
Women Reservation: ಬಹುಮತದ ಕೊರತೆಯಿಂದ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕಕ್ಕೆ ಸೋಲು
ಮಹಿಳೆಯರಿಗೆ ಶೇ. 33ರಷ್ಟು ರಾಜಕೀಯ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮಂಡಿಸಲಾಗಿದ್ದ ಐತಿಹಾಸಿಕ ‘ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕಕ್ಕೆ 360 ಮತಗಳನ್ನು ಪಡೆಯುವಲ್ಲಿ ಕೇಂದ್ರ ವಿಫಲವಾಗಿದೆ.
ದೇಶದ ಸಂಸದೀಯ ಇತಿಹಾಸದಲ್ಲಿ ಮಹಿಳೆಯರಿಗೆ ಶೇ. 33ರಷ್ಟು ರಾಜಕೀಯ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮಂಡಿಸಲಾಗಿದ್ದ ಐತಿಹಾಸಿಕ ‘ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕʼಕ್ಕೆ ಲೋಕಸಭೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಅಗತ್ಯವಿದ್ದ ವಿಶೇಷ ಬಹುಮತ ಪಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವಿಫಲವಾಗಿದೆ. ಸದನದಲ್ಲಿ ಹಾಜರಿದ್ದು ಮತ ಚಲಾಯಿಸಿದವರ ಪೈಕಿ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಸಿಗದ ಕಾರಣ ವಿಧೇಯಕವು ಪತನಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾವನಾತ್ಮಕ ಮನವಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮಹತ್ವದ ಪ್ರಸ್ತಾಪಗಳ ಹೊರತಾಗಿಯೂ, ಸಂಖ್ಯಾಬಲದ ಕೊರತೆಯಿಂದಾಗಿ ವಿಧೇಯಕವು ಕಾನೂನಾಗಲು ವಿಫಲವಾಗಿದೆ.
ಲೋಕಸಭೆಯಲ್ಲಿ ನಡೆದ ಈ ನಿರ್ಣಾಯಕ ಮತದಾನದ ಪ್ರಕ್ರಿಯೆಯು ದೇಶದ ಗಮನ ಸೆಳೆದಿತ್ತು. ಸಂವಿಧಾನಾತ್ಮಕ ತಿದ್ದುಪಡಿ ವಿಧೇಯಕ ಅಂಗೀಕಾರಗೊಳ್ಳಲು ಒಟ್ಟು ಮತ ಚಲಾಯಿಸಿದವರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಅನಿವಾರ್ಯವಾಗಿತ್ತು. ಒಟ್ಟು 528 ಸದಸ್ಯರು ಮತ ಚಲಾಯಿಸಿದ್ದು, 298 ಸದಸ್ಯರಿಂದ ಪರವಾಗಿ ಮತಗಳು ಚಲಾವಣೆಯಾಗಿವೆ. 230ಮತಗಳು ವಿರುದ್ಧವಾಗಿ ಚಲಾವಣೆಯಾಗಿವೆ. ವಿಧೇಯಕ ಅಂಗೀಕಾರವಾಗಲು 360 ಮತಗಳ ಅಗತ್ಯ ಇತ್ತು. ಆದರೆ, ಅಷ್ಟು ಮತಗಳು ಬಾರದಿದ್ದ ಕಾರಣ ವಿಧೇಯಕವು ವಿಫಲಗೊಂಡಿದೆ.
ಸಂವಿಧಾನ ತಿದ್ದುಪಡಿಗೆ ಬೇಕಾದ ಕಡ್ಡಾಯ 360 ಮತಗಳನ್ನು ಪಡೆಯುವಲ್ಲಿ ವಿಫಲವಾಯಿತು. ಕೇವಲ 62 ಮತಗಳ ಕೊರತೆಯಿಂದಾಗಿ ಈ ಐತಿಹಾಸಿಕ ಮಸೂದೆಯು ಸೋಲನ್ನು ಅನುಭವಿಸಿದೆ. 230 ಸದಸ್ಯರು ವಿಧೇಯಕದ ವಿರುದ್ಧ ಮತ ಚಲಾಯಿಸಿರುವುದು ಪ್ರತಿಪಕ್ಷಗಳ ಒಗ್ಗಟ್ಟು ಮತ್ತು ಸರ್ಕಾರದ ಪ್ರಸ್ತಾಪದ ಬಗ್ಗೆ ಅವರಿಗಿದ್ದ ಅಸಮಾಧಾನ ಬಿಂಬಿಸಿದೆ.
