾಭಾಸದ ಘಟನೆಯಲ್ಲ. 2025ರ ಏಪ್ರಿಲ್ ತಿಂಗಳಿನಲ್ಲಿ ರಾಜಸ್ಥಾನದ ವಿರೋಧ ಪಕ್ಷದ ಧುರೀಣ ಹಾಗೂ ದಲಿತ ನಾಯಕ ಟಿಕಾ ರಾಮ್ ಜುಲ್ಲಿ ಅವರು ಅಲ್ವಾರ್ನಲ್ಲಿ ರಾಮಮಂದಿರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಬಿಜೆಪಿಯ ಮಾಜಿ ಶಾಸಕ ಜಾನ್ ದೇವ್ ಅಹುಜಾ ಅವರು ʼಕೆಲವು ಅಶುದ್ಧ ಜನʼ ದೇವಾಲಯವನ್ನು ಪ್ರವೇಶಿಸಿ ಅಪವಿತ್ರಗೊಳಿಸಿದ್ದಾರೆ ಎಂದು ಹೇಳಿ ಅದನ್ನು ಶುದ್ಧೀಕರಿಸಲು ದೇವಾಲಯದೊಳಗೆ ಗಂಗಾಜಲ ಪ್ರೋಕ್ಷಿಸಿದರು.
ಇನ್ನು 2009ರಲ್ಲಿ, ಒಡಿಶಾ ಸಚಿವೆ ಮತ್ತು ದಲಿತ ನಾಯಕಿ ಪ್ರಮಿಳಾ ಮಲ್ಲಿಕ್ ಅವರು ಅಖಂಡಲಮಣಿ ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶಿಸಿದರು. ನಂತರ ಅರ್ಚಕರು ದೇವಾಲಯವನ್ನು ಮುಚ್ಚಿ ಶುದ್ಧೀಕರಣ ನಡೆಸಿದರು. ದಲಿತರಿಗೆ ಗರ್ಭಗುಡಿಯೊಳಗೆ ಪ್ರವೇಶಿಸಲು ಅನುಮತಿಯಿಲ್ಲ ಎಂದು ಮುಖ್ಯ ಅರ್ಚಕರು ಹೇಳಿದರು.
2014ರಲ್ಲಿಯೂ ಕೂಡ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ದಲಿತರಾಗಿರುವುದರಿಂದ ತಮ್ಮ ಭೇಟಿಯ ನಂತರ ದೇವಾಲಯ ಮತ್ತು ಅದರ ದೇವಗ್ರಹವನ್ನು ಶುದ್ಧೀಕರಿಸಲಾಗಿದೆ ಎಂದು ಆರೋಪಿಸಿದರು.
ಈ ಎಲ್ಲಾ ಘಟನೆಗಳು ಭಾರತೀಯ ರಾಜಕಾರಣವು ನೇರವಾಗಿ ಎದುರಿಸಲು ಹಿಂಜರಿಯುತ್ತಿರುವ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಜಾತಿಶ್ರೇಣಿಯ ತಳಮಟ್ಟದಲ್ಲಿರುವ ವ್ಯಕ್ತಿಯು ರಾಜಕೀಯ ಅಧಿಕಾರವನ್ನು ಪಡೆದಾಗ ನಿಜವಾಗಿಯೂ ಬದಲಾಗುವುದಾದರೂ ಏನು?
ರಾಜಕೀಯ ಅಧಿಕಾರ ಮತ್ತು ಸಾಮಾಜಿಕ ಸ್ಥಾನಮಾನ
ಇದಕ್ಕೆ ಸಿಗುವ ಉತ್ತರವು ಅತ್ಯಂತ ಮುಜುಗರ ತರುವಂತಿದೆ. ರಾಜಕೀಯ ಅಧಿಕಾರವು ದಲಿತರ ದೇಹಕ್ಕೆ ಅಂಟಿಕೊಂಡಿರುವ ಸಾಮಾಜಿಕ ಅರ್ಥವನ್ನು ಬದಲಾಯಿಸದೆಯೇ, ಸರ್ಕಾರದಲ್ಲಿ ದಲಿತರ ಸ್ಥಾನವನ್ನು ಬದಲಾಯಿಸಬಲ್ಲದು. ಸಮಾನ ಸಾಮಾಜಿಕ ಸ್ಥಾನಮಾನಕ್ಕೆ ಯಾರು ಅರ್ಹರು ಎಂಬುದನ್ನು ಬದಲಾಯಿಸುವುದಕ್ಕಿಂತ, ರಾಜಕೀಯ ಅಧಿಕಾರವನ್ನು ಯಾರು ಚಲಾಯಿಸಬಹುದು ಎಂಬುದನ್ನು ಬದಲಾಯಿಸುವಲ್ಲಿ ಭಾರತೀಯ ಪ್ರಜಾಪ್ರಭುತ್ವವು ಹೆಚ್ಚು ಯಶಸ್ವಿಯಾಗಿದೆ.
