ಉತ್ತರ ಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹ: 24 ಗಂಟೆಗಳಲ್ಲಿ 57 ಮಂದಿ ಸಾವು
x

ಬಿಹಾರ, ಉತ್ತರ ಪ್ರದೇಶ, ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸುರಿದ ಭಾರಿ ಮಳೆಗೆ ‘ಅರ್ನಬ್’ ಚಂಡಮಾರುತ ವ್ಯವಸ್ಥೆ ಕಾರಣವಾಗಿದೆ.

ಉತ್ತರ ಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹ: 24 ಗಂಟೆಗಳಲ್ಲಿ 57 ಮಂದಿ ಸಾವು

ಮಹಾರಾಜ್‌ಗಂಜ್‌ನಲ್ಲಿ ನಿರಂತರ ಮಳೆಯಿಂದಾಗಿ ಗಂಡಕ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಪ್ರವಾಹದ ನೀರು ಮೂರು ಗ್ರಾಮಗಳಿಗೆ ನುಗ್ಗಿದ್ದು, ಸುಮಾರು 5,000 ಮಂದಿ ನಿರಾಶ್ರಿತರಾಗಿದ್ದಾರೆ.


Click the Play button to hear this message in audio format

ಉತ್ತರ ಪ್ರದೇಶದಲ್ಲಿ ಕಳೆದ 72 ಗಂಟೆಗಳಿಂದ ಸುರಿಯುತ್ತಿರುವ ಭಾರಿ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಳೆ ಸಂಬಂಧಿತ ಘಟನೆಗಳು ಹಾಗೂ ಪ್ರವಾಹದಿಂದ ರಾಜ್ಯಾದ್ಯಂತ ಕನಿಷ್ಠ 57 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಬೆಳೆಗಳು ಮತ್ತು ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ರಾಜ್ಯದ 75 ಜಿಲ್ಲೆಗಳ ಪೈಕಿ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಉನ್ನಾವೊ ಜಿಲ್ಲೆಯ ಬಶಿರತ್‌ಗಂಜ್ ಟೋಲ್ ಪ್ಲಾಜಾ ಸಮೀಪದ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಭಾರಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ 12ನೇ ತರಗತಿವರೆಗಿನ ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ. ರಾಜಧಾನಿ ಲಖನೌ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ನಿರಂತರ ಮಳೆಯಾಗಿದ್ದು, ಜನರ ಸಾಮಾನ್ಯ ಬದುಕು ತೀವ್ರವಾಗಿ ಬಾಧಿತವಾಗಿದೆ.

‘ರೆಡ್’ ಮತ್ತು ‘ಆರೆಂಜ್’ ಅಲರ್ಟ್‌ ಘೋಷಿಸಲಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪರಿಹಾರ ಆಯುಕ್ತ ಯಶೋದ್ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅಧಿಕಾರಿಗಳು ಕಟ್ಟೆಚ್ಚರ ವಹಿಸುವುದು, ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಸೆಪ್ಟೆಂಬರ್ 25ರಿಂದ 27ರವರೆಗೆ ಉತ್ತರ ಪ್ರದೇಶದಲ್ಲಿ 111.3 ಮಿಲಿಮೀಟರ್ ಮಳೆಯಾಗಿದೆ. ಇದೇ ಅವಧಿಯಲ್ಲಿ ಸಾಮಾನ್ಯವಾಗಿ 9.4 ಮಿಲಿಮೀಟರ್ ಮಳೆಯಾಗುತ್ತಿದ್ದು, ಈ ಬಾರಿ ವಾಡಿಕೆಗಿಂತ ಸುಮಾರು ಶೇ.1,084 ಹೆಚ್ಚು ಮಳೆಯಾಗಿದೆ. ಮಹಾರಾಜ್‌ಗಂಜ್‌ನಲ್ಲಿ ನಿರಂತರ ಮಳೆ ಹಾಗೂ ನೇಪಾಳದಿಂದ ನೀರು ಬಿಡಲಾಗಿದ್ದರಿಂದ ಗಂಡಕ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಪ್ರವಾಹದ ನೀರು ಮೂರು ಗ್ರಾಮಗಳಿಗೆ ನುಗ್ಗಿದ್ದು, ಸುಮಾರು 5,000 ಮಂದಿ ಪರಿಣಾಮಕ್ಕೆ ಒಳಗಾಗಿದ್ದಾರೆ.

ಜಿಲ್ಲಾಡಳಿತ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಜಂಟಿಯಾಗಿ ಪ್ರವಾಹಪೀಡಿತ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸುತ್ತಿವೆ.

‘ಅರ್ನಬ್’ ಚಂಡಮಾರುತದಿಂದ ಮಳೆ

ಬಿಹಾರ, ಉತ್ತರ ಪ್ರದೇಶ, ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸುರಿದ ಭಾರಿ ಮಳೆಗೆ ‘ಅರ್ನಬ್’ ಚಂಡಮಾರುತ ವ್ಯವಸ್ಥೆ ಕಾರಣವಾಗಿದೆ. ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಈ ವ್ಯವಸ್ಥೆ ಸೆಪ್ಟೆಂಬರ್ 24ರಂದು ಆಂಧ್ರ ಪ್ರದೇಶದ ಕಳಿಂಗಪಟ್ಟಣಂ ಸಮೀಪ ಭೂಭಾಗ ಪ್ರವೇಶಿಸಿ ಬಳಿಕ ಒಳನಾಡಿನತ್ತ ಚಲಿಸಿತ್ತು.

Read More
Next Story