
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ನೇಮಕಾತಿ ವಿಚಾರದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಕ್ಕೆ ಬದಲಾಗಿ ಮಿಲಿಟರಿ ಆಧುನೀಕರಣ, ಕಾರ್ಯನಿರ್ವಹಣೆ ಮೇಲ್ವಿಚಾರಣೆ, ಸಿಬ್ಬಂದಿ ವೆಚ್ಚ ಸರಿದೂಗಿಸಲು ರಕ್ಷಣಾ ಬಜೆಟ್ ಮಿತಿ ಹೆಚ್ಚಿಸಬೇಕಿದೆ.
ವಿವಾದಾತ್ಮಕ ಅಗ್ನಿಪಥ ಯೋಜನೆಯ ಬಗ್ಗೆ ಗಂಭೀರ ಮರುಚಿಂತನೆ ನಡೆಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಕೇಂದ್ರ ಸರ್ಕಾರವಿದೆ.
ಅಗ್ನಿಪಥ ಯೋಜನೆ ಜಾರಿಗೆ ಬಂದಿದ್ದು 2022ರಲ್ಲಿ. ಅಲ್ಲಿಂದೀಚೆಗೆ ಇದರ ಮೇಲೆ ಹೂಡಲಾಗಿರುವ ರಾಜಕೀಯ ಶ್ರಮವನ್ನು ಗಮನಿಸಿದರೆ ಈ ಯೋಜನೆ ಸಂಪೂರ್ಣ ಕೈಬಿಡುವುದು ಅವಾಸ್ತವಿಕವಾಗಿ ಪರಿಣಮಿಸಬಹುದು. ಆದರೆ ಅಗ್ನಿವೀರರ ಮರುನೇಮಕಾತಿ ದರವನ್ನು ಈಗಿರುವ ಶೇ. 25ರಿಂದ ಶೇ. 75ಕ್ಕೆ ಏರಿಸಲು ಸಾಧ್ಯವಾಗದೇ ಹೋದರೂ ಶೇ. 50ಕ್ಕಾದರೂ ಏರಿಸಬೇಕು.
2026 ರ ಅಂತ್ಯದ ಹೊತ್ತಿಗೆ ಅಥವಾ 2027ರ ಆರಂಭದ ವೇಳೆ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅಗ್ನಿವೀರರ ಮೊದಲ ತಂಡವು ನಾಲ್ಕು ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಲಿದೆ. ಈಗಿನ ನಿಯಮಗಳನ್ನೇ ನಂಬಿಕೊಂಡರೆ ಈ ಅಗ್ನಿವೀರರಲ್ಲಿ ಶೇ. 75ರಷ್ಟು ಜನರನ್ನು ಯಾವುದೇ ಪಿಂಚಣಿ ಅಥವಾ ಮಾಜಿ ಸೈನಿಕರಿಗೆ ಸಿಗುತ್ತಿದ್ದ ಸೌಲಭ್ಯಗಳಿಲ್ಲದೆ ಮನೆಗೆ ಕಳುಹಿಸಲಾಗುತ್ತದೆ. ಹಾಗಾಗಿ ಈ ಸುಧಾರಣೆ ಈಗ ತುರ್ತಾಗಿ ಅಗತ್ಯವಾಗಿದೆ.
ಮಾನವಶಕ್ತಿಯ ಕೊರತೆ
ಪ್ರತಿ ವರ್ಷವೂ ಈ ರೀತಿಯ ಸಾಮೂಹಿಕ ನಿರ್ಗಮನವು ಸಶಸ್ತ್ರ ಪಡೆಗಳಲ್ಲಿ ಈಗಾಗಲೇ ಇರುವ ಮಾನವಶಕ್ತಿಯ ಕೊರತೆಯನ್ನು ನಿಸ್ಸಂದೇಹವಾಗಿ ಮತ್ತಷ್ಟು ಉಲ್ಬಣಗೊಳಿಸುತ್ತದೆ.
