ಪಶ್ಚಿಮ ಬಂಗಾಳ ಸಿಎಸ್, ಡಿಜಿಪಿಗೆ ನೋಟಿಸ್: ಎಸ್‌ಸಿ ತಡೆ
ಕೋಲ್ಕತ್ತಾ, ಫೆ 19 - ಬಿಜೆಪಿ ಸಂಸದರು ಸಲ್ಲಿಸಿದ ದೂರಿಗೆ ಪ್ರತಿಕ್ರಿಯೆಯಾಗಿ ಲೋಕಸಭೆಯ ಸಚಿವಾಲಯದ ವಿಶೇಷಾಧಿಕಾರ ಸಮಿತಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಇತರರಿಗೆ ನೀಡಿದ್ದ ನೋಟಿಸ್‌ಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ತೀರ್ಪನ್ನುಸ್ವಾಗತಿಸಿರುವ ತೃಣಮೂಲ ಕಾಂಗ್ರೆಸ್ , ಲೋಕಸಭೆಯ ಸಚಿವಾಲಯ ಪಕ್ಷಪಾತ ವರ್ತನೆಯನ್ನು ತೋರಿಸುತ್ತಿದೆ. ಬಿಜೆಪಿಯ ವಿಸ್ತರಣೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ಸಂಸದ ಮತ್ತು ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಸಲ್ಲಿಸಿದ್ದ ದುರ್ವತನೆ ದೂರಿನ ಮೇರೆಗೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಭಗವತಿ ಪ್ರಸಾದ್ ಗೋಪಾಲಿಕಾ, ಡಿಜಿಪಿ ರಾಜೀವ್ ಕುಮಾರ್ ಮತ್ತು ಇತರರಿಗೆ ಲೋಕಸಭೆ ಸಚಿವಾಲಯದ ವಿಶೇಷಾಧಿಕಾರ ಸಮಿತಿ ನೋಟಿಸ್ ನೀಡಿತ್ತು. ʻಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ. ಬಿಜೆಪಿ ಪ್ರಯತ್ನಪಟ್ಟರೂ ನ್ಯಾಯಾಂಗವನ್ನು ಓಲೈಸಲು ಸಾಧ್ಯವಾಗಿಲ್ಲ ಎಂದು ತೋರುತ್ತಿದೆ. ಸುಕಾಂತ ಮಜುಂದಾರ್ ಮತ್ತು ಬಿಜೆಪಿ ಬೆಂಬಲಿಗರು ಸೆಕ್ಷನ್ 144 ಅನ್ನು ಉಲ್ಲಂಘಿಸಲು ಪ್ರಯತ್ನಿಸಿದರು ಮತ್ತು ಅವರನ್ನು ತಳ್ಳಿದವರು ಮಹಿಳಾ ಬೆಂಬಲಿಗರುʼ ಎಂದು ಟಿಎಂಸಿ ವಕ್ತಾರ ಶಂತನು ಸೇನ್ ಹೇಳಿದ್ದಾರೆ.
ʻಕಳೆದ ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ದೆಹಲಿ ಪೊಲೀಸರು ಕೆಟ್ಟ ವರ್ತನೆ ತೋರಿದರು ಎಂದು ಹೇಳಿದಾಗ ಲೋಕಸಭೆಯ ಸಚಿವಾಲಯ ಎಲ್ಲಿತ್ತು? ಅವರು ಏಕೆ ಮೌನವಾಗಿದ್ದರು? ಇದು ಬಿಜೆಪಿಯ ಸೇಡಿನ ರಾಜಕಾರಣʼ ಎಂದು ಕಿಡಿ ಕಾರಿದರು. ಏತನ್ಮಧ್ಯೆ, ಪಶ್ಚಿಮ ಬಂಗಾಳದ ಬಿಜೆಪಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಕಳೆದ ವಾರ ಪಶ್ಚಿಮ ಬಂಗಾಳದ ಸಂದೇಶಖಲಿಗೆ ತೆರಳಲು ಪೊಲೀಸರು ಅಡ್ಡಿಪಡಿಸಿದಾಗ ಘರ್ಷಣೆ ಸಂಭವಿಸಿದ್ದು, ಮಜುಂದಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ರಾಜ್ಯ ಸರ್ಕಾರದ ಅಧಿಕಾರಿಗಳ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಅವರ ಅಹವಾಲುಗಳನ್ನು ಗಮನಿಸಿ, ನೋಟಿಸ್‌ಗೆ ತಡೆ ನೀಡಿತು.