
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ದೇವಸ್ಥಾನದ ಸಂಪತ್ತನ್ನು ಯಾರು ರಕ್ಷಿಸಬೇಕಾಗಿತ್ತೋ ಅವರೇ ಅದೆನ್ನೆಲ್ಲ ಮನೆಗೆ ಹೊತ್ತೊಯ್ದಾಗ ಸನಾತನ ಧರ್ಮವೇ ಗಾಯಗೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು.
ನಾನು ಹುಟ್ಟಿ ಬೆಳೆದ ದೆಹಲಿಯ ನೇತಾಜಿ ನಗರ ಬಡಾವಣೆಯಲ್ಲಿ ʼಕಾಳʼ ಎಂಬ ಸುಮಾರು 20ರ ಹರಯದ ಪುಂಡನಿದ್ದ. ಕಾಳ ಎಂಬ ಹೆಸರು ಆತ ಮಾಡುತ್ತಿದ್ದ ಕೃತ್ಯಗಳಿಗೆ ತಕ್ಕುನಾಗಿಯೇ ಇತ್ತು. ಆತ ಎಸಗುತ್ತಿದ್ದ ಅತ್ಯಂತ ಕುಖ್ಯಾತ ಕಾರ್ಯಗಳಲ್ಲಿ ಒಂದೆಂದರೆ ಸುತ್ತಮುತ್ತಲಿನ ಪ್ರದೇಶದಲ್ಲಿರುವ ರಾಮ-ಶಿವ ಮಂದಿರಗಳಿಂದ ಹಣವನ್ನು ಕದಿಯುವುದು.
ಕಾಳನ ಕಳ್ಳತನದ ತಂತ್ರ ತೀರಾ ಸರಳವಾಗಿತ್ತು. ಆತ ತನ್ನ ಎರಡೂ ಅಂಗೈಗಳಿಗೆ ಚೆನ್ನಾಗಿ ಅಂಟು ಹಚ್ಚಿಕೊಂಡು ಹತ್ತಿರದಲ್ಲೇ ಇರುವ ಚಿಕ್ಕ-ಪುಟ್ಟ ದೇವಸ್ಥಾನಗಳಿಗೆ ಹೋಗುತ್ತಿದ್ದ. ಹನುಮಂತನ ಸನ್ನಿಧಿಯಲ್ಲಿ ತಲೆ ಬಾಗಿ ನಮಿಸುವಂತೆ ನಟಿಸುತ್ತ ಸಿಮೆಂಟ್ ಬೆಂಚಿನ ಮೇಲೆ ಹರಡಿಕೊಂಡಿರುತ್ತಿದ್ದ ನಾಣ್ಯಗಳ ಮೇಲೆ ತನ್ನ ಅಂಗೈಗಳನ್ನು ಇಡುತ್ತಿದ್ದ. ಅದು ತಕ್ಷಣ ಕೈಗೆ ಅಂಟಿಕೊಳ್ಳುತ್ತಿತ್ತು.
ನಾಣ್ಯಗಳು ಅಂಗೈಗೆ ಅಂಟಿಕೊಂಡಿರುವುದು ಖಚಿತವಾದ ಬಳಿಕ ಆತ ನಿಧಾನಕ್ಕೆ ತಲೆ ಎತ್ತಿ ಭಕ್ತಿಯಿಂದ ದೇವರನ್ನು ನೋಡುವವನಂತೆ ನಟಿಸುತ್ತ ʼಜೈ ಭಜರಂಗಬಲಿʼ ಎಂದು ಕೂಗುತ್ತ ಕದ್ದ ಹಣದೊಂದಿಗೆ ಶಾಂತಚಿತ್ತನಾಗಿ ಹೊರನಡೆಯುತ್ತಿದ್ದ.
ಕಾಳನನ್ನು ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಯಾಕೆಂದರೆ ಆತ ಬಹಳ ದೊಡ್ಡ ಪುಂಡನಾಗಿದ್ದ. ಹಾಗಾಗಿ ಯಾರೂ ಆತನ ತಂಟೆಗೆ ಹೋಗಲು ಅಂಜುತ್ತಿದ್ದರು. ಅವನ ಕೃತ್ಯಗಳನ್ನು ನೋಡಿ ಅಸಹ್ಯಪಟ್ಟುಕೊಂಡ ಜನರೂ ಮಾತನಾಡುತ್ತಿರಲಿಲ್ಲ. ಮುಂದೇನಾದರೂ ನಮಗೆ ತೊಂದರೆಯಾದರೆ ಏನು ಕಥೆ ಎಂದು ಸುಮ್ಮನಾಗುತ್ತಿದ್ದರು.
