
ಉನ್ನತ ಶ್ರೇಣಿಯ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಆತ್ಮಗೌರವವನ್ನು ಹತ್ತಿಕ್ಕದೇ ಗುಣಮಟ್ಟ ಕಾಯ್ದುಕೊಳ್ಳಬೇಕು ಮತ್ತು ಭವಿಷ್ಯದ ದುರಂತಗಳಿಗೆ ಕಡಿವಾಣ ಹಾಕಲು ವ್ಯವಸ್ಥೆಗಳನ್ನು ರೂಪಿಸಬೇಕು.
ಐಐಟಿ-ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. ಘಟನೆಯ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಅವರ ಕುಟುಂಬವು ಜಾತಿ ತಾರತಮ್ಯ ಮತ್ತು ಕಿರುಕುಳದ ಆರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಲಾಗಿದೆ. ಕುಟುಂಬದ ದೂರಿನಲ್ಲಿ ಹೆಸರಿಸಲಾದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರನ್ನು ಡೀನ್ ಹುದ್ದೆಯಿಂದ ಅಮಾನತು ಮಾಡಲಾಗಿದೆ. ಆದರೆ ಅವರು ಬೋಧಕ ಸಿಬ್ಬಂದಿಯಾಗಿ ಮುಂದುವರಿದಿದ್ದಾರೆ.
ಈಗಿನ್ನೂ ಸಾಹಿಲ್ ಅವರ ಸಾವಿಗೆ ನೈಜ ಕಾರಣಗಳೇನು ಎಂದು ಹೇಳುವುದು ಕಷ್ಟಸಾಧ್ಯ. ಆದರೆ ಈ ಪ್ರಕರಣದ ಹಿನ್ನೆಲೆಯಲ್ಲಿ ಐಐಟಿ-ಬಾಂಬೆ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳು ನಾವು ಕೇಳಲೇಬೇಕಾದ ಒಂದು ಬಹುಮುಖ್ಯ ಪ್ರಶ್ನೆಗೆ ಉತ್ತರ ನೀಡುವುದನ್ನು ತಪ್ಪಿಸಿಕೊಳ್ಳಲಾರವು;
ಸೋತವರು, ತಪ್ಪುಗಳನ್ನು ಎಸಗುವವರು, ತೊಂದರೆಗಳಲ್ಲಿ ಸಿಲುಕುವವರು ಅಥವಾ ಸಂಸ್ಥೆಯ ತನಿಖೆ ಮಾಡಲು ಬಯಸದ ದೂರುಗಳನ್ನು ಎತ್ತುವ ವಿದ್ಯಾರ್ಥಿಗಳನ್ನು ಅವು ನಡೆಸಿಕೊಳ್ಳುವ ಬಗೆಯಾದರೂ ಹೇಗೆ? ಇದು ಚಿಕ್ಕ ಪ್ರಶ್ನೆಯೂ ಅಲ್ಲ.
ಆರ್ಟಿಐಯಿಂದ ಲಭ್ಯವಾದ ಮಾಹಿತಿಯ ಪ್ರಕಾರ 2021ರಿಂದ 2025ರ ನಡುವಿನ ಅವಧಿಯಲ್ಲಿ ಐಐಟಿಗಳಲ್ಲಿ ಆತ್ಮಹತ್ಯೆಗೆ ಶರಣಾದ ವಿಧ್ಯಾರ್ಥಿಗಳ ಸಂಖ್ಯೆ 65 ಮಂದಿ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಕುರಿತ ಸುಪ್ರೀಂ ಕೋರ್ಟಿನ ರಾಷ್ಟ್ರೀಯ ಕಾರ್ಯಪಡೆಯು ಕೇವಲ ಕೌನ್ಸೆಲಿಂಗ್ನ್ನು ಮೀರಿ ಶೈಕ್ಷಣಿಕ ಒತ್ತಡ, ಜಾತಿ ಮತ್ತು ಲಿಂಗ ತಾರತಮ್ಯ, ಆರ್ಥಿಕ ಒತ್ತಡ ಹಾಗೂ ಸಾಂಸ್ಥಿಕ ಪ್ರಕ್ರಿಯೆಗಳ ಬಗ್ಗೆ ಪರಿಶೀಲನೆ ನಡೆಸಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ಕೇವಲ ಮಾನಸಿಕ ಆರೋಗ್ಯದಿಂದ ಮಾತ್ರ ವಿವರಿಸಲು ಸಾಧ್ಯವಿಲ್ಲ ಇದರಿಂದ ನಮಗೆ ವೇದ್ಯವಾಗುತ್ತದೆ.
