
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ದೆಹಲಿಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸ್ಥಾನದ ಕನಸಿನ ಕುರಿತು ರೋಮ್ ತಳೆದಿರುವ ಮೌನವು 'ಕಾಫಿ ಕ್ಲಬ್'ನ ಆಳದಲ್ಲಿ ಬೇರೂರಿರುವ ಪ್ರತಿರೋಧಕ್ಕೆ ಸಾಕ್ಷಿಯಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಯಲ್ಲಿ ಶತಾಯಗತಾಯ ಖಾಯಂ ಸ್ಥಾನ ಪಡೆದುಕೊಳ್ಳಬೇಕು ಎಂಬುದು ಭಾರತದ ತೀವ್ರ ಹಂಬಲ. ಆದರೆ ಅದನ್ನು ನೆರೆಹೊರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಗಳು ಮಾತ್ರವಲ್ಲದೆ, ಇನ್ನು ಕೆಲವು ದೂರದ ದೇಶಗಳೂ ಕೂಡ ವರ್ಷಗಳಿಂದ ಬಲವಾಗಿ ವಿರೋಧಿಸುತ್ತಾ ಬಂದಿವೆ.
ಈ ರಾಷ್ಟ್ರಗಳು ಪಾಕಿಸ್ತಾನದೊಂದಿಗೆ ಕೈಜೋಡಿಸಿ, ಇಟಲಿಯ ನೇತೃತ್ವದಲ್ಲಿ 'ಕಾಫಿ ಕ್ಲಬ್' ಎಂಬ ಹೆಸರಿನ ಒಕ್ಕೂಟವನ್ನು ರಚಿಸಿಕೊಂಡಿವೆ.
ಆದರೆ, ಇತ್ತೀಚೆಗೆ ರೋಮ್‌ನಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ನಡೆದ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಖಾಯಂ ಯುಎನ್‌ಎಸ್‌ಸಿ ಸದಸ್ಯತ್ವದ ಬಗ್ಗೆ ಚರ್ಚಿಸಿದರೇ ಅಥವಾ ಇಲ್ಲವೇ ಎಂಬುದು ಒಂದು ಚರ್ಚಾಸ್ಪದ ವಿಷಯ. ಇಂತಹ ಗಂಭೀರ ದ್ವಿಪಕ್ಷೀಯ ವ್ಯವಹಾರಗಳ ಮೇಲಿದ್ದ ಸಾರ್ವಜನಿಕ ಗಮನ ಸಂಪೂರ್ಣ ತಿರುಗಿದ್ದು, ಮೋದಿಯವರು ಮೆಲೋನಿಗೆ ನೀಡಿದ 'ಟಾಫಿ' (ಮೆಲೊಡಿ ಚಾಕೊಲೇಟ್) ಹಾಸ್ಯದ ಕಡೆಗೆ.
ಇದು ಕೇವಲ ಭಾರತ ಮಾತ್ರವಲ್ಲದೆ, ದೇಶದ ಗಡಿಗಳನ್ನು ಮೀರಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಅಪರೂಪದ ಮತ್ತು ವರ್ಚುವಲ್ ಸಂಚಲನವನ್ನೇ ಸೃಷ್ಟಿಸಿತು.