ಅಯೋಧ್ಯೆಯ ಮಹಾಪಾಪ
ಅಯೋಧ್ಯೆ ರಾಮ ಮಂದಿರದ ಪಾಲಿಗೆ ಯಾರು ರಕ್ಷಕರಾಗಬೇಕಿತ್ತೋ ಅವರೇ ಎಸಗಿದ ದೈವದ್ರೋಹದ ಬಗ್ಗೆ ಯೋಚಿಸಿದಾಗಲೆಲ್ಲ ನನಗೆ ಈ ಕಾಳನೆಂಬ ಕಳ್ಳನ ಚಿತ್ರವೇ ಕಣ್ಣ ಮುಂದೆ ಬರುತ್ತಿತ್ತು.
ಅಯೋಧ್ಯೆ ರಾಮಮಂದಿರದಲ್ಲಿ ನಡೆದಿರುವ ಈ ಅಪರಾಧ ಮಹಾಪಾಪ. ಇದು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಇರುವ ಹಿಂದುಗಳು ತಮ್ಮ ಅಚಲ ಭಕ್ತಿಯಿಂದ ದೇವಾಲಯಕ್ಕೆ ನೀಡಿದ ಸಂದರ್ಭದಲ್ಲಿ ಮಾಡಿದ ಸಣ್ಣ-ಪುಟ್ಟ ದೇಣಿಗೆಗಳ ನಿರ್ಲಜ್ಜ ಲೂಟಿಯಾಗಿದೆ.
ಬಾಬರಿ ಮಸೀದಿಯ ಅವಶೇಷಗಳ ಮೇಲೆ ತಲೆ ಎತ್ತಿ ನಿಂತ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಕಾರಣವಾದ ರಾಜಕೀಯ ಒತ್ತಟ್ಟಿಗಿರಲಿ. ಅಲ್ಲಿಗೆ ಹೋದ ಲಕ್ಷಾಂತರ ಜನರಲ್ಲಿ ನನ್ನ ಸ್ನೇಹಿತರೂ ಇದ್ದಾರೆ, ಸಂಬಂಧಿಕರೂ ಇದ್ದಾರೆ. ಅವರೆಲ್ಲ ಹೋಗಿದ್ದು ಭಕ್ತಿಯ ಕಾರಣಕ್ಕೇ ಹೊರತು, ಹಿಂದೂ ಪರ ರಾಜಕೀಯ ಅಜೆಂಡಾವನ್ನು ಒಪ್ಪಿಕೊಂಡ ಕಾರಣಕ್ಕೆ ಅಲ್ಲ.
2024ರ ಜನವರಿ ತಿಂಗಳಲ್ಲಿ ದೇವಸ್ಥಾನ ಉದ್ಘಾಟನೆಗೊಂಡ ಬಳಿಕ ಅಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರೂ ದೇವರ ಮೇಲಿನ ಭಕ್ತಿಯಿಂದ ತಮ್ಮ ಕೈಲಾದಷ್ಟು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಅಥವಾ ಎರಡನ್ನೂ ಹಾಕಿದ್ದಾರೆ.
ತಾವು ಧರ್ಮ ರಕ್ಷಕರು ಎಂದು ಹೇಳಿಕೊಳ್ಳುತ್ತಿದ್ದವರ ಗುಂಪು ದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು ಹೀಗೆ ಕೊಳ್ಳೆಹೊಡೆದು ಬಿಡುತ್ತಾರೆ ಎಂಬುದನ್ನು ಹಾಗೆ ದೇಣಿಗೆ ಹಾಕಿದ ಯಾರೊಬ್ಬರೂ ಯೋಚನೆ ಕೂಡ ಮಾಡಿರಲು ಸಾಧ್ಯವಿಲ್ಲ.
