
ಬಿಜೆಪಿಯ ಬಲಿಷ್ಠ ಮತ್ತು ಸಂಕಷ್ಟ ನಿವಾರಕ ಎಂದು ಬಿಂಬಿತವಾಗಿರುವ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಬೇಡಿಕೆಯಿಟ್ಟಿದ್ದಾರೆ. ಧರ್ಮೇಂದ್ರ ಪ್ರಧಾನ್‌ರನ್ನು ಹೊಣೆಗಾರರಾಗಿ ಮಾಡಿದಂತೆ ಇದು ಸಾಧ್ಯವೇ?
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯ ಪ್ರತಿಭಟನೆಯ ಅಸ್ತ್ರಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿ ಬಹಳ ಕಾಲವೇನೂ ಕಳೆದಿಲ್ಲ. ಈ ರಾಜೀನಾಮೆ, ಜಂತರ್ ಮಂತರ್‌ನಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರನ್ನು ಶಾಂತವಾಗಿ ಚದುರಿಸಲು ಸರ್ಕಾರ ಮಾಡಿದ ಕಾರ್ಯತಂತ್ರಗಳಲ್ಲಿ ಒಂದು ಎಂದೂ ಹೇಳಲಾಗುತ್ತಿದೆ. ಅದೇನೇ ಇದ್ದರೂ ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಧ್ವನಿಯನ್ನು ಏರಿಸಿದ್ದಾರೆ.
ಜುಲೈ 29ರಂದು ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಮುಂದಾದಾಗ ಅದಕ್ಕೆ ನಿರಂತರವಾಗಿ ಅಡ್ಡಿಪಡಿಸಲಾಯಿತು. ಹಿರಿಯ ಸಚಿವರು ಕೂಡ ಅವರನ್ನು ಗೇಲಿಮಾಡಿದರು. ರಾಹುಲ್ ಅವರು ತಮ್ಮ ಮಾತಿನ ನಡುವೆ ಜುಲೈ20ರಂದು ಸಂಸತ್ತಿನ ಕಡೆಗೆ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯ ಸಂದರ್ಭದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ʼಗುಂಡು ಹಾರಿಸಲು ಆದೇಶಿಸಿದ್ದಕ್ಕೆ ಗೃಹಸಚಿವರೇ ಹೊಣೆ ಹೊರಬೇಕು ಎಂದು ಬೊಟ್ಟುಮಾಡಿದರು. ಆಗ ಗೃಹ ಸಚಿವರು ಸದನದಲ್ಲಿ ಇರಲಿಲ್ಲ. ಆದರೆ ಸದನದಲ್ಲಿ ಅವರು ತಮ್ಮ ವಾದವನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಗಂಟೆಗಳು ಕಳೆದ ಬಳಿಕ ಪತ್ರಿಕಾಗೋಷ್ಟಿ ಮಾಡಿ ಎಲ್ಲವನ್ನೂ ವಿವರವಾಗಿ ಹೇಳಿದ್ದರು.
ಒಂದೇ ನಾಣ್ಯದ ಎರಡು ಮುಖ
ಯಾವುದೇ ಸರ್ಕಾರದಲ್ಲಿ ಒಬ್ಬ ಗೃಹ ಸಚಿವರ ರಾಜೀನಾಮೆಯನ್ನು ಕೇಳುವುದು ಅತ್ಯಂತ ಗಂಭೀರ ಸಂಗತಿಯೇ ಆಗಿದೆ. ಅದೂ ಮೋದಿ ಅವರ ಸರ್ಕಾರದಲ್ಲಿ ಇದನ್ನು ಯೋಚಿಸಲು ಕೂಡ ಸಾಧ್ಯವಿಲ್ಲ ಮತ್ತು ಅದು ಅಪಾಯಕಾರಿಯಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ. ಯಾಕೆಂದರೆ ಗುಜರಾತ್‌ನಲ್ಲಿ ಜೊತೆ ಜೊತೆಗೆ ಇದ್ದ ಕಾಲದಿಂದಲೂ ಅಮಿತ್ ಶಾ ಅವರು ನರೇಂದ್ರ ಮೋದಿ ಅವರ ಪಾಲಿನ ʼಆಪರೇಷನ್ ಮ್ಯಾನ್ʼ ಎಂಬ ಖ್ಯಾತಿ ಹೊಂದಿದವರು. ರಾಜಕೀಯ, ವ್ಯವಹಾರ, ಕುಟಿಲ ಅಥವಾ ಮಾರಕ ಅಥವಾ ಯುಕ್ತಾಯುಕ್ತ ಸಂಗತಿಗಳು- ಎಲ್ಲ ವಿಷಯಗಳಲ್ಲಿಯೂ ಮೋದಿ ಅವರ ಪಾಲಿನ ನೆಚ್ಚಿನ ವ್ಯಕ್ತಿ ಎಂದರೆ ಅಮಿತ್ ಶಾ. ಹಾಗಾಗಿ ಗೃಹ ಸಚಿವರು ಮತ್ತು ಪ್ರಧಾನಿ ರಾಜಕೀಯದಲ್ಲಿ ಬೇರ್ಪಡಿಸಲಾಗದ ಜೋಡಿಗಳು. ಮೋದಿ ಅವರ ಭಾರತದಲ್ಲಿ ಒಬ್ಬರಿಲ್ಲದೇ ಇನ್ನೊಬ್ಬರು ಅಪೂರ್ಣ.
