
ಚಿತ್ತಗಾಂಗ್ ಪ್ರದೇಶದ ಕಾನೂನುಗಳ ಪರಿಶೀಲನೆ ಬುಡಕಟ್ಟು ನಾಯಕರ ಆತಂಕಕ್ಕೆ ಕಾರಣವಾಗಿದೆ. ಅವರು ಹೊಸ ಬೆಂಗಾಲಿ ಮುಸ್ಲಿಂ ವಸಾಹತು ಮತ್ತು ಸೇನಾ ಜಮಾವಣೆ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾರೆ.
ಹಸೀನಾ ನಂತರದ ಬಾಂಗ್ಲಾದೇಶದ ಚಿತ್ರಣ ಬದಲಾಗಿದೆ. ಅಲ್ಲಿನ ಬೆಂಗಾಳಿ ಹಿಂದುಗಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ, ಅವರ ದೇವಾಲಯಗಳ ಮೇಲೆ ದಾಳಿಗಳಾಗುತ್ತಿವೆ, ಅವರ ಮಹಿಳೆಯರು ಮತ್ತು ಅಪಹರಣಕ್ಕೆ ಗುರಿಯಾಗುತ್ತಿದ್ದಾರೆ. ಭಾರತದ ಗಮನವು ಇಂತಹ ಘಟನೆಗಳ ಮೇಲೆ ನೆಟ್ಟಿದೆ. ಆದರೆ ದೇಶದ ಆಗ್ನೇಯ ಭಾಗದಲ್ಲಿ ಭಾರತದ ಮಿಜೊರಾಮ್ ಮತ್ತು ತ್ರಿಪುರ ಪ್ರಾಂತ್ಯಗಳಿಗೆ ಗಡಿಯನ್ನು ಹಂಚಿಕೊಂಡಿರುವ ಚಿತ್ತಗಾಂಗ್ ಪರ್ವತ ಪ್ರದೇಶದಲ್ಲಿ ಇದೇ ರೀತಿಯ ಅಥವಾ ಅದಕ್ಕಿಂತ ಹೆಚ್ಚಿನ ಕರಾಳವೆನ್ನುವಷ್ಟು ರೀತಿಯಲ್ಲಿ ಜನಾಂಗೀಯ ಹತ್ಯೆಗಳು ನಡೆಯುತ್ತಿರುವಂತೆ ಕಾಣುತ್ತಿದೆ.
ಪ್ರಧಾನಿ ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಈಗಿನ ಸರ್ಕಾರವು ಚಿತ್ತಗಾಂಗ್ ಹಿಲ್ ಟ್ರಾಕ್ಟ್ (ಸಿಎಚ್ಟಿ) ಕುರಿತು ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರೀಯ ಸಮಿತಿಯೊಂದನ್ನು ರಚಿಸಿದೆ.
ಇತ್ತೀಚಿನ ಗೆಜೆಟ್ ಅಧಿಸೂಚನೆಯಂತೆ, ಈ ಸಮಿತಿಯ ಮುಖ್ಯ ಉದ್ದೇಶ: ರಂಗಮಾಟಿ, ಖಗ್ರಾಚರಿ ಮತ್ತು ಬಂದರ್ಬಾನ್ ಎಂಬ ಮೂರು ಚಿತ್ತಗಾಂಗ್ ಪರ್ವತ ಪ್ರದೇಶದ (ಸಿಎಚ್ಟಿ) ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಜಾರಿಯಲ್ಲಿರುವ ಎಲ್ಲಾ ಕಾನೂನು ಮತ್ತು ನೀತಿಗಳನ್ನು ಪರಿಶೀಲಿಸುವುದು. ಒಮ್ಮೆ ಈ ಪ್ರದೇಶಗಳಲ್ಲಿ ಬೌದ್ಧ ಧರ್ಮವನ್ನು ಹೆಚ್ಚಾಗಿ ಪಾಲಿಸುವ ಹಾಗೂ ಶಾಕ್ಯ ವಂಶಾವಳಿಗೆ ಸೇರಿದ ಚಕ್ಮಾ ಮತ್ತು ಮಾರ್ಮಾ ಬುಡಕಟ್ಟು ಜನರೇ ವಾಸಿಸುತ್ತಿದ್ದರು. ಇಲ್ಲಿನ ಇತರ ಸಣ್ಣ ಬುಡಕಟ್ಟು ಜನರು ಹಿಂದೂ, ಕ್ರಿಶ್ಚಿಯನ್ ಮತ್ತು ಪ್ರಕೃತಿ ಆರಾಧನೆ (ಅನಿಮಿಸಂ) ಪದ್ಧತಿಗಳನ್ನು ಅನುಸರಿಸುತ್ತಾರೆ.
