Vivek Katju

ಬ್ರಿಕ್ಸ್ ನವದೆಹಲಿ ಘೋಷಣೆ: ರಾಜತಾಂತ್ರಿಕ ಶ್ರೇಯ ನಿಜ, ಸಾಧನೆ ಮಾತ್ರ ಸೀಮಿತ


ಬ್ರಿಕ್ಸ್ ನವದೆಹಲಿ ಘೋಷಣೆ: ರಾಜತಾಂತ್ರಿಕ ಶ್ರೇಯ ನಿಜ, ಸಾಧನೆ ಮಾತ್ರ ಸೀಮಿತ
x
ಯಾವುದೇ ಶೃಂಗಸಭೆಯ ರಾಜತಾಂತ್ರಿಕ ಯಶಸ್ಸನ್ನು, ಅದಕ್ಕೊಂದು ಸೂಕ್ತ ರೂಪುರೇಷೆ ನೀಡುವ ಸಾಮರ್ಥ್ಯದ ಆಧಾರದ ಮೇಲೆ ಅಳೆಯಲಾಗುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ; ಆದ್ದರಿಂದ, ಬ್ರಿಕ್ಸ್ ಶೃಂಗಸಭೆಯ ಶ್ರೇಯಸ್ಸು ಸಲ್ಲಬೇಕಾದವರಿಗೆ ಖಂಡಿತ ದಕ್ಕಬೇಕು.
Click the Play button to hear this message in audio format

ರಾಷ್ಟ್ರೀಯ ನಿಲುವುಗಳ ಜೊತೆ ರಾಜಿ ಮಾಡಿಕೊಳ್ಳದೆ ಯುದ್ಧದ ವಿಚಾರಲ್ಲಿ ಇರಾನ್ ಮತ್ತು ಯುಎಇ ಒಮ್ಮತಕ್ಕೆ ಬರಲು ಸಹಾಯ ಮಾಡುವ ಭಾರತವು ಆತಿಥೇಯವಾಗಿ ಗೆಲುವು ಸಾಧಿಸಿದೆ.

ಪಶ್ಚಿಮ ಏಷ್ಯಾದಲ್ಲಿ ನೆಲೆಗೊಂಡಿರುವ ಪರಿಸ್ಥಿತಿಯ ವಿಚಾರದಲ್ಲಿ ಯುಎಇ ಮತ್ತು ಇರಾನ್ ದೇಶಗಳ ನಿಲುವು ಭಿನ್ನವಾಗಿದ್ದರೂ 2026ರ ಬಿಕ್ಸ್ ಶೃಂಗಸಭೆಯ ಘೋಷಣೆಯನ್ನು ಯಶಸ್ವಿಯಾಗಿ ರೂಪಿಸಲಾಗಿದೆ. ಇದು ಭಾರತದ ರಾಜತಾಂತ್ರಿಕರ ಪಾಲಿಗೆ ನಿರಾಳಭಾವ ಮೂಡಿಸಿದೆ. ಈ ವರ್ಷದ ಮೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯ ರೀತಿಯಲ್ಲಿಯೇ ಈ ಬಾರಿಯೂ ಯಶಸ್ವಿಯಾಗದೆ ಅಧ್ಯಕ್ಷರ ಹೇಳಿಕಗೆ ಮೊರೆ ಹೋಗಬೇಕಾಗಿ ಬಂದಿದ್ದರೆ ಅದು ಈ ಶೃಂಗಸಭೆಯನ್ನು ಆಯೋಜಿಸಿದ್ದ ಭಾರತಕ್ಕೆ ಮುಜುಗರ ತರುತ್ತಿತ್ತು.