ಆರ್‌ಎಸ್‌ಎಸ್ ಪ್ರಚಾರಕ ಅಥವಾ ಪೂರ್ಣಾವಧಿ ಸ್ವಯಂಸೇವಕ ಸ್ಥಾನದಿಂದ ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರ ಸ್ಥಾನಮಾನವು ಬೆಳೆದಂತೆ ಅಮಿತ್ ಶಾ ಅವರ ಪ್ರಭಾವ ಹಾಗೂ ವೃತ್ತಿಜೀವನ ಕೂಡ ಜೊತೆ ಜೊತೆಗೇ ಬೆಳೆಯಿತು ಎನ್ನುವುದು ಸೂಕ್ತ. ಅಮಿತ್‌ಶ ಾಅವರು ಗೃಹ ವ್ಯವಹಾರಗಳ ರಾಜ್ಯ ಸಚಿವರಾದರು. ಸರ್ಕಾರದ ಆ ಚೌಕಟ್ಟಿನಲ್ಲಿ ಅತ್ಯಂತ ಅಪಾಯಕಾರಿ ಎಂದೇ ಭಾವಿಸಲಾಗಿರುವ ನುರಿತ ಅಧಿಕಾರವು ಅವರ ಕೈಯಲ್ಲಿತ್ತು. ಅವರು ಮೋದಿಯವರ ಸಾರ್ವಕಾಲಿಕ ವಿಶ್ವಾಸಾರ್ಹ ವ್ಯಕ್ತಿಯಾಗಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಇಡೀ ಅಹಮದಾಬಾದ್ ತುಂಬ ಅವರ ಸಾಹಸಗಾಥೆಗಳೇ ತುಂಬಿಕೊಂಡಿವೆ.
ತನ್ನಿಚ್ಚೆಗಳ ನುರಿತ ಕಾರ್ಯಸಾಧಕ
ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾದಾಗ ಸಹಜವಾಗಿ ಅವರ ಸ್ಥಾನಮಾನವು ಮತ್ತಷ್ಟು ಎತ್ತರಕ್ಕೆ ಏರಿತು. ಶಾ ಮೊದಲು ಪಕ್ಷದ ಅಧ್ಯಕ್ಷರಾಗಿ ಬಿಜೆಪಿಯ ಅನಭಿಷಿಕ್ತ ದೊರೆಯಾದರು ಮತ್ತು ಪಕ್ಷದ ಪ್ರತಿಯೊಂದು ನಟ್ಟು-ಬೋಲ್ಟುಗಳನ್ನು ಗಟ್ಟಿಗೊಳಿಸಿದರು. ಅದಾದ ಕೆಲಕಾಲದ ಬಳಿಕ ಯಾವತ್ತು ಅವರು ಕೇಂದ್ರದ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡರೋ ಅಂದಿನಿಂದ ಭಾರತದ ಚಕ್ರವರ್ತಿಯ ಎಲ್ಲ ಇಚ್ಛೆಗಳ ನುರಿತ ಕಾರ್ಯಸಾಧಕರಾದರು. ಸಮಯ, ಸಂದರ್ಭ ಮತ್ತು ಅಗತ್ಯಗಳಿಗೆ ತಕ್ಕಂತೆ ಅವರ ಬಳಿಯಿದ್ದ ತಂತ್ರಗಳ ಚೀಲ ಇನ್ನಷ್ಟು ಭಾರವಾಗುತ್ತ ಹೋಯಿತು.
