ದೀದಿಗೆ ಬಿಗ್‌ ಶಾಕ್‌! ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ
x

ದೀದಿಗೆ ಬಿಗ್‌ ಶಾಕ್‌! ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದೆ. ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ ನೀಡಿದ್ದು, ಕೋಲ್ಕತಾ ಕಚೇರಿಗೆ ಬೀಗ ಬಿದ್ದಿದೆ.


Click the Play button to hear this message in audio format

ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ತೀವ್ರ ಸ್ವರೂಪದ ಆಂತರಿಕ ಬಂಡಾಯ ಸ್ಫೋಟಗೊಂಡಿದೆ. ಶನಿವಾರದಂದು ಪಕ್ಷದ ಬಿಗ್ ವಿಕೆಟ್ ಪತನವಾಗಿದ್ದು, ಟಿಎಂಸಿ ರಾಜ್ಯಾಧ್ಯಕ್ಷೆ ಹಾಗೂ ಮಾಜಿ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ತಮ್ಮ ಎಲ್ಲಾ ಪಕ್ಷದ ಹುದ್ದೆಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಎದುರಾದ ಅತ್ಯಂತ ದೊಡ್ಡ ರಾಜಕೀಯ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅತ್ತ ರಾಜೀನಾಮೆ ಪರ್ವ ನಡೆಯುತ್ತಿದ್ದರೆ, ಇತ್ತ ಕೋಲ್ಕತಾದಲ್ಲಿರುವ ಟಿಎಂಸಿ ರಾಜ್ಯ ಪ್ರಧಾನ ಕಚೇರಿಯನ್ನು ಮಾಲೀಕರು ಒಳಗಿನಿಂದ ಲಾಕ್ ಮಾಡಿ ಬೀಗ ಹಾಕಿದ್ದಾರೆ. ಪ್ರತಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವು ಕಚೇರಿಯನ್ನು ತನ್ನ ವಶಕ್ಕೆ ಪಡೆದಿದೆ ಎಂಬ ವರದಿಗಳ ಬೆನ್ನಲ್ಲೇ ಈ ಹೈಡ್ರಾಮಾ ನಡೆದಿದೆ.

'ದೀದಿ'ಗೆ ಕಳುಹಿಸಿದ ಪತ್ರದಲ್ಲಿ ಏನಿದೆ?

ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ಚಂದ್ರಿಮಾ ಭಟ್ಟಾಚಾರ್ಯ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಜೂನ್ 2026 ರಲ್ಲಿ ತಮಗೆ ನೀಡಲಾಗಿದ್ದ ರಾಜ್ಯಾಧ್ಯಕ್ಷ ಸ್ಥಾನವನ್ನು ತೊರೆಯುತ್ತಿರುವುದಾಗಿ ತಿಳಿಸಿರುವ ಅವರು, ಪಕ್ಷದ ಬ್ಯಾಂಕ್ ಖಾತೆಗಳ ಅಧಿಕೃತ ಸಹಿದಾರ ಹುದ್ದೆಯಿಂದಲೂ ಹಿಂದೆ ಸರಿದಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ಚುನಾವಣಾ ಆಯೋಗದ (ECI) ಮುಂದೆ ಮಮತಾ ಬ್ಯಾನರ್ಜಿ ಅವರ ಅಧಿಕೃತ ಪ್ರತಿನಿಧಿಯಾಗಿದ್ದ ಜವಾಬ್ದಾರಿಯನ್ನೂ ತಕ್ಷಣದಿಂದಲೇ ಹಿಂಪಡೆದಿದ್ದಾರೆ.

"ಟಿಎಂಸಿಯಲ್ಲಿ ಕೆಲಸ ಮಾಡಲು ವಾತಾವರಣವೇ ಇಲ್ಲ!"

ಚಂದ್ರಿಮಾ ಅವರ ರಾಜೀನಾಮೆಯನ್ನು ಪಕ್ಷದಿಂದ ಉಚ್ಚಾಟಿತಗೊಂಡಿರುವ ಟಿಎಂಸಿ ಶಾಸಕ ಸಂದೀಪನ್ ಸ್ವಾಗತಿಸಿದ್ದಾರೆ. " ತೃಣಮೂಲ ಕಾಂಗ್ರೆಸ್‌ನಲ್ಲಿ ಈಗ ಕೆಲಸ ಮಾಡಲು ಯಾವುದೇ ಯೋಗ್ಯವಾದ ವಾತಾವರಣ ಉಳಿದಿಲ್ಲ. ಜೂನ್ 22 ರಂದೇ ನಾವು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದ್ದೆವು. ಸದ್ಯ ಮಮತಾ ಬ್ಯಾನರ್ಜಿ ಬಣದಲ್ಲಿ ಯಾರಿಗೆ ಹುದ್ದೆ ಕೊಟ್ಟರೂ ಅವರು ರಾಜೀನಾಮೆ ನೀಡುತ್ತಿದ್ದಾರೆ, ಪಕ್ಷದ ಪತನ ಅನಿವಾರ್ಯ," ಎಂದು ಲೇವಡಿ ಮಾಡಿದ್ದಾರೆ.

ಟಿಎಂಸಿ ಕಥೆ ಮುಗಿಯಿತು ಎಂದು ಲೇವಡಿ ಮಾಡಿದ ಬಿಜೆಪಿ!

ಟಿಎಂಸಿ ಒಳಗಿನ ಈ ಭೀಕರ ಆಂತರಿಕ ಕಚ್ಚಾಟದ ಕುರಿತು ಭಾರತೀಯ ಜನತಾ ಪಾರ್ಟಿ (BJP) ತೀವ್ರ ವಾಗ್ದಾಳಿ ನಡೆಸಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ಸಂಸದ ಸಮೀಕ್ ಭಟ್ಟಾಚಾರ್ಯ, "ಟಿಎಂಸಿಯಲ್ಲಿ ಯಾರು ಬಂಡಾಯಗಾರರು, ಯಾರು ನಿಷ್ಠಾವಂತರು ಎಂಬುದನ್ನು ಸ್ವತಃ ಮಮತಾ ಬ್ಯಾನರ್ಜಿ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಳೆದ 15 ವರ್ಷಗಳಿಂದ ಟಿಎಂಸಿ ಬಡವರನ್ನು ಮತ್ತು ಶ್ರೀಮಂತರನ್ನು ಲೂಟಿ ಮಾಡಿದೆ. ಕಲ್ಯಾಣ ನಿಧಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಟಿಎಂಸಿ ಪಕ್ಷ ಈಗ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಎಂಬುದು ಇವತ್ತಿನ ಬೆಳವಣಿಗೆಯಿಂದ ಸಾಬೀತಾಗಿದೆ" ಎಂದಿದ್ದಾರೆ

ಸದ್ಯ ಟಿಎಂಸಿಯ ಮಮತಾ ಬ್ಯಾನರ್ಜಿ ಅವರ ನಿಷ್ಠಾವಂತ ಬಣ ಮತ್ತು ರಿತಬ್ರತಾ ಬ್ಯಾನರ್ಜಿ ಅವರ ಬಂಡಾಯ ಬಣದ ನಡುವೆ ಪಕ್ಷದ ಆಸ್ತಿ ಮತ್ತು ಸಂಘಟನೆಯ ಮೇಲಿನ ಹಿಡಿತ ಸಾಧಿಸಲು ತೀವ್ರ ಪೈಪೋಟಿ ಹಾಗೂ ರಾಜಕೀಯ ಸಂಘರ್ಷ ಮುಂದುವರಿದಿದೆ.

Read More
Next Story