
ಅಸ್ತಮಿಸದ ಕೆಂಪು ಸೂರ್ಯ: ಕೇರಳದ ಚುನಾವಣಾ ಸೋಲಿನ ಆಚೆಗೂ ಜೀವಂತವಿದೆ ಎಡಪಂಥೀಯ ರಾಜಕಾರಣ
ಕೇರಳದ ಸೋಲಿನಿಂದ 1977ರ ನಂತರ ಮೊದಲ ಬಾರಿಗೆ ಕಮ್ಯುನಿಸ್ಟರು ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿಲ್ಲ. ಜಾತ್ಯತೀತ ಮೌಲ್ಯ ಅಳಿವಿನ ವಿರುದ್ಧ ಹೋರಾಟ ವಿಚಾರದಲ್ಲಿ ಮಹತ್ವದ ಪಾತ್ರವನ್ನು ಹೊಂದಿವೆ.
ಭಾರತದಲ್ಲಿ ಕಮ್ಯುನಿಸ್ಟರ ಯುಗ ಮುಗಿದುಹೋಯಿತೇ? ಅವರು ಪ್ರಮುಖ ಭಾಗವೇ ಆಗಿರುವ ಎಡಪಕ್ಷಗಳ ಭವಿಷ್ಯವಾದರೂ ಏನು? ಇತ್ತೀಚೆಗೆ ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗಕ್ಕೆ ಉಂಟಾದ ಭಾರೀ ಸೋಲಿನ ಕಾರಣದಿಂದ ದೇಶದಲ್ಲಿ ಒಟ್ಟಾರೆಯಾಗಿ ಎಡಪಕ್ಷಗಳ ಅಸ್ತಿತ್ವಕ್ಕೇ ಪೆಟ್ಟು ಬಿದ್ದಿದೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸುವಂತೆ ಮಾಡಿದೆ.
ಇಂತಹ ಊಹಾಪೋಹಗಳು ಹಿಂದೆಯೂ ಹುಟ್ಟಿಕೊಂಡಿದ್ದವೇ? ಅಂತಹ ಘಟನೆಗಳು ಹಿಂದೆಯೂ ನಡೆದಿದ್ದವೇ? ಉದಾಹರಣೆಗೆ 1984ರ ಚುನಾವಣೆಯಲ್ಲಿ ಬಿಜೆಪಿ ಎರಡೇ ಎರಡು ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದನ್ನು ನೆನಪಿಸಿಕೊಳ್ಳಿ. ಈಗ ಏನಾಗಿದೆ? ಹಾಗಾಗಿ ಇಂದಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಾಗೆ ಯೋಚಿಸುವುದು ಎಷ್ಟು ಅಸಂಬದ್ಧ ಎನ್ನುವುದು ಅರ್ಥವಾಗುತ್ತದೆ.
ಚುನಾವಣೆ ಸೋಲಿನಾಚೆಗೆ
ಕೇರಳದಲ್ಲಿ ಎಡರಂಗ (ಎಲ್ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ದಶಕಗಳಿಂದ ಸರದಿಯ ಮೇಲೆ ಅಧಿಕಾರ ಹಂಚಿಕೊಳ್ಳುತ್ತ ಬಂದಿವೆ. 2021ರಲ್ಲಿ ಎಲ್ಡಿಎಫ್ ಈ ಮಾದರಿಯನ್ನು ಮುರಿದು ಸತತ ಎರಡು ಬಾರಿ ಚುನಾವಣೆಗಳಲ್ಲಿ ಜಯ ಗಳಿಸಿತ್ತು. ಆದ್ದರಿಂದ 2026ರಲ್ಲಿ ಆಗಿರುವ ಸೋಲಿನಿಂದಷ್ಟೇ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ.
