
ಮಾಜಿ ಮಾಡೆಲ್ ಹಾಗೂ ನಟಿ ಟ್ವಿಷಾ ಶರ್ಮಾ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಸಿಬಿಐ ಸಲ್ಲಿಸಿರುವ 600 ಪುಟಗಳ ಚಾರ್ಜ್‌ಶೀಟ್ ಹಲವು ಬೆಚ್ಚಿಬೀಳಿಸುವ ವಿವರಗಳನ್ನು ಬಹಿರಂಗಪಡಿಸಿದೆ.
ʻನೆಮ್ಮದಿಯಾಗಿ ಸಾಯಲು ಬಿಡಿʼ - ಟ್ವಿಶಾ ಶರ್ಮಾ ಸಾವಿಗೂ ಮುನ್ನ ನಡೆದಿದ್ದಾದರೂ ಏನು? ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ವಿವರ
ಟ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಪತಿ, ಅತ್ತೆಯ ವಿರುದ್ಧ ಮಾನಸಿಕ ಕಿರುಕುಳದ ಆರೋಪಗಳು ಹಾಗೂ ಸಾವಿಗೂ ಮುನ್ನದ ಘಟನೆಗಳ ವಿವರ ಬಹಿರಂಗವಾಗಿದೆ.
ಭೋಪಾಲ್‌ನಲ್ಲಿ ಮಾಜಿ ಮಾಡೆಲ್ ಹಾಗೂ ನಟಿ ಟ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಸಿಬಿಐ ಸಲ್ಲಿಸಿರುವ 600 ಪುಟಗಳ ಚಾರ್ಜ್‌ಶೀಟ್ ಹಲವು ಬೆಚ್ಚಿಬೀಳಿಸುವ ವಿವರಗಳನ್ನು ಬಹಿರಂಗಪಡಿಸಿದೆ. ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳನ್ನು ಸಿಬಿಐ ಹೊರಿಸಿದೆ.
ಮೇ 12ರ ರಾತ್ರಿ 9.36ಕ್ಕೆ ಟ್ವಿಶಾ ಶರ್ಮಾ ತನ್ನ ಅತ್ತಿಗೆ ರಾಶಿ ಅಬ್ರೋಲ್‌ಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದಳು. “ಈಗ ನಾನು ನೆಮ್ಮದಿಯಾಗಿ ಸಾಯಲು ಬಿಡಿ” ಎಂಬ ಅರ್ಥದ ಸಂದೇಶ ಅದಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದಾದ ಕೆಲವೇ ನಿಮಿಷಗಳಲ್ಲಿ ಸಿಸಿಟಿವಿಯಲ್ಲಿ ಟ್ವಿಶಾ ಶರ್ಮಾ ಮನೆಯ ನೆಲಮಹಡಿಯಿಂದ ಒಬ್ಬಳೇ ಮೇಲಕ್ಕೆ ತೆರಳುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ಸಿಬಿಐ ಹೇಳಿದೆ. ರಾತ್ರಿ 9.41ಕ್ಕೆ ತಂದೆಗೆ ಕರೆ ಮಾಡಿದ ಟ್ವಿಶಾ ಶರ್ಮಾ ಅಳುತ್ತಾ ಮಾತನಾಡಿದ್ದಳು. ಪತಿ ಸಮರ್ಥ್ ಅತ್ಯಂತ ಆಕ್ರಮಣಕಾರಿ ಹಾಗೂ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದು, ತಾನು ಭಯಗೊಂಡಿದ್ದೇನೆ. ಕೂಡಲೇ ತನ್ನ ಬಳಿ ಬರುವಂತೆ ಪೋಷಕರಿಗೆ ತಿಳಿಸಿದ್ದಳು ಎನ್ನಲಾಗಿದೆ.
ಪತಿ-ಅತ್ತೆಯ ಚಲನವಲನದ ಮೇಲೂ ಸಿಬಿಐ ಗಮನ
ರಾತ್ರಿ 10.05ರ ಸುಮಾರಿಗೆ ಟ್ವಿಶಾ ಶರ್ಮಾ ತಾಯಿಯೊಂದಿಗೆ ಮಾತನಾಡಿದ್ದಳು. ಆಕೆಯೂ ಪತಿ ಆಕ್ರಮಣಕಾರಿ ವರ್ತನೆ ತೋರುತ್ತಿರುವುದಾಗಿ ಹೇಳಿದ್ದಳು. ಬಳಿಕ ಕರೆ ಸಂಪರ್ಕ ಕಡಿತಗೊಂಡಿತ್ತು.