ಟಾಪರ್ ಎದುರಿಸುವ ವೈಫಲ್ಯ
ಈ ವಿದ್ಯಾರ್ಥಿಗಳು ಕ್ಯಾಂಪಸ್ಗೆ ಕಾಲಿಟ್ಟ ಕ್ಷಣದಿಂದಲೇ ಅವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಉಂಟಾಗುತ್ತವೆ ಎಂಬ ಅಂಶದಿಂದ ನಾವು ಪರಿಶೀಲನೆಯನ್ನು ಆರಂಭಿಸೋಣ. ಅವರು ಅನೇಕ ವರ್ಷಗಳ ತೀವ್ರ ಪೈಪೋಟಿಯ ಬಳಿಕ ತಮ್ಮ ಶಾಲೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹುಮ್ಮಸ್ಸಿನೊಂದಿಗೆ ಪ್ರವೇಶ ಪಡೆಯುತ್ತಾರೆ. ಆದಾಗ್ಯೂ ಐಐಟಿ ಒಳಗೆ ಪ್ರತಿಯೊಬ್ಬರ ದಾಖಲೆಯೂ ಒಂದೇ ರೀತಿಯದ್ದಾಗಿರುತ್ತದೆ. ಇದರಿಂದಾಗಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳುವುದು ಅವರಿಗೆ ಕಷ್ಟವಾಗುತ್ತದೆ.
ಒಂದು ಕಾಲದಲ್ಲಿ ವಿರಳವಾಗಿದ್ದ ವೈಫಲ್ಯವು ಇಲ್ಲಿ ಸಾಮಾನ್ಯವಾಗಲು ಶುರುವಾಗುತ್ತದೆ. ವಿದ್ಯಾರ್ಥಿಗಳು ಈ ಬದಲಾವಣೆಯನ್ನು ಎದುರಿಸಲು ನಮ್ಮ ಶಿಕ್ಷಣ ವ್ಯವಸ್ಥೆ ಸಜ್ಜುಗೊಂಡಿರುವುದಿಲ್ಲ. ಅದು ಮಕ್ಕಳಿಗೆ ಕಲಿಸುತ್ತಿರುವುದು ಪರೀಕ್ಷೆಗಳನ್ನು ಪಾಸ್ ಮಾಡುವುದು ಮತ್ತು ಗೆಲ್ಲುವುದನ್ನು ಮಾತ್ರ. ಆದರೆ ಸೋಲನ್ನು ಎದುರಿಸುವುದು, ಸಹಾಯವನ್ನು ಯಾಚಿಸುವುದು ಅಥವಾ ಹೊಸದಾಗಿ ಆರಂಭ ಮಾಡುವ ಬಗ್ಗೆ ಅಂತಹುದೇನನ್ನೂ ಕಲಿಸುವುದಿಲ್ಲ. ಪರೀಕ್ಷೆಯ ಫಲಿತಾಂಶಗಳು ವಿದ್ಯಾರ್ಥಿಯ ಗುರುತಿನ ಭಾಗವಾದಾಗ ಕೆಟ್ಟ ಗ್ರೇಡ್ ಅಥವಾ ಶಿಸ್ತು ಕ್ರಮದ ಆರೋಪವು ವಾಸ್ತವಕ್ಕಿಂತ ದೊಡ್ಡದಾಗಿ ಕಾಣಿಸಲು ಶುರುವಾಗುತ್ತದೆ.