ಹಿನ್ನೆಡೆಗೆ ಸರಿಯಿತೇ ಯುಎನ್‌ಎಸ್‌ಸಿ ಪ್ರಯತ್ನ
ಹೀಗಿದ್ದರೂ, ಇಬ್ಬರು ನಾಯಕರ ಭೇಟಿಯ ನಂತರ ರೋಮ್‌ನಲ್ಲಿ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆಯಲ್ಲಿ, ಭಾರತದ ಸುದೀರ್ಘಾವಧಿಯ ಯುಎನ್‌ಎಸ್‌ಸಿ ಕನಸಿನ ಬಗ್ಗೆ ಯಾವ ಉಲ್ಲೇಖವೂ ಇರಲಿಲ್ಲ. ಈ ಹಿಂದಿನ ಭಾರತದ ಪ್ರಧಾನಮಂತ್ರಿಗಳ ವಿದೇಶ ಪ್ರವಾಸಗಳ ಸಂದರ್ಭದಲ್ಲಾಗಲಿ ಅಥವಾ ವಿಶ್ವದ ಗಣ್ಯರು ನವದೆಹಲಿಗೆ ಭೇಟಿ ನೀಡಿದಾಗ ಹೊರಡಿಸುತ್ತಿದ್ದ ಜಂಟಿ ಹೇಳಿಕೆಗಳಿಗಾಗಲಿ ಇದು ಪೂರ್ತಾ ಪೂರ್ತಿ ತದ್ವಿರುದ್ಧ.
ಯುಎನ್‌ಎಸ್‌ಸಿಯ ಉನ್ನತ ಮಟ್ಟದ ಜಂಟಿ ಸಭೆಯಲ್ಲಿ ಅತ್ಯಂತ ಶಕ್ತಿಶಾಲಿ ಐದು ರಾಷ್ಟ್ರಗಳ (Big Five) ಸಾಲಿನಲ್ಲಿ ಸ್ಥಾನ ಪಡೆಯಬೇಕೆಂಬ ಭಾರತದ ಆಸೆಗೆ ಈ ಹಿಂದೆ ಹಲವು ಬಾರಿ ಬೆಂಬಲ ವ್ಯಕ್ತವಾಗಿತ್ತು. ಆದಾಗ್ಯೂ, ಉನ್ನತ ಮಟ್ಟದ ರಾಜಕೀಯ ಮತ್ತು ರಾಜತಾಂತ್ರಿಕ ಮಾತುಕತೆಗಳ ಸಂದರ್ಭದಲ್ಲಿ ಇದು ಎಂದಿಗೂ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಆದರೆ ಇಟಲಿ ಇದಕ್ಕೆ ಅಪವಾದವಾಗಿದೆ ಮತ್ತು ಪ್ರಸ್ತುತವೂ ಅದು ಹಾಗೆಯೇ ಮುಂದುವರಿದಿದೆ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಮೋದಿ ಮತ್ತು ಮೆಲೋನಿ ಅವರ ಮಾತುಕತೆಯ ನಂತರ ಬಿಡುಗಡೆಯಾದ ಅಧಿಕೃತ ಮಾಹಿತಿಗಳು ಅಥವಾ ವರದಿಗಳಲ್ಲಿ ಯುಎನ್‌ಎಸ್‌ಸಿ ಬಗ್ಗೆ ಯಾವ ಪ್ರಸ್ತಾಪವೂ ಇರಲಿಲ್ಲ.
ಇದು ವಿಚಿತ್ರವಾಗಿ ಕಾಣುತ್ತದೆ, ಯಾಕೆಂದರೆ ಇಂದು ಜಗತ್ತನ್ನು ಕಾಡುತ್ತಿರುವ ಯುದ್ಧಗಳು ಮತ್ತು ಹೊರ್ಮುಜ್ ಜಲಸಂಧಿಯ ಆಗಾಗ್ಗೆ ಉಂಟಾಗುವ ದಿಗ್ಬಂಧನದ ಸಮಸ್ಯೆಯ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರಾದರೂ, ವಿಶ್ವಸಂಸ್ಥೆ ಮತ್ತು ಅದರ ಭದ್ರತಾ ಮಂಡಳಿಯ ಪಾತ್ರ ಹಾಗೂ ಸ್ವರೂಪದ ಬಗ್ಗೆ ಮಾತ್ರ ಮೌನ ವಹಿಸಲಾಗಿತ್ತು.