ಬಹುಪಕ್ಷೀಯವಾದ ಶೃಂಗಸಭೆಯಲ್ಲಿ ಒಮ್ಮತವನ್ನು ಮೂಡಿಸುವ ಜವಾಬ್ದಾರಿ ಸಾಮಾನ್ಯವಾಗಿ ಆತಿಥೇಯ ರಾಷ್ಟ್ರದ ಮೇಲಿರುತ್ತದೆ. ಅದು ರಾಜತಾಂತ್ರಿಕವಾಗಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಿದೆ ಎಂಬುದನ್ನು ಅದರ ಒಮ್ಮತ ಮೂಡಿಸುವ ಸಾಮರ್ಥ್ಯದಿಂದ ಅಳೆಯಲಾಗುತ್ತದೆ. ಭಾರತವು ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವುದರಿಂದ ಅದರ ಅರ್ಹತೆಯ ಬಗ್ಗೆ ಮೆಚ್ಚುಗೆಯಿಂದ ಮಾತನಾಡಬೇಕಾಗಿದೆ.

ವಿವಾದರಹಿತ ದಾಖಲೆ

ಅಷ್ಟು ಹೇಳಿದ ಮಾತ್ರಕ್ಕೆ ಈ ಘೋಷಣೆಯು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಅಥವಾ ಸದಸ್ಯ ರಾಷ್ಟ್ರಗಳ ಜನರ ಜೀವನದಲ್ಲಿ ಯಾವುದೇ ಮಹತ್ವದ ಬದಲಾವಣೆಯನ್ನು ತರುವ ಅಂಶಗಳನ್ನು ಹೊಂದಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅದನ್ನು ವಿಶ್ಲೇಷಣೆಯ ಮೂಲಕ ಪರಿಶೀಲನೆ ನಡೆಸಬೇಕಾಗುತ್ತದೆ. ಇದನ್ನು ಸದ್ಯೋಭವಿಷ್ಯದಲ್ಲಿ ಊಹೆ ಮಾಡುವುದು ಕಷ್ಟದ ಕೆಲಸ. ಜೊತೆಗೆ ಒಮ್ಮತ ಸಾಧಿಸುವ ಪ್ರಕ್ರಿಯೆಯಲ್ಲಿ ಭಾರತ ಪ್ರಮುಖ ವಿಷಯಗಳ ಕುರಿತ ತನ್ನ ಸಾಂಪ್ರದಾಯಿಕ ನಿಲುವುಗಳಿಂದ ಹೆಜ್ಜೆಯನ್ನು ಹಿಂದಕ್ಕೆ ಸರಿಸಿದೆಯೇ ಎಂಬುದನ್ನು ಕೂಡ ಗುರುತಿಸಬೇಕಾಗುತ್ತದೆ.

ʼಬ್ರಿಕ್ಸ್ ನವದೆಹಲಿ ಘೋಷಣೆ: ಸ್ಥಿತಿಸ್ಥಾಪಕತ್ವ, ಹೊಸ ಆವಿಷ್ಕಾರ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣʼ ಎಂಬ ಘೋಷವಾಕ್ಯವನ್ನು ಹೊಂದಿರುವ ಇದರಲ್ಲಿ140 ಪ್ಯಾರಾಗಳಿವೆ. ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ, ಇಂಧನ ಹಾಗೂ ಆಹಾರ ಭದ್ರತೆ ಸೇರಿದಂತೆ ಅಭಿವೃದ್ಧಿ ವಿಷಯಗಳು, ಆರೋಗ್ಯ ಪೂರೈಕೆ ಸರಪಳಿಗಳು, ಪ್ರಮುಖ ಖನಿಜಗಳ ಲಭ್ಯತೆ ಹಾಗೂ ಸಂಸ್ಕೃತಿ ಮತ್ತು ಜನರಿಂದ ಜನರ ನಡುವಿನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಇದು ಒಳಗೊಂಡಿದೆ.

