We will bring Tata back to Bengal, Singur mistake will not be repeated: CM Suvendu promises
x

ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ

ಬಂಗಾಳಕ್ಕೆ ಟಾಟಾ ಮರಳಿ ತರುತ್ತೇವೆ, ಸಿಂಗೂರ್ ತಪ್ಪು ಮರುಕಳಿಸಲ್ಲ: ಸಿಎಂ ಸುವೇಂದು ಭರವಸೆ

ಎಡರಂಗದ ಅವಧಿಯಲ್ಲಿ ಸಿಂಗೂರ್ ಮತ್ತು ನಂದಿಗ್ರಾಮದಲ್ಲಿ ನಡೆದಂತೆ ಬಲವಂತದ ಭೂಸ್ವಾಧೀನವನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಸಿಎಂ ಸುವೆಂದು ಅಧಿಕಾರಿ ತಿಳಿಸಿದರು.


Click the Play button to hear this message in audio format

ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾ ಕ್ರಾಂತಿ ಹಾಗೂ ಉದ್ಯೋಗ ಸೃಷ್ಟಿಗೆ ತಮ್ಮ ಬದ್ಧವಾಗಿದ್ದು, ಸರ್ಕಾರವು ಟಾಟಾ ಗ್ರೂಪ್ ಅನ್ನು ಮತ್ತೆ ರಾಜ್ಯಕ್ಕೆ ಮರಳಿ ಕರೆತರಲಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಭರವಸೆ ನೀಡಿದರು.ಇದೇ ವೇಳೆ ಹಿಂದಿನ ಎಡರಂಗ ಮತ್ತು ತೃಣಮೂಲ ಕಾಂಗ್ರೆಸ್ (TMC) ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ಕೈಗಾರಿಕೀಕರಣದ ಹೆಸರಿನಲ್ಲಿ ಹಿಂದಿನ ಆಡಳಿತಗಳು ಕೇವಲ "ಫೋಟೋ ಸೆಷನ್‌" ಮತ್ತು ಸುಳ್ಳು ಭರವಸೆಗಳಿಗಷ್ಟೇ ಸೀಮಿತವಾಗಿದ್ದವು ಎಂದು ಆರೋಪಿಸಿದ್ದಾರೆ.

ಸಿಂಗೂರ್ ತಪ್ಪನ್ನು ಪುನರಾವರ್ತಿಸಲ್ಲ!

2008ರಲ್ಲಿ ನಡೆದ ತೀವ್ರ ಭೂಸ್ವಾಧೀನ ವಿವಾದದ ಬಳಿಕ ಟಾಟಾ ಮೋಟಾರ್ಸ್‌ನ ʼನ್ಯಾನೋʼ ಯೋಜನೆಯು ಹೂಗ್ಲಿ ಜಿಲ್ಲೆಯ ಸಿಂಗೂರ್‌ನಿಂದ ಗುಜರಾತ್‌ಗೆ ಸ್ಥಳಾಂತರಗೊಂಡಿದ್ದನ್ನು ಈ ವೇಳೆ ನೆನಪಿಸಿಕೊಂಡರು."ನಾವು ಬಂಗಾಳಕ್ಕೆ ಟಾಟಾ ಸಂಸ್ಥೆಯನ್ನು ಮರಳಿ ತರುತ್ತೇವೆ. ಸಿಂಗೂರ್ ಮತ್ತು ನಂದಿಗ್ರಾಮ್ ಆಂದೋಲನಗಳಿಗೆ ಕಾರಣವಾದ ಹಳೆಯ ತಪ್ಪುಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಪುನರಾವರ್ತಿಸುವುದಿಲ್ಲ. ರೈತರ ಹಕ್ಕುಗಳನ್ನು ರಕ್ಷಿಸುತ್ತಲೇ, ಹೂಡಿಕೆಯನ್ನು ಆಕರ್ಷಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ." ಎಂದು ತಿಳಿಸಿದ್ದಾರೆ.

ಟಿಎಂಸಿ ವಿರುದ್ಧ ತೀಕ್ಷ್ಣ ವಾಗ್ದಾಳಿ

ಮಮತಾ ಬ್ಯಾನರ್ಜಿ ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸುವೇಂದು ಅಧಿಕಾರಿ, "ಟಿಎಂಸಿ ಸರ್ಕಾರವು ಯಾವುದೇ ಗಟ್ಟಿ ಫಲಿತಾಂಶ ನೀಡದೇ, ಬರೀ ಕೈಗಾರಿಕಾ ಪುನರುಜ್ಜೀವನದ ಸುಳ್ಳು ಹಕ್ಕುಗಳನ್ನು ಸಾಧಿಸುತ್ತಾ ಹಲವಾರು ವರ್ಷಗಳನ್ನು ವ್ಯರ್ಥ ಮಾಡಿದೆ. ಅವರಂತೆ ನಾವು ಕೇವಲ ಪ್ರಚಾರಕ್ಕಾಗಿ ಫೋಟೋ ಸೆಷನ್ ಮಾಡುವುದಿಲ್ಲ," ಎಂದರು.

ಸರ್ಕಾರದ ಸಮತೋಲಿತ ಭೂನೀತಿ

"ಸರ್ಕಾರವು ಹೊಸ ಭೂಸ್ವಾಧೀನ ನೀತಿಯ ಚೌಕಟ್ಟಿನ ಮೇಲೆ ಕೆಲಸ ಮಾಡುತ್ತಿದೆ. ರೈತರ ಹಿತಬಲಿ ನೀಡಿ ಕೈಗಾರಿಕಾ ಅಭಿವೃದ್ಧಿ ಮಾಡಲ್ಲ. ಎಡರಂಗದ ಅವಧಿಯಲ್ಲಿ ಸಿಂಗೂರ್ ಮತ್ತು ನಂದಿಗ್ರಾಮದಲ್ಲಿ ನಡೆದಂತೆ ಬಲವಂತದ ಭೂಸ್ವಾಧೀನವನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಅಭಿವೃದ್ಧಿ ಮತ್ತು ಸಾರ್ವಜನಿಕರ ಒಪ್ಪಿಗೆ ಎರಡನ್ನೂ ಒಳಗೊಂಡ ಸಮತೋಲಿತ ವಿಧಾನವನ್ನು ನಮ್ಮ ಸರ್ಕಾರ ಅನುಸರಿಸಲಿದೆ," ಎಂದು ಸ್ಪಷ್ಟಪಡಿಸಿದರು.

ಐತಿಹಾಸಿಕ ಹಿನ್ನೆಲೆ ಏನು ?

ಸಿಂಗೂರ್‌ನಲ್ಲಿ ನಡೆದ ಟಾಟಾ ಮೋಟಾರ್ಸ್ ವಿವಾದವು ಬಂಗಾಳದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ತಿರುವು ನೀಡಿತ್ತು. ಅಂದು ಭೂಸ್ವಾಧೀನದ ವಿರುದ್ಧ ನಡೆದ ಆಂದೋಲನದ ಅಲೆಯನ್ನು ಬಳಸಿಕೊಂಡೇ 2011ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಎಡರಂಗದ 34 ವರ್ಷಗಳ ಸುದೀರ್ಘ ಆಡಳಿತವನ್ನು ಕೊನೆಗಾಣಿಸಿ ಅಧಿಕಾರಕ್ಕೆ ಬಂದಿತ್ತು.

Read More
Next Story