ಭಕ್ತರ ನಂಬಿಕೆಗೆ ದ್ರೋಹ
ಈ ಎಲ್ಲ ಹಿನ್ನೆಲೆಯಲ್ಲಿ ಈಗ ಅಯೋಧ್ಯೆ ರಾಮ ಮಂದಿರದ ದೈನಂದಿನ ಹಣದ ಸಂಗ್ರಹಣೆಯಲ್ಲಿ ಭಾರಿ ಕುಸಿತ ಉಂಟಾಗಿದೆ ಎಂಬ ವರದಿ ನನಗೆ ಆಶ್ಚರ್ಯವನ್ನುಂಟು ಮಾಡಿಲ್ಲ.
ದೇವಸ್ಥಾನದಿಂದ ದೋಚಿದ ಹಣ ಮತ್ತು ಆಭರಣಗಳ ಮೌಲ್ಯ 80 ಲಕ್ಷ ರೂಪಾಯಿಗಳೋ ಅಥವಾ ಅದಕ್ಕಿಂತ ಹೆಚ್ಚೋ ಎಂಬುದು ಅಪ್ರಸ್ತುತ. ಇದು ಪೊಲೀಸ್ ವರದಿ ನೀಡುತ್ತಿರುವ ಅಂಕಿಅಂಶ. ಆದರೆ, ಆ ಮೊತ್ತ ಇದಕ್ಕಿಂತಲೂ ಹೆಚ್ಚಿರಲೇಬೇಕೆಂದು ನಾನೂ ಸೇರಿದಂತೆ ಅನೇಕ ಹಿಂದೂಗಳು ನಂಬುತ್ತೇವೆ. ಹಾಗೆ ಭಾವಿಸಲು ಕಾರಣವೂ ಇದೆ.
ಜೊತೆಗೆ ಈ ಧರ್ಮದ್ರೋಹವನ್ನು ಎಸಗಿದವರು ಬ್ಯಾಂಕ್ ಉದ್ಯೋಗಿಗಳೇ, ಚಾಲಕರೇ, ಗುಮಾಸ್ತರೇ ಅಥವಾ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಭಾಗವೇ ಎಂಬುದು ಕೂಡ ಅಪ್ರಸ್ತುತ.
ರಾಯ್ ರಾಜೀನಾಮೆ ಏನನ್ನೂ ಬದಲಿಸದು
ಈ ನಡುವೆ ಚಂಪತ್ ರಾಯ್ ಅವರು ಹಗರಣದ ನೈತಿಕ ಹೊಣೆ ಹೊತ್ತು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಕೀಯ ನಂಟು ಹೊಂದಿರುವ ಈ ದೇವಸ್ಥಾನದ ಆಡಳಿತ ಮಂಡಳಿಯ ವಿಚಾರದಲ್ಲಿ, ಅವರ ನಿರ್ಗಮನವೇ ಪರಿಹಾರ ಎಂದು ಸಂಘ ಪರಿವಾರ ಭಾವಿಸಿದರೆ ಅದು ತಪ್ಪು ಲೆಕ್ಕಾಚಾರವೆನ್ನದೆ ಬೇರೆ ವಿಧಿಯಿಲ್ಲ.
ರಾಯ್ ಅವರು ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಹಿರಿಯ ನಾಯಕರಾಗಿದ್ದಾರೆ. ಬಾಬರಿ ಮಸೀದಿಯನ್ನು ರಾಮಮಂದಿರವನ್ನಾಗಿ ಪರಿವರ್ತಿಸುವ ಧಾರ್ಮಿಕ ಚಳವಳಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದವರು. ಈ ಅಭಿಯಾನದಿಂದಾಗಿಯೇ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯಲು ಸಾಧ್ಯವಾಗಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅವರು ಈಗಲೂ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ನಲ್ಲೇ ಮುಂದುವರಿಯುತ್ತಾರೆ ಕೂಡ.
ಅಧಿಕಾರದಲ್ಲಿರುವವರ ವಿಶ್ವಾಸಕ್ಕೆ ಪಾತ್ರರಾಗಿದ್ದ ರಾಯ್ ಅವರೇ, ಸಿಬ್ಬಂದಿ ನೇಮಕಾತಿ ಮತ್ತು ಆಂತರಿಕ ಭದ್ರತೆ ಸೇರಿದಂತೆ ದೇವಸ್ಥಾನದ ಎಲ್ಲಾ ವ್ಯವಹಾರಗಳಲ್ಲೂ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿದ್ದರು. ಕಳ್ಳತನದ ಆರೋಪ ಹೊತ್ತವರಲ್ಲಿ ಅವರ ಚಾಲಕನೂ ಒಬ್ಬ ಎಂಬುದು ಗಮನಾರ್ಹ.
