
ರಾಜ್ಯದಲ್ಲಿ ಸುದೀರ್ಘ ಅವಧಿಯ ಅಧಿಕಾರ ನಡೆಸಿದ ಮೈಲುಗಲ್ಲನ್ನು ಸಾಧಿಸಿರುವ ಮಹಾರಾಷ್ಟ್ರದ ಸಿಎಂ ಫಡ್ನವಿಸ್ ಕೇಂದ್ರ ರಾಜಕೀಯದ ಕಡೆಗೆ ಆಸೆಗಣ್ಣಿನಿಂದ ನೋಡುತ್ತಿರುವುದು ದಿಟ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇತ್ತೀಚೆಗೆ ಹೊಸ ರಾಜಕೀಯ ಮೈಲುಗಲ್ಲನ್ನು ಸಾಧಿಸಿದ್ದಾರೆ. ಇದರಿಂದಾಗಿ ಸುದೀರ್ಘ ಅವಧಿ ಪೂರೈಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹಿರಿಯ ಹಾಗೂ ಪ್ರಭಾವಿ ರಾಜಕೀಯ ಮುತ್ಸದ್ಧಿ ಶರದ್ ಪವಾರ್ ಅವರನ್ನು ಹಿಂದಿಕ್ಕಿದ್ದಾರೆ.
ಪವಾರ್ ಅವರ ನಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ-ಎಸ್‌ಪಿ) ಫಡ್ನವಿಸ್ ಅವರ ಅಧೀನದಲ್ಲಿ ಬಿಜೆಪಿ ಸೆಳೆತಕ್ಕೆ ಒಳಗಾಗಿದೆ ಎಂಬ ವರದಿ ಇರುವ ಹೊತ್ತಿನಲ್ಲಿಯೇ ಈ ಸಾಧನೆಯನ್ನು ಫಡ್ನವಿಸ್ ಮಾಡಿದ್ದಾರೆ. ಇನ್ನೊಂದು ಕಡೆ ಫಡ್ನವಿಸ್ ಅವರೇ ಕೇಂದ್ರ ರಾಜಕೀಯಕ್ಕೆ ಜಿಗಿಯುವ ಸಾಧ್ಯತೆಯಿದೆ ಎಂಬ ವದಂತಿ ದಟ್ಟವಾಗಿರುವ ಹಿನ್ನೆಲೆಯಲ್ಲಿ ಈ ಹೋಲಿಕೆ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
1978 ರಿಂದ 1995ರ ಅವಧಿಯ ನಡುವೆ ನಾಲ್ಕು ವಿಭಿನ್ನ ಕಾಲಾವಧಿಯಲ್ಲಿ ಪವಾರ್ ಅವರು 6ವರ್ಷ ಆರು ತಿಂಗಳು ಅಧಿಕಾರ ನಡೆಸಿದ್ದರು. ಆ ದಾಖಲೆಯನ್ನು ಮುರಿದಿರುವ ಫಡ್ನವಿಸ್ ಅವರು, 2014ರಿಂದ ಎರಡು ವಿಭಿನ್ನ ಅವಧಿಯಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆದರೆ ಇಬ್ಬರೂ ತುಳಿದ ರಾಜಕೀಯದ ಹಾದಿಗಳು ಭಿನ್ನ ಭಿನ್ನ. ಪವಾರ್ ಅವರದ್ದು ಉದಾರವಾದಿ ಪ್ರಜಾಸತ್ತಾತ್ಮಕ ಪರಂಪರೆ. ಫಡ್ನವಿಸ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳು. ಆರ್.ಎಸ್.ಎಸ್. ಸಿದ್ಧಾಂತವು ಉದಾರವಾದ ಹಾಗೂ ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತವಾದ ಕಲ್ಪನೆಯಾಗಿದೆ
ಪವಾರ್ ಅವರು ಕಬ್ಬು ಕೃಷಿಗೆ ಹೆಸರುವಾಸಿಯಾದ ಪಶ್ಚಿಮ ಮಹಾರಾಷ್ಟ್ರಕ್ಕೆ ಸೇರಿದವರು. ಫಡ್ನವಿಸ್ ಅವರು ವಿದರ್ಭ ವಲಯಕ್ಕೆ ಸೇರಿದವರು. ಈ ವಿದರ್ಭ ವಲಯವು ರೈತರ ಆತ್ಮಹತ್ಯೆಗೆ ಕುಖ್ಯಾತಿಯನ್ನು ಪಡೆದಿದೆ.
ಶರದ್ ಪವಾರ್ ಅವರು ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಭಾರೀ ಪ್ರಭಾವವನ್ನು ಹೊಂದಿದ್ದಾರೆ. ಆದರೆ ಫಡ್ನವಿಸ್ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೂ ಮೊದಲು ಮಹಾರಾಷ್ಟ್ರದ ಮೂರನೇ ದೊಡ್ಡ ನಗರ ಎಂಬ ಖ್ಯಾತಿ ಪಡೆದಿರುವ ನಾಗಪುರ ವಲಯದಲ್ಲಿ ರಾಜಕೀಯ ಕಸುಬುದಾರಿಕೆಯನ್ನು ಕರಗತ ಮಾಡಿಕೊಂಡವರು.
1978ರಲ್ಲಿ ಕಾಂಗ್ರೆಸ್ (ಅರಸ್) ವಿರುದ್ಧ ಬಂಡಾಯವೆದ್ದು ಪ್ರೋಗ್ರೆಸಿವ್ ಡೆಮಾಕ್ರಟಿಕ್ ಫ್ರಂಟ್ ಸರಕಾರದ ಮುಖ್ಯಸ್ಥರಾಗಲು ಸ್ವತಃ ಹೆಣೆದ ರಾಜಕೀಯ ತಂತ್ರಗಳ ಮೂಲಕ ಶರದ್ ಪವಾರ್ ಅತ್ಯಂತ ಕಿರಿಯ ವಯಸ್ಸಿಗೆ ಸಿಎಂ ಪೀಠಕ್ಕೇರಿದರು. ಫಡ್ನವಿಸ್ ಅವರ ಅನಿರೀಕ್ಷಿತ ಅಧಿಕಾರಾವರೋಹಣವು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಪ್ತ ಅಮಿತ್ ಶಾ ಅವರು ರೂಪಿಸಿದ ಯೋಜನೆಯಾಗಿತ್ತು. ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಅವರೊಂದಿಗಿನ ಪಕ್ಷದೊಳಗಿನ ಅಸಮಾಧಾನಕರ ಬಾಂಧವ್ಯದ ಕಾರಣಕ್ಕಾಗಿ, ಗಡ್ಕರಿ ಸಿಎಂ ಆಗುವುದು ಮೋದಿ ಹಾಗೂ ಶಾಗೆ ಇಷ್ಟವಿರಲಿಲ್ಲ.
