ದರ್ಶನ್ ಪ್ರಕರಣದಿಂದ ಮತ್ತೆ ಬೆಳಕಿಗೆ ಬಂದ ಕಾರಾಗೃಹಗಳ ಅವ್ಯವಸ್ಥೆ; ಸುಧಾರಣೆ ಹೇಗೆ?
2021 ರವರೆಗೂ ಕರ್ನಾಟಕದ ಜೈಲುಗಳಲ್ಲಿಯೇ ಕೈದಿಗಳು ಬೀಡಿ ಸಿಗರೇಟುಗಳನ್ನು ಖರೀದಿಸುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಈಗಲೂ ದೇಶದ ಇತರ ರಾಜ್ಯಗಳ ಜೈಲುಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿಲ್ಲ. ಆದರೆ ಧೂಮ್ರಪಾನಕ್ಕೆ ತಡೆ ಹಾಕಿರುವ ಕಾರಣ ಧೂಮ್ರವ್ಯಸನಿಗಳು ಲಂಚಕೊಟ್ಟು ಬೀಡಿ ಸಿಗರೇಟುಗಳನ್ನು ಪಡೆಯುವಂತಾಗಿದೆ. ಮೊದಲಿನ ವ್ಯವಸ್ಥೆ ಮರಳುವಂತಾದರೆ ಸಿಗರೇಟುಗಳ ಸ್ಮಗ್ಲಿಂಗ್ ತಪ್ಪುತ್ತದೆ.
ವಿಚಾರಣಾ ಕೈದಿಯಾಗಿರುವ ಜನಪ್ರಿಯ ಸಿನಿಮಾ ನಟ ದರ್ಶನ್ ಕೆಲವು ಕೈದಿಗಳ ಜೊತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕುಳಿತು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಚಹಾ ಸೇವಿಸುತ್ತಾ ಯಾರದೋ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವ ಚಿತ್ರ ಮಾಧ್ಯಮಗಳಲ್ಲಿ ವೈರಲ್ ಆದ ಕೂಡಲೇ ವಿಐಪಿ ಕೈದಿಗಳಿಗೆ ಕಾರಾಗೃಹಗಳಲ್ಲಿ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಟೀಕೆಗಳು ಆರಂಭವಾಗಿವೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ದರ್ಶನ್ ವಿರುದ್ಧ ಕಾರಾಗೃಹ ನಿಯಮಗಳನ್ನು ಮುರಿದ ಬಗ್ಗೆ ಮೂರು ಎಫ್.ಐ.ಆರ್‌ಗಳನ್ನು ದಾಖಲಿಸಿರುವುದಾಗಿ ಹೇಳಿರುವುದಲ್ಲದೆ ದರ್ಶನ್ ಮತ್ತು ಆತನ ಪ್ರಕರಣದಲ್ಲಿ ಜೈಲು ಸೇರಿರುವ ಕೈದಿಗಳನ್ನು ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸುತ್ತಿರುವುದಾಗಿಯೂ ಹೇಳಿದ್ದಾರೆ.
ಈ ಘಟನೆಯು ಕೇವಲ ಪರಪ್ಪನ ಅಗ್ರಹಾರ ಕಾರಾಗೃಹಕ್ಕಷ್ಟೇ ಸೀಮಿತವಾಗಿಲ್ಲ. ಕರ್ನಾಟಕದ ಬಹುತೇಕ ಎಲ್ಲ ಜೈಲುಗಳಲ್ಲಿಯೂ, ಅದೇ ಏಕೆ, ದೇಶದ ಸರಿಸುಮಾರು ಎಲ್ಲ ಜೈಲುಗಳಲ್ಲಿಯೂ ಪರಿಸ್ಥಿತಿಯು ಭಿನ್ನವಾಗಿಲ್ಲ. ಎರಡೇ ವರ್ಷಗಳ ಹಿಂದೆ ದೆಹಲಿಯ ತಿಹಾರ್ ಜೈಲಿನಲ್ಲಿ ಆಮ್ ಆದ್ಮಿ ಪಕ್ಷದ ಮಂತ್ರಿ ಸತ್ಯೇಂದ್ರ ಜೈನ್‌ಗೆ ಕೈದಿಯೊಬ್ಬ ಮಸಾಜ್ ಮಾಡುತ್ತಿರುವ ಚಿತ್ರ ಸಹಾ ಹೀಗೆಯೇ ವೈರಲ್ ಆಗಿತ್ತು. 