ಜೊತೆಗೆ ಈ ಘೋಷಣೆಯಲ್ಲಿ ಇರುವ ಹೆಚ್ಚಿನ ಸಂಗತಿಗಳು ಸದಸ್ಯ ರಾಷ್ಟ್ರಗಳ ನಡುವೆ ಯಾವುದೇ ವಿವಾದಕ್ಕೆ ಸಂಬಂಧಿಸಿದವಲ್ಲ. ಅವು ಸಾರ್ವಜನಿಕರ ಹಾಗೂ ಮಾಧ್ಯಮದವರ ಗಮನವನ್ನು ಸೆಳೆಯುವ ಸಾಮರ್ಥ್ಯವನ್ನು ಕೂಡ ಹೊಂದಿಲ್ಲ. ಆದರೆ ಅನಿವಾರ್ಯವಾಗಿ ಅಂತಾರಾಷ್ಟ್ರೀಯ ಸಮುದಾಯ ಹಾಗೂ ರಾಜತಾಂತ್ರಿಕರನ್ನು ಚಿಂತೆಗೇ ಈಡುಮಾಡುವ ವಿವಾದಾತ್ಮಕ ರಾಜಕೀಯ, ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ವಿಚಾರಗಳಂತೂ ಇದ್ದೇ ಇವೆ. ಇತ್ತೀಚಿನ ಶೃಂಗಸಭೆಯ ಘೋಷಣೆಯಲ್ಲಿಯೂ ಕೂಡ ಇವು ಮುನ್ನೆಲೆಗೆ ಬಂದಿರುವುದನ್ನು ಗಮನಿಸಬಹುದು.

ಗರಿಷ್ಠ ದಾಳಿಗೆ ತುತ್ತಾದ ಯುಎಇ

ಈ ಘೋಷಣೆಯಲ್ಲಿ ಅತ್ಯಂತ ವಿವಾದಾತ್ಮಕ ಭಾಗವಿರುವುದು ಇರಾನ್ ಯುದ್ಧದಿಂದ ಉದ್ಭವಿಸಿದ ಪರಿಸ್ಥಿತಿಗೆ ಸಂಬಂಧಿಸಿದ್ದು. ಅಮೆರಿಕ ಜೊತೆಗಿನ ಯುದ್ಧದಲ್ಲಿ ಇರಾನ್ ಹೆಚ್ಚು ದಾಳಿ ಮಾಡಿದ್ದು ಕೊಲ್ಲಿ ದೇಶಗಳಲ್ಲಿ ಒಂದು ಯುಎಇ. ಈ ಎರಡೂ ರಾಷ್ಟ್ರಗಳು ಬ್ರಿಕ್ಸ್ನ ಸದಸ್ಯ ರಾಷ್ಟ್ರಗಳಾಗಿವೆ. ಸೌದಿ ಅರೇಬಿಯಾ ಇಲ್ಲಿ ತಟಸ್ಥ ನಿಲುವನ್ನು ಕಾಯ್ದುಕೊಂಡಿದೆ.

ಸೌದಿ ಅರೇಬಿಯಾ ಕೂಡ ಇರಾನ್ನಿಂದ ಹೆಚ್ಚು ದಾಳಿಗೆ ಒಳಗಾಗಿದೆ. ಆದರೆ ಅದರ ನಿಲುವು ಮಾತ್ರ ಅಸ್ಪಷ್ಟವಾಗಿದೆ. ಬಿೃಕ್ಸ್ ಅದನ್ನು ಪೂರ್ಣ ಸದಸ್ಯನಾಗಿ ಪರಿಗಣಿಸಿದರೂ, ಸೌದಿ ಅರೇಬಿಯಾ ತನ್ನನ್ನು ತಾನು ಹಾಗೆ ಪರಿಗಣಿಸುವುದಿಲ್ಲ. ಅದು ತನ್ನ ಸ್ಥಾನವನ್ನು "ಆಹ್ವಾನಿತ ದೇಶ" ಎಂದು ವಿಶ್ಲೇಷಿಸುತ್ತದೆ. ಇದರ ವಿದೇಶಾಂಗ ಸಚಿವರು ಶೃಂಗಸಭೆಯಲ್ಲಿ ಭಾಗವಹಿಸಿದ್ದರು, ಆದರೆ ಘೋಷಣೆಯ ಕರಡು ರಚನೆ ಸೇರಿದಂತೆ ಯಾವುದೇ ಚಟುವಟಿಕೆಗಳಲ್ಲಿ ಸೌದಿ ಅರೇಬಿಯಾ ಸಕ್ರಿಯವಾಗಿ ಭಾಗವಹಿಸಲಿಲ್ಲ.