ಇನ್ನೊಂದು ಮಾತುಗಳಲ್ಲಿ ಹೇಳುವುದಾದರೆ, ಫಡ್ನವಿಸ್ ಅವರು ಬಿಜೆಪಿಯ ಆಂತರಿಕ ರಾಜಕೀಯದ ಅದೃಷ್ಟದ ಫಲಾನುಭವಿಯಾದವರು. ಪಕ್ಷಕ್ಕೆ ಬೇರೆ ಆಯ್ಕೆಯೇ ಇಲ್ಲದಂತಹ ಸ್ಥಿತಿಯಲ್ಲಿ ಅನಿವಾರ್ಯ ನಾಯಕರಾಗಿ ಬೆಳೆದಿದ್ದರಿಂದ ಸಿಎಂ ಆಗಲಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ, ಪವಾರ್ ಅವರು ಮಹಾರಾಷ್ಟ್ರದ ಸಾಂಪ್ರದಾಯಿಕ ಆಡಳಿತಗಾರ ಮರಾಠ ಜಾತಿಗೆ ಸೇರಿದವರು. ಫಡ್ನವಿಸ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. 90ರ ದಶಕದಲ್ಲಿ ಶಿವಸೇನೆಯ ಮನೋಹರ್ ಜೋಶಿ ಅವರನ್ನು ಹೊರತುಪಡಿಸಿ, ಅಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯದ ವ್ಯಕ್ತಿಯೊಬ್ಬರು ಸಿಎಂ ಹುದ್ದೆಗೆ ಆಯ್ಕೆಯಾಗುವುದು ತೀರಾ ಅಸಂಭವ ಎಂದೇ ಪರಿಗಣಿಸಲಾಗಿತ್ತು.
ಕಿರಿಯ ವಯಸ್ಸಿನ ಸಿಎಂ ಪವಾರ್
ಆದರೆ, ಶರದ್ ಪವಾರ್ ಅವರ ಒಂದು ದಾಖಲೆ ಮಾತ್ರ ಯಾರಿಂದಲೂ ಮುರಿಯಲ್ಪಡದೆ ಹಾಗೆಯೇ ಉಳಿದಿದೆ—ಮತ್ತು ಬಹುಶಃ ಮುಂದೆಂದೂ ಮುರಿಯದೇ ಉಳಿಯಬಹುದು—ಅದೇನೆಂದರೆ, ಕೇವಲ 38ನೇ ವಯಸ್ಸಿಗೇ ಮುಖ್ಯಮಂತ್ರಿ ಪಟ್ಟವನ್ನು ಏರಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆ.
2014ರಲ್ಲಿ ಫಡ್ನವಿಸ್ ಮೊದಲ ಬಾರಿಗೆ ಸಿಎಂ ಆದಾಗ, 44ರ ಹರೆಯದಲ್ಲಿದ್ದ ಅವರೂ ಬಹಳ ಚಿಕ್ಕ ವಯಸ್ಸಿನವರೇ ಆಗಿದ್ದರೂ, ಪವಾರ್ ಅವರಷ್ಟು ಕಿರಿಯರಾಗಿರಲಿಲ್ಲ ಎಂಬುದು ಬೇರೇ ಮಾತು.
ಇಬ್ಬರ ರಾಜಕೀಯ ಜೀವನವನ್ನು ಪ್ರತ್ಯೇಕಿಸುವ ಮತ್ತೊಂದು ವ್ಯತ್ಯಾಸವೂ ಇದೆ. 2022 ಮತ್ತು 2024ರ ನಡುವೆ ಫಡ್ನವಿಸ್ ವಹಿಸಬೇಕಾಗಿ ಬಂದ ಸುಮಾರು ಎರಡೂವರೆ ವರ್ಷಗಳ ಉಪಮುಖ್ಯಮಂತ್ರಿ ಹುದ್ದೆ. ಅಂದು ಕಾಂಗ್ರೆಸ್ ಮತ್ತು ಅಂದಿನ ಅಖಂಡ ಎನ್ಸಿಪಿ ಜೊತೆಗೂಡಿ ರಚಿಸಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರದ ಸಿಎಂ ಆಗಿದ್ದ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಬಿಜೆಪಿ ಜೊತೆ ಕೈಜೋಡಿಸಿದ್ದಕ್ಕಾಗಿ, ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ಸಿಎಂ ಮಾಡಲು ಬಿಜೆಪಿ ನಾಯಕತ್ವ ನಿರ್ಧರಿಸಿದ ಕಾಲಘಟ್ಟವದು.
ಶರದ್ ಪವಾರ್ ಮಾತ್ರ ಎಂದಿಗೂ ಉಪ-ಮುಖ್ಯಮಂತ್ರಿಯಾದವರಲ್ಲ.
ಪವಾರ್ ಅವರು ಸುಮಾರು ಆರು ದಶಕಗಳ ಕಾಲ ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಎರಡೂ ಮಟ್ಟದಲ್ಲೂ ತಮ್ಮದೇ ಆದ ಪ್ರಭಾವ ಹೊಂದಿದ್ದ ರಾಜಕಾರಣಿಯಾಗಿ ಕಾಲದ ಪರೀಕ್ಷೆಯನ್ನು ಕೂದ ಗೆದ್ದು ನಿಂತವರು.