1980ರ ದಶಕದ ಆದಿಯಲ್ಲಿ ಕುಖ್ಯಾತ ಕ್ರಿಮಿನಲ್ ಚಾರ್ಲ್ಸ್ ಶೋಭರಾಜ್ ದೆಹಲಿಯ ತಿಹಾರ್‌ನಲ್ಲಿಯೇ ಬಂದಿಯಾಗಿದ್ದಾಗ ಆತನೇ ಇಡೀ ಕಾರಾಗೃಹವನ್ನು ನಡೆಸುತ್ತಿದ್ದ. ಆತ ಕಾರಾಗೃಹದ ಅಧೀಕ್ಷಕರ ಕಚೇರಿಯ ಒಳಕೋಣೆಯಲ್ಲಿ ವಾರವಾರವೂ ತನ್ನ ಪ್ರೇಯಸಿಯರೊಡನೆ ಸರಸ ಸಲ್ಲಾಪಗಳನ್ನು ನಡೆಸುತ್ತಿದ್ದನೆಂಬ ಆರೋಪವಿತ್ತು. ಜೈಲಿನಲ್ಲಿಯೇ ಆತ ಮಾದಕ ವಸ್ತುಗಳ ವ್ಯಾಪಾರವನ್ನೂ ಮಾಡುತ್ತಿದ್ದ. ಈ ಬಗ್ಗೆ ತನಿಖೆ ನಡೆಸಿದ ವಿಚಾರಣಾ ಆಯೋಗವೊಂದು ತಿಹಾರ್ ಜೈಲಿನ ಅವ್ಯವಹಾರಗಳ ಬಗ್ಗೆ ಕ್ಷ ಕಿರಣ ಬೀರಿ ಕಾರಾಗೃಹದ ಸುಧಾರಣೆಗೆ ಸಾಕಷ್ಟು ಸಲಹೆಗಳನ್ನು ನೀಡಿತ್ತು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನನ್ನ ಪುಸ್ತಕ ‘ ದಿ ಬಿಕಿನಿ ಕಿಲ್ಲರ್:ಚಾರ್ಲ್ಸ್ ಶೋಭರಾಜ್‌ನಲ್ಲಿ ನೀಡಿದ್ದೇನೆ. 2018 ರಲ್ಲಿ ನಾನು ಕೊಲ್ಕತಾದ ಡಂ ಡಂ ಜೈಲಿಗೆ ಭೇಟಿ ನೀಡಿದಾಗ ಕೈದಿಯೊಬ್ಬ ನನ್ನೆದುರೇ ರಾಜಾರೋಷವಾಗಿ ಮೊಬೈಲ್ ಫೋನ್ ಉಪಯೋಗಿಸಿದ್ದ. ಇದೇನಿದು, ಮೊಬೈಲ್ ಫೋನಿಗೆ ಇಲ್ಲಿ ನಿಷೇಧವಿಲ್ಲವೇ ಎಂದು ಕೇಳಿದಾಗ, ತನ್ನಂತೆಯೇ ಬಹಳಷ್ಟು ಕೈದಿಗಳು ಮೊಬೈಲ್ ಉಪಯೋಗಿಸುತ್ತಾರೆ ಎಂದಾತ ಉತ್ತರಿಸಿದ್ದ.
ಹೀಗಾಗಿ ದುಡ್ಡು ಕೊಟ್ಟವರಿಗೆ ಮತ್ತು ಅಧಿಕಾರಸ್ಥರಿಗೆ ಹತ್ತಿರವಾಗಿದ್ದವರಿಗೆ ಕಾರಾಗೃಹಗಳಲ್ಲಿ ಸಕಲ ಸೇವೆಗಳೂ ಸಿಗುತ್ತವೆ ಎನ್ನುವ ಸಂಗತಿ ಹೊಸತೇನಲ್ಲ. ಇವೆರಡೂ ಅಲ್ಲದೆ ಯಾರಿಗೆ ರಾಜಕೀಯ ಕೃಪಾಕಟಾಕ್ಷವಿದೆಯೋ, ಯಾರು ಬಲಶಾಲಿಯೋ, ಯಾರಿಗೆ ಕಾರಾಗೃಹದ ಅಧಿಕಾರಿಗಳ ಪರಿಚಯವಿದೆಯೋ, ಅವರು ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲರು ಎನ್ನುವ ಭಾವನೆಯೂ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಮೂಡಿದೆ. ದುಡ್ಡಿದ್ದವರಿಗೆ ಅವರ ಕೋಣೆಗಳಲ್ಲಿಯೇ ಉತ್ತಮ ಸೌಕರ್ಯಗಳು, ಆಳುಕಾಳುಗಳು, ಮನೆಯಿಂದಲೋ ಅಥವಾ ಹೊಟೆಲ್‌ಗಳಿಂದಲೋ ಬರುವ ಭೋಜನ, ಮಾದಕವಸ್ತುಗಳು ಸಿಗುವುದಲ್ಲದೆ ಅವರ ಹತ್ತಿರದ ಬಂಧು ಮಿತ್ರರು ಅವರನ್ನು ಪದೇಪದೆ ಭೇಟಿಮಾಡಲೂ ಅವಕಾಶಗಳಿರುತ್ತವೆ ಎನ್ನುವುದೂ ಸತ್ಯ.