ಒಂದು ಅಚ್ಚರಿಯ 'ಭರವಸೆ'
ರಾಜೀನಾಮೆ ನೀಡಿದ ಮತ್ತೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ. 2024ರಲ್ಲಿ ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಆತಿಥ್ಯ ವಹಿಸಿಕೊಂಡವರಲ್ಲಿ ಅವರೂ ಒಬ್ಬರು.
"ಭವಿಷ್ಯದಲ್ಲಿ ಇಂತಹ ಅಹಿತಕರ ಸನ್ನಿವೇಶಗಳು ಎಂದಿಗೂ ಮರುಕಳಿಸದಂತೆ ನಾವು ಎಲ್ಲರಿಗೂ ಭರವಸೆ ನೀಡುತ್ತೇವೆ" ಎಂದು ಟ್ರಸ್ಟ್‌ನ ಖಜಾಂಚಿ ಗೋವಿಂದ ದೇವ್ ಗಿರಿ ಅವರು ಹೇಳಿಕೆ ನೀಡಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಅವರು ಇನ್ನೂ ರಾಜೀನಾಮೆ ನೀಡಿಲ್ಲ.
ಅವರ ಈ ಅಭಿಪ್ರಾಯವು ಅಚ್ಚರಿ ಉಂಟುಮಾಡುವುದರ ಜೊತೆಗೆ ವಾಸ್ತವವನ್ನೂ ನಮ್ಮ ಮುಂದೆ ತೆರೆದಿಡುವಂತಿದೆ.
ಅಂತಹ ಕಳ್ಳತನ ಮತ್ತೆ ಸಂಭವಿಸುವುದಿಲ್ಲ ಎಂಬ ವಾದವನ್ನು ಯಾರೂ ಅಷ್ಟು ಸುಲಭವಾಗಿ ನಂಬುವುದಿಲ್ಲ. ಏಕೆಂದರೆ, ಲಕ್ಷಾಂತರ ಭಕ್ತರು ಭೇಟಿ ನೀಡುವ ದೇವಸ್ಥಾನದಲ್ಲಿ, ಟ್ರಸ್ಟ್ ಯಾವುದೇ ಸುಭದ್ರವಾದ ವ್ಯವಸ್ಥೆಯನ್ನು ರೂಪಿಸಿರಲಿಲ್ಲ ಎಂಬುದು ಈ ಅಪರಾಧದಿಂದ ಸ್ಪಷ್ಟವಾಗುತ್ತದೆ.
'ಹಿಂದೂ ಧರ್ಮದ ರಕ್ಷಕರೇ ಭಕ್ಷಕರುʼ
ಸಾಮಾನ್ಯ ಜನರು ಭಕ್ತಿಯಿಂದ ಅರ್ಪಿಸಿದ ಹಣವನ್ನು, ಯಾವುದೇ ನೈತಿಕತೆಯಿಲ್ಲದ ಮತ್ತು ತಾವೇ 'ಹಿಂದೂ ಧರ್ಮದ ರಕ್ಷಕರು' ಎಂದು ಹೇಳಿಕೊಳ್ಳುವ ಕೆಲವರು ದೋಚಿದ್ದಾರೆ ಎಂದು ಯೋಚಿಸುವುದೇ ಆಘಾತಕಾರಿ.
ಇಷ್ಟು ಮಾತ್ರವಲ್ಲದೆ, ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ.
ಈ ಅಪರಾಧ ಮತ್ತು ಇದರ ಹಿಂದೆ ಇರುವ ರಾಜಕೀಯವನ್ನು ಬದಿಗಿಟ್ಟರೆ, ಈಗ ಪ್ರತಿಯೊಬ್ಬರೂ ಕೇಳುತ್ತಿರುವ ಪ್ರಮುಖ ಪ್ರಶ್ನೆ ಎಂದರೆ: ದೇವಸ್ಥಾನದಿಂದಲೇ ಕಳ್ಳತನ ಮಾಡುವ ಧೈರ್ಯ ಯಾರಿಗಾದರೂ ಹೇಗೆ ಬರಲು ಸಾಧ್ಯ?