ಮಹಾರಾಷ್ಟ್ರ ರಾಜಕೀಯದ ಈ ಹಿರಿಯ ಮುತ್ಸದ್ದಿಯ ಸುದೀರ್ಘ ರಾಜಕೀಯ ಪಯಣದ ದಾಖಲೆಯನ್ನು ಸರಿದೂಗಿಸಲು ಫಡ್ನವಿಸ್ ಅವರು ಇನ್ನೂ ಬಹುದೂರ ಸಾಗಬೇಕಾಗಿದೆ.
ಆದರೂ, ಫಡ್ನವಿಸ್ ಅವರು ಅಧಿಕಾರದ ಮೇಲೆ ಬಿಗಿ ಹಿಡಿತ ಸಾಧಿಸಲು, ತಮ್ಮ ಹಠ ಮತ್ತು ಚಾಣಾಕ್ಷ ರಾಜಕೀಯ ಕೌಶಲ್ಯಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.
ಪಕ್ಷದ ನಾಯಕರಿಗೆ ಕಡಿವಾಣ
ಹೀಗೆ ಮಾಡುವ ಪ್ರಕ್ರಿಯೆಯಲ್ಲಿ, ಅವರು ತಮ್ಮದೇ ಪಕ್ಷದ ಸಹೋದ್ಯೋಗಿಗಳಾದ ಏಕನಾಥ್ ಖಡ್ಸೆ, ಪಂಕಜಾ ಮುಂಡೆ, ಸುಧೀರ್ ಮುಂಗಂಟಿವಾರ್ ಮತ್ತು ವಿನೋದ್ ತಾವಡೆ ಅವರಂತಹ ಹಲವು ಪ್ರಭಾವಿ ನಾಯಕರ ರೆಕ್ಕೆಗಳನ್ನು ಕೂಡ ಕತ್ತರಿಸಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ.
ಕಳೆದ ಹನ್ನೆರಡು ವರ್ಷಗಳ ಅವಧಿಯಲ್ಲಿ—ಅದರಲ್ಲೂ 2014-19 ಮತ್ತು 2024 ರಿಂದ ಇಲ್ಲಿಯವರೆಗಿನ ಎರಡು ಅವಧಿಗಳಲ್ಲಿ ಸಿಎಂ ಆಗಿರುವ— ಫಡ್ನವಿಸ್ ಅವರು ರಾಜಕೀಯದಲ್ಲಿ ಗಟ್ಟಿಯಾಗಿ ತಳವೂರಲು ಬೇಕಾದ ಎಲ್ಲ ಕಲೆಗಳನ್ನು ಸಿದ್ಧಿಸಿಕೊಂಡ ಯಶಸ್ವೀ ನಾಯಕ ಹಾಗೂ ತಮ್ಮ ಗುರಿಯನ್ನು ಸಾಧಿಸಲು ಯಾವ ಹಂತಕ್ಕೂ ಇಳಿಯಲು ಸಿದ್ಧವಿರುವ ಪಕ್ಕಾ ತಂತ್ರಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಆದರೆ ಅವರ ಈ ಪಯಣವು ಸಂಪೂರ್ಣವಾಗಿ ಒಂದೇ ಸಮನಾಗಿ ಇರಲಿಲ್ಲ. ವಸಂತರಾವ್ ನಾಯಕ್ (1963-75) ಅವರ ನಂತರ ಮಹಾರಾಷ್ಟ್ರದ ಸಿಎಂ ಆಗಿ ಐದು ವರ್ಷಗಳ ಪೂರ್ಣಾವಧಿ ಪೂರೈಸಿದ ಎರಡನೇ ಸಿಎಂ ಎನಿಸಿಕೊಂಡ ಇವರ (ಬಿಜೆಪಿ-ಶಿವಸೇನೆ ಮೈತ್ರಿಕೂಟದ) ಮೊದಲ ಐದು ವರ್ಷಗಳ ಅಧಿಕಾರಾವಧಿಯಲ್ಲಿ, ನಾಗರಿಕ ಹಾಗೂ ಸೌಮ್ಯ ಸ್ವಭಾವದ ಫಡ್ನವಿಸ್ ಅವರು ರಾಜಕೀಯಕ್ಕಿಂತ ಹೆಚ್ಚಾಗಿ ಆಡಳಿತದ ಮೇಲೆಯೇ ಗಮನ ಹರಿಸಿದ್ದರು ಎಂಬುದರಲ್ಲಿ ಅನುಮಾನವಿಲ್ಲ.
ಆದಾಗ್ಯೂ, ಪರಿಸ್ಥಿತಿಗಳು ಅವರನ್ನು ತಮ್ಮ ಹಾದಿ ಬದಲಾಯಿಸುವಂತೆ ಮಾಡಿದವು. ಸ್ವಪಕ್ಷೀಯ ಹಾಗೂ ಅಂತರ-ಪಕ್ಷೀಯ ರಾಜಕೀಯದಲ್ಲಿ ಉಳಿದುಕೊಳ್ಳಲು ಅಗತ್ಯವೆಂದು ಸ್ವತಃ ಫಡ್ನವಿಸ್ ಹಾಗೂ ಬಿಜೆಪಿಯ ಹಲವರು ಭಾವಿಸುವ 'ಹಠಮಾರಿ ತಂತ್ರಗಾರಿಕೆ'ಗಾಗಿ, ಅವರು ತಮ್ಮ ಸೌಮ್ಯ ಸ್ವಭಾವವನ್ನು ಪಕ್ಕಕ್ಕಿಟ್ಟರು.
