
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ಮೂರು ವಿಷಯಗಳಿಗೆ ಮರುಪರೀಕ್ಷೆ ಘೋಷಿಸಿದೆ.
UGC-NET ಪ್ರಶ್ನೆಪತ್ರಿಕೆ ದೋಷ: 3 ವಿಷಯಗಳಿಗೆ ಮರುಪರೀಕ್ಷೆ ಘೋಷಿಸಿದ ಎನ್‌ಟಿಎ
UGC-NET ಪ್ರಶ್ನೆಪತ್ರಿಕೆಗಳಲ್ಲಿ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ಇಂಗ್ಲಿಷ್, ಕಾಮರ್ಸ್ ಮತ್ತು ಸಮಾಜಶಾಸ್ತ್ರ ವಿಷಯಗಳಿಗೆ ಸೆಪ್ಟೆಂಬರ್ 9, 10ರಂದು ಮರುಪರೀಕ್ಷೆ ನಡೆಸಲು ಎನ್‌ಟಿಎ ನಿರ್ಧರಿಸಿದೆ.
ಯುಜಿಸಿ-ಎನ್‌ಇಟಿ ಜೂನ್ 2026 ಪರೀಕ್ಷೆಯ ಮೂರು ಪತ್ರಿಕೆಗಳಲ್ಲಿ ಹಲವು ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಇಂಗ್ಲಿಷ್, ವಾಣಿಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಗಳಿಗೆ ಮರು ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿರ್ಧರಿಸಿದೆ.
ಇಂಗ್ಲಿಷ್ ಪತ್ರಿಕೆಯ ಮರು ಪರೀಕ್ಷೆ ಸೆಪ್ಟೆಂಬರ್ 9ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮೊದಲ ಶಿಫ್ಟ್‌ನಲ್ಲಿ ನಡೆಯಲಿದೆ. ಇದೇ ದಿನ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಎರಡನೇ ಶಿಫ್ಟ್‌ನಲ್ಲಿ ವಾಣಿಜ್ಯಶಾಸ್ತ್ರ ಪರೀಕ್ಷೆ ನಡೆಯಲಿದೆ. ಸಮಾಜಶಾಸ್ತ್ರ ಪತ್ರಿಕೆಯ ಪರೀಕ್ಷೆ ಸೆಪ್ಟೆಂಬರ್ 10ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮೊದಲ ಶಿಫ್ಟ್‌ನಲ್ಲಿ ನಡೆಯಲಿದೆ.
ಪ್ರಶ್ನೆ ಪತ್ರಿಕೆಗಳಲ್ಲಿ ಹಲವು ದೋಷಗಳು
ಜೂನ್ 22ರಿಂದ 30ರವರೆಗೆ 87 ವಿಷಯಗಳಲ್ಲಿ ಯುಜಿಸಿ-ನೆಟ್ ಪರೀಕ್ಷೆ ನಡೆಸಲಾಗಿತ್ತು. ಆದರೆ ಇಂಗ್ಲಿಷ್, ಕಾಮರ್ಸ್ ಮತ್ತು ಸಮಾಜಶಾಸ್ತ್ರ ಪತ್ರಿಕೆಗಳ ಕುರಿತು ಅಭ್ಯರ್ಥಿಗಳಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಸಮಿತಿಯೊಂದನ್ನು ರಚಿಸಿ ಪರಿಶೀಲನೆ ನಡೆಸಿತ್ತು.
ಈ ಮೂರು ಪತ್ರಿಕೆಗಳಲ್ಲಿ ವಾಸ್ತವಾಂಶ, ಮುದ್ರಣ ಹಾಗೂ ಅನುವಾದ ದೋಷಗಳು ಕಂಡುಬಂದಿವೆ ಎಂದು ಸಮಿತಿ ತಿಳಿಸಿದೆ. ಪ್ರಮುಖ ವಿದ್ವಾಂಸರ ಹೆಸರುಗಳ ತಪ್ಪು ಕಾಗುಣಿತ, ಪುಸ್ತಕಗಳ ಶೀರ್ಷಿಕೆಗಳಲ್ಲಿ ಗೊಂದಲ, ಪ್ರಶ್ನೆಗಳ ವಾಕ್ಯ ರಚನೆಯಲ್ಲಿನ ದೋಷ, ವ್ಯಾಕರಣ ಮತ್ತು ವಿರಾಮಚಿಹ್ನೆಗಳ ತಪ್ಪುಗಳು ಕಂಡುಬಂದಿದೆ. ಇದರ ಜತೆಗೆ ಈ ಹಿಂದೆ ನಡೆದ ಪರೀಕ್ಷೆಗಳಲ್ಲಿ ಕೇಳಲಾಗಿದ್ದ ಹಲವು ಪ್ರಶ್ನೆಗಳು ಮತ್ತೆ ಪುನರಾವರ್ತನೆಯಾಗಿರುವುದನ್ನೂ ಸಮಿತಿ ಗುರುತಿಸಿದೆ.
