
ಚೀನಾ-ಮ್ಯಾನ್ಮಾರ್ ಆರ್ಥಿಕ ಕಾರಿಡಾರನ್ನು ಬಾಂಗ್ಲಾಕ್ಕೆ ವಿಸ್ತರಿಸುವುದರಿಂದ ರಖೈನ್ ಕಾರಿಡಾರಿನಲ್ಲಿ ಕಾರ್ಯನಿರ್ವಹಿಸುವ ತನ್ನ ಯೋಜನೆಗಳಿಗೆ ಅಡ್ಡಿಯಾಗುತ್ತದೆ ಎಂಬುದು ಅಮೆರಿಕದ ಆತಂಕ!
ಬಾಂಗ್ಲಾದೇಶದ ಅಧ್ಯಕ್ಷ ಸ್ಥಾನ ತ್ಯಜಿಸುವಂತೆ ಶಹಾಬುದ್ದೀನ್ ಚುಪ್ಪು ಅವರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದ್ದು ದೇಶದ ಆಂತರಿಕ ರಾಜಕೀಯದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಆರೋಗ್ಯದ ಕಾರಣಗಳನ್ನು ಮುಂದೊಡ್ಡಿ ಅಧ್ಯಕ್ಷರು ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಅಧಿಕಾರದಿಂದ ಕೆಳಕ್ಕಿಳಿಯುವಂತೆ ಪ್ರಧಾನಿ ತಾರಿಕ್ ರೆಹಮಾನ್ ಅವರು ಅಧ್ಯಕ್ಷರಿಗೆ ಸೂಚನೆ ನೀಡಿದ್ದರು. ಇದಕ್ಕಾಗಿ ಇಸ್ಲಾಮಿಸ್ಟ್ ಪಕ್ಷಗಳು ಹಾಗೂ ಬಿಎನ್‌ಪಿ ಒತ್ತಡ ಹೇರುತ್ತ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಚುಪ್ಪು ಅವರು ನಿಜಕ್ಕೂ ಬೆದರಿಕೆಯಾಗಿ ಪರಿಣಮಿಸಿದ್ದರೇ?
2024ರ ಆಗಸ್ಟ್ ತಿಂಗಳಿನಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಅವಾಮಿ ಲೀಗ್ ಪಕ್ಷದ ಹಿರಿಯ ನಾಯಕರೊಂದಿಗೆ ಬಾಂಗ್ಲಾದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ ಬಳಿಕ ಈ ರಾಜಕೀಯ ಒತ್ತಡ ಇಮ್ಮಡಿಯಾಗಿತ್ತು. ವಿಚಾರಣೆ ಎದುರಿಸಲು ದೇಶಕ್ಕೆ ಮರಳಿ ಬರುತ್ತಿರುವುದಾಗಿ ಶೇಖ್ ಹಸೀನಾ ಅವರು ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದರೂ ಕೂಡ ಪದಚ್ಯುತ ನಾಯಕಿಯ ಆಗಮನದಿಂದ ದೇಶದ ಬೀದಿಗಳಲ್ಲಿ ಮತ್ತೆ ಭಾರೀ ಪ್ರತಿಭಟನೆಗೆ ಅವಕಾಶ ನೀಡಬಹುದು ಹಾಗೂ ಅವಾಮಿ ಲೀಗ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತೊಂದು ಪ್ರತಿಕ್ರಾಂತಿಗೆ ದಾರಿಮಾಡಿಕೊಡಬಹುದು ಎಂಬುದು ಅನೇಕರ ಆತಂಕವಾಗಿದೆ.