ಉದಾಹರಣೆಗೆ, ಚೀನಾ ಮತ್ತು ಪಾಕಿಸ್ತಾನದ ಸಕ್ರಿಯ ಗಡಿಗಳಲ್ಲಿ ಹಾಗೂ ಉಗ್ರ ನಿರೋಧಕ ಕಾರ್ಯಾಚರಣೆಗಳಲ್ಲಿ ವ್ಯಾಪಕವಾಗಿ ನಿಯೋಜಿಸಲ್ಪಟ್ಟಿರುವ ಮತ್ತು ಈಗಾಗಲೇ ಅತಿಯಾದ ಒತ್ತಡದಲ್ಲಿರುವ ಭಾರತೀಯ ಸೇನೆಯು, ತನ್ನ ಅಧಿಕೃತ ಬಲಕ್ಕಿಂತ ಸುಮಾರು 1.8 ಲಕ್ಷ ಸೈನಿಕರ ಕೊರತೆಯನ್ನು ಎದುರಿಸುತ್ತಿದೆ.
ಹಿಂದೆಲ್ಲ ಭಾರತೀಯ ಸೇನೆಯು ಪ್ರತಿ ವರ್ಷ ನಿವೃತ್ತರಾಗುವ ಸೈನಿಕರ ಸಂಖ್ಯೆಯನ್ನು ಸರಿದೂಗಿಸಲು ವಾರ್ಷಿಕವಾಗಿ 60,000 ರಿಂದ 70,000 ಸೈನಿಕರನ್ನು ನೇಮಿಸಿಕೊಳ್ಳುತ್ತಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ 2020-21 ಮತ್ತು 2021-22ರಲ್ಲಿ ನೇಮಕಾತಿಯನ್ನು ಮೊದಲು ಸ್ಥಗಿತಗೊಳಿಸಲಾಯಿತು. ನಂತರ, ಅಗ್ನಿಪಥ್ ಯೋಜನೆ ಜಾರಿಗೆ ಬಂದಾಗ, ವಾರ್ಷಿಕ ನೇಮಕಾತಿಯನ್ನು ಸೇನೆಗೆ 40,000ಕ್ಕೆ ಮತ್ತು ವಾಯುಪಡೆ ಹಾಗೂ ನೌಕಾಪಡೆಗೆ ತಲಾ 3,000ಕ್ಕೆ ಇಳಿಸಲಾಯಿತು.
ಸೇನೆಯು 2025ರಲ್ಲಿ ಅಗ್ನಿವೀರರ ನೇಮಕಾತಿಯನ್ನು 50,000ಕ್ಕೆ ಹೆಚ್ಚಿಸಿದೆ. ಆದರೂ, ಯುದ್ಧಕ್ಕೆ ಸನ್ನದ್ಧರಾಗಿರುವ ಸೈನಿಕರ ಕೊರತೆಯನ್ನು ನೀಗಿಸಲು ಈ ವರ್ಷದಿಂದ ಅದನ್ನು ದುಪ್ಪಟ್ಟು ಅಂದರೆ 1.1 ಲಕ್ಷಕ್ಕೆ ಏರಿಸಲು ಯೋಜಿಸಿದೆ. ಈಗಾಗಲೇ ತರಬೇತಿ ಪಡೆದ ಸೈನಿಕರ ಮರುನೇಮಕಾತಿ ದರವನ್ನು ಶೇಕಡಾ 50 ರಿಂದ 75ಕ್ಕೆ ಹೆಚ್ಚಿಸುವುದು, ಅಸಮರ್ಥರನ್ನು ಹೊರಗಿಡಲು ಮತ್ತು ಈ ಸಮಸ್ಯೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ಅಗ್ನಿಪಥ್ ಯೋಜನೆಯ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕವಾಗಿ ಸೈನಿಕರನ್ನು ಒದಗಿಸುವ ಪ್ರದೇಶಗಳಲ್ಲಿ 'ಆಲಿವ್ ಗ್ರೀನ್' ಸಮವಸ್ತ್ರದ ಬಗೆಗಿನ ಆಕರ್ಷಣೆ ಕಡಿಮೆಯಾಗುತ್ತಿರುವುದನ್ನು ಪಂಜಾಬ್ನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ರೆಜಿಮೆಂಟ್ಗೆ ಸೇರಬೇಕೆಂದು ಸೇನೆ ಇತ್ತೀಚೆಗೆ ಮಾಡಿರುವ ಮನವಿಯಿಂದಲೇ ಸ್ಪಷ್ಟವಾಗಿ ತಿಳಿಯುತ್ತದೆ.