ನ್ಯಾಯಯುತ ಪ್ರಕ್ರಿಯೆಯ ಅಗತ್ಯ
ಯಾವುದೇ ವಿದ್ಯಾರ್ಥಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕು ಎಂದರ್ಥವಲ್ಲ. ಒಬ್ಬ ವಿದ್ಯಾರ್ಥಿಯು ಕಾಪಿ ಮಾಡಿದರೆ, ಸಂಸ್ಥೆಯು ಕ್ರಮ ಕೈಗೊಳ್ಳಲೇಬೇಕು. ಆದರೆ ಶಿಸ್ತಿಗೂ ಮತ್ತು ಅವಮಾನಕ್ಕೂ, ಅಧಿಕಾರಕ್ಕೂ ಮತ್ತು ಮನಸ್ಸಿಗೆ ಬಂದಂತೆ ವರ್ತಿಸುವ ಅಧಿಕಾರಕ್ಕೂ ವ್ಯತ್ಯಾಸವಿದೆ. ಒಬ್ಬ ಪ್ರಾಧ್ಯಾಪಕರು ವಿದ್ಯಾರ್ಥಿಗೆ ತಪ್ಪು ಮಾಡಿದ್ದಾನೆ ಎಂದು ಹೇಳಬಹುದು. ಆದರೆ ದುರ್ನಡತೆಯ ಆರೋಪವು ನ್ಯಾಯಯುತ ಪ್ರಕ್ರಿಯೆಯ ಮೂಲಕ ಹೋಗಬೇಕೇ ಹೊರತು, ಅದೇ ವ್ಯಕ್ತಿಯು ಆರೋಪಿಸುವ, ನ್ಯಾಯಾಧೀಶರಂತೆ ವರ್ತಿಸುವ ಮತ್ತು ಶಿಕ್ಷಿಸುವ ಸ್ಥಳದಲ್ಲೇ ನಡೆಯುವ ಮುಖಾಮುಖಿ ವಿಚಾರಣೆಯ ಮೂಲಕ ಅಲ್ಲ.
ವಿದ್ಯಾರ್ಥಿಯು ತನ್ನ ಮೇಲಿನ ಆರೋಪ ಏನು ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು, ಪ್ರತಿಕ್ರಿಯಿಸಲು ಅವಕಾಶ ಪಡೆಯಬೇಕು ಹಾಗೂ ತಕ್ಕ ಪ್ರಮಾಣದ ಮತ್ತು ಮೇಲ್ಮನವಿ ಸಲ್ಲಿಸಬಹುದಾದ ಶಿಕ್ಷೆಯನ್ನು ಸ್ವೀಕರಿಸಬೇಕು. ಈ ಕಾರ್ಯವಿಧಾನಗಳು ಶಿಸ್ತಿಗೆ ಅಡ್ಡಿಪಡಿಸುವ ಅನಗತ್ಯ ವಿಳಂಬವಲ್ಲ. ಅವೇ ಶಿಸ್ತನ್ನು ನ್ಯಾಯಯುತವಾಗಿ ಮಾಡುತ್ತವೆ. ವಿದ್ಯಾರ್ಥಿಗಳು ಇನ್ನೂ ಅಧಿಕಾರ, ವೈಫಲ್ಯ ಮತ್ತು ಜವಾಬ್ದಾರಿಯನ್ನು ಎದುರಿಸಲು ಕಲಿಯುತ್ತಿರುವುದರಿಂದ ಇದು ಇನ್ನಷ್ಟು ಮುಖ್ಯವಾಗುತ್ತದೆ. ಒಬ್ಬ ಉತ್ತಮ ಶಿಕ್ಷಕರು ಒಂದೇ ಸಮಯದಲ್ಲಿ ಎರಡು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಹುದು; ಇದು ತಪ್ಪು, ಮತ್ತು ಇದು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಅದೇ ನಿಜವಾದ ಬೋಧನೆ.
ಜಾತಿಯ ಆಯಾಮ
ಇದೆಲ್ಲಕ್ಕಿಂತ ಮಿಗಿಲಾಗಿ ಜಾತಿಯ ಪ್ರಶ್ನೆಯು ಈ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ಐಐಟಿಗಳನ್ನು ಸಾಮಾನ್ಯವಾಗಿ ಭಾರತದ ಅತ್ಯಂತ ಪ್ರತಿಭಾಪೋಷಕ ಸಂಸ್ಥೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದೇಶದ ಅತ್ಯಂತ ಕಠಿಣ ಪರೀಕ್ಷೆಗಳ ಮೂಲಕ ಪ್ರವೇಶ ಪಡೆಯುವುದರಿಂದ, ಕ್ಯಾಂಪಸ್ನಲ್ಲಿ ಜಾತಿಗೆ ಯಾವುದೇ ಸ್ತಾನವಿಲ್ಲ ಎಂಬ ಅಭಿಪ್ರಾಯ ಮೂಡಬಹುದು.