ಕೇರಳದಲ್ಲಿ ಕೆಂಪು ಬಾವುಟವನ್ನು ಹಿಡಿದಿರುವವರು ತೀರಾ ಕಳಪೆ ನಿರ್ವಹಣೆಯನ್ನೇನೂ ತೋರಿಸಿಲ್ಲ. ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಆಡಳಿತ ನಡೆಸಿದ ಕಮ್ಯುನಿಸ್ಟರು ಸಂಪೂರ್ಣ ಪತನವನ್ನು ಅನುಭವಿಸಿದರು. ಕೇರಳ ಅದಕ್ಕೆ ಹೋಲಿಕೆಯಾಗಿ ನಿಲ್ಲಲು ಸಾಧ್ಯವಿಲ್ಲ. ಇದು ಅವರು ಗಳಿಸಿರುವ ಮತದ ಶೇಕಡಾವಾರು ಪ್ರಮಾಣದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. 2021ರ ಸೋಲಿನ ಬಳಿಕ ರಾಜಕೀಯ ವಿಶ್ಲೇಷಕರು ಯುಡಿಎಫ್ನ ಅಂತ್ಯ ಸಂಭವಿಸಿಬಿಡುತ್ತದೆ ಎಂದೇನೂ ಬರೆದಿರಲಿಲ್ಲ. ಹಾಗಿರುವಾಗ ಎಲ್ಡಿಎಫ್ನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ವಿಶ್ಲೇಷಣೆಯ ದೃಷ್ಟಿಯಿಂದ ಅರ್ಥಹೀನ ಸಂಗತಿ.
ಆದರೆ ಇದೇ ಸಂದರ್ಭದಲ್ಲಿ ಒಂದು ಗಂಭೀರ ಸಂಗತಿಯನ್ನೂ ಕೂಡ ಪರಿಗಣಿಸಬೇಕಾಗುತ್ತದೆ; ಅದು 1977ರ ಬಳಿಕ ಅಂದರೆ ಅರ್ಧ ಶತಮಾನದಲ್ಲಿ ಇದೇ ಮೊದಲ ಬಾರಿಗೆ ಭಾರತದ ಯಾವುದೇ ರಾಜ್ಯದಲ್ಲಿ ಕಮ್ಯುನಿಸ್ಟರು ಅಧಿಕಾರದಲ್ಲಿ ಇಲ್ಲ. ಇನ್ನು ಪಶ್ಚಿಮ ಬಂಗಾಳ ಹಾಗೂ ತ್ರಿಪುರಾದಲ್ಲಿ ಅವರು ಮರಳಿ ದಕ್ಕಿಸಿಕೊಳ್ಳಬೇಕಾದ ನೆಲೆಯು ಬಹಳಷ್ಟಿದೆ. ಇಂದಿನ ಇತಿಹಾಸದ ಈ ಹಂತದಲ್ಲಿ ಹಾಗೆ ಮರಳಿ ಪಡೆಯುವ ಕೆಲಸ ಅತ್ಯಂತ ಕ್ಲಿಷ್ಟವೂ ಹೌದು.
ಮತ್ತೆ ಸ್ಪೂರ್ತಿಯಾಗಬಲ್ಲದೇ ಕೇರಳ?
1924ರಲ್ಲಿ ಲೆನಿನ್ ಮರಣ ಹೊಂದಿದ ಬಳಿಕ ಸ್ಟಾಲಿನ್ ಒಂದು ಕರೆಕೊಟ್ಟಿದ್ದರು. 1917ರ ಸೋವಿಯತ್ ಕ್ರಾಂತಿ ಮತ್ತು 1922ರಲ್ಲಿ ವೈಟ್ ಆರ್ಮಿ ಮತ್ತು ಆಂತರಿಕ ಸವಾಲುಗಳನ್ನು ನಿಭಾಯಿಸಿದ ನಂತರ ಸ್ಥಾಪನೆಯಾದ ಸೋವಿಯತ್ ಸರ್ಕಾರವನ್ನು ರಕ್ಷಿಸಲು ʼಒಂದು ದೇಶದಲ್ಲಿ ಸಮಾಜವಾದʼ ಎಂಬ ಸಿದ್ಧಾಂತವನ್ನು ಜಾರಿಗೆ ತರಬೇಕು ಎಂಬುದು ಅದರ ಹಿಂದಿನ ಉದ್ದೇಶ. ಇದರರ್ಥ ಬಾಹ್ಯ ಜಗತ್ತಿಗೆ ಸಂದೇಶವನ್ನು ಸಾರುವುದಕ್ಕೂ ಮುನ್ನ ಸೋವಿಯತ್ ಒಕ್ಕೂಟದ ಕೈಗಾರಿಕಾ ಮತ್ತು ಸೇನಾ ಬುನಾದಿಯನ್ನು ಗಟ್ಟಿಗೊಳಿಸುವುದು ಹಾಗೂ ದೇಶದ ಅಧಿಕಾರವನ್ನು ಕ್ರೋಢೀಕರಿಸುವುದು. (ಅಷ್ಟಾಗಿಯೂ ಸೋವಿಯತ್ ನಾಯಕ ವಸಾಹತುಶಾಹಿ ವಿರೋಧಿ ಹೋರಾಟಗಳನ್ನು ಬೆಂಬಲಿಸಿದ್ದರು).