ದಕ್ಷತೆಯ ಮೇಲೆ ಪರಿಣಾಮ
ಅಸ್ತಿತ್ವದಲ್ಲಿರುವ ಸೈನಿಕರ ಸರಾಸರಿ ವಯಸ್ಸನ್ನು 32 ರಿಂದ 24-25ಕ್ಕೆ ಇಳಿಸುವ ಮೂಲಕ 14 ಲಕ್ಷ ಬಲದ ಸಶಸ್ತ್ರ ಪಡೆಗಳನ್ನು ಕೇವಲ ಆರು-ಏಳು ವರ್ಷಗಳಲ್ಲಿ ಯುವ ಮತ್ತು ಸದೃಢ ಪಡೆಯನ್ನಾಗಿ ಮಾಡುವ ರೂಪಾಂತರದ ಯೋಜನೆಯೆಂದು ಇದನ್ನು ಬಿಂಬಿಸಲಾಗಿತ್ತು. ಇದರ ಜೊತೆಗೆ ಆಧುನಿಕ ಯುದ್ಧತಂತ್ರದ ಸವಾಲುಗಳನ್ನು ಎದುರಿಸಲು ತಾಂತ್ರಿಕ ಜ್ಞಾನವುಳ್ಳ ಸಿಬ್ಬಂದಿಯನ್ನು ಹೊಂದುವ ಗುರಿ ಕೂಡ ಇದರ ಹಿಂದೆ ಇತ್ತು.
ಅಗ್ನಿಪಥ್ ಯೋಜನೆಗೆ ತುರ್ತಾಗಿ ಬೇಕಿರುವ ಬದಲಾವಣೆಗಳು
* ಮರುನೇಮಕಾತಿ ಹೆಚ್ಚಳ: ಅಗ್ನಿವೀರರ ಸೇವಾವಧಿ ಮುಂದುವರಿಕೆಯನ್ನು ಕನಿಷ್ಠ ಶೇಕಡಾ 50-75ಕ್ಕೆ ಏರಿಸುವುದು. * ತರಬೇತಿ ಅವಧಿ ವಿಸ್ತರಣೆ: ತಾಂತ್ರಿಕ ನೈಪುಣ್ಯತೆ ಬಯಸುವ ಹುದ್ದೆಗಳಿಗೆ ತರಬೇತಿ ಅವಧಿಯನ್ನು ಹೆಚ್ಚಿಸುವುದು. * ಸಮಾನ ಪರಿಹಾರ: ಹುತಾತ್ಮರಾದ ಅಗ್ನಿವೀರರಿಗೂ ನಿಯಮಿತ ಸೈನಿಕರಿಗೆ ಸಿಗುವ ಸಮಾನ ಪರಿಹಾರವನ್ನು ಖಚಿತಪಡಿಸುವುದು. * ಸಮಾನತೆಯ ರಕ್ಷಣೆ: ಸೇನೆಯಲ್ಲಿ ಎರಡು ವಿಭಿನ್ನ ವರ್ಗದ ಸೈನಿಕರ ಸೃಷ್ಟಿಯನ್ನು ತಡೆಯುವುದು. *ದೀರ್ಘಕಾಲೀನ ಅಗತ್ಯತೆ: ನೇಮಕಾತಿಯನ್ನು ದೀರ್ಘಕಾಲೀನ ಕಾರ್ಯಾ ನಿರ್ವಹಣೆಯ ಅಗತ್ಯತೆಗಳಿಗೆ ಅನುಗುಣವಾಗಿ ರೂಪಿಸುವುದು. |
