ಟಿಎಂಸಿ ಬಿಕ್ಕಟ್ಟು: ಜೂನ್ 19ರ ಸ್ಪೀಕರ್ ಸಭೆಯತ್ತ ಪಶ್ಚಿಮ ಬಂಗಾಳದ ರಾಜಕೀಯ ಚಿತ್ತ
x

ಟಿಎಂಸಿ ಬಿಕ್ಕಟ್ಟು: ಜೂನ್ 19ರ ಸ್ಪೀಕರ್ ಸಭೆಯತ್ತ ಪಶ್ಚಿಮ ಬಂಗಾಳದ ರಾಜಕೀಯ ಚಿತ್ತ

ತೃಣಮೂಲ ಕಾಂಗ್ರೆಸ್‌ನ ಸುಮಾರು 20 ಮಂದಿ ಸಂಸದರು ಬಂಡಾಯವೆದ್ದು, ತಾವೆಲ್ಲರೂ 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ'ದೊಂದಿಗೆ ವಿಲೀನಗೊಂಡಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ.


Click the Play button to hear this message in audio format

ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಇದೀಗ ದೆಹಲಿಯ ಲೋಕಸಭಾ ಅಂಗಳಕ್ಕೆ ತಲುಪಿದೆ. ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿನ ಪಕ್ಷದೊಳಗೆ ಉಂಟಾಗಿರುವ ಒಡಕು ಮತ್ತು ಬಂಡಾಯ ಸಂಸದರ ಬೇಡಿಕೆಯ ನಡುವೆ, ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜೂನ್ 19ರಂದು ನಡೆಯಲಿರುವ ಸಭೆಗೆ ಆಹ್ವಾನ ನೀಡಿದ್ದಾರೆ. ಈ ಬೆಳವಣಿಗೆಯು ತೃಣಮೂಲ ಕಾಂಗ್ರೆಸ್‌ನ ರಾಜಕೀಯ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.

ತೃಣಮೂಲ ಕಾಂಗ್ರೆಸ್‌ನ ಸುಮಾರು 20 ಮಂದಿ ಸಂಸದರು ಬಂಡಾಯವೆದ್ದು, ತಾವೆಲ್ಲರೂ 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ'ದೊಂದಿಗೆ ವಿಲೀನಗೊಂಡಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಲೋಕಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಗುರುತಿಸಬೇಕೆಂದು ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಬೇಡಿಕೆ ಸಲ್ಲಿಸಿದ್ದಾರೆ. ಈ ಬೆಳವಣಿಗೆ ಮಮತಾ ಬ್ಯಾನರ್ಜಿ ಅವರ ನಾಯಕತ್ವಕ್ಕೆ ದೊಡ್ಡ ಪೆಟ್ಟು ನೀಡಿದೆ. ತಮಗೆ ಯಾವುದೇ ಬೆದರಿಕೆ ಅಥವಾ ಒತ್ತಡವಿಲ್ಲದೆ, ತಾವು ಸ್ವಯಿಚ್ಛೆಯಿಂದ ಬೇರೆ ಗುಂಪಾಗಿ ಗುರುತಿಸಿಕೊಳ್ಳಲು ಬಯಸಿದ್ದೇವೆ ಎಂಬುದು ಬಂಡಾಯ ಸಂಸದರ ವಾದವಾಗಿದೆ.