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ, ವಿಶ್ವಸಂಸ್ಥೆಯು ಮೊದಲಿನಷ್ಟು ಪ್ರಸ್ತುತವಾಗಿ ಉಳಿದಿಲ್ಲದೇ ಇರಬಹುದು. ಆದರೆ ಅದರ ಸಾಂಸ್ಥಿಕ ಸ್ವರೂಪ ಮತ್ತು ಅದರ ಪ್ರಮುಖ ಭದ್ರತಾ ವಿಭಾಗದಲ್ಲಿ ಸ್ಥಾನ ಪಡೆಯಬೇಕೆಂಬ ಭಾರತದ ಹಕ್ಕೇನೂ ಚ್ಯುತಿ ಬಂದಿಲ್ಲ. ಅದು ಮೊದಲಿನಂತೆಯೇ ಮುಂದುವರಿದಿದೆ. ಅದಕ್ಕಿಂತಲೂ ಹೆಚ್ಚಾಗಿ, ವಿಶ್ವದ ಸಂಘರ್ಷ ಪೀಡಿತ ಪ್ರದೇಶಗಳಿಗೆ ಕಳುಹಿಸಲಾಗುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಲ್ಲಿ ಭಾರತೀಯ ಸೇನೆಯು ಇಂದಿಗೂ ಸಕ್ರಿಯವಾಗಿ ಭಾಗವಹಿಸುತ್ತಿರುವ ಕಾರಣ ಈ ಹಕ್ಕು ಮತ್ತಷ್ಟು ಗಟ್ಟಿಯಾಗಿದೆ ಕೂಡ.
ವಿಶ್ವದ ಹತ್ತು-ಹಲವು ವಲಯಗಳಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಗೊಳ್ಳುತ್ತ ಸಾಗಿರುವುದರಿಂದ, ಯುಎನ್‌ಎಸ್‌ಸಿಯನ್ನು ಹೆಚ್ಚು ಪ್ರಾತಿನಿಧಿಕ ಮತ್ತು ಪರಿಣಾಮಕಾರಿಯನ್ನಾಗಿ ಮಾಡುವ ವಿಷಯಗಳು ಈಗ ಇನ್ನಷ್ಟು ತುರ್ತು ಎನಿಸಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಟಲಿ ನಿಲುವು ಮತ್ತು ಕಾಫಿ ಕ್ಲಬ್
ಆದರೆ ರೋಮ್‌ನಲ್ಲಿ ಮೋದಿ ಮತ್ತು ಮೆಲೋನಿ ಇಬ್ಬರೂ ಈ ವಿಷಯಕ್ಕೆ ಯಾವುದೇ ಪ್ರಾಮುಖ್ಯತೆ ನೀಡಿದಂತೆ ಕಾಣಲಿಲ್ಲ. ಈ ಕುರಿತು ಮಾತುಕತೆಗಳು ನಡೆದಿದ್ದರೂ, ಅದರ ನಂತರ ಹೊರಡಿಸಲಾದ ಸಾರ್ವಜನಿಕ ಹೇಳಿಕೆಗಳಲ್ಲಿ ಆ ವಿಷಯವನ್ನು ಬಹಿರಂಗಪಡಿಸಲಾಗಿಲ್ಲ.
ಈ ವಿಷಯದಲ್ಲಿ ಇಟಲಿ ಹೊಂದಿರುವ ಕಾರಣ ಅದರ ಸುದೀರ್ಘಾವಧಿಯ ನಿಲುವು ಎಂಬುದು ನಿಸ್ಸಂದೇಹ. ಇದುವರೆಗೆ ಇಟಲಿಯು ಪಾಕಿಸ್ತಾನ, ಅರ್ಜೆಂಟೀನಾ, ದಕ್ಷಿಣ ಕೊರಿಯಾ, ಕೆನಡಾ, ಮೆಕ್ಸಿಕೋ ಮತ್ತು ಟರ್ಕಿಯಂತಹ ದೇಶಗಳ ಬೆಂಬಲವನ್ನು ದಕ್ಕಿಸಿಕೊಂಡು ಯುಎನ್‌ಎಸ್‌ಸಿಯ ಖಾಯಂ ಸದಸ್ಯತ್ವದ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ವಿರೋಧಿಸುತ್ತಲೇ ಬಂದಿದೆ.
