
ಸಚಿವ ಡಿ. ಸುಧಾಕರ್ ನಿಧನ; 3 ದಿನ ಶೋಕಾಚರಣೆ, ಭದ್ರಾ ಮೇಲ್ದಂಡೆ ಯೋಜನೆಗೆ ಸುಧಾಕರ್ ಹೆಸರಿಡಲು ಚಿಂತನೆ
ಕಳೆದ ತಿಂಗಳು ಸುಧಾಕರ್ ಅವರು ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಶ್ವಾಸಕೋಶದ ಸೋಂಕಿಗೂ ತುತ್ತಾಗಿದ್ದರು. ವಿದೇಶಿ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ದಿವಂಗತ ಸಚಿವ ಡಿ. ಸುಧಾಕರ್ (65) ಅವರ ಹೆಸರಿಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಯೋಜನೆ ಜಾರಿಗಾಗಿ ಸುಧಾಕರ್ ಅವರು ನಿರಂತರವಾಗಿ ಹೋರಾಟ ನಡೆಸಿದ್ದರು. ಅವರ ಸ್ಮರಣಾರ್ಥವಾಗಿ ನೀರಾವರಿ ಯೋಜನೆಗೆ ಡಿ. ಸುಧಾಕರ್ ಹೆಸರಿಡುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಡಿ. ಸುಧಾಕರ್ ನನ್ನ ಆತ್ಮೀಯ ಗೆಳೆಯರಾಗಿದ್ದರು. ಕಳೆದ ತಿಂಗಳು ಸುಧಾಕರ್ ಅವರು ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಶ್ವಾಸಕೋಶದ ಸೋಂಕಿಗೂ ತುತ್ತಾಗಿದ್ದರು. ವಿದೇಶಿ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಭಾವುಕರಾಗಿ ನುಡಿದರು.
ಚಿತ್ರದುರ್ಗದಲ್ಲಿ ನಾಳೆ ರಜೆ ಘೋಷಣೆ
ಯೋಜನಾ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ.ಸುಧಾಕರ್ ಅವರ ನಿಧನದ ಹಿನ್ನೆಲೆಯಲ್ಲಿ ಸೋಮವಾರ (ಮೇ11) ಚಿತ್ರದುರ್ಗ ಜಿಲ್ಲೆಯಾದ್ಯಂತ ಶಾಲಾ-ಕಾಲೇಜು , ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸಚಿವರ ಪಾರ್ಥಿವ ಶರೀರವನ್ನು ಭಾನುವಾರ ಬೆಂಗಳೂರಿನಿಂದ ಹಿರಿಯೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ಕೊಂಡೊಯ್ಯಲಾಗುವುದು. ಸಾರ್ವಜನಿಕರ ದರ್ಶನಕ್ಕೆ ಚಿತ್ರದುರ್ಗದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ನಾಳೆ (ಮೇ 11) ಸಂಜೆ 4 ಗಂಟೆಗೆ ಚಳ್ಳಕೆರೆಯಲ್ಲಿ ಜೈನ ಧರ್ಮದ ವಿಧಿ ವಿಧಾನಗಳ ಪ್ರಕಾರ ಮತ್ತು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಪಕ್ಷನಿಷ್ಠೆಗೆ ಹೆಸರಾಗಿದ್ದ ಸುಧಾಕರ್
ಡಿ.ಸುಧಾಕರ್ ಅವರು ಈ ಹಿಂದೆ ಮುಜರಾಯಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಡಿಲಿಮಿಟೇಶನ್ ಸಂದರ್ಭದಲ್ಲಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟು ಪಕ್ಷದ ಶಿಸ್ತಿಗೆ ಬದ್ಧರಾಗಿದ್ದರು. ರಾಹುಲ್ ಗಾಂಧಿಯವರ 'ಭಾರತ ಜೋಡೋ' ಯಾತ್ರೆ ಸಮಯದಲ್ಲಿ ಚಿತ್ರದುರ್ಗದಲ್ಲಿ ಯಾತ್ರೆ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಯಶಸ್ವಿಗೊಳಿಸಿದ್ದರು. ಅವರ ತ್ಯಾಗ ಮತ್ತು ಪಕ್ಷನಿಷ್ಠೆಯನ್ನು ಕಾಂಗ್ರೆಸ್ ಹೈಕಮಾಂಡ್ ಸ್ಮರಿಸಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