ರಾಜಕೀಯ ಪ್ರಾತಿನಿಧ್ಯದಲ್ಲಿ ಭಾರತ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ದಲಿತರು ರಾಷ್ಟ್ರಪತಿ, ಮುಖ್ಯಮಂತ್ರಿ, ಕೇಂದ್ರ ಮಂತ್ರಿ, ಸ್ಪೀಕರ್ ಮತ್ತು ಪಕ್ಷದ ಅಧ್ಯಕ್ಷ ಸ್ಥಾನಗಳನ್ನು ಗಿಟ್ಟಿಸಿದ್ದಾರೆ. ಆದರೆ ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ಸಮಾನತೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಸಾಮಾಜಿಕವಾಗಿ ಸಮಾನರು ಎಂದು ಸ್ವೀಕರಿಸದೇ ಇದ್ದರೂ ಒಬ್ಬ ದಲಿತ ಸಂಸತ್ತಿಗೆ ಆಯ್ಕೆಯಾಗಿ ಹೋಗಬಹುದು. ಒಬ್ಬ ದಲಿತ ಸಚಿವ ಕಚೇರಿಯ ಹೊರಗೆ ತಾರತಮ್ಯವನ್ನು ಎದುರಿಸುತ್ತಲೇ, ಹಿರಿಯ ಅಧಿಕಾರಿಗಳ ಮೇಲೆ ಅಧಿಕಾರ ಚಲಾವಣೆ ಮಾಡಬಹುದು. ಒಬ್ಬ ದಲಿತ ನಾಯಕ ಜನರಿಂದ ಮತಗಳನ್ನು ಗಳಿಸಬಹುದು. ಚುನಾವಣಾ ಪ್ರಜಾಪ್ರಭುತ್ವವು ಒಬ್ಬ ದಲಿತರನ್ನು ತಮ್ಮ ರಾಜಕೀಯ ಪ್ರತಿನಿಧಿ ಎಂದು ಗುರುತಿಸುವಂತೆ ಜನರನ್ನು ಒತ್ತಾಯಿಸಬಹುದು. ಆದರೆ, ಆ ವ್ಯಕ್ತಿ ತಮಗೆ ಸಾಮಾಜಿಕವಾಗಿ ಸಮಾನರು ಎಂದು ಸ್ವೀಕರಿಸುವಂತೆ ಮಾಡಲು ಸಾಧ್ಯವಿಲ್ಲ.
ಬದಲಾಗದ ಸಾಮಾಜಿಕ ಮನೋಭಾವ
ಇನ್ನೊಂದು ಮಾತುಗಳಲ್ಲಿ ಹೇಳುವುದಾದರೆ, ಸರ್ಕಾರವು ಹುದ್ದೆ, ಅಧಿಕಾರ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ನೀಡಬಲ್ಲದು. ಆದರೆ, ಜನರು ಒಬ್ಬರನ್ನೊಬ್ಬರು ಅಳೆಯುವ ಸಾಮಾಜಿಕ ಮನೋಭಾವವನ್ನು ಅದು ತನ್ನಷ್ಟಕ್ಕೆ ತಾನೇ ಬದಲಾಯಿಸಲು ಸಾಧ್ಯವಿಲ್ಲ. ಹಾಗಾದರೆ, ಸುಮಾರು ಎಂಟು ದಶಕಗಳ ಸಾಂವಿಧಾನಿಕ ಪ್ರಜಾಪ್ರಭುತ್ವದ ನಂತರವೂ ಈ ಅಂತರ ಯಾಕಾದರೂ ಮುಂದುವರಿದಿದೆ?
