
ಮೇಕೆದಾಟು ಸಮರ: ಕೇಂದ್ರ ಸಚಿವರ ಹೇಳಿಕೆ ವಿರೋಧಿಸಿ ಪ್ರಧಾನಿಗೆ ತಮಿಳುನಾಡು ಪತ್ರ
ರಾಜ್ಯಸಭೆಯಲ್ಲಿ ಕೇಂದ್ರ ಸಚಿವರು ನೀಡಿದ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಯೋಜನೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ, ಕೆಳಹಂತದ ರಾಜ್ಯಗಳ ಆತಂಕವನ್ನು ಪರಿಗಣಿಸಬೇಕು ಎಂದು ಆಗ್ರಹಿಸಲಾಗಿದೆ.
ಕಾವೇರಿ ನದಿ ನೀರಿನ ವಿವಾದ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ದಶಕಗಳ ಹಳೆಯ ಕಗ್ಗಂಟಾಗಿದ್ದು, ಮೇಕೆದಾಟು ಯೋಜನೆಯ ಕುರಿತ ಕೇಂದ್ರ ಜಲಶಕ್ತಿ ಸಚಿವಾಲಯ ನೀಡಿದ ಹೇಳಿಕೆಯನ್ನು ತಮಿಳುನಾಡು ಸರ್ಕಾರ ತೀವ್ರವಾಗಿ ಖಂಡಿಸಿದೆ.
ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೇಂದ್ರ ಜಲಶಕ್ತಿ ಸಚಿವರು ನೀಡಿರುವ ಹೇಳಿಕೆಯು ಕಾನೂನು ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರ ಫೆಬ್ರವರಿ 16ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವ ಮುನ್ನ ಕರ್ನಾಟಕ ರಾಜ್ಯವು ಕೆಳಹಂತದ ರಾಜ್ಯಗಳ ಅನುಮತಿ ಪಡೆಯಬೇಕೆಂದು ಎಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ" ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಈ ಹೇಳಿಕೆಯನ್ನು ತಮಿಳುನಾಡು ಸರ್ಕಾರ ಕಾನೂನು ಬಾಹಿರ ಎಂದು ಪತ್ರದಲ್ಲಿ ಕಿಡಿಕಾರಿದ್ದಾರೆ.
ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವಿನ ಆಲಮಟ್ಟಿ ಪ್ರಕರಣದ ತೀರ್ಪನ್ನು ಉಲ್ಲೇಖಿಸಿರುವ ಅವರು, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು, ಕೆಳಹಂತದ ರಾಜ್ಯಗಳ ಒಪ್ಪಿಗೆ ಇಲ್ಲದೆ ಮೇಲ್ಹಂತದ ರಾಜ್ಯವು ನೀರಾವರಿ ನಿರ್ಮಾಣಗಳನ್ನು ಕೈಗೊಳ್ಳುವಂತಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ ಎಂದು ಪ್ರತಿಪಾದಿಸಿದ್ದಾರೆ. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಕ್ಲಾಸ್ XVIII ಪ್ರಕಾರ, ಯಾವುದೇ ರಾಜ್ಯವು ತನ್ನ ವ್ಯಾಪ್ತಿಯಲ್ಲಿ ನೀರನ್ನು ಬಳಸುವಾಗ, ಅದು ನ್ಯಾಯಮಂಡಳಿಯ ಆದೇಶಕ್ಕೆ ವಿರುದ್ಧವಾಗಿರಬಾರದು. ಮೇಕೆದಾಟು ಯೋಜನೆಯು ನದಿಯ ಹರಿವಿನ ಕ್ರಮವನ್ನೇ ಬದಲಿಸುವುದರಿಂದ, ಇದು ಟ್ರಿಬ್ಯೂನಲ್ ಆದೇಶದ ಉಲ್ಲಂಘನೆಯಾಗುತ್ತದೆ ಎಂಬುದು ತಮಿಳುನಾಡಿನ ವಾದವಾಗಿದೆ.
ಕರ್ನಾಟಕವು ಸಲ್ಲಿಸಿದ್ದ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗವು ಹಿಂದಿರುಗಿಸಿರುವುದನ್ನು ಉಲ್ಲೇಖಿಸಿರುವ ಜೋಸೆಫ್ ವಿಜಯ್, ಟ್ರಿಬ್ಯೂನಲ್ ತೀರ್ಪಿನ ಅನುಸರಣೆಯೇ ಯೋಜನೆಯ ಅನುಮೋದನೆಗೆ ಮೊದಲ ಮೆಟ್ಟಿಲು ಎಂದು ವಾದಿಸಿದ್ದಾರೆ. ಮೇಕೆದಾಟು ಯೋಜನೆಯನ್ನು ಕೇವಲ ಎಂಜಿನಿಯರಿಂಗ್ ಪ್ರಸ್ತಾವನೆಯಾಗಿ ನೋಡಬಾರದು. ಇದು ಲಕ್ಷಾಂತರ ರೈತರ ಬದುಕಿನ ಪ್ರಶ್ನೆಯಾಗಿದೆ. ಕೆಳಹಂತದ ರಾಜ್ಯಗಳಿಗೆ ಬರಬೇಕಾದ ನೀರಿನ ಹರಿವಿನ ಪ್ರಮಾಣ ಮತ್ತು ಕಾಲಮಿತಿಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ.