ಇದರ ನಂತರ ಅತ್ತೆ ಗಿರಿಬಾಲಾ ಮತ್ತು ಪತಿ ಸಮರ್ಥ್ ಮನೆಯ ಮೇಲ್ಛಾವಣಿಯತ್ತ ತೆರಳುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಸಿಬಿಐ ಹೇಳಿದೆ. ಬಳಿಕ ಟ್ವಿಶಾಳನ್ನು ಕೆಳಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ರಾತ್ರಿ 10.55ರ ಸುಮಾರಿಗೆ ಏಮ್ಸ್ ಭೋಪಾಲ್‌ನಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮದುವೆಯಾದ ಐದು ತಿಂಗಳಲ್ಲೇ ಸಂಬಂಧ ಹದಗೆಟ್ಟಿತ್ತು
ಸಿಬಿಐ ಪ್ರಕಾರ, ಟ್ವಿಶಾ ಮತ್ತು ಸಮರ್ಥ್ 2025ರ ಫೆಬ್ರವರಿಯಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಅದೇ ವರ್ಷ ಡಿಸೆಂಬರ್ 9ರಂದು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ.
ಟ್ವಿಶಾ ಈ ಹಿಂದೆ ಹೊಂದಿದ್ದ ಸಂಬಂಧಗಳನ್ನು ಮುಂದಿಟ್ಟುಕೊಂಡು ಸಮರ್ಥ್ ಆಕೆಯ ವ್ಯಕ್ತಿತ್ವದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡುತ್ತಿದ್ದ ಎಂದು ಸಿಬಿಐ ಆರೋಪಿಸಿದೆ. ಟ್ವಿಶಾ ತನ್ನ ಪತಿಯ ವರ್ತನೆಯ ಬಗ್ಗೆ ಅತ್ತೆಗೆ ದೂರು ನೀಡಿದಾಗಲೂ ಗಿರಿಬಾಲಾ ಮಗನ ಪರ ನಿಂತು ಆಕೆಯ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ.
ಗರ್ಭಧಾರಣೆ ಬಳಿಕ ಹೆಚ್ಚಿದ ಕೌಟುಂಬಿಕ ಸಂಘರ್ಷ
ಏಪ್ರಿಲ್ 16ರಂದು ಟ್ವಿಶಾ ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು. ಗರ್ಭಧಾರಣೆ ಅನಿರೀಕ್ಷಿತವಾಗಿದ್ದರಿಂದ ಮತ್ತು ಪತಿಯ ವರ್ತನೆಯಿಂದಾಗಿ ಅದನ್ನು ಮುಂದುವರಿಸಬೇಕೇ ಎಂಬ ಬಗ್ಗೆ ಆಕೆ ಗೊಂದಲದಲ್ಲಿದ್ದಳು ಎಂದು ಸಿಬಿಐ ಹೇಳಿದೆ.
ಏಪ್ರಿಲ್ 17ರಂದು ದಂಪತಿ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಟ್ವಿಶಾ ಪತಿಯ ಮನೆಯಿಂದ ಹೊರಬಂದಿದ್ದಳು ಎನ್ನಲಾಗಿದೆ. ಮೇ 6ರಂದು ಗರ್ಭಪಾತಕ್ಕೆ ಸಂಬಂಧಿಸಿದ ಮೊದಲ ಔಷಧಿ ಸೇವಿಸಿದ್ದಳು. ಮರುದಿನ ಆಕೆ ತನ್ನ ತಾಯಿಗೆ ಕರೆ ಮಾಡಿ ತನ್ನನ್ನು ಅಲ್ಲಿಂದ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಳು.
