ರೈತ ಸಾವು: ಏಳು ದಿನಗಳ ನಂತರ ಪ್ರಕರಣ ದಾಖಲಿಸಿಕೊಂಡ ಪಂಜಾಬ್‌ ಪೊಲೀಸರು
x
ದೆಹಲಿ ಚಲೋ ಆಂದೋಲನ

ರೈತ ಸಾವು: ಏಳು ದಿನಗಳ ನಂತರ ಪ್ರಕರಣ ದಾಖಲಿಸಿಕೊಂಡ ಪಂಜಾಬ್‌ ಪೊಲೀಸರು

ರೈತರ ನಿರಂತರ ಪ್ರತಿಭಟನೆಯ ನಂತರ ಪಂಜಾಬ್‌ ಪೊಲೀಸರಿಂದ ಕೊಲೆ ಪ್ರಕರಣ ದಾಖಲು


ದೆಹಲಿ ಚಲೋ ಪ್ರತಿಭಟನೆಯಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಘರ್ಷಣೆಯಲ್ಲಿ ಸಾವನ್ನಪ್ಪಿದ ರೈತನ ಪ್ರಕರಣವನ್ನು ಏಳು ದಿನಗಳ ನಂತರ ಪಂಜಾಬ್‌ ಪೊಲೀಸರು ಕೊಲೆ ಪ್ರಕರಣ ಎಂದು ದಾಖಲಿಸಿಕೊಂಡಿದ್ದಾರೆ. ದೆಹಲಿ ಚಲೋ ಆಂದೋಲನದ ಭಾಗವಾಗಿ ಖಾನೌರಿ ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಘರ್ಷಣೆ ಉಂಟಾಗಿತ್ತು. ಈ ಘರ್ಷಣೆಯಲ್ಲಿ ಯುವ ರೈತ ಶುಭಕರನ್ ಸಿಂಗ್ (21) ಸಾವನ್ನಪ್ಪಿದ್ದರು.

ಫೆಬ್ರುವರಿ 21ರಂದು ಪಂಜಾಬ್-ಹರಿಯಾಣದ ಗಡಿ ಭಾಗದ ಖಾನೌರಿಯಲ್ಲಿ ಭಾಗದಲ್ಲಿ ಈ ಘರ್ಷಣೆ ನಡೆದಿತ್ತು. ಅಲ್ಲದೇ ಘರ್ಷಣೆಯಲ್ಲಿ 12 ಜನ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಕೆಲವು ಪ್ರತಿಭಟನಾ ನಿರತ ರೈತರು ಪೊಲೀಸ್ ಬ್ಯಾರಿಕೇಡ್‌ಗಳತ್ತ ಸಾಗಲು ಪ್ರಯತ್ನಿಸುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.

ಪಂಜಾಬ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 114 (ಅಪರಾಧ ನಡೆದಾಗ ಹಾಜರಿರುವವರು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಶುಭಕರನ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್‌ನಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಎಫ್‌ಐಆರ್‌ ದಾಖಲಾತಿಯ ವಿಚಾರವಾಗಿ ರೈತರು ಮತ್ತು ಪಂಜಾಬ್ ಸರ್ಕಾರದ ನಡುವಿನ ಹಗ್ಗಜಗ್ಗಾಟ ಮುಂದುವರಿದಿತ್ತು. ಮರಣೋತ್ತರ ಪರೀಕ್ಷೆ ನಡೆಸುವ ಮೊದಲು ಎಫ್‌ಐಆರ್‌ ದಾಖಲಿಸಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದರು. ಮೃತದೇಹವನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇದೀಗ ಎಫ್‌ಐಆರ್‌ ದಾಖಲಾಗಿರುವುದರಿಂದ ಶುಭಕರನ್ ಅವರ ಅಂತ್ಯಕ್ರಿಯೆ ಗುರುವಾರ ನಡೆಯುವ ಸಾಧ್ಯತೆ ಇದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಈಚೆಗೆ ಮೃತ ರೈತ ಶುಭಕರನ್ ಅವರ ಸಹೋದರಿಗೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದರು.

Read More
Next Story