ವಿರೋಧಪಕ್ಷಗಳ ಹೆಡೆಮುರಿ ಕಟ್ಟಿದರು
ಅವರು ಯಾವುದೇ ಬಿಜೆಪಿ ನಾಯಕನಂತೆ ಅತ್ಯಂತ ಸೂಕ್ತವಾದ ಹಾದಿಯನ್ನೇ ಆಯ್ದುಕೊಂಡರು—ಅದೇನೆಂದರೆ, ತೀವ್ರ ಹಿಂದುತ್ವದ ನಿಲುವನ್ನು ತಳೆದು ವಿರೋಧ ಪಕ್ಷಗಳನ್ನೇ ಹೆಡೆಮುರಿ ಕಟ್ಟುವುದು. ಅವರ ಮೊದಲ ಗುರಿ ಶಿವಸೇನೆಯಾಗಿತ್ತು. 2019ರ ವಿಧಾನಸಭಾ ಚುನಾವಣೆಯ ಗೆಲುವಿನ ನಂತರ ಸಿಎಂ ಹುದ್ದೆಯನ್ನು ಹಂಚಿಕೊಳ್ಳಲು ಬಿಜೆಪಿ ನಿರಾಕರಿಸಿದ್ದರಿಂದ, ಬಿಜೆಪಿಯ 25 ವರ್ಷಗಳ ಮಿತ್ರಪಕ್ಷವಾಗಿದ್ದ ಶಿವಸೇನೆಯು ಮೈತ್ರಿಯಿಂದ ಹೊರಬಂದಿತ್ತು.
ಆ ಬಳಿಕದ ಅಭೂತಪೂರ್ವ ಕಾರ್ಯಾಚರಣೆಯಲ್ಲಿ, ಅವರು ಏಕನಾಥ್ ಶಿಂಧೆ ಮತ್ತು ಶಿವಸೇನೆಯ 56 ಶಾಸಕರ ಪೈಕಿ 40 ಶಾಸಕರನ್ನು ತಮ್ಮತ್ತ ಸೆಳೆದು ಪಕ್ಷವನ್ನು ಇಬ್ಭಾಗವಾಗಿ ಮಾಡುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಯೋಜಿತ ಸಂಚಿನ ಫಲವಾಗಿ ಉದ್ಧವ್ ಠಾಕ್ರೆ ನೇತೃತ್ವದ ಮೂಲ ಶಿವಸೇನೆಯಿಂದ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆ ಎರಡನ್ನೂ ಕಸಿದುಕೊಳ್ಳಲು ಯಶಸ್ವಿಯಾದರು.
ಈ ಆಯೋಜಿತ ಪಕ್ಷಾಂತರದ ಸಮಯದಲ್ಲಿ ಬೃಹತ್ ಪ್ರಮಾಣದ ಹಣದ ವಹಿವಾಟು ನಡೆಯಿತು. ಪ್ರತಿ ಶಾಸಕನಿಗೂ ತಲಾ 50 ಕೋಟಿ ರೂ. ನೀಡಲಾಯಿತು ಎಂಬ ಆರೋಪಗಳೂ ಕೇಳಿಬಂದವು.
ಇದಾದನಂತರ ಮಹಾರಾಷ್ಟ್ರದಲ್ಲಷ್ಟೇ ಅಲ್ಲದೆ, ಇತರ ರಾಜ್ಯಗಳಲ್ಲೂ ವಿರೋಧ ಪಕ್ಷಗಳನ್ನು ಒಡೆಯಲು ಬಿಜೆಪಿಗೆ ಒಂದು ಮಾದರಿ ದೊರೆಯಿತು.
ಶಿವಸೇನೆಯನ್ನು ಈ ಮಟ್ಟಿಗೆ ಮಟ್ಟಹಾಕಿದ್ದರಿಂದಾಗಿ ಜೂನ್ 2022 ರಲ್ಲಿ ಎಂವಿಎ ಸರ್ಕಾರ ಪತನಗೊಳ್ಳಲು ಕಾರಣವಾಯಿತಾದರೂ, ಅದರಿಂದ ಫಡ್ನವಿಸ್ ಅವರಿಗೆ ಸಿಎಂ ಹುದ್ದೆ ಸಿಗಲಿಲ್ಲ. ಬದಲಾಗಿ, ಅವರು ತಮ್ಮ ಕಹಿ ಅನುಭವವನ್ನು ನುಂಗಿಕೊಂಡು ಏಕನಾಥ್ ಶಿಂಧೆ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಟ್ಟುಕೊಂಡರು.
ನೋವು ನುಂಗಿ ಕುಳಿತರು
2019ರಲ್ಲಿ ಶಿವಸೇನೆ ಮೈತ್ರಿಯಿಂದ ಹೊರಬಂದಾಗ ಫಡ್ನವಿಸ್ ಅವರು ಹೇಳಿದ್ದ "ನಾನು ಮರಳಿ ಬರುತ್ತೇನೆ" ಎಂಬ ಪ್ರಸಿದ್ಧ ಮಾತು ನಿಜವಾಯಿತಾದರೂ, ದೆಹಲಿ ಹೈಕಮಾಂಡ್ ಅವರನ್ನು ಶಿಂಧೆ ಅವರ ಕೈಕೆಳಗೆ ಉಪಮುಖ್ಯಮಂತ್ರಿಯಾಗಲು ಆದೇಶಿಸಿತು. ಅದು ಅವರಿಗೆ ಒಂದು ರೀತಿ ಅವಮಾನವಾಗಿದ್ದರೂ ಆ ನೋವನ್ನವರು ನುಂಗಿಕೊಂಡರು.
ಈ ಬೆಳವಣಿಗೆ ಬೇರೆಯದೇ ಆದ ವ್ಯಾಖ್ಯಾನವನ್ನು ನೀಡಿತು. ಪಕ್ಷದ ಹೊಸ 'ಚಾಣಕ್ಯ'ನಾಗಿ ಫಡ್ನವಿಸ್ ಅವರ ಬೆಳವಣಿಗೆಯನ್ನು ಕಂಡು ದೆಹಲಿ ಹೈಕಮಾಂಡ್—ಅದರಲ್ಲೂ ವಿಶೇಷವಾಗಿ ಅಮಿತ್ ಶಾ ಎಚ್ಚರಿಕೆ ವಹಿಸಲು ಪ್ರಾರಂಭಿಸಿದ್ದಾರೆ ಎಂಬ ಚರ್ಚೆಗೆ ದಾರಿಮಾಡಿಕೊಟ್ಟಿತು. ಏಕೆಂದರೆ 'ಚಾಣಕ್ಯ' ಎಂಬ ಬಿರುದು ಅಲ್ಲಿಯವರೆಗೆ ಶಾ ಅವರ ಏಕಸ್ವಾಮ್ಯ ಸೊತ್ತಾಗಿತ್ತು.
