
ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಐವರು ವಿದ್ಯಾರ್ಥಿಗಳು ವಿಷಕಾರಿ ಅನಿಲದಿಂದ ಅಸ್ವಸ್ಥರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶ: ವೃಂದಾವನದಲ್ಲಿ ವಿಷಾನಿಲ ದುರಂತ; ನಾಲ್ವರು ವಿದ್ಯಾರ್ಥಿಗಳು ಸಾವು
ಟ್ಯಾಂಕ್ನೊಳಗೆ ವಿಷಕಾರಿ ಅನಿಲ ಹೇಗೆ ಸಂಗ್ರಹವಾಯಿತು, ಗುರುಕುಲಕ್ಕೆ ಅಗತ್ಯ ಮಾನ್ಯತೆ ಇತ್ತೇ, ವಿದ್ಯಾರ್ಥಿಗಳನ್ನು ಟ್ಯಾಂಕ್ ಸ್ವಚ್ಛಗೊಳಿಸಲು ಯಾವ ಪರಿಸ್ಥಿತಿಯಲ್ಲಿ ಒಳಗೆ ಕಳುಹಿಸಲಾಯಿತು ಎಂಬುದನ್ನು ಪತ್ತೆಹಚ್ಚಲು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಜಿಲ್ಲಾಡಳಿತ ಆದೇಶಿಸಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದ ಚೈತನ್ಯ ವಿಹಾರದಲ್ಲಿರುವ ಸಂಸ್ಕೃತ ಗುರುಕುಲದಲ್ಲಿ ಸಂಭವಿಸಿದ ದುರಂತದಲ್ಲಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಗುರುಕುಲದ ಆವರಣದಲ್ಲಿದ್ದ ಸುಮಾರು 12ರಿಂದ 14 ಅಡಿ ಆಳದ ನೀರಿನ ಸಂಪ್ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಸ್ವಚ್ಛಗೊಳಿಸಲು ವಿದ್ಯಾರ್ಥಿಗಳು ಟ್ಯಾಂಕ್ಗೆ ಇಳಿದಿದ್ದರು.
ಮೊದಲು ಓರ್ವ ವಿದ್ಯಾರ್ಥಿ ಟ್ಯಾಂಕ್ಗೆ ಇಳಿದಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆತನನ್ನು ರಕ್ಷಿಸಲು ಮತ್ತಷ್ಟು ನಾಲ್ವರು ವಿದ್ಯಾರ್ಥಿಗಳು ಒಬ್ಬರ ಹಿಂದೆ ಒಬ್ಬರು ಟ್ಯಾಂಕ್ಗೆ ಇಳಿದಿದ್ದಾರೆ. ಆದರೆ ಅವರೂ ಪ್ರಜ್ಞೆ ಕಳೆದುಕೊಂಡಿದ್ದಾರೆ. ಟ್ಯಾಂಕ್ನೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲವೇ ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ನಾಲ್ವರು ವಿದ್ಯಾರ್ಥಿಗಳ ಸಾವು, ಓರ್ವನಿಗೆ ಚಿಕಿತ್ಸೆ
ಘಟನೆ ತಿಳಿದ ಬಳಿಕ ಸ್ಥಳದಲ್ಲಿದ್ದವರು ಐವರು ವಿದ್ಯಾರ್ಥಿಗಳನ್ನು ಟ್ಯಾಂಕ್ನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಬದುಕುಳಿದ ಓರ್ವ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಪ್ರಜ್ಞೆಯಲ್ಲಿದ್ದು ಮಾತನಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿಗಳ ವಯಸ್ಸು 17ರಿಂದ 20 ವರ್ಷಗಳ ನಡುವೆ ಎಂದು ಎಸ್ಎಸ್ಪಿ ಶ್ಲೋಕ್ ಕುಮಾರ್ ಹೇಳಿದ್ದಾರೆ.
ಗುರುಕುಲದಲ್ಲಿ ಸುಮಾರು 200 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅವರಲ್ಲಿ ಸುಮಾರು 100 ವಿದ್ಯಾರ್ಥಿಗಳು ಪ್ರಸ್ತುತ ಆವರಣದಲ್ಲಿ ವಾಸಿಸುತ್ತಿದ್ದರು ಎಂದು ಜಿಲ್ಲಾಧಿಕಾರಿ ಚಂದ್ರ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ. ಘಟನೆ ಬಳಿಕ ಮೃತರ ಕುಟುಂಬಗಳಿಗೆ ಮಾಹಿತಿ ನೀಡುವ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದಾರೆ.
ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
ಘಟನೆ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ನಿರ್ದೇಶಿಸಿದ್ದಾರೆ.
ಟ್ಯಾಂಕ್ನೊಳಗೆ ವಿಷಕಾರಿ ಅನಿಲ ಹೇಗೆ ಸಂಗ್ರಹವಾಯಿತು, ಗುರುಕುಲಕ್ಕೆ ಅಗತ್ಯ ಮಾನ್ಯತೆ ಇತ್ತೇ, ವಿದ್ಯಾರ್ಥಿಗಳನ್ನು ಟ್ಯಾಂಕ್ ಸ್ವಚ್ಛಗೊಳಿಸಲು ಯಾವ ಪರಿಸ್ಥಿತಿಯಲ್ಲಿ ಒಳಗೆ ಕಳುಹಿಸಲಾಯಿತು ಎಂಬುದನ್ನು ಪತ್ತೆಹಚ್ಚಲು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಜಿಲ್ಲಾಡಳಿತ ಆದೇಶಿಸಿದೆ. ಘಟನಾ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇತರ ಗುರುಕುಲಗಳ ಸುರಕ್ಷತಾ ಪರಿಶೀಲನೆ
ವೃಂದಾವನ ಪ್ರದೇಶದಲ್ಲಿರುವ ಇತರ ಗುರುಕುಲಗಳನ್ನೂ ಮರುಪರಿಶೀಲನೆ ಮತ್ತು ಆಡಿಟ್ಗೆ ಒಳಪಡಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಕಟ್ಟಡಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿ, ಇಂತಹ ದುರಂತಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