ಮತದಾನದ ಪ್ರಕ್ರಿಯೆ ಆರಂಭವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಮೂಲಕ ಎಲ್ಲಾ ಪಕ್ಷಗಳ ಸಂಸದರಿಗೆ ಅತ್ಯಂತ ಸಂವೇದನಾಶೀಲತೆಯಿಂದ ಮತ ಚಲಾಯಿಸುವಂತೆ ಮನವಿ ಮಾಡಿದ್ದರು. ಎಲ್ಲಾ ರಾಜಕೀಯ ಪಕ್ಷಗಳು ದಯವಿಟ್ಟು ಸೂಕ್ತವಾಗಿ ಆಲೋಚಿಸಿ ಮತ್ತು ಪೂರ್ಣ ಸಂವೇದನೆಯೊಂದಿಗೆ ಮಹಿಳಾ ಮೀಸಲಾತಿ ಪರವಾಗಿ ಮತ ಚಲಾಯಿಸಬೇಕು ಎಂದು ಕೋರಿದ್ದರು. ಮಹಿಳೆಯರ ಸಬಲೀಕರಣಕ್ಕಾಗಿ ಪಕ್ಷಭೇದ ಮರೆತು ಒಂದಾಗಬೇಕೆಂಬ ಪ್ರಧಾನಿಗಳ ಕರೆಗೆ ಪ್ರತಿಪಕ್ಷಗಳಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ.
ಲೋಕಸಭೆಯಲ್ಲಿ ವಿಧೇಯಕ ಪತನಗೊಂಡ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ರಾಜ್ಯಸಭೆಯ ಕಲಾಪವನ್ನು ಮುಂದೂಡಲಾಗಿದ್ದು, ಶನಿವಾರ ಬೆಳಿಗ್ಗೆ 11 ಗಂಟೆಗೆ ಮತ್ತೆ ಸಭೆ ಸೇರಲಿದೆ. ಲೋಕಸಭೆಯಲ್ಲಿ ಮಸೂದೆಗೆ ಸೋಲಾಗಿರುವುದರಿಂದ ರಾಜ್ಯಸಭೆಯಲ್ಲಿ ಇದರ ಮುಂದಿನ ಹಾದಿಯನ್ನು ಗಮನಿಸಬೇಖಿದೆ.
ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕದ ಸೋಲು ಸರ್ಕಾರದ ಇಚ್ಛಾಶಕ್ತಿಗೆ ಸವಾಲಾಗಿದೆ. 278 ಸದಸ್ಯರ ಬೆಂಬಲವಿದ್ದರೂ, ಸಂವಿಧಾನ ತಿದ್ದುಪಡಿಗೆ ಬೇಕಾದ ವಿಶೇಷ ಬಹುಮತ ಗಳಿಸಲು ಸಾಧ್ಯವಾಗದಿರುವುದು ಪ್ರತಿಪಕ್ಷಗಳ ಬಲವರ್ಧನೆಯನ್ನು ತೋರಿಸುತ್ತದೆ. ಹಲವು ದಶಕಗಳಿಂದ ಬಾಕಿ ಉಳಿದಿರುವ ಈ ಮಸೂದೆ ಮತ್ತೆ ವಿಳಂಬವಾಗುತ್ತಿರುವುದು ದೇಶದ ಅರ್ಧದಷ್ಟು ಜನಸಂಖ್ಯೆಗೆ ಆಗುತ್ತಿರುವ ಅನ್ಯಾಯವೆಂದೇ ಪರಿಗಣಿಸಲ್ಪಟ್ಟಿದೆ. ಈ ಸೋಲನ್ನು ಪ್ರತಿಪಕ್ಷಗಳು ಸರ್ಕಾರದ ವೈಫಲ್ಯ ಎಂದು ಬಿಂಬಿಸಿದರೆ, ಆಡಳಿತ ಪಕ್ಷವು ಪ್ರತಿಪಕ್ಷಗಳು ಮಹಿಳಾ ವಿರೋಧಿ ಎಂಬ ಪ್ರಚಾರಕ್ಕೆ ಬಳಸಿಕೊಳ್ಳಲಿದೆ.