ಆಂಗ್ಲರು ತಂದ ನಿಯಮಾವಳಿ
1900ರಲ್ಲಿ ಬ್ರಿಟಿಷರು ಸಿಎಚ್ಟಿ ನಿಯಮಾವಳಿಯನ್ನು ತಂದರು. ಬಂಗಾಳಿ ಮುಸ್ಲಿಮರು ಹೆಚ್ಚಾಗಿದ್ದ ಪೂರ್ವ ಬಂಗಾಳದಲ್ಲಿ ಈ ಬುಡಕಟ್ಟು ಜನರು ವಿಶಿಷ್ಟ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದರು. ಇವರ ಜಮೀನು ಮತ್ತು ಸಾಂಪ್ರದಾಯಿಕ ಹಕ್ಕುಗಳನ್ನು ರಕ್ಷಿಸುವುದು ಈ ನಿಯಮದ ಉದ್ದೇಶವಾಗಿತ್ತು. ಈ ಪ್ರದೇಶವು 1947ರ ನಂತರ 'ಪೂರ್ವ ಪಾಕಿಸ್ತಾನ'ವಾಯಿತು ಹಾಗೂ ಕಠಿಣ ರಕ್ತಸಿಕ್ತ ಸ್ವಾತಂತ್ರ್ಯ ಸಂಗ್ರಾಮದ ನಂತರ ಸ್ವತಂತ್ರ 'ಬಾಂಗ್ಲಾದೇಶ'ವಾಗಿ ಹೊರಹೊಮ್ಮಿತು.
1960ರ ದಶಕದ ಮಧ್ಯ ಭಾಗದಲ್ಲಿ ನಿರ್ಮಿಸಲಾದ ಕಪ್ತಾಯ್ ಜಲವಿದ್ಯುತ್ ಯೋಜನೆಯು, ಇಲ್ಲಿನ ಬುಡಕಟ್ಟು ಜನರ ಅಪಾರ ಪ್ರಮಾಣದ ಫಲವತ್ತಾದ ಜಮೀನನ್ನು ಕಸಿದುಕೊಂಡಿತು. ಆ ನಂತರ, ಅವರಿಗೆ ಸ್ವಾಯತ್ತತೆಯನ್ನು ನೀಡದೆ ಇರುವುದು ಮತ್ತು ಬಂಗಾಳಿ ಮುಸ್ಲಿಂ ರೈತರನ್ನು ಇಲ್ಲಿಗೆ ತಂದು ಭಾರಿ ಸಂಖ್ಯೆಯಲ್ಲಿ ಪುನರ್ವಸತಿ ಮಾಡಿಸಿದ್ದು ತೀವ್ರ ಹಿಂಸಾಚಾರಕ್ಕೆ ಕಾರಣವಾಯಿತು. ಈ ಬೆಟ್ಟದ ಪ್ರದೇಶದಲ್ಲಿದ್ದ ಪಿ ಸಿ ಜೆ ಎಸ್ ಎಸ್ ನಾಯಕರ 'ಶಾಂತಿ ವಾಹಿನಿ' ಪಡೆ ಸುಮಾರು ಎರಡು ದಶಕಗಳ ಕಾಲ ಗೆರಿಲ್ಲಾ ಹೋರಾಟ ನಡೆಸಿತು.