ಅವಾಮಿ ಲೀಗ್ ಅಧಿಕಾರಕ್ಕೆ ಮರಳುವ ಈ ಸಂಭಾವ್ಯ ಬದಲಾವಣೆಯಲ್ಲಿ ಅಧ್ಯಕ್ಷ ಚುಪ್ಪು ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬುದು ಬಾಂಗ್ಲಾದೇಶದಲ್ಲಿರುವ ಹಸೀನಾ ಅವರ ವಿರೋಧಿಗಳ ನಂಬಿಕೆಯಾಗಿದೆ. ಒಂದು ವೇಳೆ ದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತೆಂದರೆ ಅಧ್ಯಕ್ಷರು ತಮ್ಮ ತುರ್ತು ಅಧಿಕಾರವನ್ನು ಬಳಸಿಕೊಳ್ಳಬಹುದು ಎಂಬುದು ಎಲ್ಲರ ಆತಂಕವಾಗಿತ್ತು. ಯಾಕೆಂದರೆ, ಹಸೀನಾ ಅವರ ಕಡೆಯಿಂದ ತಮಗೆ ಯಾವುದೇ ರಾಜೀನಾಮೆ ಪತ್ರ ಬಂದಿಲ್ಲ ಎಂಬ ಅವರ ಹೇಳಿಕೆಯು ಇದಕ್ಕೆ ಪೂರಕವಾಗಿತ್ತು. ಹಾಗಾಗಿ ಈ ಸಂಚಿನಲ್ಲಿ ಅಧ್ಯಕ್ಷರು ನೇರವಾಗಿ ಭಾಗಿಯಾಗಿದ್ದಾರೆ ಎಂಬ ಅನುಮಾನ ಮೂಡಿಸಿದೆ.
ಚುಪ್ಪು ನಿರ್ಗಮನದ ಹಿಂದೆ ಅಮೆರಿಕ ಕೈವಾಡ
ಆದರೆ ಚುಪ್ಪು ಅವರು ಅಧಿಕಾರದಿಂದ ನಿರ್ಗಮಿಸಲು ಬೇರೆಯದೇ ಕಾರಣವಿದೆ ಎಂದು ಬಾಂಗ್ಲಾದೇಶದ ಗುಪ್ತಚರದ ಉನ್ನತ ಮೂಲಗಳು ತಿಳಿಸುತ್ತವೆ. ಇತ್ತೀಚೆಗೆ ಅಧ್ಯಕ್ಷರು ವೈದ್ಯಕೀಯ ಚಿಕಿತ್ಸೆಯ ಕಾರಣಕ್ಕಾಗಿ ಲಂಡನ್‌ಗೆ ತೆರಳಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿರುವ ಶೇಖ್ ಹಸೀನಾ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಅದಾದ ಬಳಿಕವೇ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲಾಗಿದೆ ಎಂದು ಈ ಮೂಲಗಳು ತಿಳಿಸುತ್ತವೆ.
ಹೆಸರು ಬಹಿರಂಗಪಡಿಸಲು ಬಯಸದ ಬಾಂಗ್ಲಾದೇಶದ ಇಬ್ಬರು ಉನ್ನತ ಅಧಿಕಾರಿಗಳು ಈ ಲೇಖಕರಿಗೆ ತಿಳಿಸಿರುವಂತೆ ಚುಪ್ಪು ಅವರನ್ನು ತಕ್ಷಣ ಅಧಿಕಾರದಿಂದ ಕಿತ್ತುಹಾಕುವಂತೆ ಅಮೆರಿಕದ ಅಧ್ಯಕ್ಷರು ಪ್ರಧಾನಿ ರೆಹಮಾನ್ ಅವರ ಮೇಲೆ ಭಾರೀ ರಾಜತಾಂತ್ರಿಕ ಒತ್ತಡ ಹೇರಿದ್ದರು. ಆ ಬಳಿಕವೇ ಪದಚ್ಯುತ ಪ್ರಕ್ರಿಯೆ ಜಾರಿಗೆ ಬಂದಿದೆ. ಹಸೀನಾ ಅವರು ಬಾಂಗ್ಲಾಕ್ಕೆ ಮರಳಲು ಯೋಜಿಸಿರುವುದು ಇದಕ್ಕೆ ಕಾರಣವಲ್ಲ, ಬದಲಾಗಿ ಚುಪ್ಪು ಅವರನ್ನು ಹೊರದಬ್ಬಲು ಏನಾದರೊಂದು ನೆವ ಹುಡುಕಲಾಗುತ್ತಿತ್ತು. ಬಾಂಗ್ಲಾದೇಶದ ಭೂರಾಜಕೀಯ ಕಾರ್ಯಸೂಚಿಯನ್ನು ಮುನ್ನಡೆಸಲು ನಿಷ್ಠಾವಂತ ನಾಯಕರೊಬ್ಬರ ಅಗತ್ಯ ಕಾಣುತ್ತಿದೆ. ಬಹುಷಃ ನೋಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರನ್ನು ಅಧ್ಯಕ್ಷ ಪದವಿಯಲ್ಲಿ ಕೂರಿಸುವಂತೆ ಮಾಡುವುದು ಅಮೆರಿಕದ ಬಯಕೆಯಾಗಿರುವಂತೆ ಕಾಣುತ್ತಿದೆ ಎಂದು ಮೂಲಗಳು ತಿಳಿಸಿವೆ.