ಈ ಹೋಲಿಕೆಯು ಕೇರಳದ ಸಂದರ್ಭದಲ್ಲಿ ಕೆಲಸ ಮಾಡುವುದೇ? ʼಒಂದು ರಾಜ್ಯದಲ್ಲಿ ಸಮಾಜವಾದʼ ಎಂಬ ಪರಿಕಲ್ಪನೆಯು ಇತರ ರಾಜ್ಯಗಳಲ್ಲಿ ಉತ್ತೇಜನಕಾರಿ ಅಥವಾ ಪೋಷಕ ಪರಿಣಾಮವನ್ನು ಬೀರಬಹುದೇ? ಇಂತಹುದೊಂದು ನಿದರ್ಶನವು ನಿಜಕ್ಕೂ ಕೆಲಸ ಮಾಡುವುದೇ ಅಥವಾ ಅದನ್ನು ತಡೆಯುವ ಅನೇಕ ಅಂಶಗಳು ಅಡ್ಡಿಯಾಗಿವೆಯೇ?
1950ರ ದಶಕದ ಉತ್ತರಾರ್ಧದಲ್ಲಿ, ಕ್ರಾಂತಿಕಾರಿ ದಂಗೆಯ ಮೂಲಕ ಮಾತ್ರವಲ್ಲದೆ ಪ್ರಜಾಸತ್ತಾತ್ಮಕ ಚುನಾವಣೆಯ ಮೂಲಕ ದಿಗ್ಗಜ ಇ.ಎಂ.ಎಸ್. ನಂಬೂದರಿಪಾಡ್ ಅವರ ನೇತೃತ್ವದಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರ ರಚನೆಯಾದಾಗ, ಅದು ಜಗತ್ತಿಗೇ ಒಂದು ಹೊಸ ಸಂಗತಿಯಾಗಿತ್ತು. ಈ ದಕ್ಷಿಣದ ರಾಜ್ಯವನ್ನು "ಭಾರತದ ಯೆನಾನ್" ಎಂದು ಕರೆಯಲಾಯಿತು.
ಚೀನಾದಲ್ಲಿ ಕಮ್ಯುನಿಸ್ಟರ 'ಲಾಂಗ್ ಮಾರ್ಚ್' ಅಂತ್ಯಗೊಂಡಾಗ, ಯೆನಾನ್ ಅವರ ಕಾರ್ಯಕ್ಷೇತ್ರವಾಗಿ ಮಾರ್ಪಟ್ಟಿತು. ಅಲ್ಲಿಂದಲೇ ಮಾವೋ ತನ್ನ ಕ್ರಾಂತಿಕಾರಿ ಪಡೆಗಳನ್ನು ಸಂಘಟಿಸಿ, 1949ರಲ್ಲಿ ಪೀಪಲ್ಸ್ ರಿಪಬ್ಲಿಕ್ ಸ್ಥಾಪನೆಯಾಗಲು ಕಾರಣರಾದರು.
ಕೇರಳಕ್ಕೆ 'ಯೆನಾನ್' ಎಂಬ ಹೋಲಿಕೆಯನ್ನು ಬಳಸುವುದು ಖಂಡಿತವಾಗಿಯೂ ಅತಿಶಯೋಕ್ತಿಯಾದೀತು. ಅದೇ ರೀತಿ 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗದ ಪತನದ ಬಗ್ಗೆಯೂ ಪ್ರಶ್ನೆಗಳು ಉಳಿದಿವೆ. ಅಲ್ಲಿ 34 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಕಮ್ಯುನಿಸ್ಟ್ ನೇತೃತ್ವದ ಸರ್ಕಾರ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ನ ಚುನಾವಣಾ ಪ್ರಹಾರದ ಮುಂದೆ ಮಖಾಡೆ ಮಲಗಿತ್ತು. 15 ವರ್ಷಗಳು ಕಳೆದರೂ, ಆ ಘಟನೆಯ ಬಗ್ಗೆ ಇನ್ನೂ ಕೂಲಂಕಷ ವಿಶ್ಲೇಷಣೆಯ ಅಗತ್ಯವಿದೆ.
