
ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ದೇಶದ 5 ಹೊಸ ಸ್ಥಳಗಳಿಗೆ ಜಾಗತಿಕ ಮನ್ನಣೆ
ಭಾರತದ ಐದು ಹೊಸ ಐತಿಹಾಸಿಕ ತಾಣಗಳು ಯುನೆಸ್ಕೋದ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಳ್ಳುವುದರೊಂದಿಗೆ ದೇಶವು ಈ ಪಟ್ಟಿಯಲ್ಲಿ ಹೊಂದಿರುವ ಒಟ್ಟು ತಾಣಗಳ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.
ದೇಶದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ನಾಗರಿಕತೆಯ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಭಾರತದ ಐದು ಹೊಸ ಐತಿಹಾಸಿಕ ತಾಣಗಳು ಯುನೆಸ್ಕೋದ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಂಡಿವೆ. ಇದರೊಂದಿಗೆ, ಭಾರತವು ಈ ಪಟ್ಟಿಯಲ್ಲಿ ಹೊಂದಿರುವ ಒಟ್ಟು ತಾಣಗಳ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, "ಈ ಹೊಸ ಸೇರ್ಪಡೆಗಳು ಭಾರತದ ಪರಂಪರೆಯ ಅಸಾಧಾರಣ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ, ಭಾರತದ ನಾಗರಿಕತೆಯ ಪರಂಪರೆಯನ್ನು ಸಂರಕ್ಷಿಸಲು, ರಕ್ಷಿಸಲು ಮತ್ತು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ನಾವು ಬದ್ಧರಾಗಿದ್ದೇವೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿದ್ದಾರೆ.
ಯುನೆಸ್ಕೋದ ತಾತ್ಕಾಲಿಕ ಪಟ್ಟಿಗೆ ಸೇರಿದ ಐದು ಹೊಸ ತಾಣಗಳು
ಬಾಗ್ ಗುಹೆಗಳ ಬೌದ್ಧ ವರ್ಣಚಿತ್ರಗಳು - ಮಧ್ಯಪ್ರದೇಶದ ಬಾಗ್ ನದಿಯ ದಡದಲ್ಲಿರುವ ಈ ಗುಹೆಗಳು ಕ್ರಿ.ಶ. 5 ರಿಂದ 7ನೇ ಶತಮಾನದ ನಡುವಿನವಾಗಿದೆ. ಇವು ಪ್ರಾಚೀನ ಭಾರತೀಯ ಕಲೆಯ ಅದ್ಭುತ ಮಾದರಿಯಾಗಿವೆ. ಅಜಂತಾ ಗುಹೆಗಳಿಗೆ ಸಮಾನವಾದ ಬೌದ್ಧ ಧರ್ಮದ ಭಿತ್ತಿಚಿತ್ರಗಳು ಇಲ್ಲಿ ಕಲಾಪ್ರಿಯರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
ಚಂಬಲ್ ಕಣಿವೆಯ ದೇವಾಲಯಗಳ ಸಮೂಹ - ಮಧ್ಯಪ್ರದೇಶದ ಚಂಬಲ್ ಕಣಿವೆಯು ಕೇವಲ ದರೋಡೆಕೋರರ ತಾಣವಾಗಿರದೆ, ವಾಸ್ತುಶಿಲ್ಪದ ಅಚ್ಚರಿಗಳನ್ನು ಒಳಗೊಂಡಿದೆ. ಇಲ್ಲಿರುವ ಪ್ರಾಚೀನ ದೇವಾಲಯಗಳು ಭಾರತೀಯ ದೇವಾಲಯ ವಾಸ್ತುಶಿಲ್ಪದ ಬೆಳವಣಿಗೆಯ ಹಂತಗಳನ್ನು ತಿಳಿಸುವ ಐತಿಹಾಸಿಕ ಸಾಕ್ಷಿಗಳಾಗಿವೆ.
ಗುಪ್ತ ಯುಗದ ಉದಯಗಿರಿ ಗುಹೆಗಳು - ಮಧ್ಯಪ್ರದೇಶದ ವಿದಿಶಾ ಬಳಿಯಿರುವ ಉದಯಗಿರಿ ಗುಹೆಗಳು ಗುಪ್ತರ ಕಾಲದ ಕಲೆಯ ಅತ್ಯುತ್ತಮ ಉದಾಹರಣೆಗಳಾಗಿವೆ. ಇಲ್ಲಿನ ಶಿಲ್ಪಗಳು ಹಿಂದೂ ಪುರಾಣದ ಕಥೆಗಳನ್ನು ಕಲ್ಲಿನ ಮೇಲೆ ಜೀವಂತಗೊಳಿಸಿವೆ. ವಿಶೇಷವಾಗಿ ವಿಷ್ಣುವಿನ ವರಾಹ ಅವತಾರದ ಶಿಲ್ಪವು ಜಗತ್ಪ್ರಸಿದ್ಧವಾಗಿದೆ.