ಇದರ ಉತ್ತರವು ಭಾಗಶಃ ಸರ್ಕಾರ ಮತ್ತು ಸಮಾಜದ ವಿಭಿನ್ನ ಸಾಮರ್ಥ್ಯಗಳಲ್ಲಿದೆ. ಸಂವಿಧಾನವು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಬಹುದು, ಕಾನೂನಾತ್ಮಕ ಸಮಾನತೆಯನ್ನು ನೀಡಬಹುದು ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೆ ಮಾರ್ಗಗಳನ್ನು ತೆರೆಯಬಹುದು. ಆದರೆ ವಿವಾಹ, ವಾಸಸ್ಥಳ, ಧಾರ್ಮಿಕ ಆಚರಣೆ, ವೃತ್ತಿ ಮತ್ತು ಸಾಮಾಜಿಕ ಸಂವಹನಗಳ ಮೂಲಕ ದಿನನಿತ್ಯದ ಸಂಬಂಧಗಳಲ್ಲಿ ಪುನರಾವರ್ತನೆಯಾಗುವ ಜಾತಿಯನ್ನು ತನ್ನಷ್ಟಕ್ಕೆ ತಾನೇ ರೂಪಾಂತರ ಮಾಡಲು ಅದಕ್ಕೆ ಸಾಧ್ಯವಿಲ್ಲ.
ಚುನಾವಣಾ ರಾಜಕೀಯವು ಮತ್ತೊಂದು ಜಟಿಲತೆಯನ್ನು ಸೃಷ್ಟಿಸುತ್ತದೆ. ಜಾತಿಸಮೂಹಗಳನ್ನು ಸಂಘಟಿಸಲು ಮತ್ತು ಅವರ ಹಿತಾಸಕ್ತಿಗಳನ್ನು ಈಡೇರಿಸಲು ರಾಜಕೀಯ ಪಕ್ಷಗಳಿಗೆ ಬಲವಾದ ಪ್ರೇರಣೆಗಳಿವೆ; ಆದರೆ ಆ ಗುರುತುಗಳಿಗೆ ಆಧಾರವಾಗಿರುವ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಗೆ ಸವಾಲು ಒಡ್ಡಲು ಅವರಿಗೆ ಪ್ರೇರಣೆಗಳು ಕಡಿಮೆ.
ಆದ್ದರಿಂದ, ದಲಿತರ ಪ್ರಾತಿನಿಧ್ಯವು ಜಾತಿಯನ್ನು ಪೋಷಿಸುವ ಸಾಮಾಜಿಕ ಸಂಬಂಧಗಳನ್ನು ಕಡ್ಡಾಯವಾಗಿ ಧ್ವಂಸಗೊಳಿಸದೆಯೇ, ಅವರ ರಾಜಕೀಯ ಚೌಕಾಶಿ ಶಕ್ತಿಯನ್ನು ಹೆಚ್ಚಿಸುತ್ತ ಸಾಗಿದೆ.
ಶುದ್ಧೀಕರಣದ ಸಂದೇಶ
ಶುದ್ಧೀಕರಣದ ಘಟನೆಗಳು ವ್ಯವಸ್ಥೆಯಲ್ಲಿರುವ ಈ ವ್ಯತ್ಯಾಸವನ್ನು ಅತ್ಯಂತ ಸ್ಪಷ್ಟವಾಗಿ ಎತ್ತಿಹಿಡಿಯುತ್ತವೆ, ಏಕೆಂದರೆ ಇವು ಕೇವಲ ಹೊರಗಿಡುವ ಪ್ರಕ್ರಿಯೆಗೆ ಸಂಬಂಧಿಸಿದ್ದಲ್ಲ; ಇವು 'ಮೈಲಿಗೆ' ಅಥವಾ 'ಅಶುದ್ಧತೆ'ಗೆ ಸಂಬಂಧಿಸಿದ್ದು.