1997ರಲ್ಲಿ ಪ್ರಧಾನಿ ಶೇಖ್ ಹಸೀನಾ ಅವರು ಈ ಬಂಡಾಯಗಾರರೊಂದಿಗೆ ಒಪ್ಪಂದ ಮಾಡಿಕೊಂಡರು. ಬುಡಕಟ್ಟು ಜನರ ಜಮೀನು, ಸಾಂಪ್ರದಾಯಿಕ ಹಕ್ಕುಗಳನ್ನು ರಕ್ಷಿಸಲು ಮತ್ತು ಅಭಿವೃದ್ಧಿ ತರಲು ಸ್ವಾಯತ್ತ ಪ್ರಾದೇಶಿಕ ಮಂಡಳಿಯನ್ನು ರಚಿಸುವುದಾಗಿ ಈ ಒಪ್ಪಂದವು ಭರವಸೆ ನೀಡಿತು.
ಪುನರ್ವಸತಿ ತಂದ ಬದಲಾವಣೆ
1975ರಲ್ಲಿ ದೇಶದ ಸಂಸ್ಥಾಪಕ ಶೇಖ್ ಮುಜೀಬುರ್ ರೆಹಮಾನ್ ಮತ್ತು ಅವರ ಕುಟುಂಬದ ಮಾರಣಹೋಮ ನಡೆದ ನಂತರ ಬಾಂಗ್ಲಾದೇಶದಲ್ಲಿ ಸೇನಾ ಆಡಳಿತ ಜಾರಿಗೆ ಬಂದಿತು. ಇದು ಸಿಎಚ್ಟಿ ಪ್ರದೇಶದಲ್ಲಿ ಬುಡಕಟ್ಟು ಜನರ ದಂಗೆಗೆ ಪ್ರಮುಖ ಕಾರಣವಾಯಿತು. ಬಾಂಗ್ಲಾದೇಶದ ಮೊದಲ ಸೇನಾ ಆಡಳಿತಗಾರ ಜಿಯಾವುರ್ ರೆಹಮಾನ್, ಉಚಿತ ಜಮೀನು ಮತ್ತು ಆರ್ಥಿಕ ನೆರವಿನ ಭರವಸೆ ನೀಡಿ ಸಾವಿರಾರು ಬಂಗಾಳಿ ಮುಸ್ಲಿಂ ರೈತರನ್ನು ಇಲ್ಲಿಗೆ ತಂದು ಪುನರ್ವಸತಿ ಕಲ್ಪಿಸಲು ಪ್ರಾರಂಭಿಸಿದರು. ಇದು ಕ್ರಮೇಣ ಅಲ್ಲಿನ ಜನಸಂಖ್ಯಾ ಸ್ವರೂಪವನ್ನೇ ಬದಲಾಯಿಸಿತು.
ಗೆರಿಲ್ಲಾ ಹೋರಾಟಗಾರರನ್ನು ತಡೆಯಲು ಬಾಂಗ್ಲಾದೇಶದ ಸೈನ್ಯವು ಈ 'ಗುಚ್ಛಗ್ರಾಮ'ಗಳನ್ನು (ಪುನರ್ವಸತಿ ಹಳ್ಳಿಗಳು) ಮಾನವ ಗುರಾಣಿಯಾಗಿ ಬಳಸಿಕೊಂಡಿತು. ಬುಡಕಟ್ಟು ಬಂಡಾಯಗಾರರ ಸರಬರಾಜು ಮಾರ್ಗಗಳನ್ನು ಬಂದ್ ಮಾಡಲು ಮತ್ತು ಅವರ ಚಟುವಟಿಕೆಗಳಿಗೆ ಕಡಿವಾಣ ವಿಧಿಸಲು ಈ ಹಳ್ಳಿಗಳನ್ನು ಆಯಕಟ್ಟಿನ ಜಾಗಗಳಲ್ಲಿ ನಿರ್ಮಾಣ ಮಾಡಲಾಯಿತು.