ಕಾರ್ಯಾಲಯ, ನ್ಯಾಯಾಂಗ, ಚುನಾವಣಾ ಆಯೋಗ ಹೀಗೆ ಒಟ್ಟಾರೆ ವ್ಯವಸ್ಥೆಯ ಪ್ರತಿಯೊಂದು ವಿಷಯಗಳ ಮೇಲೂ ಹಿಡಿತವನ್ನು ಬಿಗಿಗೊಳಿಸುವುದು ಮತ್ತು ಸ್ನೇಹಿತರು ಹಾಗೂ ಶತ್ರುಗಳ ಮೇಲೆ ತಮ್ಮ ಅಧಿಕಾರವನ್ನು ಗಟ್ಟಿಗೊಳಿಸುವುದು ಅವರಿಗೆ ಸುಲಭವಾಗುತ್ತ ಹೋಯಿತು. ಅವರ ಈ ಹಾದಿಯಲ್ಲಿ ಅದೃಷ್ಟವು ಖೊಟ್ಟಿಯಾಗದೇ ಹೋದರೆ ಮುಂದಿನ ಐವತ್ತು ವರ್ಷಗಳ ವರೆಗೂ ಆಡಳಿತದ ಚುಕ್ಕಾಣಿ ಹಿಡಿಯುವ ಛಾತಿಯನ್ನು ಈ ಜೋಡಿ ಹೊಂದಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಅಡ್ಡಿ-ಆತಂಕಗಳೆಲ್ಲವೂ ದೂರವಾಗಿ ಮತ್ತು ಶಾಸಕಾಂಗದ ಬಹುಮತ ದಕ್ಕಿಸಿಕೊಳ್ಳುವುದು ಮಕ್ಕಳಾಟಿಕೆಯಾಯಿತು. ಇದರೊಂದಿಗೆ ದೇಶದ ಯಾವುದೇ ಭಾಗದಲ್ಲಿ ಶಾಸನಗಳನ್ನು ಜಾರಿಗೆ ತರುವ ಸಾಮರ್ಥ್ಯ ಶಾ ಅವರ ಕೈವಶವಾಯಿತು. ಬಿಹಾರವನ್ನೂ ಸೇರಿಸಿ, ಹರಿಯಾಣ ಮತ್ತು ಮಹಾರಾಷ್ಟ್ರ, ಹಾಗೂ ಕಾಶ್ಮೀರದಿಂದ ಪಶ್ಚಿಮ ಬಂಗಾಳದವರೆಗೆ ಅವರು ಅದನ್ನು ಸಾಧಿಸಿ ತೋರಿಸಿದರು. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸರ್ಕಾರಗಳು ಈಗಾಗಲೇ ಪತನಗೊಂಡಿದ್ದವು. ರಕ್ಷಣಾ ಪಡೆಗಳನ್ನು ಹೊರತುಪಡಿಸಿ, ರಾಜ್ಯದ ಬಲಪ್ರಯೋಗದ ಅಧಿಕಾರ ಹಾಗೂ ಆಡಳಿತ ಪಕ್ಷವನ್ನು ಸಕ್ರಿಯಗೊಳಿಸುವ ಪ್ರತಿಯೊಂದು ಗುಂಡಿಯ ಮೇಲೂ ಗೃಹ ಸಚಿವರ ಕೈಗಳಿದ್ದವು ಎಂಬುದು ಅಕ್ಷರಶಃ ನಿಜ.
ಮೋದಿ ಮುಖ, ಶಾ ಅನುಷ್ಠಾನಾಧಿಕಾರಿ
ಮೋದಿ ಅವರು ತಮ್ಮ ಕಾರ್ಯತಂತ್ರದ ಗುರಿಗಳ ವಿಚಾರದಲ್ಲಿ ಮಾತು ಮತ್ತು ಕಲ್ಪನೆಯ ವ್ಯಕ್ತಿ. ಅದೇ ಶಾ ಅವರನ್ನು ಕೆಲಸವನ್ನು ಶಾಂತವಾಗಿ, ಅಂದವಾಗಿ, ಬಹಿರಂಗವಾಗಿ ಬೆದರಿಸದೆ-ಹೆದರಿಸದೆ ಕಾರ್ಯರೂಪಕ್ಕೆ ತರುವ ತಂತ್ರಗಾರಿಕೆಯ ಆಕ್ಷನ್ ಹೀರೋ ಎಂದು ಕರೆಯಬಹುದು. ಸಂಸತ್ತಿನಲ್ಲಿ ಅವರ ಭಾಷಣಗಳು ಸರ್ವೇಸಾಮಾನ್ಯವಾಗಿ ಮತ್ತು ಅಂದ-ಚಂದವಿಲ್ಲದೆ ಇರುತ್ತವೆ. ಆದರೆ ಅವರು ಭಾಷಣ ಸ್ಪರ್ಧೆಗಳನ್ನು ಗೆಲ್ಲಲು ಅಥವಾ ಚರ್ಚಾ ಕೌಶಲ್ಯವನ್ನು ಪ್ರದರ್ಶಿಸಲು ಅಲ್ಲಿಲ್ಲ, ಅವರು ಒಬ್ಬ ಜಾರಿಗೆ ತರುವ ಅಧಿಕಾರಿಯಾಗಿ ಅಲ್ಲಿದ್ದಾರೆ.
ಒಂದು ಸಂದರ್ಭದಲ್ಲಿ ಸಂಸತ್ತಿನ ಭಾಷಣದ ವೇಳೆ ಸಣ್ಣ ಹಿಂದಿ ನಿಂದನೆಯನ್ನೂ ಹೊರಹಾಕಿದ್ದರು. ಅದು ಕರ್ತವ್ಯದಲ್ಲಿದ್ದ ಬೀದಿ ಹೋರಾಟಗಾರನ ಸ್ವರೂಪದ್ದಾಗಿತ್ತು. ಸಹಜವಾಗಿ ಅವರಂತಹ ವ್ಯಕ್ತಿಯು ಪ್ರತಿಭಟನಾ ಸ್ಥಳದಲ್ಲಿ ಜೆನ್ ಝಡ್ ಹುಡುಗರ ನಿಂದನೆಗಳ ಬಗ್ಗೆ ಗರಿಷ್ಠ ಮಟ್ಟದಲ್ಲಿ ಅಸಮಾಧಾನಕ್ಕೆ ಒಳಗಾಗುವುದಿಲ್ಲ ಅಥವಾ 'ಸಂಸ್ಕಾರ' ನಷ್ಟವಾಗಿ ಹೋಯಿತು ಎಂದು ಗೋಳಾಡುವುದಿಲ್ಲ.
