
ಉಜ್ಜಯಿನಿ ಶಾಹಿ ಮಸೀದಿ ತೆರವು ವೇಳೆ ಹಿಂಸಾಚಾರ: ಪೊಲೀಸರ ಮೇಲೆ ಕಲ್ಲು ತೂರಾಟ
ಉಜ್ಜಯಿನಿಯಲ್ಲಿ 2028ರಲ್ಲಿ ಸಿಂಹಸ್ಥ ಮೇಳ ನಡೆಯಲಿದ್ದು, ಅದಕ್ಕೆ ಮುನ್ನ ನಗರದ ರಸ್ತೆ, ಸಂಚಾರ ಮತ್ತು ಮೂಲಸೌಕರ್ಯ ವ್ಯವಸ್ಥೆಯನ್ನು ಸುಧಾರಿಸುವ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ ಅಗಲೀಕರಣದ ಭಾಗವಾಗಿ ಒಟ್ಟು 272 ಕಟ್ಟಡಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದ್ದು, ಸೋಮವಾರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮಸೀದಿ ಇರುವ ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಸ್ಥಳದಲ್ಲಿ ಕ್ಷಿಪ್ರ ಕಾರ್ಯಪಡೆ(ಆರ್ಎಎಫ್) ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ಉಜ್ಜಯಿನಿಯಲ್ಲಿ 2028ರಲ್ಲಿ ಸಿಂಹಸ್ಥ ಮೇಳ ನಡೆಯಲಿದ್ದು, ಅದಕ್ಕೆ ಮುನ್ನ ನಗರದ ರಸ್ತೆ, ಸಂಚಾರ ಮತ್ತು ಮೂಲಸೌಕರ್ಯ ವ್ಯವಸ್ಥೆಯನ್ನು ಸುಧಾರಿಸುವ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ ಅಗಲೀಕರಣ ಭಾಗವಾಗಿ ಒಟ್ಟು 272 ಕಟ್ಟಡಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ ಎಂದು ವರದಿಯಾಗಿದೆ. ಶಾಹಿ ಮಸೀದಿಯ ಪ್ರಾರ್ಥನಾ ಮಂದಿರದ ಒಂದು ಭಾಗ, ಮಿನಾರೆಟ್ ಸೇರಿದಂತೆ ಕೆಲವು ರಚನೆಗಳು ಪ್ರಸ್ತಾವಿತ ರಸ್ತೆ ವಿಸ್ತರಣೆಯ ವ್ಯಾಪ್ತಿಗೆ ಬರುತ್ತವೆ.
ಮಸೀದಿ ಆಡಳಿ, ಇದು ವಕ್ಫ್ ಆಸ್ತಿಯಾಗಿದ್ದು ಐತಿಹಾಸಿಕ ಮಹತ್ವ ಹೊಂದಿದೆ ಎಂದು ಹೇಳಿದೆ. ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಕ್ರಮದ ವಿರುದ್ಧ ಈ ಹಿಂದೆ ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸೆಪ್ಟೆಂಬರ್ 9ರಂದು ಹೈಕೋರ್ಟ್ ಅರ್ಜಿಗಳನ್ನು ವಜಾಗೊಳಿಸಿ, ಸಿಂಹಸ್ಥ ಮೇಳದ ಹಿನ್ನೆಲೆಯಲ್ಲಿ ಸಂಚಾರ ನಿರ್ವಹಣೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ರಸ್ತೆ ವಿಸ್ತರಣೆ ಅಗತ್ಯವಾಗಿದೆ ಎಂದು ಅಧಿಕಾರಿಗಳ ವಾದವನ್ನು ಪರಿಗಣಿಸಿತ್ತು.
ಭಾರೀ ಕಲ್ಲು ತೂರಾಟ
ಇದೀಗ ಮಸೀದಿ ತೆರವು ಪ್ರಸ್ತಾವನೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ವಿರೋಧ ತೀವ್ರಗೊಂಡಿದೆ. ಸೋಮವಾರ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಕಲ್ಲು ತೂರಾಟದ ಬಳಿಕ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.
ಈ ಬೆಳವಣಿಗೆಗೆ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ಗರ್ಹಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಸ್ತೆ ಅಗಲೀಕರಣ ಹೆಸರಿನಲ್ಲಿ ಐತಿಹಾಸಿಕ ಧಾರ್ಮಿಕ ಸ್ಥಳದ ಭಾಗವನ್ನು ತೆರವುಗೊಳಿಸುವ ಕ್ರಮದಲ್ಲಿ ಆಡಳಿತವು ಜನರ ಭಾವನೆಗಳನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮಸೀದಿಯ ಬದಲಿಗೆ ರಸ್ತೆ ಅಗಲೀಕರಣಕ್ಕೆ ಅಗತ್ಯವಿರುವ ಜಾಗವನ್ನು ಬೇರೆಡೆಯಿಂದ ಪಡೆಯುವ ಕುರಿತು ಪರಿಶೀಲಿಸಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.
ಉಜ್ಜಯಿನಿ ಮಹಾನಗರ ಪಾಲಿಕೆ ಸೇರಿದಂತೆ ಅಧಿಕಾರಿಗಳು ಮಾತ್ರ 2028ರ ಸಿಂಹಸ್ಥ ಮೇಳಕ್ಕೆ ಕೋಟ್ಯಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ರಸ್ತೆ ವಿಸ್ತರಣೆ ಅಗತ್ಯ ಎಂದು ಹೇಳಿದ್ದಾರೆ. ಮೇಳದ ಸಿದ್ಧತೆಗಳ ಭಾಗವಾಗಿ ಹೊಸ ಘಾಟ್ಗಳು, ರಸ್ತೆ ಸಂಪರ್ಕ ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಶಾಹಿ ಮಸೀದಿಯ ಭಾಗಶಃ ತೆರವು ಕುರಿತ ವಿವಾದ ಇದೀಗ ಪ್ರತಿಭಟನೆ ಮತ್ತು ಪೊಲೀಸ್ ಬಂದೋಬಸ್ತ್ವರೆಗೆ ತಲುಪಿದ್ದು, ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ಆಡಳಿತದ ಕ್ರಮಗಳತ್ತ ಗಮನ ನೆಟ್ಟಿದೆ.