ಗಿನ್ನೋರ್ಗಢದ ಬುಡಕಟ್ಟು ಪರಂಪರೆ - ಗಿನ್ನೋರ್ಗಢ ಕೋಟೆಯು ಭಾರತದ ಶ್ರೀಮಂತ ಬುಡಕಟ್ಟು ಸಂಸ್ಕೃತಿಯ ಸಂಕೇತವಾಗಿದೆ. ಭೋಪಾಲ್ ಬಳಿಯಿರುವ ಈ ಕೋಟೆಯು ಇತಿಹಾಸ ಮತ್ತು ಪ್ರಕೃತಿಯ ಸಂಗಮವಾಗಿದ್ದು, ಸ್ಥಳೀಯ ಬುಡಕಟ್ಟು ಜನಾಂಗದ ಸಂಪ್ರದಾಯಗಳನ್ನು ಪೋಷಿಸಿಕೊಂಡು ಬಂದಿದೆ.
ಸತ್ಯಾಗ್ರಹ ತಾಣಗಳು - ಇದು ಒಂದು ವಿಶೇಷ ಮತ್ತು ಅನನ್ಯ ಸೀರಿಯಲ್ ಮತ್ತು ಟ್ರಾನ್ಸ್ನ್ಯಾಷನಲ್ ಪ್ರಸ್ತಾವನೆಯಾಗಿದೆ. ಇದು ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಸಂಪರ್ಕಿಸುವ ಐತಿಹಾಸಿಕ ತಾಣಗಳ ಸರಣಿಯಾಗಿದೆ. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಶಾಂತಿಯುತ ಹೋರಾಟದ ನೆನಪುಗಳನ್ನು ಈ ತಾಣಗಳು ಹೊತ್ತಿವೆ. ಇದು ಎರಡು ದೇಶಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ.
ಈ ಪಟ್ಟಿಯ ಮಹತ್ವವೇನು?
ಯುನೆಸ್ಕೋದ ತಾತ್ಕಾಲಿಕ ಪಟ್ಟಿ ಎಂದರೆ ಒಂದು ದೇಶವು ತನ್ನ ಭವಿಷ್ಯದ ವಿಶ್ವ ಪರಂಪರೆಯ ತಾಣಗಳ ನಾಮನಿರ್ದೇಶನಕ್ಕಾಗಿ ಗುರುತಿಸಿರುವ ತಾಣಗಳ ಪಟ್ಟಿ. ಈ ಪಟ್ಟಿಯಲ್ಲಿ ತಾಣಗಳು ಒಂದು ವರ್ಷ ಅವಧಿಗೆ ಇದ್ದ ನಂತರವೇ ಅವುಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಪರಿಗಣಿಸಲು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಭಾರತವು 78 ತಾಣಗಳನ್ನು ಪಟ್ಟಿಯಲ್ಲಿ ಹೊಂದಿರುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪರಂಪರೆಯ ಮೌಲ್ಯವನ್ನು ಹೆಚ್ಚಿಸಿದೆ. ಭಾರತವು ತನ್ನ ಶ್ರೀಮಂತ ಪರಂಪರೆಯನ್ನು ಕೇವಲ ಪ್ರವಾಸೋದ್ಯಮದ ದೃಷ್ಟಿಯಿಂದಷ್ಟೇ ಅಲ್ಲದೆ, ಸಾಂಸ್ಕೃತಿಕ ರಾಜತಾಂತ್ರಿಕತೆಯಾಗಿಯೂ ಬಳಸಿಕೊಳ್ಳುತ್ತಿದೆ. ಜಿ20 ಶೃಂಗಸಭೆಯ ಸಮಯದಲ್ಲಿ ಭಾರತವು ತನ್ನ ಪರಂಪರೆಯ ತಾಣಗಳನ್ನು ವಿಶ್ವ ನಾಯಕರಿಗೆ ಪರಿಚಯಿಸಿದ ರೀತಿಯು ಇದಕ್ಕೆ ಸಾಕ್ಷಿ. ಈಗ ಈ ಐದು ತಾಣಗಳ ಸೇರ್ಪಡೆಯು ಸ್ಥಳೀಯ ಆರ್ಥಿಕತೆಗೆ ಮತ್ತು ಆಯಾ ಪ್ರದೇಶದ ಉದ್ಯೋಗಾವಕಾಶಗಳಿಗೆ ಉತ್ತೇಜನ ನೀಡಲಿದೆ.
ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವುದು ಮೊದಲ ಹಂತವಷ್ಟೇ. ಈ ತಾಣಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸಬೇಕಾದರೆ, ಅವುಗಳ ಸಂರಕ್ಷಣೆ, ನಿರ್ವಹಣೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆ ಮತ್ತು ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಈ ತಾಣಗಳನ್ನು ವಿಶ್ವಕ್ಕೆ ಪರಿಚಯಿಸಬೇಕಿದೆ.