ಹಾಗಾಗಿ, ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ಎದುರಿಸಿದ ಮತ್ತು ನಂತರ ಅವರ ರಾಜೀನಾಮೆಗೆ ಆಗ್ರಹಿಸಿದ ವ್ಯಕ್ತಿ ಇವರೇ. ಆದರೆ ವ್ಯವಸ್ಥೆಯಲ್ಲಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ, ಪ್ರಧಾನಿ ಮೋದಿ ಸೇರಿದಂತೆ ದೊಡ್ಡವರ ವಿರುದ್ಧ ನಿಂದನೆಗಳನ್ನು ಹರಿಯಬಿಡುವುದೇ ಅತ್ಯಂತ ಗಂಭೀರ ಅಪರಾಧವಾಗಿರುವ ಹೊತ್ತಿನಲ್ಲಿ ಶಾಂತಿಯುತ ಯುವ ಪ್ರತಿಭಟನಾಕಾರರ ಮೇಲೆ ಗೃಹ ಸಚಿವರು ಅತಿಯಾದ ಪೊಲೀಸ್ ಹಿಂಸಾಚಾರವನ್ನು ಸಂಘಟಿಸಿದ್ದರೇ?
ಸಿ.ಜೆ.ಪಿ ಪ್ರತಿಭಟನೆಯಲ್ಲಿ ಶಾ ಗುಂಡು ಹಾರಿಸಲು ಆದೇಶಿಸಿದ್ದರೇ?
ಪೆಲೆಟ್ ಗುಂಡುಗಳ ಬಳಕೆ ಸಂಭವಿಸಿದ ತಕ್ಷಣವೇ ಅವರು ಅದನ್ನು ಅನುಮೋದಿಸಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಬಹಳ ಸಮಯದವರೆಗೆ ಪೊಲೀಸರು ಇದನ್ನು ನಿರಾಕರಿಸಿದ್ದರು, ಆದರೆ ಸುಳ್ಳುಗಳನ್ನು ಹೆಚ್ಚು ದಿನ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ನಿಯಮಗಳು ಪೆಲೆಟ್ಗಳ ಹಾರಾಟವನ್ನು ಅನುಮೋದಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ, ಆದರೂ ಕಾಶ್ಮೀರವನ್ನು ಹೊರತುಪಡಿಸಿ ಹಿಂದೆಂದೂ ಇದು ಸಂಭವಿಸಿರಲಿಲ್ಲ ಮತ್ತು ಆಗಲೂ ಅದು ಸರ್ಕಾರವನ್ನು ಬೆಚ್ಚಿಬೀಳಿಸಿತ್ತು. ಆ ಸಮಯದಲ್ಲಿ ನ್ಯಾಯಾಧೀಶರು ತಮ್ಮ ಅಭಿಪ್ರಾಯಗಳನ್ನು ಬಹಿರಂಗಪಡಿಸಿರಲಿಲ್ಲ.
ದೆಹಲಿ ಪ್ರತಿಭಟನಾಕಾರರ ವಿರುದ್ಧ ಸಜೀವ ಗುಂಡುಗಳನ್ನು ಬಳಸಲಾಗಿದೆಯೇ ಎಂಬುದು ಮತ್ತೊಂದು ಪ್ರಶ್ನೆ. ಜಂತರ್ ಮಂತರ್ನಲ್ಲಿದ್ದ ರಾಂಚಿಯ ಯುವತಿಯೊಬ್ಬರು ಇದನ್ನು ದೃಢಪಡಿಸಿದ್ದರು. ಗುಂಡೊಂದು ಆಕೆಯ ಕಿವಿಯನ್ನು ತಾಮ್ರದಂತೆ ಸ್ಪರ್ಶಿಸಿ ಹೋಗಿತ್ತು. ಸರ್ಕಾರಿ ಆಸ್ಪತ್ರೆಯೊಂದು ಆಕೆಯ ಹೇಳಿಕೆಯನ್ನು ದೃಢಪಡಿಸಿದೆ ಎಂದು ವರದಿಯಾಗಿದೆ. (ಅದೇ ಸಮಯದಲ್ಲಿ ಬಿಹಾರದಲ್ಲಿ ಪ್ರತಿಭಟನಾಕಾರರ ವಿರುದ್ಧ ಸಜೀವ ಗುಂಡುಗಳನ್ನು ಬಳಸಲಾಗಿದೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿದೆ.)
