ವಂದೇ ಮಾತರಂ ಗಾಯನಕ್ಕೆ ಸೋನಿಯಾ ಗಾಂಧಿ ಆಕ್ಷೇಪ? ಬಿಜೆಪಿ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು
x

ವಂದೇ ಮಾತರಂ ಗಾಯನಕ್ಕೆ ಸೋನಿಯಾ ಗಾಂಧಿ ಆಕ್ಷೇಪ? ಬಿಜೆಪಿ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು

'ವಂದೇ ಮಾತರಂ' ಗಾಯನದ ಸಮಯದಲ್ಲಿ ಸೋನಿಯಾ ಗಾಂಧಿ ಆಕ್ಷೇಪ ಎತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ.


Click the Play button to hear this message in audio format

ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಗಾಯನದ ವೇಳೆ ಸೋನಿಯಾ ಗಾಂಧಿ ಅವರು ಅದನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಈ ವಿಷಯವಾಗಿ ಶನಿವಾರ (ಆಗಸ್ಟ್ 15) ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಏರ್ಪಟ್ಟಿದೆ. ಆದರೆ, ಬಿಜೆಪಿ ಆರೋಪವನ್ನು ತೀವ್ರವಾಗಿ ನಿರಾಕರಿಸಿರುವ ಕಾಂಗ್ರೆಸ್, ತುಂಬಾ ಹೊತ್ತಿನಿಂದ ನಿಂತುಕೊಂಡಿದ್ದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ತಂದುಕೊಡುವಂತೆ ಸೋನಿಯಾ ಗಾಂಧಿ ಕೇಳುತ್ತಿದ್ದರೆ ವಿನಃ ಗೀತೆಗೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಬಿಜೆಪಿ ಆರೋಪವೇನು?

ಬಿಜೆಪಿ ವಕ್ತಾರ ಗೋಪಾಲ ಕೃಷ್ಣ ಅಗರ್ವಾಲ್ ಅವರು ಈ ಕಾರ್ಯಕ್ರಮದ ವಿಡಿಯೋ ತುಣುಕನ್ನು 'X' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ಸ್ವಾತಂತ್ರ್ಯ ದಿನೋತ್ಸವದಂದೇ ಇಂತಹ ಶೋಚನೀಯ ಘಟನೆ ಬೆಳಕಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುತ್ತಿದ್ದಾಗ ಸೋನಿಯಾ ಗಾಂಧಿ ಅವರು ಕಾರ್ಯಕರ್ತರನ್ನು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಎಂದ ಅಗರ್ವಾಲ್, 'ವಂದೇ ಮಾತರಂ' ಗಾಯನದ ಸಮಯದಲ್ಲಿ ಸೋನಿಯಾ ಗಾಂಧಿ ಆಕ್ಷೇಪ ಎತ್ತಿದ್ದು ಮಾತ್ರವಲ್ಲದೇ ಅದನ್ನು ಏಕೆ ಪ್ಲೇ ಮಾಡಲಾಗುತ್ತಿದೆ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ್ದು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದರು.

ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷದ ನಿಜವಾದ ಮನಸ್ಥಿತಿ ಇದೇನಾ? ಎಂದು ಪ್ರಶ್ನಿಸಿದ ಅವರು, ಈ ನಡವಳಿಕೆಯು ಕಾಂಗ್ರೆಸ್‌ನ ತುರ್ತು ಪರಿಸ್ಥಿತಿಯ ಮನಸ್ಥಿತಿಯನ್ನು ನೆನಪಿಸುತ್ತಿದೆ ಮತ್ತು ಮತದಾರರು ಈಗಾಗಲೇ ಇಂತಹ ಮನಸ್ಥಿತಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್

ಬಿಜೆಪಿಯ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ವಂದೇ ಮಾತರಂ ಗಾಯನವನ್ನು ತಡೆಯುವ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಕುರಿತು ವಿವರಣೆ ನೀಡಿದ ಜೈರಾಮ್ ರಮೇಶ್, ಅಕ್ಟೋಬರ್ 28, 1937 ರಂದು ಕೋಲ್ಕತ್ತಾದಲ್ಲಿ (ಆಗಿನ ಕಲ್ಕತ್ತಾ) ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಜವಾಹರಲಾಲ್ ನೆಹರೂ, ಗೋವಿಂದ ಬಲ್ಲಭ ಪಂತ್ ಮತ್ತು ಸಿ. ರಾಜಗೋಪಾಲಚಾರಿ ಅವರ ಉಪಸ್ಥಿತಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯನ್ನು ಸ್ಮರಿಸಿದರು.

ಆ ಸಭೆಯಲ್ಲಿ ರವೀಂದ್ರನಾಥ ಠಾಗೋರ್ ಅವರ ಸಲಹೆಯಂತೆ ಕಾಂಗ್ರೆಸ್ ಅಧಿವೇಶನಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಚರಣಗಳನ್ನು ಹಾಡಲು ತೀರ್ಮಾನಿಸಲಾಗಿತ್ತು. "ಅಂದಿನಿಂದ ಪ್ರತಿ ಅಧಿವೇಶನದಲ್ಲೂ ನಮ್ಮ ಸೇವಾದಳ ಮತ್ತು ಕಾರ್ಯಕರ್ತರು ಆ ಸಾಲುಗಳನ್ನು ಹಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಯಾವುದೇ ವಿವಾದವಿಲ್ಲ" ಎಂದು ರಮೇಶ್ ತಿಳಿಸಿದರು.

'ಇಂದಿರಾ ಭವನದಲ್ಲಿ ಪೂರ್ಣ ಗೀತೆ ಗಾಯನ'

ಶನಿವಾರ ಕಾಂಗ್ರೆಸ್ ನೂತನ ಪ್ರಧಾನ ಕಚೇರಿ 'ಇಂದಿರಾ ಭವನ'ದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಲಾಗಿದೆ. ಹೀಗಿರುವಾಗ ವಿವಾದದ ಪ್ರಶ್ನೆಯೇ ಏಳುವುದಿಲ್ಲ ಎಂದು ಜೈರಾಮ್ ರಮೇಶ್ ಹೇಳಿದರು.

ಸೋನಿಯಾ ಗಾಂಧಿ ಅವರ ನಡೆಗೆ ಸ್ಪಷ್ಟನೆ ನೀಡಿದ ಅವರು, "ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುದೀರ್ಘ ಸಮಯದಿಂದ ನಿಂತುಕೊಂಡಿದ್ದರಿಂದ, ಸೋನಿಯಾಜಿ ಅವರು ಖರ್ಗೆಯವರಿಗಾಗಿ ಕುರ್ಚಿಯನ್ನು ತಂದುಕೊಡುವಂತೆ ಸಿಬ್ಬಂದಿಯನ್ನು ಕೇಳುತ್ತಿದ್ದರು ಅಷ್ಟೇ" ಎಂದು ಹರಿಹಾಯ್ದರು.

Read More
Next Story