ಪ್ರಭಾವಶಾಲಿ ಕೈದಿಗಳಿಗೆ ಈ ರೀತಿಯ ಸವಲತ್ತುಗಳು ಸಿಗುತ್ತಿರುವುದು ಇದೇ ಮೊದಲಲ್ಲ, ಕೊನೆಯೂ ಅಲ್ಲ.
ಹಾಗಾದರೆ ಕಾರಾಗೃಹದಲ್ಲಿ ನಡೆಯುವ ಅವ್ಯವಹಾರಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಸಹಜವಾಗಿ ಕೇಳುತ್ತಿದ್ದಾರೆ. ಇಲ್ಲಿಯವರೆಗಂತೂ ನಿಲ್ಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುವುದು ಕಠಿಣವಲ್ಲ. ಮೊದಲನೆಯದೇ ಸರ್ಕಾರಿ ಇಲಾಖೆಗಳಲ್ಲಿ ವ್ಯಾಪಕವಾಗಿ ಪಸರಿಸಿರುವ ಭ್ರಷ್ಟಾಚಾರ. ಕಾರಾಗೃಹ ಇಲಾಖೆಯೂ ಇದಕ್ಕೆ ಹೊರತಲ್ಲ. ಇಂದಿನ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಬಹುದಷ್ಟೇ.
ಕಿಕ್ಕಿರುದು ತುಂಬಿ ತಲೆ ಚಿಟ್ಟು ಹಿಡಿಸುವಂತಹ ಪರಿಸ್ಥಿತಿಯಿರುವ ಜೈಲುಗಳಲ್ಲಿ ತಮ್ಮ ಜೀವನವನ್ನು ಸ್ವಲ್ಪಮಟ್ಟಿಗೆ ಸುಗಮಗೊಳಿಸಲು ಹಣ ಮತ್ತು ಅಧಿಕಾರವುಳ್ಳ ಕೈದಿಗಳು ಪ್ರಯತ್ನ ಪಡುವುದು ಸಹಜ. ಹೀಗಾಗಿ ಎಲ್ಲಕ್ಕಿಂತ ಮೊದಲಿಗೆ ಜೈಲುಗಳಲ್ಲಿರುವ ಕೈದಿಗಳ ಸಂಖ್ಯೆಯನ್ನು ಕಡಿಮೆಗೊಳಿಸಬೇಕಾಗಿದೆ. ಎಲ್ಲ ಜೈಲುಗಳಲ್ಲಿಯೂ ಸಜಾ ಹೊಂದಿರುವ ಕೈದಿಗಳಿಗಿಂತ ವಿಚಾರಣಾಧೀನ ಕೈದಿಗಳ ಸಂಖ್ಯೆ ಬಹಳ ಹೆಚ್ಚು. ಇದೇ ಕಾರಣದಿಂದ ಸಾವಿರ ಕೈದಿಗಳಿಗಾಗಿ ಮಾಡಿರುವ ಜೈಲಿನಲ್ಲಿ ಐದು ಸಾವಿರ ಕೈದಿಗಳನ್ನು ಕುರಿಗಳಂತೆ ಕುಂಬಲಾಗುತ್ತಿದೆ. ಇದರಿಂದ ಕೈದಿಗಳಿಗೆ ಕೊಡುವ ಮೂಲಭೂತ ಸೌಕರ್ಯಗಳು ತೀರಾ ಕಡಿಮೆಯಾಗಿದ್ದು ಕೈದಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ನಿವಾರಿಸಲು ಕೈದಿಗಳು ಆಲ್ಕೋಹಾಲ್, ಸಿಗರೇಟ್ ಮತ್ತು ಮಾದಕ ಪದಾರ್ಥಗಳ ಮೊರೆ ಹೋಗುತ್ತಾರೆ. ಅವು ಲಭ್ಯವಿರದ ಕಾರಣ ಲಂಚವನ್ನು ಕೊಟ್ಟು ತಮಗೆ ಬೇಕಾದ ಸೌಲಭ್ಯವನ್ನು ಲಭಿಸಿಕೊಳ್ಳುತ್ತಾರೆ. ಆದರೆ ಹಣ ಅಥವಾ ಅಧಿಕಾರ ಇಲ್ಲದ ಕೈದಿಗಳು ಕಷ್ಟದ ಜೀವನವನ್ನು ಸವೆಸುತ್ತಾರೆ.