ಒಬ್ಬ ವ್ಯಕ್ತಿಯನ್ನು ದೇವಾಲಯ ಪ್ರವೇಶಿಸದಂತೆ ತಡೆದರೆ, ಆ ವಾದವನ್ನು ಪ್ರವೇಶದ ಹಕ್ಕು ಅಥವಾ ಸಂಪ್ರದಾಯದ ಪ್ರಶ್ನೆಯಾಗಿ ಬಿಂಬಿಸಬಹುದು. ಆದರೆ ಒಬ್ಬ ದಲಿತ ವ್ಯಕ್ತಿ ನಿರ್ಗಮಿಸಿದ ನಂತರ ಆ ಸ್ಥಳವನ್ನು ಶುದ್ಧೀಕರಿಸಿದರೆ, ಅದು ನೀಡುವ ಸಂದೇಶವೇ ಬೇರೆ. ಆ ವ್ಯಕ್ತಿಯ ಉಪಸ್ಥಿತಿಯೇ ಆ ಸ್ಥಳದ ಪವಿತ್ರತೆಯನ್ನು ಬದಲಾಯಿಸಿದೆ ಎಂಬುದನ್ನು ಅದು ಸೂಚಿಸುತ್ತದೆ. ಆದ್ದರಿಂದಲೇ ಹಲ್ದ್‌ವಾನಿ ಘಟನೆಯ ಬಗ್ಗೆ ವಿಶೇಷ ಗಮನ ಹರಿಸುವುದು ಅತ್ಯಂತ ಅರ್ಹವಾಗಿದೆ.
ಇಂತಹ ಘಟನೆಗಳನ್ನು ಒಂದು ರಾಜಕೀಯ ಪಕ್ಷದ ಸಿದ್ಧಾಂತಕ್ಕೆ ಮಾತ್ರ ಸೀಮಿತ ಮಾಡುವುದರಿಂದಲೂ ಅಪಾಯವಿದೆ. ರಾಜಸ್ಥಾನದ ಪ್ರಕರಣದಲ್ಲಿ ಭಾಗಿಯಾಗಿದ್ದು ಬಿಜೆಪಿಯ ನಾಯಕ. ಹಲ್ದ್ವಾನಿ ವಿವಾದದಲ್ಲಿ ಹಿಂದುತ್ವ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವವರ ವಿರುದ್ಧ ಆರೋಪಗಳು ಕೇಳಿಬಂದಿವೆ, ಆದರೆ ಬಿಜೆಪಿಯು ಜವಾಬ್ದಾರಿಯನ್ನು ನಿರಾಕರಿಸಿದೆ.
ಆದರೆ ಜಾತಿ ತಾರತಮ್ಯವನ್ನು ಕೇವಲ ಪಕ್ಷ ರಾಜಕಾರಣದ ಮೂಲಕ ಮಾತ್ರ ವಿವರಿಸಲು ಸಾಧ್ಯವಿಲ್ಲ. ಅಸ್ಪೃಶ್ಯತೆಯು ಈಗಿರುವ ರಾಜಕೀಯ ವ್ಯವಸ್ಥೆಗಿಂತಲೂ ಹಳೆಯದಾಗಿದೆ ಮತ್ತು ಇದರ ಅಸ್ತಿತ್ವವು ಪಕ್ಷಗಳ ಗಡಿಗಳನ್ನು ಹಾಗೂ ಪ್ರದೇಶಗಳನ್ನೂ ಮೀರಿ ನಿಂತಿದೆ.
ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಪಕ್ಷಗಳ ನೇತೃತ್ವದ ಸರ್ಕಾರಗಳು ಕಲ್ಯಾಣ ಯೋಜನೆಗಳು, ಮೀಸಲಾತಿ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ವಿಸ್ತರಿಸಿವೆ, ಆದರೆ ದೈನಂದಿನ ಸಾಮಾಜಿಕ ಜೀವನದಲ್ಲಿ ಜಾತಿ ಪೂರ್ವಗ್ರಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿಲ್ಲ.
ಪ್ರಾತಿನಿಧ್ಯ vs ಪರಿವರ್ತನೆ
ಹಾಗಂದ ಮಾತ್ರಕ್ಕೆ ಪ್ರಾತಿನಿಧ್ಯವು ಮಹತ್ವದ್ದಲ್ಲ ಎಂದಲ್ಲ. ದಲಿತರು ಅಧಿಕಾರ ಸ್ಥಾನಗಳಿಂದ ಸಂಪೂರ್ಣವಾಗಿ ವಂಚಿತರಾಗಿರುವ ರಾಜಕೀಯ ವ್ಯವಸ್ಥೆಯು ಇನ್ನಷ್ಟು ಕೆಟ್ಟದಾಗಿರುತ್ತಿತ್ತು. ಆದಾಗ್ಯೂ, ಪ್ರಾತಿನಿಧ್ಯವನ್ನೇ ಸಾಮಾಜಿಕ ಪರಿವರ್ತನೆ ಎಂದು ತಪ್ಪಾಗಿ ಭಾವಿಸಬಾರದು.
