ಬಂಗಾಳದಲ್ಲಿ 28 ಕೋಟಿ ರೂ. ನಗದು, 15 ಕೆಜಿ ಚಿನ್ನ ಜಪ್ತಿ: ನೋಟು ಎಣಿಕೆ ಯಂತ್ರಗಳೇ ಫೇಲ್, TMC ನಾಯಕ ಅರೆಸ್ಟ್‌
x

ಬಂಗಾಳದಲ್ಲಿ 28 ಕೋಟಿ ರೂ. ನಗದು, 15 ಕೆಜಿ ಚಿನ್ನ ಜಪ್ತಿ: ನೋಟು ಎಣಿಕೆ ಯಂತ್ರಗಳೇ ಫೇಲ್, TMC ನಾಯಕ ಅರೆಸ್ಟ್‌

ಬುಧವಾರ ರಾತ್ರಿ ಆರಂಭವಾದ ಪೊಲೀಸ್ ದಾಳಿಯಲ್ಲಿ ಮೊದಲು 5.5 ಕೋಟಿ ರೂ. ನಗದು ಪತ್ತೆಯಾಗಿತ್ತು. ಆದರೆ ಗುರುವಾರ ಬೆಳಗಾಗುವಷ್ಟರಲ್ಲಿ ನಗದು ಮೊತ್ತ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ 28 ಕೋಟಿ ರೂ. ತಲುಪಿದೆ.


ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ ಪೊಲೀಸರು ನಡೆಸಿದ ಬೃಹತ್ ರೇಡ್‌ನಲ್ಲಿ ತೃಣಮೂಲ ಕಾಂಗ್ರೆಸ್ (TMC) ನಾಯಕನ ಆಪ್ತನ ಸಂಬಂಧಿಯೊಬ್ಬನ ಮನೆಯಲ್ಲಿ ಭಾರೀ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ. ಎಷ್ಟು ಪ್ರಮಾಣದ ಹಣ ಸಿಕ್ಕಿದೆಯೆಂದರೆ, ಅದನ್ನು ಎಣಿಸಲು ತಂದಿದ್ದ 5 ನೋಟು ಎಣಿಕೆ ಯಂತ್ರಗಳೇ ಕೆಟ್ಟುಹೋಗಿವೆ. ಬಿರ್ಭೂಮ್‌ನ ಮಿನಾರ್ ಮಂಡಲ್ ಎಂಬುವವರ ಮನೆಯಿಂದ ಬರೋಬ್ಬರಿ 28 ಕೋಟಿ ರೂ. ನಗದು ಹಾಗೂ ಮಾರುಕಟ್ಟೆಯಲ್ಲಿ 21 ಕೋಟಿ ರೂ. ಮೌಲ್ಯದ 15 ಕೆಜಿ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬಸ್ ಡ್ರೈವರ್ ಮನೆಯಲ್ಲಿ ಕೋಟಿ ಕೋಟಿ ಹಣ

ದಾಳಿಗೊಳಗಾದ ಮಿನಾರ್ ಮಂಡಲ್ ಹಿಂದೆ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ನಂತರ ಕಲ್ಲು ಗಣಿಗಾರಿಕೆ ವ್ಯಾಪಾರಕ್ಕೆ ಇಳಿದಿದ್ದ. ಈತ, ಇತ್ತೀಚೆಗಷ್ಟೇ ರಿತಬ್ರತ ಬ್ಯಾನರ್ಜಿ ನೇತೃತ್ವದ ರೆಬೆಲ್ ಬಣಕ್ಕೆ ಸೇರಿದ ಮಾಜಿ ಟಿಎಂಸಿ ನಾಯಕ ಅನುಬ್ರತ ಮಂಡಲ್ ಅವರ ಆಪ್ತನಾದ ಕಲ್ಲು ಉದ್ಯಮಿ ತುಳು ಮಂಡಲ್ ಎಂಬುವವರ ಸಂಬಂಧಿಯಾಗಿದ್ದಾನೆ.

ಬುಧವಾರ ರಾತ್ರಿ ಆರಂಭವಾದ ಪೊಲೀಸ್ ದಾಳಿಯಲ್ಲಿ ಮೊದಲು 5.5 ಕೋಟಿ ರೂ. ನಗದು ಪತ್ತೆಯಾಗಿತ್ತು. ಆದರೆ ಗುರುವಾರ ಬೆಳಗಾಗುವಷ್ಟರಲ್ಲಿ ನಗದು ಮೊತ್ತ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ 28 ಕೋಟಿ ರೂ. ತಲುಪಿದೆ. ಬಂಧಿತ ಮಿನಾರ್ ಮಂಡಲ್, ಈ ಅಕ್ರಮ ಹಣ ಮತ್ತು ಚಿನ್ನವೆಲ್ಲವೂ ತುಳು ಮಂಡಲ್ ಮತ್ತು ಆತನ ಅಕ್ರಮ ಸಿಂಡಿಕೇಟ್‌ಗೆ ಸೇರಿದ್ದು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಎಕ್ಸ್‌ನಲ್ಲಿ ಪೋಸ್ಟ್‌

ದಾಳಿಯ ಕುರಿತು ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂಧು ಅಧಿಕಾರಿ, "ಅಕ್ರಮ ಮರಳು ಮಾಫಿಯಾ ಮತ್ತು ಕಲ್ಲು ಗಣಿ ಮಾಫಿಯಾ ತುಳು ಮಂಡಲ್ ಅಲಿಯಾಸ್ ಮೊಹಮ್ಮದ್ ನಜೀಬುದ್ದೀನ್ ಅಡಗುದಾಣದ ಮೇಲೆ ಮಹಮ್ಮದ್ ಬಜಾರ್ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರದ 'ಝೀರೋ ಟಾಲರೆನ್ಸ್' ನೀತಿ ಮುಂದುವರಿಯಲಿದೆ. ಸಾರ್ವಜನಿಕರ ಆಸ್ತಿಯನ್ನು ಲೂಟಿ ಮಾಡಿದ ಯಾರನ್ನೂ ಬಿಡುವುದಿಲ್ಲ" ಎಂದು ಎಚ್ಚರಿಸಿದ್ದಾರೆ.

100 ಕೋಟಿ ರೂ. ವೆಚ್ಚದ ಮದುವೆ

ಈ ಅಕ್ರಮ ಆಸ್ತಿ ಪತ್ತೆಯಾದ ಬೆನ್ನಲ್ಲೇ 2024 ರಲ್ಲಿ ತುಳು ಮಂಡಲ್ ತನ್ನ ಮಗಳ ಮದುವೆಗೆ ಮಾಡಿದ ಅದ್ಧೂರಿ ವೆಚ್ಚದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬಿರ್ಭೂಮ್‌ನ ಸೂರಿ ಎಂಬಲ್ಲಿ ನಡೆದ ಈ ಮದುವೆಗೆ ಬರೋಬ್ಬರಿ 100 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈ ಮದುವೆಯಲ್ಲಿ ಬಾಲಿವುಡ್ ನಟರಾದ ಅರ್ಬಾಜ್ ಖಾನ್, ಝರೀನ್ ಖಾನ್ ಸೇರಿದಂತೆ ಬೆಂಗಾಲಿ ಚಿತ್ರರಂಗದ ಪ್ರಸಿದ್ಧ ನಟ-ನಟಿಯರು ಭಾಗವಹಿಸಿದ್ದರು ಎಂಬುದು ಗೊತ್ತಾಗಿದೆ.

Read More
Next Story