ಇದು ವ್ಯವಸ್ಥೆಯ ಕೊರತೆಯಿಂದಾದ ಲೂಟಿಯಲ್ಲ. ಸಂಪೂರ್ಣವಾಗಿ ಆಧ್ಯಾತ್ಮಿಕತೆಯ ಮತ್ತು ದೇವರ ಮೇಲಿನ ನಂಬಿಕೆಯ ಕೊರತೆಯೇ ಈ ಪಾಪಕ್ಕೆ ಕಾರಣ.
"ಶಿವನ್ ಸೊತ್ತು, ಕುಲ ನಾಶಮ್"
ಈ ದೇಶದಲ್ಲಿ (ಮತ್ತು ವಿದೇಶಗಳಲ್ಲಿ) ಕೋಟ್ಯಂತರ ದೇವಸ್ಥಾನಗಳಿವೆ. ಅವುಗಳಲ್ಲಿ ಹೆಚ್ಚಿನವು ಚಿಕ್ಕವು (ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿರುವವು), ಇನ್ನೂ ಹಲವು ಮಧ್ಯಮ ಗಾತ್ರದವು, ಮತ್ತು ಕೆಲವೇ ಕೆಲವು ಅತ್ಯಂತ ದೊಡ್ಡವು ಹಾಗೂ ಪ್ರಾಚೀನವಾದವು. ಪಾರಂಪರಿಕ ವಿಗ್ರಹಗಳ ಸಂಘಟಿತ ಕಳ್ಳತನವನ್ನು ಹೊರತುಪಡಿಸಿದರೆ, ದೇವಸ್ಥಾನಗಳಲ್ಲಿ ಕಳ್ಳತನಗಳು ಬಹಳ ಅಪರೂಪ.
ಇದಕ್ಕೆ ಮುಖ್ಯ ಕಾರಣವೆಂದರೆ, ದೇವಸ್ಥಾನದ ಸೇವೆಯಲ್ಲಿ ತೊಡಗಿರುವವರು 'ಕರ್ಮ ಸಿದ್ಧಾಂತ'ವನ್ನು ನಂಬುತ್ತಾರೆ. ತಪ್ಪು ಮಾಡುವುದು ತಪ್ಪು, ಆದರೆ ದೇವಸ್ಥಾನದ ಆಸ್ತಿಯನ್ನೇ ಲೂಟಿ ಹೊಡೆಯುವುದು ಅತ್ಯಂತ ದೊಡ್ಡ ಪಾಪ. ಹೆಚ್ಚಿನ ದೇವಸ್ಥಾನಗಳಲ್ಲಿ ಆಡಿಟರ್‌ಗಳು ಅಥವಾ ಸಿಸಿಟಿವಿ ಕ್ಯಾಮೆರಾಗಳು ಇರುವುದಿಲ್ಲ, ಆದರೂ ಕಾಣಿಕೆಗಳು ಸುರಕ್ಷಿತವಾಗಿರುತ್ತವೆ.
ತಮಿಳಿನಲ್ಲಿ "ಶಿವನ್ ಸೊತ್ತು, ಕುಲ ನಾಶಮ್" ಎಂಬ ಪ್ರಸಿದ್ಧ ಗಾದೆ ಇದೆ. ಇದರರ್ಥ: ದೇವಸ್ಥಾನ ಅಥವಾ ಧಾರ್ಮಿಕ ದತ್ತಿಗೆ ಸೇರಿದ ಹಣ, ಭೂಮಿ ಅಥವಾ ಸಂಪನ್ಮೂಲಗಳನ್ನು ಕಳ್ಳತನ ಮಾಡುವುದು, ದುರುಪಯೋಗ ಮಾಡಿಕೊಳ್ಳುವುದು ಅಥವಾ ಹಗರಣ ಮಾಡುವುದು ಆ ವ್ಯಕ್ತಿಯ ಇಡೀ ಕುಟುಂಬ ಅಥವಾ ವಂಶಕ್ಕೇ ವಿನಾಶ ಮತ್ತು ದುರದೃಷ್ಟವನ್ನು ತರುತ್ತದೆ ಎಂದರ್ಥ.
ಒಮ್ಮೆ ಈ ನಂಬಿಕೆ ಮನಸ್ಸಿನಲ್ಲಿ ಆಳವಾಗಿ ಬೇರೂರಿದರೆ, ಯಾರೂ ತಪ್ಪು ಮಾಡಲು ಧೈರ್ಯ ಮಾಡುವುದಿಲ್ಲ, ವಿಶೇಷವಾಗಿ ಪವಿತ್ರವಾದ ದೇವಸ್ಥಾನದಲ್ಲಿ.