ಇಲ್ಲಿ ಪ್ರಸ್ತಾಪ ಮಾಡಿರುವ ಅಷ್ಟೂ ಅಂಶಗಳು ಖಂಡಿತವಾಗಿಯೂ ತಲುಪಬೇಕಾದ ಗುರಿಗಳೇ ಹೌದು. ಆದರೆ, ರಕ್ಷಣಾ ಬಜೆಟ್ನ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಆಪೋಶನ ತೆಗೆದುಕೊಳ್ಳುತ್ತಿರುವುದು ಹೆಚ್ಚುತ್ತಿರುವ ಸಂಬಳ ಮತ್ತು ಪಿಂಚಣಿ ವೆಚ್ಚಕ್ಕೆ ಕತ್ತರಿ ಹಾಕುವುದೇ ಈ ಯೋಜನೆಯ ಹಿಂದಿನ ಮುಖ್ಯ ಉದ್ದೇಶ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಯಂತ್ರಗಳ ಹಿಂದೆ ನಿಂತು ಹೋರಾಡುವ ಸೈನಿಕರ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಬದಲು, ಮಿಲಿಟರಿ ಆಧುನೀಕರಣ, ಕಾರ್ಯಾಚರಣೆಯ ಒಟ್ಟು ನಿರ್ವಹಣೆ ಮತ್ತು ಸಿಬ್ಬಂದಿ ವೆಚ್ಚಗಳೆಲ್ಲವನ್ನೂ ನಿಭಾಯಿಸಲು ಸರ್ಕಾರವು ರಕ್ಷಣಾ ಬಜೆಟ್-ನ್ನು ಇನ್ನಷ್ಟು ಹಿಗ್ಗಿಸಬೇಕು.
ಅದರಲ್ಲೂ ಆಧುನಿಕ ಯುದ್ಧತಂತ್ರವು ಈಗ ಸಂಪೂರ್ಣವಾಗಿ ತಂತ್ರಜ್ಞಾನದ ಮೇಲೆಯೇ ಅವಲಂಬಿತವಾಗಿದೆ. ಮಿಲಿಟರಿ ಸಿಬ್ಬಂದಿಯು ಯುದ್ಧಕ್ಕೆ ಸಂಪೂರ್ಣವಾಗಿ ಸನ್ನದ್ಧರಾಗಲು ಮತ್ತು ಅಗತ್ಯ ಅನುಭವ ಪಡೆಯಲು ಕನಿಷ್ಠ ಏಳರಿಂದ ಎಂಟು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ, ವಿಶೇಷವಾಗಿ ತಾಂತ್ರಿಕ ನೈಪುಣ್ಯತೆ ಬಯಸುವ ನೌಕಾಪಡೆ ಮತ್ತು ವಾಯುಪಡೆಯಲ್ಲಿ ಇದು ಅತ್ಯಗತ್ಯ. ಅತ್ಯಾಧುನಿಕ ಆಯುಧಗಳು, ಕ್ಷಿಪಣಿಗಳು, ಡ್ರೋನ್ ಮತ್ತು ಡ್ರೋನ್ ನಿರೋಧಕ ವ್ಯವಸ್ಥೆಗಳನ್ನು ನಿರ್ವಹಿಸಲು ಅಗ್ನಿವೀರರಿಗೆ ತರಬೇತಿ ನೀಡಿ, ಅವರು ಪರಿಣಿತರಾಗುವ ಹಂತಕ್ಕೆ ಬಂದಾಗ ಅವರನ್ನು ಸೇವೆಯಿಂದಲೇ ಬಿಡುಗಡೆ ಮಾಡುವುದನ್ನು ಸಶಸ್ತ್ರ ಪಡೆಗಳು ಭರಿಸಲು ಸಾಧ್ಯವಿಲ್ಲ.
