ನಮ್ಮ ಯೋಚನೆಗಳೇ ಪ್ರಾಯೋಜಿತವಾದಾಗ ಹುಟ್ಟುವುದು, ಪ್ರಾಯೋಜಿತ ದೀವಾಳಿತನ!
ರಾಜ್ಯಪಾಲರು ತನಿಖೆಗೆ ಅದೆಷ್ಟು ಬೇಗ ಅನುಮತಿ ಕೊಟ್ಟುಬಿಟ್ಟರಲ್ಲಾ, ಅದರ ಹಿಂದೆ ಕೆಲಸ ಮಾಡಿರುವುದು ಒಂದು ಪ್ರಾಮಾಣಿಕ ಸ್ವಚ್ಛ ಸಮಾಜದ ಚಿಂತನೆಯೇ ಹೊರತು ಅಲ್ಲಿ ಖಂಡಿತಾ ರಾಜಕೀಯ ಉದ್ದೇಶಗಳಿಲ್ಲ ಅಂತ ಯಾರಾದರೂ ಆಣೆ-ಪ್ರಮಾಣ ಮಾಡಿದರೆ ನಂಬುತ್ತೇವಾ ನಾವು? ಮೇಲ್ನೋಟಕ್ಕಂತೂ ನಂಬಬೇಕೆನ್ನಿಸುವುದಿಲ್ಲ.
Is anybody serious?
ನಿಜವಾಗಿಯೂ ಎಲ್ಲರೂ ತಮ್ಮತಮ್ಮ ಹೇಳಿಕೆಗಳ ಬಗ್ಗೆ-ಆರೋಪಗಳ ಬಗ್ಗೆ ಸೀರಿಯಸ್ಸಾಗಿ ಇದ್ದಿದ್ದರೆ, ಇಷ್ಟು ಹೊತ್ತಿಗೆ ಎಲ್ಲರೂ ಎಲ್ಲರ ಮೇಲೂ ಕೇಸು ಹಾಕಿ ಒಟ್ಟೊಟ್ಟಿಗೇ ಜೈಲು ಸೇರಿ ಪಗಡೆ ಆಡುತ್ತಾ ಕೂತಿರಬೇಕಿತ್ತು! At least, ತಮ್ಮ ಹತ್ತಿರ ಇದೆ ಅಂತ ಕೊಚ್ಚಿಕೊಳ್ಳುವ ದಾಖಲೆಗಳನ್ನೆಲ್ಲಾ ಸಾರ್ವಜನಿಕರ ಮುಂದೆ ತೆರೆದಿಟ್ಟು ಕೋರ್ಟಿನ ಮೆಟ್ಟಿಲನ್ನಾದರೂ ಹತ್ತಿರಬೇಕಿತ್ತು.
ಬಟ್ ಜಸ್ಟ್ ಎಲ್ಲರದೂ ಬೀದಿ ಕಾಳಗವಷ್ಟೇ; ದುಡ್ಡುಕೊಟ್ಟು ಬಂದು ಕೂತ ಪ್ರೇಕ್ಷಕರ ಮುಂದೆ ರಂಗದ ಮೇಲೆ ನಾಟಕವಾಡಿದ ಹಾಗೆ. ನೋಡುವುದಕ್ಕೆ ಅವರ ಕೈಯಲ್ಲಿ ಫಳಗುಡುವುದು ಸರಕ್ಕನೆ ಕತ್ತರಿಸಿ ಬಿಸಾಕಬಲ್ಲಂಥ ಕತ್ತಿಗಳೇ. ನೋಡುವುದಕ್ಕೆ ಅವರು ಮಾಡುವುದು ಘನಘೋರ ಕಾಳಗವನ್ನೇ. ನೋಡುವುದಕ್ಕೆ ಅವರ ಹೂಂಕಾರ-ಠೇಂಕಾರಗಳು ಒಬ್ಬರನ್ನೊಬ್ಬರು ಮಟ್ಟ ಹಾಕುವಂಥವೇ. ನೋಡುವುದಕ್ಕೆ ಅವರು ಬದ್ಧ ವೈರಿಗಳೇ. ನೋಡುವುದಕ್ಕೆ ಅವರೆಲ್ಲರೂ ಪ್ರಾಮಾಣಿಕ ಜನಪರ ಕಾಳಜಿಯ ಸೈನಿಕರೇ. ನೋಡುವುದಕ್ಕೆ ಅವರ ಮಾತುಗಳೆಲ್ಲವೂ ಸತ್ಯವೇ. ನೋಡುವುದಕ್ಕೆ ಅವರ ಆಟಗಳು ನಿಜಾತಿ ನಿಜವೇ.
