
ಎಂಜಿನಿಯರಿಂಗ್, ಫಾರ್ಮಸಿ, ಕೃಷಿ, ವೆಟರಿನರಿ ಮತ್ತು ಬಿಎಸ್ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಈ ಸಿಇಟಿ ರ‍್ಯಾಂಕ್ ಅತ್ಯಂತ ನಿರ್ಣಾಯಕವಾಗಿದೆ.
ಯುಜಿಸಿಇಟಿ 2026 ಫಲಿತಾಂಶ ಪ್ರಕಟ: ಯಾರಿಗೆಲ್ಲ ಅಗ್ರಸ್ಥಾನ? ಇಲ್ಲಿದೆ ವಿವರ
ಮುಖಪುಟದಲ್ಲಿರುವ “UGCET 2026 Result” ಲಿಂಕ್ ಅನ್ನು ಕ್ಲಿಕ್ ಮಾಡಿ, ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ದಾಖಲಿಸಿ ಫಲಿತಾಂಶವನ್ನು ಪಡೆಯಬಹುದಾಗಿದೆ.
2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (UGCET) ಫಲಿತಾಂಶಗಳನ್ನು ಉನ್ನತ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಇಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಇದೀಗ ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್‌ಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಬಾರಿಯ ಇಂಜಿನಿಯರಿಂಗ್ ವಿಭಾಗದ ಫಲಿತಾಂಶದಲ್ಲಿ ಬೆಂಗಳೂರಿನ ಜಯನಗರದ ಆರ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಸೃಜನ್ ಅವರು ದ್ವಿತೀಯ ಸ್ಥಾನ ಮತ್ತು ನಿನಾದ್ ಅವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ, ಪಶುವೈದ್ಯಕೀಯ (ವೆಟರ್ನರಿ) ವಿಭಾಗದಲ್ಲಿ ನಯನಾ ಗೋಪಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ರಾಜ್ಯದಾದ್ಯಂತ ಸುಮಾರು 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಫಲಿತಾಂಶ ವೀಕ್ಷಿಸುವುದು ಹೇಗೆ?
ಪರೀಕ್ಷಾರ್ಥಿಗಳು ತಮ್ಮ ಫಲಿತಾಂಶವನ್ನು ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ಗಳಾದ cetonline.karnataka.gov.in/kea/, karresults.nic.in ಅಥವಾ keaonline.karnataka.gov.in ಗೆ ಭೇಟಿ ನೀಡಬಹುದು. ವೆಬ್‌ಸೈಟ್‌ನ ಮುಖಪುಟದಲ್ಲಿರುವ “UGCET 2026 Result” ಲಿಂಕ್ ಅನ್ನು ಕ್ಲಿಕ್ ಮಾಡಿ, ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ದಾಖಲಿಸಿ ಫಲಿತಾಂಶವನ್ನು ಪಡೆಯಬಹುದಾಗಿದೆ.
ಮುಂದಿನ ಪ್ರಕ್ರಿಯೆಗಳ ನಿರೀಕ್ಷೆ
ಎಂಜಿನಿಯರಿಂಗ್, ಫಾರ್ಮಸಿ, ಕೃಷಿ, ವೆಟರಿನರಿ ಮತ್ತು ಬಿಎಸ್ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಈ ಸಿಇಟಿ ರ‍್ಯಾಂಕ್ ಅತ್ಯಂತ ನಿರ್ಣಾಯಕವಾಗಿದೆ. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. ಸೀಟ್ ಹಂಚಿಕೆ, ದಾಖಲೆಗಳ ಪರಿಶೀಲನೆ ಮತ್ತು ಕಾಲೇಜು ಆಯ್ಕೆ ಪ್ರಕ್ರಿಯೆಯ ಕುರಿತಾದ ಸಂಪೂರ್ಣ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