ಚೀನಾ ಕಾರಿಡಾರ್ ಯೋಜನೆ ತಂದ ಕಳವಳ
ಇನ್ನೊಂದು ಮೂಲದ ಪ್ರಕಾರ ಪ್ರಧಾನಿ ರೆಹಮಾನ್ ಅವರು ಇತ್ತೀಚಿಗೆ ಚೀನಾ ಭೇಟಿ ನೀಡಿರುವುದು ಅಮೆರಿಕವನ್ನು ಕಂಗೆಡಿಸುವಂತೆ ಮಾಡಿದೆ. ಬಾಂಗ್ಲಾದ ಬಂದರು ಅಭಿವೃದ್ಧಿಯಂತಹ ಮೂಲ ಸೌಕರ್ಯ ಯೋಜನೆಗಳಲ್ಲಿ ಚೀನಾದ ಕಂಪನಿಗಳು ಹೂಡಿಕೆ ಮಾಡಲು ಅನುಕೂಲವಾಗುವಂತೆ ರೆಹಮಾನ್ ಹಲವು ಒಪ್ಪಂದಗಳಿಗೆ ಸಹಿಹಾಕಿರುವುದು ಮಾತ್ರವಲ್ಲದೆ ಚೀನಾ-ಮ್ಯಾನ್ಮಾರ್ ಆರ್ಥಿಕ ಕಾರಿಡಾರ್‌ನ್ನು ಕೂಡ ಬಾಂಗ್ಲಾಕ್ಕೆ ವಿಸ್ತರಿಸುವ ಚೀನಾದ ಪ್ರಸ್ತಾವನೆಗೂ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಬಾಂಗ್ಲಾದ ಹಿರಿಯ ಅಧಿಕಾರಿಗಳು ಈ ಲೇಖಕನಿಗೆ ತಿಳಿಸಿದ್ದಾರೆ.
ಚೀನಾ-ಮ್ಯಾನ್ಮಾರ್ ಆರ್ಥಿಕ ಕಾರಿಡಾರ್ ವಿಸ್ತರಣೆ ಮಾಡುವುದರಿಂದ ಚೀನಾಗೆ ಭೂ ಪ್ರದೇಶದಿಂದ ಸಮುದ್ರದ ಮೂಲಕ ಬಂಗಾಳಕೊಲ್ಲಿಯನ್ನು ತಲುಪಲು ಪ್ರವೇಶ ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ಬಾಂಗ್ಲಾಕ್ಕೆ ಇದನ್ನು ವಿಸ್ತರಣೆ ಮಾಡುವುದರಿಂದ ಇಡೀ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಉಪಸ್ಥಿತಿ ಇನ್ನಷ್ಟು ಗಟ್ಟಿಯಾಗುವುದು ಖಚಿತ ಎಂಬುದು ಅಮೆರಿಕದ ಚಿಂತೆ.
ಇದರಿಂದಾಗಿ ಬಾಂಗ್ಲಾದೇಶದಿಂದ ಮ್ಯಾನ್ಮಾರ್‌ನಲ್ಲಿರುವ ರಖೈನ್ ರಾಜ್ಯದವರೆಗೆ ಸಂಪರ್ಕ ಕಲ್ಪಿಸುವ ರಖೈನ್ ಕಾರಿಡಾರ್‌ನ್ನು ನಿರ್ವಹಿಸುವ ಅಮೆರಿಕದ ಯೋಜನೆಯನ್ನು ನಿಷ್ಕ್ರಿಯಗೊಳಿಸುತ್ತದೆ. ಹಾಗೆ ಮಾಡುವುದರಿಂದ ಮ್ಯಾನ್ಮಾರ್ ಸೇನೆಯನ್ನು ಸೋಲಿಸಲು ಮತ್ತು ಮಿಲಿಟರಿ ನೇತೃತ್ವದ ಒಕ್ಕೂಟ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆಸುತ್ತಿರುವ ಅಲ್ಲಿನ ಬಂಡಾಯ ಗುಂಪುಗಳಿಗೆ ಯಾವುದೇ ರೀತಿಯಲ್ಲಿ ಸರಬರಾಜು ಮಾಡದಂತೆ ಕಡಿವಾಣ ಹಾಕಿದಂತಾಗುತ್ತದೆ. ಮ್ಯಾನ್ಮಾರ್‌ನಲ್ಲಿರುವ ಮಿಲಿಟರಿ ಜುಂಟಾ ಚೀನಾದ ಆಪ್ತಮಿತ್ರ. ಹಾಗಾಗಿ ಅದು ಬಂಗಾಳಕೊಲ್ಲಿಯಲ್ಲಿ ಚೀನಾದ ಉಪಸ್ಥಿತಿಯನ್ನು ಬಯಸುತ್ತದೆ. ಆ ಕಾರಣದಿಂದಲೇ ಆರ್ಥಿಕ ಕಾರಿಡಾರ್ ಜಾರಿಗೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಅಮೆರಿಕಕ್ಕೆ ಈ ಯೋಜನೆ ಜಾರಿಗೆ ಬರುವುದು ಸುತಾರಾಮ್ ಬೇಕಾಗಿಲ್ಲ.