ಐಐಟಿ-ಮದ್ರಾಸ್ ಅನ್ನು ಹತ್ತಿರದಿಂದ ಅಧ್ಯಯನ ಮಾಡಿದ ಮಾನವಶಾಸ್ತ್ರಜ್ಞೆ ಅಜಂತಾ ಸುಬ್ರಮಣಿಯನ್ ಅವರು ಇದಕ್ಕೆ ಭಿನ್ನವಾದ ವಾದವನ್ನು ಮಂಡಿಸುತ್ತಾರೆ. ಈ ಸಂಸ್ಥೆಗಳಲ್ಲಿನ "ಪ್ರತಿಭೆ" ಅಥವಾ "ಮೆರಿಟ್" ತಟಸ್ಥವಾಗಿಲ್ಲ, ಬದಲಿಗೆ ತಲೆಮಾರುಗಳಿಂದ ಶಾಲೆ ಹಾಗೂ ಕೋಚಿಂಗ್ಗಳಲ್ಲಿನ ಅಸಮಾನತೆಯಿಂದ ನಿರ್ಮಿಸಲ್ಪಟ್ಟ ಜಾತಿ ಸೌಲಭ್ಯದಿಂದ ರೂಪುಗೊಂಡಿದೆ. ವಿದ್ಯಾರ್ಥಿಯೊಬ್ಬ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದ ತಕ್ಷಣ ಜಾತಿಯು ಮಾಯವಾಗುವುದಿಲ್ಲ, ಅದು ಕೇವಲ ಕಾಣದಂತೆ ಮರೆಯಾಗುತ್ತದೆ ಅಷ್ಟೇ.
ಕೆಲವೇ ವಾರಗಳ ಹಿಂದೆ ಐಐಟಿ-ಮಂಡಿಯಲ್ಲಿ "ಶೂದ್ರರು ಸೇವಕರು" ಎಂಬ ಅರ್ಥದ ಪೋಸ್ಟರ್ ಒಂದರಿಂದ ಹೊಸ ವಿವಾದ ಸೃಷ್ಟಿಯಾಗಿತ್ತು. ಆದಾಗ್ಯೂ, ಐಐಟಿ-ಬಾಂಬೆ ಪ್ರಕರಣದಲ್ಲಿ ಆರೋಪದ ಕುರಿತು ಭಿನ್ನಾಭಿಪ್ರಾಯವಿದೆ; ತಾರತಮ್ಯ ನಡೆದಿದೆ ಎಂದು ಕುಟುಂಬವು ಹೇಳುತ್ತದೆ, ಸಂಸ್ಥೆಯು ಅದನ್ನು ನಿರಾಕರಿಸುತ್ತದೆ ಮತ್ತು ತನಿಖೆಯು ಈ ವಿಷಯವನ್ನು ಇತ್ಯರ್ಥಪಡಿಸಬೇಕಾಗಿದೆ.
ಕುಂದುಕೊರತೆಯ ಆರೋಪಗಳು
ಆದರೆ, ವಾಸ್ತವ ಸಂಗತಿಗಳು ಹೊರಬರುವ ಮುನ್ನವೇ ಮತ್ತೊಂದು ಪ್ರಶ್ನೆ ಎದುರಾಗುತ್ತದೆ: ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಕುಂದುಕೊರತೆ ನಿಭಾಯಿಸುವ ವ್ಯವಸ್ಥೆಗಳನ್ನು ನಂಬುತ್ತಾರೆಯೇ?
ಹೆಚ್ಚಿನ ಐಐಟಿಗಳಲ್ಲಿ ಕಾಗದದ ಮೇಲೆ ಮಾತ್ರ ಎಸ್ಸಿ/ಎಸ್ಟಿ ಕೋಶಗಳು ಅಸ್ತಿತ್ವದಲ್ಲಿವೆ, ಆದರೆ ದೂರು ನೀಡಿದರೆ ತಮ್ಮ ಸ್ಥಾನಮಾನಕ್ಕೆ ಧಕ್ಕೆಯಾಗುತ್ತದೆ ಅಥವಾ ದೂರುಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ ಎಂದು ವಿದ್ಯಾರ್ಥಿಗಳು ನಂಬಿದರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ, ಪರಿಹರಿಸಬೇಕಾದ ರಚನಾತ್ಮಕ ಸಮಸ್ಯೆಗಳು ಇಲ್ಲಿವೆ.
ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಉತ್ಕೃಷ್ಟತೆಯನ್ನು ಸಾಧಿಸಲು ನಿರಂತರ ಒತ್ತಡ ಎದುರಿಸುತ್ತವೆ. ಪ್ರಕಟಣೆಗಳು, ಪೇಟೆಂಟ್ಗಳು, ಪ್ಲೇಸ್ಮೆಂಟ್ಗಳು ಮತ್ತು ಶ್ರೇಯಾಂಕಗಳು ಮಾನದಂಡಕ್ಕೆ ದಕ್ಕುವ ಮತ್ತು ವರದಿ ಮಾಡಬಹುದಾದ ಸಂಗತಿಗಳಾಗಿವೆ. ಆದರೆ ವಿದ್ಯಾರ್ಥಿಗಳ ಯೋಗಕ್ಷೇಮವು ಹಾಗಲ್ಲ. ವಿದ್ಯಾರ್ಥಿಗಳ ಮಾತಿಗೆ ಮನ್ನಣೆ ಸಿಗುತ್ತಿದೆಯೇ, ಶಿಕ್ಷಕರು ಅಧಿಕಾರವನ್ನು ಜವಾಬ್ದಾರಿಯುತವಾಗಿ ಬಳಸುತ್ತಿದ್ದಾರೆಯೇ ಮತ್ತು ವೈಫಲ್ಯವನ್ನು ಮುಚ್ಚಿಹಾಕುವ ಬದಲು ಅದರಿಂದ ಕಲಿಯುವ ಸಂಗತಿಯಾಗಿ ಪರಿಗಣಿಸಲಾಗುತ್ತಿದೆಯೇ ಎಂಬುದರ ಕಡೆಗೆ ಕಡಿಮೆ ಗಮನಹರಿಸಿದರೂ, ಶ್ರೇಯಾಂಕಗಳಲ್ಲಿ ಕಾಣಿಸಿಕೊಳ್ಳುವ ವಿಷಯಗಳಲ್ಲಿ ಮಾತ್ರ ಒಂದು ಸಂಸ್ಥೆಯು ಅತ್ಯಂತ ಉತ್ತಮ ಸಾಧನೆ ಮಾಡಬಹುದು.
ಬಹು-ಹಂತದ ಬೆಂಬಲದ ಅಗತ್ಯ
ಕೇವಲ ಕೌನ್ಸಿಲಿಂಗ್ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಬೆಂಬಲ ನೀಡುವಲ್ಲಿ ನಿಜವಾದ ಕೊರತೆಗಳಿವೆ ಎಂದು ಕಾರ್ಯಪಡೆಯೇ ಪತ್ತೆ ಹಚ್ಚಿದೆ. ಕೌನ್ಸಿಲರ್ ಒಬ್ಬರು ಕಷ್ಟಪಡುತ್ತಿರುವ ವಿದ್ಯಾರ್ಥಿಗೆ ಸಹಾಯ ಮಾಡಬಹುದು, ಆದರೆ ನ್ಯಾಯಸಮ್ಮತವಲ್ಲದ ಶಿಸ್ತು ಕ್ರಮದ ಪ್ರಕ್ರಿಯೆಯನ್ನು ಸರಿಪಡಿಸಲು, ಹಾಸ್ಟೆಲ್ನಲ್ಲಿನ ಜಾತಿ ತಾರತಮ್ಯವನ್ನು ತೊಡೆದುಹಾಕಲು ಅಥವಾ ಪ್ರಾಧಿಕಾರವನ್ನು ಸಂಪರ್ಕಿಸಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂಬ ವಿದ್ಯಾರ್ಥಿಯ ನಂಬಿಕೆಯಲ್ಲಿ ಬದಲಾವಣೆ ತರಲು ಅವರಿಗೆ ಸಾಧ್ಯವಿಲ್ಲ. ಸಂಸ್ಥೆಗಳಿಗೆ ಕೇವಲ ಒಂದು ಹಂತದ ಬೆಂಬಲ ಸಾಲದು, ಅದಕ್ಕಿಂತ ಹೆಚ್ಚಿನದು ಬೇಕು.