ದಲಿತ ನಾಯಕರು ಪ್ರಬಲ ಸಾಮಾಜಿಕ ಗುಂಪುಗಳ ನಿಯಂತ್ರಣದಲ್ಲಿರುವ ಕ್ಷೇತ್ರಗಳಿಗೆ ಪ್ರವೇಶಿಸಿದಾಗ ಈ ಸಮಸ್ಯೆ ವಿಶೇಷವಾಗಿ ಧುತ್ತೆಂದು ಎದ್ದು ನಿಲ್ಲುತ್ತದೆ. ಅವರ ರಾಜಕೀಯ ಸ್ಥಾನಮಾನವನ್ನು ಗುರುತಿಸಲಾದರೂ ಕೂಡ, ಅವರ ಜಾತಿ ಸ್ಥಾನಮಾನವೇ ನಿರ್ಣಾಯಕವಾಗಿ ಉಳಿಯುತ್ತದೆ.
ಚುನಾವಣಾ ರಾಜಕಾರಣಕ್ಕೆ ಅವರ ಮತಗಳು ಮತ್ತು ಸಂಘಟನೆಗಳ ಅವಶ್ಯಕತೆಯಿದೆ. ರಾಜಕೀಯ ಪಕ್ಷಗಳಿಗೆ ದಲಿತ ಅಭ್ಯರ್ಥಿಗಳು ಮತ್ತು ಪ್ರತಿನಿಧಿಗಳು ಬೇಕಾಗಿದ್ದಾರೆ. ಸಂಸ್ಥೆಗಳಲ್ಲಿ ಅವರ ಒಳಗೊಳ್ಳುವಿಕೆ ಸರ್ಕಾರಗಳಿಗೆ ಅಗತ್ಯವಿದೆ. ಆದರೆ ಸಾಮಾಜಿಕ ಸಮಾನತೆಗೆ ಮತ್ತಷ್ಟು ಕಠಿಣವಾದ ಹೆಜ್ಜೆಯ ಅಗತ್ಯವಿದೆ, ಅಂದರೆ ಸಾಮಾನ್ಯ ಸಾಮಾಜಿಕ ಸಂಬಂಧಗಳಲ್ಲಿ ದಲಿತರನ್ನು ಸಮಾನರೆಂದು ಗುರುತಿಸುವ ಅಗತ್ಯತೆ.
ಆ ಪರಿವರ್ತನೆಯು ಅತ್ಯಂತ ನಿಧಾನವಾಗಿ ಸಾಗಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವದ ಆಳವಾದ ಅಸಮಾನ ಸಾಮಾಜಿಕ ಸಂಬಂಧಗಳೊಂದಿಗೆ ಸಾಂಕೇತಿಕ ಸನ್ನೆಗಳು ಹೇಗೆ ಸಹಬಾಳ್ವೆ ನಡೆಸಬಲ್ಲವು ಎಂಬುದಕ್ಕೆ ಇದು ಸಾಕ್ಷಿ. ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರನ್ನು ಕೊಂಡಾಡಬಹುದು, ಅವರ ಪ್ರತಿಮೆಗೆ ಮಾಲೆ ಹಾಕಬಹುದು ಮತ್ತು ಸಂವಿಧಾನವನ್ನು ಉಲ್ಲೇಖಿಸಬಹುದು. ಸರ್ಕಾರಗಳು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಬಹುದು ಮತ್ತು ಪ್ರಾತಿನಿಧ್ಯವನ್ನು ವಿಸ್ತರಿಸಬಹುದು.
ಆದಾಗ್ಯೂ, ಕೆಲವು ಸಂಸ್ಥೆಗಳು, ವೃತ್ತಿಗಳು ಮತ್ತು ಸಮುದಾಯಗಳು ಸಾಮಾಜಿಕವಾಗಿ ಕನಿಷ್ಠ ಮಟ್ಟದಲ್ಲಿವೆ ಎಂಬ ನಂಬಿಕೆಯು ಈ ಎಲ್ಲ ಕೃತ್ಯಗಳ ಹೊರತಾಗಿಯೂ ಮುಂದುವರಿಯಬಹುದು.