ಏಪ್ರಿಲ್ 30ರಂದು ತಾಯಿಗೆ ಕಳುಹಿಸಿದ್ದ ಸಂದೇಶದಲ್ಲಿ “ನನ್ನ ಜೀವನ ನರಕವಾಗಿದೆ” ಎಂದು ಟ್ವಿಷಾ ಹೇಳಿದ್ದಳು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆಕೆಗೆ ಆತಂಕದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮನೋವೈದ್ಯರನ್ನು ಭೇಟಿಯಾಗಿಸಲಾಗಿತ್ತು. ವೈದ್ಯರು ಆಕೆಯ ಒತ್ತಡ ಹಾಗೂ ಆತಂಕವನ್ನು ಗಮನಿಸಿ ಔಷಧಿ ನೀಡಿದ್ದರು ಎಂದು ಸಿಬಿಐ ತಿಳಿಸಿದೆ.
ಗರ್ಭಪಾತದ ನಿರ್ಧಾರಕ್ಕೆ ಪತಿ ಹಾಗೂ ಅತ್ತೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಟ್ವಿಶಾ ವೈದ್ಯರ ಬಳಿ ಹೇಳಿದ್ದಳು ಎನ್ನಲಾಗಿದೆ. ಅತ್ತೆ ತನ್ನನ್ನು ‘ಕೊಲೆಗಾರ್ತಿ’ ಎಂದು ಮೂರು ಬಾರಿ ಕರೆದಿದ್ದಾರೆ ಎಂದು ಆಕೆ ಅತ್ತಿಗೆಗೆ ತಿಳಿಸಿದ್ದಳು ಎಂಬ ಆರೋಪವೂ ಚಾರ್ಜ್‌ಶೀಟ್‌ನಲ್ಲಿದೆ.
ಹಣ ವರ್ಗಾವಣೆಗೆ ಒತ್ತಡದ ಆರೋಪ
ಟ್ವಿಶಾ ಸುಮಾರು 20 ಲಕ್ಷ ರೂಪಾಯಿಯನ್ನು ಷೇರುಗಳಲ್ಲಿ ಹೂಡಿಕೆ ಮಾಡಿದ್ದಳು. ಈ ಹಣವನ್ನು ತನ್ನ ಹಾಗೂ ಸಮರ್ಥ್ ಹೆಸರಿನ ಜಂಟಿ ಖಾತೆಗೆ ವರ್ಗಾಯಿಸುವಂತೆ ಪತಿ ಮತ್ತು ಅತ್ತೆ ಒತ್ತಡ ಹೇರಿದ್ದರು ಎಂದು ಸಿಬಿಐ ಆರೋಪಿಸಿದೆ.
ಮೇ 12ರಂದು ಸಂಜೆ ಟ್ವಿಶಾ ತನ್ನ ಅತ್ತಿಗೆಗೆ ಕರೆ ಮಾಡಿ ಮನೆಗೆ ಮರಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಳು. ಸಮರ್ಥ್ ತನ್ನ ಹೂಡಿಕೆಯನ್ನು ಚೀನಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ವರ್ಗಾಯಿಸುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಆಕೆ ಹೇಳಿದ್ದಳು ಎನ್ನಲಾಗಿದೆ.
ಮನೆ ತೊರೆಯಲು ಟಿಕೆಟ್ ಕೂಡ ಬುಕ್ ಮಾಡಿದ್ದಳು
ಸಾವಿನ ದಿನವೇ ಟ್ವಿಶಾ ಭೋಪಾಲ್ ತೊರೆದು ರಾಜಸ್ಥಾನದ ನಸೀರಾಬಾದ್‌ಗೆ ತೆರಳಲು ರೈಲು ಟಿಕೆಟ್ ಬುಕ್ ಮಾಡಿದ್ದಳು. ತಾಯಿಯಿಂದ 3,000 ರೂಪಾಯಿ ಪಡೆದು ಟಿಕೆಟ್ ಕಾಯ್ದಿರಿಸಿದ್ದಳು ಎಂದು ಸಿಬಿಐ ಹೇಳಿದೆ.