ಕಮ್ಯುನಿಸಂ ಕಾರ್ಯತಂತ್ರದ ಸಂದಿಗ್ಧತೆ
ಭಾರತೀಯ ಕಮ್ಯುನಿಸಂಗೆ ಸಂಬಂಧಿಸಿದ ಗಹನ ಪ್ರಶ್ನೆಗಳನ್ನು ಪರಿಶೀಲಿಸುವ ಅಗತ್ಯವಿದೆ. ಬಹುಶಃ ಇವುಗಳಲ್ಲಿ ಅತ್ಯಂತ ನಿರ್ಣಾಯಕವಾದುದು ಏನೆಂದರೆ, ಕಮ್ಯುನಿಸ್ಟ್ ಅಲ್ಲದ ಮಧ್ಯಮಮಾರ್ಗದ ಶಕ್ತಿಗಳು ಅಥವಾ ಪ್ರಗತಿಪರ ಶಕ್ತಿಗಳೊಂದಿಗೆ ಕೆಲಸ ಮಾಡಲು ಐತಿಹಾಸಿಕವಾಗಿ ತೋರಿದ ಹಿಂದೇಟು. ಭಾರತದಲ್ಲಿ ದೀರ್ಘಕಾಲದವರೆಗೆ 'ಎಡಪಕ್ಷ' ಎಂದರೆ 'ಕಮ್ಯುನಿಸ್ಟ್' ಎಂಬಂತೆಯೇ ಪರಿಗಣಿಸಲಾಗುತ್ತಿದೆ.
ಇದು ಕೇವಲ ಭಾರತೀಯ ಕಮ್ಯುನಿಸ್ಟರಿಗೆ ಮಾತ್ರವಲ್ಲ, ಒಟ್ಟಾರೆಯಾಗಿ ಭಾರತೀಯ ಎಡಪಕ್ಷಗಳಿಗೆ ಮತ್ತು ಭಾರತದ ಜನತೆಗೆ ಸಂಕಷ್ಟದ ಕಾಲಘಟ್ಟ. ಯಾಕೆಂದರೆ, ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನದಂಡಗಳನ್ನು ಅಳಿಸಿಹಾಕುವ ಮತ್ತು ದಿಕ್ಕುತಪ್ಪಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.
ಇದಕ್ಕೆ ಕಾರಣ ಕೇರಳದಲ್ಲಿ ಎಡರಂಗದ ಇತ್ತೀಚಿನ ಸೋಲಲ್ಲ, ಬದಲಾಗಿ ದೇಶದ ರಾಜಕೀಯ ಭೂಪಟದಲ್ಲಿ ಉಂಟಾಗಿರುವ ಬದಲಾವಣೆ ಮತ್ತು ಅದರೊಂದಿಗೆ, ರಾಜ್ಯದ ಸಂಘಟಿತ ಕ್ರಮಗಳ ಮೂಲಕ ಪರಕೀಯವಾದ 'ಹಿಂದುತ್ವ' ಸಿದ್ಧಾಂತವನ್ನು ಬಲವಂತವಾಗಿ ಹಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ (ಹಾಗೆಯೇ, ನಾಗರಿಕ ಸಮಾಜದ ಒಂದು ವಿಭಾಗವು ಯಾವುದೇ ನಿಯಂತ್ರಣವಿಲ್ಲದೆ ನಡೆಸುತ್ತಿರುವ ಬಲವಂತದ ಕ್ರಮಗಳೂ ಇದಕ್ಕೆ ಕಾರಣ).
ಜಾತ್ಯತೀತ ಮೌಲ್ಯಗಳ ಸವಕಳಿ
ಇವೆಲ್ಲಕ್ಕೆ ಒಂದು ನಿದರ್ಶನವಾಗಿ, ಗುಜರಾತ್ನ ದ್ವಾರಕಾ ದೇವಾಲಯದ ಪುನರ್ನಿರ್ಮಾಣದ 75ನೇ ವರ್ಷಾಚರಣೆಯನ್ನು ಗುರುತಿಸಲು ಭಾರತೀಯ ವಾಯುಪಡೆಯ ಜೆಟ್ಗಳು ದೇವಾಲಯದ ಮೇಲೆ ಹಾರಾಟ ನಡೆಸಿದ ಘಟನೆಯನ್ನೇ ಪರಿಗಣಿಸಿ. ಇತರ ಧರ್ಮಗಳ ಯಾತ್ರಾಸ್ಥಳಗಳಿಗೆ ರಾಜ್ಯವು ಇಂತಹ ವಿಶೇಷ ಆಸಕ್ತಿಯನ್ನು ಅಥವಾ ಮನ್ನಣೆಯನ್ನು ತೋರಿಸುತ್ತದೆ ಮತ್ತು ದೇಶದ ಪ್ರಧಾನಿಯೇ ಅದರಲ್ಲಿ ಭಾಗವಹಿಸುತ್ತಾರೆ ಎಂಬುದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ವಿಷಯ.