ಸಮಾನತೆಯ ಅಗ್ನಿಪರೀಕ್ಷೆ
ಹಾಗಾಗಿ, ಭಾರತದಲ್ಲಿ ದಲಿತ ನಾಯಕರಿದ್ದಾರೆಯೇ ಎಂಬುದು ಇಲ್ಲಿನ ಪ್ರಶ್ನೆಯಲ್ಲ. ಅವರು ಖಂಡಿತವಾಗಿಯೂ ಇದ್ದಾರೆ. ಆದರೆ ಅವರ ರಾಜಕೀಯ ಸಮಾನತೆಯ ನಿಜಾರ್ಥವೇನು ಎಂಬುದನ್ನು ಭಾರತೀಯ ಸಮಾಜವು ಒಪ್ಪಿಕೊಂಡಿದೆಯೇ ಎಂಬುದು ಪ್ರಶ್ನೆ. ದಲಿತರ ವಿಮೋಚನೆಯ ನಿಜವಾದ ಅಗ್ನಿಪರೀಕ್ಷೆಯು, ಒಬ್ಬ ದಲಿತ ವ್ಯಕ್ತಿಯು ರಾಜಕೀಯ ಶ್ರೇಣಿಯ ಉತ್ತುಂಗಕ್ಕೇರಬಹುದೇ ಎಂಬುದರ ಮೇಲಿಲ್ಲ. ಬದಲಿಗೆ, ಉನ್ನತ ಸ್ಥಾನದಲ್ಲಿರುವ ದಲಿತರನ್ನು ಅಸ್ತಿತ್ವದಲ್ಲಿರುವ ಸಾಮಾಜಿಕ ಶ್ರೇಣಿಗೆ ಸವಾಲಾಗಿ ನೋಡದೆ, ಸಾಮಾಜಿಕ ಸಮಾನರಾಗಿ ಸ್ವೀಕರಿಸಲಾಗಿದೆಯೇ ಎಂಬುದರ ಮೇಲಿದೆ.
ಮಲ್ಲಿಕಾರ್ಜುನ ಖರ್ಗೆಯವರ ಹಲ್ದ್ವಾನಿ ಅನುಭವವು, ಅದಕ್ಕೂ ಮೊದಲು ಜುಲ್ಲಿ ಮತ್ತು ಮಲ್ಲಿಕ್ ಅವರಿಗೆ ಸಂಬಂಧಿಸಿದ ಘಟನೆಗಳು ಬಿಂಬಿಸಿದಂತೆ, ಭಾರತವು ರಾಜಕೀಯ ಸಮಾನತೆಯ ಕಡೆಗೆ ಸಾಕಷ್ಟು ದೂರ ಸಾಗಿದೆಯಾದರೂ ಸಾಮಾಜಿಕ ಸಮಾನತೆಯ ವಿಚಾರದಲ್ಲಿ ಅಷ್ಟೇನು ಪ್ರಗತಿಯನ್ನು ಸಾಧಿಸಿಲ್ಲ. ಆ ಅಂತರವನ್ನು ಕೇವಲ ಪ್ರಾತಿನಿಧ್ಯದಿಂದ ಮಾತ್ರ ಮುಚ್ಚಲು ಸಾಧ್ಯವಿಲ್ಲ.
ಪ್ರಾತಿನಿಧ್ಯವು ರಾಜಕೀಯ ಅಧಿಕಾರದ ಹಂಚಿಕೆಯನ್ನು ಬದಲಾಯಿಸಿದೆ. ಆದರೆ ಸ್ಥಾನಮಾನವನ್ನು ನಿರ್ಧರಿಸುವ ಸಾಮಾಜಿಕ ಸಂಬಂಧಗಳನ್ನು ಬದಲಾಯಿಸುವಲ್ಲಿ ಇದು ಅಷ್ಟೇನು ಯಶಸ್ವಿಯಾಗಿಲ್ಲ. ಅದು ಸಂಭವಿಸುವವರೆಗೆ, ಭಾರತವು ಒಂದು ವಿಶಿಷ್ಟವಾದ ಸಮಾನತೆಯನ್ನು ಸೃಷ್ಟಿಸುತ್ತಲೇ ಇರುತ್ತದೆ: ಸಮಾಜದ ಕೆಲವು ವರ್ಗಗಳು ಅದೇ ಸಾಮಾಜಿಕ ಜಾಗವನ್ನು ಆಕ್ರಮಿಸಿಕೊಳ್ಳುವ ದಲಿತರ ಹಕ್ಕನ್ನು ಪ್ರಶ್ನಿಸುವುದನ್ನು ಮುಂದುವರಿಸಿದರೆ, ದಲಿತರು ಸರ್ಕಾರದ ಅತ್ಯಂತ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


