ತಮಿಳುನಾಡು ಸಿಎಂ ವಿಜಯ್ ಚೊಚ್ಚಲ ಬ್ರಿಟನ್ ಪ್ರವಾಸ: ಮೋಟಾರ್ ಸ್ಪೋರ್ಟ್ಸ್ ಸಿಟಿ ನಿರ್ಮಾಣಕ್ಕೆ ಗಮನ
x

ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರ ಮೊದಲ ವಿದೇಶ ಪ್ರವಾಸ ಬ್ರಿಟನ್‌ನಲ್ಲಿ ಹೂಡಿಕೆ ಆಕರ್ಷಿಸುವತ್ತ ಗಮನ ಹರಿಸಿದೆ.

ತಮಿಳುನಾಡು ಸಿಎಂ ವಿಜಯ್ ಚೊಚ್ಚಲ ಬ್ರಿಟನ್ ಪ್ರವಾಸ: ಮೋಟಾರ್ ಸ್ಪೋರ್ಟ್ಸ್ ಸಿಟಿ ನಿರ್ಮಾಣಕ್ಕೆ ಗಮನ

ವಿಜಯ್‌ ಅವರ ನಿಯೋಗದಲ್ಲಿ ಕ್ರೀಡಾ ಅಭಿವೃದ್ಧಿ ಸಚಿವ ಆದವ್‌ ಅರ್ಜುನಾ, ಎಸ್‌ಡಿಎಟಿ ಸದಸ್ಯ ಕಾರ್ಯದರ್ಶಿ ಮೇಘನಾಥ್‌ ರೆಡ್ಡಿ ಹಾಗೂ ಗೈಡೆನ್ಸ್‌ ತಮಿಳುನಾಡು ಸಿಇಒ ದೀಪಕ್‌ ಜೇಕಬ್‌ ಇದ್ದಾರೆ.


Click the Play button to hear this message in audio format

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಚೊಚ್ಚಲ ವಿದೇಶ ಪ್ರವಾಸವನ್ನು ಕೈಗೊಂಡಿದ್ದು, ಬ್ರಿಟನ್‌ನಲ್ಲಿ ಬೃಹತ್ ಹೂಡಿಕೆಗಳನ್ನು ಆಕರ್ಷಿಸಲು ದೃಢ ಹೆಜ್ಜೆ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ಜಾರಿಗೆ ಬಂದಿರುವ ಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದ (CETA) ಪೂರ್ಣ ಲಾಭ ಪಡೆಯುವುದು ಹಾಗೂ ರಾಜ್ಯದಲ್ಲಿ ವಿಶ್ವದರ್ಜೆಯ 'ಮೋಟಾರ್ ಸ್ಪೋರ್ಟ್ಸ್ ಸಿಟಿ' ನಿರ್ಮಿಸುವ ಮಹತ್ವಾಕಾಂಕ್ಷೆಯೊಂದಿಗೆ ಅವರು ಈ ಪ್ರವಾಸ ಕೈಗೊಂಡಿದ್ದಾರೆ. ಆರ್ಥಿಕ ವೃದ್ಧಿ ಹಾಗೂ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಯೆಂಬ ಎರಡು ಪ್ರಮುಖ ಅಜೆಂಡಾಗಳ ಸುತ್ತ ಈ ಪ್ರವಾಸ ರೂಪುಗೊಂಡಿದೆ.

ಕಳೆದ ಜುಲೈ 15ರಂದು ಸೆಟಾ ಒಪ್ಪಂದ ಅಧಿಕೃತವಾಗಿ ಜಾರಿಗೆ ಬಂದ ಬೆನ್ನಲ್ಲೇ, ತಮಿಳುನಾಡು ಸರ್ಕಾರವು ಬ್ರಿಟನ್ ಮಾರುಕಟ್ಟೆಯಲ್ಲಿ ತನ್ನ ರಫ್ತು ಸಾಮರ್ಥ್ಯವನ್ನು ವಿಸ್ತರಿಸಲು ಮುಂದಾಗಿದೆ. ಜವಳಿ, ಉಡುಪು, ಚರ್ಮದ ಉತ್ಪನ್ನಗಳು, ಪಾದರಕ್ಷೆಗಳು, ಆಟೋಮೊಬೈಲ್ ಬಿಡಿಭಾಗಗಳು, ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಬ್ರಿಟನ್‌ನಲ್ಲಿ ವಿಪುಲ ಅವಕಾಶಗಳಿವೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಕೇವಲ ರಫ್ತು ವಹಿವಾಟು ಮಾತ್ರವಲ್ಲದೆ, ಬ್ರಿಟನ್‌ನ ಪ್ರತಿಷ್ಠಿತ ಕಂಪನಿಗಳೊಂದಿಗೆ ಜಂಟಿ ಉದ್ಯಮಗಳನ್ನು ಸ್ಥಾಪಿಸುವುದು, ತಾಂತ್ರಿಕ ಸಹಕಾರ ವಿನಿಮಯ ಮಾಡಿಕೊಳ್ಳುವುದು ಹಾಗೂ ಹೊಸ ಹೂಡಿಕೆಗಳನ್ನು ಸೆಳೆಯಲು ಮುಖ್ಯಮಂತ್ರಿಗಳ ಈ ಭೇಟಿ ಮಹತ್ವದ ವೇದಿಕೆಯಾಗಲಿದೆ.