ಇನ್ನು ಅಗ್ನಿವೀರರಿಗೆ ನೀಡಲಾಗುತ್ತಿದ್ದ ತರಬೇತಿಯಲ್ಲಿಯೂ ಕಡಿತ ಮಾಡಲಾಗಿದೆ. ಹಿಂದೆ ಸುಮಾರು 11 ತಿಂಗಳು ಇದ್ದ ತರಬೇತಿಯನ್ನು ಈಗ ಕೇವಲ ಆರು ತಿಂಗಳಿಗೆ ಇಳಿಸಲಾಗಿದೆ.
ಅತಿ ಹೆಚ್ಚಿನ ಬದಲಾವಣೆ ದರ, ಫೀಲ್ಡ್ ಫೈರಿಂಗ್ ರೇಂಜ್ಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಮತ್ತು ತರಬೇತಿಗೆ ಬೇಕಾದ ಮದ್ದುಗುಂಡುಗಳ ಕೊರತೆಯಂತಹ ಅಂಶಗಳು ದೀರ್ಘಕಾಲೀನ ಯುದ್ಧ ಸಾಮರ್ಥ್ಯ ಮತ್ತು ದಕ್ಷತೆಯನ್ನು ಕುಂದಿಸುತ್ತವೆ. ಕಳೆದ ವರ್ಷದ 'ಆಪರೇಷನ್ ಸಿಂದೂರ್' ವೇಳೆ ಮತ್ತೆ ಮತ್ತೆ ಚರ್ಚೆಗೆ ಬಂದ ಚೀನಾ ಮತ್ತು ಪಾಕಿಸ್ತಾನದ ಜಂಟಿ ಬೆದರಿಕೆಯ ನಡುವೆ ಇಂತಹ ದಕ್ಷತೆಯಲ್ಲಿ ಆಗುವ ಕೊರತೆ ಅತ್ಯಂತ ಅಪಾಯಕಾರಿ.
ಪ್ರಾಯೋಗಿಕ ಪರೀಕ್ಷೆಯೇ ಇರಲಿಲ್ಲ
ಜನರಲ್ ಎಂ.ಎಂ. ನರಾವಣೆ ಅವರು ಏಪ್ರಿಲ್ 2022ರಲ್ಲಿ ಭೂಸೇನಾ ಮುಖ್ಯಸ್ಥರಾಗಿ ನಿವೃತ್ತರಾದ ನಂತರ ಬರೆದ ತಮ್ಮ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' (ಇದರ ಪ್ರಕಟಣೆಯನ್ನು ಸರ್ಕಾರ ತಡೆಹಿಡಿದಿದೆ) ಕೃತಿಯಲ್ಲಿ ಹೀಗೆ ಹೇಳಿದ್ದಾರೆ: "ಸೇನೆಯು ಆರಂಭದಲ್ಲಿ ಕೇವಲ ಸೀಮಿತ ಸಂಖ್ಯೆಯ (ಶೇ. 10 ರಷ್ಟು) ಯೋಧರನ್ನು ಮಾತ್ರ ಅಲ್ಪಾವಧಿಯ ಸೇವೆಗೆ ಸೇರಿಸಿಕೊಳ್ಳಲು ಪ್ರಸ್ತಾಪಿಸಿತ್ತು."