ಹೀಗಾಗಿ, ಅಮೆರಿಕದ ನೆಲೆಗಳನ್ನು ಮಾತ್ರ ಗುರಿಯಾಗಿಸಿದ್ದೇನೆ ಎಂದು ಇರಾನ್ ಹೇಳಿಕೊಂಡರೂ ಅರಬ್ ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ನಡೆಸುವುದು ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ಹೈಡ್ರೋಕಾರ್ಬನ್ಗಳ ಹರಿವನ್ನು ನಿರ್ಬಂಧಿಸುವುದರಿಂದ, ಮಾತುಕತೆಯ ಕೋಣೆಯಲ್ಲಿ ಯುಎಇ ಮತ್ತು ಇರಾನ್ ನಡುವೆ ಮಾತ್ರ ಸಂಘರ್ಷದ ಗೆರೆಗಳು ಎಳೆದಂತಾಗಿದ್ದವು. ಸೌದಿ ಅರೇಬಿಯಾವು ಪೂರ್ಣ ಪ್ರಮಾಣದ ಸದಸ್ಯರಾಗಿದ್ದರೆ ಈ ಪ್ರಕ್ರಿಯೆಯು ಅಪಾರ ಜಟಿಲವಾಗುತ್ತಿತ್ತು.

ಪಶ್ಚಿಮ ಏಷ್ಯಾ ಸ್ಥಿತಿಯೇ ವಿವಾದಾತ್ಮಕ ಭಾಗ

ಈ ಘೋಷಣೆಯಲ್ಲಿನ ಅತ್ಯಂತ ವಿವಾದಾತ್ಮಕ ಸಂಗತಿ ಎಂದರೆ ಅದು 28ನೇ ಪ್ಯಾರಾಗ್ರಾಫ್ ಎಂದು ಮಾಜಿ ರಾಜತಾಂತ್ರಿಕರೂ ಆಗಿರುವ ಈ ಲೇಖಕರು ಭಾವಿಸುತ್ತಾರೆ. ಇದು ಇರಾನ್ ಯುದ್ಧದ ಸೌಮ್ಯ ರೂಪವಾದ "ಪಶ್ಚಿಮ ಏಷ್ಯಾದ ಪರಿಸ್ಥಿತಿ"ಯ ಬಗೆಗೆ ವಿವರಿಸುತ್ತದೆ. ಫೆಬ್ರವರಿ 28 ರಂದು ನಿರ್ಣಾಯಕ ದಾಳಿಯೊಂದಿಗೆ ಪ್ರಾರಂಭವಾದ ಅಮೆರಿಕ ಮತ್ತು ಇಸ್ರೇಲ್ ಯುದ್ಧವನ್ನು ಸಂಪೂರ್ಣವಾಗಿ ಖಂಡಿಸಬೇಕೆಂದು ಇರಾನ್ ಬಯಸಿರುವುದು ಸ್ಪಷ್ಟವಾಗಿದೆ. ಇನ್ನು ಯುಎಇಯ ಗಮನವು ತನ್ನ ಭೂಪ್ರದೇಶದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಹಾಗೂ ಹೊರ್ಮುಜ್ ಜಲಸಂಧಿಯ ಬಂದ್ ಮಾಡುವುದರ ಮೇಲೆ ಕೇಂದ್ರೀಕೃತವಾಗಿತ್ತು.

“ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ನಿರಂತರ ಏರುತ್ತಿರುವ ಬಗ್ಗೆ ನಾವು ತೀವ್ರ ಕಳಳವಳವನ್ನು ವ್ಯಕ್ತಪಡಿಸುತ್ತೇವೆ ಮತ್ತು ನಮ್ಮ ಸಂಬಂಧಿತ ರಾಷ್ಟ್ರೀಯ ನಿಲುವುಗಳನ್ನು ಸ್ಮರಿಸುತ್ತಾ, ಗರಿಷ್ಠ ಸಂಯಮ ಹಾಗೂ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದಾದ ಕ್ರಮಗಳನ್ನು ತಪ್ಪಿಸುವಂತೆ ಕರೆ ನೀಡುತ್ತೇವೆ" ಎಂದು ಹೇಳುವ ಈ ಪ್ಯಾರಾಗ್ರಾಫ್ನ ಮೊದಲ ಎರಡು ವಾಕ್ಯಗಳನ್ನು ರೂಪಿಸಿರುವುದು ಎರಡೂ ದೇಶಗಳು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಲು ಸಹಾಯ ಮಾಡಿತು.