ಭಕ್ತಿಯಲ್ಲ, ರಾಜಕೀಯದ ಮೇಲಾಟ
ಆದರೆ, ಧಾರ್ಮಿಕ ಸ್ಥಳದೊಂದಿಗೆ ಸಂಬಂಧ ಹೊಂದಿರುವ ಜನರು, ತಾವು ಅಲ್ಲಿರುವುದು ಭಕ್ತಿಯಿಂದಲ್ಲ, ಬದಲಾಗಿ ರಾಜಕೀಯ ಅಧಿಕಾರ ಕೇಂದ್ರಗಳೊಂದಿಗೆ ಹೊಂದಿರುವ ನಿಕಟತೆಯ ಕಾರಣಕ್ಕೆ ಎಂಬ ಯೋಚನೆ ಅವರ ಮನಸ್ಸಿಗೆ ಬಂದುಬಿಟ್ಟಿದ್ದರೆ, ಅದಕ್ಕಿಂತ ದುರಂತ ಇನ್ನೊಂದಿಲ್ಲ.
ಅಸಲಿಗೆ ಅಯೋಧ್ಯೆಯ ರಾಮ ಮಂದಿರವು ರಾಜಕೀಯ ಗುರಿಯೊಂದಿಗೆ ನಿಕಟವಾಗಿ ಬೆಸೆದುಕೊಂಡಿದ್ದ ರಾಜಕೀಯ-ಧಾರ್ಮಿಕ ಚಳವಳಿಯ ಫಲವಾಗಿ ನಿರ್ಮಾಣವಾಯಿತು.
ದೇವಸ್ಥಾನಗಳ ಪ್ರತಿಷ್ಠಾಪನೆ ಎನ್ನುವುದು ಸಾಮಾನ್ಯವಾಗಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ, ಧಾರ್ಮಿಕ ಉತ್ಸಾಹದಿಂದ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಲವಲೇಷವೂ ಅಹಂಕಾರವಿಲ್ಲದೆ ನಡೆಸುವ ಒಂದು ದಿನಚರಿಯ ಕಾರ್ಯಕ್ರಮ. ಹೀಗಿರುವಾಗ, 2024ರ ಪ್ರತಿಷ್ಠಾಪನೆಯ ಸಮಯದಲ್ಲಿ ಅಷ್ಟೊಂದು ವೈಭವ ಮತ್ತು ಪ್ರಚಾರ ಏಕೆ ಇತ್ತು ಎಂಬುದು ಈಗ ಸ್ಪಷ್ಟವಾಗುತ್ತದೆ.
ದೇಶದ ಎಲ್ಲಾ ಪ್ರಾಚೀನ ದೇವಾಲಯಗಳಿಗೆ ಭೇಟಿ ನೀಡುವುದು ಯಾವುದೇ ಹಿಂದೂವಿಗೆ ಸಾಧ್ಯವಿಲ್ಲ. ಆದ್ದರಿಂದ, ನಾವು ಪ್ರಮುಖ ದೇವಾಲಯಗಳಿಗೆ ಹೋಗುವ ಸ್ನೇಹಿತರಲ್ಲಿ ಹುಂಡಿಗೆ ಹಣ ಹಾಕಲು ವಿನಂತಿಸುತ್ತೇವೆ. ಅವರು ಹಿಂದಿರುಗಿದ ನಂತರ ನಾವು ಅವರಿಗೆ ಆ ಹಣವನ್ನು ನೀಡುತ್ತೇವೆ.
ನಾವು ರಸೀದಿಯನ್ನು ಕೇಳುವುದಿಲ್ಲ, ಏಕೆಂದರೆ ನಮ್ಮ ಸ್ನೇಹಿತ ದಾನ ಮಾಡಿರುತ್ತಾನೆಂಬ ಬಲವಾದ ನಂಬಿಕೆ ನಮ್ಮದಾಗಿರುತ್ತದೆ. ದೇವಸ್ಥಾನದ ವಿಚಾರ ಬಂದಾಗ ಯಾರೂ ಸುಳ್ಳು ಹೇಳುವುದಿಲ್ಲ ಎಂದು ನಾವು ನಂಬುತ್ತೇವೆ.