ಢಾಕಾಗೆ ದೌಡಾಯಿಸಿದ ಅಮೆರಿಕ ಅಧಿಕಾರಿಗಳು
ʼಚೀನಾದ ಜೊತೆ ಹೆಚ್ಚು ಸಲುಗೆಯಿಂದ ಇರದಿರಿʼ ಎಂಬುದು ಚೀನಾ ಭೇಟಿಗೂ ಮುನ್ನ ಅಮೆರಿಕ ರೆಹಮಾನ್ ಅವರಿಗೆ ನೀಡಿದ ಎಚ್ಚರಿಕೆಯ ಸಂದೇಶವಾಗಿತ್ತು. ಆದರೆ ಅದಕ್ಕೆ ಯಾವುದೇ ಕಿಮ್ಮತ್ತು ಸಿಗದೇ ಹೋಯಿತು. ಹೀಗಾಗಿಯೇ ರೆಹಮಾನ್ ಚೀನಾದಿಂದ ಮರಳಿದ ತಕ್ಷಣವೇ ಅಧ್ಯಕ್ಷ ಚುಪ್ಪು ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲೇಬೇಕು ಎಂದು ಅಮೆರಿಕ ಪಟ್ಟು ಹಿಡಿದು ಕುಳಿತಿತು.
ಈ ಉದ್ದೇಶದಿಂದಲೇ ಸಿಐಸಿಯ ಮಾಜಿ ಉನ್ನತ ಅಧಿಕಾರಿ ಜೆರಾಲ್ಡ್ ಹ್ಯಾಮಿಲ್ಟನ್ ಹಾಗೂ ದಕ್ಷಿಣ ಏಷ್ಯಾಕ್ಕೆ ಟ್ರಂಪ್ ಅವರ ಪ್ರತಿನಿಧಿಯಾಗಿರುವ ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಜಿಯೋ ಗೋರ್ ಅವರು ಢಾಕಾಗೆ ಭೇಟಿ ನೀಡಿ ಉನ್ನತ ಮಟ್ಟದ ಚರ್ಚೆ ನಡೆಸಿದ್ದಾರೆ.
ಚೀನಾದ ಕಾರಿಡಾರ್ ವಿಸ್ತರಣೆ ಯೋಜನೆಯನ್ನು ಮುಂದುವರಿಸದಂತೆ ಶತಾಯಗತಾಯ ತಡೆಯಬೇಕು ಮತ್ತು ಅದಕ್ಕಾಗಿ ಬಾಂಗ್ಲಾದೇಶದ ಪ್ರಧಾನಿ ಮೇಲೆ ಒತ್ತಡ ಹೇರಬೇಕು ಎಂಬುದು ಈ ಅಧಿಕಾರಿಗಳು ಮಾಡಿರುವ ತಾಕೀತು. ಜೊತೆಗೆ ಮುಹಮ್ಮದ್ ಯೂನಸ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಮನವರಿಕೆ ಮಾಡುವುದೂ ಅವರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಯೂನಸ್ ಅವರನ್ನು ಬಿಎನ್‌ಪಿ ಸ್ವೀಕರಿಸಿದ್ದೇ ಆದರೆ ಇಸ್ಲಾಮಿಸ್ಟ್ ವಿರೋಧ ಪಕ್ಷಗಳು ಅವರ ಅಭ್ಯರ್ಥಿತನವನ್ನೇನೂ ವಿರೋಧ ಮಾಡುವುದಿಲ್ಲ. ಇದರಿಂದ ಅವರು ಯಾವುದೇ ವಿರೋಧವಿಲ್ಲದೆ ಆಯ್ಕೆಯಾಗುವುದು ಸಾಧ್ಯವಾಗುತ್ತದೆ ಎಂಬುದು ಲೆಕ್ಕಾಚಾರ.
