
ತಮಿಳುನಾಡಿಗೆ 'ದಳಪತಿ' ಅಧಿಪತಿ ; ನಾಳೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ
ಟಿವಿಕೆ ಒಟ್ಟು 107 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್‌ನ 5 ಶಾಸಕರು, ವಿಸಿಕೆ, ಸಿಪಿಐ, ಸಿಪಿಐ(ಎಂ) ಹಾಗೂ ಐಯುಎಂಎಲ್ ಪಕ್ಷಗಳ ತಲಾ ಇಬ್ಬರು ಶಾಸಕರು ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದು, ಒಟ್ಟು ಮೈತ್ರಿಕೂಟದ ಬಲ 120ಕ್ಕೆ ತಲುಪಿದೆ.
ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ನಾಳೆಯಿಂದ ವಿಜಯ ಶಕೆ ಆರಂಭವಾಗಲಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಹಾಗೂ ನಟ ‘ದಳಪತಿ’ ವಿಜಯ್ ಅವರು ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ನಾಳೆ (ಭಾನುವಾರ) ಅಧಿಕಾರ ಸ್ವೀಕರಿಸಲಿದ್ದಾರೆ.
ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.
ವಿಜಯ್ ಅವರೊಂದಿಗೆ ಒಟ್ಟು 9 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
120 ಶಾಸಕರ ಬೆಂಬಲ ಪತ್ರ ಸಲ್ಲಿಕೆ
ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ, ಬಹುಮತಕ್ಕೆ (118) ಹತ್ತು ಸ್ಥಾನಗಳ ಕೊರತೆಯಿತ್ತು. ಆದರೆ, ಇತ್ತೀಚಿನ ನಾಟಕೀಯ ಬೆಳವಣಿಗೆಯಲ್ಲಿ ವಿದುತಲೈ ಚಿರತೈಗಲ್ ಕಚ್ಚಿ (VCK), ಸಿಪಿಐ, ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷಗಳು ಟಿವಿಕೆಗೆ ಬಾಹ್ಯ ಬೆಂಬಲ ಘೋಷಿಸಿದ ಬೆನ್ನಲ್ಲೇ ಸರ್ಕಾರ ರಚನೆಯ ಹಾದಿ ಸುಗಮವಾಗಿತ್ತು. ವಿಜಯ್ ಅವರು ಪಕ್ಷದ ಹಿರಿಯ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ 120 ಶಾಸಕರ ಬೆಂಬಲವಿರುವ ಪತ್ರವನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿಜಯ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿ, ಸರ್ಕಾರ ರಚನೆಗೆ ಆಹ್ವಾನಿಸಿದ್ದಾರೆ.
ಸಂಖ್ಯಾಬಲದ ಲೆಕ್ಕಾಚಾರ ಹೇಗಿದೆ?
ಟಿವಿಕೆ ಒಟ್ಟು 107 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್‌ನ 5 ಶಾಸಕರು, ವಿಸಿಕೆ, ಸಿಪಿಐ, ಸಿಪಿಐ(ಎಂ) ಹಾಗೂ ಐಯುಎಂಎಲ್ ಪಕ್ಷಗಳ ತಲಾ ಇಬ್ಬರು ಶಾಸಕರು ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದು, ಒಟ್ಟು ಮೈತ್ರಿಕೂಟದ ಬಲ 120ಕ್ಕೆ ತಲುಪಿದೆ.
ಇತಿಹಾಸ ಸೃಷ್ಟಿಸಲಿರುವ ‘ದಳಪತಿ’
ಕಳೆದ 59 ವರ್ಷಗಳಿಂದ ತಮಿಳುನಾಡು ರಾಜಕಾರಣವನ್ನು ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಆಳ್ವಿಕೆ ನಡೆಸುತ್ತಾ ಬಂದಿವೆ. ಇದೀಗ ಆ ಐತಿಹಾಸಿಕ ಪರಂಪರೆಯನ್ನು ಮುರಿದು, ದ್ರಾವಿಡೇತರ ಹಿನ್ನೆಲೆಯ ನಾಯಕರೊಬ್ಬರು ಮುಖ್ಯಮಂತ್ರಿಯಾಗುತ್ತಿರುವುದು ಇತಿಹಾಸ ಪುಟ ಸೇರಲಿದೆ. ಈ ಮೂಲಕ ವಿಜಯ್ ತಮಿಳುನಾಡಿನ ಮೊದಲ ದ್ರಾವಿಡೇತರ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
‘ರಾಷ್ಟ್ರಪತಿ ಆಡಳಿತ ತಪ್ಪಿಸಲು ಬೆಂಬಲ’
ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿದ ಬಗ್ಗೆ ಚೆನ್ನೈನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಅವರು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ತಪ್ಪಿಸಲು ಟಿವಿಕೆಗೆ ಬೇಷರತ್ ಬೆಂಬಲ ನೀಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
"ನಮ್ಮ ಬೆಂಬಲದ ಕೊರತೆಯಿಂದಾಗಿ ನಟ ವಿಜಯ್ ಅವರಿಗೆ ಅಧಿಕಾರ ಸಿಗಲಿಲ್ಲ ಎಂಬ ಅಪವಾದ ಇತಿಹಾಸದಲ್ಲಿ ನಮ್ಮ ಮೇಲೆ ಬರಬಾರದು. ಅದಕ್ಕಿಂತ ಹೆಚ್ಚಾಗಿ, ರಾಜ್ಯದಲ್ಲಿ ಅಸ್ಥಿರತೆ ನಿರ್ಮಾಣವಾಗಿ ರಾಷ್ಟ್ರಪತಿ ಆಡಳಿತ ಜಾರಿಯಾಗುವುದನ್ನು ತಪ್ಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ನಾವು ವಿಜಯ್ ನೇತೃತ್ವದ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡಲು ನಿರ್ಧರಿಸಿದ್ದೇವೆ," ಎಂದು ಸ್ಪಷ್ಟಪಡಿಸಿದ್ದಾರೆ.