ಆದರೆ, ಒಟ್ಟು ನೇಮಕಾತಿಯ ಶೇ. 100 ರಷ್ಟು ಭಾಗ ಅಲ್ಪಾವಧಿಯ ಸೇವೆಯ ಆಧಾರದ ಮೇಲೆ ಇರಬೇಕು ಮತ್ತು ಅದು ವಾಯುಪಡೆ ಹಾಗೂ ನೌಕಾಪಡೆಗೂ ಅನ್ವಯಿಸಬೇಕು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ನಿರ್ದೇಶನ ನೀಡಿತು. ಇದು ವಾಯುಪಡೆ ಮತ್ತು ನೌಕಾಪಡೆಗೆ ಅಕ್ಷರಶಃ ಸಿಡಿಲು ಬಡಿದಂತಾಯಿತು. ನೇಮಕಗೊಂಡ ಯೋಧರಲ್ಲಿ ಶೇ. 75ರಷ್ಟು ಜನರನ್ನು ಉಳಿಸಿಕೊಳ್ಳಬೇಕು ಎಂದು ಸೇನೆಯು ನಂತರ ಮಂಡಿಸಿದ ವಾದಕ್ಕೆ ಯಾವ ಬೆಲೆಯೂ ಸಿಗಲಿಲ್ಲ.
ಆದರ್ಶಪ್ರಾಯವಾಗಿ, ಇಂತಹ ಆಮೂಲಾಗ್ರ ಬದಲಾವಣೆಯನ್ನು ತಳ ಹಂತದ ನೇಮಕಾತಿಗೆ ಏಕೈಕ ದಾರಿಯನ್ನಾಗಿ ಮಾಡುವ ಮೊದಲು, ಅದನ್ನು ಒಂದು ಪ್ರಾಯೋಗಿಕ ಯೋಜನೆಯಾಗಿ ಪರೀಕ್ಷೆಗೆ ಒಡ್ಡಬೇಕಾದ ಅಗತ್ಯವಿತ್ತು.
ಇಬ್ಬಗೆಯ ಸೈನಿಕರು
ಅಗ್ನಿಪಥ್ ಯೋಜನೆಯು ಸೈನ್ಯದ ಅತ್ಯಂತ ಪ್ರಮುಖ ಅಂಶಗಳಾದ ಒಗ್ಗಟ್ಟು, ಸೌಹಾರ್ದತೆ ಮತ್ತು ರೆಜಿಮೆಂಟಲ್ ಸ್ಪಿರಿಟ್ ತತ್ವಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಇದು ಸೇನೆಯೊಳಗೇ ಹೆಚ್ಚಿನ ಸಂಬಳ, ರಜೆ ಮತ್ತು ಪಿಂಚಣಿ ಸೌಲಭ್ಯವಿರುವ 'ನಿಯಮಿತ ಸೈನಿಕರು' ಮತ್ತು ಅಗ್ನಿವೀರರು ಎಂಬ ಇಬ್ಬಗೆಯ ವರ್ಗಗಳನ್ನು ಸೃಷ್ಟಿಸುತ್ತದೆ.
ಸೇವೆಯಿಂದ ಮುಕ್ತರಾಗುವ ಅಗ್ನಿವೀರರಿಗೆ 11.71 ಲಕ್ಷ ರೂ. 'ಸೇವಾ ನಿಧಿ' ಪ್ಯಾಕೇಜ್ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPF) ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ನೇಮಕಾತಿಯ ಭರವಸೆ ನೀಡಲಾಗಿದೆ. ಆದರೆ, ಈ ಹಿಂದಿನ ವರ್ಷಗಳಲ್ಲಿ ಮಾಜಿ ಸೈನಿಕರ ಮರುನೇಮಕಾತಿಯ ಅಂಕಿಅಂಶಗಳು ಬಹಳ ಕಳಪೆಯಾಗಿದೆ, ಹಾಗಾಗಿ ಈ ಭರವಸೆಗಳ ಅನುಷ್ಠಾನವು ಅತ್ಯಂತ ಎಚ್ಚರಿಕೆಯಿಂದ ನಡೆಯಬೇಕಿದೆ.