ವಿದ್ಯಾರ್ಥಿ ಪಡುತ್ತಿರುವ ಸಂಕಷ್ಟವನ್ನು ಗುರುತಿಸಲು ಮತ್ತು ಅದರ ಪರಿಹಾರಕ್ಕಾಗಿ ಅವರನ್ನು ಎಲ್ಲಿಗೆ ಕಳುಹಿಸಬೇಕು ಎಂದು ತಿಳಿಯಲು ಅಧ್ಯಾಪಕರು, ವಾರ್ಡನ್ಗಳು ಮತ್ತು ಮಾರ್ಗದರ್ಶಕರಿಗೆ ತರಬೇತಿಯ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮದೇ ಇಲಾಖೆಯವರಿಗೆ ದೂರು ನೀಡದಂತೆ, ಅಂದರೆ ಅವರಿಗೆ ಅಂಕಗಳನ್ನು ನೀಡುವವರ ಮುಂದೆ ಅಳಲು ತೋಡಿಕೊಳ್ಳದಂತೆ, ಅವರಿಗೆ ಸಹಪಾಠಿಗಳ ಬೆಂಬಲ ಮತ್ತು ಇಲಾಖೆಯ ಹೊರಗೆ ಒಂದು ದೂರು ವ್ಯವಸ್ಥೆಯ ಅಗತ್ಯವಿದೆ. ಶಿಸ್ತು ಕ್ರಮದ ಪ್ರಕರಣಗಳನ್ನು ದಾಖಲಿಸಬೇಕು ಮತ್ತು ಮೇಲ್ಮನವಿಗೆ ಅವಕಾಶವಿರಬೇಕು, ಹಾಗೂ ತಾರತಮ್ಯದ ದೂರುಗಳಿಗೆ ಸ್ಪಷ್ಟ ಕಾಲಮಿತಿಯೊಂದಿಗೆ ಸ್ವತಂತ್ರ ತನಿಖೆ ನಡೆಯಬೇಕು.
ಪಾಲಕರಿಗೂ ಇದೆ ಪಾತ್ರ
ಪಾಲಕರಿಗೂ ಒಂದು ಪಾತ್ರವಿದೆ. ಮಗುವನ್ನು ಐಐಟಿಗೆ ಸೇರಿಸುವುದು ಎಂದರೆ ಸಾಮಾನ್ಯವಾಗಿ ಕುಟುಂಬದ ಅನೇಕ ವರ್ಷಗಳ ತ್ಯಾಗ. ಯಶಸ್ಸೇ ಕುಟುಂಬದ ಮೌಲ್ಯಮಾಪನದ ಮುಖ್ಯ ಮಾನದಂಡವಾದಾಗ, ಸೋಲನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಸೋಲು ಎಂದರೆ ಜೀವನದ ಅಂತ್ಯವಲ್ಲ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಪೋಷಕರು ಸಹಾಯಕ್ಕೆ ನಿಲ್ಲುವ ಕೆಲಸವನ್ನು ಮಾಡಬೇಕು. ಅಧ್ಯಾಪಕರೂ ತಕ್ಕಮಟ್ಟಿನ ಸಹಾನುಭೂತಿಗೆ ಅರ್ಹರು: ಅವರು ಬೋಧಿಸುತ್ತಾರೆ, ಪ್ರಕಟಣೆಗಳನ್ನು ಮಾಡುತ್ತಾರೆ ಮತ್ತು ಸಾಂಸ್ಥಿಕ ಗುರಿಗಳನ್ನು ಏಕಕಾಲದಲ್ಲಿ ಪೂರೈಸುತ್ತಾರೆ, ಅವರೇ ಚಿಕಿತ್ಸಕರಂತೆ ವರ್ತಿಸಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಆ ಒತ್ತಡವು ವಿದ್ಯಾರ್ಥಿಗಳನ್ನು ಕಾಳಜಿಯಿಂದ ನೋಡಿಕೊಳ್ಳದಿರಲು ಕಾರಣವಾಗುವುದಿಲ್ಲ.