ನೋಡುವುದಕ್ಕೆ, ಎಲ್ಲವೂ ಪ್ರೇಕ್ಷಕ ಸಮೂಹ ಬಿರುಗಣ್ಣಿನ ಬೆರಗಿನಿಂದ ನಂಬುವಂಥದ್ದೇ.
ಬಟ್… ನೋಡುವವರಿಗೆ ಗೊತ್ತಲ್ಲಾ, ಇದೆಲ್ಲವೂ ಈ ಕ್ಷಣದ ಮಾಯೆಯಷ್ಟೇ; ಬೆಳಕು ಆರಿ ರಂಗದ ಬಣ್ಣಗಳೆಲ್ಲಾ ಕಳಚಿಯಾದ ಮೇಲೆ ರಂಗದ ಹಿಂದೆ ನಡೆಯುವುದು ಅವರವರ ಶಕ್ತಿ-ಯುಕ್ತಿಯನುಸಾರ ನಡೆಸುವ survival struggle. ರಂಗದ ಮೇಲಿನ ವೈರತ್ವಗಳು-ಮಿತ್ರತ್ವಗಳು ರಂಗದ ಹಿಂದೆಯೂ ಹಾಗೇ ಇರಬೇಕೆಂದೇನಿಲ್ಲವಲ್ಲ!
ಹಾಗಾಗೇ, ಆಡುವವರು-ನೋಡುವವರು ಯಾರೂ ಗಂಭೀರವಾಗಿರುವ ಹಾಗನ್ನಿಸುತ್ತಿಲ್ಲ. ಸಾಮಾನ್ಯ ಜನರ ಪಾಲಿಗೆ ರಂಗದಿಗ್ಗಜರ ಹೂಂಕಾರ-ಠೇಂಕಾರ—ಜಯಕಾರ-ಧಿಕ್ಕಾರಗಳೆಲ್ಲಾ ನೋಡಿ-ಕೇಳಿ ಆನಂದಿಸುವುದಕ್ಕಷ್ಟೇ; ವಿಚಲಿತರಾಗುವುದಕ್ಕೆ, ಆಕ್ರೋಶಗೊಳ್ಳುವುದಕ್ಕಲ್ಲ. ಒಂದು ವೇಳೆ ಜನ ಹಾಗಾಗಿಬಿಟ್ಟಿದ್ದರೆ, ಇಷ್ಟುಹೊತ್ತಿಗೆ ಒಂದು ನಿಜವಾದ ಜನಾಂದೋಲನವೇ ನಡೆದು ಹೋಗಬೇಕಿತ್ತು, ನಮ್ಮ ಊರು-ಕೇರಿಗಳೆಲ್ಲಾ ಸ್ತಬ್ಧವಾಗಿಬಿಡಬೇಕಿತ್ತು.
ಅದು ಆಗಿಲ್ಲ ಅನ್ನುವುದೇ ಗಂಭೀರ ವಿಷಯ!
ನಮಗೆ ಸಿದ್ದರಾಮಯ್ಯ-ಕುಮಾರಸ್ವಾಮಿ-ಅಶೋಕ-ವಿಜಯೇಂದ್ರ-ಶಿವಕುಮಾರ್ ಅವರೆಲ್ಲರ ಆರ್ಭಟಗಳೂ ಕೇವಲ ರಂಗದ ಮೇಲಿನ ನಾಟಕದ ಹಾಗೆ ಭಾಸವಾಗುತ್ತಿದ್ದರೆ — ಮತ್ತು ನಾವು, ಕೇವಲ ಆಡಿಟೋರಿಯಮ್ಮಿನ ಒಳಹೊಕ್ಕು ಮುಂದಿನ ಸೀಟಿನಲ್ಲೇ ಕೂತು ಮಜಾ ತೆಗೆದುಕೊಳ್ಳುತ್ತಾ ಸೀಟಿ ಹೊಡೆಯುವವರ ಹಾಗೆ ಕಾಣುತ್ತಿದ್ದರೆ — ಅದಕ್ಕೆ ಕಾರಣ ನಮ್ಮಲ್ಲಿ ನಾವೇ ತುಂಬಿಕೊಂಡಿರುವ ಆಲಸ್ಯ, ಹಾಗೂ ನಮ್ಮ ರಾಜಕಾರಣಿಗಳು ಒಟ್ಟಾರೆಯಾಗಿ ನಮ್ಮ ಮನಸ್ಸಿನಲ್ಲಿ ಹುಟ್ಟುಹಾಕಿರುವ ಅಸಹ್ಯ.