ಇದು ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಕುರಿತಾದ ಇರಾನ್ನ ಕಳವಳಗಳನ್ನು ಹಾಗೂ ನಾಗರಿಕರು ಮತ್ತು ನಾಗರಿಕ ಮೂಲಭೂತ ಸೌಕರ್ಯಗಳ ಭದ್ರತೆಗೆ ಸಂಬಂಧಿಸಿದ ಯುಎಇಯ ಕಾಳಜಿಗಳನ್ನು ಸಮರ್ಥವಾಗಿ ಬಿಂಬಿಸುವ ಕೆಲಸ ಮಾಡುತ್ತದೆ. ಆದಾಗ್ಯೂ, "ನಮ್ಮ ಸಂಬಂಧಿತ ರಾಷ್ಟ್ರೀಯ ನಿಲುವುಗಳನ್ನು ಸ್ಮರಿಸುತ್ತಾ" ಎಂಬ ನಿರ್ದಿಷ್ಟ ಉಲ್ಲೇಖವಿಲ್ಲದೆ ಹೋಗಿದ್ದರೆ ಇವುಗಳಿಗೆ ಯಾವುದೇ ಅರ್ಥವಿರುತ್ತಿರಲಿಲ್ಲ. ಈ ಪದಗುಚ್ಛವನ್ನು ಸೇರಿಸುವುದು ಒಮ್ಮತವನ್ನು ಸಾಧಿಸಲು ಯಾವಾಗಲೂ ಕೊನೆಯ ಅಸ್ತ್ರವಾಗಿದೆ; ಏಕೆಂದರೆ ಇದು ತಾವು ತಮ್ಮ ರಾಷ್ಟ್ರೀಯ ನಿಲುವುಗಳನ್ನು ಬಿಟ್ಟುಕೊಟ್ಟಿಲ್ಲ ಎಂಬುದನ್ನು ತೋರಿಸಲು ಪಕ್ಷಗಳಿಗೆ ಅವಕಾಶ ನೀಡುತ್ತದೆ ಮತ್ತು ದಾಖಲೆಯಲ್ಲಿ ಏನೇ ಇರಲಿ, ತಮ್ಮ ಅಭಿಪ್ರಾಯಗಳೇ ಪ್ರಮುಖವಾಗಿವೆ ಎಂಬ ಸಂದೇಶವನ್ನು ಇದು ನೀಡುತ್ತದೆ.

ಈ ಹಿನ್ನೆಲೆಯಲ್ಲಿ ಯುಎಇ ಮತ್ತು ಇರಾನ್ ಎರಡೂ ದೇಶಗಳು ತಾವು ಮಾತುಕತೆಯಲ್ಲಿ ಯಾವುದನ್ನೂ ಬಿಟ್ಟುಕೊಟ್ಟಿಲ್ಲ ಎಂದು ತಮ್ಮ ಜನರಿಗೆ ಹೇಳಲು ಸಾಧ್ಯವಾಗುತ್ತದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಕಠಿಣವಾದಿಗಳನ್ನು ತವರು ನೆಲದಲ್ಲಿ ಎದುರಿಸಬೇಕಾಗಿರುವ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರಿಗೆ ಇದು ವಿಶೇಷವಾಗಿ ಮುಖ್ಯವಾಗಿತ್ತು.