ಒಂದು ವೇಳೆ ಬಾಂಗ್ಲಾ ಚೀನಾದ ಒಪ್ಪಂದಗಳನ್ನು ಮುಂದುವರಿಸಿದರೆ ನಂತರ ಅಮೆರಿಕವು ಖಂಡಿತವಾಗಿಯೂ ರೆಹಮಾನ್ ಅವರನ್ನು ನಂಬಲು ಸಾಧ್ಯವಿಲ್ಲ, ಆದ್ದರಿಂದ ಅದು ಸಂಪೂರ್ಣವಾಗಿ ತನ್ನ ಮಾತು ಕೇಳುವಂತಹ ಅಧ್ಯಕ್ಷರನ್ನು ಬಯಸುತ್ತದೆ.
ಭಾರತದ ಬ್ರಿಕ್ಸ್ ಆಮಿಷ
ಇನ್ನು ಅಮೆರಿಕವನ್ನು ಹೆಚ್ಚು ಚಿಂತೆಗೀಡು ಮಾಡಿರುವುದು ಬ್ರಿಕ್ಸ್ ಒಕ್ಕೂಟಕ್ಕೆ ಸೇರಲು ರೆಹಮಾನ್ ತೋರುತ್ತಿರುವ ತೀವ್ರ ಆಸಕ್ತಿ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ದೆಹಲಿಯಲ್ಲಿ ನಡೆಯಲಿರುವ ಮುಂಬರುವ ಬ್ರಿಕ್ಸ್ ಶೃಂಗಸಭೆಗೆ ಈಗಾಗಲೇ ಅವರನ್ನು ಆಹ್ವಾನಿಸಲಾಗಿದೆ. ಭಾರತದಿಂದ ಈ ಆಹ್ವಾನವು ಹೋಗಿದ್ದು, ಅತ್ಯುನ್ನತ ಮಟ್ಟದಲ್ಲಿ ದ್ವಿಪಕ್ಷೀಯ ಸಮಸ್ಯೆಗಳನ್ನು ಚರ್ಚಿಸಲು ಭಾರತವು ಈ ಭೇಟಿಯನ್ನು ಬಳಸಿಕೊಳ್ಳಬಹುದು. ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಬಾಂಗ್ಲಾದೇಶದಲ್ಲಿ ಸಾಮಾನ್ಯ ಪ್ರಜಾಸತ್ತಾತ್ಮಕ ವಾತಾವರಣವನ್ನು ಪುನರಾರಂಭಿಸಲು ಅನುವು ಮಾಡಿಕೊಡುವ ಸಲುವಾಗಿ ಅವಾಮಿ ಲೀಗ್ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಭಾರತವು ಒತ್ತಾಯಿಸುವ ಸಾಧ್ಯತೆಯೂ ಇಲ್ಲದಿಲ್ಲ.
ಮಾಸ್ಕೋದೊಂದಿಗೆ ತನಗಿರುವ ಅತ್ಯುತ್ತಮ ಸಂಬಂಧ ಮತ್ತು ಬೀಜಿಂಗ್ನೊಂದಿಗೆ ಸುಧಾರಿಸುತ್ತಿರುವ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು, ಯೂನಸ್ ಅವರ ಮಧ್ಯಂತರ ಸರ್ಕಾರವು ಬಾಂಗ್ಲಾದೇಶವನ್ನು ಸೆಳೆದಿದ್ದ ಅಮೆರಿಕದ ಪ್ರಭಾವಲಯದಿಂದ ಅದನ್ನು ದೂರವಿಡಲು ದೆಹಲಿಯು ಬ್ರಿಕ್ಸ್ ಶೃಂಗಸಭೆಯನ್ನು ಬಳಸಿಕೊಳ್ಳಬಹುದು. ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ನಲ್ಲಿ ಬೆಳೆಯುತ್ತಿರುವ ಚೀನಾದ ಪ್ರಭಾವವನ್ನು ಭಾರತವು ಇಷ್ಟಪಡದೆ ಇರಬಹುದು, ಆದರೆ ಮ್ಯಾನ್ಮಾರ್ ಅನ್ನು ಇಬ್ಭಾಗ ಮಾಡುವ ಮತ್ತು ಬಾಂಗ್ಲಾದೇಶವನ್ನು ಪೂರ್ವದಲ್ಲಿ ಭಾರತ ವಿರೋಧಿ ಕೇಂದ್ರವನ್ನಾಗಿ ಪರಿವರ್ತಿಸುವ ಅಮೆರಿಕದ ಕುತಂತ್ರಗಳ ಭಾಗವಾಗಲು ತಾನು ಬಯಸುವುದಿಲ್ಲ ಎಂಬುದನ್ನು ಅದು ಸ್ಪಷ್ಟಪಡಿಸಿದೆ.
