
ತಮಿಳುನಾಡು ಚುನಾವಣಾ ಫಲಿತಾಂಶದ ನಡುವೆ ವಿಜಯ್ ಸೋಲುತ್ತಾರೆಂಬ ವದಂತಿ ಕೇಳಿ ಅಭಿಮಾನಿ ಆತ್ಮಹತ್ಯೆಗೆ ಯತ್ನ
ಟಿವಿಕೆ ಸೋಲಿನ ವದಂತಿ: ಗಂಟಲು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿಜಯ್ ಅಭಿಮಾನಿ
ತಮಿಳುನಾಡು ಚುನಾವಣಾ ಫಲಿತಾಂಶದ ನಡುವೆ ವಿಜಯ್ ಸೋಲುತ್ತಾರೆಂಬ ವದಂತಿ ಕೇಳಿ ಅಭಿಮಾನಿ ಆತ್ಮಹತ್ಯೆಗೆ ಯತ್ನ. ಟಿಬಿಕೆ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದರೂ ಈ ಆಘಾತಕಾರಿ ಘಟನೆ ನಡೆದಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸೋಲಿನ ವದಂತಿ ಕೇಳಿ ಆಘಾತಕ್ಕೊಳಗಾದ ಅಭಿಮಾನಿಯೊಬ್ಬರು ಗಂಟಲು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಕೃಷ್ಣಗಿರಿಯ 28 ವರ್ಷದ ಕೆ. ಮಹೇಂದ್ರನ್ ಎಂಬುವವರು ತಮ್ಮ ಮನೆಯ ಹೊರಗೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕೂಡಲೇ ಗಮನಿಸಿದ ಸ್ಥಳೀಯರು ಅವರನ್ನು ರಕ್ಷಿಸಿ ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚುನಾವಣಾ ಫಲಿತಾಂಶ
ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಮಧ್ಯಾಹ್ನದ ಟ್ರೆಂಡ್ ಅನ್ವಯ ದಳಪತಿ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು 112 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಹೊಸ ಇತಿಹಾಸ ಬರೆಯುವತ್ತ ಸಾಗಿದೆಯಾದರೂ, ಸರಳ ಬಹುಮತಕ್ಕೆ ಬೇಕಾದ 118ರ ಮ್ಯಾಜಿಕ್ ನಂಬರ್ ತಲುಪಲು ಇನ್ನು 6 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ. ಸದ್ಯ ಎಐಎಡಿಎಂಕೆ ಮತ್ತು ಡಿಎಂಕೆ ಮೈತ್ರಿಕೂಟಗಳು ತಲಾ 61 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ವಿಜಯ್ ಅವರಿಗೆ ಸರ್ಕಾರ ರಚಿಸಲು ಬೆಂಬಲ ನೀಡುವ ಆಫರ್ ನೀಡಿವೆ; ಹೀಗಾಗಿ ಬಹುಮತಕ್ಕೆ ಬೇಕಾದ ನಂಬರ್ ಗಳಿಸಲು ವಿಜಯ್ ಅವರು ಇತರರ ಬೆಂಬಲ ಪಡೆಯುವುದು ಅನಿವಾರ್ಯವಾಗಿದ್ದು, ರಾಜ್ಯದಲ್ಲಿ ಮೈತ್ರಿ ರಾಜಕಾರಣದ ಪರ್ವ ಶುರುವಾಗುವ ಮುನ್ಸೂಚನೆ ಸಿಕ್ಕಿದೆ.
'ದಳಪತಿ' ಎಂದು ಜನಪ್ರಿಯರಾಗಿರುವ ವಿಜಯ್, 2024 ರಲ್ಲಿ ಟಿಬಿಕೆ ಪಕ್ಷವನ್ನು ಪ್ರಾರಂಭಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ಚುನಾವಣೆಯನ್ನು ಸ್ವಂತವಾಗಿ ಎದುರಿಸುವುದಾಗಿ ಸ್ಪಷ್ಟಪಡಿಸಿದ್ದರು. ಚುನಾವಣೆಯ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಇದು ಕೇವಲ ಚುನಾವಣಾ ಸ್ಪರ್ಧೆಯಲ್ಲ ಬದಲಾಗಿ "ಪ್ರಜಾಪ್ರಭುತ್ವದ ಸಮರ" ಎಂದು ಬಣ್ಣಿಸಿದ್ದರು. ಟಿವಿಕೆ "ಯಾರಿಗಾಗಿಯೂ ಅಥವಾ ಯಾವುದಕ್ಕಾಗಿಯೂ ತನ್ನ ರಾಜಕೀಯ ತತ್ವಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ಅವರು ಹೇಳಿದ್ದರು.
ಈ ಮೊದಲು, ವಿಧಾನಸಭಾ ಚುನಾವಣೆಗೆ ಮುನ್ನ ಟಿವಿಕೆ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸುವಂತೆ ಒತ್ತಡವಿತ್ತು ಎಂದು ವರದಿಗಳಾಗಿದ್ದವು. ಆದರೆ ವಿಜಯ್ ಈ ವದಂತಿಗಳನ್ನು ತಳ್ಳಿಹಾಕಿದ್ದರು. ಫೆಬ್ರವರಿಯಲ್ಲಿ ಅವರ ಪಕ್ಷವು ಎಷ್ಟೇ ಒತ್ತಡವಿದ್ದರೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಮತ ಎಣಿಕೆಯ ದಿನದಂದು (ಸೋಮವಾರ) ಮಾತನಾಡಿದ ಟಿವಿಕೆ ವಕ್ತಾರ ಫೆಲಿಕ್ಸ್ ಜೆರಾಲ್ಡ್, ರಾಜ್ಯದಲ್ಲಿ ಪಕ್ಷವು ಸ್ವಂತವಾಗಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಹೇಳಿದರು.

