ಆಟೋ ಚಾಲಕನಿಂದ ಶಾಸಕನಾದ ಕಥೆ ಸುಳ್ಳೇ? ಟಿವಿಎಂ ಶಾಸಕ ವಿಜಯ್ ದಾಮು ಅಫಿಡವಿಟ್‌ನಲ್ಲಿನ ಅಸಲಿಯತ್ತೇನು?
x
ವಿಜಯ್‌ ದಾಮು ಜತೆ ದಳಪತಿ ವಿಜಯ್‌

ಆಟೋ ಚಾಲಕನಿಂದ ಶಾಸಕನಾದ ಕಥೆ ಸುಳ್ಳೇ? ಟಿವಿಎಂ ಶಾಸಕ ವಿಜಯ್ ದಾಮು ಅಫಿಡವಿಟ್‌ನಲ್ಲಿನ ಅಸಲಿಯತ್ತೇನು?

ವಿಜಯ್ ದಾಮು ತಮ್ಮ ವೃತ್ತಿಯನ್ನು "ಆಟೋ ಕನ್ಸಲ್ಟಿಂಗ್ ಬ್ಯುಸಿನೆಸ್" ಎಂದು ನಮೂದಿಸಿದ್ದಾರೆ ಹೊರತು ಪ್ರಸ್ತುತ "ಆಟೋ ಚಾಲಕ" ಎಂದು ಹೇಳಿಕೊಂಡಿಲ್ಲ. ಒಟ್ಟು 28.9 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿರುವ ಅವರಿಗೆ ಯಾವುದೇ ಸಾಲಗಳಿಲ್ಲ.


ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (2026) ರಾಯಪುರಂ ಕ್ಷೇತ್ರದಿಂದ ಗೆದ್ದು ಶಾಸಕರಾಗಿರುವ ಟಿವಿಎಂ (TVK) ಅಭ್ಯರ್ಥಿ ವಿಜಯ್ ದಾಮು ಅವರ ಹಿನ್ನೆಲೆ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ. 'ಬಡ ಆಟೋ ಚಾಲಕನೊಬ್ಬ ಶಾಸಕನಾದ' ಎಂಬ ಅವರ ಸ್ಫೂರ್ತಿದಾಯಕ ಕಥೆಯ ಹಿಂದಿನ ಅಸಲಿಯತ್ತು ಅವರ ಚುನಾವಣಾ ಅಫಿಡವಿಟ್‌ನಿಂದ ಬಯಲಾಗಿದೆ. ಸೋಮವಾರ (ಮೇ 4) ಫಲಿತಾಂಶ ಪ್ರಕಟವಾದಾಗ, ವಿಜಯ್ ದಾಮು ಅವರ ಸಾಮಾನ್ಯ ಹಿನ್ನೆಲೆ ಮತ್ತು ಅವರ ಗೆಲುವಿನ ಕಥೆ ವೈರಲ್ ಆಗಿತ್ತು. ಆದರೆ, ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರ ಬಳಿ ಸ್ವಂತ ಆಟೋ ರಿಕ್ಷಾವೇ ಇಲ್ಲ!

ಅಫಿಡವಿಟ್ ಪ್ರಕಾರ, ವಿಜಯ್ ದಾಮು ಅವರ ಬಳಿ ಇನ್ನೋವಾ (Innova) ಕಾರು ಮತ್ತು ಎರಡು ಬೈಕ್‌ಗಳಿವೆ. ಇದು ಅವರ 'ಬಡ ಆಟೋ ಚಾಲಕ' ಇಮೇಜ್ ಬಗ್ಗೆ ನೆಟ್ಟಿಗರು ಪ್ರಶ್ನೆ ಎತ್ತುವಂತೆ ಮಾಡಿದೆ. ಯಾವುದೇ ರಾಜಕೀಯ ಅಥವಾ ಆರ್ಥಿಕ ಹಿನ್ನೆಲೆ ಇಲ್ಲದ ಸಾಮಾನ್ಯ ಆಟೋ ಚಾಲಕ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು. ಆದರೆ ಅವರ ಚುನಾವಣಾ ಅಫಿಡವಿಟ್ ಅವರು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬದಿಂದ ಬಂದವರು ಎಂಬುದನ್ನು ಎಲ್ಲಿಯೂ ಸೂಚಿಸುತ್ತಿಲ್ಲ.