ಕೈಬಿಟ್ಟ ಉಕ್ರೇನ್ ಯುದ್ಧದ ಪ್ರಸ್ತಾಪ

ಜಿಲ್ನಲ್ಲಿ ನಡೆದ ಕೊನೆಯ ಬಿೃಕ್ಸ್ ಶೃಂಗಸಭೆಯಲ್ಲಿ 'ರಾಷ್ಟ್ರೀಯ ನಿಲುವುಗಳ' ಅದೇ ತಂತ್ರವನ್ನು ಬಳಸುವ ಮೂಲಕ ಉಕ್ರೇನ್ ಯುದ್ಧದ ಕುರಿತು ರಾಜೀ ಮಾಡಿಕೊಳ್ಳಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಅದರಲ್ಲಿ, "ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ಮಹಾಸಭೆ ಸೇರಿದಂತೆ ಸೂಕ್ತ ವೇದಿಕೆಗಳಲ್ಲಿ ವ್ಯಕ್ತಪಡಿಸಿದಂತೆ ಉಕ್ರೇನ್ನಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದ ನಮ್ಮ ರಾಷ್ಟ್ರೀಯ ನಿಲುವುಗಳನ್ನು ನಾವು ಸ್ಮರಿಸುತ್ತೇವೆ..." ಎಂದು ಹೇಳಲಾಗಿತ್ತು. ಆದರೆ ರಷ್ಯಾದ ಬಯಕೆಗಳಿಗೆ ಮಣಿದು, ನವದೆಹಲಿ ಘೋಷಣೆಯಲ್ಲಿ ಈ ಉಲ್ಲೇಖವನ್ನೇ ಸಂಪೂರ್ಣವಾಗಿ ಕೈಬಿಡಲಾಗಿದೆ.

ಇನ್ನೊಂದು ಕುತೂಹಲದ ಸಂಗತಿ ಏನೆಂದರೆ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶೃಂಗಸಭೆಗೆ ಕೇವಲ ಒಂದು ವಾರದ ಮೊದಲು ಸೆಪ್ಟೆಂಬರ್ 3-5 ರಂದು ಉಕ್ರೇನ್ ಮತ್ತು ಪೋಲೆಂಡ್ಗೆ ಭೇಟಿ ನೀಡಿದ್ದರು. ಅವರು ಕೀವ್ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದರು. ಉಕ್ರೇನ್ನಲ್ಲಿ ಶಾಂತಿ ನೆಲೆಗೊಳ್ಳಬೇಕು ಎಂದು ಭಾರತ ಬಯಸುತ್ತಿದ್ದರೂ, ಅದು ರಷ್ಯಾದ ಬಯಕೆಗಳಿಗೆ ಅನ್ವಯವಾಗಿ ನಡೆದುಕೊಂಡು ರಿಯೊ ಶೃಂಗಸಭೆಯ ಉಕ್ರೇನ್ ಯುದ್ಧದ ಉಲ್ಲೇಖವನ್ನು ಸಂಪೂರ್ಣವಾಗಿ ಕೈಬಿಡಲಿದೆ ಎಂದು ಜೈಶಂಕರ್ ಝೆಲೆನ್ಸ್ಕಿಗೆ ಎಚ್ಚರಿಕೆ ನೀಡಿದ್ದರೇ? ಈ ಲೇಖಕರ ಆಲೋಚನೆಯ ಪ್ರಕಾರ, ಜೈಶಂಕರ್ ಅವರ ಭೇಟಿಗಳಿಂದ ಕೀವ್ ಮತ್ತು ವಾರ್ಸಾದಲ್ಲಿ ಗಳಿಸಿರಬಹುದಾದ ಯಾವುದೇ ಸದ್ಭಾವನೆಯು, ಉಕ್ರೇನ್ ಯುದ್ಧದ ವಾಕ್ಯವನ್ನು ಕೈಬಿಡುವುದರಿಂದ ಗಣನೀಯವಾಗಿ ಅಪಾಯಕ್ಕೆ ಸಿಲುಕಿದೆ.

"ಮೂಲ ಕಾರಣ" ಎಂಬ ನುಡಿಗಟ್ಟು ಕಾಡೀತು

ಇಲ್ಲಿ ಮತ್ತೆ ಎರಡು ಅಂಶಗಳನ್ನು ಉಲ್ಲೇಖಿಸಬಹುದು.