ಅಭಿಷೇಕ್ ಬ್ಯಾನರ್ಜಿ ನಿಲುವು

ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಜೂ.10 ರಂದು ಸ್ಪೀಕರ್ ಅವರಿಗೆ ಪತ್ರ ಬರೆದು, ತೃಣಮೂಲ ಕಾಂಗ್ರೆಸ್‌ನ ಯಾವುದೇ ಬಣಕ್ಕೆ ಪ್ರತ್ಯೇಕ ಸ್ಥಾನಮಾನ ಅಥವಾ ಮಾನ್ಯತೆಯನ್ನು ನೀಡಬಾರದು ಎಂದು ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ. ಸಂವಿಧಾನ ಮತ್ತು ಪಕ್ಷಾಂತರ ವಿರೋಧಿ ಕಾನೂನಿನ ಪ್ರಕಾರ, ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷದೊಳಗೆ ಮತ್ತೊಂದು ಪ್ರತ್ಯೇಕ ಗುಂಪನ್ನು ರಚಿಸಲು ಅವಕಾಶವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಕೀರ್ತಿ ಆಜಾದ್ ಮತ್ತು ಸಾಗರಿಕಾ ಘೋಷ್ ಅವರಂತಹ ಟಿಎಂಸಿ ಸಂಸದರ ಮೂಲಕ ಸ್ಪೀಕರ್ ಅವರಿಗೆ ಸಲ್ಲಿಸಲಾದ ಪತ್ರದಲ್ಲಿ, ಎಐಟಿಸಿ ಪಕ್ಷವನ್ನು ಏಕೈಕ ರಾಜಕೀಯ ಪಕ್ಷವಾಗಿ ಮಾತ್ರ ಪರಿಗಣಿಸಬೇಕು. ಪಕ್ಷದ ಅಧಿಕೃತ ನಾಯಕ ಮತ್ತು ವಿಪ್ ಹೊರಡಿಸುವ ಅಧಿಕಾರ ಹೊಂದಿರುವ ವ್ಯಕ್ತಿಯ ಮಾತುಗಳಿಗೆ ಮಾತ್ರ ಬೆಲೆ ನೀಡಬೇಕು. ಯಾವುದೇ ಹೆಸರಿನಲ್ಲಿ ಪ್ರತ್ಯೇಕ ಗುಂಪನ್ನು ಗುರುತಿಸಬಾರದು ಎಂದು ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿದ ತೀರ್ಪನ್ನು ಬ್ಯಾನರ್ಜಿ ಉಲ್ಲೇಖಿಸಿದ್ದಾರೆ. ಹತ್ತನೇ ಅನುಸೂಚಿಯಡಿ ಒಡಕು ಎಂಬ ರಕ್ಷಣೆಯನ್ನು ಪಡೆಯಲು ಇನ್ನು ಮುಂದೆ ಅವಕಾಶವಿಲ್ಲ. ಕಾನೂನು ಚೌಕಟ್ಟಿನಲ್ಲಿ ಒಂದೇ ರಾಜಕೀಯ ಪಕ್ಷವನ್ನು ಗುರುತಿಸಬೇಕೇ ಹೊರತು, ಪಕ್ಷದೊಳಗಿನ ಬಣಗಳನ್ನು ಗುರುತಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ. ಒಂದು ವೇಳೆ ವಿಲೀನದ ಹಕ್ಕು ಪಡೆಯಬೇಕೆಂದರೆ, ಕೇವಲ ಶಾಸಕರು ಅಥವಾ ಸಂಸದರ ಬೆಂಬಲವಿದ್ದರೆ ಸಾಲದು, ಮೂಲ ರಾಜಕೀಯ ಪಕ್ಷವೇ ವಿಲೀನವಾಗಬೇಕು ಮತ್ತು ಮೂರನೇ ಎರಡರಷ್ಟು ಬೆಂಬಲ ಕಡ್ಡಾಯವಾಗಿರಬೇಕು ಎಂಬ ಅಂಶವನ್ನು ಬ್ಯಾನರ್ಜಿ ತಿಳಿಸಿದ್ದಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸ್ಪಷ್ಟನೆಯ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.

ಸಭಾಧ್ಯಕ್ಷರ ನಿಲುವಿನತ್ತ ಎಲ್ಲರ ಚಿತ್ತ

ಸಂಸದೀಯ ಮೂಲಗಳ ಪ್ರಕಾರ, ಸಭಾಧ್ಯಕ್ಷ ಓಂ ಬಿರ್ಲಾ ಅವರು ಬಂಡಾಯ ಬಣ ಮತ್ತು ಮಮತಾ ಬ್ಯಾನರ್ಜಿ ಬಣಗಳೆರಡರ ವಾದವನ್ನು ಆಲಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಬಂಡಾಯ ಸಂಸದರು ಈಗಾಗಲೇ ಸ್ಪೀಕರ್‌ಗಳನ್ನು ಭೇಟಿಯಾಗಿ ತಮ್ಮ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಸ್ಪೀಕರ್ ಅವರು ಕಾನೂನು, ನಿಯಮಗಳು ಮತ್ತು ಸಂವಿಧಾನಾತ್ಮಕ ನಿಬಂಧನೆಗಳ ಅನ್ವಯವೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Read More
Next Story