ಇದಲ್ಲದೆ, “ಕೊಂದೇ ಗೆಲ್ಲುವ” (trained to kill) ತರಬೇತಿ ಪಡೆದ ಸಾವಿರಾರು ಯುವಕರನ್ನು ಉದ್ಯೋಗಾವಕಾಶಗಳಿಲ್ಲದ ಮಾರುಕಟ್ಟೆಗೆ ಒಮ್ಮೆಲೇ ಬಿಡುಗಡೆ ಮಾಡುವುದರ ಹಿಂದೆ ಅಡಗಿರುವ ಸಾಮಾಜಿಕ ಅಪಾಯವನ್ನು ಕೂಡ ಸುಮ್ಮನೆ ನಿರ್ಲಕ್ಷಿಸಲು ಸಾಧ್ಯವಿಲ್ಲ.
'ನಾಮ್, ನಮಕ್ ಮತ್ತು ನಿಶಾನ್'
ಭಾರತೀಯ ಸೈನಿಕರ ಮೂಲ ತತ್ವವು 'ನಾಮ್, ನಮಕ್ ಮತ್ತು ನಿಶಾನ್' (ರೆಜಿಮೆಂಟ್ನ ಗೌರವ, ನಿಷ್ಠೆ ಮತ್ತು ಧ್ವಜ) ಎಂಬ ಅಂಶಗಳ ಸುತ್ತ ಸುತ್ತುತ್ತದೆ. 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ನುಸುಳುಕೋರರನ್ನು ಹಿಮ್ಮೆಟ್ಟಿಸಲು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ ಅವರು ಹೋರಾಡಿದ್ದು ಇದೇ ಸ್ಫೂರ್ತಿಯಿಂದ. ಅಲ್ಪಾವಧಿಯ ಅಥವಾ ಗುತ್ತಿಗೆ ಆಧಾರಿತ ಉದ್ಯೋಗವು ಇಂತಹ ಹೋರಾಟದ ಮನೋಭಾವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಸಶಸ್ತ್ರ ಪಡೆಗಳು ತಮ್ಮ ಕಾರ್ಯಾಚರಣೆಗೆ ಅಗತ್ಯವಿಲ್ಲದ ಹೆಚ್ಚುವರಿ ವೆಚ್ಚಗಳನ್ನು ಖಂಡಿತವಾಗಿಯೂ ಕಡಿತಗೊಳಿಸಬೇಕಿದೆ. ಆದರೆ, ಬದಲಾಗುತ್ತಿರುವ ವಾಸ್ತವಗಳಿಗೆ ತಕ್ಕಂತೆ ಭಾರತದ ಸಂವಿಧಾನವನ್ನೇ ನೂರಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಬಹುದಾದರೆ, ಅಗ್ನಿಪಥ್ ಯೋಜನೆಯಲ್ಲಿ ಏಕೆ ಬದಲಾವಣೆ ತರಬಾರದು? ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ತಿದ್ದುಪಡಿ ಅತ್ಯಗತ್ಯವಾಗಿದೆ. ನಿರ್ವಹಿಸಲು ʼಅಗ್ನಿವೀರರಿಗೆʼ ತರಬೇತಿಯನ್ನು ಕೊಟ್ಟು ಅವರು ಇನ್ನೇನು ಪೂರ್ಣ ಪರಿಣಿತಿಯನ್ನು ಪಡೆಯುತ್ತಿದ್ದಾರೆ ಎನ್ನುವ ಹಂತಕ್ಕೆ ಅವರನ್ನು ಸೇನಾ ಸೇವೆಯಿಂದಲೇ ಬಿಡುಗಡೆ ಮಾಡುವುದು ಶುದ್ಧ ಅರ್ಥಹೀನ. ಇದರಿಂದಾಗುವ ನಷ್ಟವನ್ನು ನಮ್ಮ ಸಶಸ್ತ್ರ ಪಡೆಗಳು ಭರಿಸಲು ಸಾಧ್ಯವಿಲ್ಲ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