ಜಿಯಾ ಅವರ ನಂತರ ಅಧಿಕಾರಕ್ಕೆ ಬಂದ ಜನರಲ್ ಎರ್ಷಾದ್, ಇಸ್ಲಾಂ ಧರ್ಮವನ್ನು ಬಾಂಗ್ಲಾದೇಶದ ರಾಷ್ಟ್ರಧರ್ಮವೆಂದು ಘೋಷಿಸಿದರು. 1972ರ ಸಂವಿಧಾನವು ನೀಡಿದ್ದ ಜಾತ್ಯತೀತ ತತ್ವಕ್ಕೆ ಧಕ್ಕೆ ತರುವ ಜಿಯಾ ಅವರ ಪ್ರಯತ್ನವನ್ನು ಇವರೂ ಮುಂದುವರಿಸಿದರು. ಅಲ್ಲದೆ, ಬುಡಕಟ್ಟು ಜನರ ಒಗ್ಗಟ್ಟನ್ನು ಮುರಿಯಲು ಒಂದೇ ಸಿಎಚ್ಟಿ ಪರ್ವತ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ, ಅವರಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿದರು.
ರಾಷ್ಟ್ರೀಯ ಸಮಿತಿ ರಚನೆ
ಈಗ ಜನರಲ್ ಜಿಯಾ ಅವರ ಮಗ ಹಾಗೂ ಪ್ರಸ್ತುತ ಪ್ರಧಾನಿಯಾಗಿರುವ ತಾರಿಕ್ ರಹಮಾನ್ ಅವರು ಸಿಎಚ್ಟಿ ಕುರಿತು ಮೊದಲ ಬಾರಿಗೆ ರಾಷ್ಟ್ರೀಯ ಸಮಿತಿಯನ್ನು ಕರೆಯುವ ಉಪಕ್ರಮವನ್ನು ಕೈಗೊಂಡಿದ್ದಾರೆ.
ಈಗ ಸಮಿತಿ ಯಾವೆಲ್ಲ ಶಿಫಾರಸುಗಳನ್ನು ಮಾಡಬಹುದು ಎಂಬ ಕಳವಳ ಉಂಟಾಗಿದೆ.
ಬುಡಕಟ್ಟು ಪ್ರದೇಶಕ್ಕೆ ವಿಶಿಷ್ಟವಾದ ಸ್ವರೂಪವನ್ನು ನೀಡುವ ಬ್ರಿಟಿಷ್ ಕಾಲದ 1900ರ ಸಿಎಚ್ಟಿ ನಿಯಮಾವಳಿಯನ್ನು ರದ್ದುಗೊಳಿಸಲು ಆಡಳಿತ ಪಕ್ಷ ಮತ್ತು ಪಾಕಿಸ್ತಾನ ಪರ ಜಮಾತ್-ಎ-ಇಸ್ಲಾಮಿ ನೇತೃತ್ವದ ವಿರೋಧ ಪಕ್ಷದ ಇಸ್ಲಾಮಿಸ್ಟ್ ಒಕ್ಕೂಟದೊಳಗೆ ತೀವ್ರವಾದ ಒತ್ತಡವಿದೆ ಎಂದು ಬಿಎನ್ಪಿ ಪಕ್ಷದ ಒಳಗಿನವರು ಹೇಳುತ್ತಾರೆ.
ರಾಷ್ಟ್ರೀಯ ಸಮಿತಿಯನ್ನು ಘೋಷಿಸಿದಾಗಿನಿಂದ, ಈ ಲೇಖಕರು ಸಿಎಚ್ಟಿಯ ಸಾಂಪ್ರದಾಯಿಕ ಮುಖ್ಯಸ್ಥರ ಕುಟುಂಬಗಳು ಮತ್ತು ಮಾಜಿ ದಂಗೆಕೋರರು ಹಾಗೂ ರಾಷ್ಟ್ರೀಯ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವವರೂ ಸೇರಿದಂತೆ ವ್ಯಾಪಕ ಶ್ರೇಣಿಯ ಬುಡಕಟ್ಟು ನಾಯಕರೊಂದಿಗೆ ಸಂವಹನ ನಡೆಸಿದ್ದಾರೆ.