ಧರ್ಮಕ್ಕೆ ಸಂಬಂಧಿಸಿದ ಮತ್ತೊಂದು ಉದಾಹರಣೆಯೆಂದರೆ, ಕಳೆದ ವರ್ಷ ಭಾರತದ ಸೇನಾ ಮುಖ್ಯಸ್ಥರು ಪೂರ್ಣ ಸಮವಸ್ತ್ರದೊಂದಿಗೆ ಉತ್ತರ ಪ್ರದೇಶದ ಚಿತ್ರಕೂಟದ ಆಶ್ರಮವೊಂದಕ್ಕೆ ಭೇಟಿ ನೀಡಿ, ನಿರ್ದಿಷ್ಟ ಹಿಂದೂ ಧಾರ್ಮಿಕ ಪಂಥದ ದೀಕ್ಷೆಯನ್ನು ಸ್ವೀಕರಿಸಿದ್ದು.
ಅದಕ್ಕೂ ಮುನ್ನ, ಭಾರತದ ಆಗಿನ ಮುಖ್ಯ ನ್ಯಾಯಮೂರ್ತಿಗಳು ತಮ್ಮ ನಿವಾಸದಲ್ಲಿ ಧಾರ್ಮಿಕ ಸಮಾರಂಭವನ್ನು ನಡೆಸಿದ ಪ್ರಕರಣವೂ ಇತ್ತು. ಅದಕ್ಕೆ ಖಂಡಿತವಾಗಿಯೂ ಯಾವುದೇ ಆಕ್ಷೇಪವಿರಲು ಸಾಧ್ಯವಿಲ್ಲ. ಆದರೆ, ಆ ಸಮಾರಂಭಕ್ಕೆ ಪ್ರಧಾನಿಯವರನ್ನೇ ಆಹ್ವಾನಿಸಿದ್ದು ಮತ್ತು ಆ ಕಾರ್ಯಕ್ರಮದ ಛಾಯಾಚಿತ್ರಗಳನ್ನು ಪತ್ರಿಕೆಗಳಿಗೆ ಹಂಚಿದ್ದು ಸಂಪೂರ್ಣವಾಗಿ ಭಿನ್ನವಾದ ಸಂಗತಿ ಎನ್ನದೇ ವಿಧಿಯಿಲ್ಲ.
ಪ್ರಧಾನಿ ಜೊತೆಗೆ ಆಪ್ತವಾಗಿರುವುದು ದೇಶದ ಉನ್ನತ ನ್ಯಾಯಾಧೀಶರಿಗೆ ಸೂಕ್ತವಲ್ಲವೆಂದಾದರೆ, ಅಂತಹ ಪ್ರಚಾರ ಪಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರಧಾನಿಯನ್ನು ಮನೆಗೆ ಆಹ್ವಾನಿಸುವುದು ಸಂವಿಧಾನದಲ್ಲಿ ಅಳವಡಿಸಲಾಗಿರುವ "ಜಾತ್ಯತೀತ" ಎಂಬ ಪದದ ಅರ್ಥಕ್ಕೆ ಬಾರೀ ವ್ಯತ್ಯಯವನ್ನು ಉಂಟುಮಾಡುತ್ತದೆ ಮತ್ತು ನ್ಯಾಯಾಂಗದ ನಡವಳಿಕೆಯ ಸುಸ್ಥಾಪಿತ ಮಾನದಂಡಗಳಿಂದ ದೂರ ಸರಿದಂತಾಗುತ್ತದೆ.
