ಸಂಸದೆ ಮಹುವಾ ಮೊಯಿತ್ರಾಗೆ ಬೆದರಿಕೆ: ಲೋಕಸಭಾ ಸ್ಪೀಕರ್‌ಗೆ ದೂರು
x

ಸಂಸದೆ ಮಹುವಾ ಮೊಯಿತ್ರಾಗೆ ಬೆದರಿಕೆ: ಲೋಕಸಭಾ ಸ್ಪೀಕರ್‌ಗೆ ದೂರು

ಶುಕ್ರವಾರ ರಾತ್ರಿ ಗುಂಪೊಂದು ಸರ್ಕ್ಯೂಟ್ ಹೌಸ್‌ನ ಹೊರಗೆ ಜಮಾಯಿಸಿ, ಸಂಸದೆ ಮಹುವಾ ಮೊಯಿತ್ರಾ ಅವರು ಕೊಠಡಿ ಖಾಲಿ ಮಾಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದೆ ಎಂದು ಆರೋಪಿಸಲಾಗಿದೆ.


ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದ ಸರ್ಕಾರಿ ಒಡೆತನದ ಸರ್ಕ್ಯೂಟ್ ಹೌಸ್‌ನಿಂದ(ಅತಿಥಿಗೃಹ) ಕೊಠಡಿ ಖಾಲಿ ಮಾಡುವಂತೆ ಸೂಚಿನೆ ಬಂದಿರುವ ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ದೇಶದ ಮಹಿಳಾ ಸಂಸದರ ಘನತೆ ಮತ್ತು ಸುರಕ್ಷತೆಯನ್ನು ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.

ಶುಕ್ರವಾರ ರಾತ್ರಿ ಗುಂಪೊಂದು ಸರ್ಕ್ಯೂಟ್ ಹೌಸ್‌ನ ಹೊರಗೆ ಜಮಾಯಿಸಿ, ಮಹುವಾ ಮೊಯಿತ್ರಾ ಅವರು ಕೊಠಡಿ ಖಾಲಿ ಮಾಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದೆ ಎಂದು ಆರೋಪಿಸಲಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲಾಡಳಿತವು ಆರಂಭದಲ್ಲಿ ಸರ್ಕಾರಿ ಒಡೆತನದ ಸರ್ಕ್ಯೂಟ್ ಹೌಸ್‌ನಲ್ಲಿ ಕೊಠಡಿ ನೀಡಿತ್ತು. ಆದರೆ ರಾತ್ರಿ ವೇಳೆ ಅದನ್ನು ಖಾಲಿ ಮಾಡುವಂತೆ ಸೂಚನೆ ಬಂದಿದೆ ಎಂದು ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ. ತಾವು ಕೊಠಡಿ ಖಾಲಿ ಮಾಡಲು ನಿರಾಕರಿಸಿದ ಬಳಿಕ ಹೊರಗಿದ್ದ ಗುಂಪೊಂದು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿ ತಮಗೆ ಬೆದರಿಕೆವೊಡ್ಡಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾತ್ರಿ 9.47ಕ್ಕೆ ಕೊಠಡಿ ಖಾಲಿ ಮಾಡುವಂತೆ ಕರೆ

ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಹುವಾ ಮೊಯಿತ್ರಾ, ತಾವು ಹಾಲಿ ಚುನಾಯಿತ ಸಂಸದೆಯಾಗಿರುವುದರಿಂದ ಸರ್ಕಾರಿ ಸೌಲಭ್ಯ ಬಳಸುವ ಹಕ್ಕು ಹೊಂದಿರುವುದಾಗಿ ಹೇಳಿದ್ದಾರೆ. ತಾವು ಸಂಜೆ ಸುಮಾರು 6.15ಕ್ಕೆ ಸರ್ಕ್ಯೂಟ್ ಹೌಸ್‌ಗೆ ತಲುಪಿದ್ದೆ. ಆದರೆ ರಾತ್ರಿ 9.47ಕ್ಕೆ ನಾಡಿಯಾ ಹೆಚ್ಚುವರಿ ಜಿಲ್ಲಾಧಿಕಾರಿ ಕರೆ ಮಾಡಿ ಸರ್ಕ್ಯೂಟ್ ಹೌಸ್ ಖಾಲಿ ಮಾಡುವಂತೆ ಸೂಚಿಸಿದರು. ಬಳಿಕ ರಾತ್ರಿ 10.52ಕ್ಕೆ ವಾಟ್ಸ್ಆ್ಯಪ್ ಮೂಲಕ ಆದೇಶದ ಪ್ರತಿ ಕಳುಹಿಸಲಾಗಿತ್ತು ಎಂದು ಮೊಯಿತ್ರಾ ಹೇಳಿದ್ದಾರೆ.

ಮಹಿಳಾ ಸಂಸದರ ಸುರಕ್ಷತೆ ಬಗ್ಗೆ ಪ್ರಶ್ನೆ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, ಒಬ್ಬ ಮಹಿಳಾ ಸಂಸದೆ ಒಂಟಿಯಾಗಿ ತಂಗಿರುವ ಸಂದರ್ಭದಲ್ಲಿ ರಾತ್ರಿ 9.47ಕ್ಕೆ ತಮಗೆ ನೀಡಲಾಗಿದ್ದ ವಸತಿ ಖಾಲಿ ಮಾಡುವಂತೆ ಸೂಚಿಸಿರುವುದು ತಮ್ಮ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.

ಇದು ಮಹಿಳೆಯರಿಗೆ ಆಡಳಿತ ನೀಡುತ್ತಿರುವ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಆರೋಪಿಸಿದ್ದಾರೆ. ಈ ವಿಚಾರವನ್ನು ತುರ್ತಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ಮನವಿ ಮಾಡಿದ ಅವರು, ದೇಶದ ಮಹಿಳಾ ಸಂಸದರ ಘನತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಮಾದರಿಯಾಗುವಂತಹ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಮಹಿಳಾ ಮೀಸಲಾತಿ ಕುರಿತು ಮಹುವಾ ಮೊಯಿತ್ರಾ ಪ್ರಶ್ನೆ

ಹೆಚ್ಚಿನ ಮಹಿಳೆಯರನ್ನು ಸಂಸತ್ತಿಗೆ ತರಲು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಈಗಾಗಲೇ ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಲೋಕಸಭೆಗೆ ಪ್ರವೇಶಿಸಿರುವ 74 ಮಹಿಳಾ ಸಂಸದರ ಸುರಕ್ಷತೆ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಇಂತಹ ಮಸೂದೆ ಕುರಿತು ಮಾತನಾಡುವುದು ಹಾಸ್ಯಾಸ್ಪದವಾಗುತ್ತದೆ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಈ ಘಟನೆಯ ಕುರಿತು ಮಹುವಾ ಮೊಯಿತ್ರಾ ಅವರು ಇಂಟರ್-ಪಾರ್ಲಿಮೆಂಟರಿ ಯೂನಿಯನ್ (IPU) ಗೂ ಮಾಹಿತಿ ನೀಡಿದ್ದಾರೆ.

Read More
Next Story