ಆದರೆ ಶಾಂತಿಯುತ ಪ್ರತಿಭಟನಾಕಾರರ ಮೇಲಿನ ಹಿಂಸಾಚಾರದ ವಿಷಯವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆಯೇ ಎಂಬ ಪ್ರಶ್ನೆ ನಮಗೆ ಮುಖ್ಯ. ಪ್ರಶ್ನೆ ಪತ್ರಿಕೆ ಸೋರಿಕೆ ಒಂದು ಗಂಭೀರ ರೋಗ ಎಂದು ವ್ಯಾಪಕವಾಗಿ ಒಪ್ಪಿಕೊಂಡಿರುವ ಕಾರಣ ಮತ್ತು ಮೊದಲನೆಯದಾಗಿ ಕಾಕ್ರೋಚ್ಗಳು ಪ್ರತಿಭಟನೆ ನಡೆಸಲು ದಾರಿ ಮಾಡಿಕೊಟ್ಟಿದ್ದರಿಂದ, ಪರೀಕ್ಷಾ ಜಗತ್ತಿನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಠಿಣವಾದ ಹೊಸ ಕಾನೂನಿನ ಅಗತ್ಯವಿರುವ ಬಗ್ಗೆಯೂ ಯೋಚಿಸೋಣ.
ವ್ಯವಸ್ಥಿತ ದಮನ- ಸರ್ಕಾರದ ಮೌನ
ಇಂತಹ ಸೂಕ್ಷ್ಮ ಸಂದರ್ಭದಲ್ಲಿಯೂ ಕೂಡ ಪ್ರಧಾನಿ ಮತ್ತು ಗೃಹ ಸಚಿವರು ಇಬ್ಬರೂ ಸಂಸತ್ತಿನಲ್ಲಿ ಗೈರಾಗಿದ್ದರು ಮತ್ತು ಪ್ರಧಾನಿ ಕಾರ್ಯಾಲಯದ ಕಿರಿಯ ಸಚಿವರಾದ ಸೌಮ್ಯ ಸ್ವಭಾವದ ಜಿತೇಂದ್ರ ಸಿಂಗ್ ಅವರು ಕಾರ್ಯಕ್ರಮವನ್ನು ನಿಭಾಯಿಸಿದರು ಎಂಬುದು ಗಮನಾರ್ಹ. ನಿಯಮಗಳ ಪ್ರಕಾರ, ಗುಂಡು ಹಾರಿಸಲು ಗೃಹ ಮಂತ್ರಿಯಲ್ಲದೆ ಆ ಪ್ರದೇಶದ ಮ್ಯಾಜಿಸ್ಟ್ರೇಟ್ ಆದೇಶಿಸಬಹುದು ಎಂಬುದು ಊಹಿಸಬಹುದಾದ ಸಂಗತಿಯಾಗಿದೆ.
ಆದರೆ, ವಿದ್ಯಾರ್ಥಿಗಳು ಮತ್ತು ಯುವಕರು ಹಮ್ಮಿಕೊಂಡ ಜುಲೈ 20ರ 'ಮೋರ್ಚಾ'ವನ್ನು ಎದುರಿಸಲು ಅನುಸರಿಸಲಾದ ವ್ಯವಸ್ಥಿತ ಕಾರ್ಯತಂತ್ರ, ಹಂತ-ಹಂತವಾದ ಯೋಜನೆ ಮತ್ತು ಸಂಘಟನೆಯ ಬಗ್ಗೆ ಸಂಸತ್ತಿನಲ್ಲಿ ವಿವರಣೆ ನೀಡಲು ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರ ಬಳಿ ಯಾವುದೇ ಮಾಹಿತಿ ಇರಲಿಲ್ಲ.
ದೆಹಲಿ ಪೊಲೀಸ್ ಆಡಳಿತದಲ್ಲಿ ರಾತ್ರೋರಾತ್ರಿ ಬದಲಾವಣೆಯಾಯಿತು. ಯುವಕರು ಮತ್ತು ವಿದ್ಯಾರ್ಥಿಗಳ ಮೇಲೆ ಪೊಲೀಸ್ ದಮನದ ಮುನ್ನಾ ದಿನ ಪೊಲೀಸ್ ಆಯುಕ್ತರನ್ನು ಕಿತ್ತುಹಾಕಲಾಯಿತು. ಅವರ ಸ್ಥಾನದಲ್ಲಿ ʼತಮ್ಮವರನ್ನೇʼ ತಂದು ಕೂರಿಸಲಾಯಿತು. ದೆಹಲಿಯ ಪೊಲೀಸ್ ಆಯುಕ್ತರು ಯಾವತ್ತೂ ಕೇಂದ್ರ ಗೃಹ ಸಚಿವರಿಗೆ ವರದಿ ಮಾಡುತ್ತಾರೆ ಎಂಬುದನ್ನು ಇಲ್ಲಿ ಗಮನಿಸಬೇಕು.
ಅಮಿತ್ ಶಾ ಬಳಿಯೇ ಯಾಕಿದೆ ಹೊಣೆಗಾರಿಕೆ?