ಭಾರತದ ಶ್ರೀಮಂತ ಬಹುತ್ವದ ಧಾರ್ಮಿಕ ಸಂಸ್ಕೃತಿಯ ವಿಷಯದಲ್ಲಿ ಸರ್ಕಾರದ ತಟಸ್ಥ ನೀತಿಯನ್ನು ನಾಶಪಡಿಸುತ್ತಿರುವುದಕ್ಕೆ ಇವು ಕೇವಲ ಮೇಲ್ನೋಟದ ಉದಾಹರಣೆಗಳಾಗಿವೆ. ಒಂದು ಕಾಲದಲ್ಲಿ ಜಗತ್ತೇ ಅಸೂಯೆ ಪಡುವಂತಿದ್ದ ಭಾರತದ ಈ ವೈಶಿಷ್ಟ್ಯವೇ ನಮ್ಮ ದೇಶದ ಗುರುತಾಗಿತ್ತು.
ಪ್ರಜಾಪ್ರಭುತ್ವದ ಸಾಂಸ್ಥಿಕ ಸವಾಲುಗಳು
ಈಗಿರುವ ಆಡಳಿತದ ಅಡಿಯಲ್ಲಿ ಮತ್ತು ಭಾರತದ ಸುಪ್ರೀಂ ಕೋರ್ಟ್ನ ಪರೋಕ್ಷ ಬೆಂಬಲದೊಂದಿಗೆ ಚುನಾವಣಾ ಆಯೋಗವು ತನ್ನ ಕಾರ್ಯವನ್ನು ನಿರ್ವಹಿಸುತ್ತಿರುವ ರೀತಿಯನ್ನು ಗಮನಿಸಿದರೆ, ಭಾರತದ ನಾಗರಿಕರು ಮತ್ತು ಅವರ ಚುನಾವಣಾ ಆಯ್ಕೆಗಳನ್ನು ಪೂರ್ವಯೋಜಿತವಾಗಿ ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ವ್ಯಾಪಕವಾಗಿ ಹರಡಿದೆ.
ಇದೆಲ್ಲದರ ಜೊತೆ ಜೊತೆಗೆ, ಉತ್ತಮ ಸಾಧನೆ ಮಾಡುತ್ತಿರುವ ರಾಜ್ಯಗಳನ್ನು ನಿರ್ಲಕ್ಷಿಸಿ, ರಾಜಕೀಯವಾಗಿ ಅನುಕೂಲಕರವಾದ ರಾಜ್ಯಗಳಿಗೆ ಹೆಚ್ಚಿನ ಸಂಸದೀಯ ಸ್ಥಾನಗಳನ್ನು ಕಲ್ಪಿಸಲು ಜನಸಂಖ್ಯೆಯ ಸಾಂದ್ರತೆಯನ್ನು ಬಳಸುವ ಪ್ರಯತ್ನವು, ಸಂವಿಧಾನದ ಮತ್ತೊಂದು ಮೂಲಭೂತ ಸ್ತಂಭವಾದ ಒಕ್ಕೂಟ ವ್ಯವಸ್ಥೆ ಮೇಲೆ ಪ್ರಹಾರ ನಡೆಸುವಂತಿದೆ.
ಇದಕ್ಕೂ ಎಡಪಕ್ಷಗಳಿಗೂ ಏನು ಸಂಬಂಧ? ಇದಕ್ಕೆ ಸಂಕ್ಷಿಪ್ತ ಉತ್ತರ: ಎಲ್ಲವೂ!
ಐತಿಹಾಸಿಕವಾಗಿ, ಫ್ರೆಂಚ್ ಇತಿಹಾಸದಿಂದ ಪಡೆದ ವ್ಯಾಖ್ಯಾನದ ಪ್ರಕಾರ, 'ಎಡಪಂಥೀಯ ಪಕ್ಷ' ಎಂದರೆ ಸಮಾಜ ಮತ್ತು ರಾಜಕೀಯದಲ್ಲಿ ದೂರದೃಷ್ಟಿಯುಳ್ಳ ಬದಲಾವಣೆಗಾಗಿ ಶ್ರಮಿಸುವ ಎಲ್ಲಾ ರಾಜಕೀಯ ಶಕ್ತಿಗಳು. ಮತ್ತು 'ಬಲಪಂಥೀಯ ಪಕ್ಷ' ಎಂದರೆ ಹಳೆಯ ವ್ಯವಸ್ಥೆಯನ್ನು ಅಂದರೆ ಜಮೀನ್ದಾರಿ ಹಾಗೂ ಶ್ರೀಮಂತ ವರ್ಗದ ಸವಲತ್ತುಗಳನ್ನು ರಕ್ಷಿಸಲು ಬಯಸುವವರು ಮತ್ತು ಪ್ರಗತಿಗೆ ಅಡ್ಡಿಯಾಗುವ ಮೂಢನಂಬಿಕೆಗಳು ಹಾಗೂ ತರ್ಕಹೀನ ಸಂಗತಿಗಳಂತಹ ಹಿಂದಿನ ಕುರುಹುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವವರು ಎಂದು ವ್ಯಾಖ್ಯಾನಿಸಲಾಗುತ್ತದೆ.