ಭಯೋತ್ಪಾದನೆಗೆ ಯಾವುದೇ "ಮೂಲ ಕಾರಣಗಳ" ಉಲ್ಲೇಖವಿರಬಾರದು ಎಂಬುದರ ಬಗ್ಗೆ ಭಾರತವು ವಿಶೇಷವಾಗಿ ನಿಷ್ಠುರ ನಿಲುವನ್ನು ಹೊಂದಿದೆ; ಏಕೆಂದರೆ ಇದು ಭಯೋತ್ಪಾದನೆಗೆ ಸಮರ್ಥನೆಗಳನ್ನು ಹುಡುಕುತ್ತ ಅದರಿಂದ ತಪ್ಪಿಸಿಕೊಳ್ಳುವ ಪ್ರವೃತ್ತಿಯಾಗಿದೆ. ಈ ಘೋಷಣೆಯಲ್ಲೂ ಸಹ ಮೂಲ ಕಾರಣಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಇದು ಒಳ್ಳೆಯ ವಿಚಾರವೇ.

ಆದರೆ, ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ವಿಭಾಗದ ಅಡಿಯಲ್ಲಿ ಬರುವ ಮೊದಲ ವಾಕ್ಯ ಈ ಕೆಳಗಿನ ಅಂಶವನ್ನು ಒಳಗೊಂಡಿದೆ: "ಧ್ರುವೀಕರಣ ಮತ್ತು ಅವಿಶ್ವಾಸದ ಪ್ರಸ್ತುತ ಜಾಗತಿಕ ಸಂದರ್ಭವನ್ನು ನಾವು ಗಮನಿಸುತ್ತೇವೆ ಮತ್ತು ಅಂತರರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ಬಲಪಡಿಸಲು ಜಾಗತಿಕ ಕ್ರಮಗಳಿಗೆ ಉತ್ತೇಜನ ನೀಡುತ್ತೇವೆ. ಸಂಘರ್ಷದ ಸಾಧ್ಯತೆಯನ್ನು ಕಡಿಮೆ ಮಾಡಲು ರಾಜಕೀಯ-ರಾಜತಾಂತ್ರಿಕ ಕ್ರಮಗಳ ಮೂಲಕ ಈ ಸವಾಲುಗಳು ಮತ್ತು ಸಂಬಂಧಿತ ಭದ್ರತಾ ಬೆದರಿಕೆಗಳಿಗೆ ಪ್ರತಿಕ್ರಿಯಿಸುವಂತೆ ನಾವು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುತ್ತೇವೆ ಹಾಗೂ ಅವುಗಳ ಮೂಲ ಕಾರಣಗಳನ್ನು ಪರಿಹರಿಸುವುದು ಸೇರಿದಂತೆ ಸಂಘರ್ಷವನ್ನು ತಡೆಗಟ್ಟುವ ಪ್ರಯತ್ನಗಳಲ್ಲಿ ತೊಡಗಬೇಕಾದ ಅವಶ್ಯಕತೆಯನ್ನು ಒತ್ತಿಹೇಳುತ್ತೇವೆ."

ಇದು ಸಾಮಾನ್ಯ ಪ್ರಸ್ತಾಪ ಎಂದು ವಾದಿಸಬಹುದಾದರೂ, ಅನೇಕರು ಭಯೋತ್ಪಾದನೆಯನ್ನು ಬಲಶಾಲಿಗಳ ವಿರುದ್ಧ ಅಬಲರ ಅಸಮಾನ ಸಂಘರ್ಷ ಎಂದು ವಾಗ್ದಾಳಿ ಮಾಡುತ್ತಾರೆ. ಆದ್ದರಿಂದ, ಭವಿಷ್ಯದಲ್ಲಿ ಭಯೋತ್ಪಾದನೆಯ ವಿಷಯದಲ್ಲಿ ಇದನ್ನು ನಮ್ಮ ವಿರುದ್ಧ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಭಾರತೀಯ ರಾಜತಾಂತ್ರಿಕರು ಇದಕ್ಕೆ ಅನುಮತಿ ನೀಡದೇ ಇರುವುದು ಉತ್ತಮವಾಗಿತ್ತು. ಇದು ಕೇವಲ ಸಣ್ಣ ತಪ್ಪುಗಳನ್ನು ಹೆಕ್ಕಿ ತೆಗೆಯುವುದಲ್ಲ. ಯಾಕೆಂದರೆ ಕೆಲವೊಮ್ಮೆ ಬಳಸುವ ವಾಕ್ಯರಚನೆಗಳು ಪರೋಕ್ಷವಾಗಿ ತಮ್ಮದೇ ಆದ ಪ್ರತ್ಯೇಕ ಅಸ್ತಿತ್ವವನ್ನು ಪಡೆದುಕೊಂಡು ಭವಿಷ್ಯದಲ್ಲಿ ನಮ್ಮನ್ನೇ ಕಾಡಲು ಶುರುಮಾಡುತ್ತವೆ.