ಹಿಂದೆಂದೂ ಇದ್ದಿರದಿದ್ದಂಥ ಒಂದು ಅಸಹಾಯಕ ರಾಜಕೀಯ ದೀವಾಳಿತನಕ್ಕೆ ಬಿದ್ದುಬಿಟ್ಟಿದೆ, ನಮ್ಮ ರಾಜ್ಯ.
ಯಾರಿದ್ದಾರೆ ಸಾಚಾಗಳು? ಯಾರಿದ್ದಾರೆ ನಾವು ನಂಬಬಲ್ಲಂಥವರು? ಯಾರಿದ್ದಾರೆ ಒಂದು ನಿಜವಾದ ಜನಪರ ಹೋರಾಟ ಸಂಘಟಿಸಬಲ್ಲಂಥವರು? ಯಾರಿದ್ದಾರೆ ಅಧಿಕಾರಸ್ಥರ ಕಿವಿ ಹಿಂಡಬಲ್ಲಷ್ಟು ನೈತಿಕತೆ ಉಳಿಸಿಕೊಂಡವರು? ಯಾರಿದ್ದಾರೆ ಸಾಮೂಹಿಕ ಸಾಮಾಜಿಕ ಅತ್ಯಾಚಾರವನ್ನು ಖಂಡಿಸಿ ಮಾತಾಡುವ ಧೈರ್ಯವಿರುವವರು? ಯಾರಿದ್ದಾರೆ, ಇದ್ದದ್ದು ಇದ್ದಂತೆ ತೋರಿಸುವ ಕನ್ನಡಿಯನ್ನು ಎಲ್ಲ ನಾಯಕರ ಮುಖಕ್ಕೂ ನೇರವಾಗಿ ಹಿಡಿಯಬಲ್ಲಂಥವರು? ಯಾರಿದ್ದಾರೆ ಅಳುಕಿಲ್ಲದೆ-ನನ್ನದೇನಾದರೂ ಬಯಲಾದರೆ ಕಷ್ಟ ಅನ್ನುವ ಅಂಜಿಕೆಯಿಲ್ಲದೆ ಪ್ರಶ್ನೆ ಮಾಡಬಲ್ಲಂಥವರು?
More importantly, ಅಂಥವರು ಯಾರಾದರೂ ಮೇಲೆದ್ದು ನಿಂತರೂ-ಕಣ್ಣೆದುರೇ ಕಂಡರೂ, ಯಾರಿದ್ದಾರೆ ಅವರನ್ನು ನಂಬುವವರು?
ಇವತ್ತು ನಂಬಿಕೆ ಹುಟ್ಟಿಸುವವರೂ ಇಲ್ಲ, ನಂಬುವಷ್ಟು ಸಹೃದಯರೂ ಇಲ್ಲ.
There’s a hopelessly depressing cynicism and callousness all around.
ಇದು ಸಿನಿಕತೆ ಅಂತಲೂ ಅತಿರೇಕದ ಹತಾಶವಾದ ಅಂತಲೂ ಅನ್ನಿಸಬಹುದು. Maybe true. ಬಟ್ ಇದು ಜಸ್ಟಿಫೈಡ್ ನಿರಾಶಾವಾದ!
Just look around.
ಸಿದ್ದರಾಮಯ್ಯನವರು ತಾವು ತಪ್ಪೇ ಮಾಡಿಲ್ಲ, ತಾವು ಅಪ್ಪಟ ಪ್ರಾಮಾಣಿಕ ಅನ್ನುತ್ತಿದ್ದಾರಲ್ಲಾ, ನಂಬಬಹುದಾ ನಾವು? ಮೇಲ್ನೋಟಕ್ಕಂತೂ ನಂಬಬೇಕೆನ್ನಿಸುವುದಿಲ್ಲ.
