ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಜಯ್-ತ್ರಿಶಾ ಸೆಲ್ಯೂಟ್; ಡಿಎಂಕೆ ಟೀಕೆ
x

ವಿಜಯ್-ತ್ರಿಶಾ ವೈರಲ್ ದೃಶ್ಯಕ್ಕೆ ಡಿಎಂಕೆ ಆಕ್ಷೇಪ

ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಜಯ್-ತ್ರಿಶಾ ಸೆಲ್ಯೂಟ್; ಡಿಎಂಕೆ ಟೀಕೆ

ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಜಯ್-ತ್ರಿಶಾ ಸೆಲ್ಯೂಟ್ ದೃಶ್ಯ ವೈರಲ್ ಆಗಿದ್ದು, ಸರ್ಕಾರಿ ಕಾರ್ಯಕ್ರಮದ ಘನತೆ ಕಾಪಾಡುವಂತೆ ಡಿಎಂಕೆ ಮುಖ್ಯಮಂತ್ರಿ ವಿಜಯ್ ವಿರುದ್ಧ ಟೀಕಿಸಿದೆ.


Click the Play button to hear this message in audio format

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್ ನಡುವಿನ ಸೆಲ್ಯೂಟ್ ದೃಶ್ಯಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ವೇಳೆ ವಿಜಯ್ ಮತ್ತು ತ್ರಿಶಾ ಪರಸ್ಪರ ಸೆಲ್ಯೂಟ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ವಿಜಯ್ ಅವರು ತ್ರಿಶಾ ಕಡೆಗೆ ನಗುತ್ತಿರುವ ದೃಶ್ಯವೂ ಗಮನ ಸೆಳೆದಿದೆ. ಈ ದೃಶ್ಯಗಳನ್ನು ಮುಂದಿಟ್ಟುಕೊಂಡು ಡಿಎಂಕೆ ಮುಖ್ಯಮಂತ್ರಿ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಡಿಎಂಕೆಯ ಅಧಿಕೃತ ಮುಖವಾಣಿ ‘ಮುರಸೋಲಿ’ಯಲ್ಲಿ ಈ ಕುರಿತು ಕಟುವಾದ ಸಂಪಾದಕೀಯ ಪ್ರಕಟವಾಗಿದೆ. ರಾಷ್ಟ್ರೀಯ ಮಹತ್ವದ ಸ್ವಾತಂತ್ರ್ಯ ದಿನಾಚರಣೆಯಂತಹ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ತಮ್ಮ ಹುದ್ದೆಯ ಘನತೆ ಹಾಗೂ ಕಾರ್ಯಕ್ರಮದ ಗಂಭೀರತೆಯನ್ನು ಕಾಪಾಡಿಕೊಳ್ಳಬೇಕಿತ್ತು ಎಂದು ಡಿಎಂಕೆ ಪ್ರಶ್ನಿಸಿದೆ.

ಸಂಪಾದಕೀಯದಲ್ಲಿ ತ್ರಿಶಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, ಒಬ್ಬ ನಟಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಮುಂಭಾಗದ ಸಾಲಿನಲ್ಲಿ ಸ್ಥಾನ ನೀಡಿರುವುದು ಹಾಗೂ ಮುಖ್ಯಮಂತ್ರಿಯೇ ಅವರೊಂದಿಗೆ ಈ ರೀತಿಯಾಗಿ ಸಂವಹನ ನಡೆಸಿರುವುದು ಸೂಕ್ತವೇ ಎಂದು ಪ್ರಶ್ನಿಸಲಾಗಿದೆ.

ಮೊದಲ ಸಾಲಿನಲ್ಲಿ ತ್ರಿಶಾ

ಸ್ವಾತಂತ್ರ್ಯ ದಿನಾಚರಣೆಯಂದು ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತ್ರಿಶಾ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರು. ಅವರು ಮುಖ್ಯಮಂತ್ರಿ ವಿಜಯ್ ಅವರ ಪೋಷಕರಾದ ಎಸ್.ಎ. ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ಅವರ ಸಮೀಪ ಕುಳಿತಿರುವುದು ಕಂಡುಬಂದಿತ್ತು. ಇದಾದ ಬಳಿಕ ಕಾರ್ಯಕ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತ್ರಿಶಾ ಅವರಿಗೆ ಮೊದಲ ಸಾಲಿನಲ್ಲಿ ಸ್ಥಾನ ನೀಡಿರುವುದರ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ವಿಜಯ್ ವಿರುದ್ಧ ಡಿಎಂಕೆ ಪ್ರಶ್ನೆ

ಸ್ವಾತಂತ್ರ್ಯ ದಿನಾಚರಣೆಯಂತಹ ಅಧಿಕೃತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯ ವರ್ತನೆ ಹೇಗಿರಬೇಕು ಎಂಬುದನ್ನು ಡಿಎಂಕೆ ತನ್ನ ಸಂಪಾದಕೀಯದಲ್ಲಿ ಪ್ರಶ್ನಿಸಿದೆ. ಈ ರೀತಿಯ ಘಟನೆ ಮುಖ್ಯಮಂತ್ರಿ ಹುದ್ದೆಯ ಘನತೆಗೆ ಧಕ್ಕೆ ತರುವಂತದ್ದು ಎಂದು ಪಕ್ಷದ ಮುಖವಾಣಿ ಟೀಕಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿಜಯ್ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಜಯ್ ನೇತೃತ್ವದ ಟಿವಿಕೆ ಕೂಡ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.

ಇದರ ನಡುವೆ, ವಿಜಯ್ ಮತ್ತು ತ್ರಿಶಾ ನಡುವಿನ ಸಂಬಂಧದ ಕುರಿತು ಈ ಹಿಂದೆ ಹರಿದಾಡಿದ್ದ ವದಂತಿಗಳ ಹಿನ್ನೆಲೆಯಲ್ಲಿ ಈ ಘಟನೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಆದಾಗ್ಯೂ, ಇಬ್ಬರ ನಡುವಿನ ಸಂಬಂಧದ ಕುರಿತು ಯಾವುದೇ ಅಧಿಕೃತ ದೃಢೀಕರಣವಿಲ್ಲ.

Read More
Next Story