ಸೋಲುವುದನ್ನೂ ಕಲಿಸಿ
ಅಂತಿಮವಾಗಿ, ವಿಶ್ವವಿದ್ಯಾಲಯದ ಉದ್ದೇಶವೇನು ಎಂಬುದು ಮುಖ್ಯವಾಗುತ್ತದೆ. ಉತ್ತಮ ಗುಣಮಟ್ಟವನ್ನು ಹೊಂದಿದ ವಿಶ್ವವಿದ್ಯಾಲಯವು ಸಮರ್ಥ ಮತ್ತು ಯಶಸ್ಸು ಸಾಧಿಸಿದ ವೃತ್ತಿಪರರನ್ನು ತರಬೇತುಗೊಳಿಸುವುದು ಮಾತ್ರವಲ್ಲದೆ, ಸೋಲುವುದನ್ನು ಹೇಗೆ ಕಲಿಯುವುದು, ತಿದ್ದಿಕೊಳ್ಳುವ ಕೆಲಸವನ್ನು ಒಪ್ಪಿಕೊಳ್ಳುವುದು, ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಮತ್ತು ಪುನರಾರಂಭ ಮಾಡುವುದು ಹೇಗೆ ಎಂಬುದನ್ನು ಕಲಿಸುತ್ತದೆ. ಅದರ ಅಧಿಕಾರವು ಮಾನದಂಡಗಳನ್ನು ಕಾಯ್ದುಕೊಳ್ಳುವಷ್ಟು ಬಲವಾಗಿರಬೇಕು ಮತ್ತು ಒಬ್ಬ ವ್ಯಕ್ತಿಯ ಆತ್ಮವಿಶ್ವಾಸವನ್ನು ಮುರಿಯದಷ್ಟು ಎಚ್ಚರಿಕೆಯಿಂದ ಕೂಡಿರಬೇಕು.
ಐಐಟಿಯಂತಹ ಸಂಸ್ಥೆಗಳ ನಿಜವಾದ ಪರೀಕ್ಷೆಯು ತಮ್ಮ ಅತ್ಯುತ್ತಮ ವಿದ್ಯಾರ್ಥಿಗಳನ್ನು ಹೇಗೆ ನಡೆಸಿಕೊಳ್ಳುತ್ತವೆ ಎಂಬುದರ ಮೇಲೆ ಅಲ್ಲ. ಬದಲಿಗೆ, ಸೋತ, ತಪ್ಪು ಮಾಡಿದ, ದೂರು ನೀಡಿದ ಅಥವಾ ಹಿಂದೆ ಉಳಿದ ವಿದ್ಯಾರ್ಥಿಯನ್ನು ಅವು ಹೇಗೆ ನಡೆಸಿಕೊಳ್ಳುತ್ತವೆ ಎಂಬುದರ ಮೇಲಿದೆ. ಯುವಕರು ಐಐಟಿಗೆ ಪ್ರವೇಶ ಪಡೆಯುವುದು ಹೇಗೆ ಎಂಬುದನ್ನು ಕಲಿಸಿಕೊಡುವುದರಲ್ಲಿ ನಾವು ಬಹಳಷ್ಟು ಪರಿಣತರಾಗಿದ್ದೇವೆ, ಇದು ಪ್ರಶಂಸನೀಯ.
ಆದರೆ ದುರದೃಷ್ಟವಶಾತ್, ಪರಿಸ್ಥಿತಿ ಹದಗೆಟ್ಟಾಗ ವಿದ್ಯಾರ್ಥಿಗಳು ದೃಢವಾಗಿ ನಿಲ್ಲಲು ಈ ಸಂಸ್ಥೆಗಳು ಸಮಾನವಾಗಿ ಸಹಾಯ ಮಾಡುತ್ತವೆಯೇ ಎಂಬುದನ್ನು ನಾವು ಇನ್ನೂ ಪರಿಶೀಲಿಸಬೇಕಾದ ಸ್ಥಿತಿಯಲ್ಲಿದ್ದೇವೆ.
(ಆತ್ಮಹತ್ಯೆಗಳನ್ನು ತಡೆಯಬಹುದು. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ಪ್ರತಿಬಂಧಕ ಸಹಾಯವಾಣಿಗಳನ್ನು ಸಂಪರ್ಕಿಸಿ: ನೇಹಾ ಆತ್ಮಹತ್ಯೆ ತಡೆಗಟ್ಟುವ ಕೇಂದ್ರ 044-24640050: ಆಸರಾ ಆತ್ಮಹತ್ಯೆ ನಿರ್ಬಂಧ, ಭಾವನಾತ್ಮಕ ಬೆಂಬಲ ಮತ್ತು ಆಘಾತ ತಡೆ ಸಹಾಯ ಸಹಾಯವಾಣಿ +91 9820466726: ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ 1800-599-0019, ದಿಶಾ 0471-2552056, ಮೈತ್ರಿ 0484 2540530, ಮತ್ತು ಸ್ನೇಹಾ ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿ 044-24640050)
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