ರಾಜ್ಯಪಾಲರು ತನಿಖೆಗೆ ಅದೆಷ್ಟು ಬೇಗ ಅನುಮತಿ ಕೊಟ್ಟುಬಿಟ್ಟರಲ್ಲಾ, ಅದರ ಹಿಂದೆ ಕೆಲಸ ಮಾಡಿರುವುದು ಒಂದು ಪ್ರಾಮಾಣಿಕ ಸ್ವಚ್ಛ ಸಮಾಜದ ಚಿಂತನೆಯೇ ಹೊರತು ಅಲ್ಲಿ ಖಂಡಿತಾ ರಾಜಕೀಯ ಉದ್ದೇಶಗಳಿಲ್ಲ ಅಂತ ಯಾರಾದರೂ ಆಣೆ-ಪ್ರಮಾಣ ಮಾಡಿದರೆ ನಂಬುತ್ತೇವಾ ನಾವು? ಮೇಲ್ನೋಟಕ್ಕಂತೂ ನಂಬಬೇಕೆನ್ನಿಸುವುದಿಲ್ಲ.
ವಿಜಯೇಂದ್ರ-ಅಶೋಕ್-ರವಿ ಇತ್ಯಾದಿಗಳು ತಮಗೆ ಭ್ರಷ್ಟಾಚಾರವೆಂಬುದು ಪರಮ ಅಪರಿಚಿತ ಅನ್ನುವಂತೆಯೂ, ಸಿದ್ದರಾಮಯ್ಯನವರು ಮಾಡಿರುವ ಭ್ರಷ್ಟಾಚಾರ ತಮ್ಮನ್ನು ಕಂಗೆಡಿಸಿಬಿಟ್ಟಿದೆ ಅನ್ನುವಂತೆಯೂ, ಈಗಷ್ಟೇ ಭ್ರಷ್ಟಾಚಾರವೆನ್ನುವ ರಾಕ್ಷಸ ನಮ್ಮ ರಾಜ್ಯಕ್ಕೆ ಅಡರಿಕೊಂಡಿದ್ದಾನೆ ಅನ್ನುವಂತೆಯೂ ಬೊಬ್ಬಿರಿಯುತ್ತಾ ಪಾದಯಾತ್ರೆ ಮಾಡುತ್ತಾರಲ್ಲಾ, ಅವರ ನಡೆ-ನುಡಿಯ ಸಾಚಾತನವನ್ನು ನಂಬುತ್ತೇವಾ ನಾವು? ಮೇಲ್ನೋಟ-ಒಳನೋಟ-ಪಕ್ಷಿನೋಟ-ಪಕ್ಷನೋಟ ಯಾವ ನೋಟದಲ್ಲೂ ಖಂಡಿತಾ ನಂಬಬೇಕೆನ್ನಿಸುವುದಿಲ್ಲ!
ಇನ್ನು ಕುಮಾರಸ್ವಾಮಿ-ಡಿ ಕೆ ಶಿವಕುಮಾರ್; ನಂಬಬಹುದಾ? ಇಂಗ್ಲಿಷಿನಲ್ಲಿ ಒಂದು ಅನಾದಿಕಾಲದ ಸವಕಲು ನಾಣ್ನುಡಿಯಿದೆ: pot calling the kettle black ಅಂತ. Pot ಯಾರು kettle ಯಾರು? ಯಾರನ್ನಾದರೂ ನಂಬಬಲ್ಲೆವಾ ನಾವು?
ಇವರೆಲ್ಲರನ್ನೂ ಏಕಪ್ರಕಾರವಾಗಿ ಪ್ರಶ್ನೆ ಕೇಳಿ ಕಂಗೆಡಿಸಬೇಕಾಗಿದ್ದಿದ್ದು, ಅವರಲ್ಲೊಂದಿಷ್ಟು ದಿಗಿಲು-ಸಂಕೋಚ-ನಾಚಿಕೆ-ಹಿಂಜರಿಕೆ-ನೈತಿಕತೆ ಹುಟ್ಟಿಸಬೇಕಾಗಿದ್ದಿದ್ದು, ಮಾಧ್ಯಮಗಳು, ಸಾಮಾಜಿಕ ಹೋರಾಟಗಾರರು, ಮತ್ತು ತಮ್ಮನ್ನು ತಾವು ಸಾಕ್ಷೀಪ್ರಜ್ಞೆಗಳು ಅಂತ ಕರೆದುಕೊಂಡು ಆನಂದತುಂದಿಲರಾಗುವ ಚಿಂತಕವಲಯದ ಬುದ್ಧಿವಂತರು.
