BJP Government to Take Oath on May 9, Coinciding with Rabindranath Tagores Birth Anniversary
x

ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ

ಬಂಗಾಳದಲ್ಲಿ 'ಕಮಲ' ಪರ್ವ ಆರಂಭ: ರವೀಂದ್ರನಾಥ ಟ್ಯಾಗೋರ್ ಜನ್ಮದಿನದಂದೇ ಬಿಜೆಪಿಯ ನೂತನ ಸರ್ಕಾರ ಪದಗ್ರಹಣ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ರ್ಯಾಲಿಗಳಲ್ಲಿ ಟ್ಯಾಗೋರ್ ಅವರ ಉಲ್ಲೇಖ ಮಾಡುತ್ತಾ, "ಮನಸ್ಸು ಭಯವಿಲ್ಲದ ಮತ್ತು ತಲೆ ಎತ್ತಿ ನಿಲ್ಲುವ ಬಂಗಾಳವನ್ನು ನಿರ್ಮಿಸುವುದೇ ನಮ್ಮ ಗುರಿ" ಎಂದು ಹೇಳಿದ್ದರು.


Click the Play button to hear this message in audio format

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ 2026ರ ಚುನಾವಣೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ (TMC) 15 ವರ್ಷಗಳ ಆಳ್ವಿಕೆಯನ್ನು ಅಂತ್ಯಗೊಳಿಸಿರುವ ಬಿಜೆಪಿ, 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಪಡೆದಿದೆ. ಈ ಐತಿಹಾಸಿಕ ಗೆಲುವಿನ ನಂತರ ಸರ್ಕಾರ ರಚನೆಯ ಪ್ರಕ್ರಿಯೆ ಚುರುಕುಗೊಂಡಿದ್ದು, ಮೇ 9ರಂದು ಕೋಲ್ಕತ್ತಾದಲ್ಲಿ ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಖಚಿತಪಡಿಸಿದ್ದಾರೆ.

ಮೇ 9 ಬಂಗಾಳಿ ಕ್ಯಾಲೆಂಡರ್ ಪ್ರಕಾರ 'ಪೊಚೀಶೆ ಬೋಯಿಶಾಖ್' ಅಂದರೆ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ. ಬಂಗಾಳಿಗಳ ಪಾಲಿಗೆ ಅತ್ಯಂತ ಪವಿತ್ರ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ದಿನವಾದ ಅಂದೇ ಪದಗ್ರಹಣ ಮಾಡುವ ಮೂಲಕ, ಬಿಜೆಪಿ ತಾನು ಕೇವಲ ರಾಜಕೀಯ ಶಕ್ತಿಯಲ್ಲ, ಬಂಗಾಳದ ಅಸ್ಮಿತೆಯ ಭಾಗವೂ ಹೌದು ಎಂಬ ಸಂದೇಶ ನೀಡಲು ಹೊರಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ರ್ಯಾಲಿಗಳಲ್ಲಿ ಟ್ಯಾಗೋರ್ ಅವರ ಉಲ್ಲೇಖ ಮಾಡುತ್ತಾ, "ಮನಸ್ಸು ಭಯವಿಲ್ಲದ ಮತ್ತು ತಲೆ ಎತ್ತಿ ನಿಲ್ಲುವ ಬಂಗಾಳವನ್ನು ನಿರ್ಮಿಸುವುದೇ ನಮ್ಮ ಗುರಿ" ಎಂದು ಹೇಳಿದ್ದರು. ಅದರಂತೆ ಈಗ ಟ್ಯಾಗೋರ್ ಜಯಂತಿಯಂದೇ ಹೊಸ ಆಡಳಿತಕ್ಕೆ ಮುನ್ನುಡಿ ಬರೆಯಲಾಗುತ್ತಿದೆ.

ಟಿಎಂಸಿ ಭಾರೀ ಕುಸಿತ

ಚುನಾವಣಾ ಫಲಿತಾಂಶದ ಪ್ರಕಾರ, ಬಿಜೆಪಿ 206 ಸ್ಥಾನಗಳನ್ನು ಗೆದ್ದರೆ, ಟಿಎಂಸಿ ಕೇವಲ 81 ಸ್ಥಾನಗಳಿಗೆ ಕುಸಿದಿದೆ. ಸ್ವತಃ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಲ್ಲಿ ಸುುವೇಂದು ಅಧಿಕಾರಿ ವಿರುದ್ಧ 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. ಈ ಫಲಿತಾಂಶವು ಬಂಗಾಳದಲ್ಲಿ 'ಡಬಲ್ ಎಂಜಿನ್' ಸರ್ಕಾರದ ನಿರೀಕ್ಷೆಯಲ್ಲಿದ್ದ ಮತದಾರರ ಒಲವನ್ನು ಪ್ರತಿಬಿಂಬಿಸಿದೆ. ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಈಗ ಮನೆಮಾಡಿದೆ.

ಮೇ 9ರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ರಾಷ್ಟ್ರಮಟ್ಟದ ನಾಯಕರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಮೂಲಕ ಬಂಗಾಳದಲ್ಲಿ ಕೇಸರಿ ಪಡೆಯ ಅಧಿಕಾರಾವಧಿ ಅಧಿಕೃತವಾಗಿ ಆರಂಭವಾಗಲಿದ್ದು, ರಾಜ್ಯದ ಅಭಿವೃದ್ಧಿ ಮತ್ತು ರಾಜಕೀಯ ಸಂಸ್ಕೃತಿಯಲ್ಲಿ ಹೊಸ ಬದಲಾವಣೆ ತರುವುದಾಗಿ ಬಿಜೆಪಿ ಭರವಸೆ ನೀಡಿದೆ. ಸದ್ಯಕ್ಕೆ ಮಮತಾ ಬ್ಯಾನರ್ಜಿ ಅವರು ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಶೀಘ್ರದಲ್ಲೇ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಶಿಸ್ತಿನಿಂದ ವಿಜಯೋತ್ಸವ ಆಚರಿಸುವಂತೆ ಮತ್ತು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಪಕ್ಷದ ನಾಯಕರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

Read More
Next Story