ಖಾಯಂ ಸದಸ್ಯತ್ವವನ್ನು ನೀಡುವ ಬದಲು, ಆವರ್ತನದ (ರೊಟೇಶನ್) ಆಧಾರದ ಮೇಲೆ ಚುನಾವಣೆಗಳ ಮೂಲಕ ಹೆಚ್ಚು ಖಾಯಮ್ಮೇತರ ಸದಸ್ಯರನ್ನು ಸೇರಿಸುವ ಮೂಲಕ ಯುಎನ್‌ಎಸ್‌ಸಿಯನ್ನು ವಿಸ್ತರಿಸಬೇಕು ಎಂಬುದು ಇಟಲಿ ಮಂಡಿಸುವ ಪ್ರತಿಪಾದನೆ. ಇದರಿಂದ ಹೆಚ್ಚಿನ ದೇಶಗಳಿಗೆ ಯುಎನ್‌ಎಸ್‌ಸಿಯಲ್ಲಿ ಸ್ಥಾನ ಪಡೆಯಲು ಅವಕಾಶ ಸಿಗುತ್ತದೆ ಎಂಬುದೂ ಅದರ ವಾದವಾಗಿದೆ. ತನ್ನ ಈ ವಾದವನ್ನು ಸಾಧಿಸಲು, ಇಟಲಿಯು 'ಕಾಫಿ ಕ್ಲಬ್' ಎಂದು ಕರೆಯಲಾಗುವ ದೇಶಗಳ ಒಕ್ಕೂಟವನ್ನು ರಚಿಸಿತು.
ಇದು 1995ರಷ್ಟು ಹಿಂದೆಯೇ, ವಿಶ್ವಸಂಸ್ಥೆಗೆ ಇಟಲಿಯ ರಾಯಭಾರಿಯಾಗಿದ್ದ ಫ್ರಾನ್ಸೆಸ್ಕೊ ಪಾವೊಲೊ ಫುಲ್ಸಿ ಅವರ ಯೋಜನೆ ಮತ್ತು ಮಾರ್ಗದರ್ಶನದ ಅಡಿಯಲ್ಲಿ ಪಾಕಿಸ್ತಾನ, ಮೆಕ್ಸಿಕೋ ಮತ್ತು ಈಜಿಪ್ಟ್ ದೇಶಗಳ ಸಹಾಯದೊಂದಿಗೆ ಅಸ್ತಿತ್ವಕ್ಕೆ ಬಂದಿತು.
2005 ರಲ್ಲಿ, ಈ ಒಕ್ಕೂಟಕ್ಕೆ ಇನ್ನೂ ಹೆಚ್ಚಿನ ದೇಶಗಳನ್ನು ಸೇರಿಸಲಾಯಿತು ಮತ್ತು ಅದರ ಪಾತ್ರವನ್ನು 'ಒಮ್ಮತಕ್ಕಾಗಿ ಒಗ್ಗೂಡುವಿಕೆ' (ಯುಎಫ್‌ಸಿ) ಎಂದು ವ್ಯಾಖ್ಯಾನಿಸಲಾಯಿತು. ಭಾರತ ಮತ್ತು ಇತರ ಜಿ-4 ದೇಶಗಳಿಗೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಸಿಗದಂತೆ ತಡೆಯಲು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ಒಮ್ಮತ ಮೂಡಿಸುವ ಜವಾಬ್ದಾರಿಯನ್ನು ಇದಕ್ಕೆ ವಹಿಸಲಾಯಿತು. ಬ್ರೆಜಿಲ್, ಜರ್ಮನಿ ಮತ್ತು ಜಪಾನ್ ಜಿ-4 ಒಕ್ಕೂಟದ ಇತರ ಸದಸ್ಯ ರಾಷ್ಟ್ರಗಳಾಗಿವೆ. ಭಾರತದಂತೆಯೇ ಈ ದೇಶಗಳೂ ಸಹ ಯುಎನ್‌ಎಸ್‌ಸಿಯಲ್ಲಿ ಖಾಯಂ ಸ್ಥಾನಕ್ಕಾಗಿ ಪ್ರಯತ್ನಿಸುತ್ತ ಬಂದಿವೆ.