ಇದು ಜುಲೈ 20 ರಂದು ಶಾಂತಿಯುತ ಪ್ರತಿಭಟನಾಕಾರರ ಮೇಲಿನ ಹಿಂಸಾಚಾರಕ್ಕೆ ಭಾರತದ ಗೃಹ ಸಚಿವರೇ ಹೊಣೆ ಹೊರುವಂತೆ ಮಾಡುತ್ತದೆ. ಈ ಹಿಂಸಾಚಾರವು ಎಚ್ಚರಿಕೆಯಿಂದ ಯೋಜಿಸಿದಂತೆ ಕಂಡುಬಂದಿದೆ. ಇದು ಕಾಸ್ಮಿಕ್ ಯೋಜನೆಯ ಭಾಗವಾಗಿರುವಂತೆ ಕಂಡುಬಂದಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮತ್ತು ನಾಗರಿಕರ ನಡುವಿನ ಹಲವು ಸೂಕ್ಷ್ಮ ವಿಷಯಗಳಲ್ಲಿ ಕಾಣಿಸಿಕೊಳ್ಳುವಂತೆ ಇದನ್ನು ಅರಿಯುವಲ್ಲಿ ನ್ಯಾಯಾಂಗವು ಬಹಳ ದೂರವಿರುವಂತೆ ಕಾಣುತ್ತದೆ. ಇದು ಸಾರಾಂಶಕ್ಕಿಂತ ತಾಂತ್ರಿಕ ವಿಷಯಗಳಿಗೇ ಹೆಚ್ಚು ಒತ್ತು ನೀಡುತ್ತದೆ. ನಿಜವಾಗಿಯೂ ಇದು ಸರ್ಕಾರದ ಅತಿಕ್ರಮಣದ ವಿರುದ್ಧ ಜನರ ಹಕ್ಕುಗಳನ್ನು ಕಾಯುವ ರಕ್ಷಾಕವಚವೇ? ಬಹುಶಃ, ನಾವೀಗ ನಮ್ಮನ್ನೇ ವಿಮರ್ಶೆ ಮಾಡಿಕೊಳ್ಳುವ ಸಮಯ ಬಂದಿದೆ.
ಆದರೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮೂರ್ಖರಲ್ಲ. ಗೃಹ ಸಚಿವರು ರಾಜೀನಾಮೆ ನೀಡಬೇಕು ಎನ್ನುವ ರಾಹುಲ್ ಗಾಂಧಿ ಅವರ ಬೇಡಿಕೆಯ ವಿಷಯದಲ್ಲಿ ಬೆಂಬಲಕ್ಕೆ ನಿಲ್ಲುವಲ್ಲಿ ಅವರು ಯಾವ ಹಿಂಜರಿಕೆಯೂ ತೋರಲಿಲ್ಲ. ಆದರೆ ಮೋದಿ ಯುಗದ ರಾಜಕೀಯ ತಂತ್ರಗಳು ಅವರಿಗೆ ತಿಳಿದಿಲ್ಲದೇ ಇರಬಹುದು. ಈ ಕಾಲದಲ್ಲಿ ಯಾವುದೇ ಸಚಿವರ ರಾಜೀನಾಮೆಯನ್ನು ಕೇಳುವುದೇ ದೊಡ್ಡ ವಿಷಯ. ಇನ್ನು ಗೃಹ ಸಚಿವರು ಪದತ್ಯಾಗ ಮಾಡಬೇಕು ಎಂದು ಕೇಳುವುದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ದೇಶದ್ರೋಹಕ್ಕೆ ಸಮಾನವಾಗಿ ಕಾಣಬಹುದು. ಹಾಗಾಗಿ, ಎಚ್ಚರದಿಂದಿರಿ.
ಪ್ರಧಾನ್ ನಿರ್ಗಮನ - ಅಪರೂಪದ ಪೂರ್ವ ನಿದರ್ಶನ
ಸಾರ್ವಜನಿಕ ಆಂದೋಲನದ ಒತ್ತಡಕ್ಕೆ ಮಣಿದು ನರೇಂದ್ರ ಮೋದಿ ಸರ್ಕಾರದ ಸಚಿವರಾದ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ರಾಜೀನಾಮೆ ಕೊಟ್ಟು ನಿರ್ಗಮಿಸಿದರು. ಆದರೆ ಸಂಸತ್ತಿನಲ್ಲಿ ಭರಪೂರ ಬಹುಮತ ಹೊಂದಿರುವ ಕೇಂದ್ರದ ಬಿಜೆಪಿ ಆಡಳಿತಕ್ಕೆ ಇದು ಅನಿರೀಕ್ಷಿತ ಮತ್ತು ಅಪರೂಪದ ಘಟನೆ. ಇದು ನಿಶ್ಚಿತವಾಗಿಯೂ ಒಂದು ಅಪರೂಪದ ಸಂಗತಿ. ಬಿಜೆಪಿ-ಆರ್ಎಸ್ಎಸ್ನ ಸಿದ್ಧಾಂತ ಮತ್ತು ರಾಜಕೀಯ ದೃಷ್ಟಿಕೋನ ಹಾಗೂ ಅವರ ಪ್ರಾಥಮಿಕ ಆಲೋಚನಾ ವಿಧಾನದ ಬೆಳಕಿನಲ್ಲಿ ಇದನ್ನು ಈಗಲೂ ನಂಬುವುದು ಕಷ್ಟ.