ವಿಚಾರಣಾಧೀನ ಕೈದಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸಂಬಂಧಪಟ್ಟವರೆಲ್ಲರೂ ಹೆಣಗುತ್ತಿದ್ದಾರೆ. ಇತ್ತೀಚೆಗಷ್ಟೇ ರೂಪಿತವಾಗಿರುವ ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಯಾವುದೇ ವಿಚಾರಣಾಧೀನ ಕೈದಿ ತನ್ನ ಶಿಕ್ಷೆಯ ಅವಧಿಯ ಅರ್ಧದಷ್ಟು ಅವಧಿಯನ್ನು ಕಾರಾಗೃಹದಲ್ಲಿ ಕಳೆದರೆ ಆತನನ್ನು ಜಾಮೀನಿನ ಮೂಲಕ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. ಇದಲ್ಲದೆ ಸರ್ವೋಚ್ಚ ನ್ಯಾಯಾಲಯವು ವಿಚಾರಣಾಧೀನ ಅರೋಪಿಗಳಿಗೆ ಮುಕ್ತವಾಗಿ ಜಾಮೀನನ್ನು ನೀಡಬೇಕೆಂದು ಹಲವು ಹತ್ತು ಬಾರಿ ಹೇಳಿದೆ. ಮನಿ ಲಾಂಡರಿಂಗ್ ಪ್ರಕರಣಗಳಿಗೂ ಈ ನಿಯಮವು ಅನ್ವಯ ಎಂದು ನಿನ್ನೆಯಷ್ಟೇ ಹೇಳಿದೆ. ಆದರೂ ಬೇರೆ ಬೇರೆ ಕಾರಣಗಳನ್ನು ಒಡ್ಡಿ ಒಬ್ಬ ಆರೋಪಿಗೆ ಜಾಮೀನನ್ನು ನಿರಾಕರಿಸಲಾಗುತ್ತಿದೆ.
ನ್ಯಾಯಾಲಯದ ವಿಚಾರಣೆಗಳು ದೀರ್ಘಾವಧಿಯವರೆಗೂ ನಡೆಯುವ ಕಾರಣದಿಂದ ವಿಚಾರಣಾಧೀನ ಕೈದಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಪ್ರತಿಯೊಂದು ಪ್ರಕರಣದ ವಿಚಾರಣೆಯೂ ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳ್ಳಬೇಕೆಂಬ ಟೈಮ್‌ಲೈನ್ ನೀಡಲಾಗಿದೆ. ವಿಡಿಯೋ ಕಾನ್ಫರೆನ್ಸ್‌ಗಳ ಮೂಲಕವೂ ವಿಚಾರಣೆಗೆ ಅನುಕೂಲ ಮಾಡಿಕೊಟ್ಟಿರುವುದರಿಂದ ಇನ್ನು ಮುಂದೆ ನ್ಯಾಯಾಲಯದ ವಿಚಾರಣೆಗಳು ಬೇಗನೇ ಮುಗಿಯುತ್ತವೆ ಎಂದು ಆಶಿಸಬಹುದಾಗಿದೆ.
ನಿಯಂತ್ರಣ ಹೇಗೆ?