2024ರ ಲೋಕಸಭಾ ಚುನಾವಣೆಯು ಫಡ್ನವಿಸ್ ಅವರ ಏರುತ್ತಿದ್ದ ಗ್ರಾಫ್ಗೆ ಮತ್ತೊಂದು ಹಿನ್ನಡೆಯಾಯಿತು; ಅಲ್ಲಿ ಬಿಜೆಪಿ 48 ಕ್ಷೇತ್ರಗಳ ಪೈಕಿ ಕೇವಲ 9 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಆದರೆ ಆರು ತಿಂಗಳ ನಂತರ, 288 ಸದಸ್ಯರ ಬಲವಿರುವ ವಿಧಾನಸಭಾ ಚುನಾವಣೆಯಲ್ಲಿ ಫಡ್ನವಿಸ್ ಅವರು ಬಿಜೆಪಿಗೆ 132 ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಅಭೂತಪೂರ್ವ ಪುನಃಶ್ಚೇತನಕ್ಕೆ ಕಾರಣರಾದರು. ಇದು ಅವರ ವರ್ಚಸ್ಸನ್ನು ಎಷ್ಟು ಎತ್ತರಕ್ಕೆ ಕೊಂಡೊಯ್ಯಿತೆಂದರೆ, ದೆಹಲಿ ನಾಯಕತ್ವವು ಅವರನ್ನು ಮತ್ತೆ ಸಿಎಂ ಪೀಠದಲ್ಲಿ ಕುಳ್ಳಿರಿಸಿ, ಶಿಂಧೆ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ತಳ್ಳಬೇಕಾಯಿತು.
ಇದು ಶಿಂಧೆ ಅವರ ಅಸಮಾಧಾನಕ್ಕೆ ಕಾರಣವಾಯಿತು, ಏಕೆಂದರೆ ಚುನಾವಣೆಗೆ ಮೊದಲು ತಾನು ಹೊಂದಿದ್ದ ಸಿಎಂ ಹುದ್ದೆಯಿಂದ ಇದು ಅವರಿಗೆ ಆದ ಹಿಂಬಡ್ತಿಯಾಗಿತ್ತು. ಆ ನಂತರದ ದಿನಗಳಲ್ಲಿ ಇಬ್ಬರ ನಡುವೆ ಮೇಲುಗೈ ಸಾಧಿಸಲು ಆರಂಭವಾದ ಶೀತಲ ಸಮರವು ಇಂದಿಗೂ ಮುಂದುವರಿದಿದೆ.
ಶಿಂಧೆ ಎಂಬ ಮಗ್ಗುಲ ಮುಳ್ಳು
ಫಡ್ನವಿಸ್ ಅವರ ಸವಾಲನ್ನು ಮತ್ತಷ್ಟು ಹೆಚ್ಚಿಸಿರುವುದು ಶಿಂಧೆ ಅವರು ಅಮಿತ್ ಶಾ ಅವರೊಂದಿಗೆ ಹೊಂದಿದ್ದಾರೆನ್ನಲಾದ ನಿಕಟ ಬಾಂಧವ್ಯ. ಶಿಂಧೆ ಅವರು ಅನೇಕ ಬಾರಿ ಪ್ರಮುಖ ಸಂಪುಟ ಸಭೆಗಳನ್ನೇ ಬಿಟ್ಟು ಪದೇ ಪದೇ ದೆಹಲಿಗೆ ಪ್ರಯಾಣ ಬೆಳೆಸುವುದು, ಫಡ್ನವಿಸ್ ಅವರನ್ನು ಹತೋಟಿಯಲ್ಲಿಡಲು ಶಾ ಅವರು ಶಿಂಧೆ ಅವರನ್ನು ಒಂದು 'ಪ್ರತಿಬಂಧಕ ಶಕ್ತಿ'ಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನಕ್ಕೆ ಇನ್ನಷ್ಟು ನೀರೆರೆದಿದೆ. ಬಿಜೆಪಿಯ ಈ ಆಂತರಿಕ ರಾಜಕೀಯ ಪರಿಸ್ಥಿತಿಯನ್ನು ಶಿಂಧೆ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದಂತೂ ದಿಟ.
ಶಿಂಧೆ ಅವರನ್ನು ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಫಡ್ನವಿಸ್ ಸಾಧ್ಯವಿರುವ ಎಲ್ಲಾ ತಂತ್ರಗಳನ್ನು ಪ್ರಯೋಗಿಸಿದರು. ಮೊದಲಿಗೆ ಎನ್ಸಿಪಿಯಲ್ಲಿಯೇ ಒಡಕುಂಟುಮಾಡಿ, ಅಜಿತ್ ಪವಾರ್ ನೇತೃತ್ವದ ದೊಡ್ಡ ಗುಂಪು ಮೈತ್ರಿಕೂಟಕ್ಕೆ ಸೇರ್ಪಡೆಯಾಗುವಂತೆ ನೋಡಿಕೊಂಡರು. ಇದು ಖಂಡಿತವಾಗಿಯೂ ಶಿಂಧೆ ಅವರಲ್ಲಿ ಆತಂಕ ಮೂಡಿಸಿತು, ಯಾಕೆಂದರೆ ಈಗ ಬಿಜೆಪಿಗೆ ಶಿಂಧೆ ಅವರ ಬೆಂಬಲವಿಲ್ಲದೆಯೂ ಸರ್ಕಾರ ನಡೆಸುವ ಸಾಮರ್ಥ್ಯ ಬಂದಿತ್ತು.
ಆದರೆ ಶಿಂಧೆ ತಮ್ಮ ರಾಜಕೀಯ ಶಕ್ತಿಯನ್ನು ಉಳಿಸಿಕೊಳ್ಳಲು ದೆಹಲಿಯ ಸಂಪರ್ಕಗಳನ್ನು ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಲೇ ಬಂದಿದ್ದಾರೆ.