ಎಡಪಕ್ಷಗಳ ಕಾರ್ಯವೈಖರಿ * ಜಾತ್ಯತೀತ ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳ ರಕ್ಷಣೆ * ದೂರದೃಷ್ಟಿಯುಳ್ಳ, ಪ್ರಗತಿಪರ ಸಾಮಾಜಿಕ ಬದಲಾವಣೆಗೆ ಬೆಂಬಲ * ಪ್ರಜಾಸತ್ತಾತ್ಮಕ, ಮಾನವತಾವಾದಿ ಮತ್ತು ಸಮಾನತಾವಾದಿ ಆದರ್ಶಗಳನ್ನು ಮುನ್ನಡೆಸುವುದು * ಕೋಮುವಾದಿ ಬಲಪಂಥೀಯ ಸಿದ್ಧಾಂತಗಳನ್ನು ಹರಡುವುದಕ್ಕೆ ತಡೆ. * ಒಕ್ಕೂಟ ವ್ಯವಸ್ಥೆಗೆ ಮುಖ್ಯ ರಕ್ಷಾಕವಚವಾಗಿ ಕಾರ್ಯನಿರ್ವಹಣೆ |
ಆಧುನಿಕ ಭಾರತದಲ್ಲಿ, ಎಡಪಕ್ಷಗಳ ಮೌಲ್ಯಗಳು ಯಾವಾಗಲೂ ಅಹಿಂಸಾತ್ಮಕ ಮಾರ್ಗಗಳ ಮೂಲಕ ಪ್ರಗತಿಪರ ಮತ್ತು ಮಾನವತಾವಾದಿ ದಿಕ್ಕಿನ ಬದಲಾವಣೆಯನ್ನು ಪ್ರತಿಬಿಂಬಿಸಿವೆ. ಎಡಪಕ್ಷಗಳ ಒಂದು ಸಣ್ಣ ಭಾಗವಾಗಿರುವ ಕಮ್ಯುನಿಸ್ಟರು ಮಾತ್ರ ಖಾಸಗಿ ಆಸ್ತಿಯ ನಿರ್ಮೂಲನೆಯನ್ನು ಬಯಸಿದ್ದರು. ಅದು ಅವರ ಐತಿಹಾಸಿಕ ಮತ್ತು ಸೈದ್ಧಾಂತಿಕ ನಿಲುವಾಗಿತ್ತು.
ಭಾರತದ ಸುದೀರ್ಘ ಎಡಪಂಥೀಯ ಪರಂಪರೆ
ಇನ್ನೂ ಮೂಲಕ್ಕೆ ಹೋಗಿ ಮಾತನಾಡುವುದಾದರೆ, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಅದರ ಸಂವಿಧಾನದ ಪ್ರಮುಖ ವಿಚಾರಗಳು ಸಂಪೂರ್ಣವಾಗಿ ಎಡಪಂಥೀಯವಾಗಿದ್ದವು ಮತ್ತು ಅಂತಹ ಮನೋಭಾವದಿಂದಲೇ ತುಂಬಿದ್ದವು. ಒಮ್ಮೆ ಕಮ್ಯುನಿಸ್ಟರು ಸಂಸತ್ತನ್ನು ಪ್ರವೇಶಿಸಿ, ಖಾಸಗಿ ಆಸ್ತಿಯನ್ನು ಮೂಲಭೂತ ಹಕ್ಕನ್ನಾಗಿ ಮಾನ್ಯ ಮಾಡುವ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರ ಸಾಮಾನ್ಯ ದೃಷ್ಟಿಕೋನವು ಮಾನವತಾವಾದಿ ಮತ್ತು ಸಮಾನತಾವಾದಿಯಾಗಿ ಬದಲಾಯಿತು.