ಚೀನಾ ಕೃತಕ ಬುದ್ಧಿಮತ್ತೆಯ ಬಾನಗಡಿ

ಕೃತಕ ಬುದ್ಧಿಮತ್ತೆ ಸುರಕ್ಷತಾ ಅವಶ್ಯಕತೆಗಳ ಕುರಿತಾದ ವಾಕ್ಯವು ವಿವೇಚನೆಯಿಂದ ಕೂಡಿದೆ. ಇದು ಈ ವಲಯದಲ್ಲಿ ಪ್ರಮುಖ ಅಮೆರಿಕ ಕಂಪನಿಗಳು ಏಐ ಕುರಿತು ಹೊಂದಿರುವ ಪ್ರಸ್ತುತ ಎಚ್ಚರಿಕೆಗೆ ಅನುಗುಣವಾಗಿದೆ. ಅಮೆರಿಕ ಜೊತೆ ಈ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆಯಲ್ಲಿ ತೊಡಗಿರುವ ಮತ್ತು ಇದಕ್ಕೆ ಸಹಿ ಹಾಕಿರುವ ಚೀನಾದ ಮೇಲೆ ಇದು ಯಾವುದೇ ಪರಿಣಾಮ ಬೀರುತ್ತದೆಯೇ ಎಂಬುದು ಪ್ರಶ್ನೆ. ಏಕೆಂದರೆ ಏಐನಲ್ಲಿ ಮುಂಚೂಣಿಯಲ್ಲಿರುವ ದೇಶವು ಭವಿಷ್ಯದಲ್ಲಿ ಜಗತ್ತಿನ ಪ್ರಮುಖ ಸಾಕ್ತಿಯಾಗಬಹುದು.

ಅಂತಿಮವಾಗಿ, ನರೇಂದ್ರ ಮೋದಿ ಸರ್ಕಾರವು ಬ್ರಿಕ್ಸ್ ಶೃಂಗಸಭೆಯನ್ನು ವಿಶ್ವದಲ್ಲಿ ಭಾರತದ ಮತ್ತು ಮೋದಿಯವರ ಸ್ಥಾನವನ್ನು ಹೆಚ್ಚಿಸಿದ ಮಹಾನ್ ವಿಜಯವಾಗಿ ಸಹಜವಾಗಿಯೇ ಬಿಂಬಿಸುತ್ತದೆ. ಆದರೆ ಸತ್ಯ ಸಂಗತಿ ಎಂದರೆ ಒಮ್ಮೆ 'ನಾಯಕರು ಮತ್ತು ರಾಜರು ಹೊರಟು ಹೋದ ನಂತರ' ದೇಶಗಳು ಮತ್ತು ಅವುಗಳ ನಾಯಕರ ಭವಿಷ್ಯವನ್ನು ನಿರ್ಧರಿಸುವುದು ವಿದೇಶಿ ವಿಷಯಗಳಿಗಿಂತ ಹೆಚ್ಚಾಗಿ ಪ್ರಾಪಂಚಿಕ ಹಾಗೂ ದೇಶೀಯ ಸಮಸ್ಯೆಗಳೇ ಆಗಿರುತ್ತವೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story