ಸಮುದಾಯದ ನಾಯಕ ಮನೋಜ್ ಜಾರಂಗೆ ಪಾಟೀಲ್ ನಡೆಸಿದ ಸರಣಿ ಮರಾಠ ಮೀಸಲಾತಿ ಹೋರಾಟಗಳ ಹಿಂದೆ ಶಿಂಧೆ ಅವರ ಕೃಪಾಶೀರ್ವಾದವಿತ್ತು ಎಂಬ ಮಾತೂ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಬ್ರಾಹ್ಮಣನಾಗಿ ತಮಗಿರುವ ರಾಜಕೀಯ ಮಿತಿಗಳ ಅರಿವಿದ್ದ ಫಡ್ನವಿಸ್, ತಮ್ಮನ್ನೇ ಗುರಿಯಾಗಿಸಿಕೊಂಡು ಜಾರಂಗೆ ನಡೆಸಿದ ದಾಳಿ ಹಾಗೂ ಎದ್ದ ದಂಗೆಯನ್ನು ಅತ್ಯಂತ ತಾಳ್ಮೆ ಮತ್ತು ಸೌಮ್ಯತೆಯಿಂದ ನಿಭಾಯಿಸಿದರು.
ಈ ನಡುವೆ, ಆ ಮೀಸಲಾತಿ ಹೋರಾಟವು ಸದ್ಯಕ್ಕೆ ಸುಪ್ತಾವಸ್ಥೆಗೆ ಜಾರಿದಂತೆ ಕಾಣುತ್ತಿದೆ.
ಅಂದಿನಿಂದ ಫಡ್ನವಿಸ್ ಅವರು ಮತ್ತಷ್ಟು ವಿರೋಧ ಪಕ್ಷದ ನಾಯಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಹಲವಾರು ಸುತ್ತಿನ ಗೆಲುವು ತಂದುಕೊಡುವ ಮೂಲಕ ತಮ್ಮ ರಾಜಕೀಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿದ್ದಾರೆ.
ಹಿಂದುತ್ವದ ವರ್ಚಸ್ಸು ಹೆಚ್ಚಿಸುವ ಪ್ರಯತ್ನ
ಅಲ್ಲದೆ, 'ಸಕಲ್ ಹಿಂದೂ ಸಮಾಜ್' ನಂತಹ ತೀವ್ರಗಾಮಿ ಸಂಘಟನೆಗಳು ಹಾಗೂ ತಮ್ಮದೇ ಸಂಪುಟದ ಸಚಿವ ನಿತೇಶ್ ರಾಣೆ ಅವರಂತಹ ನಾಯಕರಿಗೆ ಮುಕ್ತ ಅವಕಾಶ ನೀಡುವ ಮೂಲಕ ತಮ್ಮ ಹಿಂದುತ್ವದ ವರ್ಚಸ್ಸನ್ನು ಗಟ್ಟಿಗೊಳಿಸಲು ಮತ್ತು ನಾಗ್ಪುರದ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿರುವ ತಮ್ಮ ಹಿಂದುತ್ವದ ಗುರುಗಳನ್ನು ಮೆಚ್ಚಿಸಲೂ ಸೂಕ್ತ ಹೆಜ್ಜೆಗಳನ್ನು ಇಟ್ಟಿದ್ದಾರೆ.
ಅವರ ಸರ್ಕಾರವು 'ಮಹಾರಾಷ್ಟ್ರ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕ'ದಂತಹ ಹಿಂದುತ್ವ ಪರವಾದ ಶಾಸನಗಳನ್ನು ತಂದಿತು. ಈ ಕಾಯ್ದೆಯು ಇತರ ಧರ್ಮಕ್ಕೆ ಮತಾಂತರಗೊಳ್ಳಲು ಇಚ್ಛಿಸುವ ವ್ಯಕ್ತಿಗಳು ಸಕ್ಷಮ ಪ್ರಾಧಿಕಾರಕ್ಕೆ 60 ದಿನಗಳ ಮುಂಚಿತವಾಗಿ ನೋಟಿಸ್ ನೀಡುವುದನ್ನು ಕಡ್ಡಾಯಗೊಳಿಸಿತು.
ಫಡ್ನವಿಸ್ ಅವರು ತಮ್ಮ ವಿರೋಧಿಗಳಿಗೆ ಸವಾಲು ಹಾಕುವ ಸಂದರ್ಭದಲ್ಲಿ ಅತ್ಯಂತ ಕೆಳಮಟ್ಟದ ಭಾಷೆಯನ್ನು ಬಳಸಲೂ ಹಿಂಜರಿಯಲಿಲ್ಲ. ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಅವರು ಬಳಸಿದ "ಭಾಡೆ ಕೆ ತಟ್ಟೆ" (ಬಾಡಿಗೆಗೆ ಸಿಗುವ ಜನರು) ಮತ್ತು "ದೇಖ್ ಲೂಂಗಾ" (ನೋಡಿಕೊಳ್ಳುತ್ತೇನೆ) ಎಂಬ ಅಸಂಸದೀಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾದವು.
ಆದರೆ ಫಡ್ನವಿಸ್ ಅವರು ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದನ್ನು ಅಹಂಕಾರವೆನ್ನಿ, ಅಥವಾ ಇನ್ನೇನೇ ಹೆಸರಿನಿಂದ ಕರೆಯಿರಿ; ಶಾಸಕರಾಗಿ ತಮ್ಮ ಮಾಹಿತಿಪೂರ್ಣ ಭಾಷಣಗಳಿಂದ 'ಸುಸಂಸ್ಕೃತ ಮತ್ತು ಅಧ್ಯಯನಶೀಲ ರಾಜಕಾರಣಿ' ಎಂದು ಹೆಸರುವಾಸಿಯಾಗಿದ್ದ ಫಡ್ನವಿಸ್, ಈಗ ಅಸಭ್ಯ ಮಾತುಗಳ ನಾಯಕನಾಗಿ ರೂಪಾಂತರಗೊಂಡಿರುವುದು ನಿಜಕ್ಕೂ ಅವರ ವೈಯಕ್ತಿಕ ಗತಿಯಲ್ಲಿ ಕಂಡುಬಂದ ಅದಃಪತನ.