ಸ್ವಾತಂತ್ರ್ಯ ಹೋರಾಟದೊಂದಿಗೆ ಸಂಬಂಧ ಹೊಂದಿದ್ದ ಇತರ ಸಮಾಜವಾದಿ ಒಲವುಳ್ಳ ಗುಂಪುಗಳಿಗಿಂತ ಇವರ ನಿಲುವೇನೂ ಭಿನ್ನವಾಗಿರಲಿಲ್ಲ. ಕಮ್ಯುನಿಸ್ಟರು ಮತ್ತು ಮಾಕ್ರ್ಸ್ವಾದಿ-ಅಲ್ಲದ ಸಮಾಜವಾದಿಗಳ (ಲೋಹಿಯಾ ಇದಕ್ಕೆ ಪ್ರಮುಖ ಉದಾಹರಣೆ) ನಡುವಿನ ಮೂಲಭೂತ ತತ್ವಗಳ ವ್ಯತ್ಯಾಸವೆಂದರೆ, ಅದು ಜಾತಿ ಅಥವಾ ವರ್ಗಕ್ಕೆ ನೀಡುವ ಆದ್ಯತೆಯ ವಿಷಯವಾಗಿತ್ತು.
ಇನ್ನು ಕಾಂಗ್ರೆಸ್ ಪಕ್ಷದ ವಿಷಯಕ್ಕೆ ಬಂದರೆ-ಮಹಾತ್ಮ ಗಾಂಧಿಯವರ ಅಸಾಧಾರಣ ನೈತಿಕ ನಾಯಕತ್ವ ಮತ್ತು ನೆಹರೂ ಅವರ ಆಧುನಿಕತಾವಾದಿ ಪ್ರೇರಣೆಯ ಅಡಿಯಲ್ಲಿ ಸ್ವಾತಂತ್ರ್ಯ ಚಳವಳಿಯ ಮುಖ್ಯ ಶಿಲ್ಪಿ ಹಾಗೂ ದೇಶದ ಸಂವಿಧಾನ ರಚನಾ ಪ್ರಕ್ರಿಯೆಯ ಮಾರ್ಗದರ್ಶಕ ಶಕ್ತಿಯಾಗಿದ್ದ ಕಾಂಗ್ರೆಸ್, ಸಂಸತ್ತಿನಲ್ಲಿರುವ ದೇಶದ ಸಮಾಜವಾದಿಗಳು ಅಥವಾ ಕಮ್ಯುನಿಸ್ಟರೊಂದಿಗೆ ಸೈದ್ಧಾಂತಿಕ ಮಟ್ಟದಲ್ಲಿ ಎಷ್ಟು ಭಿನ್ನವಾಗಿದೆ?
ಎಡಪಂಥ ಏಕೆ ಮುಖ್ಯ?
ಹಿಂದೂ-ಮುಸ್ಲಿಂ ಏಕತೆ ಮತ್ತು ಅಸ್ಪೃಶ್ಯತಾ ನಿವಾರಣೆಯ ಬಗ್ಗೆ ಗಾಂಧಿಯವರ ಒತ್ತಾಯವು ಗಮನಾರ್ಹವಾಗಿ ಎಡಪಂಥೀಯವಾಗಿತ್ತು. ಕಾಂಗ್ರೆಸ್ನ ಅತ್ಯಂತ ಪ್ರಮುಖ ಎಡಪಂಥೀಯ ನಾಯಕರು ಜವಾಹರಲಾಲ್ ನೆಹರೂ ಮತ್ತು ಸುಭಾಷ್ ಚಂದ್ರ ಬೋಸ್ ಆಗಿದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ. ನೆಹರೂ ಅವರು 'ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿ'ಗೆ ನಾಯಕತ್ವ ಮತ್ತು ರಾಜಕೀಯ ಬೆಂಬಲವನ್ನು ನೀಡಿದ್ದರು, ಅದರಿಂದಲೇ ಭಾರತೀಯ ಸಮಾಜವಾದಿಗಳು ಉದಯಿಸಿದರು.
ಈ ಸಂಪೂರ್ಣ ಶ್ರೇಣಿಯ ಅಂಶಗಳು ಒಂದಾದಾಗ ಮಾತ್ರ ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ. ಮತ್ತು ಈಗ ಅಧಿಕಾರದಲ್ಲಿರುವ ಕೋಮುವಾದಿ ಬಲಪಂಥೀಯರು ಈ ಒಗ್ಗೂಡುವಿಕೆಯನ್ನು ಕಂಡರೆ ಭಯಪಡುತ್ತಾರೆ. ಭಾರತದಲ್ಲಿ ಎಡಪಂಥದ ಪ್ರಸ್ತುತತೆ ಇರುವುದು ಇಲ್ಲೇ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