ಬಿಜೆಪಿ-ಆರ್ಎಸ್ಎಸ್ ಸಂಸದೀಯ ಪ್ರಜಾಪ್ರಭುತ್ವವನ್ನು ಹೆಸರಿಗೆ ಮಾತ್ರವೇ ಒಪ್ಪಿಕೊಳ್ಳುತ್ತದೆ. ಆದರೆ, ಹಿಂದುತ್ವದ ಇವು ಹಿಂದುತ್ವ ಅಥವಾ ಹಿಂದೂ-ಸರ್ವಶ್ರೇಷ್ಠ ರಾಷ್ಟ್ರದ ಸಿದ್ಧಾಂತವನ್ನು ಬಲವಾಗಿ ನಂಬುವ ಮತ್ತು ಪ್ರಚಾರ ಮಾಡುವ ಸಂಘಟನೆಗಳಾಗಿವೆ. ಇದು ಪ್ರಜಾಪ್ರಭುತ್ವಕ್ಕಿಂತ ತೀರಾ ಭಿನ್ನವಾದ ಸಂಗತಿ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಒತ್ತಡಕ್ಕೆ ಮಣಿದು ಸಚಿವರು ರಾಜೀನಾಮೆ ನೀಡುವುದು, ಸರ್ಕಾರವು ಜನರಿಗೆ ಹೊಣೆಗಾರರಾಗಿರಬೇಕು ಎಂಬ ಸಿದ್ಧಾಂತವನ್ನು ಆಧರಿಸಿದೆ.
ಆದರೆ ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರದ ಉನ್ನತ ಸಚಿವ ರಾಜನಾಥ್ ಸಿಂಗ್ ಅವರು 2015 ರಲ್ಲಿಯೇ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ಹೇಳೀದ್ದರು; ಕಾಂಗ್ರೆಸ್ ಸಚಿವರಿಗಿಂತ ಭಿನ್ನವಾಗಿ ಬಿಜೆಪಿ ನೇತ್ತ್ವದ ಎನ್ಡಿಎ ಸರ್ಕಾರದ ಸಚಿವರು ರಾಜೀನಾಮೆ ನೀಡುವುದಿಲ್ಲ.
ವಾಜಪೇಯಿ ಅವರಿಗಿಂತ ಭಿನ್ನವಾಗಿ, ಮೋದಿ ಅವರು ಬಿಜೆಪಿ ನೇತೃತ್ವದ ಎನ್ಡಿಎಗೆ ಸಂಸತ್ತಿನಲ್ಲಿ ಭರ್ಜರಿ ಬಹುಮತವನ್ನು ಗಳಿಸಿಕೊಟ್ಟಿದ್ದರು. ಇದರಿಂದಾಗಿ ಹಿಂದುತ್ವದ ಸಿದ್ಧಾಂತದ ಆಧಾರದಲ್ಲಿ ಸರ್ಕಾರ ನಡೆಸಲು ಅವರಿಗೆ ಯಾವುದೇ ಅಡ್ಡಿ-ಆತಂಕಗಳು ಎದುರಾಗಲಿಲ್ಲ.
ಸಿಜೆಪಿಗೆ ಬೇಕಿದೆ ಎಚ್ಚರದ ನಡೆ
ಮೋದಿ ಸರ್ಕಾರದ ಶಿಕ್ಷಣ ಸಚಿವರನ್ನು ಬಲಿಪಶು ಮಾಡುವಂತೆ ಒತ್ತಾಯಿಸಿದ ಹೊಸ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಇತ್ತೀಚಿನ ವಿದ್ಯಾರ್ಥಿ-ಯುವ ಪ್ರತಿಭಟನೆಯು ಬಿಜೆಪಿ ಆಡಳಿತದಲ್ಲಿ ಅಡಕವಾಗಿರುವ ಈ ಮೂಲಭೂತ ಲಕ್ಷಣವನ್ನು ಪರಿಗಣಿಸಬೇಕಾಗುತ್ತದೆ. ಪ್ರಧಾನ್ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಡಲಾಯಿತು, ಆದರೆ ಸಂಸತ್ ಭವನದಲ್ಲಿ ಸಾರ್ವಜನಿಕವಾಗಿ ಹಾರ ಹಾಕಿ ಸ್ವಾಗತಿಸಲಾಯಿತು. ಬಿಜೆಪಿ ಸಂಸದರು ಅವರನ್ನು ಹಾಡಿ ಹೊಗಳಿ ಕೊಂಡಾಡಿದರು ಕೂಡ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿ ದೀರ್ಘವಾದ ಪತ್ರಿಕಾ ಹೇಳಿಕೆ ನೀಡಿದರು. ಹಾಗಾಗಿ ಆ ವ್ಯಕ್ತಿ ಯಾವುದೇ ಕಳಂಕದೊಂದಿಗೆ ನಿರ್ಗಮಿಸುತ್ತಿದ್ದಾರೆ ಎಂದು ಅನಿಸಲೇ ಇಲ್ಲ. ಅವರೇನು ವಿಫಲ ಸಚಿವರಂತೆ ಕಾಣುತ್ತಿರಲಿಲ್ಲ, ಬದಲಿಗೆ ಅವರ ಅಧಿಕಾರಾವಧಿಯಲ್ಲಿ ಹತ್ತಾರು ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು, ಪ್ರಶ್ನಾರ್ಹ ಶಿಕ್ಷಣ ನೀತಿ ಮತ್ತು ಕುಗ್ಗಿದ ಶಿಕ್ಷಣ ಬಜೆಟ್ಗಳು ಕಂಡಿದ್ದರೂ ಸಹ ಅವರು ನಾಯಕನಂತೆ ಓಡಾಡುತ್ತಿದ್ದರು.