ಚಿತ್ತಗಾಂಗ್ ಬೆಟ್ಟದ ಪ್ರದೇಶದ ನಾಯಕರು ಮುಖ್ಯವಾಗಿ ನಾಲ್ಕು ವಿಚಾರಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ:
1. ವಿಶೇಷ ಹಕ್ಕುಗಳ ನಷ್ಟ: ಸ್ವಾಯತ್ತ ಸಂಸ್ಥೆಗಳಲ್ಲಿ ಬಂಗಾಳಿ ಪುನರ್ವಸತಿದಾರರಿಗೂ 'ಸಮಾನ ಹಕ್ಕು' ನೀಡುವ ನೆಪದಲ್ಲಿ, ಬುಡಕಟ್ಟು ಜನರ ಜಮೀನು ಮತ್ತು ಸಾಂಪ್ರದಾಯಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳಬಹುದು.
2. ಹೊಸ ಜಿಲ್ಲೆಗಳ ರಚನೆ: ಪ್ರಸ್ತುತ ಇರುವ ಮೂರು ಸಿಎಚ್ಟಿ ಜಿಲ್ಲೆಗಳನ್ನು ಆರು ಜಿಲ್ಲೆಗಳಾಗಿ ವಿಂಗಡಿಸಿ, ಕೆಲವು ಜಿಲ್ಲೆಗಳಲ್ಲಿ ಬಂಗಾಳಿ ಮುಸ್ಲಿಮರೇ ಬಹುಸಂಖ್ಯಾತರಾಗುವ ರೀತಿಯಲ್ಲಿ ಭೌಗೋಳಿಕ ಗಡಿಗಳನ್ನು ಬದಲಾಯಿಸಬಹುದು.
3. ಹೊಸ ಪುನರ್ವಸತಿ ಯೋಜನೆ: ಮ್ಯಾನ್ಮಾರ್ನಿಂದ ಬಂದಿರುವ ರೋಹಿಂಗ್ಯಾ ಮುಸ್ಲಿಮರನ್ನು ಇಲ್ಲಿ ಭಾರಿ ಸಂಖ್ಯೆಯಲ್ಲಿ ನೆಲೆಸುವಂತೆ ಮಾಡಿ, ಮುಸ್ಲಿಂ ಜನಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಹಾದಿ ಮಾಡಿಕೊಡಬಹುದು.
4. ಸೇನಾ ಅಧಿಪತ್ಯ: 1900ರ ಸಿಎಚ್ಟಿ ನಿಯಮಾವಳಿಯನ್ನು ರದ್ದುಗೊಳಿಸಿದ ನಂತರ ಎದುರಾಗಬಹುದಾದ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹತೋಟಿಗೆ ತರಲು, ಸೇನೆಗೆ ಹೆಚ್ಚಿನ ಅಧಿಕಾರ ನೀಡಿ ಮಿಲಿಟರಿ ಕ್ಯಾಂಪ್ಗಳನ್ನು ಹೆಚ್ಚಿಸಬಹುದು.
ಪ್ರಸ್ತುತ ಸಿಎಚ್ಟಿ ಇಡೀ ಬಾಂಗ್ಲಾದೇಶದಲ್ಲೇ ಅತ್ಯಂತ ಹೆಚ್ಚು ಸೇನಾ ವ್ಯವಸ್ಥೆಯನ್ನು ಹೊಂದಿರುವ ಪ್ರದೇಶವಾಗಿದ್ದು, ದೇಶದ ಆಡಳಿತಗಾರರು ಇದನ್ನು ಕೇವಲ 'ರಾಷ್ಟ್ರೀಯ ಭದ್ರತೆ'ಯ ದೃಷ್ಟಿಯಿಂದಷ್ಟೇ ನೋಡುತ್ತಿದ್ದಾರೆ.
ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೇಶಕ್ಕೆ ಮರಳಿ ಬರುವ ಯೋಜನೆ ರೂಪಿಸಿದ್ದು, ಇದರ ವಿರುದ್ಧ ಪ್ರಬಲ ಜನಪ್ರತಿಭಟನೆ ಎದುರಿಸಲು ಬಿಎನ್ಪಿ ಸರ್ಕಾರ ಮತ್ತು ಇಸ್ಲಾಮಿಕ್ ವಿರೋಧ ಪಕ್ಷಗಳು ಸಜ್ಜಾಗುತ್ತಿವೆ. ಈ ಹಂತದಲ್ಲಿ, '1900 ಸಿಎಚ್ಟಿ ನಿಯಮಾವಳಿ'ಯನ್ನು ರದ್ದುಗೊಳಿಸುವುದು ಅಲ್ಪಸಂಖ್ಯಾತ ವಿರೋಧಿ ಭಾವನೆಗಳನ್ನು ಕೆರಳಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇವರಿಗೆ ನೆರವಾಗಬಹುದು. ಗಡಿಯ ಆಚೆಗಿನ ಭಾರತ ವಿರೋಧಿ ಭಾವನೆಗಳನ್ನು ಹುಟ್ಟುಹಾಕಲು ಬಾಂಗ್ಲಾದೇಶದ ಮಿಲಿಟರಿ ಆಡಳಿತಗಾರರು ಈ ಹಿಂದೆಯೂ ಸಿಎಚ್ಟಿ ವಿಷಯವನ್ನು ಬಳಸಿಕೊಂಡಿದ್ದರು, ಈಗಲೂ ಅದೇ ಮರುಕಳಿಸುವ ಸಾಧ್ಯತೆಯಿದೆ.
ಏರುಪೇರಾದೀತೇ ಜನಸಂಖ್ಯಾ ಸಮತೋಲನ
1947ರಲ್ಲಿ ಸಿಎಚ್ಟಿಯ ಒಟ್ಟು ಜನಸಂಖ್ಯೆಯಲ್ಲಿ ಶೇ. 97.5ರಷ್ಟು ಭಾಗ ಮೂಲ ಬೆಟ್ಟ ಪ್ರದೇಶದ ಬುಡಕಟ್ಟು ಜನರೇ ಇದ್ದರು. ಆದರೆ ಕಾಲಕ್ರಮೇಣ ಇಲ್ಲಿಗೆ ಬಂದು ನೆಲೆಸಿದ ಬಂಗಾಳಿ ಮುಸ್ಲಿಮರ ಸಂಖ್ಯೆಯು ಬುಡಕಟ್ಟು ಜನರಿಗಿಂತ ಹೆಚ್ಚಾಗಿದೆ. ಬಾಂಗ್ಲಾದೇಶದ 2022ರ ಜನಗಣತಿಯ ಪ್ರಕಾರ, ಚಿತ್ತಗಾಂಗ್ ಬೆಟ್ಟ ಪ್ರದೇಶಗಳ (ರಂಗಮಾಟಿ, ಖಗ್ರಾಚರಿ ಮತ್ತು ಬಂದರ್ಬಾನ್ ಜಿಲ್ಲೆಗಳು) ಒಟ್ಟು ಜನಸಂಖ್ಯೆ 18,42,815 ರಷ್ಟಿದ್ದು, ಇದರಲ್ಲಿ ಸರಿಸುಮಾರು ಶೇ. 49.98ರಷ್ಟು ಮೂಲ ಬುಡಕಟ್ಟು ನಿವಾಸಿಗಳು ಮತ್ತು ಶೇ. 50.06ರಷ್ಟು ಬಂಗಾಳಿ ನಿವಾಸಿಗಳಿದ್ದಾರೆ.
1900ರ ಸಿಎಚ್ಟಿ ನಿಯಮಾವಳಿಯ ರದ್ಧತಿ ಮತ್ತು ವ್ಯವಸ್ಥಿತವಾಗಿ ಬಂಗಾಳಿಗಳ ಪುನರ್ವಸತಿಯು ಇಲ್ಲಿ ಹೊಸ ಸಂಘರ್ಷಗಳಿಗೆ ದಾರಿಮಾಡಿಕೊಡಬಹುದು. ಇದು ಅಲ್ಲಿನ ಜನಸಂಖ್ಯಾ ಸಮತೋಲನವನ್ನು ಸಂಪೂರ್ಣವಾಗಿ ಹಾಳುಗೆಡವಿ, ಒಮ್ಮೆ ತಮ್ಮದೇ ಮಾತೃಭೂಮಿಯಾಗಿದ್ದ ಜಾಗದಲ್ಲಿ ಬುಡಕಟ್ಟು ಜನರನ್ನು 'ಪರಕೀಯರನ್ನಾಗಿ' ಮಾಡುವ ಅಪಾಯವಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