ಅಫಿಡವಿಟ್‌ನಲ್ಲಿನ ಅಸಲಿಯತ್ತೇನು?

ವಿಜಯ್ ದಾಮು ತಮ್ಮ ವೃತ್ತಿಯನ್ನು "ಆಟೋ ಕನ್ಸಲ್ಟಿಂಗ್ ಬ್ಯುಸಿನೆಸ್" ಎಂದು ನಮೂದಿಸಿದ್ದಾರೆ ಹೊರತು ಪ್ರಸ್ತುತ "ಆಟೋ ಚಾಲಕ" ಎಂದು ಹೇಳಿಕೊಂಡಿಲ್ಲ. ಒಟ್ಟು 28.9 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿರುವ ಅವರಿಗೆ ಯಾವುದೇ ಸಾಲಗಳಿಲ್ಲ. 8ನೇ ತರಗತಿಯವರೆಗೆ ಮಾತ್ರ ವ್ಯಾಸಂಗ ಮಾಡಿರುವ ಇವರು, ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಎಂದು ಘೋಷಿಸಿಕೊಂಡಿದ್ದಾರೆ. ಇಷ್ಟೆಲ್ಲದರ ನಡುವೆಯೂ, ದಾಮು ಅವರು ಎಐಎಡಿಎಂಕೆ (AIADMK) ಹಿರಿಯ ನಾಯಕ ಡಿ. ಜಯಕುಮಾರ್ ಮತ್ತು ಡಿಎಂಕೆ (DMK) ಅಭ್ಯರ್ಥಿ ಡಾ. ಎ. ಸುಬೈರ್ ಖಾನ್ ಅವರಂತಹ ಘಟಾನುಘಟಿಗಳನ್ನು ಸೋಲಿಸಿರುವುದು ಗಮನಾರ್ಹ.



ಟಿವಿಎಂ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ

ವಿಜಯ್ ದಾಮು ಮಾತ್ರವಲ್ಲ, ನಟ ವಿಜಯ್ ನೇತೃತ್ವದ ಟಿವಿಎಂ (TVK) ಪಕ್ಷದ ಇತರ ಶಾಸಕರ ಹಿನ್ನೆಲೆಯೂ ಚರ್ಚೆಗೆ ಗ್ರಾಸವಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಪ್ರಕಾರ, ವಿಶ್ಲೇಷಣೆಗೊಳಗಾದ 231 ಟಿವಿಎಂ ಅಭ್ಯರ್ಥಿಗಳ ಪೈಕಿ 92 (ಶೇ. 40) ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಇದರಲ್ಲಿ 43 ಮಂದಿ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಲ್ಲೂ ಇದೇ ರೀತಿಯ ಅಂಕಿ-ಅಂಶಗಳಿದ್ದರೂ, 'ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತೇನೆ' ಎಂದು ಬಂದಿದ್ದ ವಿಜಯ್ ಅವರ ಪಕ್ಷದ ಅಭ್ಯರ್ಥಿಗಳ ಮೇಲಿನ ಈ ಆರೋಪಗಳು ಟೀಕೆಗೆ ಗುರಿಯಾಗಿವೆ.

ಕೆಲವು ಅಭ್ಯರ್ಥಿಗಳು ತಮ್ಮ ಮೇಲಿರುವ ಎಫ್‌ಐಆರ್‌ಗಳನ್ನು ಸಂಪೂರ್ಣವಾಗಿ ಘೋಷಿಸಿಕೊಂಡಿಲ್ಲ ಎಂಬ ಅಂತೆ-ಕಂತೆಗಳೂ ಇದ್ದು, ಇದು ಸಾಬೀತಾದರೆ ಮುಂದೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆಯೂ ಇದೆ. ಮತ್ತೊಂದೆಡೆ, ರಾಜ್ಯದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 118 ಶಾಸಕರ ಬೆಂಬಲವನ್ನು ಸಾಬೀತುಪಡಿಸಲು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸೂಚಿಸಿದ್ದು, ಬಹುಮತ ಸಾಬೀತುಪಡಿಸಲು ನಟ ವಿಜಯ್ ಹರಸಾಹಸ ಪಡುತ್ತಿದ್ದಾರೆ.


Read More
Next Story