
ಸಂಸದ ಅಭಿಷೇಕ್ ಬ್ಯಾನರ್ಜಿ
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೈಡ್ರಾಮಾ: ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ಜಂಟಿ ಪೊಲೀಸ್ ದಾಳಿ!
ಪಶ್ಚಿಮ ಮೇದಿನಿಪುರ ಜಿಲ್ಲೆಯ ಸಾಲ್ಬೋನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಹಠಾತ್ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಭಾರಿ ಹೈಡ್ರಾಮಾವೊಂದು ನಡೆದಿದೆ. ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತ್ತಾದ ಕಾಲಿಘಾಟ್ ನಿವಾಸದ ಮೇಲೆ ಕೇಂದ್ರ ಪಡೆಗಳ ಭದ್ರತೆಯೊಂದಿಗೆ ಪೊಲೀಸರ ಬೃಹತ್ ತಂಡ ಜಂಟಿ ದಾಳಿ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದೆ.
ಪಶ್ಚಿಮ ಮೇದಿನಿಪುರ ಜಿಲ್ಲೆಯ ಸಾಲ್ಬೋನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಹಠಾತ್ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂಜಾನೆ 3 ಗಂಟೆಗೆ ಮುತ್ತಿಗೆ!
ಸ್ಥಳೀಯ ಮೂಲಗಳ ಪ್ರಕಾರ, ಪಶ್ಚಿಮ ಮೇದಿನಿಪುರದ ಸಾಲ್ಬೋನಿ ಮತ್ತು ಕೋಲ್ಕತ್ತಾ ಪೊಲೀಸರನ್ನೊಳಗೊಂಡ ಜಂಟಿ ಅಧಿಕಾರಿಗಳ ತಂಡ ಮುಂಜಾನೆ 3 ಗಂಟೆಯ ಸುಮಾರಿಗೆ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪಟುವಾಪರಾ ನಿವಾಸಕ್ಕೆ ಆಗಮಿಸಿತು. ಈ ವೇಳೆ ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿ ಇಡೀ ಆವರಣವನ್ನು ಸುತ್ತುವರಿದು ಬಿಗಿ ಭದ್ರತೆ ಕಲ್ಪಿಸಿದರೆ, ಪೊಲೀಸ್ ಅಧಿಕಾರಿಗಳು ಮನೆ ಪ್ರವೇಶಿಸಿದ್ದಾರೆ.
ಬೀಗ ಮುರಿದು ಒಳನುಗ್ಗಿದ ಪೊಲೀಸರು
ಪೊಲೀಸರು ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಬೀಗ ಮುರಿದು ಅಕ್ರಮವಾಗಿ ಒಳನುಗ್ಗಿದ್ದಾರೆ ಎಂದು ಟಿಎಂಸಿ ತೀವ್ರವಾಗಿ ಆರೋಪಿಸಿದೆ. ದಾಳಿಯ ಬಳಿಕ ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು, "ಅವರು ಮನೆಯ ಬೀಗವನ್ನು ಒಡೆದು, ಒಳಗೆ ನುಗ್ಗಿ ಪ್ರತಿಯೊಂದು ಕೋಣೆಯನ್ನೂ ಜಾಲಾಡಿದ್ದಾರೆ," ಎಂದು ಆಕ್ರೋಶ ಹೊರಹಾಕಿದ್ದಾರೆ. ಸರಿಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಈ ತಪಾಸಣಾ ಕಾರ್ಯಾಚರಣೆ ಮುಂದುವರಿದಿತ್ತು.
ಸ್ಥಳಕ್ಕೆ ಧಾವಿಸಿದ ಮಮತಾ ಬ್ಯಾನರ್ಜಿ
ಬೆಳ್ಳಂಬೆಳಗ್ಗೆ ನಡೆದ ಈ ನಾಟಕೀಯ ಬೆಳವಣಿಗೆಯ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತಕ್ಷಣವೇ ಅಭಿಷೇಕ್ ಅವರ ನಿವಾಸಕ್ಕೆ ಧಾವಿಸಿದರು. ಇನ್ನು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಹಲವು ಅಧಿಕಾರಿಗಳು ಮನೆಯಿಂದ ಹೊರಬಂದು ಚರ್ಚೆ ನಡೆಸಿ, ಬಳಿಕ ಮತ್ತೆ ಒಳಗೆ ಹೋಗುತ್ತಿದ್ದ ದೃಶ್ಯಗಳು ಕಂಡುಬಂದವು.
ತನಿಖಾ ಸಂಸ್ಥೆಗಳಿಂದ ಸಮನ್ಸ್ ಜಾರಿ
ರಾಜ್ಯ ವಿಧಾನಸಭೆಗೆ ಸಂಬಂಧಿಸಿದ ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಐಡಿ ಅಧಿಕಾರಿಗಳು ಅಭಿಷೇಕ್ ಬ್ಯಾನರ್ಜಿ ಅವರನ್ನು ಸುದೀರ್ಘವಾಗಿ ಪ್ರಶ್ನಿಸಿದ ಕೇವಲ ಎರಡು ದಿನಗಳಲ್ಲೇ ಈ ದಾಳಿ ನಡೆದಿದೆ. ಸಾಲದಕ್ಕೆ ಹಲವು ತನಿಖಾ ಸಂಸ್ಥೆಗಳು ಅವರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡಿರುವ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಆದಾಗ್ಯೂ, ಈ ದಾಳಿಯನ್ನು ಯಾವ ನಿರ್ದಿಷ್ಟ ದೂರಿಗೆ ಸಂಬಂಧಿಸಿದಂತೆ ನಡೆಸಲಾಗಿದೆ ಎಂಬುದನ್ನು ಅಧಿಕಾರಿಗಳು ತಕ್ಷಣಕ್ಕೆ ಸ್ಪಷ್ಟಪಡಿಸಿಲ್ಲ.