ಇವಿ ಮತ್ತು ಸುಧಾರಿತ ಉತ್ಪಾದನಾ ವಲಯಕ್ಕೆ ವಿಶೇಷ ಒತ್ತು

ಈಗಾಗಲೇ ತಮಿಳುನಾಡಿನಲ್ಲಿ ನೆಲೆ ಕಂಡುಕೊಂಡಿರುವ ಬ್ರಿಟನ್ ಮೂಲದ ಕಂಪನಿಗಳ ವಿಸ್ತರಣೆಗೆ ಪೂರಕ ವಾತಾವರಣ ಕಲ್ಪಿಸುವುದು ವಿಜಯ್ ಅವರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಇದರ ಜೊತೆಗೆ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಸುಧಾರಿತ ಉತ್ಪಾದನಾ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಗೆ ಹೊಸ ಹೂಡಿಕೆದಾರರನ್ನು ಆಹ್ವಾನಿಸಲಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ವಿಜಯ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲೇ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದರಲ್ಲಿ ಇವಿ ವಲಯಕ್ಕೆ ಗರಿಷ್ಠ ಆದ್ಯತೆ ನೀಡಲಾಗಿದೆ. ಇದೀಗ ಬ್ರಿಟನ್ ಪ್ರವಾಸದ ಮೂಲಕ ಈ ಉದ್ಯಮಕ್ಕೆ ಮತ್ತಷ್ಟು ಬಲ ತುಂಬುವ ಗುರಿ ಹೊಂದಲಾಗಿದೆ.

ಸಿಲ್ವರ್‌ಸ್ಟೋನ್ ಮಾದರಿಯಲ್ಲಿ 'ಮೋಟಾರ್ ಸ್ಪೋರ್ಟ್ಸ್ ಸಿಟಿ' ಸಾಕಾರ

ಬ್ರಿಟನ್ ಪ್ರವಾಸವು ಕೇವಲ ಹೂಡಿಕೆ ಆಕರ್ಷಣೆಗೆ ಸೀಮಿತವಾಗಿಲ್ಲ; ಬದಲಾಗಿ ಕ್ರೀಡೆ ಮತ್ತು ಆಟೋಮೊಬೈಲ್ ಕ್ಷೇತ್ರದ ಅಭಿವೃದ್ಧಿಯ ಆಯಾಮವನ್ನೂ ಒಳಗೊಂಡಿದೆ. ತಮಿಳುನಾಡಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ 'ಮೋಟಾರ್ ಸ್ಪೋರ್ಟ್ಸ್ ಸಿಟಿ' ನಿರ್ಮಿಸುವ ಕನಸು ಕಂಡಿರುವ ಮುಖ್ಯಮಂತ್ರಿಗಳು, ಬ್ರಿಟನ್‌ನ ಸುಸಜ್ಜಿತ ಮೋಟಾರ್ ರೇಸಿಂಗ್ ವ್ಯವಸ್ಥೆಯನ್ನು ಖುದ್ದು ಅಧ್ಯಯನ ಮಾಡಲಿದ್ದಾರೆ. ಈ ವಾರಾಂತ್ಯದಲ್ಲಿ ಪ್ರಸಿದ್ಧ ಸಿಲ್ವರ್‌ಸ್ಟೋನ್ ಟ್ರ್ಯಾಕ್‌ನಲ್ಲಿ ನಡೆಯಲಿರುವ 'ಲೆ ಮ್ಯಾನ್ಸ್ ಕಪ್ ರೇಸ್'ಗೆ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಲಿದ್ದು, ಅಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ರೇಸರ್‌ಗಳನ್ನು ಬೆಂಬಲಿಸಲಿದ್ದಾರೆ. ರೇಸಿಂಗ್ ಟ್ರ್ಯಾಕ್ ವಿನ್ಯಾಸ, ಕ್ರೀಡಾಳುಗಳ ಸುರಕ್ಷತಾ ಕ್ರಮಗಳು ಹಾಗೂ ಒಟ್ಟಾರೆ ವಾಣಿಜ್ಯ ನಿರ್ವಹಣೆಯ ಬಗ್ಗೆಯೂ ಅಲ್ಲಿ ಮಾಹಿತಿ ಕಲೆಹಾಕಲಿದ್ದಾರೆ.

ಈ ಮಹತ್ವದ ಅಧ್ಯಯನ ಮತ್ತು ಹೂಡಿಕೆ ಪ್ರವಾಸದಲ್ಲಿ ಕ್ರೀಡಾ ಅಭಿವೃದ್ಧಿ ಸಚಿವ ಆದವ್ ಅರ್ಜುನಾ, ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ (SDAT) ಸದಸ್ಯ ಕಾರ್ಯದರ್ಶಿ ಮೇಘನಾಥ್ ರೆಡ್ಡಿ ಹಾಗೂ ಗೈಡೆನ್ಸ್ ತಮಿಳುನಾಡು ಅಸಿಇಒ ದೀಪಕ್ ಜೇಕಬ್ ಸೇರಿದಂತೆ ಉನ್ನತ ಮಟ್ಟದ ನಿಯೋಗವು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದೆ.

Read More
Next Story