ಕಾರಾಗೃಹಗಳಲ್ಲಿ ನಿಯಮಗಳನ್ನು ಜಾರಿಗೆ ತರಬೇಕಾದ ಜೈಲು ಸಿಬ್ಬಂದಿಯ ಸಂಖ್ಯೆಯೂ ಕೈದಿಗಳ ಸಂಖ್ಯೆಗೆ ತಕ್ಕಂತೆ ಏರಿಲ್ಲದಿರುವುದರಿಂದ ಇರುವ ಸಿಬ್ಬಂದಿ ಹೆಣಗುತ್ತಿದ್ದಾರೆ. ಪರಪ್ಪನ ಅಗ್ರಹಾರವನ್ನೇ ತೆಗೆದುಕೊಂಡರೆ ನೂರು ಜನ ಸಿಬ್ಬಂದಿ ಇರಬೇಕಾದ ಜಾಗದಲ್ಲಿ 50 ಜನರಷ್ಟೇ ಇದ್ದಾರೆ. ಈ ಸಮಸ್ಯೆಯನ್ನು ಬೇಗನೇ ಬಗೆಹರಿಸಬೇಕಾಗಿದೆ.
2021 ರವರೆಗೂ ಕರ್ನಾಟಕದ ಜೈಲುಗಳಲ್ಲಿಯೇ ಕೈದಿಗಳು ಬೀಡಿ ಸಿಗರೇಟುಗಳನ್ನು ಖರೀದಿಸುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಈಗಲೂ ದೇಶದ ಇತರ ರಾಜ್ಯಗಳ ಜೈಲುಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿಲ್ಲ. ಆದರೆ ಧೂಮ್ರಪಾನಕ್ಕೆ ತಡೆ ಹಾಕಿರುವ ಕಾರಣ ಧೂಮ್ರವ್ಯಸನಿಗಳು ಲಂಚಕೊಟ್ಟು ಬೀಡಿ ಸಿಗರೇಟುಗಳನ್ನು ಪಡೆಯುವಂತಾಗಿದೆ. ಮೊದಲಿನ ವ್ಯವಸ್ಥೆ ಮರಳುವಂತಾದರೆ ಸಿಗರೇಟುಗಳ ಸ್ಮಗ್ಲಿಂಗ್ ತಪ್ಪುತ್ತದೆ.
ಎಲ್ಲ ಕೈದಿಗಳಿಗೂ ತಮ್ಮ ಕುಟುಂಬದವರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಿರಬೇಕೆಂಬ ಅಭಿಲಾಷೆಯಿರುವುದು ಸಹಜವೇನಿದು ಮಾನಸಿಕ ಸ್ಥಿಮಿತವನ್ನು ಇಟ್ಟುಕೊಳ್ಳಲು ತೀರಾ ಸಹಾಯಕ. ಈಗಿನ ವ್ಯವಸ್ಥೆಯಲ್ಲಿ ಕೈದಿಗಳಿಗೆ ವಾರಕ್ಕೊಮ್ಮೆ ಮಾತ್ರ ತಮ್ಮ ಬಂಧುಮಿತ್ರರೊಂದಿಗೆ ಮಾತನಾಡಲು ಅವಕಾಶವಿದೆ. ಇದರ ಬದಲು ಎರಡು ದಿನಕ್ಕೊಮ್ಮೆ ಇಂತಹ ಅವಕಾಶ ಮಾಡಿಕೊಟ್ಟರೆ ಜೈಲಿನೊಳಗೆ ನುಸುಳಿ ಬರುವ ಮೊಬೈಲ್ ಫೋನುಗಳ ಸಂಖ್ಯೆ ಕಡಿಮೆಯಾಗುತ್ತದೆ.
ಕೈದಿಗಳ ಮಾನಸಿಕ ಒತ್ತಡಗಳ ಬಗ್ಗೆ ಗಮನಹರಿಸಲು ಮನೋವಿಜ್ಞಾನಿಗಳನ್ನು ನೇಮಿಸಬೇಕೆಂಬ ನಿಯಮವಿದ್ದರೂ ದೊಡ್ಡ ದೊಡ್ಡ ಜೈಲುಗಳಲ್ಲಿಯೇ ಇಂತಹ ಜನರಿಲ್ಲ. ಕೈದಿಗಳಿಗೆ ಸೂಕ್ತ ಕೌನ್ಸೆಲಿಂಗ್ ನೀಡಿ ಅವರ ಮಾನಸಿಕ ಸ್ಥಿತಿಯನ್ನು ಸುದಾರಿಸಬೇಕಾದದ್ದು ಅತಿ ಅವಶ್ಯ. ಮೆಡಿಟೇಷನ್, ಯೋಗ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದರೂ ಅವುಗಳ ಸೂಕ್ತ ನಿಭಾವಣೆ ಆಗುತ್ತಿಲ್ಲ. ಕೈದಿಗಳನ್ನು ಸುಧಾರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವುದೇ ಕಾರಾಗೃಹಗಳ ಉದ್ದೇಶವಾಗಿದ್ದರೂ ಆ ಉದ್ದೇಶ ಸಫಲವಾಗಿಲ್ಲ.