ಬಿಜೆಪಿಯ ಇಂದಿನ ಮಾದರಿಯ ರಾಜಕೀಯದಲ್ಲಿ ಉಳಿಯಲು ಮತ್ತು ಬೆಳೆಯಲು ಅವರು ಈ ಅಸಭ್ಯತೆಯ ಶೈಲಿಯನ್ನು ಪ್ರಜ್ಞಾಪೂರ್ವಕವಾಗಿಯೇ ಒಂದು 'ಅಗತ್ಯ ತರಬೇತಿ'ಯಂತೆ ಮೈಗೂಡಿಸಿಕೊಂಡಂತೆ ಕಾಣುತ್ತದೆ.
ಭವಿಷ್ಯದ ನಾಯಕತ್ವದತ್ತ ದೃಷ್ಟಿ
ತಮ್ಮ ಚಾಣಾಕ್ಷ ಮತ್ತು ನಿರ್ದಾಕ್ಷಿಣ್ಯ ನಡೆಗಳಿಂದ ಮಹಾರಾಷ್ಟ್ರದ ರಾಜಕೀಯದ ಮೇಲೆ ಹಿಡಿತ ಸಾಧಿಸುತ್ತಲೇ, ಫಡ್ನವಿಸ್ ಅವರು ಬಿಜೆಪಿಯ ಉನ್ನತ ಮಟ್ಟದ ಅಧಿಕಾರಕ್ಕೇರುವ ಆಸೆಯನ್ನು ಸದ್ದಿಲ್ಲದೇ ಸಾಕಿ ಸಲಹುತ್ತಿದ್ದಾರೆ. ಬಾಲ್ಯದಿಂದಲೂ ಆರ್ಎಸ್ಎಸ್ ಜೊತೆಗಿರುವ ನಿಕಟ ಬಾಂಧವ್ಯ, ಬಲವಾದ ಶೈಕ್ಷಣಿಕ ಮತ್ತು ಬೌದ್ಧಿಕ ಹಿನ್ನೆಲೆ, ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುವ ಕ್ಷಮತೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಅವರ ಯುವ ವಯಸ್ಸು—ಇವೆಲ್ಲವೂ ಅವರನ್ನು ಬಿಜೆಪಿಯ ಭವಿಷ್ಯದ ಯೋಜನೆಗಳಲ್ಲಿ ಗಮನಿಸಬೇಕಾದ ಪ್ರಮುಖ ನಾಯಕನನ್ನಾಗಿ ಮಾಡಿವೆ.
ಹಿಂದೊಮ್ಮೆ ಆರ್ಎಸ್ಎಸ್ ತನ್ನ ಮತ್ತೊಬ್ಬ ಸಮರ್ಥ ಸ್ವಯಂಸೇವಕ ನಿತಿನ್ ಗಡ್ಕರಿ ಅವರನ್ನು ಬಿಜೆಪಿಯ ಅತ್ಯುನ್ನತ ಸ್ಥಾನಕ್ಕೆ ಏರಿಸಲು ವಿಫಲವಾಗಿತ್ತು. 2012 ರಲ್ಲಿ ಕೇಳಿಬಂದ ಆರ್ಥಿಕ ಹಗರಣದ ಆರೋಪದಿಂದಾಗಿ ಗಡ್ಕರಿ ದೆಹಲಿಯಿಂದ ನಾಗ್ಪುರಕ್ಕೆ ಮರಳಿ ಬರಬೇಕಾಯಿತು. ಆದರೆ ಈ ಬಾರಿ ಸಂಘವು ಫಡ್ನವಿಸ್ ಅವರನ್ನು ದೆಹಲಿಯ ಅತ್ಯುನ್ನತ ಹುದ್ದೆಗೆ (ಪ್ರಧಾನಿ ಹುದ್ದೆಗೆ) ತಳ್ಳಲು ತೀವ್ರ ಆಸಕ್ತಿ ಹೊಂದಿದೆ ಎಂದು ಹಲವರು ನಂಬಿದ್ದಾರೆ.
ಆದರೆ, ಅವರನ್ನು ದೆಹಲಿಗೆ ಸ್ಥಳಾಂತರಿಸುವ ಸಾಧ್ಯತೆಯ ಕುರಿತು ಇತ್ತೀಚೆಗೆ ನಡೆಯುತ್ತಿರುವ ಚರ್ಚೆಗಳು, ಸ್ವತಃ ಫಡ್ನವಿಸ್ ಅವರು ತಲುಪಲು ಬಯಸುವ ಸ್ಥಾನಕ್ಕಿಂತ ಹೆಚ್ಚಾಗಿ ದೆಹಲಿ ಹೈಕಮಾಂಡ್ನ ಸ್ವಂತ ಯೋಜನೆಗಳಿಗೆ ಪೂರಕವಾಗಿರುವಂತೆ ಕಾಣುತ್ತಿದೆ. ಇನ್ನು ಶರದ್ ಪವಾರ್ ಅವರ ಎನ್ಸಿಪಿ ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿದ್ದು, ಮುಂಬೈ ಮತ್ತು ದೆಹಲಿಯ ಸಂಪುಟಗಳಲ್ಲಿ ಸ್ಥಾನ ಪಡೆದುಕೊಳ್ಳಲಿದೆ ಎಂಬ ಇತ್ತೀಚಿನ ಊಹಾಪೋಹಗಳು ಫಡ್ನವಿಸ್ ಅವರಿಗೆ ಉತ್ಸಾಹಕ್ಕಿಂತ ಹೆಚ್ಚಾಗಿ ಕಳವಳ ತರುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಶಿಂಧೆ ಅವರ ಆ ಆಟದ ಭಾಗವಾಗಿ, ಶಿವಸೇನೆಯ (ಯುಬಿಟಿ) 6 ಸಂಸದರು ಶಿಂಧೆ ಬಣವನ್ನು ಸೇರಿದ್ದಾರೆ. ಇದನ್ನು ಶಿಂಧೆ ತಮ್ಮ ಪಕ್ಷದ 'ಆಪರೇಷನ್ ಟೈಗರ್' ಎಂದು ಬಣ್ಣಿಸಿದ್ದು, ಲೋಕಸಭೆಯಲ್ಲಿ ಶಿಂಧೆ ಶಿವಸೇನೆಯ ಬಲವನ್ನು 12 ಕ್ಕೆ ಏರಿಸಿದೆ. ಇದು ರಾಜ್ಯದಲ್ಲೂ ಹಾಗೂ ಕೇಂದ್ರದಲ್ಲೂ ಶಿಂಧೆ ಬಣಕ್ಕೆ ಹೆಚ್ಚಿನ ಚೌಕಾಶಿ ಶಕ್ತಿಯನ್ನು ತಂದುಕೊಟ್ಟಿದೆ.