ಆದರೆ ಎಲ್ಲರೂ-ಎಲ್ಲವೂ ಪ್ರಾಯೋಜಿತಗೊಂಡುಬಿಟ್ಟರೆ — ಅಥವಾ ಕುರುಡು ದ್ವೇಷ ಅಥವಾ ಪ್ರೇಮಕ್ಕೆ ಬಿದ್ದುಬಿಟ್ಟರೆ — ಕೇಳುವ ಧ್ವನಿಗೆ ಶಕ್ತಿಯಿರಲು ಹೇಗೆ ಸಾಧ್ಯ?
ಸಿದ್ದರಾಮಯ್ಯನವರನ್ನು ಕೇಳಬೇಕಿತ್ತು: ಸ್ವಾಮೀ, ನಿಮ್ಮ ದಾಖಲೆ-ದಸ್ತಾವೇಜುಗಳ ಹೋರಾಟಗಳನ್ನು ಕೋರ್ಟಿನಲ್ಲಿ ಮಾಡಿಕೊಳ್ಳಿ; ಆದರೆ, ‘ಒಂದೇ ಒಂದೂ ಕಳಂಕವಿಲ್ಲದಂತೆ ಬದುಕಿರುವವನು ನಾನು’ ಅಂತ ಹೇಳಿಕೊಳ್ಳುವ ನಿಮ್ಮ ಅಂತಃಸಾಕ್ಷಿಗೆ, ಅಷ್ಟೊಂದೆಲ್ಲಾ ಮುಡಾ ಸೈಟುಗಳನ್ನು ‘ಪಡೆದು ಕೊಳ್ಳುವುದು’ ಮತ್ತು ‘ಇಟ್ಟುಕೊಳ್ಳುವುದೇ’ ಒಂದು ಅತಿದೊಡ್ಡ ಕಳಂಕ ಅಂತ ಅನ್ನಿಸಬೇಕಿತ್ತಲ್ಲವಾ? ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕೂತುಕೊಂಡು ‘62 ಕೋಟಿ ಪರಿಹಾರ ಕೊಡಿ, ಸೈಟ್ ವಾಪಸ್ ತೊಗೊಳ್ಳಿ’ ಅನ್ನುವಂಥಾ ಲೇವಾದೇವಿಯ ಮಾತಾಡುವುದು — ಅದೂ ನಿಮ್ಮದೇ ಸರ್ಕಾರದ ವಿರುದ್ಧ! — ನಿಮ್ಮ ಸಮಾಜವಾದದ ರಾಜಕಾರಣಕ್ಕೇ ಕಳಂಕ ಅಂತ ಅನ್ನಿಸಬೇಕಿತ್ತಲ್ಲವಾ? ರಾಜನ ಗದ್ದುಗೆಯಲ್ಲಿ ಕೂತವನು ಕೇವಲ ಕಾನೂನಾತ್ಮಕವಾಗಿಯಷ್ಟೇ ಅಲ್ಲ, ಕಾಣುವಾತ್ಮಕವಾಗಿಯೂ ಅನುಮಾನಾತೀತನಾಗಿರಬೇಕು ಅಂತ ಅನ್ನಿಸಬೇಕಿತ್ತಲ್ಲವಾ? ಯಾರೆಷ್ಟು ಬೊಬ್ಬೆ ಹೊಡೆದರೂ ನನ್ನನ್ನು ಅಲ್ಲಾಡಿಸಲಾಗುವುದಿಲ್ಸ ಅನ್ನುವ ನಿಮ್ಮ ಜನಶಕ್ತಿಯ ಧೈರ್ಯ ಹಾಗೂ ವಿಶ್ವಾಸಗಳೇನೋ ಸರಿಯೇ, ಆದರೆ ಯಾರೂ ಅಲ್ಲಾಡಿಸದಿದ್ದರೂ ನಿಮ್ಮ ಎದೆಯೊಳಗೇ ಒಂದು ಅಳುಕಿನ ಪಲುಕು ಹುಟ್ಟಬೇಕಿತ್ತಲ್ಲವಾ? ನೀವು ಕುರ್ಚಿ ಬಿಡದಿರುವುದು-ಬಿಡುವುದು ನಿಮ್ಮ ಆಯ್ಕೆ ಹಾಗೂ ನಿಮ್ಮ ಶಕ್ತಿಯ ದ್ಯೋತಕ ಅನ್ನುವುದೂ ಸರಿಯೇ, ಆದರೆ ಉಳಿದವರು ತಪ್ಪು ಮಾಡಿಲ್ಲವಾ-ನಾನು ಮಾಡಿದರೇನು ಅನ್ನುವಂಥ ವಾದಸರಣಿಯನ್ನು ಮುಂದಿಟ್ಟಿದ್ದು ನಿಮ್ಮ ವ್ಯಕ್ತಿತ್ವಕ್ಕೆ ತಕ್ಕುದಲ್ಲ ಅಂತ ಅನ್ನಿಸಬೇಕಿತ್ತಲ್ಲವಾ?
