
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ
ಬಂಗಾಳ ರಾಜಕೀಯ ತಲ್ಲಣ: ಟಿಎಂಸಿಯ 3 ಬ್ಯಾಂಕ್ ಖಾತೆಗಳು ‘ಡೆಬಿಟ್ ಫ್ರೀಜ್’!
ಪಕ್ಷದ ಬ್ಯಾಂಕ್ ಖಾತೆಗಳಲ್ಲಷ್ಟೇ ಅಲ್ಲದೆ ಖಜಾನೆಯಲ್ಲಿ ಒಟ್ಟು 600 ಕೋಟಿ ರೂ.ಗೂ ಅಧಿಕ ಹಣವಿದ್ದು, ಇದರ ಮೂಲದ ಬಗ್ಗೆ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಬಂಡಾಯ ಶಾಸಕರು ಎಫ್‌ಐಆರ್ ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಹೈಡ್ರಾಮಾ ಮುಂದುವರಿದಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಆರ್ಥಿಕವಾಗಿ ಬಲವಾದ ಹಿನ್ನಡೆಯಾಗಿದೆ. ಪಕ್ಷದ 10 ಬಂಡಾಯ ಶಾಸಕರು ನೀಡಿದ ದೂರಿನ ಮೇರೆಗೆ ಸೈಬರ್ ಅಪರಾಧ ಪೊಲೀಸರು ಟಿಎಂಸಿ ಪಕ್ಷದ ಸುಮಾರು 440 ಕೋಟಿ ರೂ. ನಗದು ಹೊಂದಿದ್ದ ಮೂರು ಬ್ಯಾಂಕ್ ಖಾತೆಗಳನ್ನು 'ಡೆಬಿಟ್ ಫ್ರೀಜ್' (ಹಣ ಹಿಂಪಡೆಯದಂತೆ ತಡೆ) ಮಾಡಿದ್ದಾರೆ.
ಖಾಸಗಿ ವಲಯದ ಬ್ಯಾಂಕೊಂದರಲ್ಲಿ ಈ ಖಾತೆಗಳನ್ನು ನಿರ್ವಹಿಸಲಾಗುತ್ತಿತ್ತು. ಸದ್ಯ ಪೊಲೀಸರ ಆದೇಶದಂತೆ ಈ ಖಾತೆಗಳಿಂದ ಯಾವುದೇ ರೀತಿಯ ಹೊರಹೋಗುವ ವಹಿವಾಟು ನಡೆಸುವಂತಿಲ್ಲ. ಆದರೆ, ಖಾತೆಗೆ ಹಣ ಜಮಾ ಆಗಲು ಯಾವುದೇ ತಡೆ ಇಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಸೈಬರ್ ಕ್ರೈಂ ಠಾಣೆಗೆ ದೂರು
ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡ ನಂತರ ಟಿಎಂಸಿ ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರಿದೆ. ಸಂಸತ್ತಿನಲ್ಲಿರುವ 20 ಬಂಡಾಯ ಸಂಸದರನ್ನು ಅನರ್ಹಗೊಳಿಸಲು ಮಮತಾ ಬ್ಯಾನರ್ಜಿ ಬಣದ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ನವದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದ ದಿನವೇ ಈ ಆರ್ಥಿಕ ಶಾಕ್ ಎದುರಾಗಿದೆ. ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಬಿಧಾನ್‌ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿದ್ದ ಬಂಡಾಯ ಶಾಸಕರು, ಪಕ್ಷದ ಬ್ಯಾಂಕ್ ಖಾತೆಗಳಲ್ಲಷ್ಟೇ ಅಲ್ಲದೆ ಖಜಾನೆಯಲ್ಲಿ ಒಟ್ಟು 600 ಕೋಟಿ ರೂ.ಗೂ ಅಧಿಕ ಹಣವಿದ್ದು, ಇದರ ಮೂಲದ ಬಗ್ಗೆ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಎಫ್‌ಐಆರ್ ದಾಖಲಿಸಿದ್ದರು.
ಕಾನೂನುಬಾಹಿರ ಹಣದ ಶಂಕೆ
ಬಂಡಾಯ ಶಾಸಕರ ಗುಂಪಿನ ಮುಂಚೂಣಿಯಲ್ಲಿರುವ ರಿತಬ್ರತ ಬ್ಯಾನರ್ಜಿ ಮಾತನಾಡಿ, "ಈ ಬ್ಯಾಂಕ್ ಖಾತೆಗಳಲ್ಲಿರುವ ನೂರಾರು ಕೋಟಿ ರೂ. ಹಣವು ಸಾರ್ವಜನಿಕ ನಿಧಿಯ ವಂಚನೆ, ಲಂಚ, ಸುಲಿಗೆ ಮತ್ತು ಭ್ರಷ್ಟಾಚಾರದಿಂದ ಬಂದಿರುವ ಶಂಕೆಯಿದೆ. ಹೀಗಾಗಿ ಬ್ಯಾಂಕಿಂಗ್ ಮತ್ತು ಎಲೆಕ್ಟ್ರಾನಿಕ್ ದಾಖಲೆಗಳನ್ನು ತಕ್ಷಣವೇ ಸಂರಕ್ಷಿಸಿ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಟಿಎಂಸಿಯ ಮಾಜಿ ಖಜಾಂಚಿ ಮತ್ತು ಮಾಜಿ ಸಚಿವ ಅರೂಪ್ ಬಿಸ್ವಾಸ್ ಕೂಡ ಈ ಖಾತೆಗಳ ನಿರ್ವಹಣೆ ಬಗ್ಗೆ ಕಳವಳ ವ್ಯಕ್ತಪಡಿಸಿ, ವಹಿವಾಟು ಸ್ಥಗಿತಕ್ಕೆ ಕೋರಿದ್ದರು.
ಖಜಾಂಚಿ ಬದಲಾವಣೆ ಎಂದ ಮಮತಾ ಬಣ
ಬ್ಯಾಂಕ್ ಖಾತೆಗಳ ಸೀಜ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಬಣದ ವಕ್ತಾರ ಕುನಾಲ್ ಘೋಷ್, "ಅರೂಪ್ ಬಿಸ್ವಾಸ್ ಜೂ. 5ರ ವರೆಗೆ ಮಾತ್ರ ಖಜಾಂಚಿಯಾಗಿದ್ದರು. ಜೂ. 5ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾಜಿ ಸಂಸದ ಸುಭಾಷಿಶ್ ಚಕ್ರವರ್ತಿ ಅವರನ್ನು ನೂತನ ಖಜಾಂಚಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಹೀಗಾಗಿ ಬ್ಯಾಂಕ್ ಖಾತೆಗಳ ಮೇಲೆ ಅರೂಪ್ ಬಿಸ್ವಾಸ್‌ಗೆ ಯಾವುದೇ ಅಧಿಕಾರವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪೊಲೀಸರ ಕ್ರಮದ ಬಗ್ಗೆ ಮಾಹಿತಿ ಬಂದಿದ್ದು, ಅಧಿಕೃತ ಪ್ರತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಟಿಎಂಸಿ ನಾಯಕರು ತಿಳಿಸಿದ್ದಾರೆ.