ಸರ್ಕಾರದ ಪರವಾಗಿ ಸಂಧಾನ ನಡೆಸಿದ ಹಿರಿಯ ಸಚಿವ ಮತ್ತು ಮಾಜಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನೀಡಿದ ಮೌಖಿಕ ಭರವಸೆಗಳನ್ನು ಉಲ್ಲಂಘಿಸಿ ಕಾರ್ಯಕರ್ತರ ವಿರುದ್ಧ ಪೊಲೀಸ್ ವಿಚಾರಣೆ ನಡೆಸಿದ ನಂತರ ಸಿಜೆಪಿ ಮತ್ತು ಅದರ ಯುವ ಬೆಂಬಲಿಗರು ದೇಶಾದ್ಯಂತ ತಮ್ಮ ಪ್ರತಿಭಟನೆಯನ್ನು ಮತ್ತೆ ಆರಂಭಿಸಲು ಪ್ರಯತ್ನಿಸಿದರೆ ಅವರಿಗೆ ಮುಂಬರುವ ದಿನಗಳು ಕಠಿಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ವಾಸ್ತವಿಕ ಲೆಕ್ಕಾಚಾರ
ಬಿಜೆಪಿ-ಆರ್ಎಸ್ಎಸ್ ದೇಶದ ರಾಜಕೀಯ, ಚುನಾವಣೆ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಸಂಪೂರ್ಣ ಅಥವಾ ಒಟ್ಟಾರೆ ನಿಯಂತ್ರಣ ಹೊಂದುವುದರ ಮೇಲೆ ನಂಬಿಕೆ ಇಟ್ಟಿವೆ. ಆದ್ದರಿಂದ ಅವರು ತಮ್ಮ ಸಚಿವರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ, ಏಕೆಂದರೆ ಅದು ಅದರ ಸಂಪೂರ್ಣ ನಿಯಂತ್ರಣದ ಸೋಗಿಗೆ ಧಕ್ಕೆ ತರುತ್ತದೆ. ದೊಡ್ಡ ಮಟ್ಟದ ಸಾರ್ವಜನಿಕ ಪ್ರತಿಭಟನೆಯ ಒತ್ತಡಕ್ಕೆ ಮಣಿದು ಶಿಕ್ಷಣ ಸಚಿವರು ತಮ್ಮ ರಾಜೀನಾಮೆ ನೀಡಬೇಕಾಗಿ ಬಂದಿದ್ದರೂ ವಿಫಲರಾದ ಆ ಸಚಿವರನ್ನು ಆಡಳಿತಾರೂಢ ವ್ಯವಸ್ಥೆಯು ಆಕಾಶಕ್ಕೇರಿಸಿ ಕೊಂಡಾಡುತ್ತಿದೆ. ಇದು ಜವಾಬ್ದಾರಿಯ ವಿಷಯದಲ್ಲಿ ಅದರ ಮೂಲ ಮನೋಭಾವ ಏನು ಎಂಬುದನ್ನು ಬಹಿರಂಗಪಡಿಸುತ್ತದೆ.
ಶಿಕ್ಷಣ ಸಚಿವರ ರಾಜೀನಾಮೆಯ ಬೆನ್ನಲ್ಲೇ ಕಾಂಗ್ರೆಸ್ ನಾಯಕತ್ವವು ಗೃಹ ಸಚಿವರ ರಾಜೀನಾಮೆಗೆ ಹಕ್ಕೊತ್ತಾಯ ಮಂಡಿಸಿರುವುದರಿಂದ, ರಾಜಕೀಯ ಚಲನಶೀಲತೆಯಲ್ಲಿ ಹೊಸ ತಿರುವು ಎದುರಾಗುವಂತೆ ತೋರುತ್ತಿದೆ. ದೇಶದಲ್ಲಿ ಆತಂಕದ ಛಾಯೆಯನ್ನು ದೂರಮಾಡುವಲ್ಲಿ ಕಾಕ್ರೋಚ್ಪಕ್ಷದ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಸರ್ಕಾರದ ವಿರೋಧಿಗಳು ವಾಸ್ತವಿಕ ಲೆಕ್ಕಾಚಾರದ ಮೇಲೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ರಾಜಕೀಯ ಅಸಮಾಧಾನವನ್ನು ಬಳಸಿಕೊಳ್ಳುವುದು ಒಂದು ಕಲೆ, ಹಾಗೆಯೇ ನೈಪುಣ್ಯ ಕೂಡ; ಆದರೆ ಈ ಕಲೆ ಇನ್ನೂ ನಶಿಸಿಹೋಗಿಲ್ಲ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