ಸಮಾಜವಿರೋಧಿ, ಧರ್ಮವಿರೋಧಿ ಶಕ್ತಿಗಳು
ಆದರೆ, ಅಯೋಧ್ಯೆಯ ರಾಮ ಮಂದಿರದಲ್ಲಿ ಕಳ್ಳತನ ಮಾಡಿದವರಿಗೆ ದೇವರ ಭಯವೇ ಇರಲಿಲ್ಲ. ಹಾಗಾದರೆ ಅವರನ್ನು ಧಾರ್ಮಿಕರೆಂದು, ಧರ್ಮ ರಕ್ಷಕರು ಎಂದು ಕರೆಯಲು ಸಾಧ್ಯವೇ?
ರಾಮ ಜನ್ಮಭೂಮಿ ಟ್ರಸ್ಟ್‌ನ ಹೇಳಿಕೆಯ ಮತ್ತೊಂದು ಭಾಗವೂ ಹಾಸ್ಯಾಸ್ಪದವಾಗಿದೆ. "ಸನಾತನ ಧರ್ಮವನ್ನು ಅವಹೇಳನ ಮಾಡುವ ಸಮಾಜವಿರೋಧಿ, ಧರ್ಮವಿರೋಧಿ ಮತ್ತು ಸ್ವಾರ್ಥಿಗಳ ಪ್ರಯತ್ನಗಳನ್ನು ನಾವು ಎಂದಿಗೂ ಯಶಸ್ವಿಯಾಗಲು ಬಿಡುವುದಿಲ್ಲ" ಎಂದು ಅದು ಹೇಳಿದೆ.
ಇದು ನಿಜಕ್ಕೂ ವಿಚಿತ್ರವಾಗಿದೆ. ದೇವಸ್ಥಾನದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದವರು ಅಯೋಧ್ಯೆ ದೇವಸ್ಥಾನದಿಂದ ದೂರವಿರುವವರು ಎಂಬಂತೆ ಈ ಹೇಳಿಕೆಯು "ಸಮಾಜವಿರೋಧಿ, ಧರ್ಮವಿರೋಧಿ ಮತ್ತು ಸ್ವಾರ್ಥಿಗಳನ್ನು" ಉಲ್ಲೇಖಿಸುತ್ತದೆ.
ಜನರ ನಂಬಿಕೆಗೆ ಚ್ಯುತಿ
ದೇವಸ್ಥಾನದ ಸಂಪತ್ತನ್ನು ರಕ್ಷಿಸಬೇಕಾಗಿದ್ದವರೇ ಅದನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮನೆಗೆ ಕೊಂಡೊಯ್ದಾಗ ಸನಾತನ ಧರ್ಮಕ್ಕೆ ತೀವ್ರ ಗಾಯವಾಗುವುದು ನಿಶ್ಚಿತ. ತನಿಖೆಯು ಈಗಷ್ಟೇ ಪ್ರಾರಂಭವಾಗಿರುವುದರಿಂದ, ಕೇವಲ 80 ಲಕ್ಷ ರೂ. ಮಾತ್ರ ಕಳುವಾಗಿದೆ ಎಂಬುವುದಕ್ಕೆ ಏನು ಗ್ಯಾರಂಟಿ? ಸಂಪೂರ್ಣ ಸತ್ಯ ನಮಗೆ ಎಂದಾದರೂ ತಿಳಿಯುವುದೇ?
ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರ ನಂಬಿಕೆಯನ್ನು ಮರಳಿ ಗಳಿಸಲು ಬಹಳ ದೀರ್ಘಕಾಲ ಬೇಕಾಗುತ್ತದೆ. ಅಯೋಧ್ಯೆಯ ಈ ನಿರ್ಲಜ್ಜರ ಬಗ್ಗೆ ಯೋಚಿಸಿದಾಗಲೆಲ್ಲ, ಕಳುವಾದ ಮೊತ್ತದ ಪ್ರಮಾಣವನ್ನು ಹೊರತುಪಡಿಸಿ, ನೇತಾಜಿ ನಗರದ 'ಕಾಳ' ಎಂಬ ಕಳ್ಳನ ದೃಷ್ಟಾಂತವೇ ನೆನಪಾಗುತ್ತದೆ. ಇದು ಆತನಿಗಿಂತ ಭಿನ್ನವಾಗಿಲ್ಲ ಎಂಬುದು ನಿಸ್ಸಂದೇಹ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