ಕಾರಾಗೃಹದಲ್ಲಿ ನಡೆಯುತ್ತಿರುವ ಆಗು ಹೋಗುಗಳನ್ನು ಗಮನಿಸಲು ಒಂದು ಸಮಿತಿಯನ್ನು ನೇಮಿಸಲಾಗಿದೆ. ಇದರಲ್ಲಿ ಸಂಬಂಧಪಟ್ಟ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿ, ಎಸ್.ಪಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಸಮಾಜ ಸೇವಕರಿದ್ದಾರೆ. ಈ ಸಮಿತಿಯು ಕಾಲಕಾಲಕ್ಕೆ ಕಾರಾಗೃಹಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಗಮನಿಸಿ ಕೈದಿಗಳ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವರದಿ ಸಲ್ಲಿಸಬೇಕಾಗಿದೆ. ಇಂತಹ ಸಮಿತಿಗಳು ಕಾರಾಗೃಹಗಳಿಗೆ ಹೋಗುವಾಗ ಅನಿರೀಕ್ಷಿತ ಭೇಟಿ ನೀಡಿದರೆ ಅಲ್ಲಿ ನಡೆಯುವ ಅವ್ಯವಹಾರಗಳು ಗಮನಕ್ಕೆ ಬರುತ್ತವೆ. ಅನಿರೀಕ್ಷಿತ ಭೇಟಿ ನೀಡದಿದ್ದರೆ ಯಾವ ಉಪಯೋಗವೂ ಆಗುವುದಿಲ್ಲ.
ಜೈಲು ಅಧಿಕಾರಿಗಳಿಗೆ ಸುಳಿವಿತ್ತೇ?
ದರ್ಶನ್ ಪ್ರಕರಣ ವೈರಲ್ ಆಗುವ ಹಿಂದಿನ ದಿನವೇ ಬೆಂಗಳೂರು ಪೊಲೀಸರು ಪರಪ್ಪನ ಅಗ್ರಹರಕ್ಕೆ ಹಠಾತ್ ಭೇಟಿ ನೀಡಿ ಅಲ್ಲಿ ಕಂಡ ಕೆಲವು ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡರೆಂದು ವರದಿಯಾಗಿತ್ತು. ಈ ತಂಡ ಜೈಲಿಗೆ ಭೇಡಿ ನೀಡಿದ ಮಾರನೆಯ ದಿನವೇ ದರ್ಶನ್ ಕೈಯಲ್ಲಿ ಮೊಬೈಲ್ ಫೋನ್ ಬಂದದ್ದನ್ನು ನೋಡಿದರೆ ಪೊಲೀಸರು ಬರುವ ಸುಳಿವು ಜೈಲಿನ ಅಧಿಕಾರಿಗಳಿಗಿತ್ತು ಎನ್ನುವುದು ಸ್ಪಷ್ಟ. ಈ ಕಾರಣಕ್ಕಾಗಿ ಸಂದರ್ಶಕರ ಸಮಿತಿಯು ತಮ್ಮ ಭೇಟಿಯನ್ನು ಅತಿ ಗೌಪ್ಯವಾಗಿಡಬೇಕಾಗಿದೆ. ಕಡಿಮೆಯೆಂದರೆ ತಿಂಗಳಿಗೊಮ್ಮೆ ಈ ಸಮಿತಿಯ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿದರೆ ಸಾಕಷ್ಟು ಬದಲಾವಣೆಗಳು ಆಗುವುದರಲ್ಲಿ ಸಂದೇಹವೇ ಇಲ್ಲ.
ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಬೇಕಾದರೆ ಸಮಾಜದ ಪ್ರತಿಯೊಂದು ವರ್ಗವೂ ಸಹಕರಿಸಬೇಕು. ಮತ್ತು ಕೈದಿಗಳನ್ನೂ ಸಂವೇದನಾಶೀಲತೆಯಿಂದ ನೋಡಿಕೊಳ್ಳಬೇಕು.
(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು 'ದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)