ಪಶು ವೈದ್ಯಕೀಯ ವಿದ್ಯಾರ್ಥಿಯ ಸಾವು: ಎಸ್‌ಎಫ್‌ಐ ಕಾರಣ ಎಂದು ಆರೋಪಿಸಿದ ಕಾಂಗ್ರೆಸ್
ಪಶು ವೈದ್ಯಕೀಯ ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕದವರು ಎಸ್‌ಎಫ್‌ಐ ಯುವಕನನ್ನು ಹೊಡೆದು ಕೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವಯನಾಡ್: ಇಲ್ಲಿನ ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಯುವಕನನ್ನು ಹೊಡೆದು ಕೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಮೂರು ದಿನಗಳ ಕಾಲ ಹಾಸ್ಟೆಲ್‌ನಲ್ಲಿ ತಮ್ಮ ಮಗನನ್ನು ಥಳಿಸಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಆರೋಪಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಆರೋಪ ಮಾಡಿದೆ. ಆದರೆ ಈ ಆರೋಪವನ್ನು ಎಸ್‌ಎಫ್‌ಐ ನಿರಾಕರಿಸಿದೆ.
ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಸಿದ್ಧಾರ್ಥನ್ ಅವರ ದೇಹ ಫೆಬ್ರವರಿ 18 ರಂದು ತನ್ನ ಹಾಸ್ಟೆಲ್‌ನ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
20 ವರ್ಷದ ಸಿದ್ಧಾರ್ಥನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಮತ್ತು ಕೇರಳ ರ‍್ಯಾಗಿಂಗ್ ನಿಷೇಧ ಕಾಯ್ದೆಯಡಿ ವಿವಿಧ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಲಾದ 18 ವಿದ್ಯಾರ್ಥಿಗಳ ಪೈಕಿ ಆರು ವಿದ್ಯಾರ್ಥಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಗಳು 20 ರಿಂದ 23 ವರ್ಷದೊಳಗಿನವರಾಗಿದ್ದು, ಪ್ರಕರಣದ ಪ್ರಮುಖ 12 ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ಸ್ಥಳೀಯ ಎಸ್‌ಎಫ್‌ಐ ನಾಯಕರು ಮತ್ತು ಅದೇ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಕಾರ್ಯಕರ್ತರು ಸಿದ್ಧಾರ್ಥನ್‌ನನ್ನು ಕೊಂದಿದ್ದಾರೆ ಎಂದು ಮಗನ ಕೆಲವು ಕಾಲೇಜು ಸಹಪಾಠಿಗಳು ಹೇಳಿದ್ದರು ಎಂದು ವಿದ್ಯಾರ್ಥಿಯ ತಂದೆ ಆರೋಪಿಸಿದ್ದರು.
ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಮಗನ ಮೈಮೇಲೆ ಹಲವು ಗಾಯಗಳಾಗಿದ್ದು, ಹೊಟ್ಟೆ ಖಾಲಿಯಾಗಿದ್ದು 2-3 ದಿನಗಳಿಂದ ಆಹಾರವನ್ನೇ ನೀಡಿಲ್ಲ ಎಂದು ಅವರು ಟಿವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ರ‍್ಯಾಗಿಂಗ್ ಮಾಡುವುದರ ಮೂಲಕ ತನ್ನ ಮಗನನ್ನು ಥಳಿಸಲಾಗಿದೆ. ಎಸ್‌ಎಫ್‌ಐ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಭಾಗಿಯಾಗಿರುವುದರಿಂದ ಅವರ ಪಕ್ಷವು ಅವರನ್ನು ರಕ್ಷಿಸುತ್ತಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪವಿದೆ. ಏಕೆಂದರೆ, ತಪ್ಪಿತಸ್ಥರನ್ನು ಪೊಲೀಸರು ಶೀಘ್ರವಾಗಿ ಹಿಡಿಯುತ್ತಿದ್ದರು. ನಮ್ಮ ಪೊಲೀಸರು ಸಮರ್ಥರಾಗಿದ್ದಾರೆ. ಆದರೆ ಅವರು ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಹೇಳಿದ್ದಾರೆ.
ಆರೋಪಿಗಳು ಎಸ್‌ಎಫ್‌ಐ ಕಾರ್ಯಕರ್ತರಾಗಿದ್ದು, ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಕೂಡ ಆರೋಪಿಸಿದ್ದು, ಪ್ರಕರಣದ ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವ ಪೊಲೀಸರು ಇನ್ನೂ ಬಂಧಿಸಿಲ್ಲ. ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ನಿಷ್ಕ್ರಿಯತೆ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಸತೀಶನ್ ಆಗ್ರಹಿಸಿದ್ದಾರೆ.
ಈ ಆರೋಪಗಳನ್ನು ಎಸ್‌ಎಫ್‌ಐನ ರಾಜ್ಯ ಅಧ್ಯಕ್ಷೆ ಅನುಶ್ರೀ ನಿರಾಕರಿಸಿದ್ದು, ಪ್ರಕರಣದ ಯಾವುದೇ ಆರೋಪಿಗಳು ಪ್ರಸ್ತುತ ಸಂಘಟನೆಯ ಸದಸ್ಯರಲ್ಲ. ಎಸ್‌ಎಫ್‌ಐ ಮೊದಲಿನಿಂದಲೂ ಈ ವಿಷಯದ ಬಗ್ಗೆ ವಿವರವಾದ ತನಿಖೆಯನ್ನು ಕೋರಿತ್ತು ಮತ್ತು ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವಿಲ್ಲ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಆರಂಭದಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದ ಪೊಲೀಸರು ನಂತರ 12 ಮಂದಿ ವಿರುದ್ಧ ಐಪಿಸಿ ಮತ್ತು ಕೇರಳ ರ ರ‍್ಯಾಗಿಂಗ್ ನಿಷೇಧ ಕಾಯ್ದೆಯಡಿ ಆತ್ಮಹತ್ಯೆಗೆ ಪ್ರಚೋದನೆ, ಅಕ್ರಮ ಸಂಯಮ ಮತ್ತು ಸ್ವಯಂ ಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಯಾವುದೇ ರೀತಿಯಲ್ಲಿ ಎಸ್‌ಎಫ್‌ಐಗೆ ಸಂಬಂಧಿಸಿರುವ ಬಗ್ಗೆ ಪ್ರಾಥಮಿಕ ತನಿಖೆಯು ಸೂಚಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಯ ಸಾವಿನ ನಂತರ ವಿಶ್ವವಿದ್ಯಾಲಯವು 12 ಪ್ರಮುಖ ಆರೋಪಿಗಳನ್ನು ಸಂಸ್ಥೆ ಮತ್ತು ಹಾಸ್ಟೆಲ್‌ನಿಂದ ಅಮಾನತುಗೊಳಿಸಿದೆ ಎಂದು ಅದು ಹೇಳಿದೆ.
ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ವೈತಿರಿ ಪೊಲೀಸ್ ಠಾಣೆಗೆ ಹಗಲಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.