ಪ್ರಸ್ತುತ ಯುಎನ್‌ಎಸ್‌ಸಿಯ ಖಾಯಂ ಸದಸ್ಯ ರಾಷ್ಟ್ರಗಳೆಂದರೆ ಅಮೆರಿಕ, ಬ್ರಿಟನ್, ಫ್ರಾನ್ಸ್, ರಷ್ಯಾ ಮತ್ತು ಚೀನಾ. ಚೀನಾವನ್ನು ಹೊರತುಪಡಿಸಿ, ಉಳಿದ ನಾಲ್ಕೂ ದೇಶಗಳು ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ವಿರುದ್ಧ ಹೋರಾಡಿದ ಮಿತ್ರಪಕ್ಷಗಳಾಗಿದ್ದವು, ಈ ಯುದ್ಧದ ನಂತರವೇ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು. ಎರಡನೇ ಮಹಾಯುದ್ಧದಲ್ಲಿ ಮಿತ್ರಪಕ್ಷಗಳ ವಿರುದ್ಧ ಜರ್ಮನಿ ಜೊತೆಗೂಡಿ ಹೋರಾಡಿದ್ದ ಜಪಾನ್, ಇಂದಿಗೂ ಯುಎನ್‌ಎಸ್‌ಸಿಯ ಖಾಯಂ ಸದಸ್ಯತ್ವವನ್ನು ಹೊಂದಿಲ್ಲ.
ಭಾರತಕ್ಕೆ ಕೈತಪ್ಪಿದ ಅವಕಾಶ
ಭಾರತವು ಈ ಹಿಂದೆ ಕನಿಷ್ಠ ಎಂಟು ಅವಧಿಗಳಿಗೆ ಯುಎನ್‌ಎಸ್‌ಸಿಯ ಖಾಯಮ್ಮೇತರ ಸದಸ್ಯ ರಾಷ್ಟ್ರವಾಗಿದೆ. ಯುದ್ಧ ಮತ್ತು ಶಾಂತಿಗೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಪ್ರಭಾವ ಬೀರಲು ಒಂದಲ್ಲ ಒಂದು ದಿನ ಭಾರತಕ್ಕೆ ಖಾಯಂ ಸದಸ್ಯತ್ವ ಸಿಗುತ್ತದೆ ಎಂಬ ಭರವಸೆಯ ನಡುವೆಯೇ, ಅದರ ಕೊನೆಯ ಎರಡು ವರ್ಷಗಳ ಅವಧಿಯು 2022 ರಲ್ಲಿ ಕೊನೆಗೊಂಡಿತು.
ಆದರೆ ವಿಷಾದದ ಸಂಗತಿ ಎಂದರೆ ಇದು ಸದ್ಯೋಭವಿಷ್ಯದಲ್ಲಿ ಈಡೇರುವಂತೆ ಕಾಣುತ್ತಿಲ್ಲ. ಯಾಕೆಂದರೆ ಇತ್ತೀಚೆಗೆ ಮೋದಿ ಮತ್ತು ಮೆಲೋನಿ ಅವರ ನಡೆದ ಮಾತುಕತೆಗಳ ಎಲ್ಲ ಮುನ್ಸೂಚನೆಗಳನ್ನು ಲೆಕ್ಕಹಾಕಿದರೂ ಈ ವಿಚಾರವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಅಥವಾ ಇದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡದೇ ಮೂಲೆಗುಂಪು ಮಾಡಲಾಗಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ ʼದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