ಪ್ರಶ್ನೆಗಳನ್ನು ಕೈಬಿಡುವುದರಿಂದ ಸಮಸ್ಯೆ ಪರಿಹಾರ ಸಾಧ್ಯವಿಲ್ಲ
ಪರೀಕ್ಷೆಯನ್ನು ನ್ಯಾಯಸಮ್ಮತ ಮತ್ತು ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಈ ಮೂರು ಪತ್ರಿಕೆಗಳಿಗೆ ಮರು ಪರೀಕ್ಷೆ ನಡೆಸುವಂತೆ ಸಮಿತಿ ಶಿಫಾರಸು ಮಾಡಿದೆ. ಪ್ರಶ್ನೆಗಳಿಗೆ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯ ಬಳಿಕ ದೋಷಪೂರಿತ ಪ್ರಶ್ನೆಗಳನ್ನು ಕೈಬಿಡುವುದರಿಂದ ಮಾತ್ರ ಈ ಪ್ರಮಾಣದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಎನ್‌ಟಿಎ ಹೇಳಿದೆ. ಮರು ಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ಪಡೆಯುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಮರು ಪರೀಕ್ಷೆಗೆ ಸಂಬಂಧಿಸಿದ ನಗರ, ಪರೀಕ್ಷಾ ಕೇಂದ್ರ ಹಾಗೂ ಅಡ್ಮಿಟ್ ಕಾರ್ಡ್ ಕುರಿತ ಮಾಹಿತಿಯನ್ನು NTA ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಿದೆ. ಈ ಮಧ್ಯೆ, ಉತ್ತರ ಕೀ ಪ್ರಶ್ನಿಸುವ ಅವಕಾಶ ನೀಡಲಾಗಿರುವ ಉಳಿದ 84 ವಿಷಯಗಳ ಫಲಿತಾಂಶವನ್ನು ನಿಗದಿತ ವೇಳಾಪಟ್ಟಿಯಂತೆ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.
84 ವಿಷಯಗಳ ಫಲಿತಾಂಶಕ್ಕೆ ತಡೆ ಇಲ್ಲ
ಮೂರು ವಿಷಯಗಳ ಮರು ಪರೀಕ್ಷೆಯಿಂದ ಉಳಿದ 84 ವಿಷಯಗಳ ಜೆಆರ್‌ಎಫ್ ಸೀಟುಗಳ ಹಂಚಿಕೆ, ಸಹಾಯಕ ಪ್ರಾಧ್ಯಾಪಕರ ಅರ್ಹತಾ ಇ-ಪ್ರಮಾಣಪತ್ರ ಹಾಗೂ ಪಿಎಚ್‌ಡಿ ಪ್ರವೇಶದ ಅರ್ಹತಾ ಪ್ರಕ್ರಿಯೆ ವಿಳಂಬವಾಗುವುದಿಲ್ಲ ಎಂದು ಎನ್‌ಟಿಎ ಹೇಳಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹರಾಗುವ ಅಭ್ಯರ್ಥಿಗಳ ಸಂಖ್ಯೆ ಜೂನ್ 2026ರಲ್ಲಿ ನಡೆದ ಪರೀಕ್ಷೆ ಅಥವಾ ಮರು ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಗಳ ಸಂಖ್ಯೆಯ ಶೇ.6ರಷ್ಟಿರಲಿದೆ. ಈ ಎರಡರಲ್ಲಿ ಯಾವುದು ಹೆಚ್ಚಿನ ಸಂಖ್ಯೆಯನ್ನು ನೀಡುತ್ತದೆಯೋ ಅದನ್ನು ಪರಿಗಣಿಸಲಾಗುತ್ತದೆ.
ಮೂರು ವಿಷಯಗಳಿಗೆ ಸಂಬಂಧಿಸಿದ ಜೆಆರ್‌ಎಫ್, ಸಹಾಯಕ ಪ್ರಾಧ್ಯಾಪಕ ಮತ್ತು ಪಿಎಚ್‌ಡಿ ಪ್ರವೇಶದ ಅರ್ಹತೆಗಳ ವಿಷಯವಾರು ಹಂಚಿಕೆಯನ್ನು ಮಾಹಿತಿ ಬುಲೆಟಿನ್‌ನಲ್ಲಿ ನೀಡಿರುವ ನಿಯಮಗಳಂತೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಮರು ಪರೀಕ್ಷೆಯ ಬಳಿಕ ಈಗಾಗಲೇ ಪ್ರತಿ ವಿಷಯಕ್ಕೆ ನಿಗದಿಪಡಿಸಿರುವ ಅರ್ಹ ಅಭ್ಯರ್ಥಿಗಳ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡುವುದಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಅಭ್ಯರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಾಗಿ ಎನ್‌ಟಿಎಯ ಅಧಿಕೃತ ವೆಬ್‌ಸೈಟ್ ಮತ್ತು ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅವಲಂಬಿಸುವಂತೆ ಸಂಸ್ಥೆ ಸೂಚಿಸಿದೆ.