ಬಿಜೆಪಿಯ ನಾಯಕ ಪುಂಗವರನ್ನು ಕೇಳಬೇಕಿತ್ತು: ಭ್ರಷ್ಟಾಚಾರದ ಬಗ್ಗೆ ಯಾರನ್ನಾದರೂ ಪ್ರಶ್ನೆ ಮಾಡುವ ನೈತಿಕತೆ ನಿಮಗಿದೆಯಾ? ಸೂತಕವನ್ನೇ ಕಾಣದ ಮನೆಯಿಂದ ಸಾಸಿವೆ ಕಾಳು ತರಲು ಹೊರಟವರನ್ನು ಧೈರ್ಯವಾಗಿ ಹತ್ತಿರ ಕರೆದು ಬೊಗಸೆ ತುಂಬಾ ಸಾಸಿವೆ ಕೊಡುವ ಶಕ್ತಿ ನಿಮಗಿದೆಯಾ? ಈ ರಾಜ್ಯ ಕಂಡ ಅತೀಭ್ರಷ್ಟ ಮುಖ್ಯಮಂತ್ರಿ ಅಂತ ಸಿದ್ದರಾಮಯ್ಯನವರ ಕಡೆ ಬೆರಳು ತೋರಿಸುತ್ತಿರುವಾಗ ನಿಮ್ಮದೇ ಕೈಯ ಮೂರು ಬೆರಳುಗಳು ನಿಮ್ಮ ಕಡೆಯೇ ತೋರಿಸುತ್ತಿವೆ ಅನ್ನುವ ಪ್ರಜ್ಞೆ ನಿಮಗಿದೆಯಾ? ಬೊಮ್ಮಾಯಿ ಸರ್ಕಾರದ ಸೋಲಿಗೆ-ಯಡಿಯೂರಪ್ಪನವರ ಪದಚ್ಯುತಿಗೆ ನಿಜವಾದ ಕಾರಣಗಳೇನು ಅನ್ನುವುದನ್ನು ಆತ್ಮವಂಚನೆಯಿಲ್ಲದೆ ಜನರೆದುರು ಇಡುವ ಶಕ್ತಿ ನಿಮಗಿದೆಯಾ? ನಿಮ್ಮ ನಡೆ-ನುಡಿಗಳಲ್ಲಿ ನಿಮ್ಮನ್ನು ಜನ ನಂಬುವಂಥಾ ಒಂದೇ ಒಂದು ಲಕ್ಷಣ ತೋರಿಸಬಲ್ಲಿರಾ ನೀವು? ನಿಮ್ಮ ಮುಂಚೂಣಿ ನಾಯಕರುಗಳ ಆಸ್ತಿಪಾಸ್ತಿಗಳನ್ನೆಲ್ಲಾ ಅವರು ಅದ್ಯಾವ ರಾಜಮಾರ್ಗದಲ್ಲಿ ಗಳಿಸಿಕೊಂಡರು ಅನ್ನುವುದನ್ನು ಸ್ವಲ್ಪ ವಿವರಿಸಬಲ್ಲಿರಾ?