ಭಾರತವು ಈಶಾನ್ಯ ಭಾಗಕ್ಕಾಗಿ ಕಲಾಡನ್ ಮಲ್ಟಿ-ಮೋಡಲ್ ಸಾರಿಗೆ ಯೋಜನೆ ಮತ್ತು ಮ್ಯಾನ್ಮಾರ್ ಮೂಲಕ ಹಾದುಹೋಗುವ ಗೋಲ್ಡನ್ ಟ್ರಯಾಂಗಲ್ ಸಂಪರ್ಕದಂತಹ ಪ್ರಮುಖ ಸಂಪರ್ಕ ಯೋಜನೆಗಳನ್ನು ಹೊಂದಿದೆ. ಇದು ಈಶಾನ್ಯ ಭಾರತಕ್ಕೆ ತನ್ನ ಭೂಮಾರ್ಗದ ಸಂಪರ್ಕವನ್ನು ರಕ್ಷಿಸುತ್ತದೆ ಮತ್ತು ಮ್ಯಾನ್ಮಾರ್ ಪತನಗೊಳ್ಳುವುದನ್ನು ಭಾರತವು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ದೆಹಲಿಯ ಸೂಕ್ಷ್ಮ ಸಮತೋಲನ
ಇಡೀ ಪ್ರದೇಶವನ್ನು ಅಸ್ಥಿರಗೊಳಿಸಬಲ್ಲ ಅಮೆರಿಕದ ಹಸ್ತಕ್ಷೇಪವನ್ನು ತಡೆಯಲು ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಒಮ್ಮಲವಿರುವಂತೆ ತೋರುತ್ತದೆ. ಮಧ್ಯಪ್ರಾಚ್ಯದಲ್ಲಿ ಟ್ರಂಪ್ ಅವರ ತೀವ್ರ ಅಸ್ಥಿರಗೊಳಿಸುವ ಆಟದ ನಂತರ, ಬೀಜಿಂಗ್ ಅಥವಾ ದೆಹಲಿ ಯಾರೂ ಕೂಡ ದಕ್ಷಿಣ ಏಷ್ಯಾದಲ್ಲಿ ಮತ್ತೊಂದು ಅಮೆರಿಕದ ಏಕಪಕ್ಷೀಯ ಮತ್ತು ವಿಧ್ವಂಸಕ ಕ್ರಮಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ಬಾಂಗ್ಲಾದೇಶದಲ್ಲಿ ಚೀನಾದ ಉಪಸ್ಥಿತಿಯನ್ನು ಸೀಮಿತಗೊಳಿಸಲು ಅಮೆರಿಕವನ್ನು ಬಳಸಿಕೊಳ್ಳುವುದು ಮತ್ತು ಪೂರ್ವ ದಕ್ಷಿಣ ಏಷ್ಯಾವನ್ನು ಅಸ್ಥಿರಗೊಳಿಸಲು ಅಮೆರಿಕಕ್ಕೆ ಮುಕ್ತ ಅವಕಾಶ ನೀಡುವುದನ್ನು ತಡೆಯಲು ಚೀನಾ ಹಾಗೂ ಬ್ರಿಕ್ಸ್ ಅನ್ನು ಬಳಸಿಕೊಳ್ಳುವುದು ಭಾರತದ ಪಾಲಿನ ಉತ್ತಮ ಕಾರ್ಯತಂತ್ರ. ಪೂರ್ವ ದಕ್ಷಿಣ ಏಷ್ಯಾವನ್ನು ಸುರಕ್ಷಿತವಾಗಿರಿಸಲು ಅಂತಹ ಸೂಕ್ಷ್ಮ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಅದು ಎದುರು ನೋಡುತ್ತಿರಬಹುದು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