ಪತ್ರದ ಪ್ರಮುಖ ಬೇಡಿಕೆಗಳು
ತಮಿಳುನಾಡು ಸರ್ಕಾರ ಈ ಪತ್ರದ ಮೂಲಕ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ರಾಜ್ಯಸಭೆಯಲ್ಲಿ ಕೇಂದ್ರ ಸಚಿವರು ನೀಡಿದ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಸುಪ್ರೀಂ ಕೋರ್ಟ್ ತೀರ್ಪು ಮತ್ತು ಕಾವೇರಿ ನ್ಯಾಯಮಂಡಳಿಯ ಆದೇಶಕ್ಕೆ ಅನುಗುಣವಾಗಿರದ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಬಾರದು. ಭವಿಷ್ಯದಲ್ಲಿ ಈ ಯೋಜನೆಯ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ, ಎಲ್ಲಾ ಕೆಳಹಂತದ ರಾಜ್ಯಗಳ ಆತಂಕವನ್ನು ಪರಿಗಣಿಸಿ ಸಮಗ್ರ ತಾಂತ್ರಿಕ ಮತ್ತು ಕಾನೂನು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಮೇಲಾಗುವ ಪರಿಣಾಮಗಳೇನು?
ಕರ್ನಾಟಕವು ದಶಕಗಳಿಂದ ಮೇಕೆದಾಟು ಯೋಜನೆಯನ್ನು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯತೆಗಾಗಿ ಕೈಗೆತ್ತಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ, ತಮಿಳುನಾಡು ಕಾನೂನು ಹಾದಿಯನ್ನು ಹಿಡಿದು ಅದನ್ನು ತಡೆಯಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರವು ಈ ವಿವಾದದಲ್ಲಿ ಮದ್ಯಸ್ಥಿಕೆ ವಹಿಸುವ ಸಂದರ್ಭದಲ್ಲಿ, ಒಂದು ಕಡೆ ತನ್ನ ರಾಜ್ಯಗಳ ಅಭಿವೃದ್ಧಿ ಮತ್ತು ಇನ್ನೊಂದು ಕಡೆ ಅಂತರರಾಜ್ಯ ನದಿ ನೀರಿನ ಹಂಚಿಕೆಯ ಸುಪ್ರೀಂಕೋರ್ಟ್ ತೀರ್ಪುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಿದೆ. ತಮಿಳುನಾಡು ಸರ್ಕಾರವು ಒಕ್ಕೂಟ ವ್ಯವಸ್ಥೆಯ ಸಾಮರಸ್ಯ ಹೆಸರಿನಲ್ಲಿ ಒತ್ತಡ ಹಾಕುತ್ತಿರುವುದು, ಕರ್ನಾಟಕದ ಮುಂದೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಈ ವಿಷಯವು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ದಟ್ಟವಾಗಿದೆ. ಕಾನೂನಿನ ವ್ಯಾಖ್ಯಾನದ ಬಗ್ಗೆಯೇ ಭಿನ್ನಾಭಿಪ್ರಾಯವಿರುವುದರಿಂದ, ಅಂತಿಮವಾಗಿ ನ್ಯಾಯಾಲಯವೇ ಅಂತಿಮ ತೀರ್ಪು ನೀಡಬೇಕಾಗುತ್ತದೆ. ಚುನಾವಣೆಗಳು ಸಮೀಪಿಸುತ್ತಿರುವಾಗ, ಇಂತಹ ನದಿ ನೀರಿನ ವಿವಾದಗಳು ರಾಜಕೀಯ ಬಣ್ಣ ಪಡೆದುಕೊಳ್ಳುವುದು ಸಹಜ. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳೂ ತಮ್ಮ ಜನರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಒತ್ತಡದಲ್ಲಿವೆ. ಕೇಂದ್ರ ಸರ್ಕಾರವು ತಟಸ್ಥ ನಿಲುವನ್ನು ತಳೆಯುವ ಸಾಧ್ಯತೆ ಕಡಿಮೆ. ತನ್ನ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತದೆಯೇ ಅಥವಾ ವಿವಾದ ಶಮನಕ್ಕೆ ಸಮಿತಿಯೊಂದನ್ನು ರಚಿಸುತ್ತದೆಯೇ ಎಂಬುದು ಈಗ ಎಲ್ಲರ ಕುತೂಹಲವಾಗಿದೆ.