ಕುಮಾರಸ್ವಾಮಿಯವರನ್ನು ಕೇಳಬೇಕಿತ್ತು: ಎಲ್ಲಿ ನಿಮ್ಮ ಜೇಬಿನಲ್ಲಿದ್ದ ಪೆನ್’ಡ್ರೈವ್ ಗಳು-ಸೀಡಿಗಳು? ಎಲ್ಲಿ ನೀವು ಆಗಾಗ್ಗೆ ಝಳಪಿಸುವ ಫೈಲುಗಳಲ್ಲಿನ ದಾಖಲೆಗಳು? ಎಲ್ಲಿದೆ ನಿಮ್ಮ ಆಶ್ಚರ್ಯಸದೃಶ ಕೃಷಿ ಆದಾಯದ ರಹಸ್ಯ? ಯಾವಾಗ ಬರುತ್ತದೆ ನೀವು “ಟೈಮ್ ಬಂದಾಗ ಎಲ್ಲಾ ಒಂದೊಂದಾಗೇ ಬಿಚ್ಚಿಡ್ತೀನಿ ನೋಡ್ತಿರಿ” ಅನ್ನುವುದು ನಿಜವಾಗುವ ಟೈಮು?
ಡಿಕೆ ಅವರಿಗೆ ಕೇಳಬೇಕಿತ್ತು: ಬಂಡೆಯ ಹಾಗೆ ನೀವು ಸಿದ್ದರಾಮಯ್ಯನವರ ಹಿಂದೆ ನಿಲ್ಲುವುದು ನಂಬಬಲ್ಲಂಥ ಮಾತಾ? ಸಿಎಂ ಅವರ ಮೇಲೆ ಮುಡಾ ಸ್ಕ್ಯಾಂಡಲ್ ಆರೋಪ ಬರುವುದರಲ್ಲಿ ನಿಮ್ಮ ಪಾತ್ರ ಇಲ್ಲ ಅನ್ನುವುದನ್ನು ನಾವು ನಂಬಬಹುದಾ? ಕುಮಾರಸ್ವಾಮಿ-ಅಶೋಕ-ವಿಜಯೇಂದ್ರ ಅವರ ಹಗರಣಗಳ ಬಗ್ಗೆ, ಅವರೇ ಭ್ರಷ್ಟತೆಯ ಪಿತಾಮಹರುಗಳು ಅನ್ನುವ ಬಗ್ಗೆ ನೀವು ಬರೀ ಮಾತಾಡುತ್ತಿದ್ದೀರೇ ಹೊರತು ಯಾಕೆ ದಾಖಲೆ ಸಮೇತ ಅವರುಗಳನ್ನು ಕೆಡವಿ ಹಾಕಲಿಲ್ಲ? ವಿಜಯೇಂದ್ರ ಅಸೆಂಬ್ಲಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ನಿಮ್ಮದೇ ಸಹಾಯವಿತ್ತು ಅಂತ ಹೇಳುವ ನೀವು ಪಕ್ಷದ ಅಧ್ಯಕ್ಷಗಿರಿಯಲ್ಲಿ ಇನ್ನೂ ಕೂತಿರುವುದು ನೈತಿಕವಾಗಿ ಹೇಗೆ ಸಾಧ್ಯ? ಇನ್ನೂ ಯಾರ್ಯಾರನ್ನೆಲ್ಲಾ ನಿಮ್ಮ ಸಹಾಯದಿಂದ ಗೆಲ್ಲಿಸಿದ್ದೀರಿ-ಸೋಲಿಸಿದ್ದೀರಿ?
ರಾಜಕೀಯ ಹೊಂದಾಣಿಕೆಗಳ ಮಾತು ಬಿಡಿ; ಇಲ್ಲಿದ್ದವರು ಅಲ್ಲಿಗೆ ಅಲ್ಲಿದ್ದವರು ಇಲ್ಲಿಗೆ ಹೋಗುತ್ತಾ-ಬರುತ್ತಾ ತಮ್ಮ ನಾಲಿಗೆಯನ್ನು ಹೊರಳಿಸುವುದನ್ನಂತೂ ನಮಗೆ ನೋಡಿನೋಡಿ ಅಭ್ಯಾಸವಾಗಿ ಹೋಗಿದೆ. ಆದರೆ, ಎಲೆಕ್ಷನ್ನಿನಲ್ಲಿ ತಮ್ಮವರನ್ನೇ ಸೋಲಿಸುವುದು-ಎದುರಾಳಿಗಳನ್ನು ಗೆಲ್ಲಿಸುವುದು ಇದೆಯಲ್ಲಾ, ಇದರ ಬಗ್ಗೆ ಅಧಿಕೃತವಾಗಿ ಮಾತಾಡಿದ ಮೊದಲ ಪಕ್ಷಾಧ್ಯಕ್ಷರು ಡಿಕೆಶಿ. ಬಟ್ ಮೀಡಿಯಾದೊಳಗೆ-ಪಕ್ಷದೊಳಗೆ-ಚಿಂತಕರ ವಲಯದೊಳಗೆ ಫುಲ್ ಸೈಲೆನ್ಸ್.