ಈಗ ಎಲ್ಲ ಲೆಕ್ಕಾಚಾರಗಳು ಫಲಿಸಿ, ಶರದ್ ಪವಾರ್ ಅವರ ಎನ್ಸಿಪಿ ಎನ್ಡಿಎ ಕೂಟವನ್ನು ಸೇರಿದರೆ, ಅದು ರಾಜ್ಯ ಸಂಪುಟವನ್ನೂ ಸೇರಿ ಪ್ರಸ್ತುತ ಫಡ್ನವಿಸ್ ಅವರ ಬಳಿಯೇ ಇರುವ ಹಣಕಾಸಿನಂತಹ ಪ್ರಮುಖ ಖಾತೆಗಳ ಮೇಲೆ ಕಣ್ಣಿಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಕೇವಲ ಕೆಲವು ದಿನಗಳ ಹಿಂದಷ್ಟೇ "ಹೊಸದಾಗಿ ಬರುವವರಿಗೆ ಬಿಜೆಪಿಯ ಬಾಗಿಲು ಮುಚ್ಚಿದೆ" ಎಂದು ಘೋಷಿಸಿದ್ದ ಫಡ್ನವಿಸ್ ಅವರಿಗೆ ಈ ಬೆಳವಣಿಗೆಗಳು ಖಂಡಿತವಾಗಿಯೂ ನಿರಾಶೆ ಮೂಡಿಸಿವೆ.
ರೆಕ್ಕೆ ಕತ್ತರಿಸುವ ಪ್ರಯತ್ನ
ಸುಮಾರು 15 ವರ್ಷಗಳ ಹಿಂದೆ ಗಡ್ಕರಿ ಪ್ರಯೋಗ ವಿಫಲವಾದ ನಂತರ, ಕೇಂದ್ರದಲ್ಲಿ ಹೆಚ್ಚಿನ ಜವಾಬ್ದಾರಿಗಾಗಿ ಫಡ್ನವಿಸ್ ಅವರನ್ನು ಆರ್ಎಸ್ಎಸ್ನ ಮುಂದಿನ ಆಯ್ಕೆ ಎಂದು ದೆಹಲಿ ನಾಯಕತ್ವ ನೋಡುತ್ತಿದೆ. ಆದರೆ, ಫಡ್ನವಿಸ್ ಅವರನ್ನು ದೆಹಲಿಗೆ ಕರೆಸಿಕೊಂಡು, ಮಹಾರಾಷ್ಟ್ರದ ರಾಜಕೀಯ ಅಂಗಳದಲ್ಲಿ ತಮ್ಮ ಹೊಸ ಮಿಂಚಿಗಾಗಿ ಕಾಯುತ್ತಿರುವ ಶಿಂಧೆ ಅವರಿಗೆ ಆ ಸ್ಥಾನ ನೀಡುವ ಮೂಲಕ ದೆಹಲಿ ನಾಯಕತ್ವವು ಫಡ್ನವಿಸ್ ಅವರ ರೆಕ್ಕೆಗಳನ್ನು ಮತ್ತೆ ಕತ್ತರಿಸಲು ಪ್ರಯತ್ನಿಸಬಹುದು.
ಮೋದಿ ಮತ್ತು ಶಾ ಅವರ ನೇತೃತ್ವದ ಬಿಜೆಪಿ, 2029ರಲ್ಲಿ ಪ್ರಧಾನಿ ಹುದ್ದೆಗೆ ಫಡ್ನವಿಸ್ ಅವರನ್ನು ತಳ್ಳುವ ಆರ್ಎಸ್ಎಸ್ನ ಯಾವುದೇ ನಡೆಗೆ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲದೇ ಇರುವುದರಿಂದ, ಬಿಜೆಪಿಯಲ್ಲಿ ಫಡ್ನವಿಸ್ ಅವರ ಉಳಿವು ಇನ್ನಷ್ಟು ಕಷ್ಟಕರವಾದರೆ ಅಚ್ಚರಿಯೇನೂ ಇಲ್ಲ.
ಪಕ್ಷದ ಆಂತರಿಕ ರಾಜಕೀಯದಲ್ಲಿ ಸಿಲುಕಿರುವ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಯ ಈ ಸಂಕೀರ್ಣ ಜಾಲವನ್ನು ಅವರು ಹೇಗೆ ಸರಿಪಡಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕಂತೂ, ದೆಹಲಿಯ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕಿಂತ ಮಹಾರಾಷ್ಟ್ರದಲ್ಲೇ ಮುಖ್ಯಮಂತ್ರಿಯಾಗಿ ಉಳಿಯುವುದು ಅವರ ಆದ್ಯತೆ.
ಅವರು ಒಮ್ಮೆ "ನಾನು 2029 ರವರೆಗೆ ರಾಜ್ಯದಲ್ಲೇ ಇರುತ್ತೇನೆ" ಎಂದು ಹೇಳಿದ್ದರು. ಅದರರ್ಥ ಅವರು 2029 ರಲ್ಲಿ ದೆಹಲಿಯ ಮುಂದಿನ ಹಂತಕ್ಕೆ ಬಡ್ತಿ ಪಡೆಯಲು ಯೋಜಿಸುತ್ತಿದ್ದಾರೋ ಅಥವಾ ಕನಿಷ್ಠ 2029 ರವರೆಗಾದರೂ ರಾಜ್ಯವನ್ನು ಬಿಟ್ಟು ಹೋಗಲು ಬಯಸುವುದಿಲ್ಲವೋ ಎಂಬುದು ಸ್ವತಃ ಅವರಿಗಷ್ಟೇ ಗೊತ್ತು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