ವೈವಾಹಿಕ ಸಂಬಂಧ ಉಳಿಸಲು ತಾನು ಸಾಧ್ಯವಾದಷ್ಟು ಪ್ರಯತ್ನಿಸಿದ್ದರೂ, ಸಮರ್ಥ್ ದಂಪತಿ ಸಮಾಲೋಚನೆಗೆ ಬರಲು ಸಿದ್ಧರಿಲ್ಲದ ಕಾರಣ ಮನೆಗೆ ಮರಳಲು ನಿರ್ಧರಿಸಿದ್ದಾಗಿ ಆಕೆ ಹೇಳಿದ್ದಳು ಎನ್ನಲಾಗಿದೆ. ನಂತರ ಸಮರ್ಥ್ ಕೌನ್ಸೆಲಿಂಗ್‌ಗೆ ಬರಲು ಒಪ್ಪಿಕೊಂಡಿದ್ದು, ಬೆಳಗ್ಗೆ 11.30ರ ಸುಮಾರಿಗೆ ದಂಪತಿ ಮನೋವೈದ್ಯೆ ಡಾ. ಕಾಕೋಲಿ ರಾಯ್ ಅವರನ್ನು ಭೇಟಿಯಾಗಿದ್ದರು. ಇಬ್ಬರೂ ಗಾಂಜಾ ಸೇವಿಸುತ್ತಿದ್ದ ಬಗ್ಗೆ ಸಮರ್ಥ್ ವೈದ್ಯರಿಗೆ ಹೇಳಿದ್ದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಾವಿಗೆ ಮುನ್ನ ನಿರಂತರ ಅಳುತ್ತಿದ್ದ ಟ್ವಿಶಾ
ಮೇ 12ರ ರಾತ್ರಿ 9.20ರ ಸುಮಾರಿಗೆ ಟ್ವಿಶಾ ಅತ್ತಿಗೆ ರಾಶಿ ಜತೆ ಕರೆ ಮಾತನಾಡಿದ್ದಳು. ಆಕೆ ನಿರಂತರವಾಗಿ ಅಳುತ್ತಿದ್ದಳು ಎಂದು ಸಿಬಿಐ ಹೇಳಿದೆ. ಬೆನ್ನು ನೋವಿನ ಕಾರಣ ಸಮರ್ಥ್‌ಗೆ ಮಲಗುವಂತೆ ಕೇಳಿದ್ದರೂ, ಆತ ಆಕ್ರಮಣಕಾರಿ ಹಾಗೂ ಹಿಂಸಾತ್ಮಕವಾಗಿ ವರ್ತಿಸಿದ್ದಾನೆ ಎಂದು ಟ್ವಿಶಾ ಹೇಳಿದ್ದಳು ಎನ್ನಲಾಗಿದೆ.
ನಂತರ 9.29ಕ್ಕೆ ಮತ್ತೊಂದು ಕರೆ ಸ್ವೀಕರಿಸಿದ್ದರೂ, ಹೆಚ್ಚು ಅಳುತ್ತಿದ್ದ ಕಾರಣ ಸರಿಯಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ. 9.36ಕ್ಕೆ ಆಕೆ ಆತ್ಮಹತ್ಯೆಯ ಸೂಚನೆ ನೀಡುವ ಸಂದೇಶ ಕಳುಹಿಸಿದ್ದಳು.
ಎರಡನೇ ಮರಣೋತ್ತರ ಪರೀಕ್ಷೆಯಲ್ಲೂ ಆತ್ಮಹತ್ಯೆ ಎಂದು ವರದಿ
ಟ್ವಿಶಾ ಸಾವಿನ ಬಳಿಕ ಮೊದಲ ಮರಣೋತ್ತರ ಪರೀಕ್ಷೆ ಭೋಪಾಲ್ ಏಮ್ಸ್‌ನಲ್ಲಿ ನಡೆದಿತ್ತು. ಆಕೆಯ ಕುಟುಂಬ ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತೊಮ್ಮೆ ಪರೀಕ್ಷೆಗೆ ಮನವಿ ಮಾಡಿತ್ತು.
ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಬಳಿಕ ಮೇ 24ರಂದು ಏಮ್ಸ್ ದೆಹಲಿಯ ವೈದ್ಯಕೀಯ ಮಂಡಳಿ ಎರಡನೇ ಮರಣೋತ್ತರ ಪರೀಕ್ಷೆ ನಡೆಸಿತು. ಸಾವಿಗೆ ನೇಣು ಬಿಗಿದ ಪರಿಣಾಮ ಉಂಟಾದ ಉಸಿರುಗಟ್ಟುವಿಕೆ ಕಾರಣ ಎಂದು ಮಂಡಳಿ ತಿಳಿಸಿದ್ದು, ಸಾವಿನ ಸ್ವರೂಪ ಆತ್ಮಹತ್ಯೆ ಎಂದು ದಾಖಲಿಸಿದೆ. ದೇಹದಲ್ಲಿ ಹಲ್ಲೆ ನಡೆದಿರುವುದನ್ನು ಸೂಚಿಸುವ ಮಹತ್ವದ ಗಾಯಗಳಿಲ್ಲ ಎಂದೂ ವರದಿ ಹೇಳಿದೆ.