ಈ ಸೈಲೆನ್ಸಿಗೆ ಕಾರಣ, ಒಂದೋ ನಾವು ನಮ್ಮ ವಿವೇಚನಾ ಶಕ್ತಿಯನ್ನು ಕಳೆದುಕೊಂಡಿರುವುದು; ಅಥವಾ, ನಮ್ಮ ವಿವೇಚನಾ ಶಕ್ತಿಯನ್ನು ನಾವು ನಮ್ಮೊಳಗಿನ ಕುರುಡು ಪ್ರೀತಿಗೋ-ದ್ವೇಷಕ್ಕೋ ಒತ್ತೆಯಿಟ್ಟಿರುವುದು. ಪಕ್ಷದ ಅಧ್ಯಕ್ಷರೊಬ್ಬರು ಕರೆದ ಸಭೆಗೆ ನಮ್ಮಲ್ಲಿನ ವಿವೇಕಯುತರೆಲ್ಲಾ ಆ ಪಕ್ಷದ ಕಚೇರಿಗೇ ಹೋಗಿ ಆ ಪಕ್ಷದ ಪದಾಧಿಕಾರಿಗಳೆದುರು ಶಾಲಾ ಮಕ್ಕಳ ಹಾಗೆ ಕೂತು ಪಾಠ ಕೇಳಿ ಎದ್ದು ಬಂದಾಗಲೇ, ವಿವೇಕದ ಶಕ್ತಿ ಹೊರಟುಹೋಗಿತ್ತು. ಮೊನ್ನೆ ಸಿದ್ದರಾಮಯ್ಯನವರ ಪರವಾಗಿ ಬೀದಿಗಿಳಿದಾಗ, ಪ್ರಾಯೋಜಕತ್ವದ ಮುಲಾಜಿನ ಪವರ್ ಅರ್ಥವಾಗಿಹೋಯಿತು.
ಇನ್ನು ಇಲ್ಲಿ ವಸ್ತುನಿಷ್ಠ ಧ್ವನಿಗಳು ಹುಟ್ಟಲಾರವು. ಪಕ್ಷಪಾತಿ ವೈಚಾರಿಕತೆಯ, ಪ್ರಾಯೋಜಿತ ಚಿಂತನೆಗಳ, ಪ್ರಾಯೋಜಿತ ಹೋರಾಟಗಳ ದಿನಗಳಿವು. ಉತ್ಸಾಹೀ ಹುಡುಗ-ಹುಡುಗಿಯರ ಕೈಗೆ ಮೈಕು ಕೊಟ್ಟು ಅವರನ್ನು ಕೇವಲ ‘ಬೈಟ್ ಮಷೀನ್’ಗಳನ್ನಾಗಿ ಮಾಡುತ್ತಾ ಅವರೊಳಗಿನ ಭಾವೀ ಪತ್ರಕರ್ತರನ್ನು ಮೊಳಕೆಯಲ್ಲೇ ಚಿವುಟಿ ನಿರ್ವಿಣ್ಣರನ್ನಾಗಿಸುತ್ತಿರುವ ದಿನಗಳಿವು.
ರಾಜಕಾರಣ ಮಾತ್ರ ಸ್ವಚ್ಛವಾಗಿರಬೇಕೆಂದುಕೊಂಡರೆ ಅದು ಹುಚ್ಚುತನ, ಅಷ್ಟೆ.
It’s like, Waiting For Godot.
ಕೊನೆಯದಾಗಿ, ಒಂದು ಹಳೇ ಪ್ರಶ್ನೆಯ ಹೊಸ ಚರ್ಚೆಗೆ ನಾಂದಿ: ನಮ್ಮ ದೇಶದ ಫೆಡರಲ್ ವ್ಯವಸ್ಥೆಯಲ್ಲಿ ರಾಜ್ಯಪಾಲರ ಹುದ್ದೆ ಅನಿವಾರ್ಯವಾ?
(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು 'ದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)