
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಮಹಿಳಾ ಮೀಸಲಾತಿ ವಿಧೇಯಕಕ್ಕೆ ಹಿನ್ನಡೆ ಎಂದ ಹೆಚ್‌ಡಿಕೆ, ಬೂಟಾಟಿಕೆ ಬಿಡಿ ಎಂದ ಕಾಂಗ್ರೆಸ್
ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯ ಸರಿಪಡಿಸಲು ಪ್ರಧಾನಿ ಮೋದಿ ದಿಟ್ಟಹೆಜ್ಜೆ ಇರಿಸಿದ್ದರು. ಪುನಃ ಅದೇ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸೇರಿ ಪ್ರಯತ್ನಕ್ಕೆ ತಡೆಯೊಡ್ಡಿವೆ ಎಂದು ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ತಿದ್ದುಪಡಿ ಮಸೂದೆ ಸೋಲುವ ಮೂಲಕ ಲೋಕಸಭೆಯಲ್ಲಿ ಮೂವತ್ತು ವರ್ಷಗಳ ಹಿಂದಿನ ಕರಾಳ ಇತಿಹಾಸ ಮತ್ತೆ ಮರುಕಳಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕಾಂಗ್ರೆಸ್ ಇಂಥ ಪಿಆರ್ ಸ್ಟಂಟ್ಗಳನ್ನು ಬಿಟ್ಟುಬಿಡುವುದು ಉತ್ತಮ ಎಂದು ಹೇಳಿದೆ.
ಶನಿವಾರ(ಏ.18) ದೆಹಲಿಯಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, "1996 ರಂತೆ 2026ರ ರಲ್ಲಿಯೂ ಕರಾಳ ಇತಿಹಾಸ ಮರುಕಳಿಸಿದೆ! ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ ಕೊಂಚವೂ ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮ್ಮೆ ಸಾಕ್ಷಿಯಾಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೂರು ದಶಕಗಳ ಹಿಂದೆಯೇ ಆಗಿತ್ತು ಯತ್ನ
ಈ ಹಿಂದೆ ಪ್ರಧಾನಿ ಹೆಚ್.ಡಿ. ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರ್ಕಾರವು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲು ನೀಡುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು. ಅಂದು ಇದೇ ಕಾಂಗ್ರೆಸ್ ಮತ್ತು ಅದರ ಸಹಚರ ಪಕ್ಷಗಳು ಆ ಪ್ರಯತ್ನವನ್ನು ಸಂಘಟಿತವಾಗಿ ವಿಫಲಗೊಳಿಸಿದ್ದವು. ಅಂದು ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ದಿಟ್ಟಹೆಜ್ಜೆ ಇರಿಸಿದ್ದರು. ಪುನಃ ಅದೇ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸೇರಿ ಪ್ರಧಾನಿ ಮೋದಿ ಪ್ರಯತ್ನಕ್ಕೆ ತಡೆಯೊಡ್ಡಿವೆ ಎಂದರು.
ವಿಧೇಯಕ ಸಾಧನೆ ಶತಸಿದ್ಧ
ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ಕೂಟದ ಶಕ್ತಿಗಳನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದು ಮಾತೃಶಕ್ತಿಗೆ ಆಗಿರುವ ಅಪಮಾನ. ಇದಕ್ಕೆ ಕಾರಣರಾದ ಎಲ್ಲರೂ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ. ರಾಷ್ಟ್ರದ ನಾರಿಶಕ್ತಿಗೆ ನನ್ನ ಮನವಿ ಇಷ್ಟೇ, ನಿಮಗೆ ನಿರಾಶೆ ಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮುಂದೊಂದು ದಿನ ನಿಮಗೆ ಅಗ್ರಮನ್ನಣೆ ಸಿಕ್ಕೇ ಸಿಗುತ್ತದೆ. ಶೇ. 33 ಮಹಿಳಾ ಮೀಸಲು ತಿದ್ದುಪಡಿ ವಿಧೇಯಕ ಗುರಿ ಸಾಧಿಸುವುದು ಶತಸಿದ್ಧ ಎಂದು ಭರವಸೆ ನೀಡಿದ್ದಾರೆ.
ಏನಿದು ತಿದ್ದುಪಡಿ ವಿಧೇಯಕ ?
ಲೋಕಸಭೆಯಲ್ಲಿ ಶುಕ್ರವಾರ(ಏ.18) ಮಹಿಳಾ ಮೀಸಲು ಮಸೂದೆ ತಿದ್ದುಪಡಿ ವಿಧೇಯಕ ಅಂಗೀಕಾರಗೊಳ್ಳಲು ಒಟ್ಟು ಮತ ಚಲಾಯಿಸಿದವರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಅನಿವಾರ್ಯವಾಗಿತ್ತು. ಒಟ್ಟು 528 ಸದಸ್ಯರು ಮತ ಚಲಾಯಿಸಿದ್ದು, ವಿಧೇಯಕ ಅಂಗೀಕಾರವಾಗಲು 360 ಮತಗಳ ಅಗತ್ಯವಿತ್ತು. 298 ಸದಸ್ಯರಿಂದ ಪರವಾಗಿ ಮತಗಳು ಚಲಾವಣೆಯಾಗಿದ್ದರೆ, ವಿರುದ್ಧವಾಗಿ 230 ಮತಗಳು ಚಲಾವಣೆಯಾಗಿದ್ದವು. ತಿದ್ಧುಪಡಿ ವಿಧೇಯಕ ಅಂಗೀಕಾರವಾಗಲು ಅಗ್ಯತ ಮತಗಳು ಬಾರದಿದ್ದ ಕಾರಣ ವಿಧೇಯಕವು ವಿಫಲಗೊಂಡಿತ್ತು.