ದೈಹಿಕ ಹತ್ಯೆ ಅಲ್ಲ, ಮಾನಸಿಕ ಕಿರುಕುಳವೇ ಕಾರಣ ಎಂದ ಸಿಬಿಐ
ಸಿಬಿಐ ತನಿಖೆಯ ಪ್ರಮುಖ ವಾದ ಟ್ವಿಶಾಳನ್ನು ದೈಹಿಕವಾಗಿ ಹತ್ಯೆ ಮಾಡಲಾಗಿದೆ ಎಂಬುದಲ್ಲ. ಬದಲಿಗೆ ದೀರ್ಘಕಾಲದ ಮಾನಸಿಕ ಕಿರುಕುಳದಿಂದ ಆಕೆ ಆತ್ಮಹತ್ಯೆಗೆ ತಳ್ಳಲ್ಪಟ್ಟಿದ್ದಾಳೆ ಎಂಬುದು ತನಿಖಾ ಸಂಸ್ಥೆಯ ಆರೋಪ.
ಟ್ವಿಶಾಳ ಡೈರಿ, ಸಿಸಿಟಿವಿ ದೃಶ್ಯಗಳು, ವಾಟ್ಸ್‌ಆ್ಯಪ್ ಸಂದೇಶಗಳು ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ನಡೆಸಿದ ಫೊರೆನ್ಸಿಕ್ ಮಾನಸಿಕ ಮೌಲ್ಯಮಾಪನದಲ್ಲಿ ಆಕೆ ನಿರಾಶೆ, ನಿರಂತರ ಮಾನಸಿಕ ನೋವು ಮತ್ತು ಬೆಂಬಲದ ಕೊರತೆಯನ್ನು ಎದುರಿಸಿದ್ದಳು ಎಂದು ಸಿಬಿಐ ಹೇಳಿದೆ.
ಈ ಹಿನ್ನೆಲೆಯಲ್ಲಿ ಸಮರ್ಥ್ ಸಿಂಗ್ ಮತ್ತು ಗಿರಿಬಾಲಾ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 85, 108 ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಾರ್ಜ್‌ಶೀಟ್ ಸಲ್ಲಿಸಿದ್ದರೂ ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ ಎಂದು ಸಿಬಿಐ ತಿಳಿಸಿದೆ. ಟ್ವಿಶಾ ಬಳಸುತ್ತಿದ್ದ ಐಫೋನ್‌ನ ಫೊರೆನ್ಸಿಕ್ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ. ಮನೆಯ ಸಿಸಿಟಿವಿ ಡಿವಿಆರ್ ಅನ್ನು ದೆಹಲಿಯ ಸಿಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ದೃಶ್ಯಗಳಲ್ಲಿ ಯಾವುದೇ ತಿರುಚಾಟ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಸಮರ್ಥ್ ಮತ್ತು ಗಿರಿಬಾಲಾ ಅವರ ಧ್ವನಿ ಮಾದರಿಗಳನ್ನು ಕೂಡ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಳು ಬಂದ ಬಳಿಕ ಪ್ರಕರಣದಲ್ಲಿ ಮತ್ತಷ್ಟು ಸಾಕ್ಷ್ಯಗಳು ಅಥವಾ ಇತರ ವ್ಯಕ್ತಿಗಳ ಪಾತ್ರ ಬೆಳಕಿಗೆ ಬರಬಹುದು ಎಂದು ಸಿಬಿಐ ತಿಳಿಸಿದೆ.
ಇದರ ಜತೆಗೆ ವರದಕ್ಷಿಣೆ ಬೇಡಿಕೆ ಮತ್ತು ವರದಕ್ಷಿಣೆ ಸಾವಿನ ಆರೋಪಗಳ ಕುರಿತ ತನಿಖೆಯನ್ನು ಮುಂದುವರಿಸಲು ಬಿಎನ್‌ಎಸ್‌ಎಸ್ ಸೆಕ್ಷನ್ 193(9) ಅಡಿಯಲ್ಲಿ ಅನುಮತಿ ಕೋರಲಾಗಿದೆ.

