ಮೋದಿ ನನ್ನ ಆಪ್ತ ಗೆಳೆಯ  ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಟ್ರಂಪ್
x

ಭಾರತ-ಅಮೆರಿಕ ವ್ಯಾಪಾರ ಮಾತುಕತೆ ಬೆನ್ನಲ್ಲೇ ಪ್ರಧಾನಿ ಮೋದಿ ನನ್ನ ಆಪ್ತ ಸ್ನೇಹಿತ ಎಂದು ಶ್ಲಾಘಿಸಿದ ಟ್ರಂಪ್.

"ಮೋದಿ ನನ್ನ ಆಪ್ತ ಗೆಳೆಯ" ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಟ್ರಂಪ್

ಭಾರತ-ಅಮೆರಿಕ ವ್ಯಾಪಾರ ಮಾತುಕತೆ ಬೆನ್ನಲ್ಲೇ ಪ್ರಧಾನಿ ಮೋದಿ ನನ್ನ ಆಪ್ತ ಸ್ನೇಹಿತ ಎಂದು ಶ್ಲಾಘಿಸಿದ ಟ್ರಂಪ್, ಶೀಘ್ರದಲ್ಲೇ ಮಹತ್ವದ ಒಪ್ಪಂದ ಏರ್ಪಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳು ಪ್ರಗತಿಯಲ್ಲಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಆಪ್ತ ಸ್ನೇಹಿತ ಎಂದು ಶ್ಲಾಘಿಸಿದ್ದಾರೆ.

ಓವಲ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತದ ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟವಾದ ನಾಯಕ ಮತ್ತು ಅವರು ನನ್ನ ಅತ್ಯಂತ ಆಪ್ತ ಗೆಳೆಯರಾಗಿದ್ದಾರೆ. ನಮ್ಮಿಬ್ಬರ ನಡುವಿನ ಬಾಂಧವ್ಯ ಅತ್ಯುತ್ತಮವಾಗಿದ್ದು, ಶೀಘ್ರದಲ್ಲೇ ಉಭಯ ದೇಶಗಳ ನಡುವೆ ಪರಸ್ಪರ ಲಾಭದಾಯಕವಾದ ವ್ಯಾಪಾರ ಒಪ್ಪಂದ ಏರ್ಪಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಭಾರತವು ಅಮೆರಿಕದ ವ್ಯಾಪಾರ ನೀತಿಗಳ ಲಾಭವನ್ನು ಪಡೆದುಕೊಂಡಿದೆ ಮತ್ತು ಅಮೆರಿಕದ ಕಂಪನಿಗಳ ಮೇಲೆ ಭಾರಿ ಪ್ರಮಾಣದ ಸುಂಕವನ್ನು ವಿಧಿಸುತ್ತಿದೆ ಎಂದು ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ. ಈ ಹಿಂದೆ ಭಾರತಕ್ಕೆ ಬರುವ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಮೇಲೆ ಶೇಕಡಾ ಇನ್ನೂರರಷ್ಟು ಭಾರಿ ಸುಂಕ ಇರಿಸಲಾಗಿತ್ತು. ಇದರಿಂದಾಗಿ ಅಮೆರಿಕದ ಐಕಾನಿಕ್ ಬ್ರ್ಯಾಂಡ್ ಆದ ಹಾರ್ಲೆ-ಡೇವಿಡ್ಸನ್ ಭಾರತದಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ, ಅನಿವಾರ್ಯವಾಗಿ ಭಾರತದಲ್ಲೇ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕಾಯಿತು ಎಂದು ಹಳೆಯ ಉದಾಹರಣೆಯನ್ನು ನೆನಪಿಸಿಕೊಂಡಿದ್ದಾರೆ. ಆದರೆ ಭಾರತದ ಮೋಟಾರ್‌ಸೈಕಲ್‌ಗಳು ಅಮೆರಿಕದ ಮಾರುಕಟ್ಟೆಗೆ ಬಂದಾಗ ನಾವು ಯಾವುದೇ ಸುಂಕ ವಿಧಿಸಿರಲಿಲ್ಲ ಎಂದು ಅವರು ತಾರತಮ್ಯವನ್ನು ಎತ್ತಿ ತೋರಿಸಿದ್ದಾರೆ. ಆದಾಗ್ಯೂ, ಈಗ ಪರಿಸ್ಥಿತಿ ಬದಲಾಗುತ್ತಿದ್ದು, ಅಮೆರಿಕವು ಭಾರತದೊಂದಿಗೆ ಉತ್ತಮ ಆದಾಯ ಗಳಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಉನ್ನತ ಮಟ್ಟದ ನಿಯೋಗವು ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿ ನಾಲ್ಕು ದಿನಗಳ ಕಾಲ ಸುದೀರ್ಘವಾಗಿ ನಡೆಸಿದ ಮಧ್ಯಂತರ ದ್ವಿಪಕ್ಷೀಯ ಒಪ್ಪಂದದ ಮಾತುಕತೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದಿದೆ. ಈ ಮಾತುಕತೆಯು ಅತ್ಯಂತ ಸೌಹಾರ್ದಯುತವಾಗಿ ಹಾಗೂ ಪ್ರಾಯೋಗಿಕವಾಗಿ ನಡೆದಿದೆ ಎಂದು ಭಾರತದ ವಾಣಿಜ್ಯ ಸಚಿವಾಲಯ ತಿಳಿಸಿದೆ. ಉಭಯ ದೇಶಗಳ ಆರ್ಥಿಕ ಸಂಬಂಧ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ ಪಾತ್ರ ವಹಿಸಲಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ನಡೆದ ದೂರವಾಣಿ ಸಂಭಾಷಣೆಯ ನಂತರ, ಭಾರತ ಮತ್ತು ಅಮೆರಿಕ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತದ ಚೌಕಟ್ಟನ್ನು ಅಂತಿಮಗೊಳಿಸಿದ್ದವು. ಆದರೆ ನಂತರದ ದಿನಗಳಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಟ್ರಂಪ್ ಅವರ ಕೆಲವು ವ್ಯಾಪಾರ ನೀತಿಗಳಿಗೆ ಹಿನ್ನಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳು ಹೊಸ ಬದಲಾವಣೆಗಳಿಗೆ ಅನುಗುಣವಾಗಿ ವ್ಯಾಪಾರ ಒಪ್ಪಂದವನ್ನು ಮರುಸಂಘಟಿಸುತ್ತಿದ್ದು, ಸದ್ಯದಲ್ಲೇ ಜಾಗತಿಕ ಮಟ್ಟದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುವ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

Read More
Next Story